Story

ಪುಣ್ಯಕೋಟಿ


ನೋಡ ನೋಡುತ್ತಿದ್ದಂತೆ ಅರ್ಬುದ ಕೆಳಗೆ ಬೀಳುತ್ತಾನೆ. ಪುಣ್ಯಕೋಟಿಗೆ ಮನದ ತುಂಬಾ ನೋವಿನ ಕಾರ್ಮೋಡ ಕಟ್ಟಿ ಬೆಂಕಿಯ ಮಳೆಯಾಗಿ ಅವಳ ಮೈ-ಮನಸ್ಸನ್ನು ಸುಡುತ್ತದೆ. ‘ಒಡಹುಟ್ಟಕ್ಕ’ ಎಂದ ತಮ್ಮನನ್ನು ಉಳಿಸಿಕೊಳ್ಳುವ ಒಂದು ಮಾತು ಈ ಪಾಪಿಯೆದೆಯಿಂದ ಬರಲಿಲ್ಲವಲ್ಲ ಎಂಬ ಪಾಪ ಪ್ರಜ್ಞೆ ಅವಳ ಹೊಟ್ಟೆಗೆ ಭರ್ಜಿಯಂತೆ ಚುಚ್ಚುತ್ತದೆ. ತನಗಾಗಿ ಪ್ರಾಣತೆತ್ತ ತಮ್ಮನನ್ನು ಕಾಣಲು ಹುಚ್ಚುಹಿಡಿದವಳಂತೆ ಬೆಟ್ಟದ ಮೇಲಿಂದ ಅಲ್ಲಲ್ಲಿ ಓಡುತ್ತಾ, ಬೀಳುತ್ತಾ, ಜಾರುತ್ತಾ ಮೈ ಮೇಲೆ ಆಗುತ್ತಿರುವ ಸಣ್ಣಪುಟ್ಟ ಗಾಯಗಳನ್ನು ಲೆಕ್ಕಿಸದೆ ಹುಲಿ ಬಿದ್ದಲ್ಲಿಗೆ ಬರುತ್ತಾಳೆ.

ಅರ್ಬುದನ ಪ್ರಾಣ ಹೋಗಿದೆ.
“ಕ್ಷಮಿಸಿದೆ ಎಂದು ಒಮ್ಮೆ ಹೇಳು ಓ ನನ್ನ ಸೋದರನೇ. ನೀ ಸಾಯುವಾಗ ನಾ ತಡೆಯಬೇಕಿತ್ತು ನನ್ನನ್ನು ಕ್ಷಮಿಸು” ಎಂದು ಪುಣ್ಯಕೋಟಿ ಅರ್ಬುದನ ದೇಹದ ಮುಂದೆ ರೋಧಿಸುತ್ತಾಳೆ. ತನ್ನ ಕಾಲಿನಲ್ಲಿ ಆತನನ್ನು ಎಬ್ಬಿಸಲು ವಿಫಲಯತ್ನ ನಡೆಸುತ್ತಾಳೆ. ದೇವಾನುದೇವತೆಗಳನ್ನು ಪ್ರಾರ್ಥಿಸಿ ಸೋಲುತ್ತಾಳೆ. ಅವಳ ನೋವಿಗೆ ಹಾರುವ ಹಕ್ಕಿಗಳೂ, ಓಡುವ ನರಿ-ತೋಳಗಳೂ ಧ್ವನಿಗೂಡಿಸುತ್ತವೆ. ರೋಧನ ದಿಕ್ಕು-ದಿಕ್ಕಿಗೂ ಹರಡುತ್ತದೆ. ಇಳಿಯುತ್ತಿದ್ದ ಸಂಜೆ ಅವಳನ್ನು ಮನೆಗೆ ಕರೆದೊಯ್ಯುತ್ತದೆ.

ಅರ್ಪಿಸಿಕೊಳ್ಳುವೆನೆಂದು ಹೋದ ಪುಣ್ಯಕೋಟಿಯನ್ನು ಅವಳ ಕಂದ ಬಾಗಿಲಲ್ಲೇ ನಗುತ್ತಾ, ಅಳುತ್ತಾ, ಜಿಗಿದು ಬಂದು ಬಿಗಿದಪ್ಪುತ್ತದೆ. ತಾಯಿ-ಮಗು ಇಬ್ಬರೂ ಮರುಜನ್ಮ ಪಡೆದವರಂತೆ ಬಿಕ್ಕಳಿಸಿ ಅಳುತ್ತಾರೆ. ಸುತ್ತ ನಿಂತು ನೋಡುತ್ತಿದ್ದ ಓರಗೆಯ ಗೋವುಗಳ ಸಾಕ್ಷಿಯಾಗಿ. ಎಲ್ಲರ ಕಣ್ಣಲ್ಲೂ ನೀರು. ಪುಣ್ಯಕೋಟಿ ತಲೆಯೆತ್ತಿ ಆಗಸವನ್ನೇ ದಿಟ್ಟಿಸುತ್ತಾ “ನೀನೆಷ್ಟು ಕ್ರೂರಿ ಭಗವಂತ ಪ್ರಾಣಕೊಡುವ ತಮ್ಮನನ್ನು ಕಿತ್ತುಕೊಂಡು, ಸಂತಸ ಕೊಡುವ ಕಂದನನನ್ನು