Story

ತಿರುವು

ಸಕಲೇಶಪುರದ ಕತೆಗಾರ ಸಂದೀಪ್‌ ಶರ್ಮ . ಬರವಣಿಗೆ ಅವರ ಆಸಕ್ತಿಯ ಕ್ಷೇತ್ರ. ಅವರು ಬರೆದಿರುವ ‘ತಿರುವು ’ ಕತೆ ನಿಮ್ಮ ಓದಿಗಾಗಿ...

“ಇವತ್ತು ಏನೇ ಆಗಲಿ ಒಂದೆರಡು ಒಳ್ಳೆಯ ಕುಳವಿರುವ ಮನೆಯನ್ನು ದೋಚಲೇಬೇಕು” ಎನ್ನುತ್ತಲೇ ಸೂಮೋವನ್ನು ಟಾಪ್ ಗೇರಿಗೆ ಬದಲಾಯಿಸಿದ ರಾಜ, ನೋಡಲು ಥೇಟ್ ನೀಗ್ರೋ ಜಾನಿ, ಒರಟ, ಅಜಾನುಬಾಹು ದೇಹ, ಎಣ್ಣೆ ತಿಕ್ಕಿದ ಮೈ ನೋಡಿದೊಡನೇ ಝುಮ್ ಎನ್ನಬೇಕು ಅಂತಹ ದಢೂತಿಕಾಯ.

‘ಹೌದು, ಎಲ್ಲಿಗೆ ಹೋಗೋಣ ಮೊದಲು ಪಟ್ಟಿಯಲ್ಲಿ ಮೂರು ಬಂಗಲೆಗಳಿವೆ, ಎಲ್ಲವೂ ವಿರುದ್ಧ ದಿಕ್ಕಿನಲ್ಲಿರುವ ಬಂಗಲೆಗಳು ಆ ಬಂಗಲೆಗಳ ವಿಳಾಸಕ್ಕೆ ಕಣ್ಣಾಯಿಸುತ್ತಿದ್ದ ಹನೀಫ, ರಾಜನ ಸಹಾಯಕ, ಸೌಮ್ಯ ಸ್ವಭಾವದ, ಕುಟುಂಬವನ್ನು ಸಲಹಲು ದೂರದ ಅಬು ಧಾಬಿಯಲ್ಲಿ ಕಟ್ಟಡ ನಿರ್ಮಾಣದ ಕೆಲಸವನ್ನು ಬಿಟ್ಟು ವಿಧಿಯಾಟಕ್ಕೆ, ಇಲ್ಲಿನ ಮಧ್ಯವರ್ತಿಗಳ ದುಡ್ಡಿನ ಲಾಲಸೆಗೆ ಬಿದ್ದು, ನೆತ್ತಿ ಒಡೆದು ಬೆವರು ಹರಿಸುವಂತಹ ಸುಡುಬಿಸಿಲು, ಬಾಣಲೆಯಲ್ಲಿಟ್ಟ ಎಣ್ಣೆಯಂತ ಮರಳುಗಾಡಿನಲ್ಲಿ ಚಿನ್ನದ ಬಿಸ್ಕತ್ಗಳನ್ನು ಕಳ್ಳಸಾಗಣೆ ಸಮಯದಲ್ಲಿ ಪೋಲೀಸ್ ಕೈಗೆ ಸಿಕ್ಕಿ ಬಿದ್ದು ರಂಝಾನಿನ ಹೊತ್ತು ವಿಶೇಷ ರಿಯಾಯಿತಿಯಲ್ಲಿ ಜೈಲಿಂದ ಬಿಡುಗಡೆಗೊಂಡು ಆ ದೇಶದಿಂದಾನೇ ಗಡಿಪಾರಾಗುವಾಗ ಎರಡು ವರ್ಷ ಜೈಲಿನಲ್ಲಿ ಕೊಳೆತಿದ್ದ, ತನಗೆ ಮೋಸ ಮಾಡಿದವರ ಮೇಲೆ ಸೇಡು ತೀರಿಸಲೆಂದರೆ ಆರ್ಥಿಕವಾಗಿ ಶೋಚನೀಯ ಸ್ಥಿತಿಯಲ್ಲಿರುವಾಗ ಹಳೇ ಗೆಳೆಯ ರಾಜ, ಹನೀಫನನ್ನು ತನ್ನ ಕೆಲಸಕ್ಕೆ ಸಹಾಯಕನಾಗಲು ಕರೆಸಿಕೊಂಡಿದ್ದ.

