Story

ಸುಬ್ಬು ಮತ್ತು ಅಮೇರಿಕ

ಅನಂತ ಹರಿತ್ಸ ಅವರು ಮೂಲತಃ ತೀರ್ಥಹಳ್ಳಿಯವರು. ರೇಖಾ ಚಿತ್ರ ಪೇಯಿಂಟಿಂಗ್, ಕತೆ, ಕವನ, ಲೇಖನ, ಗಿಟಾರ್, ಫೋಟೊಗ್ರಫಿ ,ಸಂಗೀತ ಅವರ ಹವ್ಯಾಸವಾಗಿದ್ದು, ಅವರ ಸುಬ್ಬು ಮತ್ತು ಅಮೇರಿಕ ಕತೆ ನಿಮ್ಮ ಓದಿಗಾಗಿ...

ಹೈಸ್ಕೂಲಿನಲಿ ಓದುತ್ತಿದ್ದ ಸುಬ್ಬುವಿನ ಮನದಲ್ಲಿ ಏನೋ ತಳಮಳ, ಅವ್ಯಕ್ತ ಭಯ. ಅವತ್ತು ಹಳ್ಳಿಯ ಅವನ ಮನೆಗೆ ದೊಡ್ಡಪ್ಪನ ಮಗ ಬರುವವನಿದ್ದ. ಅವನು ಹಾಗೆ ಬರುವುದರಲ್ಲೂ ವಿಶೇಷವಿತ್ತು. ವಿಜ್ಞಾನದಲ್ಲಿ ಡಬಲ್ ಡಿಗ್ರಿ ಮಾಡಿದ್ದ ಅವನು ಪಿ.ಹೆಚ್.ಡಿ ಮಾಡಿ ಕೆಲಸಕ್ಕೆ ಅಮೇರಿಕ ಹಾರಿದ್ದನು.

ಎರೆಡು ವರ್ಷಗಳ ನಂತರ ಭಾರತಕ್ಕೆ ಬಂದವನಿಗೆ ಎಲ್ಲಾ ನೆಂಟರ ಮನೆಗೆ ಭೇಟಿಕೊಡುವ ಉದ್ದೇಶವಿತ್ತು. ಆತ ಓದಿದ್ದೆಲ್ಲಾ ನಗರದ ಇಂಗ್ಲೀಷ್ ಮಾಧ್ಯಮದ ಒಳ್ಳೆಯ ಶಾಲೆಗಳಲ್ಲೆ. ಆದರೂ ದೊಡ್ಡಪ್ಪ ಅವನಿಗೆ ಸಂಪ್ರದಾಯವನ್ನು ಮೀರದಂತೆ ಬೆಳೆಸಿದ್ದರು. ಪಿ.ಹೆಚ್.ಡಿ ಮಾಡುವಾಗಲೂ ಹಾಸ್ಟೆಲಿನಲ್ಲಿ ಪ್ರತಿನಿತ್ಯ ಸಂಧ್ಯಾವಂದನೆಯನ್ನು ಮಾಡದೆ ಇರುತ್ತಿರಲಿಲ್ಲ. ಒಟ್ಟಿನಲ್ಲಿ ಅವನು ಬಹಳ ಸುಸಂಸೃತ ಎನ್ನುವ ಅಪ್ಪನ ಮೊನಚು ಮಾತು ಸುಬ್ಬುವಿಗೆ ತಿವಿಯುತ್ತಿತ್ತು.

ಸುಬ್ಬು ಓದಿನಲ್ಲಿ ಅಂತಹ ಜಾಣನೇನೂ ಆಗಿರದೆ ಸಾಮಾನ್ಯ ವಿದ್ಯಾರ್ಥಿಯಾಗಿದ್ದ. ಅಲ್ಲದೆ ಕನ್ನಡ ಮಾಧ್ಯಮ. ಅಪ್ಪನಿಗೆ ಸರಕಾರಿ ನೌಕರಿ, ವರ್ಗಾವಣೆ. ಇವನಿಗೆ ವರ್ಷಕ್ಕೊಂದು ಊರಿನ ಶಾಲೆ. ಅದೂ ಕೂಡ ಅವನನ್ನು ತಿಮಿರನನ್ನಾಗಿ ಮಾಡಿತ್ತು.

