Poem

ರೆಪ್ಪೆಮುಚ್ಚಿದ ಕಣ್ಣಲ್ಲಿ ತೀರಕಾಣದ ಮಣ್ಣಿನ ನಾವೆ ಕರಗಿ

ಇಲ್ಲದ ದಾರಿಯ ಹುಡುಕುತಿರುವೆ ಏಕೆ
ಕಂಡದ್ದು ಕಾಣದಾಗುವ ಸರದಿ
ಲೋಕದ ಚಲನೆಯಲ್ಲಡಗಿದೆ
ಮಣ್ಣಲ್ಲಿ ಹುದುಗಿದ ಬೀಜ
ಇನ್ನೂ ಜೀವಂತವಾಗಿದೆ

ಎತ್ತ ಹೊರಟಿರುವೆ ಬೆತ್ತ ಹಿಡಿದು
ನಾನೆಂಬ ಅಹಮಿನ ಕುದುರೆ ಮೇಲಿಂದ
ಜಿಗಿ ಮೊದಲು ಹುಂಬ
ಇಳಿಯಲಿ ಇಹದ ಅಮಲಿನ ಜಂಬ
ಮುಗಿಲಿಂದ ಇಳೆಗೆ ಅರವಿಂದ

ಗೆದ್ದೆನೆಂದು ಬೀಗಿದೋಡೆ
ಸೋಲು ಸದ್ದು ಮಾಡುವ ಭಯಕೆ
ಸೋಲಿನ ಸದ್ದ ಅಡಗಿಸಲು ಹೊರಟೆಯೇನು?
ನೆರವೇರದ ಬಯಕೆ
ಸೋಲು ಗೆಲುವೆಲ್ಲ ಜಗದ ಸೊಲ್ಲು ಕಾಣು!

ಕಂಡದ್ದು ಸುಳ್ಳಿಲ್ಲಿ, ಕಾಣದ್ದು ನಿಜವಲ್ಲ!
ಲೋಕವೇ ಮಾಯ ಬಜಾರು
ಬದುಕ ಸಂತೆ ಮುಗಿಸಿ ಬೇಗ ಹೊರಡು,
ಹುಷಾರು..............!
ಅನುಭವದಿ ಮಾಗಿ
ಸಂತನಂತಲ್ಲ ಸಂತನೇ ಆಗು

ದಶಕಗಳು ಕುಳಿತು ತಿನ್ನುವಷ್ಟು
ತಿಂದದ್ದು ಅರಗದಷ್ಟು
ಹೊಂಚಿದ್ದು ಸಾಕು
ಇನ್ನಾದರೂ ಇರುವುದ ಹಂಚುತ
ಹೆಜ್ಜೆ ಹಾಕು
ನೀ ನಡೆದಂತೆ ದಾರಿ
ತಾ ನದಿಯಾಗಿ ಹರಿವುದು
ಕಟ್ಟದಿರು ತಡೆಗೋಡೆ
ಬಯಲೇ ನೀನಾಗಿ ಸಾಗು

ಇರುಳ ಛಾಯೆ ಕಳೆದು
ಬೆಳಕ ಮಾಯೆ ಮೂಡುವ ಹಾಗೆ
ನೋವಿನ ಹಿಂದೆ ನಲಿವು
ಕಾದು ಕುಳಿತಿಹುದು ಹೀಗೆ
ಚುಚ್ಚುವ ಮುಳ್ಳಿನ ನಡುವೆ
ಹೂವರಳಿ ನಗುವ ಬಗೆ
ಕಾಲಚಕ್ರದ ಉರುಳು ಮೇಳದಿ
ಒಂದು ಅಳಿದು ಮತ್ತೊಂದು ಉಳಿದು
ಎಲ್ಲವೂ ಕೊನೆಗೆ ಕೂಡಿ ಕಳೆದು
ಕಳಚುವುದು ಅನುಬಂಧದ ಕೊಂಡಿ
ಇಹದ ನಶ್ವರ ಬದುಕಿನ ಸತ್ಯವ
ಮನುಜ ನೀ ಅರಿತು ಬಾಳು

