Poem

ತಿರುವುಗಳು 

ಪುಟ್ಟ ಪಾದಗಳ
ಅಡ್ಡದಿಡ್ಡಿ ಹೆಜ್ಜೆಗಳು ನನ್ನವು
ಗೋಡೆ ಹಿಡಿದು
ಅಪ್ಪನ ಹಿಂದೆ ಹೆಜ್ಜೆ ಸವೆಸುತ್ತಾ
ಆಗಷ್ಟೇ ತೊದಲುವುದ ಕಲಿಯುತ್ತಿದ್ದೆ
ಅಪ್ಪನ ಹೆಗಲು ಪಲ್ಲಕ್ಕಿಯಾಗಿತ್ತು
ತನಗೆ ಕಾಣದ್ದನ್ನೆಲ್ಲ ನನಗೆ ತೋರಿಸುತ್ತಿದ್ದ ಅಪ್ಪಾ..
ನನ್ನ ಬದುಕಿನ ಮೊದಲ ತಿರುವು

ರೊಟ್ಟಿ ಸುಡುವ ವಾಸನೆ ಬರುವಾಗರೆಲ್ಲ
ಅವ್ವನ ಕಣ್ಣಲ್ಲಿ ನೀರು ತುಂಬುತ್ತಿದ್ದವು
ಹೊರಗೆ ಗುಡುಗು ಸಿಡಿಲುಗಳಿದ್ದರೂ
ಅವ್ವನ ಮಡಿಲು ಮಾತ್ರ ಪ್ರಶಾಂತ ಸ್ವರ್ಗವಾಗಿತ್ತು
ಮನೆಯ ದೀಪ ಆರಿದಾಗ
ಅದೇ ಕಣ್ಣುಗಳು ಹೊಳೆಯುತ್ತಿದ್ದವು
ಭಯ ಆವರಿಸುವ ಮುಂಜೆಯೇ
ನಾವುಗಳು ಎಚ್ಚರವಾಗುತ್ತಿದ್ದೆವು
ಹಾಗೆ ಪ್ರತೀ ಬಾರಿ ಭಯ ಹೋಗಲಾಡಿಸುತ್ತಿದ್ದ ಅವ್ವಾ..
ನನ್ನ ಬದುಕಿನ ಎರಡನೇ ತಿರುವು

ತಿನ್ನುವ ಆಸೆಯಿದ್ದರೂ
ಪಾಲಿನ ಆಸೆ ಬಿಟ್ಟು
ತನ್ನ ಬಯಕೆಗಳನ್ನೆಲ್ಲಾ ಹಿಂಗಿಸಿಕೊಳ್ಳುತ್ತಾ..
ಕೋಪದಲ್ಲಿ ಕಿವಿ ಹಿಂಡಿ ಅಧಿಕಾರ ತೋರದೆ
ಹೋಂ ವರ್ಕ್ ಮಾಡಿಕೊಟ್ಟು ಹೊರೆ ಇಳಿಸುತ್ತಿದ್ದ ಅಣ್ಣಾ..
ನನ್ನ ಬದುಕಿನ ಮೂರನೆ ತಿರುವು

ಬುದ್ಧಿ ಬೆಳೆದಂತೆ ಸಿಕ್ಕಿ
ಚಡ್ಡಿ ಎಳೆದು
ತೊಡೆ ಗಿಂಟಿ
ತೂರಿಕೆ ಸೊಪ್ಪು ಸೋಕಿಸಿ
ಬೇಲದ ಮರ ಹತ್ತಿಸಿ
ರೋಜಾ ಪೊದೆಯ ಹಣ್ಣು ತಿನ್ನಿಸಿ
ಕೆರೆಯಲ್ಲಿ ಈಜು ಕಲಿಸಿದ
ಗೆಳೆಯರ ಕುಟುಂಬ
ನನ್ನ ಬದುಕಿನ ನಾಲ್ಕನೇ ತಿರುವು