ಮರಳಿಕೊಟ್ಟೆ.” ಎಂದು ಪುಣ್ಯಕೋಟಿ ಕಂದನನ್ನು ಮತ್ತಷ್ಟು ಮುದ್ದಾಡುತ್ತಾಳೆ. ಕೊರಳು ಕೊಟ್ಟು ಸವರಿ ಮೊಲೆ ನೀಡಿ ಮೈಗೆ ಒರಗುವಂತೆ ಮಲಗಿಸಿಕೊಂಡು ಮೆದುವಾಗಿ ಬಾಲದಿ ತಟ್ಟುತ್ತಾ ಕಂದನನ್ನು ಮಲಗಿಸಿದ ಪುಣ್ಯಕೋಟಿಗೆ ರಾತ್ರಿಯೆಲ್ಲಾ ನಿದ್ದೆಯಿಲ್ಲ ಹೊರಳಾಟ, ಕನವರಿಕೆ, ಆಕೆಗೆ ಅದೇ ಪ್ರಶ್ನೆಗಳು ಕಾಡಿವೆ. ಬಂಡೆಯ ಮರೆಯಲ್ಲಿ ನಿಂತಿದ್ದ ಆ ಮೂರು ಮರಿಗಳು ಯಾರವು? ಅವು ಏಕೆ ನಾನು ಹೋದಾಗ ದೂರಕ್ಕೆ ಓಡಿ ಮರೆಗೆ ನಿಂತವು? ಅವು ಏಕೆ ಕಣ್ಣೀರಿಡುತ್ತಿದ್ದವು? ಆ ಧ್ವನಿ... ಆ ಹುಲಿಮರಿಯ ಧ್ವನಿ..... “ಮಾಂಸತರುತ್ತೇನೆAದು ಹೋದೆಯಲ್ಲಪ್ಪಾ... ನಿಮಗಿನ್ನೂ ಬೇಟೆ ತಿಳಿಯದು ಎಂದಿದ್ದೆ, ಅಮ್ಮ ಇಷ್ಟು ಬೇಗ ಕರೆದಳೇ ನಿನ್ನ? ಎದ್ದೇಳಪ್ಪಾ..... ನಾವಿನ್ನು ಎಂದೂ ಮಾಂಸಕೇಳೆವು... ಹಸಿವೆಯೆಂದು ಎಂದೂ ಹೇಳೆವು... ಎದ್ದೇಳಪ್ಪಾ...” ಪುಣ್ಯಕೋಟಿ ತಟಕ್ಕನೆ ಎದ್ದು ನಿಂತಳು. ಆಕೆಯ ಕಂದ ಯಾಕಮ್ಮ ಎಂದಿತು ‘ನಾನಿಲ್ಲದಿದ್ದರೆ ನೀ ಯಾರಲ್ಲಿ ಹಾಲುಣ್ಣುತ್ತಿದೆ’? ಕಂದ ತಲೆ ತಗ್ಗಿಸಿತು.

ಪುಣ್ಯಕೋಟಿಗೆ ಕೊಳಲನಾದ ಕೇಳಿತು ಸೂರ್ಯ ಹಕ್ಕಿಗಳ ಸೀಟಿಯೊಡೆಸುತ್ತಾ ಎಲ್ಲರನ್ನೂ ಎಬ್ಬಿಸುತ್ತಾ.. ತಾನೂ ಎದ್ದು ಬಂದ. ಹುಲಿ ಸತ್ತ ನಂತರದ ಎರಡು... ಮೂರು... ವಾರಗಳು ಪುಣ್ಯಕೋಟಿಗೆ ವರ್ಷದಂತೆ ಕಳೆದವು. “ನಾನು ಅವನ ಸ್ವಹತ್ಯೆಯನ್ನು ತಡೆಯುವ ಅವಕಾಶ ಇತ್ತು ನಾನು ತಡೆಯದೆ ಸ್ವಾರ್ಥಿಯಾದೆ, ಪರೋಕ್ಷ ಕೊಲೆಗೆ ಕಾರಣಳಾದೆ” ಎನಿಸಿತು. ಮತ್ತೂ ತೀವ್ರವಾಗಿ ನೊಂದಿತು. ಹುಲಿಯಂತೆ ಇದೂ ಆಹಾರವ ಬಿಟ್ಟಿತು ಪುಣ್ಯಕೋಟಿಗಾಗಿ ಹುಲಿ, ಹುಲಿಗಾಗಿ ಪುಣ್ಯಕೋಟಿ ಪರಸ್ಪರ ಜೀವತೆತ್ತವು. ಗೊಲ್ಲ ವಿಧವಿಧವಾಗಿ ರೋಧಿಸಿ ರೂಢಿಯಂತೆ ಎಲ್ಲವ ಮುಗಿಸಿದ. ಪುಣ್ಯಕೋಟಿಯ ಮಗಳು ಎಲ್ಲರ ಪ್ರೀತಿ ಪಡೆದು ತ್ವರಿತವಾಗಿ ತಾಯಿಯ ಮೀರಿಸುವ ಹೃದಯಪ್ರೀತಿ ತುಂಬಿ ಬೆಳೆದು ನಲಿಯುತ್ತಿದ್ದಳು.