ಯಾರಾದರೂ ನಗರದಿಂದ ವಾರಿಗೆಯ ಮಕ್ಕಳು ಮನೆಗೆ ಬಂದರೆ ಕೀಳರಿಮೆಯಿಂದ ಕುಗ್ಗಿ ಹೋಗುತ್ತಿದ್ದ. ಅಲ್ಲದೆ ದೊಡ್ಡಮ್ಮ ಸಿಕ್ಕಾಗಲೆಲ್ಲ ತಮ್ಮ ಮಗನನ್ನು ಹೊಗಳುತ್ತ ಸುಬ್ಬುವನ್ನು ಮಾತಿನಿಂದಲೇ ಹಂಗಿಸುತ್ತಿದ್ದದ್ದು ಸುಬ್ಬುವಿಗೆ ಬೇಸರ ತರಿಸುತ್ತಿತ್ತು. ಅಣ್ಣ ಕಾರಿನಿಂದ ಗತ್ತಿನಿಂದಲೇ ಇಳಿದನು. ಆಗೆಲ್ಲ ಅಮೇರಿಕದಿಂದ ಬಂದವನು ಎಂದರೆ ಅದರ ಜಂಬವೇ ಬೇರೆ ತರಹದ್ದಾಗಿತ್ತು. ದೊಡ್ಡಪ್ಪ, ದೊಡ್ಡಮ್ಮ ಕೂಡಾ ಬಂದಿದ್ದರು.

" ಏನೋ, ಮೀಸೇ ಜೋರಾಗಿ ಬಂದಿದೆ " ಎಂದು ಸುಬ್ಬುವಿನ ಮೈ ತಡವಿದನು ಅಣ್ಣ.
ಸುಬ್ಬುವಿನದು ನಗುವಷ್ಟೆ ಉತ್ತರ.
ಅದೂ ಇದು ಮಾತಾಡುತ್ತ, ಅಣ್ಣ ಶೇವಿಂಗ್ ಕ್ರೀಮ್ ಡಬ್ಬವೊಂದನ್ನು, ಸೆಂಟಿನ ಬಾಟಲನ್ನು ಸುಬ್ಬುವಿನ ಕೈಗಿತ್ತನು. ಹಾಗೇ ಒಂದಷ್ಟು ಚಾಕೊಲೇಟ್ಗಳನ್ನು.

ಸುಬ್ಬುವಿಗೆ ಬಹಳ ಗರ್ವದ ಫೀಲ್ ಆಯಿತು. ನಾಳೆ ಈ ಸೆಂಟನ್ನು ಪೂಸಿಕೊಂಡು ಗೆಳೆಯರ ಬಳಿ ಜಂಬ ಕೊಚ್ಚಿಕೊಳ್ಳಬೇಕೆಂದು ಯೋಜನೆ ಹಾಕುತ್ತ ಸಂಭ್ರಮಿಸಿದ.

" ನೀನೂ ಕೂಡಾ ಅಣ್ಣನ ಹಾಗೆ ಆಗಬೇಕು " ಅದೂ ಇದು ಎಂದು ಸರ್ವರಿಂದಲೂ ಉಪದೇಶವಾಯ್ತು.

" ಸುಬ್ಬುವಿಗೆ ಇಂಗ್ಲೀಷ್ ಬರಲ್ಲ, ಅವನು ಅಲ್ಲಿ ಹೇಗೆ ಹೋಗ್ತಾನೆ ? " ಅಮ್ಮನಿಂದಲೂ ಅಸೂಯೆಯ ಮಾತು ತೂರಿತು.

" ಅದರಲ್ಲೇನು ಬಿಡು ಚಿಕ್ಕಿ, ಸುಬ್ಬು ಕಲಿಯುತ್ತಾನೆ " ಎಂದು ಅಣ್ಣ ಸಮಾಧಾನಿಸಿದ.

ಸುಬ್ಬುವಿನ ಅಂತರಾತ್ಮ ಒಳಗೊಳಗೆ ಧಗಧಗಿಸುತ್ತಿತ್ತು. ನಾನೂ ಕೂಡಾ ಏನಾದರೂ ಮಾಡಿ ಅಣ್ಣನಂತೆಯೇ ಆಗಬೇಕೆಂದು ಸಂಕಲ್ಪಿಸಿದನು.

