Poem

ಸಖೀ ಗೀತ

ಕಾತರಿಸಿದೆ ಕನವರಿಸಿದೆ
ಮೋಹದ ಅಮಲೆನ್ನ ಆವರಿಸಿದೆ
ಹಂಬಲಿಸಿದೆ ನಿನಗಾಗಿ ಈ ಹೂಮನ ...
ಪ್ರಿಯ ಸಖನೆ ಆಮೋದದಿ ಸೇರೆನ್ನ

ಕಿರುಗೆಜ್ಜೆಯ ಸದ್ದಲಿ ಅಡಗಿರುವೆ
ಸೀರೆ ನೆರಿಗೆಯು ನಿನ್ನನು ನೆನಪಿಸಿದೆ
ಸುಮ ಕರೆದಿದೆ ನಿನ್ನನು ಓ ನಲ್ಲ...
ಪ್ರಿಯ ಸಖನೆ ಸಮ್ಮೋಹದಿ ಸೇರೆನ್ನ

ಹಸನಾದ ಹೊಂಬಾಳೆ ಮೂಡಿದಂತೆ
ತಂಪಾದ ತಂಗಾಳಿ ತೀಡಿದಂತೆ
ಕಣ್ರೆಪ್ಪೆಗೆ ಕಾವಲುಗಾರ ನೀ ಚಿನ್ನ
ಪ್ರಿಯ ಸಖನೆ ಆಲಂಗಿಸಿ ಸೇರೆನ್ನ

ಲಜ್ಜಿತಗೊಂಡಿತು ಲತೆ ಬಳ್ಳಿ
ಬಿಸಿಯುಸಿರಿನ ಶಾಖಕೆ ಮೈಚೆಲ್ಲಿ
ಮೈದಡವಲು ಮುದನೀಡಲು ಬಾ ರನ್ನ....
ಪ್ರಿಯ ಸಖನೆ ಮೋಹಿಸಿ ಸೇರೆನ್ನ

ಅನುವಾಗಿದೆ ಈ ತನುವು
ರಾಗದೊಲವಲಿ ಮೀಯಲು ಅನುದಿನವು....
ಮೋಹದ ಮಾಯೆಯೋ?ಮನಸಿನ ಛಾಯೆಯೋ?
ಮನ ಬೇಡಿದೆ ನಿನ್ನಯ ಸಾಂಗತ್ಯ
ಮೀರೋಣ ಬಾ ಕೊಂಚ ಪ್ರೇಮದೌಚಿತ್ಯ

- ಬಿ ಎಂ ಪ್ರಮೀಳ

ವಿಡಿಯೋ
ವಿಡಿಯೋ

ಬಿ.ಎಂ. ಪ್ರಮೀಳ

ಬಿ.ಎಂ. ಪ್ರಮೀಳ ಮೂಲತಃ ಚಿಕ್ಕಮಗಳೂರಿನವರು. ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ವಾಸ್ತವ್ಯ. ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕಿಯಾಗಿ ಬಾಗೇಪಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದ ಮೇಲೆ ವಿಶೇಷ ಅಕ್ಕರೆ ಮತ್ತು ಆಸಕ್ತಿಯುಳ್ಳ ಅವರು ಸುಮಾರು 300ಕ್ಕೂ ಹೆಚ್ಚು ಕವನಗಳನ್ನು ಬರೆದಿರುತ್ತಾರೆ. ಶಿಕ್ಷಣ ಮತ್ತು ಸಾಹಿತ್ಯ ಸೇವೆಗಾಗಿ ಸಾಧಕ ನಾರಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.

More About Author