Poem

ನಿನ್ನೊಳವಿತಿಹೆನ್ನಾತ್ಮವನೆತ್ತೆಂದು!

ರವಿಯಂತರಂಗದಲಿ ಕಿರಣವಡಗಿಹುದೋ,
ಸಹಸ್ರಕಿರಣಗಳೊಂದಾಗಿ ರವಿಯರೂಪಿಸಿಹವೋ?
ಇರುಳಚಂದಿರನಶೋಭೆಗೆ ತಾರೆಗಳೋ?
ತಾರೆಗಳೊಡನಾಟಕೆ ಚಂದಿರನ ಶೋಭೆಯೋ?
ಪರ್ವತಾರೋಹಣಕೆ ಸಾಗರಸನ್ನದ್ಧವೋ?
ಸಾಗರನೊಡಲಸೇರಲು ನದಿಗಳೋಟವೋ?

ಒಂದರೊಳೊಂದಾಗಿಹ ಎರೆಡಂಕಿಗಳು,
ಎರೆಡರೊಳೊಂದಾಗಿಮನೆಮಾಡಿಯೊಂದೇಯೆನಲು,
ಅಂಕಿಗಳನೋಟದಲಿಯೆಣಿಸುವಭಾವ,
ಭಾವಗಳನಂಕಿಯಲಿತೂಗುವ ನೋಟ,
ಸಂಖ್ಯೆಗಳಸಾಲತೊರೆದುಸರಿವೆಯೆನಲು,
ಏರಿಳಿಕೆಗಳಮೀರಿದಸಂಖ್ಯತೆಯನಪ್ಪಿದವೆಮ್ಮಂಕಿಗಳು.

ಮಣ್ಣಿನಾಳಕೆಪಸರಿಸಿ ಮುಗಿಲಚುಂಬಿಪಬೇರು,
ಮುಗಿಲಿನಲಿಮುದಿಯಾಗಿ ಮರಳಿಮಣ್ಣಸೇರಿ,
ಮತ್ತೆಮೊಳಕೆಯೊಡೆವಛಲದಮೂಲವೇನು?
ತಾಯಕೊಕ್ಕಿನತುತ್ತೊಂದನರಸಿದ್ದಮರಿಯ,
ಗಾಳಿಯಲಿನೂಕಿ ಬಾನಂಗಳಕೇರಿಸುವ,
ಮಡಿಲಮಮತೆಯ ಮಾತೃತ್ವದಸೆಲೆಯೇನು?

ಇರುವಂತೆಕಾಣ್ವಬಾಳದೋಣಿ,
ಇಲ್ಲದಪಯಣಕೆ ಸಜ್ಜಾಗಿಯಲೆಗಳನೆದುರಿಸಲು,
ಚಲಿಸಿದದೂರವೇದೂರದೊಳೊಮ್ಮೆ ನಿಂತು,
ದೂರೊಂದನುಮರ್ತ್ಯನಿಗೊಪ್ಪಿಸಿಪೇಳಿತು
ಅರ್ಥದೊಳನರ್ಥವನೇಕೆತ್ತುವೆ?
ನಿನ್ನೊಳವಿತಿಹೆನ್ನಾತ್ಮವನೆತ್ತೆಂದು!

ವಿಡಿಯೋ
ವಿಡಿಯೋ

ಸೋಮೇಶ್ವರ ಗುರುಮಠ

ಸೋಮೇಶ್ವರ ಗುರುಮಠ ಅವರು ಲೇಖಕ, ಕಿರುಚಿತ್ರ ನಿರ್ದೇಶಕ, ಹಾಡುಗಾರ, ಕವಿ, ನಿರೂಪಕ, ಅಂಕಣಗಾರ ಹಾಗೂ ನಟನಾಗಿ ಗುರುತಿಸಿಕೊಂಡವರು. ಈಗಾಗಲೇ 'ನಾನು ನನ್ನ ಜಗತ್ತು', 'ಪಯಣಿಗನ ಕಾವ್ಯಗಳು' ಮತ್ತು 'ಅನನ್ಯ ನಮನಗಳು' ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ತಮ್ಮ ಬರವಣಿಗೆಯ ಮೂಲಕ ವಿಭಿನ್ನ ಛಾಪನ್ನು ಸಾಹಿತ್ಯ ಲೋಕದಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

More About Author