Poem

ಸುರೆಯ ಹೊರೆ 

'ಹೊರೆಯೇನೇ ನಾನು ನಿನಗೆ..'
ಕಾಲದ ಹಾದಿ
ಸ್ಥಬ್ಧವಾದದೊಂದು ಘಳಿಗೆ
ಕೇಳಿದ ಅವನು

 

'ತುಸು ಕಾಲ ನನ್ನೊಳಗ ಬಿಟ್ಟು ಹೊರಡು
ನನಗಾಗೇ ನನಗಿಷ್ಟು ಜಾಗ ಬಿಡು
ನಾ ಮಾತ್ರ ಉಳಿವಂತ ಸಮಯ ಕೊಡು'
ಎಂದಿದ್ದೆ ಮೊನ್ನೆ ಕಣ್ಣು ತುಂಬಿ.

 

ನಿಭಾಯಿಸುವುದು ಲಾಗಾಯ್ತಿನ
ನುಡಿಯಷ್ಟು ಸುಲಭವಲ್ಲ
ಈ ಹಾಳು ಒಲುಮೆ

 

ಮೂರು ನಿಮಿಷದ ಮೌನ.
ಅದಿಯಿಂದದಂತ್ಯದ ತನಕ
ಸಾಗಿತ್ತೋ ಏನೊ ಪಯಣ
ಯಾವುದ್ಯಾವುದೋ ವಿಷಾದ ಗಾನ
ಎನೋ ಬಣಬಣ
ಒಳಗೊಳಗೆ ತಾಂಡವ ನರ್ತನ

 

ನೊಂದನೇನೋ ,ಬಂಧ ಕೊಂದನೇನೋ
ಗಂಧ ಕಳೆವನೇನೊ.?
ಕೇಳಿದ
ತಳ ನಿಲುಕದ ಆಳದಿಂದ ಹೊರಟಂತೆ ಸ್ವರ
'ಹೊರೆಯೇನೇ ‌ನಾ ನಿನಗೆ.?'

 

ಮೀಟಿ ನೋವಿನ ಹುಟ್ಟು
ಪ್ರೇಮ ನೇಯ್ದ ಪುಟ್ಟ
ದೋಣಿಯಲಿ ಕುಳಿತು,
ಉಪ್ಪು ಕಡಲಿನ ಹಾದಿಯಿದು
ತೊಟ್ಟಿಕ್ಕಿದರೂ ಮುತ್ತು
ಗೊತ್ತಾಗದು ಗುಟ್ಟು

 

'ಹು...ಹೊರೆಯೇ...:
ಬೆಚ್ಚಿಬಿದ್ದಿತು ಕಾಲ..
ಯಾವುದಿದು ವಿದಾಯದ ಜಾಲ
ಹೇಗಾಯಿತು ಸ್ವರ
ಈ ತೆರನ ಭಾರ ಭಾರ

 

'ಹೊರಲೇಬೇಕೆನಿಸುವ ಹೊರೆ...
ಇಳುಕಿದರೆ ನಾನಿಲ್ಲವಾಗುವ ಹೊರೆ..
ಹೊತ್ತಷ್ಟೂ ಹೊಸದಾಗಿ ಇನ್ನೂ ಬೇಕೆನಿಸುವ ಹೊರೆ..
ಹಳೆಯ ಸುರೆಯಂತ ಹೊರೆ
ತೊರೆಯಬಯಸಿದರೂ ಮೊರೆದು
ಮರಮರಳಿ ಏರುವ ಹೊರೆ'

 

ಸುಯ್ದಾಡಿ ಗಾಳಿ ಮರತೂಗಿ ಮರ್ಮರೆದು
ಪಟಗುಟ್ಟು ಚಿಟ್ಟೆ ಹಕ್ಕಿ ಮುದ್ದುಕ್ಕಿ ಸೊಕ್ಕಿ
ಒಮ್ಮೆಗೊಮ್ಮೆಗೆ ಮೊಲ್ಲೆ ಘಮ್ಮಘಮ್ಮೆಂದು
ಹೊಸಿಲ ರಂಗೋಲಿ ಹೊಸದಾಗಿ ಕಂಡು
ಸೋಗಿನಲಿ ಕರೆಯಿತು ಸಂಜೆಯ ಭಾನು
ಹಗುರಾದೆವು ಮತ್ತೊಮ್ಮೆ ನಾನೂ ಅವನು

ಚಿತ್ರ : ಎಂ. ಆರ್‌. ಭಗವತಿ

ನಂದಿನಿ ವಿಶ್ವನಾಥ ಹೆದ್ದುರ್ಗ

ಸಕಲೇಶಪುರದ ಹೆದ್ದುರ್ಗದ ಕಾಫೀ ಬೆಳೆಗಾರ್ತಿ ನಂದಿನಿ ಹೆದ್ದುರ್ಗ ಅವರು ಕೃಷಿಕ ಮಹಿಳೆ. ತಮ್ಮ 16 ನೇ ವಯಸ್ಸಿನಲ್ಲಿಯೇ ಮದುವೆಯಾಗಿ ಬದುಕಿನ ಸುಖ ದುಃಖಗಳನ್ನು ಕಂಡುಂಡವರು. ಕಳೆದ ಕೆಲವು ವರ್ಷಗಳಿಂದ ಕಾವ್ಯ ರಚನೆಯ ಮೂಲಕ ಕಾವ್ಯ ಲೋಕ ಪ್ರವೇಶಿಸಿದ್ದಾರೆ. ಅವರ ಎರಡು ಸಂಕಲನಗಳು ಪ್ರಕಟವಾಗಿವೆ.

ಪ್ರೀತಿ ಪ್ರೇಮಗಳೇ ಇವರ ಕಾವ್ಯದ ಪ್ರಮುಖ ವಸ್ತು. ನಿರ್ಭಿಡೆಯಿಂದ ಹೆಣ್ಣಿನ ಅಂತರಂಗದ ಭಾವನೆಗಳನ್ನು ತಮ್ಮ ಕವಿತೆಗಳಲ್ಲಿ ಹೊರ ಹಾಕುವ ನಂದಿನಿ ಅವರು ಯಾವುದೇ ಮುಲಾಜಿಲ್ಲದೇ ಅಭಿವ್ಯಕ್ತಿಸುವುದು ವಿಶೇಷ.

 

More About Author