ಈ ನಡುವೆ ಯಥಾ ಪ್ರಕಾರ ಕಾಳಿಂಗ ಗೋಪಾಲಕನ ಮಗ ಮಾಲಿಂಗ ಗೋಪಾಲಕ ಕಾಡಿಗೆ ತರುಗಳನ್ನು ಹೊಡೆದು ಮಾಮರದಡಿ ನಿದ್ದೆಗೆ ಜಾರಿದ್ದ. ಪುಣ್ಯಕೋಟಿಯ ಮಗಳ ನೋಟಕ್ಕೆ ಯಾವುದೋ ಹುಲಿಯೊಂದು ದೂರದಿ ಗುಂಪಿನ ಮೇಲೆ ಎರಗಲು ಹೊಂಚು ಹಾಕುವಂತೆ ಕಂಡಿತು. ಆಕೆಗೆ ಪುಣ್ಯಕೋಟಿಯು ಕನವರಿಸುತ್ತಿದ್ದ ಮಾತುಗಳು ನೆನಪಾದವು. “ನಾನು ಪಾಪಿ ಪರರ ಆಹಾರವ ಕಿತ್ತುಬಿಟ್ಟೆ, ಅರ್ಬುದನ ಕೊಂದುಬಿಟ್ಟೆ.” ಎಂಬ ತನ್ನ ತಾಯಿಯ ಕನವರಿಕೆಗಳು ಆಕೆಯನ್ನು ಮಾತನಾಡಿಸಿದವು. ಸಾತ್ವಿಕ ಗುಣಗಳೇ ಮೈ ತುಂಬಿದ್ದ ಪುಣ್ಯಕೋಟಿಯ ಮಗಳಿಗೆ ಈ ಹುಲಿ ಇನ್ನೇನು ಗುಂಪಿನ ಗೋವುಗಳ ಮೇಲೆ ದಾಳಿ ಇಟ್ಟು ನನ್ನವರನ್ನು ಕೊಲ್ಲುತ್ತದೆ ಎಂದು ಖಾತರಿಯಾಯಿತು. ಅವಳು ದಿಟ್ಟ ತೀರ್ಮಾನ ಮಾಡಿದಳು ಥೇಟ್ ಅವಳ ತಾಯಂತೆ. ನಡೆದಳು.... ನಡೆದಳೂ... ಹುಲಿಯೆದುರೇ ನಿಂತಳು.!
ಹುಲಿಗೆ ನಿಜಕ್ಕೂ ಭಯವಾಯಿತು. ‘‘ಯಾರು ನೀನು ಕಾಮಧೇನುವೋ, ಸುರಭಿಯೋ, ನಿನ್ನ ಬಲದಿಂದ ನನ್ನ ಚರ್ಮ ಸುಲಿಸಲು ಬಂದೆಯಾ”?
“ನಾನ್ಯಾರಾದರೇನು ನಿನಗೆ ಬೇಕಿರುವುದು ಮಾಂಸವಲ್ಲವೆ ಇಗೋ ಬಂದಿದ್ದೇನೆ ಸ್ವೀಕರಿಸು”
“ಇಲ್ಲ, ಇಲ್ಲ, ನೀನ್ಯಾರೋ ಅಂದದ ಮಾಟಗಾತಿ ಗೋವು ನನ್ನ ತಂದೆ ಅರ್ಬುದನನ್ನು ಕೊನೆಗಾಣಿಸಿದ್ದು ನಿನ್ನಂತದೇ...!
ಏನಂದೆ ಅರ್ಬುದನೇ?
“ಹೌದು, ಅವನೇ ನನ್ನ ತಂದೆ. ತಾಯಿ ಇಲ್ಲದ ಮಕ್ಕಳಿಗೆ ಬೇಟೆ ಕಲಿಸದೆ ಹೋದ ತಂದೆ, ಮಾಂಸತರುವೆನೆಂದು ಸುಳ್ಳುಹೇಳಿ ಹೋದ ತಂದೆ, ಆತ್ಮಹತ್ಯೆ ಮಾಡಿಕೊಂಡ ಪಾಪಿ ತಂದೆ.” “ಶಿವಶಿವಾ... ನಿಲ್ಲಿಸು” ಪುಣ್ಯ ಕೋಟಿಯ ಮಗಳಿಗೆ ತಾಯಿಯ ಪ್ರೀತಿಯನ್ನು ತನಗೆ ಮತ್ತಷ್ಟು ದಿನ ಉಳಿಸಿಕೊಟ್ಟ ಮಹಾತ್ಯಾಗಿ ಅರ್ಬುದನ ಮಗ ಈತ ಎಂಬ ಅರಿವಾಗುತ್ತದೆ. ತನ್ನ ತಾಯಿಗೆ ಸಾಯುವ ದಿನಗಳಲ್ಲಿ ಇದ್ದ ಕೊರಗು ನೀಗಿಸುವ ಇಚ್ಛೆ ಮತ್ತುಷ್ಟು ಹೆಚ್ಚುತ್ತದೆ. ತಾಯನ್ನು ತನಗೆ ಮರಳಿಸಿದ್ದ ಅರ್ಬುದನ ಮೇಲಿದ್ದ ಗೌರವಕ್ಕೆ ಪುಣ್ಯಕೋಟಿಯ ಮಗಳು ಕೃತಜ್ಞತಾ ಭಾವದಿಂದ ಹುಲಿಗೆ ಶಿರಬಾಗಿ ವಂದಿಸಿ ಕಾಲೂರಿ ಕೂರುತ್ತಾಳೆ. ಹುಲಿ ಅವಳನ್ನು ಎರಡು ಸುತ್ತು ಹಾಕುತ್ತದೆ. ಪುಣ್ಯಕೋಟಿಯ ಮಗಳು ತಲೆ ಎತ್ತಿ ‘ಅಮ್ಮಾ... ನೀನು ಅಂದು ಮೂರು ಹುಲಿಗಳ ಹೊಟ್ಟೆಯ ಹಸಿವ ಕಿತ್ತೆ, ಒಂದು ಹುಲಿಯ ಪ್ರಾಣವ ಕಿತ್ತೆ ಎಂದು ನಿತ್ಯರೋದಿಸಿ ಉಪವಾಸವಾಚರಿಸಿ ಸಾವಿಗೆ ಹೋದೆ. ಇದೋ ನಿನ್ನ ಕೊರಗಿಗೆ ತಿಲಾಂಜಲಿ’.