ಶ್ರೀಮಂತರು ಸಂಬಳಕ್ಕಿಂತ ಗಿಂಬಳಕ್ಕೆ ಕೈ ಚಾಚಿ ಅಧಿಕ ಹಣವನ್ನು ತಿಂದು ಬಂಗಲೆಗಳನ್ನು ಕಟ್ಟಿಸಿಕೊಂಡು ತೇಗುತ್ತಿದ್ದರು, ಮಧ್ಯಮ ಹಾಗು ಕೆಳ ವರ್ಗದ ಜನರ ಪಾಡು ವಿಭಿನ್ನ ಗುರಿಯಿಲ್ಲದೆ, ಗುರಿಯಿದ್ದರೂ ಮುಟ್ಟಲಾಗದೆ ಯಥಾಸ್ಥಿತಿಯ ರೇಖೆಯಲ್ಲಿ ಜೀವನ ನಡೆಸುತ್ತಿದ್ದರು, ಮಧ್ಯಮ ವರ್ಗದ ಜನರ ಮನೆಗಳನ್ನು ಒಡೆದು ಕದ್ದು ಅದೇ ದಿನಚರಿಯನ್ನು ನೋಡಿ ನೋಡಿ ಹನೀಫನು ರೇಜಿಗೆ ಬಂದದ್ದು ರಾಜನಿಗೆ ಆಶ್ಚರ್ಯವನ್ನೊಡ್ಡಿತ್ತು.

"ಇಂಜಿನೀಯರ್ ಮಾಧವನ್ ನಾಯರ್ ಮನೆಯೆಲ್ಲಿ?" ರಾಜ ಸ್ಟೇರಿಂಗನ್ನು ಬಲಕ್ಕೆ ತಿರುಗಿಸುತ್ತಾ ಕೇಳಿದ, "ಕೋಟೆ ಬೀದಿ”

ಮಳೆಗಾಲ ಇನ್ನೇನೋ ಶುರುವಾಗಿತ್ತು, ಪಯಸ್ವಿನಿ ನದಿ ತುಂಬುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದವು, ಹೊರಗಡೆ ಅಷ್ಟೇನು ಖಾರ ವಾತಾವರಣ ಇಲ್ಲದಿರುವುದರಿಂದ ಹನೀಫ ಸೂಮೋ ಸೀಟಿಗೆ ಹಾಗೆಯೇ ಒರಗಿಕೊಂಡ, ಕಣ್ಣೆದುರಿಗೆ ಗಣೇಶನ ಪುಟ್ಟ ವಿಗ್ರಹ ಪ್ರತಿಷ್ಟಾಪಿಸಿತ್ತು, ಪುಟ್ಟ ಮೂರ್ತಿಯ ಕಾಂತಿ, ಸತ್ಯ, ಧರ್ಮ, ನ್ಯಾಯ ಕಲಿಸಿಕೊಟ್ಟವ, ನಾವೋ ದಿನಂಪ್ರತಿ ದುಡಿದು ತಿನ್ನುವವರ ರಕ್ತದಲ್ಲಿ ಬದುಕುವವರು, ಎಲ್ಲಿಯ ಗಣೇಶ? ಎಲ್ಲಿಯ ನಾವು!? ಹನೀಫನಿಗೆ ನಗು ಬಂತು, ಅಧರ್ಮ, ಅಹಿಂಸೆ, ನಿಷ್ಠೆ ಎಂದರೇನು ಎಂದು ಒಳ ಮನಸ್ಸು ತರ್ಕಕ್ಕೆ ತನ್ನ ತೊಳಲಾಟವನ್ನು ಇಟ್ಟಿದ್ದವು, ಕೊಲೆ, ಕಳ್ಳತನ, ದರೋಡೆ, ಅತ್ಯಾಚಾರವೇ ಹಿಂಸೆಯೇ!? ಎರಡು ರೀತಿಯ ಹಿಂಸೆ - ದೈಹಿಕವಾಗಿ ಹಾಗು ಮಾನಸಿಕವಾಗಿ ನಾವು ಹಿಂಸೆ ನೀಡುತ್ತೇವೆ, ಈ ಕೃತ್ಯರೀತ್ಯ ಹುಣ್ಣಿಗೆ ಮುಲಾಮು ಕೂಡ ಇಲ್ಲ,!

