Poem

ನಿಂತ ಸ್ಥಳ‌ !

ಅದೊಂದು ಕಾಡು,
ಕಿಚ್ಚಿನ ಹಾದಿ; ಕೆಟ್ಟ ಸ್ಥಳ
ಅಣ್ಣನ ಅನುಯಾಯಿ
ಲಕ್ಷ್ಮಣ, ವಾದಕ್ಕಿಳಿದನು :

ಕಾಡಿಗಟ್ಟಿದನು ನಿನ್ನ;
ತಂದೆ ದಶರಥ...
ಇಕ್ಕಟ್ಟಿಗೆ ಇಕ್ಕಳವಾಗಿ !
ಆದರೆ ನನಗೆ ?!

ವರವಾವುದು ? ಶಾಪವಾವುದು ?
ಕಿಂಚಿತ್ತು ಕಿಚ್ಚುರಿಯೂ ಇಲ್ಲದೆ
ನಾನೇಕೆ ನಡೆದೆ ನಿನ್ನ ಹಿಂದೆ ?

ಮಾತೆ ಸೀತಾದೇವಿ,
ಅನುರಾಗದ ಹೆಜ್ಜೆ;
ನಿನ್ನ ವನವಾಸದವರೆಗೂ
ಅಲ್ಲಿ ಊರ್ಮಿಳೆ ?!

ನನ್ನ ದಾರಿ
ಕಾದು ಬಸವಳಿದಳೋ ?
ಇಲ್ಲ, ಬಲವಾಗಿ ಜೀವವಿಡಿದು
ಬದುಕಿರುವಳೋ ?
ಕಾಣೆ !

ಎಲೆ ರಾಮ ! ನಿಲ್ಲು....
ನಾನೇಕೆ ನಿನ್ನ ದಾಸನಾಗಬೇಕು ?
ಇನ್ನೇಷ್ಟು ಹೀಗೆ ಅಲೆದಾಡಬೇಕು ?

ಪಟ್ಟದ ಮಹಿಷಿ ಪಕ್ಕದಲ್ಲಿರಲು
ವಿರಹ ಬೇಗೆ ಬಲ್ಲೆಯಾ ?
ಅದೇಷ್ಟು ದೂರ ಸುಮ್ಮನೆ ನಡೆವೆ
ನಿಂತು ಮಾತಾಡೆಯಾ !

ರಾಮ ಮುಗುಳ್ನಕ್ಕ; ನಡೆದ‌.
ಕೌತುಕದಿ ಸೀತೆಯ ಕಣ್ಣರಳಿತು
ಲಕ್ಷ್ಮಣ ಅಶಾಂತನಾದ !

"ಬಿಟ್ಟೆ ಎಲ್ಲವ, ಇಲ್ಲೇ ಈಗಲೇ;
ಹೋರಟೆ" - ಎಂದನು ಲಕ್ಷ್ಮಣ‌ ಲಕ್ಷಣದಿ;
ರಾಮ ನುಡಿದ - "ಓ ಅನುಜ !
ನಿಂತ ಸ್ಥಳವ ಬಿಟ್ಟು ಬಾ ತಕ್ಷಣದಿ !"

ಕೊನೆಯ‌ ಮಾತು ! ತಪ್ಪುವುದೇಕೆ ?
ಎರಡೆಜ್ಜೆ ಇಟ್ಟೆ - ಎಂದನು ಲಕ್ಷಣನು !
ಭಕ್ತಿಯು ಉಕ್ಕಿತು; ಪೌರುಷ ಅಳಿಯಿತು
ಮನ್ನಿಸದೇ ಇರುವನೇ ಅಗ್ರಜನು ?

ನಿಂತ ಸ್ಥಳವು ಎಂತದೋ
ಮನಸ್ಥಿತಿ ಅಂತದ್ದು;
ಎಚ್ಚರ ತಪ್ಪಿದರೆ ಅವನತಿ
ಅನತಿ ದೂರದಲಿ !

✍️ ಮನು ಗುರುಸ್ವಾಮಿ

 ಮನು ಗುರುಸ್ವಾಮಿ 

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ  ಕೃತಿಗಳು ಪ್ರಕಟಣಾ ಹಂತದಲ್ಲಿವೆ. 

ಕೃತಿಗಳು : ನಿಬ್ಬೆರಗು

 

 

 

More About Author