Story

ಒಂದು ಕಪ್ ಚಹಾ

ಲೇಖಕಿ ಸ್ಮಿತಾ ರಾಘವೇಂದ್ರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರ ಗ್ರಾಮದವರು.ಕಥೆ,ಕವನ, ಗಜಲ್, ಭಾವಗೀತೆ, ಚುಟುಕು, ಲೇಖನ ಹಾಯ್ಕು ಹೀಗೆ ಸಾಹಿತ್ಯ ಹಲವು ಪ್ರಕಾರದ ಬರವಣಿಗೆ ಇವರ ಹವ್ಯಾಸಗಳು ಪ್ರಸ್ತುತ ಅವರ ‘ಒಂದು ಕಪ್ ಚಹಾ’ ಕತೆ ನಿಮ್ಮ ಓದಿಗಾಗಿ.

ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಲೇ ಸ್ವಿಚ್ ಅದುಮಿದ ಯಂತ್ರದಂತೆ ನನ್ ಕೆಲಸ ಶುರು (ಅದು ಎಲ್ಲ ಗೃಹಿಣಿ ಯರದ್ದೂ ಬಿಡಿ ) ಪಟ್ಟಿ ಅಂತೂ ಮಾಡೋಕಾಗಲ್ಲ. ಬೆಳಿಗ್ಗೆ 6ಕ್ಕೆಲ್ಲ ಶುರುವಾಗುವ ಯಂತ್ರ 8-30ರಿಂದ 9 ಹತ್ತಿರವಾಗುತ್ತಿದ್ದಂತೆ ಆಫ್ ಮಾಡುವ ಗಡಿಬಿಡಿ. ಇಲ್ಲ ಹೀಟ್ ಆಗಿ ತಣ್ಣೀರು ಸುರಿದರೂ ಶಾಂತವಾಗಲಾಗದೆ ಬುಸು ಗುಡುವ ಎಂಜಿನ್ ತರ ಆಗುತ್ತೆ. ಹಿಂದಿನ ರಾತ್ರಿ ಲೆಕ್ಕಾಚಾರ ಹಾಕಿಟ್ಟು ಕೊಂಡ ಅಷ್ಟೂ ಕೆಲಸ ಆ ಸಮಯಕ್ಕೇ ಮುಗಿಯಬೇಕು. ಮಧ್ಯಮಧ್ಯ ಬೇರೆ ಕೆಲಸಗಳು ಅಚಾನಕ್ಕಾಗಿ ಬರುತ್ತೆ ಅದನ್ನೂ ಸಂಭಾಳಿಸಿ ಆ ಸಮಯಕ್ಕೇ ಮುಗಿಸಬೇಕು.

ಅದ್ಕಕೆಲ್ಲ ಒಂದು ಕಾರಣವೂ ಉಂಟು,
"ಒಂದು ಕಪ್ ಚಹಾ ಕುಡಿಯಬೇಕು" ಅಯ್ಯಾ.. ಚಾ ಕುಡಿಯೋಕೆ ಇಷ್ಟೆಲ್ಲಾ ಅವಾಂತರವಾ?ಅಂದ್ಕೋಬೇಡಿ..
ಹೌದು,
ಚಹಾ ಕುಡಿಯುವುದು ನಂಗೊಂದು ಧ್ಯಾನ.
ಇನ್ನು ಬೆಳಗಿನ ಕೆಲಸ ಬಾಕಿ ಉಳಿದಿಲ್ಲ ಎಂದು ಖಾತ್ರಿ ಪಡಿಸಿಕೊಂಡೇ ಚಹಾ ಕುದಿಯಲು ಇಡೋದು. ಆ ಚಹಾ ಹೀಗೇ ಆಗಬೇಕು ಅನ್ನುವ ನಿಯಮ ಕೂಡ ಇದೆ ಬಣ್ಣ,ರುಚಿ,ಶಕ್ತಿ,ಎಲ್ಲ ಸೇರಬೇಕುಚಹಾ ಕಪ್ ಕೈಯಲ್ಲಿ ಹಿಡಿದು ಒಂದು ಕಡೆ ಕೂತರೆ ಮುಗೀತು. ಒಂದು ಏಕಾಗ್ರತೆ ತಂದು ಕೊಳ್ಳುತ್ತೇನೆ ಅದರ ಹಬೆ,ಸುವಾಸನೆ, ಸ್ಪರ್ಶ, ಎಲ್ಲವನ್ನೂ ಇಂಚಿಂಚೂ ಅನುಭವಿಸಬೇಕು ಪ್ರೀತಿಯಂತೆ. ಅಲ್ಲೊಂದು ತಣ್ಣಗಿನ ಮೌನ ಕೂಡ ಬೇಕು.