ಬಯಕೆಗಳ ಜೋಳಿಗೆ
ಹೊರುವೆ ಇನ್ನೆಷ್ಟು?
ಭಾರದಿ ಹರಿದು ಬರಿದಾಗುವ ಮೊದಲು
ಸ್ವತಃ ಸುರಿದು ಖಾಲಿಯಾಗಿಸಿ
ಬರಿಗೈಗಳ ಬೀಸಿ
ನಡೆ ಮತ್ತೆ ಬಯಲಿಗೆ
ಒಲವನ್ನು ಹಾಸಿ

ಪಟ್ಟ ಪಾಡಾಗಿಸು ಹಾಡು
ನಾಕು ತಂತಿಗಳ ನಾದದಿ
ಮೀಟಿ ಅರಸುತ ಸತ್ಯದ ಜಾಡು
ಜೋಗಿಯ ತೆರದಿ

ಬದುಕೆಂದರೆ ಬೇಗುದಿಯಲ್ಲ
ಮುಕ್ತಿಯ ಸನ್ಮಾರ್ಗ
ಮನುಜನ ಮೋಕ್ಷ ಸಿದ್ಧಿಗೆ
ದೈವ ತೆರೆದಿಟ್ಟ ಬಾಗಿಲ ಸ್ವರ್ಗ

ನೀ ಹೆದರುವ ಸಾವು
ನಿನ್ನ ಜನನದೊಂದಿಗೆ ಹುಟ್ಟಿರುವುದು
ಜನಾಜದಲಿ ಮಲಗಿಸುವವರೆಗೂ
ನಿನ್ನ ಬಿಟ್ಟು ಅರೆ ಕ್ಷಣವೂ ಕದಲದು

ಇದೆ ಎಂದರೆ ಇದೆ
ಇಲ್ಲವೆಂದರೂ ಇರುವುದಲ್ಲ
ಬಿಸಿಲಲಿ ನೆರಳಾಗಿ
ಕಡಲಲಿ ಮರಳಾಗಿ
ಊಟಕ್ಕು ಜೊತೆಯಾಗಿ
ಹಾಸಿಗೆಯಲಿ ನಿದಿರೆಯಾಗಿ
ಬಗಲಲಿ ಬಾಯ್ತೆರೆದು ಕಾಲು ಚಾಚಿ
ಅನು ಚಣವು ನಿನ್ನೊಂದಿಗೆ
ಬದುಕುತಿಹುದು ಮರೀಚಿಕೆಯಾಗಿ

ರೆಪ್ಪೆ ಮುಚ್ಚಿದ ಕಣ್ಣಲ್ಲಿ ಮಣ್ಣಿನ ನಾವೆ
ಕಾಣದ ತೀರವ ಅರಸುತಲಿ
ಅಲ್ಲೇ ಕರಗಿ ಇನ್ನಿಲ್ಲವಾಗುವ ಮೌನ
ಹುಡುಕಿಕೋ ನಿನ್ನೊಳಗೆ ಅವನ ಇರುವಿಕೆಯನ್ನ
ಕಂಡುಕೊ ಅವನೊಳಗೆ ನಿನ್ನ
ಪರಮಾತ್ಮನಲ್ಲಿ ಆತ್ಮ ಲೀನವಾಗುವ ಧ್ಯಾನ

- ಜಬೀವುಲ್ಲಾ ಎಂ. ಅಸದ್

ಜಬೀವುಲ್ಲಾ ಎಂ. ಅಸದ್

ಕವಿ ಜಬೀವುಲ್ಲಾ ಎಂ. ಅಸದ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನವರು. ತಂದೆ ಮಹಮ್ಮದ್ ಬಾಷ,ತಾಯಿ ಪ್ಯಾರಿ ಜಾನ್. ಪದವಿಪೂರ್ವವರೆಗಿನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಮುಗಿಸಿ, ನಂತರ ಪದವಿ ಶಿಕ್ಷಣವನ್ನು ಜಿಲ್ಲಾಕೇಂದ್ರವಾದ ಚಿತ್ರದುರ್ಗ ದಲ್ಲಿ ಆಂಗ್ಲ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ಅಧ್ಯಾನಿಸಿ ನಂತರ ಹೊಸ ವೈದ್ಯಕೀಯ ವಿಷಯಗಳೆಡೆಗೆ ಆಸಕ್ತಿ ಹರಿದು, ಬಳ್ಳಾರಿಯಲ್ಲಿ ಡಿಪ್ಲೊಮಾ ಇನ್ ಜನರಲ್ ನರ್ಸಿಂಗ್ ಮಿಡ್ವೈಫ್ರಿ ಮುಗಿಸಿ, ಅಲ್ಲಿಯೇ ಕೆಲವು ವರ್ಷಗಳ ಕಾಲ ಸಹಾಯಕ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಕರುಣಾ ಟ್ರಸ್ಟ್ ಎಂಬ ವೈದ್ಯಕೀಯ NGO ನಲ್ಲಿ ಕಳೆದ ಆರು ವರುಷಗಳಿಂದ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ.

