Poem

ಸುಟ್ಟ ಮಣ್ಣು

ಯುದ್ಧದ ಗುಂಡು
ಬಾನಿನೆದೆಯ ಗೂಡಿಗೆ ತಗುಲಿ
ದ್ವೇಷದ ಸೋಂಕು ಹರಡುತಲಿದೆ

ಮಂಜಿನನಿಯು ಎಲೆಗಳ ಮೇಲೆ
ದುಂಡಾಗಿ ಬೆಂಡಾಗಿ ಮಾಯಾವಾಗಿವೆ
ಹುಲ್ಲಿನೆಸಳು ಗಾಳಿ ಬೀಸಲು ಹೆದರಿ
ಮುದುಡಿ ಮರೆಯಾಗಿವೆ

ಮನದ ಮೇರೆಯೇ ಪಲ್ಲಟ
ಸಾಯುವ ಚಿಟಪಟ
ಸುಟ್ಟ ಮಣ್ಣಿನ ಮೇಲೆ
ಚಿಗುರುವ ಅಕ್ಷರದ ಹಠ

ಅಲ್ಲಲ್ಲಿ ಕಟ್ಟಿದ್ದ ಬೆಸುಗೆ ಸೇತುವೆ ಗಳಿಗೆ
ಬಾಂಬುಗಳಾಕಿ ಕೆಡವಲಾಗುತ್ತಿದೆ
ಅಲ್ಲಲ್ಲಿ ನೆರವಿಗಾಗಿ ನಿಂತ ಜನರಿಗೆ
ಬೆದರಿಕೆ ಹಾಕಿ ನೋಯಿಸಲಾಗುತ್ತಿದೆ

ಬೆಂದ ಮನವ ಹೊಸಕಲು
ತಯಾರಿ ನಡೆಸಿದ್ದಾರೆ!
ತಮ್ಮಾಸೆಗಳನು ದವಡೆಯಲಿ ಬಚ್ಚಿಟ್ಟಿದ್ದಾರೆ
ಅವರು ಮನುಜರೆ ಅಲ್ಲವಾ?!

ಈಗಾಗಲೇ ಮದ್ದು ಗುಂಡುಗಳು
ಎಷ್ಟೊ ಮಂದಿಯ ನೆಲಕ್ಕುರುಳಿಸಿವೆ
ಕನಸುಗಳಂತೆ ಎತ್ತರದಲ್ಲಿದ್ದ ಎಷ್ಟೊ ಕಟ್ಟಡಗಳು
ನೆಲ ಕೆದರಿ ಗುಂಡಿ ಮಾಡಿ ಹೆಣ ಹೂತಿವೆ

ದ್ವೇಷದ ಊಹೆಯ ಭಾವನೆಗಳು
ಎಷ್ಟೊ ಮಂದಿಯ ಹೃದಯದಲಿ
ಪ್ರೇಮದ ವಿದ್ಯುತ್ ಕಾಂತಿಯ
ಹರಿಸುವುದ ನಿಲ್ಲಿಸಿಬಿಟ್ಟಿದೆಯಾ?

ಈಗೆಲ್ಲ ಭೂಮಿಗೆ ವಿಪರೀತ ಜ್ವರ ಬಂದು
ತನ್ನದೇ ಚಿಕಿತ್ಸಾ ವಿಧಾನವನ್ನ ಬದಲಿಸಿದೆ
ನೆಲಕ್ಕಪ್ಪಳಿಸಿ ಬಿದ್ದ ಮಳೆ ಹನಿಯೆಲ್ಲ
ಒಪ್ಪೊತ್ತಿನ ಜೋಳವ ನೆನೆಯಿಸಿವೆ

ಮನದ ಶೋಕ ಮಾತುಗಳೇ
ನಿದ್ದೆಗೆ ಶಕುನವಾಗಿ ಕಾಡುತ್ತಿವೆ

ಆಸೆಗಳಿಗೆ ಸಾಲ ಕೊಟ್ಟವರು
ಬಾಯಿ ಉಣ್ಣು ಮಾಡಿಕೊಂಡಿದ್ದಾರೆ
ಉಸಿರ ನೀಡಬೇಕಾಗಿದ್ದ ದವಾಖಾನೆಗಳು
ಸೊರಗಿ ಕಾಯುತ್ತಿವೆ ಕಣ್ಣೀರ ಹೊಸಕಿ

ಯಾರೂ ಯಾಕಾಗಿ ಚೀರಾಡಿ ಹೋರಾಡಿ
ಮನುಜನ ಪ್ರೇಮವನು ಕೊಲ್ಲಲು ಹವಣಿಸುವುದು?!

~ಶ್ರೀಧರ ಜಿ ಯರವರಹಳ್ಳಿ

ವಿಡಿಯೋ
ವಿಡಿಯೋ

ಶ್ರೀಧರ ಜಿ ಯರವರಹಳ್ಳಿ

ಶ್ರೀಧರ ಜಿ ಯರವರಹಳ್ಳಿ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನವರು. ಬಿ ಎಸ್ ಸಿ ಪದವೀಧರರಾಗಿರುವ ಅವರು ಈಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಒಲವಿರುವ ಅವರಿಗೆ ಬರವಣಿಗೆ, ಓದುವುದು ಹವ್ಯಾಸವಾಗಿದೆ. ಅವರ ಕೆಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತದೆ.

More About Author