ಸಾಲದ್ದಕ್ಕೆ ಈ ಅಡ್ವರ್ಟೈಸ್ ಗಳು ಸೆಳೆದು ಇನ್ನೂ ಕ್ರಶ್ ಆಗುವಂತೆ ಮಾಡ್ತವೆ. ಈ ಚಹಾ ಎನ್ನುವ ಪ್ರೇಮಿಯ ಮೇಲೆ. ಅದನ್ನು ಆಸ್ವಾದಿಸಲು ಕೊಡುವ ಟಿಪ್ಸ್ ಏನು ಕಡಿಮೆಯಾ?ತುಳಸಿ ಆರೈಕೆ, ವಾವ್ ತಾಜ್ ನ ಘಮ,
ಒಂದು ಕಪ್ ಚಹಾ ಸಿಗಬಹುದಾ, ಎನ್ನುವ ಪ್ರೀತಿ. ಗಂಡನೇ ಮಾಡಿಕೊಡುವ ಸರ್ ಪ್ರೈಸ್ ಚಹಾ. ಸರ್ವ ಶ್ರೇಷ್ಠ ಪ್ರೀತಿ ಪ್ರಣಯಗಳು, ಒಂದು ಚಹಾದಿಂದ ಆರಂಭ ಎಂದು ಆಸೆ ಹುಟ್ಟಿಸಿ ಬಿಡ್ತಾರೆ...ಅಬ್ಬಬ್ಬಾ ಒಂದೆರಡಲ್ಲ.

ಈ ಚಹಾ ಮತ್ತು ಕಾಫಿ ಮೇಲೆ ಎಂತೆಂತ ಸಾಹಿತ್ಯ ಬಂದಿದೆ. ಅದ್ಕೆಲ್ಲ ಕಾರಣ ಅದರೊಟ್ಟಿಗಿನ ಬಾಂಧವ್ಯವೇ ಅಲ್ವಾ.

ಚಹಾ ಇರಲಿ ಕಾಫಿ ಇರಲಿ ಆಸ್ವಾದಿಸುತ್ತಾ ಹೀರುವ ಮಜವೇ ಬೇರೆ. ಅದಕ್ಕಾಗಿಯೇ ಒಮ್ಮೆ ಕುಳಿತಮೇಲೆ ಮಧ್ಯ ಏಳಬಾರದು ಎಂದೂ, ಯಾರೂ ಕರೆಯಬಾರದು ಎಂದೂ, ಎಲ್ಲರ ಅಹವಾಲುಗಳ್ಳನ್ನು ಮುಗಿಸಿಯೇ ಬಂದಿರ್ತೆನೆ ಆದರೂ ಬರುವ ಕರೆಗೆ, ಜಮದಗ್ನಿಯ ಕೋಪ ಬಂದರೂ ಅಸಹಾಯಕ ಅಂಬೆಯಂತೆ, ನಾನೇ ಎದ್ದು ಹೋಗಿ ಬಿಡ್ತೀನಿ. ಒಂದೊಂದೇ ಗುಟುಕು ಗಂಟಲ್ಲಲಿ ಇಳಿಯುತ್ತಿದ್ದಂತೆ ಅದ್ಯಾವುದೋ ನರದಿಂದ ತಲೆಗೆ ಏರಿ ಇನ್ನೇನು ಬರಬೇಕು ಅಂದ್ಕೊಂಡು ತಲೆ ಎತ್ತಿದ ತಲೆನೋವು ತಲೆ ತಗ್ಗಿಸಿನಡೆದ ಹಾವಿನಂತೆ ಮಾಯ.

