Poem

ತ್ಯಕ್ತ  

ನವಿಲ ಹಿಂಡೊಂದರ ಕರ್ಕಶ ಕೂಗಿಗೆ ರಾಮಾಂಜಿಗೆ ಎಚ್ಚರವಾದಾಗ ಹೊತ್ತು ನೆತ್ತಿ ಕುಕ್ಕುತ್ತಿತ್ತು. ಟ್ರಂಕಿನ ಮೇಲೆ ಅನಾಮತ್ತಾಗಿ ಕುಸಿದಿದ್ದವನು ಮೆಲ್ಲಗೆ ಮೇಲೇಳಲೆತ್ನಿಸಿದ. ಕೈಕಾಲುಗಳು ಸ್ವಾಧೀನ ಕಳಕೊಂಡಂತೆ ಸುತ್ರಾಂ ಸರುಕಾಡದೆ ಮೈಯ್ಯನ್ನೊಂಚೂರೂ ಅಲುಗಾಡಿಸಲೂ ಆಗದೆ ಹಂಗೇ ಕಣ್ಣಾಡಿಸಿದ. ಕೊಂಚ ದೂರದಲ್ಲಿ ಸಿದ್ದಪ್ಪನ ಗುಡಿ ಅದರ ಎದುರಿನ ಭೂತಪ್ಪನ ಕಲ್ಲು ಅದನ್ನು ಕವುಕಂಡಿದ್ದ ಬಸವನ ಪಾದದ ಮರ ಅದರಿಂದ ಅತತಕ್ಕೆ ಪೌಳಿಯ ವಾರಾಸಿಗೆ ಮುಸುಕುಗಳನ್ನೊತ್ತು ನಿಂತಿದ್ದ ಹಲಸಿನ ಮರ ಅದರ ಎದುರಿಗಿದ್ದ ಕೆರೆ ಅದರೊಳಗಿನ ಆಬಲಿ ಹಾಗೂ ಕೆಂದಾವರೆಯ ಹೂಗಳು ಅದರಾಚೆಯ ಬಿದಿರು ಮೆಳೆ ಎಲ್ಲವೂ ಬಿಸಿಲಿನ ಝಳದಲ್ಲಿ ಮೀಯುತ್ತಿದ್ದವು. ನೀನೇ ಅನ್ನುವವರಿಲ್ಲ. ನಿಲ್ಲದ ನವಿಲುಗಳ ಕೂಗು. ತಮಣೆಗೊಳ್ಳದ ಒಳಗುದಿ. ಸಧ್ಯದ ಪಾಡೆಲ್ಲಾ ಕೆಟ್ಟ ಕನಸಾಗಿ ಒಂದೊಳ್ಳೆಯ ಬೆಳಗಿಗೆ ಮೈಯ್ಯೊಡ್ಡುವಂತಾಗಲಪ್ಪ ಅಂತ ರಾಮಾಂಜಿ ಅಂದುಕೊಂಡರೂ ಅಲ್ಲಿನ ಚಿತ್ರಣ ವಾಸ್ತವವನ್ನು ಸಾರಿ ಸಾರಿ ತೋರಾಕುತ್ತಿತ್ತು. ಅಷ್ಟೂ ದಿನ ತನ್ನನ್ನು ಪೊರೆದಿದ್ದ ಆ ತಾವಿನ ಋಣ ಇದ್ದಕ್ಕಿದ್ದಂತೆ ತೀರಿಹೋಗುತ್ತಿರುವುದಕ್ಕೆ ಹಾಗೂ ಮತ್ತಿನ್ನೆಂದೂ ಸ್ಕೂಲಿಗೆ ಹೋಗಲಾಗವುದೇ ಇಲ್ಲ ಅನಿಸತೊಡಗಿದ್ದಕ್ಕೆ ರಾಮಾಂಜಿಗೆ ಮತ್ತೊಮ್ಮೆ ದುಃಖ ಉಮ್ಮಳಿಸಿತು. ಅದೇ ಹೊತ್ತಿಗೆ ಹೇರುಗತ್ತೆಗಳೆರಡು ರಾಮಾಂಜಿಯ ಮುಂದಾಸಿ ತಟಾಯ್ದು ಮೈ ತುಂಬಾ ಕಾಯೊತ್ತು ನಿಂತಿದ್ದ ಬೇಲದ ಮರದ ನೆರಳಲ್ಲಿ ನಿಂತು ಜೂಗರಿಸತೊಡಗಿದವು. ಚಣ ಹೊತ್ತಿಗೆ ಅವುಗಳ ಮೇಲೆ ಬಂದು ಕೂತ ಕಾಗೆಗಳೆರಡು ದಿವ್ಯ ಅವಲೋಕನದಲ್ಲಿ ಮುಳುಗಿದವು.  

ಹಿಂದಿನ ದಿನ..... 