ಹುಲಿ ಗೋವನ್ನು ದಿಟ್ಟಿಸುತ್ತದೆ ‘ಮಕ್ಕಳ ಹಸಿವು ನೀಗಿಸದೆ ಸ್ವರ್ಗಕ್ಕೆ ಹೋದ ತಂದೆಯೇ... ನಾನೇನು ಮಾಡಲಿ ಇವಳೂ ಅವಳಂತೆ ಸಾವಿಗೆ ಆಹ್ವಾನವೀಯುತ್ತಿದ್ದಾಳೆ. ಪರರ ಪ್ರಾಣ ಉಳಿಸಲು ತನ್ನ ಪ್ರಾಣವನ್ನೇ ಕೊಡಲು ಬಂದಿರುವ ಪುಣ್ಯಮೂರ್ತಿಯನ್ನು ನಾನು ಹೇಗೆ ಕೊಲ್ಲಲಿ? ಅಥವಾ ನಿನ್ನ ದಾರಿಯಲ್ಲಿಯೇ ನಾನೂ.... “ಹುಲಿಯು ಗೋವಿನ ಮುಂದೆ ಮಂಡಿಯೂರುತ್ತದೆ. “ಮಹಾತಾಯಿ ನಾನು ಬಾಲ್ಯದಲ್ಲಿದ್ದಾಗ ಪುಣ್ಯಕೋಟಿ ಎಂಬ ಗೋವೊಂದನ್ನು ಕಂಡಿದ್ದೆ. ಆಕೆ ತನ್ನ ಕಂದನಿಗೆ ಮೊಲೆಕೊಟ್ಟು ಬರುತ್ತೇನೆಂದು ಕೊಲ್ಲಲು ಬಂದ ನನ್ನ ತಂದೆಗೆ ವಚನವಿತ್ತು ಅದೇ ರೀತಿ ನಡೆದಳು ಸದ್ಗುಣ ಸಂಪನ್ನನಾದ ನನ್ನ ತಂದೆಯು ನಿನ್ನಂತ ಸತ್ಯ ಸ್ವರೂಪಿಣಿಯನ್ನು ಕೊಂದರೆ ನನಗೆ ನರಕ ಪ್ರಾಪ್ತಿಯಾಗುವುದೆಂದು ತಿಳಿದು ಆಕೆಯ ಸತ್ಯಕ್ಕೆ ಶರಣಾಗಿ ದೇವರಲ್ಲಿಗೆ ಹೋದರು. ಈಗ ಅವಳಿಗಿಂತ ದೊಡ್ಡ ಗುಣನಿಧಿಯಾದ ನೀನು ನನ್ನ ಮುಂದೆ ಇರುವುದು ನಮ್ಮಪ್ಪ ಮಾಡಿದ ಪುಣ್ಯದ ಫಲ. ಸೋದರಿ ನಾನು ನಿನ್ನನ್ನು ಕೊಲ್ಲುವುದಿಲ್ಲ. ನಿನ್ನ ಬಳಗದ ಯಾವ ಗೋವುಗಳ ಮೇಲೂ ಎರಗುವುದಿಲ್ಲ. ನಾನೂ ನನ್ನ ತಂದೆಯಂತೆ ದೇಹತ್ಯಾಗ, ಅನ್ನತ್ಯಾಗ ಮಾಡುತ್ತೇನೆ.! ಇದರಿಂದ ನನಗೂ ತಂದೆಗೆ ಪ್ರಾಪ್ತವಾದ ಸ್ವರ್ಗದೊರೆಯುತ್ತದೆ. ಅಲ್ಲಿ ನನ್ನಪ್ಪ ಅವ್ವನನ್ನು ಕಾಣುವ ಬಯಕೆ ಮಾತನಾಡುವ ಬಯಕೆ, ತಾಯ ಕೊರಳಿಗೆ ಒರಗಿ ಮಲಗುವ ಬಯಕೆ” ಎನ್ನುತ್ತಾ ಏನನ್ನೋ ಸಾಧಿಸಿದ ತೃಪ್ತಿಯ ಹೆಜ್ಜೆ ಮುಂದಿಡುತ್ತಾ ಹುಲಿ ಮುಂದೆ ಹೋಗುತ್ತದೆ.
ಪುಣ್ಯಕೋಟಿಯ ಮಗಳು ಸಾಯಲು ದಾರಿಬಿಡದಂತೆ ಅಡ್ಡನಿಂತು ತಡೆಯುತ್ತಾಳೆ. “ಅಣ್ಣಾ... ಸಾಯದಿರು” ಕಣ್ಣೀರಿಡುತ್ತಾಳೆ. “ಸೋದರನೇ ದೈವರೂಪಿ ನಾನಲ್ಲ, ನನ್ನ ತಾಯಿ ಪುಣ್ಯಕೋಟಿಯೂ ಅಲ್ಲ. ನಿಜ ದೈವ ನೀನು, ನಿನ್ನ ತಂದೆ ಅರ್ಬುದನೆಂಬ ಸಂತ! ನನಗೆ ಮಾತೃಭಿಕ್ಷೆ ನೀಡಿದ ಸಂತ, ನೀನೋ ನನಗೆ ಜೀವ ಭಿಕ್ಷೆ ನೀಡುತ್ತಿರುವ ಸಂತ ಇಂತಹ ವಂಶಸ್ಥನಾದ ನಿನ್ನ ದೇಹತ್ಯಾಗಕ್ಕೆ ನನ್ನ ಸಹಮತವಿಲ್ಲ. ಅಂದು ಪುಣ್ಯಕೋಟಿ ಮಾಡಿದ ತಪ್ಪನ್ನೇ ಮತ್ತೆ ಮಾಡಲಾರೆ. ಅವಳಂತೆ ಕೊರಗಿ ಸಾಯಲಾರೆ.”