ಆಗೊಂದು ಯುದ್ಧ ಗೆದ್ದ ಅವ್ಯಕ್ತ ಭಾವ. ಸುಮ್ನೇ ಹೇಳಿದ್ದಲ್ಲ "ಆಸ್ವಾದಿಸಿ ನೋಡು ಪುರುಸೊತ್ತಿನ ಚಹಾವನ್ನು" ಎಂದು ಕೈ ಸಂದಿಯಿಂದಲೇ ಹೊಕ್ಕು ತೊಡೆಯೇರಿ ಕುಳಿತು ನಂಗೂ ಒಂದು ಗುಟುಕು ಅನ್ನುತ್ತಿದ್ದ ಮಗ, ಈಗ ಸದ್ದಿಲ್ಲದೇ ಬಂದು ಕುಳಿತು ಇಳಿ ಬಿಟ್ಟ ಕಾಲನ್ನು ಮೆತ್ತಗೆ ಒತ್ತುತ್ತಾ ಎಷ್ಟು ಹಾಯ್ ಅನ್ಸುತ್ತೆ ಅಲಾ ಅಂತಾನೆ ಒಮ್ಮೊಮ್ಮೆ.

ಅಪರೂಪಕ್ಕೆ ಚಹಾದ ಜೊತೆ ಜೊತೆಯಾಗುವ ಅವನ ಅಪ್ಪ ಆಗೆಲ್ಲ ಸ್ವರ್ಗಕ್ಕೆ ಕಿಚ್ಚು ಹಚ್ಚಲು ಹೊರಟೇ ಬಿಡ್ಬೇಕು ಅನ್ಸುತ್ತೆ . "ಸಂಸಾರವೆಂಬುದೊಂದು ಗಾಳಿಯ ಸೊಡರುಸಿರಿ ಎಂಬುದೊಂದು ಸಂತೆಯ ಮಂದಿ ಕಂಡಯ್ಯ"

"ಇದ ನೆಚ್ಚಿ ಕೆಡಬೇಡ" ಎಂದು ಬಸವಣ್ಣನವರು ಅಂದಿದ್ದು ನೆನಪಾಗಿ ಅಲ್ಲಿಗೆ ಕೂಡಲಸಂಗಮನ ಸೋಲು ತರಹೇವಾರಿ ಕಪ್ ಗಳು ಚಹಾ-ಕಾಫಿ ಪ್ರಿಯರಿಗಾಗಿಯೇ ಇದೆ. ಆದ್ರೆ ಅದನ್ನೆಲ್ಲ ತಂದು ತಂದು ನನ್ ಧ್ಯಾನದಲ್ಲಿ ಒಡೆದು,ಸಾಕು ಸಹವಾಸ ಅಂತ ಬಿಟ್ಟಿದ್ದೂ ಆಯ್ತು..

ನಮಗೆ ಸ್ಟೀಲ್ ಕಪ್ ವಾಸಿ ಅಂತ ಒಪ್ಪಿಕೊಂಡಿದ್ದೂ ಆಯ್ತು ಈ ಒಂದು ಕಪ್ ಚಹಾ ಕುಡಿಯೋದು ಇದ್ಯಲ್ಲ ದಿನದ ಅತ್ಯಮೂಲ್ಯ ಆರಂಭದ ಕ್ಷಣ. ಅದಕ್ಕೆ ರಸಭಂಗವಾದರೆ ದಿನ ಪೂರ್ತಿ ರಸ ಹೀನ.

ದಿನದ ಆರಂಭ ಒಬ್ಬೊಬ್ಬರಿಗೆ ಒಂದೊಂದು ರೀತಿ. ಯಾವ ರೀತಿಯೇ ಆದರೂ ಸರಿ. ಆರಂಭ ಚೆನ್ನಾಗಿಲ್ಲದೇ ಹೋದರೆ ಅಂದಿನ ದಿನ ಪೂರ್ತಿ ಮೂಡ್ ಆಫ್. ಆದರೆ ಒಂದ್ಕಡೆ ಕುಳಿತು ಧ್ಯಾನಾವಸ್ಥೆಯಲ್ಲಿ ಆಗುವ ದಿನದ ಆರಂಭಕ್ಕೆ ಸ್ವಲ್ಪ ಹೆಚ್ಚಿಗೆಯೇ ತೂಕ ಹೀಗೆ ಧ್ಯಾನಾವಸ್ಥೆಯಲ್ಲಿ ಬೆಳಿಗ್ಗೆ ಒಂದು ಕಪ್ ಚಹಾ ಕುಡಿದರೆ ಮುಗೀತು. ಮತ್ತೆ ಮತ್ತೆ ಅದರ ಗೋಜಿಗೆ ಹೋಗಬೇಕು ಅನ್ನಿಸುವದಿಲ್ಲ. ಮುದ್ದು ಮಾಡಿ ಮಲಗಿಸಿ ಬಂದ ಮಗುವಿನಂತೆ.