ಎರೆನೆತ್ತಿಯ ಹಾದಿ ಹಿಡಿದು ಬಂದಿದ್ದ ಕಾರೊಂದರ ಸದ್ದು ಅಂಗಳವನ್ನೆಲ್ಲಾ ಅಡರಿಕೊಂಡಾಗ ಅವಸರದಲ್ಲಿ ಸ್ಕೂಲಿಗೆ ಹೊರಡುತ್ತಿದ್ದ ರಾಮಾಂಜಿ ದಡಬಡಸಿ ಆಚೆ ಬಂದು ಅಂಗಳದಲ್ಲಿ ಕಾರೊಂದು ನಿಂತಿದ್ದ ಕಂಡು ಅಚ್ಚರಿಗೊಂಡಿದ್ದ. ಅದರಲ್ಲಿದ್ದವರು ಯಾರನ್ನೂ ಕ್ಯಾರೆ ಅನ್ನದೆ ತಮ್ಮಷ್ಟಿಗೆ ತಾವು ಗುಡಾರಗಳ ಆಸುಪಾಸಲ್ಲಿ ಅಡ್ಡಾಡಿ ಕಡೆಗೊಂದು ತಿಟ್ಟಿನಲ್ಲಿ ನಿಂತು ಸುತ್ತಲಿನದೆಲ್ಲವನ್ನೂ ನಿಗಾಮಾಡಿಕೊಂಡು ಹಂಗೇ ಹೋಗಿದ್ದರು. ಸ್ಕೂಲಿನಲ್ಲಿ ಆ ಕಾರು ಆ ಚಣ ಅಂಗಳದಲ್ಲಿ ಆಟವಾಡಿಕೊಳ್ಳುತ್ತಿದ್ದ ಮಕ್ಕಳು ಬೆಚ್ಚಿ ನಿಂತಿದ್ದ ಆ ಪರಿ ಮತ್ಮತ್ತೆ ರಾಮಾಂಜಿಯ ಕಣ್ಮುಂದೆ ಬಂದು ನಿಲ್ಲುತ್ತಿತ್ತು. ಅದರಿಂದಾಗಿ ರಾಮಾಂಜಿ ಬಿರೀನ ಗುಡಾರಗಳತ್ತ ಹೋಗುವ ತವಕದಲ್ಲಿದ್ದ.  

ಅದರ ಹಿಂದಿನ ದಿನ.....

`ಜೀನು ಹುಟ್ಟೀನಾ ಬಸ್ಕಣಾಕೆ ಇಟ್ಟಿದೀನಿ ನಾಳೀಕೆ ನೀನು ಸ್ಕೂಲ್ಗೆ ಹೊರಡಾದ್ರೊಳ್ಗೆ ಬಸ್ಕಣುತ್ತೆ ಸೀಸೆಗೆ ಬಗ್ಗುಸ್ಕಂಡು ಹೋಗು. ಸೊಸೈಟೀಲಿ ರೇಷನ್ ತಗ್ದು ಪುನುಗಪ್ಪನ ಅಂಗ್ಡೀಲಿ ಇಟ್ಟು ಜಾವಾ ಕಟ್ಟಾಕೋಗ್ತೀನಿ. ಅದುನ್ನ ತರಾಕೋದಾಗ ಹಂಗೇ ಸೀಸಾನೂ ಅವ್ನಿಗೆ ತಲ್ಪುಸಿಬುಡು’ ಅಂದಿದ್ದ ರಾಮಾಂಜಿಯ ಅಪ್ಪ. ಹಂಗಾಗಿ ಬ್ಯಾಗಿನೊಳಗಿದ್ದ ಜೇನುತುಪ್ಪದ ಸೀಸೆ ಅವನ ತವಕವನ್ನು ತಡಾಕಿತ್ತು. 

ಸ್ಕೂಲು ಮುಗಿಯುವ ಹೊತ್ತಿಗೆ ಮೋಡ ಕವುಕಂಡು ಮಳೆ ಬರುವಂಗಾಗಿತ್ತು. ಬ್ಯಾಗಿನೊಳಗಿನ ಸೀಸೆಯನ್ನು ಅಳ್ಳಾಡದಂತೆ ಒಂದು ಕೈಯ್ಯಲ್ಲಿ ಹಿಡುಕಂಡು ರಾಮಾಂಜಿ ಪುನುಗಪ್ಪನ ಅಂಗಡಿಯತ್ತ ಓಡಿದ್ದ. ಅವತ್ತು ಶುಕ್ರವಾರ. ಸಂತೆಯ ದಿನ. ಜನವೋ ಜನ. ಮಳೆ ಬರಂಗಿದ್ದದ್ದರಿಂದ ಅವರೆಲ್ಲಾ ಅವಸರದಲ್ಲಿದ್ದರು. ಸಂತೆಯಾಡಿದವರು ಊರ ದಾರಿ ಹಿಡಿಯುತ್ತಿದ್ದರು. ಸಂಜೆಗೆ ಮುಂಚೆಯೇ ಕತ್ತಲಾದಂತಾಗಿತ್ತು. ಹಂಗಾಗಿ ಬೀದಿ ದೀಪಗಳನ್ನು ಹತ್ತಿಸಲಾಗಿತ್ತು. ಉರಿಯುತ್ತಿದ್ದ ಅವುಗಳು ಮಣಗುಡುತ್ತಿದ್ದವು. ಜನರ ನಡುವೆ ನುಸುಳಿಕೊಂಡು ಸಂತೆ ಮೈದಾನದಿಂದಾಚೆಗಿದ್ದ ಪುನುಗಪ್ಪನ ಅಂಗಡಿಯನ್ನು ತಲುಪಿ `ಅಪ್ಪ ಕೊಡಾಕೇಳಿದ್ರು’ಅಂತ ಸೀಸೆಯನ್ನು ತಲುಪಿಸಿದವನೇ ಪಡಸಾಲೆಯಲ್ಲಿದ್ದ ರೇಷನ್ನಿನ ಬ್ಯಾಗನ್ನು ತಗಂಡದ್ದನ್ನು ಕಾಣುತ್ತಲೇ ಪುನುಗಪ್ಪ `ಲೇ ಮಗಾ ಆಗ್ಲೋ ಈಗ್ಲೋ ಮಳೆ ಬರಂಗದೆ. ಇದುನ್ನ ನಾಳಿಕೆ ತಗಂಡು ಹೋದ್ರಾತು ಬಿರೀನ ಹೋಗಿ ಮನೆ ಸೇರ್ಕೋ’ಅಂದಿದ್ದರಿಂದ ಅದನ್ನಲ್ಲೇ ಬಿಟ್ಟು ಹೊರಟಿದ್ದ. 

