Poem

ಒಂದು ವಾರದ ಕಥೆ

ಸೋಮವಾರ, ಬುಧವಾರ, ಶನಿವಾರ
ಆ ಗಲ್ಲಿಯಲ್ಲಿ ತರಕಾರಿ ಹೆಸರು
ಕೂಗುತ್ತಿದ್ದ ಮೌಲವ್ವನ ಧ್ವನಿ,
ಈಗ ನಮ್ಮ ಗಲ್ಲಿಗೂ ಕೇಳುತ್ತಿಲ್ಲ!

ಗುರುವಾರ ಬಂದರೆ ಸಾಕು ರಾಯರ
ಮಠದ ಸುತ್ತ ದುಂಡು ಮಲ್ಲಿಗೆ ಘಮಘಮ.
ಮೊಳಕ್ಕೆ ಐದು ರೂಪಾಯಿಯೆಂದು ಕೂಗುತ್ತಿದ್ದ,
ರಾಧಕ್ಕನ ಧ್ವನಿಯೂ ಕೇಳುತ್ತಿಲ್ಲ!

ಮಂಗಳವಾರ, ಶುಕ್ರವಾರಕೊಮ್ಮೆ ರಂಗೋಲಿ ಪುಡಿ,
ಮಾರಲು ಬರುತ್ತಿದ್ದ ಶಾಂತವ್ವನ ಧ್ವನಿಯೂ ಕೇಳುತ್ತಿಲ್ಲ!

ರವಿವಾರ ಬಂದರೆ ಗಲ್ಲಿ ತುಂಬ ಮೀನಿನ ವಾಸನೆ.
ಬಾಂಗ್ಡಾ, ಜಿಲೇಬಿ ಅದು ಇದು ಎಂದು ಮೀನಿನ,
ಖಾನ್ ಧಾನ್ ಹೇಳುತ್ತಿದ್ದ ಬಡೇಸಾಬನ
ಧ್ವನಿಯೂ ಕೇಳುತ್ತಿಲ್ಲ....!

ಒಂದೇ ಒಂದು ವಾರದ ಹಿಂದೆ ಇವರೆಲ್ಲರ
ಧ್ವನಿ ಕೇಳಿದ್ದೆ. ಅವರನ್ನು ಹತ್ತಿರದಿಂದಲೂ ನೋಡಿದ್ದೆ.
ಈಗ ದುಡಿಯುವರ ಧ್ವನಿಯು ಇಲ್ಲ.
ಹಸಿದು ಸತ್ತವರ ಲೆಕ್ಕವೂ ಇಲ್ಲ.

ಆದರೆ ಉಳ್ಳವರ ಮನೆಯಲ್ಲಿ ಇವರ ಸೊಪ್ಪು ತರಕಾರಿ,
ಮಲ್ಲಿಗೆ, ಮೀನು, ಫ್ರೀಜ್ ನಲ್ಲಿ ತಣ್ಣಗಿವೆ.
ರಂಗೋಲಿ ಮಾತ್ರ ಅಂಗಳದಲ್ಲಿ ದುಃಖಿಸುತ್ತಿದೆ.
ಬಡವರ ಮನೆಯ ಕಣ್ಣೀರು ನೆನೆದು.

(ಖಾನ್ ಧಾನ್ = ವಂಶಾವಳಿ)

ಅಲ್ಲಾಗಿರಿರಾಜ್ ಕನಕಗಿರಿ

ವೃತ್ತಿಯಿಂದ ಪತ್ರಕರ್ತರಾಗಿರುವ ಅಲ್ಲಾಗಿರಿರಾಜ ಅವರ ಕೊಪ್ಪಳ ಜಿಲ್ಲೆಯ ಕನಕಗಿರಿಯವರು. ಗಜಲ್‌ ಬರೆಯುವುದರಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರ ’ಆಜಾದಿ ಗಜಲ್’, ಸುರೂರು ಗಜಲ್, ನೂರ್‌ ಗಜಲ್ ಕೃತಿಗಳು ಪ್ರಕಟವಾಗಿವೆ.

More About Author