Story

ಪುಟ್ಟಕ್ಕನ ಪುಟ್ಬಾತಿನ ಕಥೆ

ಲೇಖಕ ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿರುವ ಮನು ಗುರುಸ್ವಾಮಿ ಅವರ ‘ಪುಟ್ಟಕ್ಕನ ಪುಟ್ಬಾತಿನ ಕಥೆ’ ನಿಮ್ಮ ಓದಿಗಾಗಿ...

ಮಕ್ಕಳಿಬ್ಬರಿದ್ದೂ ಇಲ್ಲದಂತಾಗಿದ್ದ ಪುಟ್ಟಕ್ಕ, ಅಂದು ಹೊಟ್ಟೆ ಪಾಡಿಗಾಗಿ ಪ್ಯಾಟೆಯ ಹೃದಯ ಭಾಗಕ್ಕೆ ನಾಡಿಯಂತಿದ್ದ ರಸ್ತೆಯೊಂದರ ಪುಟ್ಬಾತಿನ ಮ್ಯಾಲೆ ಕೂತು ಕಡಲೆಕಾಯಿ ಮಾರಿ, ಅದರಿಂದ ಬಂದ ಪುಡಿಗಾಸು ಎಣಿಸುತ್ತಿದ್ಳು. ದಿನದ ಸಂಪಾದನೆಗಿಂತ ಆ ದಿನ ಐದೇ ರೂಪಾಯಿ ಕಮ್ಮಿ ಇದ್ದದ್ದನ್ನ ಕಂಡು ಮತ್ತ್ಯಾರಾದರೂ ಇತ್ತ ಕಡೆ ಸುಳಿದು ನಿಂತಾರು ಅಂತ ಕಾದು ಕೂತಳು. ಇತ್ತ ಅಂಬರದ ರಂಗು ಮಾಸಿ, ಹೊತ್ತು ಮುಳುಗುತ್ತಿತ್ತು. ಅದ ಸಮಯಕ್ಕೆ ಸರಿಯಾಗಿ ತನ್ನ ಮುಂದೆ ಹಾದು ಹೋದ ಬೂಟಿನ ಸದ್ದು ಆಕೆಯ ಕಿವಿ ಮುಟ್ಟಿತು. ಆಕೆ ಕಡಲೆಕಾಯಿ ಕಟ್ಟಿದ ಪೊಟ್ಟಣವ ಎತ್ತಿ ಹಿಡಿದು ' ಸ್ವಾಮಿ ಕಡಲೆಕಾಯಿ ಕೊಂಡ್ರಲಾ ಐದಾ ರೂಪಾಯಿ' ಅಂದಳು. ಆಕೆಯ ದನಿಯನ್ನ ಕೇಳುತ್ತಿದ್ದಂತೆ, ಮುಂದೆ ಸಾಗಿದ್ದ ಬೂಟುಗಳು ಹಿಂದಿರುಗಿದವು. 'ನಾ ಇತ್ತ ಕಡಿ ಹೊಂಟಾಗ ಹತ್ತು ರೂಪಾಯಿ ಅಂದ್ಯಲ್ಲೊ ಮುದುಕಿ.. ಈಗ ಐದಾ ರೂಪಾಯಿ ಅಂತಿ' ಬೂಟು ತೊಟ್ಟ ಆಸಾಮಿ ಕೇಳಿದ. ನಾಳೆ ಬ್ಯಾಂಕಿಗೆ ಹಣ ಕಟ್ಟೊದಕ್ಕ ಐದ್ ರೂಪಾಯಿ ಕಮ್ಮಿ ಇದೆ. ಇದ ಕೊಂಡ್ರಲಾ ಅನುಕೂಲ ಆಗ್ತೈತಿ..' ಪುಟ್ಟಕ್ಕ ಮರುನುಡಿದಳು. 'ಅರೆ ಬ್ಯಾಂಕಿಗೆ..? ದಿನ ಕಟ್ತಿಯೇನೂ..?' ಆಸಾಮಿ ಕುತೂಹಲದಿಂದಲೆ ಕೇಳಿದ. 'ದಿನ ಅಲ್ಲ ಸ್ವಾಮಿ.. ತಿಂಗಳಿಗೊಮ್ಮೆ ಪ್ರಧಾನಿಮಂತ್ರಿ ಯೋಜನೆಯಾಯ್ತಲ್ರಿ ಅದಕ್ ಕಟ್ಟೊದಕ್ಕ..' ಪುಟ್ಟಕ್ಕ ನುಡಿದಳು. ಪ್ರಧಾನಮಂತ್ರಿ ಯೋಜನೆ...!' ಆಸಾಮಿ ಆಶ್ಚರ್ಯದಿಂದಲೆ ಕೆಳಗೆ ಕುಳಿತ. 'ಅದಂಗಿರಲಿ.. ನಿನ್ನ ಕಾಲಿಗೇನಾಯ್ತು..?' ಪುಟ್ಟಕ್ಕನ ಕೇಳಿದನು. ಆಕೆಯ ಕಣ್ಣು ತುಂಬಿ ಬಂದವು. ಕಡಲೆಕಾಯಿ ಹಿಡಿದಿದ್ದ ಕೈ ಕೆಳಗಿಳಿದು, ಆಕೆಯ ಕಣ್ಣನ್ನ ನೆವರಿಸಿತು. ಆಕೆ ತನ್ನ ಕಥೆಯನ್ನ ಬಿಡಸ ನಿಂತಳು.