ಬೆಳಿಗ್ಗೆ ಎದ್ದ ತಕ್ಷಣ ನಾನು ಯಾವತ್ತು ಮೊಬೈಲ್ ನೋಡೋದಿಲ್ಲ. ಅಂತ ಎಮರ್ಜನ್ಸಿ ಇದ್ರೆ ಮಾತ್ರ ನೋಡೋದು. ಚಹಾದ ಜೊತೆ ನೆಟ್ ಆನ್ ಮಾಡಿಟ್ಟು, ಚಹಾ ಕುಡಿದು ಕಣ್ಣಾಡಿಸುವ ರೂಢಿ.

ಒಂದು ಘಂಟೆ,ಅರ್ಧಗಂಟೆ (ಅಂದಿನ ಅನುಕೂಲಕ್ಕೆ ತಕ್ಕಂತೆ )ಅದು ನನ್ ಸ್ವಂತ ಸಮಯ. ಮುಂದಿನ ಕೆಲಸಕ್ಕೆ ಅಣಿಯಾಗುವ ಮಾನಸಿಕ ಸಿದ್ಧತೆ ಕೂಡ ಅಲ್ಲಿರುತ್ತೆ.ಅಡುಗೆ,ತೋಟ,ಗಾರ್ಡನ್, ಕ್ಲಿನಿಂಗ್ ಹೀಗೆ ಹತ್ತು ಹಲವು.

ಕೆಲವೊಮ್ಮೆ ಕೆಲಸದ ಒತ್ತಡಲ್ಲಿ ಈ ಧ್ಯಾನ ತಪ್ಪಿ ಹೋಗುತ್ತೆ ನಿಜಕ್ಕೂ ಆಗ ಮನಸಿಗೆ ವಿಲಕ್ಷಣ ಅನುಭವ. ಏನೇ ಹೇಳಿ ದಿನದಲ್ಲಿ ಸ್ವಲ್ಪ ಸಮಯವಾದರೂ ಒಂದು ಏಕಾಂತ ಬೇಕು ಆಗಲೇ ಅಂದುಕೊಂಡ ಕೆಲಸವೆಲ್ಲ ನೀಟ್ ಆಗೋದು. ನಾವು ಗ್ರಹಿಣಿಯರು ನಮಗಾಗಿ ಸಮಯ ಎತ್ತಿಟ್ಟು ಕೊಳ್ಳೋಕೆ ಹಿಂದೆ ಸರೀತೀವಿ, ಭಯ ಬೀಳ್ತಿವಿ, ಯಾರಾದ್ರೂ ಏನಾದ್ರೂ ಅಂದ್ರೆ ಅನ್ನೋ ಕಸಿವಿಸಿ, ಕೆಲವು ಮನೆಗಳಲ್ಲಿ ಮನೆಯ ಸೊಸೆ ಖಾಲಿ ಕುಳಿತುಕೊಳ್ಳುವುದು ನಿಷಿದ್ಧ ಮತ್ತು ಅಲಿಖಿತ ನಿಯಮ.