ಆದರೆ ನಮಗೇನು!? ಹನೀಫ ಇನ್ನೂ ತನ್ನ ಮನಃಪಟಲದ ಗೊಂದಲಕ್ಕೆ ಸರಿ ಉತ್ತರ ಸಿಕ್ಕಿರದೆ ಒದ್ದಾಡುತ್ತಿದ್ದ, "ಹೌದು, ನಮಗೇನು, ನಮ್ಮ ಹೊಟ್ಟೆ ಪಾಡು ನಡಿಬೇಕು ಅಷ್ಟೇ ತಾನೇ? ನಮ್ಮ ಕೆಲಸ, ಈ ಅನೀತಿಯ ಕೆಲಸವನ್ನು ಬಿಟ್ಟರೂ ನಮ್ಮನ್ನು ಯಾರು ತಾನೆ ಕೆಲಸಕ್ಕೆ ಕರೆದುಕೊಳ್ಳುತ್ತಾರೆ. ನಮ್ಮದೇ ಆದ ಬಿಸಿನೆಸ್ ಮಾಡಲು ಬಂಡವಾಳವಾದರೂ ಬೇಡವೆ? ಎಂದೆನಿಸಿ ಒಂದು ನಿಕಟವಾದ ನಿರ್ಧಾರಕ್ಕೆ ಬರಲಾಗದೇ ಚಡಪಡಿಸತೊಡಗಿದ ಹನೀಫ.
ಎರಡು ಕೈ ಬಿಟ್ಟು ಚಲಿಸುತ್ತಿರುವ ಗಾಡಿಯಲ್ಲೇ ರಾಜ ಸಿಗರೇಟೊಂದನ್ನು ಹೊತ್ತಿಸಿದ ಹಾಗೆಯೇ ಸೂಮೋ ಬೀರಂತಬೈಲು ಸಾಗಿ ಹೋಗುತ್ತಿತ್ತು,.!