ಸಂತೆ ಮಾಳವನ್ನು ದಾಟೋದರೊಳಗೆ ಸಣ್ಣಗೆ ಜಿಡಿ ಮಳೆ ಹನಿಗಿಟ್ಟುಕೊಂಡಿತ್ತು. ಅಗಾ ಇಗಾ ಅನ್ನೋದರೊಳಗೆ ಅದು ದಡಿಮಳೆಗಿಟ್ಟುಕೊಂಡು ರಪ್ಪಡಿಸತೊಡಗಿತ್ತು. ಅಲ್ಲಿಂದ ರಾಮಾಂಜಿಯ ಗುಡಾರಕ್ಕೆ ಎರಡು ಮೈಲಿಯಾಗುತ್ತಿತ್ತು. ಅಷ್ಟರಲ್ಲಿ ತಮಾಮ್ ಕತ್ತಲಾಗಿಹೋಗಿತ್ತು. ರಾಮಾಂಜಿಗೆ ಕತ್ತಲೆ ಹೊಸದಲ್ಲದಿದ್ದರೂ ಕತ್ತಲೊಂದಿಗೆ ಮಳೆಯಾಟ ದಿಕ್ಕೆಡಿಸಿತ್ತು. ಬ್ಯಾಗೊಳಗಿನ ಪುಸ್ತಕಗಳು ನೆಂದುಬಿಡುತ್ತಾವೆಂಬ ಭಯಕ್ಕೆ ಹಾದಿ ಬದಿಯ ಮರವೊಂದರಡಿ ನಿಂತಿದ್ದ. ಇಂಥ ಹೊತ್ತಲ್ಲಿ ಕರ್ಕಂಡು ಹೋಗಾಕೆ ಅಪ್ಪ ಬಂದೇ ಬರ್ತಾನೆ ಅನ್ನುವ ನಂಬಿಕೆ ಅವನ್ನು ನಿರಾಳದಲ್ಲಿಟ್ಟಿತ್ತು. ಮಳೆಯ ಆಟ ದೀಡಾಗುತ್ತಲೇ ಇತ್ತು. ಸುಮಾರು ಹೊತ್ತು ನಿಂತೇ ನಿಂತ. ಅಪ್ಪನಿರಲಿ ಯಾವೊಂದು ನರಪಿಳ್ಳೆಯೂ ಅತ್ತ ಸುಳಿದಿರಲಿಲ್ಲ.  ಸಂತೆಗೆ ಹೋದವರು ಯಾರಾದರೂ ಬಂದೇ ಬರುತ್ತಾರೆ ಅವರ ಜೊತೆ ಸೇರಿಕೋಬಹುದು ಅನ್ನುವ ಅವನ ಅಂದಾಜೂ ಕೈ ಕೊಟ್ಟಿತ್ತು. ಅವರೆಲ್ಲಾ ಕೆರೆಯೊಳಗಿನ ಕಾಲಾದಿ ಹಿಡಿದಿದ್ದರು. ಮಳೆಯ ಇರುಚಲಿಂದ ತಪ್ಪಿಸಿಕೊಳ್ಳಲು ರಾಮಾಂಜಿ ಸ್ಕೂಲಿನ ಬ್ಯಾಗನ್ನು ಕಾಲುಗಳ ನಡುವೆ ಸಿಕ್ಕಿಸಿಕೊಂಡು ಮಳೆ ದಿಕ್ಕು ಬದಲಿಸಿದಂತೆಲ್ಲಾ ಮರವನ್ನು ಸುತ್ತಾಕಿದ್ದ. ಮಳೆಯ ಜೊತೆಗೂಡಿದ್ದ ಗಾಳಿಯ ಕರಾಮತ್ತಿನಿಂದಾಗಿ ಅವನು ಒದ್ದೆಯಾಗಿದ್ದಲ್ಲದೆ ಅವನ ಬ್ಯಾಗೂ ತೋಯ್ದು ತೊಪ್ಪೆಯಾಗಿ ಪುಸ್ತಕಗಳೂ ನೆಂದೋಗಿ ರಾಮಾಂಜಿಗೆ ಅಳುವೇ ಬಂದು ಕುಸುಗುತ್ತಾ ಒದ್ದೆ ಅಂಗಿಯನ್ನು ಬಿಚ್ಚಿ ಚೆನ್ನಾಗಿ ಹಿಂಡಿ ಅದನ್ನು ಬ್ಯಾಗಿನ ಸುತ್ತ ಸುತ್ತಿಕೊಂಡಿದ್ದ.  