ಬೆಂಚಿನ ಮೇಲೆ ನಿಲ್ಲಿಸಿ
ಬಸ್ಕಿ ಹೊಡೆಸಿ
ಜೀವನದ ಹುರುಪು ತುಂಬುತ್ತಾ..
ಕೀಟಲೆ ಮಾಡಿದಾಗ
ಒಂಟಿ ಕಾಲಿನಲ್ಲಿ ಮನೆಯವರೆಗೂ ನಡೆಸುತ್ತಿದ್ದ
ಗುರುವೃಂದದವೇ..
ನನ್ನ ಬದುಕಿನ ಐದನೇ ತಿರುವು

ಅಳು ನಗುವಿನ ಮಹತ್ವ ತಿಳಿಸಿ
ನೋವು ನಲಿವಿನ ಅಂತರ ಕಲಿಸಿ
ಜೀವನದ ಏರಿಳಿತಗಳ ದರ್ಶನ ಮಾಡಿಸಿ
ನೂರು ಪಾಠ ಕಲಿಸಿದ
ಖಾಲಿ ಜೇಬು, ಖಾಲಿ ಹೊಟ್ಟೆ
ಖಾಲಿ ಕೈ-ಕಾಲುಗಳು, ಹರಿದ ಬಟ್ಟೆಗಳು
ಚಾವಣಿ ಇಲ್ಲದ ಮನೆ, ಬಿಸಿ ಬೆವರು
ನನ್ನ ಬದುಕಿನ ಆರನೇ ತಿರುವುಗಳು

ಮುಂದೊಂದು ದಿನ ಬರುವ
ಒಲವಿನ ಗೆಳತಿ
ಅವಳಿಂದ ಬರುವ
ಮುದ್ದು ಮಕ್ಕಳು
ನಮ್ಮ ಸುತ್ತ ಮುತ್ತ ಇರುವ
ಕೋಟಿ ಕೋಟಿ ಜೀವ ಜಂತುಗಳು
ವಿಸ್ಮಯಗಳು, ಅಭೂತಪೂರ್ವ ಶಕ್ತಿಗಳು
ಗಿಡಮರಗಳು, ಪ್ರಾಣಿ ಪಕ್ಷಿಗಳು, ಪಂಚಭೂತಗಳು
ನನ್ನ ಗೋರಿ, ಅದರ ಮೇಲಿನ ದೀಪ ಹಾಗೂ
ನೆಚ್ಚಿನ ಪುಸ್ತಕಗಳು
ನನ್ನ ಬದುಕಿನ ಕೊನೆ ತಿರುವುಗಳು

-ಅನಂತ ಕುಣಿಗಲ್

ಅನಂತ ಕುಣಿಗಲ್

ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರರ ಚೊಚ್ಚಲ ಕೃತಿ ಬಹುಮಾನ, ಶ್ರೀ ಹೆಬ್ಬಗೋಡಿ ಗೋಪಾಲ್ ದತ್ತಿ ಪುರಸ್ಕಾರ, ಗುರುಕುಲ ಸಾಹಿತ್ಯ ಸೌರಭ ಪ್ರಶಸ್ತಿ, ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುವ ರಾಜ್ಯ ಯುವ ರತ್ನ ಪ್ರಶಸ್ತಿ ಸೇರಿದಂತೆ ಬುಕ್ ಬ್ರಹ್ಮ ಕಥಾ ಹಾಗೂ ಕವನ ಬಹುಮಾನಗಳೂ ಸಂದಿವೆ. 

ಪ್ರಕಟಿತ ಕೃತಿಗಳು : ಋಣಭಾರ (ಕಥಾಸಂಕಲನ), ಮೂರನೆಯವಳು (ಕವನಸಂಕಲನ), ರೌದ್ರಾವರಣಂ (ಕಾದಂಬರಿ). 
 

More About Author