“ಈ ಗಣೇಶನ ವಿಗ್ರಹ ಹೇಗೆ ಇದರಲ್ಲಿ ಬಂತು? ಹನೀಫ ಕುತೂಹಲದಿಂದ ಕೇಳಿದ ಕಾರಣ ರಾಜ ಯಾವ ದೇವಸ್ಥಾನಕ್ಕೂ ದೇವರಿಗೂ ಕೈ ಮುಗಿಯದವ, ಓ ಅದುವ ಈ ಸೂಮೋ ನೆಟ್ಟಣಿಗೆ ಒಬ್ಬರಿಂದ ತೆಗೆದದ್ದು, ನನಗೆ ಆಗ ಹಳೆ ಬೈಕ್ ಇತ್ತು ಅದನ್ನ ಮಾರಿ ಇದನ್ನ ಸ್ವಲ್ಪ ಹೆಚ್ಚು ಹಣ ಕೊಟ್ಟು ತಗೊಂಡೆ, ಅದರಲ್ಲಿ ಫ್ರೀ ಸಿಕ್ಕಿರೋದು, ಇರಲಿ ಬಿಡು ನನಗೇನು ಅಂತ ಇಟ್ಟಿದ್ದೇನೆ, ಅದಿರಲಿ ನೀ ಯಾಕೆ ಕೇಳಿದೆ!? ಅದನ್ನು ತೆಗೆದು ನೀ ಯಾವುದಾದರೂ ದರ್ಗಾ ಫೋಟೋ ಇಡ್ತಿಯೇನು? ಎರಡು ಕೈ ಬಿಟ್ಟು ಶರ್ಟಿನ ಸ್ಲೀವ್ಸ್ ಅನ್ನು ಸರಿಮಾಡಿಕೊಂಡು ಒಮ್ಮೆ ನಕ್ಕು ಪುನಃ ಯಥಾಸ್ಥಿತಿಗೆ ಬಂದ ರಾಜ.
“ಹಾಗಲ್ಲ ರಾಜ, ಗಣೇಶ ಧರ್ಮ, ಸತ್ಯ ಪಾಲನೆ ತೋರಿಸುವವನು, ನಾವು ಹಿಂಸೆ ಮಾಡುವವರು, ಕಳ್ಳತನ ಮಾಡುವವರು, ನಮ್ಮ ವಾಹನದಲ್ಲಿ ಗಣೇಶನ ವಿಗ್ರಹವು ಸಮಂಜಸವೇ ಅನ್ನೋ ಯೋಚನಾಲಹರಿಯಲ್ಲಿದ್ದೇ ..

“ಅಯ್ಯೋ ಹಿಂಸೆ, ಅನ್ಯಾಯನ!?” ರಾಜ ತೊದಲಿದ
“ಅಲ್ವಾ ಮತ್ತೆ,!?” “ಹೇಗೆ?”
“ಆಲೋಚಿಸು, ಮನುಷ್ಯತ್ವವನ್ನು ಯೋಚಿಸದೆ ಕಳ್ಳತನಕ್ಕೆ ಇಳಿತೇವೆ, ಅವರ ಜಂಜಾಟ ಏನಿರುತ್ತದೋ, ಏನೋ!?”ಒಂದು ಪ್ರಶ್ನೆ ರಾಜನಿಗೆ ಎಸೆದೆ..
ಆಗಷ್ಟೆ ಒಂದು ಸಿಗರೇಟ್ ಮುಗಿಸಿದ ಆಸಾಮಿ ಸ್ವಲ್ಪ ವಿಚಲಿತನಾದವನಂತೆ ಇನ್ನೊಂದು ಹೊತ್ತಿಸಿದ!.

“ಅಲ್ಲ ಮಾರಾಯ, ನೀ ಯಾವುದನ್ನು ಹಿಂಸೆ ಅನ್ನುತ್ತಿದ್ದೀಯಾ!? ರಾಜ ಏನೋ ವಿಹ್ವಲತೆಯಿಂದ ಕೇಳಿದ, ಕೈಯಲ್ಲಿ ಇರುವ ಸ್ಟೇರಿಂಗ್ ಎಡ ಬಲಕ್ಕೆ ತಿರುಗಿ ಕೊಂಡಿತ್ತು, ಬಂಗೋಡುವನ್ನು ದಾಟಿ ಹೋದ್ದರಿಂದ ರಸ್ತೆಯೆನೋ ಚೆನ್ನಾಗಿತ್ತು ಯಾವುದೇ ಹೊಂಡ, ಗುಂಡಿ ಇಲ್ಲದ ರಸ್ತೆಯಾದ್ದರಿಂದ ತೊಯ್ದಾಟಕ್ಕೆ ಅಷ್ಟೇನು ಗಂಭೀರತೆ ಇರಲಿಲ್ಲ, ಪ್ರಶ್ನೆ ಕೇಳಿದ ರಾಜನ ಕಣ್ಣು ಈಗ ಪೂರ್ಣ ರಸ್ತೆಯಲ್ಲೇ ನೆಟ್ಟಿತ್ತು, ಇನ್ನೊಮ್ಮೆ ಕಳೆದ ಅನುಭವ ಆಗುವುದು ಬೇಡ ಅನ್ನುವ ತೀರ್ಮಾನಕ್ಕೆ ಬಂದಿದ್ದ ಆತ..