ಚೊಚ್ಚಲ ಕೃತಿ: ‘ಏಕಾಂಗಿಯ ಕನವರಿಕೆಗಳು’- ಕವನ ಸಂಕಲನ. ಈ ಸಂಕಲನಕ್ಕೆ 2020 ರಲ್ಲಿ ಪ್ರಸ್ತುತ ಕೃತಿಗೆ, ಕರುನಾಡ ಕವಿ ಹಣತೆ ಬಳಗ(ರಿ)ದ ವಾರ್ಷಿಕ ಸಮ್ಮೇಳನದಲ್ಲಿ ವಿಮರ್ಶಕರರಿಂದ ಆಯ್ಕೆಯಾಗಿ ಉತ್ತಮ ಕೃತಿಯೆಂದು ಸಾಹಿತ್ಯ ಸಿರಿ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.

ಇತರೆ ಪುರಸ್ಕಾರಗಳು:2020ರಲ್ಲಿ ಡಾ. ಅಶೋಕ್ ಪೈ ಸ್ಮರಣಾರ್ಥ ಆಯೋಜಿಸಲಾಗಿದ್ದ ಮನೋವೈಜ್ಞಾನಿಕ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಗುರುಕುಲ ಕಲಾ ಕುಸುಮ ಪ್ರಶಸ್ತಿ, ಮೈಸೂರಿನ ಫಿನಿಕ್ಸ್ ಬುಕ್ ಹೌಸ್ ನ ವತಿಯಿಂದ ಏರ್ಪಡಿಸಲಾದ, ರಾಜ್ಯಮಟ್ಟದ ನ್ಯಾನೋ ಕಥಾ ಸ್ಪರ್ಧೆಯಲ್ಲಿ, ತಮ್ಮ ಖಾಲಿ ಜೋಳಿಗೆ ಎಂಬ ಕಥೆಗಾಗಿ, ಫಿನಿಕ್ಸ್ ಪುರಸ್ಕಾರ ಕ್ಕೆ ಭಾಜನರಾಗಿದ್ದಾರೆ. ತಮ್ಮ ಚೊಚ್ಚಲ ಕವನ ಸಂಕಲವಾದ ಏಕಾಂಗಿಯ ಕನವರಿಕೆಗಳು ಕೃತಿಗೆ 2021 ರ ಸಾಹಿತ್ಯ ಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗುರುಕುಲ ಕಲಾ ಪ್ರತಿಷ್ಠಾನದವತಿಯಿಂದ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಗುರುಕುಲ ಶಿರೋಮಣಿ ಪ್ರಶಸ್ತಿ ಯನ್ನು ಪಡೆದಿರುತ್ತಾರೆ.2021 ರ ಕನ್ನಡ ಸಾಹಿತ್ಯ ಪರಿಚಾರಿಕೆ ಹಾಗೂ ಸೇವೆಯನ್ನು ಗಮನಿಸಿ, ಕನ್ನಡ ನಗರ ಸಾಹಿತ್ಯ ಪರಿಷತ್, ಬೆಂಗಳೂರು ಇವರು ಕನ್ನಡ ಸೇವಾ ರತ್ನ ಪುರಸ್ಕಾರ ಪಡೆದಿದ್ದಾರೆ. ಈ ತನಕ ತತ್ವಜ್ಞಾನ ಎಂಬ ಅಪ್ರಕಟಿತ ತಾತ್ವಿಕ ಚಿಂತನೆಯ ಕವನ ಸಂಕಲನದ ಹಸ್ತಪ್ರತಿಗೆ 2021 ನೇ ಸಾಲಿನ, ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

More About Author