ಇಬ್ಬರ ಬೇಕು-ಬೇಡಗಳು ತಾರಕಕ್ಕೇರುತ್ತವೆ ಹುಲಿಯು ಚಂಗನೆ ನೆಗೆದು ಪುಣ್ಯಕೋಟಿಯ ಮಗಳಿಂದ ತಪ್ಪಿಸಿಕೊಂಡು ಎತ್ತರದ ಬಂಡೆ ಹತ್ತಿ ಬೆಟ್ಟದ ಮೇಲೆ ನಿಲ್ಲುತ್ತದೆ. “ಸ್ವರ್ಗವಾಸಿ ನನ್ನ ತಂದೆಯೇ ನಿನ್ನಲ್ಲಿಗೆ ಬರುತ್ತಿದ್ದೇನೆ. ಕರೆದುಕೋ ಪರರ ಒಳಿತಿಗೆ ತನ್ನ ಪ್ರಾಣ ನೀಡಬಂದ ದೈವಸ್ವರೂಪಿ ಗೋವನ್ನು ನಾನು ಕೊಂದಿಲ್ಲ. ದೇವರೇ ನನಗೆ ಸ್ವರ್ಗ ದಯಪಾಲಿಸು” ಹುಲಿ ಹಾರಿ ನೆಗೆಯಲು ಸಿದ್ಧವೆನ್ನುವಂತೆ ಹೆಜ್ಜೆ ಹಿಂದಿಡುತ್ತದೆ.
ಪುಣ್ಯಕೋಟಿಯ ಮಗಳೂ ಹುಲಿಯೆಡೆಗೆ ಬರುತ್ತಾಳೆ. ಮೋಡದ ಹೆಪ್ಪುಗಳ ಸಮೂಹ ಹುಲಿಯ ಮುಂದಿನ ನಿರ್ವಾತದಲ್ಲಿ ನಿಧಾನವಾಗಿ ಇಳಿದು ಆ ಹೆಪ್ಪುಗಳು ಕರಗಲಿಡುತ್ತವೆ. ಇದೇನು ಮಾಯೆ? ಹುಲಿಗೆ ಅಚ್ಚರಿ! ಹುಲಿ ಕಣ್ಣುಗಳನ್ನು ಮುಚ್ಚಿ ತೆಗೆದು ಮಾಡುತ್ತದೆ. “ಅಪ್ಪಾ..” ಅರ್ಬುದ ದೇಹರೂಪ ಪಡೆದು ನಿರ್ವಾತದಿಂತ ತನ್ನ ಮಗನ ಬಳಿಗೆ ನೆಗೆದು ಬರುತ್ತಾನೆ. ಬಹುದಿನಗಳಿಂದ ಇದ್ದ ಮಗನ ಕೊರಗು ನೀಗಿಸುವವನಂತೆ ಬಿಗಿದಪ್ಪುತ್ತಾನೆ. ಕೊರಳಿಗೆ ಕೊರಳು ಕೊಟ್ಟು ಮುದ್ದಿಸುತ್ತಾನೆ, ಇಬ್ಬರ ಕಣ್ಣು-ಕೊರಳು-ಕರುಳು ತುಂಬಿ ಬರುತ್ತವೆ. ಸಾವರಿಸಿಕೊಂಡ ಅರ್ಬುದನ ಮಗ ಸಂಕಟದಲ್ಲಿ ನುಡಿಯುತ್ತಾನೆ. “ನನ್ನ ನೋಡಲು ಸ್ವರ್ಗದಿಂದ ಇಳಿದು ಬಂದೆಯಾ...? ಇಷ್ಟು ದಿನ ಯಾಕೆ ಬರಲಿಲ್ಲ, ನೀನು ತೀರಿದ ಅರೆಗಳಿಗೆಗೆ ನನ್ನ ಕಿರಿಯ ತಮ್ಮಂದಿರಿಬ್ಬರೂ ನಿನ್ನ ಹಿಂದೆಯೇ ಬಂದರು. ನಿನ್ನ ಹಿಂಬಾಲಿಸಿ ನಡೆಯುವಷ್ಟು ಹಸಿವು ಅವರನ್ನು ಕಾಡಿತ್ತು ನಾನು ಅದೇಗೆ ಉಳಿದೆನೋ... ಬೆಳೆದೆನೋ...’’ ಅಳುತ್ತಾನೆ.