“ಅದೇ ಗಿಂಬಳ ತಿಂದು ಬಡವರಿಗೆ ದಾನ ಮಾಡದ ಜನರಿಗೆ ಮಾಡೋದು ಹಿಂಸೆ ತಾನೆ.”!?

“ಖಂಡಿತಾ ಇಲ್ಲ ಮಾರಾಯ. ಎಲ್ಲರೂ ಗಿಂಬಳ ತಿಂತಾರೆ ಅಂತ ಹೇಗೆ ಹೇಳ್ತಿ? ಅವರಲ್ಲು ಕಷ್ಟಪಟ್ಟಿರುವವರು ಇರುವಾಗ ಅವರ ಹಣವನ್ನು ದೋಚುವುದು ಯಾವ ಧರ್ಮದ ಕೆಲಸ, ಅಷ್ಟರಲ್ಲಿ ರಾಜನು ತಡೆದು ನಮಗೆ ಇದು ಒಂದು ಕೆಲಸವೆ ಆದರೆ ಧರ್ಮ, ಅಧರ್ಮವನ್ನು ನೋಡಿಕೊಂಡು ಕೂತರೆ ನಮ್ಮ ಹಸಿವನ್ನು ನೀಗಿಸೋ ಕೆಲಸ ಯಾವುದಿದೇ? ಇದನ್ನು ನೀ ಹಿಂಸೆ ಅನ್ನೋದು ಸರಿಯಲ್ಲ,” ರಾಜ ಹೇಳುವುದರಲ್ಲಿ ನ್ಯಾಯ ಇದೆ ಆದರೂ ಹನೀಫನಿಗೆ ಸ್ಪಷ್ಟ ಸಮಾಧಾನ ಆಗಲಿಲ್ಲ, ಮುಂದುವರಿಯುತ್ತಾ..

“ಸರಿ, ನೀ ಹೇಳೋದು ಸರಿನೇ ಇದೆ, ಅವರಲ್ಲಿ ಕೆಲವರು ಕಷ್ಟಕ್ಕೆ ಬ್ಯಾಂಕಿನ ಸಾಲ ತೆಗೆದುಕೊಂಡಿರ್ತಾರೆ, ಅಲ್ಲದೇ ಅವರೆಲ್ಲ ತಮ್ಮ ಹೊಟ್ಟೆ ಹೊರೆಯುವ ಕೆಲಸಾನೇ ಮಾಡೋದು ಅಲ್ವಾ, ಅದರಲ್ಲಿ ತಮ್ಮ ಜೀವನದ ಕನಸಕಂಡು, ದಿನಂಪ್ರತಿ ದುಡಿದು, ಎಲ್ಲವೂ ಮನೆಯವರ ಊಟಕ್ಕೆ ಸರಿಯಾಗುವಾಗ ನಾವು ದೋಚಿದರೆ ಸರಿಯೇ?
ಸೂಮೋ ನುಸ್ರತ್ ರೋಡ್ ದಾಟಿರಬಹುದು ಅನಿರೀಕ್ಷಿತ ಬ್ರೇಕ್ಗೆ ಹನೀಫ ಸ್ಥಾನಪಲ್ಲಟವಾದಂತೆ, ಅಲ್ಲದೇ ದಿಗಿಲುಗೊಂಡವನಂತೆ,.

“ಏನಾಯ್ತು!?”

