Poem

ನಿನಗೆ ಶರಣೆಂಬೆ ಗುರುವೆ

ಶತಮಾನಗಳ ಸತ್ತ ನಾಲಿಗೆಗಳಿಗೆ
ಅಕ್ಷರದ ಅಮೃತವುಣಿಸಿದ
ಗುರುವ ದನಿಯ ಆಲಿಸಿ

ಧರ್ಮ ಕೇಡಿಗೆ ಜ್ಞಾನದ ಮದ್ದು ಅರೆದ
ಜಾತಿ ಬೇಲಿಗೆ ಬಯಲ ಬೆಳಕ ನೀಯ್ಯ್ದ
ದಣಿವರಿಯದ ಹಣತೆ

ನಾಲಿಗೆಗೆ ನುಡಿ ತಂದ ತಂದೆ
ಗುಲಾಮಗಿರಿಗೆ ಬಿಡುಗಡೆಯನಿತ್ತ
ವಿಮೋಚಕ
ತೇಯ್ದ ಬದುಕು ತೇರಾಯಿತು
ಬಿತ್ತ ಬೀಜ ಫಲ ಬಿಟ್ಟು
ಕಣವಾಯ್ತು
ಅರಿವಿನ ಗುರು ನೀನು
ಹಿರಿಮೆಯ ಸಿರಿ ಬಾನು

ಜ್ಯೋತಿ ತಾ ಮಾತ್ರ ಬೆಳಗದೆ
ಜಗವೆಲ್ಲೆ ಬೆಳಗಿಸಿದ
ಮಹಾನದಿಯ ದನಿಯಿದು
ನಿನಗೆ ಶರಣೆಂಬೆ ಗುರುವೆ
ಕಾರುಣ್ಯ ದೊರೆಯೆ

ಎನ್‌.ರವಿಕುಮಾರ್‌ ಟೆಲೆಕ್ಸ್‌

ಪತ್ರಕರ್ತ, ಕವಿ ಎನ್. ರವಿಕುಮಾರ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯವರು. ತಂದೆ- ನಾಗಯ್ಯ, ತಾಯಿ- ಗಂಗಮ್ಮ. ಶಿವಮೊಗ್ಗ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಅವರು ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಲಂಕೇಶ್ ಪತ್ರಿಕೆ ಸೇರಿದಂತೆ ನಾಡಿನ ಹಲವು ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿರುವ ರವಿಕುಮಾರ್ ಸದ್ಯ ಶಿವಮೊಗ್ಗ ಟೆಲೆಕ್ಸ್ ಎಂಬ ಕನ್ನಡ ದಿನಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

2006ನೇ ಸಾಲಿನಲ್ಲಿ ಅತ್ಯುತ್ತಮ ಅಪರಾಧ ವರದಿಗಾಗಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯಮಟ್ಟದ  " ಗಿರಿಧರ ಪ್ರಶಸ್ತಿ" ಪಡೆದಿದ್ದ ಅವರು ಸಾಹಿತ್ಯ, ರಂಗಭೂಮಿಗಳಲ್ಲೂ ತೊಡಗಿಕೊಂಡಿದ್ದಾರೆ. ಅಲ್ಲದೇ 2016 -2018ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಸೇವೆಸಲ್ಲಿಸಿದ್ದಾರೆ. ಇವರ ಚೊಚ್ಚಲ ಕವನ ಸಂಕಲನ ‘ನಂಜಿಲ್ಲದ ಪದಗಳು’ ಹಸ್ತಪ್ರತಿಗೆ ರಾಜ್ಯಮಟ್ಟದ ಪ್ರತಿಷ್ಠಿತ ವಿಭಾ ಸಾಹಿತ್ಯ ಪ್ರಶಸ್ತಿ, ಎರಡನೇ ಕವನ ಸಂಕಲನ "ನೆರ್ಕೆಗೋಡೆಯ ರತ್ನಪಕ್ಷಿ"  ಹಸ್ತಪ್ರತಿಗೆ  ರಾಜ್ಯಮಟ್ಟದ "ಗವಿಸಿದ್ದ ಬಳ್ಳಾರಿ ಕಾವ್ಯಪ್ರಶಸ್ತಿಗಳು ಸಂದಿವೆ. ಜೊತೆಗೆ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ 2004 ನೇ ಸಾಲಿನಲ್ಲಿ ರಾಜ್ಯಮಟ್ಟದ ದುಂ.ನಿ .ಬೆಳಗಲಿ (ರಬಕವಿ) ಸಾಹಿತ್ಯ ಪ್ರಶಸ್ತಿ ಪುರಸ್ಕಾರ, 2007ರಲ್ಲಿ ಮಂಡ್ಯ ಯುವ ಬರಹಗಾರ ಬಳಗದ ರಾಜ್ಯ ಮಟ್ಟದ "ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ",  ಪತ್ರಿಕೋದ್ಯಮದಲ್ಲಿನ ಗಣನೀಯ ಸಾಧನೆಗಾಗಿ ಕರ್ನಾಟಕ ಸರ್ಕಾರದಿಂದ 2014ನೇ ಸಾಲಿನ ಪ್ರತಿಷ್ಠಿತ  ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸೇರಿದಂತೆ ಪತ್ರಿಕೋದ್ಯಮ ಮತ್ತು ಸಾಹಿತ್ಯಿಕ ಕ್ಷೇತ್ರಗಳ ಕಾರ್ಯಕ್ಕಾಗಿ ಹಲವು ಗೌರವ ಪ್ರಶಸ್ತಿಗಳನ್ನು ಪಡೆದಿದ್ದಾರೆ. 

More About Author