Poem

ನಿಕಷಕ್ಕೆ

ಒಡೆದ ಕನ್ನಡಿಯ ಚೂರು ನೀನು
ನಿನ್ನನ್ನು ಮರಳಿ ಪಡೆಯಲಾಗದು ನಾನು.
ಸುಲಿಪಲ್ಲು ಕುಳಿ ಕೆನ್ನೆ ಮರೆಯಲಾರವು ನನ್ನ.
ನಿನ್ನ ಮನಸಿನ ಗೊಂದಲವು ತಿಳಿಯಾಗುವ ಮುನ್ನ.

ನಡುಗುತ್ತಲೆ ನಡು ಮುಟ್ಟಿ,
ಎವೆಯಿಕ್ಕದೆ ಕಣ್ಣು ಬಿಟ್ಟು.
ಮುಖವರಳಿಸಿ ನೀ ನಿಂತಾಗ
ಮುಡಿ ಮುಟ್ಟಲು ಹಂಬಲಿಸಿದೆ ನಾನು.

ಹಗುರಾಗುವೆನೆಂಬ ಭ್ರಮೆಯಲ್ಲಿ ಮುತ್ತಿಟ್ಟು
ಮನಸಿನಲಿ ಎಂದೂ ನಿಲ್ಲದ ಹಾಗೆ ದೂರವಾದೆ.
ಮತ್ತೆ ಮತ್ತೆ ಎದೆಯ ಬಡಿತವನೊತ್ತಿ ಕೇಳಿಕೋ,
ನಾನಿನಗೆ ಮಾಡಿದ ಉಪಕೃತವಲ್ಲದ ಕಾರ್ಯವೇನು?

ಆರ್ಯ ವರ್ತುಲದ ಆರ್ಯಯೇನು ನೀನು?
ಆದಿ ಅನಾದಿಯಿಂದ ಇದ್ದವನು ನಾನು,
ಆಗಾದ ವಿವೇಕದ ಅರಿವು ನಿನ್ನ ಈ
ಪರ೦ಪರೆಗೆ
ಆದ್ಯ ಕರ್ತವ್ಯದ ವಾರಸುದಾರರು ನಮ್ಮ ಬೆನ್ನೊಳಗೆ

ಕನಸು ಗುಣಿಸುವ, ನೆನಪು ಎಣಿಸುವ,
ಮಾತು ಪೋಣಿಸುವ, ಹೃದಯದ ಗಣಿತ ನೀನು.
ಮನಸು ಮಾಗಿಸುವ, ದೇಹ ತಣಿಸುವ,
ವಿದ್ಯಾ ಲೋಕದ ಬುದ್ಧಿಭಾವಕೆ ನಿತ್ಯ ಯೌವ್ವನಿ ನಾನು.

ಬೀಸೊ ಗಾಳಿಗೆ, ಹರಿಯೋ ನೀರಿಗೆ, ಸುಡುವ ಬೆಂಕಿಗೆ,
ಯಾರ ಹಂಗೂ, ಅನಿವಾರ್ಯ ಬೇಕಿಲ್ಲ .....!
ಒಡಲು ತುಂಬುವ ಪ್ರೀತಿ, ವೇದನೆ, ಹರುಷ ಕಳೆದುಕೊಳ್ವುದೇನು?
ಇಲ್ಲವೆಂದರೆ ನಂಬಲಾರೆ ಈ ಎಲ್ಲ ಕತೆಗಳ ಸೃಷ್ಟಿಲೋಕದ ಚೇಷ್ಟೆಗಳನು.

ಕಸಿದ ಕನಸನು ಮೂಸಿ ಬಿಟ್ಟೆಯಾ? ಬೆಸದ ಪರಿಯನ್ನು ಅಳಿಸಿ ಬಿಟ್ಟೆಯಾ?
ಹೊಸ ಬಗೆಯ ಒಲವು ತಿಳಿಯಲಿಲ್ಲ ನಿನಗೆ
ಕಡಲು ಮೊರತಕೆ, ಒಡಲ ತುಳಿತಕೆ ಹಾರಿ ಬಿಟ್ಟ ಹಲವು ಸಂಕಲ್ಪಗಳೆಲ್ಲ
ನಿಮಿಷ ನಿಮಿಷಕೂ ನನ್ನ ಪ್ರಶ್ನೆಕೇಳಿ ಬಾಯಿ ಬಡಿದುಕೊಳ್ಳುತ್ತಿವೆ.

ಇದುವೆ ಈ ಜನ್ಮದ ಲೋಕ ವಾರ್ತೆ? ಇನ್ನು ಉಳಿದಿರುವುದೇನಿದೆ?
ನನ್ನ ನಿನ್ನ ನಡುವೆ? ನೀ ನಾನೆಂಬುದ ಮರೆತೆ.
ನಾ ಅರಿತೆಯಾದರೆ ನೀ ಮರೆತೆ, ನಾನೆಂಬುದೇ ನಮ್ಮೆಲ್ಲರ ಕೊರೆತೆ.
ಅರಿವಲ್ಲವೆ ಜಗ? ಅರಿವಲ್ಲವೆ ಯುಗ? ಅರಿವಿಲ್ಲದೆ ಅರಿವೆಲ್ಲಿ ಫಲ?

ಡಾ ವಿಜಯಕುಮಾರ ವಿಶ್ವಮಾನವ

ವಿಡಿಯೋ
ವಿಡಿಯೋ

ವಿಜಯಕುಮಾರ ಎಚ್. ವಿಶ್ವಮಾನವ

ವಿಜಯಕುಮಾರ ಎಚ್. ವಿಶ್ವಮಾನವ ಅವರು ಮೂಲತಃ ಕಲಬುರ್ಗಿಯವರು. ವೃತ್ತಿಯಲ್ಲಿ ಕನ್ನಡ ಪ್ರಾಧ್ಯಪಕರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ಕವನ, ಲೇಖನ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

More About Author