“ಏನಿಲ್ಲ” ಏನೋ ಅಸ್ತವ್ಯಸ್ತವಾದಂತೆ ಭಾಸವಾಯಿತು ರಾಜನಿಗೆ, ರಸ್ತೆಯಿಂದ ಸೂಮೋವನ್ನು ಬದಿಗೆ ತಂದು, ಹೊರಗಿಳಿದು ತನ್ನ ದಪ್ಪ ಬೆರಳುಗಳಿಂದ ಕಾರಿನ ಡೋರ್ ಹಾಕಿದ

“ನೀ ಹೇಳೋದೆಲ್ಲ ಸರಿ ಇದೆ, ಆದರೆ…..!?”

“ಆದರೆ!?”

“ಆದರೆ?” ರಾಜ ಪುನರುಚ್ಚರಿಸಿದ.

“ಏನು ಮತ್ತೆ ಆದರೆ!? ಹನೀಫ ಕೂಡ ಗೊಂದಲದಲ್ಲಿಯೇ ಇದ್ದಾನೆ.

“ನಾವು ಅವರಿಗೆ ಮಾನಸಿಕ ಹಿಂಸೆಯನ್ನು ಕೊಡುವುದೆಂದು ನನಗೆ ಅನಿಸಿಲ್ಲ, ನನ್ನ ಕೆಲಸ ಮಾತ್ರ ಮಾಡ್ತಿದೀನಿ ಅನ್ನೋದು ನನ್ನ ನಿಲುವಾಗಿತ್ತು, ನಿನ್ನ ಮಾತು ಕೇಳುವಾಗ ಹೌದೆನಿಸಿತು, ನಮ್ಮಂತೆಯೇ ಕಷ್ಟ ಜೀವನದ ಬಂಡಿ ದೂಡಬೇಕು, ಬಿರುಗಾಳಿ ಬಂದರೂ ಅದಕ್ಕೆ ಒಡ್ಡಿಕೊಂಡು ಸಂಸಾರ ನೌಕೆಗೆ ನಾವಿಕರಾಗಬೇಕು, ಅವರ ಜೀವನದಲ್ಲಿ ನಾವು ರಾಹು ಕೇತುಗಳಾಗುತ್ತಿದ್ದೆವೋ ಅನ್ನೋ ಕೀಳರಿಮೆ ಕಾಡುತ್ತಿದೆ ಹನೀಫ್..! ಆದರೆ, ನಮ್ಮಿಂದ ಏನು ಸಾಧ್ಯ!? ಹೆಚ್ಚೆಂದರೆ ಮನುಷ್ಯತ್ವ, ಮಾನವೀಯತೆ ದೃಷ್ಟಿಯಿಂದ ನಮ್ಮ ಕೆಲಸ ತ್ಯಜಿಸಿ ದೂರ ಹೋಗ್ಬೇಕೆ ವಿನಃ ಬೇರೆ ಬಿಸಿನೆಸ್ಗಾದರೂ ಬಂಡವಾಳ ಬೇಡವೇ?, ಆದರೆ ನೈತಿಕತೆಯನ್ನು ಕತ್ತಲಲ್ಲಿ ದೂಡಿ, ತಿನ್ನುವ ಅನ್ನ ಅರಗಿಸಿದ್ದೇವೆ ಅನ್ನೋದು ನೆನೆಯುವಾಗ ಈಗ ಪಶ್ಚಾತಾಪ ಟಿಸಿಲೊಡೆಯುತಿದೆ, ಹೇಳು ನಮ್ಮಿಂದ ಏನು ಸಾಧ್ಯ, ಮುಂದೇನು ಮಾಡಬಹುದು..!