ಹತ್ತಾರು ಮನೆಯಾಗ ಕಸರ-ಮುಸುರೆ ತೊಳ್ದು, ಒಬ್ಬ ಮಗನನ್ನ ಸಾಫ್ಟ್ ವೇರ್ ಇಂಜಿನಿಯರ್ ಮಾಡಿದ್ದ ಆಕೆ, ಮತ್ತೊಬ್ಬಳನ್ನ ಹೊರ ದೇಶಕ್ಕೆ ಓದೊದಕ್ಕಂತಲೆ ಕಳಿಸಿದ್ಳು. ಹಿರಿಮಗ ಇಂಜಿನಿಯರ್ ಆದ ಎರಡೇ ವರುಷದಾಗ ಹುಡುಗಿಯೊಬ್ಬಳನ್ನ ಮದುವೆಯಾಗಿ ಮನೆಗೆ ಕರೆತಂದಿದ್ದನು. ಇದನ್ನ ಕಂಡು ಪುಟ್ಟಕ್ಕ ವಿಚಲಿತವಾಗದೆ, ಬಹಳ ನಯವಾಗಿ ಆಕೆಯನ್ನ ಮನೆ ತುಂಬಿಸಿಕೊಂಡಿದ್ದಳು. ಮನೆಗೆ ಬಂದ ಇಂಜಿನಿಯರ್ ಹೆಡ್ತಿ ಮನೆಯಾಗ ಸಣ್ಣ ಪುಟ್ಟ ಕೆಲಸಕ್ಕೂ ಕೈಯಾಕದೆ, ಸದಾ ಕಲರ್ ಬಾಕ್ಸ್'ನ ಮುಂದೆ ಕೂತಿರುತ್ತಿದ್ದಳು. ಮಗ ಇಂಜಿನಿಯರ್ ಆಗಿದ್ದರೂ ಬ್ಯಾರಿಯವರ ಹಟ್ಟಿ ಕಸ್ರ-ಮುಸ್ರ ತೊಳೆಯುವುದನ್ನ ಪುಟ್ಟಕ್ಕ ತಪ್ಪಿಸುತ್ತಿರಲಿಲ್ಲ. ತನ್ನ ಮಗಳ ಹೊರೆಯನ್ನ ಸಂಸಾರಸ್ಥನ ಮೇಲೆ ಹೊರಿಸುವುದು ಬ್ಯಾಡ ಎಂಬ ಮನಸ್ಥಿತಿಯಲ್ಲಿದ್ದಾಕೆ ಆ ಕೆಲಸದಿಂದ ಬಂದ ಹಣದಲ್ಲಿ ಸ್ವಲ್ಪವನ್ನ ದೇವರ ಪಟಕ್ಕೆ ಎದುರಾಗಿ ನಿಂತಿದ್ದ ಗೋಲಕದಲ್ಲಿಟ್ಟು, ಉಳಿದದ್ದನ್ನ ಕಿರಿಮಗಳ ಓದಿಗಾಗಿ ಕಳಿಸಿಕೊಡುತ್ತಿದ್ದಳು. ಆಕೆ ಮನೆಯೊರಗೆ ದುಡಿದು ಮನೆಯೊಳಗೆ ಕಾಲಿಟ್ಟರೆ, ಇಲ್ಲಿಯೂ ಆಕೆಗಾಗಿ ಕೆಲಸಗಳು ಕಾದು ಕುಳಿತ್ತಿರುತ್ತಿದ್ದವು. ಇದರ ಬಗ್ಗೆ ಸೊಸೆಯ ಮುಂದೆ ವಿಚಾರ ತಂದಾಗ 'ಬ್ಯಾರಿ ಮನೆಯಾಗ ಕಸರ-ಮುಸುರೆ ತೊಳೆಯೊ ಬದ್ಲು, ಇಲ್ಲೆ ತೊಳಿಬಾರ್ದ.. ಹೊಟ್ಟೆ ಬಟ್ಟೆಗೆ ಬರನಾ ಮನೆಯಾಗ' ಎಂದ ಆಕೆ ಇದರ ಬಗ್ಗೆ ತನ್ನ ಗಂಡನಿಗೂ ದೂರು ನೀಡಿದ್ದಳು. ಆದರೆ ತನ್ನ ಗಂಡ ಇಂಜಿನಿಯರ್ ಆಗಲು ಆ ಕಸರೆ-ಮುಸರೆ ಕೆಲಸವೇ ನೆರವಾಗಿತ್ತು ಅನ್ನೊದು ಆಕೆಯ ಗಮನಕ್ಕೆ ಬಂದಿರಲಿಲ್ಲ. ಇತ್ತ ಪುಟ್ಟಕ್ಕನ ಮಗರಾಯನಿಗೂ ಆ ಪರಿಜ್ಞಾನವಿರದೆ ಪುಟ್ಟಕ್ಕನಿಗೆ ಎಷ್ಟೋ ಬಾರಿ ಆ ಕೆಲಸ ಬಿಟ್ಟು ಬಿಡುವಂತೆ ತಾಕೀತು ಮಾಡಿದ್ದನು. ಆದರೆ ಸೊಸೆ ಮಾತಿಗಾಗಲಿ, ಮಗನ ಮಾತಿಗಾಗಲಿ ಬೇಸರಕ್ಕೊಳಗಾಗದ ಆಕೆ, ಆ ಕೆಲಸವನ್ನೂ ಅಲ್ಲಿಗೆ ಕೈ ಬಿಡಲು ಮುಂದಾಗಲಿಲ್ಲ.