ಕತ್ತಲೆ ಗವ್ಗತ್ತಲೆಗೆ ತಿರುಗಿತ್ತು. ಅದುವರೆವಿಗೂ ರಾಮಾಂಜಿಯೊಳಗಿದ್ದ ರವಷ್ಟು ಧೈರ್ಯವೂ ಕರಗಿತ್ತು. ಭಯಕ್ಕೆ ಮೆಲ್ಲಗೆ ಕುಸುಗತೊಡಗಿದ್ದ. ಕ್ರಮೇಣ ಆ ಕುಸುಗಾಟ ಅಳುವಿಗೆ ತಿರುಗಿ ಕಡೆಗದು ಅಳುವಿನ ರಾಗವಾಗಿತ್ತು. ಆ ರಾಗದಲ್ಲೇ ಹಲವು ಸಲ ಅಪ್ಪನನ್ನು ಕೂಗಿದ್ದ. ಅದು ಒಂದಷ್ಟು ದೂರ ಹೋಗಿ ಅಲ್ಲೇ ಚಂಡ್ಮುರ್ಕಂಡು ಬೀಳುತ್ತಿತ್ತು. ಒದ್ದೆಯ ಮುದ್ದೆಯಾಗಿದ್ದ ಚೀಲವನ್ನು ಎದೆಗವುಚಿ ಕಣ್ಮುಚ್ಚಿಕೊಂಡು ಕುಕ್ಕುರುಗಾಲಲ್ಲಿ ಕೂತು ಮಂಡಿಗಳ ಮೇಲೆ ಗೋಣಿಟ್ಟುಕೊಂಡಿದ್ದ. ಆ ಅವೇಳ್ಯದಾಗೆ ಅದ್ಯಾಕೋ ಇದ್ದಕ್ಕಿದ್ದಂತೆ ಅಲ್ಲೇ ಕೊಂಚ ದೂರದಲ್ಲಿದ್ದ ಹೆಣ ಕುಯ್ಯೋ ಮಾವಿನ ಮರ ನೆನಪಾಗಿ ನಡುಗಿಹೋಗಿದ್ದ. ನೀರಿಗೆ ಬಿದ್ದೋ ನೇಣಾಕ್ಕೊಂಡೋ ಸತ್ತರೆ ಅಂಥ ಹೆಣಗಳನ್ನು ಆ ಮಾವಿನ ಮರದಡಿ ಕುಯ್ಯುತ್ತಿದ್ದರಂತೆ. ಹಂಗೆ ಆಯಸ್ಸು ಮುಗಿಯದೇ ಸತ್ತವರೆಲ್ಲಾ ಪಿಶಾಚಿಗಳಾಗಿ ಆ ಮರದಲ್ಲೇ ಇದ್ದಾರಂತೆ. ಹಾದೀಲಿ ಹೋಗೋರನ್ನ ಬರೋರನ್ನ ಹೆದರಿಸುತ್ತಾರಂತೆ. ಪುಕ್ಕಲರಾದರೇ ಹಿಡುಕಂಡೇ ಬಿಡ್ತಾರಂತೆ. ಹುಣ್ಣಿಮೆ ಅಮವಾಸ್ಯೆಗಳಲ್ಲಿ ಅವು ಗೋಳಾಡೋದನ್ನ ಎಷ್ಟೋ ಜನ ಕೇಳಿದ್ದಾರಂತೆ. ಹಿಂಗಂತ ದೆವ್ವದ ಕಥೆಗಳನ್ನು ಹೇಳೋದರಲ್ಲಿ ನಿಸ್ಸೀಮನಾಗಿದ್ದ ಬುಡುಗೊಚ್ಚನ ಬಾಯಲ್ಲಿ ಕೇಳಿದ್ದ ಮಾತುಗಳು ಆ ಚಣದಲ್ಲಿ ನೆನಪಾಗಿ ತಾನು ಅಳುತ್ತಿರುವುದು ಆ ದೆವ್ವಗಳಿಗೇನಾದರೂ ಕೇಳಿಸಿಬಿಟ್ಟರೆ ಅಂತ ಅನಿಸುತ್ತಲೇ ತೊಡೆಗಳ ಸಂಧಿಯಲ್ಲಿದ್ದ ಬ್ಯಾಗಿನಿಂದ ಗಟ್ಟಿಯಾಗಿ ಬಾಯಿ ಮುಚ್ಚಿಕೊಂಡಿದ್ದ. ಆಗ ಅಬ್ಬರಿಸಿದ್ದ ದಡಿ ಸಿಡಿಲೊಂದು ರಾಮಾಂಜಿಯನ್ನು ಮತ್ತೂ ಹೆದರಿಸಿತ್ತು. ಕ್ರಮೇಣ ಮಳೆಯ ಬಿರುವು ತಗ್ಗಿದ್ದರೂ ಕತ್ತಲೆ ಯಥಾಸ್ಥಿತಿಯಲ್ಲಿತ್ತು. ಚುಕ್ಕಿಗಳೆಲ್ಲಾ ಎತ್ತಲೋ ಪೇರಿ ಕಿತ್ತಿದ್ದವು. ಇದ್ದಕ್ಕಿದ್ದಂತೆ ಫಳಾರಿಸಿದ ಮಿಂಚೊಂದು ಅವನು ಕೂತಿದ್ದ ತಾವನ್ನೆಲ್ಲಾ ಬೆಳಗಿಸಿತ್ತು. ಸುತ್ತಲಿಂದಲೂ ಹರಿಯುತ್ತಿದ್ದ ನೀರಿನ ಸದ್ದಿನೊಂದಿಗೆ ಕಪ್ಪೆಗಳ ಕೂಗಾಟವಿತ್ತು. ಇನ್ನು ರುತಾ ಕಾಯೋದು ವ್ಯರ್ಥ ಅನಿಸುತ್ತಲೇ ಫರ್ಲಾಂಗಿನಷ್ಟು ದೂರದಲ್ಲಿದ್ದ ಹಳ್ಳಿಯತ್ತ ದೌಡಾಕಿಬಿಡುವ ಅಂದುಕೊಂಡು ಎದ್ದಿದ್ದ. ಅತ್ತ ಹೋಗಬೇಕಾದರೆ ಹೆಣ ಕುಯ್ಯುವ ಮಾವಿನ ಮರವನ್ನು ತಟಾಯಲೇ ಬೇಕಾಗಿದ್ದರಿಂದ ಅದು ಅಷ್ಟಕ್ಕೇ ಬರಖಾಸ್ತಾಗಿತ್ತು.  

ಊಟದ ಹೊತ್ತಾಗುತ್ತಿತ್ತು. ಹೆಣ ಕುಯ್ಯೋ ಮಾವಿನ ಮರ ಮತ್ಮತ್ತೆ ಕಾಡತೊಡಗಿ ವಿಧಿಯಿಲ್ಲದೆ ಮತ್ತೆ ಪುನುಗಪ್ಪನ ಅಂಗಡಿಯತ್ತ ಓಟ ಕಿತ್ತಿದ್ದ. ಬ್ಯಾಗು ಭಾರವಾಗಿತ್ತು. ನೀರು ತೊಟ್ಟಿಕ್ಕುತ್ತಲೇ ಇತ್ತು. ಬರಿಗಾಲುಗಳಿಗೆ ಕೆಸರುಗಳು ಬಿಡದೆ ಸಿಡಿಯುತ್ತಿತ್ತು. ದಡಿ ಮಳೆಗೆ ಮಣ್ಣೆಲ್ಲಾ ಕೊಚ್ಚಿ ಹೋಗಿದ್ದರಿಂದ ಎದ್ದಿದ್ದ ಕೂಳೆಗಲ್ಲುಗಳು ಅವನ ಓಟಕ್ಕೆ ಬ್ರೇಕ್ ಹಾಕುತ್ತಿದ್ದವು. ಎಲ್ಲೂ ನಿಲ್ಲದೆ ಓಡಿ ಪುನುಗಪ್ಪನ ಅಂಗಡಿಯನ್ನು ತಲುಪಿ ಅವನು ಕೊಟ್ಟ ವಲ್ಲಿಯಿಂದ ಮೈಯ್ಯನ್ನೆಲ್ಲಾ ತೀಡಿಕೊಂಡಿದ್ದ. ಅಂಗಿ ಚೆಡ್ಡಿಗಳು ಮೈಗಂಟಿಕೊಂಡಿದ್ದವು. ಮೈಯ್ಯಂಥ ಮೈಯ್ಯೆಲ್ಲಾ ಬಿಗಿತುಕೊಂಡಿತ್ತು. ಬ್ಯಾಗಿನೊಳಗಿದ್ದ ಪುಸ್ತಕಗಳನ್ನು ಹಾರಾಕಲೆಂದು ಹೊರತೆಗೆದವನಿಗೆ ಜೀವವೇ ಬಾಯಿಗೆ ಬಂದಂಗಾಗಿತ್ತು. ಅವೆಲ್ಲಾ ಮುದ್ದೆಮುದ್ದೆಯಾಗಿದ್ದವು. ಉಂಡುಗಟ್ಟಿಕೊಂಡಿದ್ದ ಅವುಗಳನ್ನೆಲ್ಲಾ ಹಂಗಂಗೇ ಹಾರಾಕಿದ್ದ. ಮೂಲೆಯೊಂದರಲ್ಲಿ ಅಪ್ಪ ಇಟ್ಟು ಹೋಗಿದ್ದ ರೇಷನ್ನಿನ ಚೀಲ ಕಾಣುತ್ತಿತ್ತು. ರಾಮಾಂಜಿಗೆ ಅಪ್ಪನ ಮೇಲೆ ಇನ್ನಿಲ್ಲದ ಸಿಟ್ಟು ಬಂದಿತ್ತು.  