ಅವನ ಮಾತುಗಳನ್ನು ತನ್ನ ಕರ್ಣಪಟಲದಲ್ಲಿ ಶ್ರವಿಸುವಾಗ ಹನೀಫ ಅವನ ಕಣ್ಣಿಗೆ ಕಣ್ಣಿಟ್ಟು ನೇರ ನೋಡಿದ್ದ, ಮಾನವೀಯತೆಯು ನಿಜವಾಗಿ ರಾಜನಲ್ಲಿ ಭುಗಿಲೆದ್ದಿತ್ತು, ಗಾಂಜಾ ಹೊಗೆಯನ್ನು ಮೊದಲ ಬಾರಿ ಎಳೆದಾಗ ಮೆದುಳಿನ ಕಾರ್ಯವೈಖರಿ ಒಂದು ಕ್ಷಣಕ್ಕೆ ಸ್ಥಬ್ಧವಾಗಿ ಎಲ್ಲರೂ ವೇದಾಂತಿ ಆಗುತ್ತಾರಂತೆ, ಅದೇ ರೀತಿ ಹನೀಫನ ಮಾತು ನೇರ ಮೆದುಳಿಗೆ ನಾಟಿತ್ತು, ರಾಜ ಈಗ ಅಮಲಿನಲ್ಲಿದ್ದ!

“ನಾನೇನು ಹೇಳಲಾರೆ, ನನ್ನ ಆರ್ಥಿಕ ಸಮಸ್ಯೆ ನಿನಗಿಂತ ಹದಗೆಟ್ಟಿದೆ, ಆದರೆ ನೈತಿಕತೆ!? ಮಾನಸಿಕ ನೆಮ್ಮದಿ!? ಬರೀ ಹಣದಿಂದ ಇವೆಲ್ಲ ಸಿಗಲಾರದು, ಹಣದ ವ್ಯಾಮೋಹಕ್ಕೆ ಈ ಕೆಲಸ ನನ್ನಿಂದ ಮಾಡಲಾಗದು, ಅದೂ ಗಣೇಶನಿರುವ ಈ ಗಾಡಿಯಲ್ಲಿ ಕೂತು..! ರಾಜನಿಗೆ ಇವನಿಗೆಲ್ಲೋ ಜ್ಞಾನೋದಯವಾಯಿತೇ, ಅನ್ನೋ ಸಂಶಯ, ತನಗೂ ಇರುವ ಗೊಂದಲ ಯಾರಲ್ಲಿ ಪರಿಹಾರ ಕೇಳೋದು!? ನಿಜವಾಗಿ ನಾವು ಮಾಡೋ ಕೆಲಸ ವೃತ್ತಿಯೆಂದು ಬಂದರೆ ಸರಿಯಾದರೂ ಮಧ್ಯಮ ವರ್ಗದ ಬಡವರಿಗೆ ಇದು ಖಂಡಿತಾ ಮಾನಸಿಕ ಹಿಂಸೆ, ಎಲ್ಲವೂ ಸ್ಮೃತಿಪಟಲದಲ್ಲಿ ಒಮ್ಮೆಗೆ ವಿಸ್ಫೋಟಿಸಿತು, ಏನೋ ಗಟ್ಟಿ ನಿರ್ಧಾರ ಮಾಡಿದವನಂತೆ, “ಹತ್ತು ಗಾಡಿ, ಇನ್ಯಾವತ್ತೂ ಈ ಕೆಲಸ ಮಾಡಲಾರೆ, ಇಲ್ಲಿಗೆ ಮುಗಿಸಿ, ಎಲ್ಲಾದರೂ ಇಬ್ಬರಿಗೆ ಬೇರೆ ಕೆಲಸ ವ್ಯವಸ್ಥೆ ಮಾಡುವೆ” ಎನ್ನುತ ಕಾರಿನ ಡೋರ್ ಓಪನ್ ಮಾಡಿ ಹೋಗಲು ಅನುವಾದ,

ಮುಂದೆಲ್ಲ ಬರೀ ಮೌನ, ಇಬ್ಬರಲ್ಲೂ ಮಾತಿಲ್ಲ, ತರಹೇವಾರಿ ಆಲೋಚನೆಗಳು ಮನುಷ್ಯನಲ್ಲಿ ಅಸಹಜತೆಯ ಗೊಂದಲ ಹುಟ್ಟಿದ ಕೂಡಲೇ ತೆಗೆದುಕೊಳ್ಳುವ ತೀರ್ಮಾನಗಳು ಸರಿಯೋ, ತಪ್ಪೋ, ರಾಜನಂತೂ ಒಂದು ನಿರ್ಧಾರಕ್ಕೆ ಬಂದಿದ್ದ, ಹನೀಫ್ ಕೂಡ ಅದನ್ನು ಅನುಮೋದಿಸಿದ್ದ, ಆದರೂ..