ಅದೊಂದು ದಿನ ಪುಟ್ಟಕ್ಕ ಹತ್ತಾರು ಮನೆಯ ಕೆಲಸ ಮುಗಿಸಿ, ಸದಾ ಗಿಜಗುಡುತ್ತಿದ್ದ ವಾಹನಗಳ ಸೋಗಿನೊಳಗೆ ರಸ್ತೆ ದಾಟಲು ರಸ್ತೆ ಬದಿಯಲ್ಲಿ ಕಾದು ನಿಂತಿದ್ದಳು. ಸುಮಾರು ಹೊತ್ತು ಕಾದು ನಿಂತರೂ ರಸ್ತೆ ದಾಟಲಾಗದ ಆಕೆ, ಅದೊಮ್ಮೆ ಕಾಲೊಂದನ್ನ ಮುಂದಿಕ್ಕಿದಳು. ಹಿಂದಿನಿಂದ ವೇಗವಾಗಿ ಬಂದ ಕಾರಿನ ಗಾಲಿಗಳು, ಆಕೆಯ ಎರಡು ಕಾಲ್ಗಳ ಮೇಲೆ ಹಾದು ನಿಂತವು. ಆಕೆಯ ಕಾಲ್ಗಳು ಸ್ಥಳದಲ್ಲೆ ತುಂಡಾದವು. ಅದನ್ನು ನೋಡುತ್ತಿದ್ದ ದಾರಿಯೋಕರು, ತಕ್ಷಣವೇ ಆಕೆಯನ್ನ ಆಸ್ಪತ್ರೆಗೆ ಸೇರಿಸಿದ್ದರಿಂದ, ಪುಟ್ಟಕ್ಕ ಸಾವಿನ ದವಡೆಯಿಂದ ಪಾರಾಗಿದ್ದಳು.

ಇತ್ತ ಆಕೆಯ ಕಥೆಯನ್ನ ಆಲಿಸುತ್ತಿದ್ದ ಬೂಟಿನ ಆಸಾಮಿ 'ಮಗ ಇಂಜಿನಿಯರ್ ಅಂತಿಯಾ...? ಮತ್ಯಾಕ ಈ ಪುಟ್ಬಾತಲ್ಲಿ ಕೂತು ಕಡಲೆಕಾಯಿ ಮಾರ್ತಿದ್ದಿ...? ಕಾಲುಗಳು ಬೇರೆ ಇಲ್ಲ ನಿಂಗೆ.' ಅಂದ. ಆತನ ಮಾತು ಕಿವಿ ತಾಗುತ್ತಿದ್ದಂತೆ ಪುಟ್ಟಕ್ಕ ತನ್ನ ಕಥೆಯನ್ನ ಮುಂದುವರಿಸಿದಳು.

ಆಕೆ ತನ್ನ ಕಾಲ್ಗಳನ್ನ ಕಳೆದುಕೊಂಡಾಗ ಆಕೆ ಯಾರೆಂದೇ ತಿಳಿಯದ ಮಂದಿ ಆಕೆಯನ್ನ ಆಸ್ಪತ್ರೆಗೆ ದಾಖಲಿಸಿ ಆಕೆಯ ಜೀವವನ್ನ ಉಳಿಸಿದ್ದರು. ಆದರೆ ಸ್ವಂತ ಮಕ್ಕಳೇ ಆಕೆಯನ್ನ ನೋಡಲು ಮೂರು ದಿನದವರೆಗೂ ಆಸ್ಪತ್ರೆಗೆ ಬಂದಿರಲಿಲ್ಲ.. ಆಸ್ಪತ್ರೆಯ ಸಿಬ್ಬಂದಿಯಿಂದ ಮಕ್ಕಳಿಗೆ ಕರೆ ಮಾಡಿಸಿ ಮಾಡಿಸಿ ಪ್ರಯೋಜನವಿಲ್ಲದೆ ಆಕೆ ದಣಿದ್ದಿದ್ದಳು. ಮೂರು ದಿನಗಳ ನಂತರ ಬಂದ ಸಾಫ್ಟವೇರ್ ಇಂಜನಿಯರ್ ಮತ್ತು ಆತನ ಹೆಡ್ತಿ ಆಸ್ಪತ್ರೆಯ ಸಿಬ್ಬಂದಿಯ ಜೊತೆ ನಮಗೀ ವಿಷಯವೇ ತಿಳಿದಿಲ್ಲವೆಂಬಂತೆ ನಟಿಸಿ ಆಕೆಯನ್ನ ಮನೆಗೆ ಕರೆತಂದಿದ್ದರು. ಪುಟ್ಟಕ್ಕ ಚೆನ್ನಾಗಿ ಓಡಾಡುತ್ತಿದ್ದಾಗ ಮನೆಯ ಯಾವುದೇ ಭಾರವೊರದೇ ಸದಾ ಕಲರ್ ಬಾಕ್ಸಿನ ಮುಂದೆ ಕೂರುತ್ತಿದ್ದ ಇಂಜಿನಿಯರ್ ಹೆಡ್ತಿಗೆ ಒಂದೇ ಬಾರಿ ಆಕಾಶ ತಲೆಮ್ಯಾಲೆ ಬಿದ್ದಾಂಗಾಗಿತ್ತು. ದಿನಗಳು ಉರುಳಿದಂತೆ ಅತ್ತೆಯನ್ನೂ ನೋಡಿಕೊಳ್ಳುವಲ್ಲಿ ಮುಖಮುರಿದ ಆಕೆ, ತನ್ನ ಪತಿರಾಯ ಕರೆದು 'ಈ ಕರ್ಮವನ್ನ ಇನ್ನೆಲ್ಲಿ ತನಕ ಅನುಭವ್ಸಿಬೇಕು' ಎಂದಳು. ಆಕೆಯ ಮಾತಿಗೆ ಆತನ ಮುಖದಲ್ಲಿ ನಗುವಿತ್ತು. 