ಎಷ್ಟು ಓದಿದರೂ ತಲೆಗೆ ಹತ್ತುತ್ತಿಲ್ಲ. ಹೇಗೋ ಮಾಡಿ ಹೈಸ್ಕೂಲ್ ಮುಗಿಸಿ ಪಿ.ಯು ನಲ್ಲಿ ಯಾರೋ ಹೇಳಿದರೆಂಬ ಅಪ್ಪನ ಒತ್ತಾಯಕ್ಕೆ ನಗರದ ಕಾಲೇಜಿನಲ್ಲಿ ಸೈನ್ಸ್ ತೆಗೆದುಕೊಳ್ಳುತ್ತಾನೆ. ಇಂಗ್ಲೀಷ್ ಮಾಧ್ಯಮ ಬೇರೆ. ಅಕ್ಕ ಪಕ್ಕದ ಹುಡುಗರು ಉಪನ್ಯಾಸಕರ ಪ್ರಶ್ನೆಗಳಿಗೆ ಸರಾಗವಾಗಿ ಉತ್ತರಿಸುವಾಗ ಸುಬ್ಬು ಅಬ್ಬೇಪಾರಿಯಾಗಿ ನೋಡುತ್ತಾನೆ. ಒಂದಷ್ಟು ಇಂಗ್ಲೀಷ್ ಪೇಪರ್ ಗಳನ್ನು ಓದುತ್ತ ಅರ್ಥವಾಗದ ಪದಗಳನ್ನು ಬರೆದಿಟ್ಟುಕೊಂಡು ಕಲಿಯಲೇ ಬೇಕೆಂದು ಹಠ ಹಿಡಿಯುವನು. ಆದರೆ ವಿಜ್ಞಾನದ ವಿಷಯ ಕಠಿಣವಿದ್ದ ಕಾರಣ ನಪಾಸಾಗುತ್ತಾನೆ.

ನಾಚಿಕೆ ಅವಮಾನಗಳಿಂದ ಕುಗ್ಗಿದರೂ ಸುಬ್ಬು ಛಲ ಬಿಡದೆ ತಾಂತ್ರಿಕ ಶಿಕ್ಷಣವನ್ನು ಆರಿಸಿಕೊಂಡು ಓದುತ್ತಾನೆ. ಮನೆಯಲ್ಲಿ ಅಪ್ಪನ, ಅಮ್ಮನ ಬೆಂಬಲ ಸಿಗುವುದಿಲ್ಲ. ಅವರು ಸುಬ್ಬುವಿನ ವಿಷಯದಲ್ಲಿ ತಲೆಯನ್ನು ಕೆಡಿಸಿಕೊಳ್ಳುವುದಿಲ್ಲ. ಹದಿ ಹರೆಯ ಬರುತ್ತಿದ್ದಂತೆ ಸುಬ್ಬುವಿಗೆ ತಿಳುವಳಿಕೆ ಬರಲಾರಂಭಿಸುತ್ತದೆ. ಇಂಗ್ಲೀಷ್ ನ ಪ್ರೌಢಿಮೆ ಬಾರದಿದ್ದರೂ ಬುದ್ದಿವಂತನಾಗುತ್ತಾನೆ.

ದೊಡ್ಡಮ್ಮ ಸಿಕ್ಕಾಗಲೆಲ್ಲ ಯಾವಾಗ ಅಮೇರಿಕ ಹೋಗುವೆ? ನೀನು ಓದಿರುವುದಕ್ಕೆ ಸಾಬರ ದೇಶದಲ್ಲಿ ಕೆಲಸ ಸಿಗಬಹುದೆಂಬ ಧಾರ್ಷ್ಟ್ಯದ ಮಾತನ್ನು ಆಡಿದರೂ ಸುಬ್ಬು ಪಾಲಿಗೆ ಬಂದದ್ದು ಪಂಚಾಮೃತ ಎಂದು ತನ್ನನ್ನೆ ಹಳಿದುಕೊಳ್ಳುತ್ತಾನೆ.

ಸುಬ್ಬುವಿಗೆ ಬೆಂಗಳೂರಿನಲಿ ಕೆಲಸ ಸಿಗುತ್ತದೆ. ಚಿಕ್ಕ ಸಂಬಳ ಅದರಲ್ಲೇ ಕೆಲಸವನ್ನು ಮಾಡುತ್ತ ಅನುಭವವನ್ನು‌ ಪಡೆಯುತ್ತಾನೆ. ವರ್ಷಗಳು ಕಳೆದಂತೆ, ಈತನ ಬುದ್ದಿವಂತಕೆ, ಪ್ರಾಮಾಣಿಕತೆ ಹಾಗು ಅನುಭವವ ನೋಡಿ ಆಫೀಸಿನಿಂದ ಸಂಬಳ ಜಾಸ್ತಿ ಮಾಡಿದ್ದಲ್ಲದೆ ಕಾರನ್ನು ಕೊಡುತ್ತಾರೆ.

ಇಷ್ಟು ದಿನವೆಲ್ಲ ಜಾಸ್ತಿ ಓದಿಲ್ಲ, ಹಳ್ಳಿಯವನೆಂದು ನೋಡುತ್ತಿದ್ದ ಸಂಬಂಧಿಕರೆಲ್ಲ ಕಣ್ಣು ತೆರೆದು ನೋಡುತ್ತಾರೆ.