ಮೈಯ್ಯೆಲ್ಲಾ ಅಂಟಂಟಾಗಿದ್ದರಿಂದ ಬೇಗ ನಿದ್ದೆ ಹತ್ತದೆ ಒದ್ದಾಡುತ್ತಿದ್ದ ರಾಮಾಂಜಿಯನ್ನು ತಿಂಗಳ ಹಿಂದಿನ ಘಟನೆಯೊಂದು ಹಿಡಿದು ನಿಲಾಕಿಕೊಂಡಿತ್ತು. ಅದು ಧೂಳ್ಸಂಜೆ. ಆಗಷ್ಟೇ ಹಳ್ಳಿಗಳನ್ನಾಡಿ ಬಂದಿದ್ದ ಗುಡಾರದವರು ಉಸ್ಸಪ್ಪಾ ಅಂತ ಅಂಗಳದಲ್ಲಿ ಅಂಗಾತಾಗಿದ್ದರು. ಮಕ್ಕಳ ಕೂಗು ಅರಚಾಟಗಳು ಅಲ್ಲಿನ ನೀರವತೆಯಲ್ಲಿ ಮರುದನಿಗೊಳ್ಳುತ್ತಿದ್ದವು. ಗುಡಾರಗಳ ತಡಿಯಲ್ಲಿ ಉರಿಯುತ್ತಿದ್ದ ಒಲೆಗಳು ಕತ್ತಲಿಗಚ್ಚಿದ ಸೂಡುಗಳಾಗಿದ್ದವು. ಆಗ ಅಲ್ಲಿಗೆ ದಾಂಗುಡಿಯಿಟ್ಟ ಹಳ್ಳಿಯ ಗುಂಪೊಂದು`ಹೇ ಬಿಕ್ನಾಸಿ ನನ್ಮಕ್ಳ ನಿಮ್ಗೆ ಇಲ್ಲಿ ಬಿಟ್ರೆ ಇನ್ನೆಲ್ಲೂ ಜಾಗ ಸಿಗ್ಲಿಲ್ವ. ಇದೇ ಬೇಕಾತ ಸಾಯಾಕೆ. ಇದು ಲಿಂಗ ಮುದ್ರೆ ಜಾಗ ಇಲ್ಲಿ ತಿನ್ನುಣ್ಣೋರು ಇರಂಗಿಲ್ಲ ಅಂತ ಗೊತ್ತಿಲ್ವ. ನಿಮ್ಗುಳ್ಗೆ ಮಡಿ ಮೈಲ್ಗೆ ಇಲ್ದುದ್ರೆ ದೇವ್ರಿಗೂ ಇಲ್ವ. ಇಲ್ಲಿಂದ ಖಾಲಿ ಮಾಡ್ಲುಲ್ಲ ಅಂದ್ರೆ ಐತೆ ನಿಮ್ಗೆ’ ಅಂತ ಬೊಬ್ಬೆ ಹಾಕಿತ್ತು. `ಲಿಂಗ ಮುದ್ರೆ ಜಾಗಾಂದ್ರೆ ಏನು ಚಾಮಿ’ಅಂತ ಸಿಳ್ಳೆಕ್ಯಾತರ ಸಿಂಬಪ್ಪ ಕೇಳಿದ್ದೇ ತಡ`ಹಂಗಂದ್ರೇನೂ ಅಂತ ಬ್ಯಾರೆ ಹೇಳ್ಬೇಕೇನೋ ಅಡ್ಡ ಕಸುಬಿ’ ಅಂತ ಅವರೊಳಗೊಬ್ಬ ಸಿಂಬಪ್ಪನ ಕಪಾಳಕ್ಕೆ ಬಾರಿಸಿದ್ದ. ಅವನಿಗಿರಲಿ ಅಲ್ಲಿದ್ದ ಯಾರಿಗೂ ಹಂಗಂದರೇನು ಅಂತ ಗೊತ್ತಿರಲಿಲ್ಲ. ಆದರೂ ಯಾರೊಬ್ಬರೂ ಮತ್ತೆ ಕೇಳಲೋಗದೆ`ಹಂಗೇ ಆಗ್ಲಿ ಚಾಮಿ’ಅಂತ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು. ಅವತ್ತಿಡೀ ಇರುಳು ಆತಂಕದಲ್ಲಿ ಕಳೆದಿದ್ದ ಗುಡಾರದವರು ಮರುದಿನ ಎಲ್ಲ ಮರೆತವರಂತೆ ತಂತಮ್ಮ ಪಾಡುಗಳಿಗೆ ತೆರಳಿದ್ದರು. ರಾಮಾಂಜಿ ಮರುದಿನ ಸ್ಕೂಲಿಗೆ ಹೋದಾಗ ಲಿಂಗ ಮುದ್ರೆ ಜಾಗ ಅಂದರೇನು ಅಂತ ತಿಳುಕೊಳ್ಳುವ ಮನಸಾಗಿದ್ದರೂ ಅವ್ಯಕ್ತ ಭಯವೊಂದು ಅವನನ್ನು ತಡಾಕಿತ್ತು. ಅವತ್ತಿನ ಆ ಭಯ ರಾಮಾಂಜಿಯ ನಿದ್ದೆಯನ್ನು ಮತ್ತೊಂದಷ್ಟು ಹೊತ್ತು ಮುಂದಕ್ಕಾಕಿಸಿತ್ತು. ರಾಮಾಂಜಿ ಪೂರಾ ನಿದ್ದೆಗೊಳಗಾದಾಗ ಸರೊತ್ತು ಮೀರಿತ್ತು. 