'ನಾಳೆನೇ ಕಳಿತದ ಬುಡು.. ನಾಳೆನೆಯ ಇದಕ್ಕೊಂದು ವ್ಯವಸ್ಥೆ ಮಾಡ್ತಿನಿ' ಅಂದ. ಈ ಮಾತು ಪುಟ್ಟಕ್ಕನ ಕಿವಿಗಳನ್ನೂ ನೆರವಾಗಿ ಮುಟ್ಟಿದ್ದವು. ಹಿರಿಮಗ ಆಡಿದ ಮಾತಿನ ಒಳಾರ್ಥವರಿತ ಪುಟ್ಟಕ್ಕ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಮಗಳಿಗೆ ಕರೆ ಹಚ್ಚಿದಳು. ಮಗಳು ಪೋನೆತ್ತಿ ಆಕೆಯ ಮಾತುಗಳ ಆಲಿಸಿದಳು. ಆದರೆ ಆದರಿಂದ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ' ನಿನ್ಗಾ ಆಕ್ಸಿಡೆಂಟ್ ಆಯ್ತಂತಾ, ನಾನಿಗ ಅಲ್ಲಿಗ್ಬರೋಕಾಗ್ತದ..? ಕೆನಡಾ ಅಲ್ಲಯ್ತೈನು..?' ಆಕೆ ಪೋನಲ್ಲೆ ಗದರಿದಳು. ಮಕ್ಕಳ ಮಾತುಗಳು ಪುಟ್ಟಕ್ಕನ ಮನಸ್ಸಿನಾಗ ಬಿರುಗಾಳಿಯೆಬ್ಬಿಸಿದ್ದವು. ಆಕೆಗೆ ಬೇರೆ ದಾರಿಯಿಲ್ಲದೆ ರಾತ್ರೊರಾತ್ರಿ ತಾನು ಕೂಡಿಟ್ಟ ಪುಡಿಗಾಸಿನೊಂದಿಗೆ ತೆವಲುತ್ತಲೇ ಮನೆ ಬಿಟ್ಟಳು. ಮಗ, ಸೊಸೆ ಶನಿ ತೊಲಗಿತು ಅಂತಲೇ ಆಕೆಯನ್ನು ಹುಡುಕುವ ಗೋಜಿಗೆ ಹೋಗಲಿಲ್ಲ. ಇದ್ದ ಪುಡಿಗಾಸಲ್ಲೆ ಪುಟ್ಟಕ್ಕ ಹೊಟ್ಟೆ ಪಾಡಿಗಾಗಿ ಎಣಗಾಡಿದಳು. ಕಡಲೆಕಾಯಿಗೆ ಬಂಡವಾಳ ಹೂಡಿ, ಪ್ಯಾಟೆಯ ಪುಟ್ಬಾತಿನ ಮ್ಯಾಗ ಕೂತು ಅದನ್ನ ಮಾರಿ ಹೊಟ್ಟೆಗೆ ಹಿಟ್ಟನ್ನ ಕಾಣುತ್ತಿದ್ಳು. ಪುಟ್ಟಕ್ಕನೀ ನೋವಿನ ಕಥೆ ಬೂಟಿನ ಆಸಾಮಿಯ ಕಂಗಳನ್ನ ತುಂಬಿಸಿತ್ತು. ಆತ ಏನನ್ನೊ ಮರೆತು ಜ್ಞಾಪಿಸಿಕೊಂಡ ಧಾಟಿಯಲಿ ಅದೇನೋ ಪ್ರಧಾನ ಮಂತ್ರಿ ಯೋಜನೆ ಅಂದೆ ಅವಾಗ್ಲೆ... ಅದೇನೂ...?' ಅಂದ.