ಅರ್ಬುದ ಗದ್ಗದಿಸುತ್ತಾ.... “ನಾನು ಸ್ವರ್ಗದಿಂದ ಇಳಿದು ಬರಲಿಲ್ಲವಪ್ಪಾ ಆತ್ಮಹತ್ಯೆಯಂತಾ ಘೋರ ಪಾಪವಾಚರಿಸಿದ್ದರಿಂದ ನನಗೆ ಸ್ವರ್ಗ-ನರಕಗಳಿಲ್ಲ. ನಾ ಬಿದ್ದ ಜಾಗದಲ್ಲಿಯೇ ಅಲೆಯುತ್ತಿದ್ದೆ, ನಿನ್ನ ಕಂಡು ಬಂದೆ ಬಾ ಕಂದ” ಮತ್ತೆ ಅಪ್ಪುತ್ತಾನೆ. ಇದಕಂಡ ಪುಣ್ಯಕೋಟಿಯ ಮಗಳಿಗೆ ತಾಯಿಯ ನೆನಪು ಹೆಚ್ಚಿ ಆಕೆ ಚಡಪಡಿಸುತ್ತಾ ಮಣ್ಣಲ್ಲಿ ಮಣ್ಣಾಗುವ ನಾನು ಹಸಿದೊಂದು ಜೀವಿಗೆ ಆಹಾರವಾಗಲೂ ಅನರ್ಹಳೆಂದ ಮೇಲೆ ನಾನು ಬದುಕಿದ್ದೇನು? “ಅರ್ಬುದ ನೆಗೆದ ಜಾಗಕ್ಕೆ ಬಂದು ತಾಯನೊಮ್ಮೆ ಕಣ್ಮುಚ್ಚಿ ನೆನೆದು ಬಂಡೆ ಮೇಲಿಂದ ಜಿಗಿದೇ ಬಿಟ್ಟಳು. ನೆಲಕ್ಕೆ ಹೂವಿನಷ್ಟು ಮೆತ್ತಗೆ ಇಳಿದಳು. ‘ನಾನೇಕೆ ಸಾಯಲಿಲ್ಲ? ಹೂವಿನಂತೆ ನನ್ನನ್ನು ಇಲ್ಲಿ ಇಳಿಸಿಕೊಂಡವರಾರು? ಅವಳ ಕರುಳು ಮಿಡಿಯುತ್ತದೆ. ಹಿಂದೆ ತಿರುಗುತ್ತಾಳೆ. ಕಾಡಿನ ಜರಿಯಲ್ಲಿ ಮಿಂದು ಬಂದಂತಿದ್ದ ತಾಯಿ ಪುಣ್ಯಕೋಟಿ ನಿಂತಿದ್ದಾಳೆ!.

ಹುಲಿಗಳ ನೋಟ ಗೋವುಗಳತ್ತ ಬೀಳುತ್ತದೆ. ನಾಲ್ವರೂ ಒಟ್ಟಿಗೇ ಬಂದು ನಿಲ್ಲುತ್ತಾರೆ. ಪುಣ್ಯಕೋಟಿ-ಅರ್ಬುದ ಸಾಹೋದರ್ಯದ ಪ್ರೀತಿಯಲ್ಲಿ ತೋಯುತ್ತಾರೆ. ಸಾವಿರ ಮಾತುಗಳು ಪುಣ್ಯಕೋಟಿಯ ಎದೆಯಲ್ಲಿರುತ್ತವೆ. ಅರ್ಬುದನ ಕಂಡ ಪುಣ್ಯಕೋಟಿಗೆ ಕಂಬನಿಯ ಹೊರತಹಾದಿಗಳಿಲ್ಲ, ಹುಲಿಯನ್ನು ಅಪ್ಪಿಕೊಂಡು ಸಮಾಧಾನಿಯಾಗಿ ತನ್ನ ಮನದ ಭಾರ ಇಳಿಸಿಕೊಳ್ಳುವವಳಂತೆ ತನ್ನನ್ನು ಕಾಡಿದ ಸಂಕಟಗಳು ನೆನಪಾಗಿ ಪ್ರಶ್ನಿಸುತ್ತಾಳೆ.
ಏಕೆ... ಏಕೆ... ನನ್ನನ್ನೇಕೆ ನೀನಂದು ತಿನ್ನಲಿಲ್ಲ..?
ಅರ್ಬುದ ನುಡಿಯುತ್ತಾನೆ. “ನೀನು ಹಾಲುಣಿಸ ಹೋದ ಮೇಲೆ ಮರಕಡಿವ ಜನರಾಡುವುದ ಕೇಳಿದೆ, ನೀನು ದೇವತೆಯಂತೆ, ನಿನ್ನಲ್ಲಿ ಕೋಟಿ-ಕೋಟಿ ದೇವರಿವೆಯಂತೆ.”