ಆದರೂ ರಾಮಾಂಜಿಗೆ ಆಟೊತ್ತಿಗೇ ಎಚ್ಚರಾಗಿತ್ತು. ಹೊರಗಿನ್ನೂ ಕತ್ತಲಿತ್ತು. ಮತ್ತೆ ನಿದ್ದೆ ಹತ್ತದೆ ಎದ್ದು  ಕೂತಿದ್ದವನಿಗೆ ನಿನ್ನೆ ಬಂದಿದ್ದ ಕಾರು ನೆನಪಾಗಿ ಅದರ ಮರ್ಮವರಿಯದವನಾಗಿ ಹಾರಾಕಿದ್ದ ಪುಸ್ತಕಗಳಿಗಾಗಿ ಕೈಯ್ಯಾಡಿಸಿದರೆ ಅವಿನ್ನೂ ಪಿತಗುಡುತ್ತಿದ್ದವು. ಅವುಗಳನ್ನೆಲ್ಲಾ ಹಂಗೇ ಬ್ಯಾಗಿಗಾಕಿಕೊಂಡಿದ್ದ. ಅಪ್ಪ ಯಾಕಾದರೂ ಇವತ್ತೇ ರೇಷನ್ ತೆಗೆದಿಟ್ಟಿದ್ದನೋ ಹಾಳಾದ ಮಳೆ ಇವತ್ತೇ ಯಾಕೆ ಬಂತೋ ಅಂದುಕೊಂಡು ಬೆಳಕರಿಯುವುದನ್ನೇ ಕಾಯುತ್ತಿದ್ದ. ಬಟ್ಟೆಗಳ ಒದ್ದೆಗೆ ಮೈಯ್ಯೆಲ್ಲಾ ಕಡಿಯುತ್ತಿತ್ತು. ಸ್ವಲ್ಪ ಹೊತ್ತಿಗೆಲ್ಲಾ ಪಡಸಾಲೆಯ ಪುಟ್ಟ ಕಿಟಕಿಯ ತೂತುಗಳಿಂದ ಬೆಳಕು ತೂರತೊಡಗಿತ್ತು. ಅದೇ ವೇಳೆಗೆ ಎದ್ದು ಬಂದಿದ್ದ ಪುನುಗಪ್ಪ`ಇದ್ಯಾಕಪ್ಪ ಇಷ್ಟು ಬೇಗ ಎದ್ದು ಕೂತಿದೀಯ ವಸಿ ಚೆನಾಗಿ ಬೆಳಕಾಗ್ಲಿ ತಡಿ ಹೋಗಿವಂತೆ’ಅಂದಿದ್ದಕ್ಕೆ ರಾಮಾಂಜಿ ಮತ್ತೊಂದಷ್ಟೊತ್ತು ಕಾದಿದ್ದ.  

ಬಗಲಲ್ಲಿ ಸ್ಕೂಲಿನ ಬ್ಯಾಗನ್ನೂ ತಲೆ ಮೇಲೆ ರೇಷನ್ನಿನ ಚೀಲವನ್ನೂ ಇರಿಸಿಕೊಂಡು ಪುನುಗಪ್ಪನ ಮನೆ ಬಿಟ್ಟಾಗ ಬೆಳ್ಳಂಬೆಳಗಾಗಿತ್ತು. ಹಲವರಾಗಲೇ ನೇಗಿಲುಗಳನ್ನು ಗಸಿ ಹಾಕಿಕೊಂಡು ಹೊಲಗಳತ್ತ ಹೊರಟಿದ್ದರು. ಗುಂಡಿಗಳಲ್ಲಿ ನಿಂತಿದ್ದ ನೀರು ತಳಮಟ್ಟ ಇಂಗಿತ್ತು. ರಾತ್ರಿ ಮಳೆಗೆ ಸಿಕ್ಕಾಕಿಕೊಂಡಿದ್ದ ಸ್ಕೂಲಿನಿಂದ ಮಾಮೂಲಿ ಹೋಗುತ್ತಿದ್ದ ಹಾದಿಯನ್ನು ಬಿಟ್ಟು ಕೆರೆಯೊಳಗಿನ ಕಾಲಾದಿಯನ್ನು ಹಿಡಿದಿದ್ದ. ಯಾವತ್ತೂ ಹಿಂಗೆ ಮಾಡದ ಅಪ್ಪನಿಗೆ ಇವತ್ತೇನಾಗಿತ್ತು? ಜಾವ ಕಟ್ಟಲೆಂದು ಹೋದರೆ ಮರುದಿನ ಯಾವ ಕಾರಣಕ್ಕೂ ಗುಡಾರಕ್ಕೆ ಬಾರದೆ ಇದ್ದವನಲ್ಲ. ಅಕಸ್ಮಾತ್ ಅವನೂ ಮಳೆಗೆ ಸಿಕ್ಕಾಕಿಕೊಂಡುಬಿಟ್ಟಿದ್ದರೆ? ಹಂಗಂತ ಆ ಚಣ ತನ್ನನ್ನು ತಾನು ಸಂತೈಸಿಕೊಳ್ಳುತ್ತಿದ್ದ ರಾಮಾಂಜಿಗೆ ಮರು ಚಣವೇ ಅವನ ಹೊಟ್ಟೇಲಿ ಹುಟ್ಟಿದೋನಾಗಿದ್ರೆ ಹಿಂಗೆ ಮಾಡುತಿದ್ನ? ಅಂತಲೂ ಅನಿಸಿ ಇದ್ದಕ್ಕಿದ್ದಂತೆ ಹೆತ್ತವ್ವ ನೆನಪಾಗಿದ್ದಳು.  