ಪುಟ್ಟಕ್ಕ ಯಾರ ಹಂಗಿಲ್ಲದೆ ಮುಂಜಾವಿನಿಂದ ಸಂಜೆ ತನಕ ಕಡಲೆಕಾಯಿ ಮಾರಿ ಪುಡಿಗಾಸು ಗಳಿಸುತ್ತಿದ್ಳು. ತನ್ನ ಅವಶ್ಯಕತೆಗೆ ಬಿಟ್ಟು, ಮಿಕ್ಕಿದ್ದೆಲ್ಲವ ತಿಂಗಳಿಗೊಮ್ಮೆ ಬ್ಯಾಂಕಿಗೆ ತೆವಲಿ ಹಣ ಕಟ್ಟಿ ಬರುತ್ತಿದ್ದಳು. ತನ್ನ ಹೆಸರಿನಲ್ಲಿ ಪ್ರಧಾನಮಂತ್ರಿ ಸುರಕ್ಷಾ ಯೋಜನೆ ಹೆಸರಿನ ವಿಮಾ ಯೋಜನೆಯೊಂದನ್ನು ಕಟ್ಟಿ, ತನ್ನ ಇಬ್ಬರೂ ಮಕ್ಕಳ ಹೆಸರನ್ನ ನ್ಯಾಮಿನಿಯಾಗಿ ನೀಡಿದ್ದಳು. ತಾನು ಸತ್ತಂತ ಕಾಲಕ್ಕೆ, ಆ ಹಣ ತನ್ನ ಮಕ್ಕಳಿಗೆ ಸಿಗ್ಬೇಕು ಅನ್ನೊದು ಆಕೆಯ ಉದ್ದೇಶವಾಗಿತ್ತು. ತಾನು ಪುಟ್ಬಾತಿನ ಮ್ಯಾಲೆ ಮಲಗಿದ್ದರೂ, ತನ್ನ ಮಕ್ಕಳು ಹೂವಿನ ಹಾಸಿಗೆಯ ಮೇಲಿರಲಿ ಎಂಬ ಬಯಕೆ ಅವಳದು. ಇದನ್ನೆಲ್ಲಾ ಆಲಿಸುತ್ತಿದ್ದ ಬೂಟಿನ ಆಸಾಮಿ 'ಅಂಥ ಮಕ್ಕಳ ಮ್ಯಾಲಿನ ವ್ಯಾಮೋಹ ನಿನಗಿನ್ನೂ ಕಮ್ಮಿ ಆಗಿಲ್ವಲ್ಲ ಮುದುಕಿ.' ಎನ್ನುತ್ತಾ ತಡವರಿಸಿ 'ಇದೆಲ್ಲಾ ನಿನಗೇಕೆ ಬೇಕು..? ಬಾ ವೃದ್ಧಾಶ್ರಮವೊಂದಕ್ಕೆ ನಿನ್ನನ್ನ ಸೇರಿಸ್ತೆನೆ' ಅಂದ. ಆದರೆ ಪುಟ್ಟಕ್ಕ ಹಿಂದಿನಿಂದಲೂ ಸ್ವಾವಲಂಬಿ ಬದುಕನ್ನ ನಡೆಸುತ್ತಾ ಬಂದವಳು. ಆದರಿಂದು ಬೇರೆ ಮಂದಿಯನ್ನ ಅವಲಂಬಿಸಿ ಬದುಕು ನಡೆಸೆಂದರೆ, ಆಕೆ ಹೇಗೆ ತಾನೆ ಒಪ್ಪಾಳು..? 'ಹೆತ್ತಮಕ್ಕಳೆ ತನಗಿಲ್ಲದ ಮ್ಯಾಲೆ ಬೇರೆ ಮಂದಿ ಆಗ್ತಾರ ಸ್ವಾಮಿ' ಅಂದಳು. ಬೂಟಿನ ಆಸಾಮಿಗೆ ಉತ್ತರಿಸಲು ಮಾತಿರಲಿಲ್ಲ. 'ಕೊಡಮ್ಮ' ಎನ್ನುತ್ತಾ ಆಕೆಯ ಕೈಲಿದ್ದ ಕಡಲೆಕಾಯಿಯನ್ನ ಕೊಂಡು ಮೇಲೆದ್ದು ನಿಂತ. ಪುಟ್ಟಕ್ಕ 'ಬಾಳ ಉಪ್ಕಾರ ಆಯ್ತು ಸ್ವಾಮಿ' ಅಂದಳು. ಬೂಟಿನ ಆಸಾಮಿ ನಗುವ ಬೀರುತ್ತಾ ಮುನ್ನಡೆದ. ಪುಟ್ಟಕ್ಕ ಕಡಲೆಕಾಯಿ ಪುಟ್ಟಿಯನ್ನ ಪಕ್ಕಕ್ಕೆ ಸರಿಸಿ ಕೂತಳು.

- ಮನು ಗುರುಸ್ವಾಮಿ

 ಮನು ಗುರುಸ್ವಾಮಿ 

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ  ಕೃತಿಗಳು ಪ್ರಕಟಣಾ ಹಂತದಲ್ಲಿವೆ. 

ಕೃತಿಗಳು : ನಿಬ್ಬೆರಗು

 

 

 

More About Author