ಸದಾ ಸೇವಾ ನಿರತವಾಗಿರಬೇಕು. ಅಥವಾ "ಸದಾ ಸೇವಾನಿರತ"ಎಂದು ನಮಗೆ ನಾವೇ ಬೋರ್ಡ್ ಹಾಕಿಕೊಂಡು ರೂಢಿ ಮಾಡಿಕೊಳ್ತೀವೋ ಗೊತ್ತಿಲ್ಲ. ಯೂನಿಫಾರ್ಮ್ ಕಳಚೋದೇ ಇಲ್ಲ ಡ್ಯೂಟಿ ಮೇಲೆ ಇರ್ತೀವಿ.ನಮಗೂ ಸ್ವಂತ ಸಮಯಬೇಕು ಅನ್ನೋದು ಅರಿವಾಗೋ ಹೊತ್ತಿಗೆ ಅರ್ಧದಾರಿ ಮುಗಿದಿರುತ್ತೆ. ಆಗ ಸಾಕು ಬದುಕು ಅನ್ನಿಸಲು ಶುರುವಾದರೆ ಮತ್ತೆ ಮೇಲೇಳುವುದು ಬಹಳವೇ ಕಷ್ಟ. ನಿರಾಸೆ ಬದಿಗಿಟ್ಟು ನಿಮಗಾಗಿ ಒಂದಿಷ್ಟು ಸಮಯ ಎತ್ತಿಟ್ಟು ಕೊಳ್ಳಲು ಶುರುಮಾಡಿ ನಮ್ಮ ನಿರಂತರ ಸೇವೆಗೆ ಯಾರೂ ಯಾವ ಪ್ರಶಸ್ತಿ ಕೊಡೋದಿಲ್ಲ. ಭೇಷ್ ಕೂಡ ಅನ್ನೋದಿಲ್ಲ ಕರ್ತವ್ಯ ಅದು ಅಂತಾನೆ ಅಂದ್ಕೊಳ್ಳೋದು. ಬಯಸುವ ಪ್ರೀತಿ ವಿಶ್ವಾಸಗಳು ಕೆಲವರಿಗೆ ಸಿಗುತ್ತೆ ಕೆಲವರಿಗೆ ಅದೂ ಇಲ್ಲ.

ಅತ್ತಿಂದಿತ್ತ ಓಡಾಡುತ್ತಾ ಕೆಲಸ ಮಾಡುತ್ತ ಕುಡಿವ ಚಹಾದಲ್ಲಿ ಮಜಾ ಇಲ್ಲ ಅದು ಚಟಕ್ಕೆ ಸಮ ಒಂದು ಕಪ್ ಚಹಾದ ನೆಪದಲ್ಲಿ ಸಮಯ ನಿಮ್ಮದೂ ಆಗಲಿ.

ಕೊನೇ ಪಕ್ಷ
ಅಯ್ಯೋ...
ಒಂದು ಚಹಾ ಕುಡಿಯೋಕು ಬಿಡಲ್ಲಪ್ಪಾ ಅಂತಾದರೂ ಗೊಣಗಬಹುದು

- ಸ್ಮಿತಾ ಭಟ್ಟ

ಸ್ಮಿತಾ ರಾಘವೇಂದ್ರ ಭಟ್

ಲೇಖಕಿ ಸ್ಮಿತಾ ರಾಘವೇಂದ್ರ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಕಲ್ಲೇಶ್ವರ ಗ್ರಾಮದವರು.ಕಥೆ,ಕವನ, ಗಜಲ್, ಭಾವಗೀತೆ, ಚುಟುಕು, ಲೇಖನ ಹಾಯ್ಕು ಹೀಗೆ ಸಾಹಿತ್ಯ ಹಲವು ಪ್ರಕಾರದ ಬರವಣಿಗೆ ಇವರ ಹವ್ಯಾಸಗಳು. ನಾಡಿನ ವಿವಿಧ ಪತ್ವಿರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಕಾರವಾರ ಆಕಾಶವಾಣಿ, ಧಾರವಾಡ ಆಕಾಶವಾಣಿಯಲ್ಲಿ ಕಥೆ ಕವನಗಳ ವಾಚನ ಹಾಗೂ  ಮೈಸೂರು ದಸರಾ ಕವಿಗೋಷ್ಠಿ ಸೇರಿದಂತೆ ಹಲವು ವೇದಿಕೆಗಳಲ್ಲಿ ಕವನಗಳನ್ನು ಪ್ರಸ್ತುತಪಡಿಸಿದ್ದಾರೆ. ’ಕನಸು ಕನ್ನಡಿ’ ಎಂಬುದು ಇವರ ಮೊದಲ ಗಜಲ್ ಸಂಕಲನ.

More About Author