ಪುಣ್ಯಕೋಟಿ ಜಿಗುಪ್ಸೆಯಿಂದ ಉತ್ತರಿಸುತ್ತಾಳೆ. “ಅದೇನೋ ನನಗೆ ತಿಳಿದಿಲ್ಲ. ಹತ್ತಾರು ಬಾರಿ ನನ್ನ ಕಾಲಿಗೆ ಗಾಯವಾಗಿದೆ, ಕೀವು-ರಕ್ತದೊಂದಿಗೆ ವಿಪರೀತ ನೋವು ತಿಂದಿದ್ದೇನೆ ಆಗ ಯಾವ ಅಶ್ವಿನಿ ದೇವತೆಯೂ ನನಗೆ ಉಪಚರಿಸಿಲ್ಲ, ಗಾಯದ ಮೇಲೆ ಕೂತು ನನ್ನ ಪ್ರಾಣವನ್ನು ಇಂಚಿಂಚಾಗಿ ಹೀರುವ ನೊಣಗಳನ್ನು ನನ್ನ ಮೈಕೊಡವಿಯೋ... ಬಾಲದಿಂದಲೋ ಓಡಿಸಿದ್ದೇನೆ, ಆಗ ನನ್ನ ಸುತ್ತ ಯಾವ ಗೋರಕ್ಷಕರೂ ಇದ್ದಿರಲಿಲ್ಲ. ಬಿದ್ದ ನಿನ್ನ ನೋಡಲು ಓಡಿ ಬಂದ ನನ್ನ ಮೈಗೆ ಸವರಿದ ಕಡ್ಡಿಗಳು ನನ್ನ ಮೈ ಕುಯ್ದಿದ್ದವು ಆಗ ಅದ್ಯಾವ ದೇವನ ಮುಖ ಹರಿದಿತ್ತೋ.. ನನಗೆ ಗೊತ್ತಿಲ್ಲ, ಆ ನೋವನ್ನೆಲ್ಲಾ ನಾನೇ ಸಹಿಸಿದೆ. ನೇಗಿಲು ಎಳೆವಾಗ, ಗಾಣದಿ ತಿರುಗುವಾಗ, ಚಾಟಿ ಏಟಿನ ನೋವುಣ್ಣುವಾಗ, ಕಾಲಿಗೆ, ಮೂಗಿಗೆ, ಮೊಳೆ ಬೀಳುವಾಗ ಎಷ್ಟು ಅರಚಿದರೂ ಯಾವ ದೈವವಿಲ್ಲ ನನ್ನ ಕಿವಿ ಕಚ್ಚಿ ಹಿಂಸಿಸುತ್ತಿದ್ದ ಉಣ್ಣೆಗಳು ಯಾವ ದೇವನ ರಕ್ತವನ್ನೂ ಕುಡಿದಿಲ್ಲ. ನನ್ನ ದೇಹ ನನ್ನದು - ನನ್ನ ದೇಹದಲ್ಲಿರುವುದು ನಾನೇ ಹೊರತು ಬೇರೆಯವರಲ್ಲ. ಎಷ್ಟಾದರೂ ನಾನು ಹೆಣ್ಣಲ್ಲವೇ... ನನ್ನದೇಹ ನನ್ನದು ಎಂದು ಆಗಾಗ ಗಟ್ಟಿಯಾಗಿ ಹೇಳಬೇಕಾದ ತುರ್ತು ಇದ್ದೇ ಇದೆ!
ನಾ ಕಂಡ ದೇವನೊಬ್ಬ ಇದ್ದರೆ ಅದು ನೀನೊಬ್ಬನೇ!. ಹಸಿದ ವೇಳೆಯಲ್ಲಿ ಸಿಕ್ಕ ಅನ್ನವನ್ನೂ ಬಿಟ್ಟ ಪರಮ ವೈರಾಗ್ಯಮೂರ್ತಿ, ನನ್ನ ತಾಯ್ತನವನ್ನು ನನ್ನ ಕಂದನಿಗೆ ತಾಯಿಯನ್ನು ತಿರುಗಿಸಿಕೊಟ್ಟ ನನ್ನ ಪಾಲಿನ ನಿಜ ದೈವ ನೀನು ಮಾತ್ರ.”
ಮಾತು ನಿಲ್ಲತ್ತದೆ.
“ಹೇಳು ಅರ್ಬುದ ಏಕೆ ತಿನ್ನಲಿಲ್ಲ ನನ್ನ”? ಮತ್ತೆ ಪ್ರಶ್ನಿಸಿದ್ದಾಳೆ.
ತಬ್ಬಿಬ್ಬಾದ ಅರ್ಬುದ “ನೀನು ಮಾತೆಯಲ್ಲವೆ! ಜಗಕೆಲ್ಲಾ ಹಾಲೀಯುವಳ ತಿಂದರೆ ದೇವ ಮೆಚ್ಚಿಯಾನೇ? ಮರು ಪ್ರಶ್ನಿಸುತ್ತಾನೆ. ಪುಣ್ಯಕೋಟಿ ಹಿಂದಿರುಗಿ ನಿಲ್ಲುತ್ತಾಳೆ ಸೂರ್ಯ ಸಂಜೆಯನ್ನು ಆಹ್ವಾನಿಸಿದ್ದಾನೆ. ತಲೆತಗ್ಗಿಸಿದ ಪುಣ್ಯಕೋಟಿ ತಾತ್ಸಾರದ ನಗುವಿನೊಂದಿಗೆ “ಸಕಲ ಜೀವಜಂತುಗಳಂತೆ ನಾನೂ ಮಾತೆಯೇ.. ಎಲ್ಲ ತಾಯಂದಿರಂತೆ ನಾನೂ ಕಂದಗಳಿಗೆ ಮೊಲೆಯೂಡಿಸುವ ಒಂದು ಜೀವಿ. ನನ್ನ ಕೆಚ್ಚಲಿರುವುದು ನನ್ನ ಕಂದಮ್ಮಗಳಿಗೇ ಹೊರತು ಊರ ತುಂಬ ಜನರೆಲ್ಲಾ ಬಂದು ಬಾಯಿ ಹಾಕಲು ಅಲ್ಲ.! ತಾಯಿ ಎಂದವರೆಲ್ಲ ನನ್ನ ಮೈತಿಕ್ಕಿ, ಮೇವಿಕ್ಕಿ ಸಾಕಿಲ್ಲ. ಅದೇಗೆ ನಾ ಅವರ ತಾಯದೆನು? ಪುಣ್ಯಕೋಟಿ ಸ್ವಲ್ಪ ಆವೇಶದಿಂದಲೇ ನುಡಿದಿದ್ದಾಳೆ. ಸತ್ಯ ದೇವತೆಯಾದ ಪುಣ್ಯಕೋಟಿ ಅರ್ಬುದನನ್ನು ಕೇಳುತ್ತಾಳೆ. “ನನ್ನನ್ನು ತಿನ್ನದೆ ನೀನು ಹುಲ್ಲುತ್ತಿನ್ನುತ್ತಿದ್ದೆಯೋ? ಅರ್ಬುದ ಉತ್ತರಿಸುತ್ತಾನೆ “ಇಲ್ಲ ತಾಯಿ, ಹುಲ್ಲುತ್ತಿನ್ನುವುದು ಹುಲಿಯ ಧರ್ಮವೇ,? ಮೊಲವೋ, ಜಿಂಕೆಯೋ, ಎಮ್ಮೆಯೋ ಏನೋ ನಡೆಯುತ್ತಿತ್ತು. ನಸುನಕ್ಕ ಪುಣ್ಯಕೋಟಿ ‘’ನನ್ನಂತೆ ಅವರಿಗೂ ಒಂದು ದೇಹ, ಒಂದು ಬಾಳುವೆ, ಒಂದು ಜೀವವಿಲ್ಲವೇ? ಮಕ್ಕಳು-ಮರಿಗಳಿಲ್ಲವೇ ಅರ್ಬುದ..? ಗೋವೊಂದೇ ಜೀವ ಗೋವೋಂದೇ ದೇವ ಎಂಬ ಮೂಢನಂಬಿಕೆಯಿಂದ ಹೊರ ಬಾ.!