ಸೂಮೋ ಇನ್ನೇನು ಸ್ಟೇಷನ್ ರೋಡಿನ ಬಲಕ್ಕೆ ಹೊರಳಿ ಸಿರಾಜ್ ನಗರದ ರಸ್ತೆ ಹಿಡಿಯಬೇಕಿತ್ತು, ಬೀರಂತಬೈಲು ಕಡೆಯಿಂದ ಬಂದ ವೇಗದೂತ ಲಾರಿಯೊಂದು ಹನೀಫನ ಸೈಡಿನ ಹಿಂದಿನ ಡೋರಿಗೆ ಡಿಕ್ಕಿಯಾದದ್ದು ಒಂದು ಗೊತ್ತು. ಹೊಡೆತದ ರಭಸಕ್ಕೆ ಸೂಮೋ ಎರಡು ಪಲ್ಟಿಯಾಗಿತ್ತು, ಹನೀಫನಿಗೆ ಪ್ರಜ್ಞೆ ಬಂದಂತಾಗಿ ತನ್ನ ಮಂಜುಗಟ್ಟಿದ್ದ ಕಣ್ಣುಗಳಿಂದ ಮಂದಸ್ಮಿತದಲ್ಲಿ ಗಣೇಶನನ್ನೇ ದೃಷ್ಟಿಸಿ ಕಣ್ಣುಮುಚ್ಚಿಕೊಂಡನು. ರಾಜನು ಬಿಟ್ಟ ಕಣ್ಣುಗಳಿಂದ ಹನೀಫನನ್ನೇ ನೋಡುತ್ತಿದ್ದನು.

- ಸಂದೀಪ್ ಶರ್ಮಾ

ಸಂದೀಪ್ ಶರ್ಮಾ

ಮೂಟೇರಿ ಸಂದೀಪ್ ಶರ್ಮಾ, ಮೂಲತ: ಹಾಸನ ಜಿಲ್ಲೆಯ ಸಕಲೇಶಪುರದ ಮಠಸಾಗರ ಗ್ರಾಮದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬಿ.ಎಂ.ಎಸ್ ಎಂಜಿನೀಯರಿಂಗ್ ಕಾಲೇಜಿನಲ್ಲಿ ಪದವೀಧರನಾಗಿದ್ದು ಪ್ರೈವೇಟ್ ಸೆಕ್ಟರ್ ಕಂಪೆನಿಯೊಂದರಲ್ಲಿ ಸಿವಿಲ್ ಎಂಜಿನೀಯರ್ ಮತ್ತು ಕಾಂಟ್ರ್ಯಾಕ್ಟ್ಸ್ ಜೆನೆರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತಿದ್ದಾರೆ. ಕನ್ನಡ ಸಾಹಿತ್ಯ ಮತ್ತು ತತ್ತ್ವಶಾಸ್ತ್ರದಲ್ಲಿ ಅತೀವ ಒಲವು ಹೊಂದಿರುವ ಅವರು ಹವ್ಯಾಸಿ ಅಂಕಣಕಾರನಾಗಿ ಮತ್ತು ಕಥೆಗಾರನಾಗಿ ವಿಶ್ವವಾಣಿ, ವಿಜಯವಾಣಿ, ಮುಂತಾದ ಕನ್ನಡ ನಿಯತಕಾಲಿಕೆಗಳಿಗೆ ಬರೆಯುತ್ತಿದ್ದಾರೆ.

More About Author