Poem

ಸೃಷ್ಟಿ ಚಲನೆಯ ಚಕ್ರ

ಕನಸುಗಳು
ಕನವರಿಸುವಾಗ
ಆ ಹೆಂಗಸಿನ ಹೆರಿಗೆ ನೋವು
ಬಿಗಿಯಾಗಿತ್ತು.

ಒಳಗೆ ನಿರ್ಭಿಡೆಯಾಗಿ ಆಡುವ ಕೂಸಿಗೆ
ಹೊರಗಿನ ಕೆಂಡದ ಮೇಲಿನ ನಡಿಗೆ
ಭಯಹುಟ್ಟಿಸುತ್ತಿರಬಹುದೆ..?

ಕರೋನದ ವಾಸನೆಯ ಗಾಳಿ ಕುಡಿದ
ಆ ಎಳೆ ಹೃದಯ
ಹೊರಗೆ ಬರಲಾರದ
ಫೆನ್ಸಿಂಗ್ ಸೃಷ್ಠಿಸಿಕೊಂಡಿರಬಹುದೇ..?

ಹರಿದ ಬಟ್ಟೆಗಳ ಬಿಕ್ಕಳಿಕೆ
ಮಗುವಿನ ಕಿವಿ ತುಂಬಿ
ಕಾಲನ ಕೈಯ ಜಗ್ಗುತ್ತಿರಬಹುದೆ..?

ದೇಶವ ಆಳುವ ರಾಜನ
ಧರ್ಮಭೇದವ ಅರಿತ ಕೂಸಿನ ಕಣ್ಣು
ಸಮತೆಯ ಬೆಳಕಿನ ನೂಲನು ಹೆಣೆದು
ತರಲು ತಡವಾಯಿತೆ..?

ನಸುಕರಿದು ಬಂದರೂ
ಆ ಹೆರಿಗೆ ಬೇನೆ
ಕೆಂಡ ಮುಟ್ಟುತ್ತಲೇ ಇರುವಾಗ
ಹೂ ಮನಸಿನ ಕಂದನ ತುಟಿಗಳು
ಕಂಪಿಸದಿರಲು ಹೇಗೆ ಸಾಧ್ಯ ..?

ಭಾರತಾಂಬೆಯ ಮಡಿಲನು
ಶುದ್ಧ ಮಾಡಲು ಹೊರಟು
ಮೈಲಿಗೆಯೆಂಬ ಬಣ್ಣ ಹಚ್ಚುವ
ನಾಜೂಕಿನ ಕೈಗಳೇ
ಹಸಿಕಂದಮ್ಮನ ಬಿಳಿ ಮನಸಿನ ಮೇಲೆ
ಮುಳ್ಳುಗಳ ಸೃಷ್ಟಿಸಬ್ಯಾಡಿ

ಒಳಗೆ ಅಳುವ ಕಂದನ ಪಾದಗಳು
ಜಾತಿ ಮುಕ್ತ ಭಾರತದ ನೆಲ ತುಳಿವ ಆಸೆ
ಒಳಗಿಲ್ಲದ ನಾನೆಂಬ ಗರ್ವದ ಬಟ್ಟೆ
ಹೊರಗೆ ಬಂದರೂ ಕಾಪಿಡುವ ಇಂಗಿತ

ಈ ನೆಲದ ಕಾವಿನ ಮೇಲೆ
ಶುದ್ಧ ಸೃಷ್ಟಿ ಚಲನೆಯ ಚಕ್ರ
ಸರಾಗವಾಗಿ ತಿರುಗಲಿ...
ಒಳಗೇ ಅಳುವ ಕಂದನ ಬೆಳಕು
ಜಗವ ಅಪ್ಪಲಿ.!

ಬಿದಲೋಟಿ ರಂಗನಾಥ್

ಕವಿ ರಂಗನಾಥ ಬಿ.ಎಂ ಅವರು 1980 ಜುಲೈ 15 ರಂದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಿದಲೋಟಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ವಕೀಲರು. ‘ಮಣ್ಣಿಗೆ ಬಿದ್ದ ಹೂಗಳು’ ‘ಬದುಕು ಸೂಜಿ ಮತ್ತು ನೂಲು’, ಉರಿವ ಕರುಳದೀಪ ಹಾಗೂ 'ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ' ಎಂಬ ನಾಲ್ಕು ಕವನ ಸಂಕಲನಗಳು ಪ್ರಕಟವಾಗಿವೆ. ಅವರ ಕಾವ್ಯಕ್ಕೆ ‘ಸಂಕ್ರಮಣ’ ಬಹುಮಾನ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ದೇವರಿಲ್ಲದ ಸಾಕ್ಷಿಗೆ ರುಜು ಹಾಕಿ ಹಸ್ತಪ್ರತಿಗೆ 2020ನೇ ಸಾಲಿನ ರಾಜ್ಯ ಮಟ್ಟದ 'ಗವಿಸಿದ್ಧ ಎನ್ ಬಳ್ಳಾರಿ ಕಾವ್ಯ ಪ್ರಶಸ್ತಿ' ಹಾಗೂ 'ಶಾಲೀನಿ ಪುರಸ್ಕಾರ' ಲಭಿಸಿವೆ.

 

More About Author