ಅರ್ಬುದ ತನ್ನ ಅಲ್ಪ ಮತಿಗೆ ತಲೆ ತಗ್ಗಿಸಿದ್ದಾನೆ. ನೆನಪಾದವನಂತೆ ಸೋದರಿ,ನೀನು ಜೀವಂತ ಇರುವೆಯೇನು?
ಇಲ್ಲ ದೇಹತ್ಯಾಗ ಮಾಡಿದೆ.
ದೇಹತ್ಯಾಗವೇ?
ಹೌದು, ಸಲ್ಲೇಖವನ್ನಪ್ಪಿದೆ.
ಜಿನರೇನು ನೀವೆಲ್ಲಾ?
ಇಲ್ಲ,ಇಲ್ಲ, ನನ್ನದು ಪ್ರಾಣಿಧರ್ಮ -ಹಸುವಿನಧರ್ಮ.
ಇತ್ತ ಕಡೆ ಪುಣ್ಯಕೋಟಿಯ ಮಗಳೂ, ಅರ್ಬುದನ ಮಗನ ವಾಗ್ವಾದವು ಕಾಡನ್ನು ತುಂಬುತ್ತದೆ. ತಿನ್ನು ಎನ್ನುವ ಅವಳು ; ತಿನ್ನಲಾರೆ ಎನ್ನುವ ಇವನು. ಇಬ್ಬರನ್ನೂ ಸಮಾಧಾನಿಸುತ್ತಾ ಪುಣ್ಯಕೋಟಿ ಮತ್ತು ಅರ್ಬುದರು ತಮ್ಮ ಸಾತ್ವಿಕ ಶಕ್ತಿಯಿಂದ ಸರ್ವದೇವತೆಗಳನ್ನು ಆವಾಹಿಸುತ್ತಾರೆ. ಯಾರೂ ಬರುವುದಿಲ್ಲ. ಪುಣ್ಯವತಿಯನ್ನು ಹುಲಿಯೊಂದು ಎದುರುಗಟ್ಟಿ ತಡೆದಿರುವುದು ಕಂಡ ಗೋಗಾಹಿ ಮನೆಗಳತ್ತ ಓಡುತ್ತಾ “ಹುಲಿಯು ಗೋವನ್ನು ತಿನ್ನಲಿದೆ” ಎಂದು ಕೂಗಿದ್ದಾನೆ. ಅತ್ತಲಿಂದ ಆತನ ಬಳಗವೆಲ್ಲಾ ದೊಣ್ಣೆ ಹಿಡಿದು ಹುಲಿಯನ್ನು ಕೊಲ್ಲಲು ಆವೇಶದಿಂದ ಓಡಿ ಬರುತ್ತಿದ್ದಾರೆ.....

ಗೋವಿಂದರಾಜು ಎಂ. ಕಲ್ಲೂರು

ಯುವಕತೆಗಾರ ಗೋವಿಂದರಾಜು ಎಂ. ಕಲ್ಲೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಲ್ಲೂರಿನವರು. ಸದ್ಯ, ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಇವರಿಗೆ ಕ್ರೈಸ್ಟ್ ಯೂನಿವರ್ಸಿಟಿ ಮತ್ತು ಈ- ಹೊತ್ತಿಗೆ ಕಥಾ ಸ್ಪರ್ಧೆಗಳಲ್ಲಿ ಬಹುಮಾನ, ಬೇಂದ್ರೆ ಕಾವ್ಯ ಕೂಟದಿಂದ ಲೇಖನ, ಕವನ ಸ್ಪರ್ಧೆಗಳಲ್ಲಿ ಬಹುಮಾನ ಲಭಿಸಿದೆ. ಪ್ರಜಾವಾಣಿ, ಹೊಸಮನುಷ್ಯ, ಸಮಾಜಮುಖಿ, ಸಂವಾದ ಪತ್ರಿಕೆಗಳಲ್ಲಿ ಬರೆಹಗಳನ್ನು ಪ್ರಕಟಿಸಿದ್ದಾರೆ.

More About Author