Poem

ಒಡಲು

ಕವನದ ಸಂದರ್ಭ =1945ರ ಆಗಸ್ಟ್ 6ರಂದು ಜಪಾನಿನ ಹೀರೋಶಿಮಾ ಮತ್ತು 9ರಂದು ನಾಗಸಾಕಿ ಮೇಲೆ ಅಣು ಬಾಂಬಿನ ದುರಂತ ನೆನೆಯುತ್ತಾ...

ಪುನರಪಿ ಜನನಂ
ಪುನರಪಿ ಮರಣಂ
ಪುನರಪಿ ಜನನೇ
ಜಠರೇ ಶಯನಂ..
ಎಂಥ ಚೆಂದ 'ಆತ್ಮಗತಿಯ ವ್ಯಾಖ್ಯಾನ 'ಆಚಾರ್ಯ ಶಂಕರರದು./
ಮತ್ತೆ ಯೋಚಿಸುತ್ತೇನೆ/
'ಪುನರಪಿ 'ಎಂದರೆ/
ಆತ್ಮವೇ? ದುರಾಸೆಯೇ? ಎಂದು./

ಮರೆಯಲಾದೀತೇ ಜಗದ/
ಇತಿಹಾಸದ ಆ ಪುಟಗಳ?/
ನಾನು, ನನಗಷ್ಟೇ/
ಎದ್ದು ನಿಂತು ಮೆರೆವ ಅಸೂಯೆ/
ಹಿಂಸೆಯ 'ಅಹಂ 'ನ ಮೆರವಣಿಗೆ /
ಎಂಥ ಹಿಡಿತ, ದುಷ್ಟತನದ ಮಿಡಿತ /
ನರನ ಹಸಿ ಮಾಂಸದ ಭಕ್ಷಣೆಯ ರಾಕ್ಷಸೀ ಹಸಿವೇ /
ಓ ಹಣ, ಅಧಿಕಾರದ ಒಡಲೇ...
ಮೆರೆದ (ವ )ಉಳ್ಳವರ ಸ್ವಾರ್ಥದ ಒಡಲು /
ಹರಿದ (ವ )ಕಣ್ಣೀರ ಕಡಲು /
ಕಳವಳಿಸುತಿದೆ ಜನನಿಯ ಒಡಲು /
ಬೆಚ್ಚಿ ಹೋಯಿತು ನೆಲದ ಮಡಿಲು /

ಸಾಕಾಗಿ ಹೋಯಿತು ನಾಗಸಾಕಿಗೆ /
ಧುತ್ತೆಂದೆರಗಿ ಬಂದ ಆ ಒಂದು
ಬರಸಿಡಿಲಿಗೆ /
ನಡುಗಿ ಹೋಯಿತು ಹೀರೋಶಿಮಾ /
ಸುಖ, ನೆಮ್ಮದಿಎಲ್ಲಾ ಬೂದಿ /

ಎಲ್ಲ ಸಂಕಟಗಳ
ಎಲ್ಲ ಸ್ವಾರ್ಥಗಳ
ಎಲ್ಲ ಅವಿವೇಕದ
ಎಲ್ಲ ದುರುಪಯೋಗದ ಫಲಕ್ಕೆ
ಇದೀಗ ಅಮೃತ ಮಹೋತ್ಸವದ ಮೆರವಣಿಗೆ /
ದುಃಸ್ವಪ್ನದ ದಿಬ್ಬಣ.

ಅರಳುತ್ತಿಲ್ಲ
ತಾಯ ಗರ್ಭದಲಿ ಮೊಗ್ಗು /
ನೆಲದ ಒಡಲಲೂ ಕೂಡ /
ಇತ್ತ ಅರಳಿದ ಸುಮದಲೂ
ಪಸರಿಸದ ಪರಿಮಳ /
ಗರ್ಭದಿ ಮೊಳೆವ ಜೀವಾಂಕುರವೂ ಇಂದು
ವಿಕಲಚೇತನ.../
ಜನ್ಮಕ್ಕಂಟಿದ ಶಾಪ ರಾಸಾಯನಿಕ ಪಾಶ /
ಅದ ನಂಬಿದ ಮನವೆಲ್ಲ ವಿಷ /

ಓ ಜಪಾನ್ ಎಂಥ ತಾಳ್ಮೆ ನಿನ್ನದು /
ಎಂಥ ಛಲ ನಿನ್ನದು /
ಎಂಥ ಧೀರತೆ ನಿನ್ನದು /
ನಮಿಸುವೆನು ನಿನಗೆ,
ಎದ್ದು ಬಂದೆ ಜಗಕೆ
ಫಿನಿಕ್ಸ್ ಹಕ್ಕಿಯಂತೆ /
ಪಟ್ಟ ಪಾಡು
ಉಂಡ ನೋವು
ಗೆಲುವಿಗೊಂದು ನಿಚ್ಚಣಿಕೆ /
ನೆಲದ ಮೂಲೆಯೂ /
ತಾಯ ಮೊಲೆಯೊಳು
ಇಂಗಲಾರದ ನೋವಿನ ಸೂತಕ
"ಮರೆಯಲಿ ನೋವು '
ಎನ್ನುವಾಗೆಲ್ಲಾ ಕಣ್ಣಂಚಲಿ
ಒಸರುವ ನಾಲ್ಕು ಹನಿ ಮಾತ್ರ/
ನಿಮ್ಮ ಸಾಂತ್ವಾನಕೆ.

ಬುದ್ಧಮ್ ಶರಣಂ ಗಚ್ಚಾಮಿ
ಧರ್ಮಮ್ ಶರಣಂ ಗಚ್ಚಾಮಿ
ಸಂಘಮ್ ಶರಣಂ ಗಚ್ಚಾಮಿ. 🙏

- ಎಂ. ಎಸ್. ಮಲ್ಲಿಕಾರ್ಜುನಯ್ಯ

ಎಂ. ಎಸ್. ಮಲ್ಲಿಕಾರ್ಜುನಯ್ಯ

ಎಂ. ಎಸ್. ಮಲ್ಲಿಕಾರ್ಜುನಯ್ಯ ಅವರು ಮೂಲತಃ ದಾವಣಗೆರೆ ಜಿಲ್ಲೆಯ ಬೆಳವನೂರುವರು. ಸಾಹಿತ್ಯ ಅವರ ಆಸಕ್ತಿ ಕ್ಷೇತ್ರವಾಗಿದ್ದು, ತಮ್ಮನ್ನು ಕಾವ್ಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

More About Author