ಸಮಯ ಸಿಕ್ಕಾಗಲೆಲ್ಲಾ ಹಳ್ಳಿಗೆ ಹೋಗಿ ಅಪ್ಪ ಅಮ್ಮನ ಸೇವೆ ಮಾಡಿ ಬರುತ್ತಾನೆ.

ಇತ್ತ ದೊಡ್ಡಪ್ಪ ದೊಡ್ಡಮ್ಮ ತಮ್ಮ ಮಗನ ಮನೆಗೆಂದು ಸಡಗರದಿ ಅಮೇರಿಕಾ ಹೋಗುತ್ತಾರೆ. ಸಂಪ್ರದಾಯಸ್ಥರಾಗಿದ್ದ ದೊಡ್ಡಪ್ಪನವರು ಮಗ ಮನೆಯಲ್ಲಿಯೇ ಮಾಂಸ ತಿನ್ನುವುದನ್ನು ಕುಡಿಯುವುದನ್ನು ನೋಡಿ ಶಾಕ್ ಆಗುತ್ತಾರೆ. ಅವರು ತಮ್ಮ ಪೂಜಾ ಸಾಮಾಗ್ರಿಗಳೊಡನೆ ಕಾರ್ ಶೆಡ್ ನಲ್ಲಿಯೇ ಒಂದಷ್ಟು ದಿನ ಕಳೆದು ಭಾರತಕ್ಕೆ ವಾಪಾಸಾಗುತ್ತಾರೆ. ಆಧುನಿಕತೆ, ಹಣ ಹೇಗೆ ಜನರ ಮನಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ಅರಿತ ದೊಡ್ಡಮ್ಮ ಈಗ ವ್ಯಂಗ್ಯದ ಮಾತನಾಡುವುದಿಲ್ಲ.

ಅಪ್ಪ ಅಮ್ಮನ ಆರೋಗ್ಯಕ್ಕಾಗಿ ಕೆಲಸ ಕಾರ್ಯಗಳ ನಡು ನಡುವೆ ಬೆಂಗಳೂರಿನಿಂದ ಸುಬ್ಬು ಬಂದು ಹೋಗುವುದನ್ನೆಲ್ಲ ನೋಡಿದ ದೊಡ್ಡಮ್ಮನಿಗೆ ದುಃಖ, ಸಂಕಟವಾಗುತ್ತದೆ.

ಅಣ್ಣನಿಗೆ ಈಗ ಭಾರತದ ಬಗ್ಗೆ ಜಿಗುಪ್ಸೆ ಬಂದಿದೆ. ಜನಿವಾರವನ್ನು ಕಿತ್ತೆಸೆದು ಆಧುನಿಕನಾಗಿದ್ದಾನೆ. ಆತ ನಾನು ಭಾರತಕ್ಕೆಂದೂ ಬರಲಾರೆ ಎಂದು ಹೇಳಿರುವನಂತೆ.

ದೊಡ್ಡಪ್ಪ ದೊಡ್ಡಮ್ಮನವರಿಗೂ ವಯಸ್ಸು ಜಾಸ್ತಿಯಾಗಿ ನೋಡಿಕೊಳ್ಳುವವರಿಲ್ಲ. ಇಬ್ಬರಲ್ಲೊಬ್ಬರಿಗೆ ಏನಾದರೊಂದು ಆದರೂ ಸುಬ್ಬುವೇ ಹೋಗಿ ನೋಡಿಕೊಳ್ಳುತ್ತಾನೆ.

ಇದನ್ನೆಲ್ಲ ನೋಡುವ ಅಪ್ಪ ಹೇಳುತ್ತಾರೆ,

" ಮಗ ವಿದೇಶಿ, ಅಪ್ಪ ಪರದೇಶಿ...!! "

- ಅನಂತ್ ಹರಿತ್ಸ

ಅನಂತ ಹರಿತ್ಸ

ಅನಂತ ಹರಿತ್ಸ(ಅನಂತ ಮೂರ್ತಿ ಕೆ.ವಿ) ಅವರು ಮೂಲತಃ ತೀರ್ಥಹಳ್ಳಿಯವರು. ಪ್ರಸ್ತುತ ವಿದ್ಯುತ್ ಸಮಾಲೋಚಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರೇಖಾ ಚಿತ್ರ ಪೇಯಿಂಟಿಂಗ್, ಕತೆ, ಕವನ, ಲೇಖನ, ಗಿಟಾರ್, ಫೋಟೊಗ್ರಫಿ ,ಸಂಗೀತ ಅವರ ಹವ್ಯಾಸವಾಗಿದೆ. ಇವರ ಅನೇಕ ಲೇಖನ ಕವನಗಳು ತರಂಗ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.

More About Author