ಕೆರೆಯನ್ನೇ ದಿಟ್ಟಿಸುತ್ತಿದ್ದ ರಾಮಾಂಜಿಗೆ ಗಂಟಲು ಒಣಗಿದಂತಾಯ್ತು. ತನ್ನಡಿಯ ಬೂದಿ ಸುಡತೊಡಗಿತು. ಮುಂಗೈಗಳನ್ನೂರಿ ಪ್ರಾಯಾಸಪಟ್ಟು ಮಗ್ಗುಲಾಗಿ ಮತ್ತೊಮ್ಮೆ ಟ್ರಂಕಿನೊಳಗನ್ನು ದಿಟ್ಟಿಸಿದ. ಒಂದು ಮೂಲೆಯಲ್ಲಿ ರೇಷನ್ ಕಾರ್ಡ್ ಆಧಾರ್ ಕಾರ್ಡ್‍ಗಳು ಇಟ್ಟ ಸ್ಥಿತಿಯಲ್ಲೇ ಸುಟ್ಟೋಗಿ ಹಂಗೇ ನಿಗತುಕೊಂಡಿದ್ದವು. ಅವುಗಳಲ್ಲಿದ್ದ ಕೋಲು ಮುಖದ ಗಿಡ್ಡ ಮೂಗಿನ ಹಣೆಯ ಮೇಲಣ ಗಾಯದ ಕಲೆಯ ಕಿರಿದಾದ ಕಂಗಳ ನೀಟಾಗಿ ತೆಗೆದಿದ್ದ ಬೈತಲೆಯ ಅವ್ವನ ಪಟ ಬೂದಿಯೊಳಗಿಂದ ಒಡಮೂಡಿದಂತೆ ರಾಮಾಂಜಿಯನ್ನೇ ದಿಟ್ಟಿಸುತ್ತಿತ್ತು. ಅವ್ವ ನೆನಪಾದಾಗಲೆಲ್ಲಾ ನೋಡೋಕೆ ಅಂತ ಇದ್ದದ್ದು ಅವುಗಳಲ್ಲಿದ್ದ ಅದೊಂದೇ ಪಟ. ಅದನ್ನ ದೊಡ್ಡದು ಮಾಡಿಸಿ ಕಟ್ಟು ಗಾಜು ಹಾಕಿಸಿ ಗುಡಾರದೊಳಗೆ ತಗಲಾಕಬೇಕು ಅಂತ ರಾಮಾಂಜಿಗೆ ಪಟವನ್ನು ನೋಡಿದಾಗಲೆಲ್ಲಾ ಅನಿಸುತ್ತಿತ್ತು. ಮುಂದಿನ ಸಾರ್ತಿ ಸ್ಕಾಲರ್‍ಶಿಪ್ ಬಂದಾಗ ಸಿದ್ದಪ್ಪ ಜೂಗವ್ವರನ್ನು ಹೆಂಗಾದರೂ ಮಾಡಿ ಅದಕ್ಕೆ ಒಪ್ಪಿಸಬೇಕು ಅಂತ ಕೆಲ ದಿನಗಳ ಹಿಂದಷ್ಟೇ ಅಂದುಕೊಂಡಿದ್ದ. ಅಷ್ಟರಲ್ಲಿ ಏನೆಲ್ಲಾ ಆಗೋಯ್ತು ಅಂದುಕೊಂಡು ರೆಪ್ಪೆ ಮಿಟುಕಿಸದೆ ಹತ್ತಿರದಿಂದ ಪಟವನ್ನೇ ದಿಟ್ಟಿಸುತ್ತಾ ಯಾವಾಗಲೂ ಕೇಳುತ್ತಿದ್ದಂತೆ `ನಾನೇನು ತಪ್ಪು ಮಾಡಿದ್ದೆ ಅಂತ ನನ್ನ ಬಿಟ್ಟು ಹೋದ್ಯವ್ವ’ ಅಂತ ಕೇಳತೊಡಗಿದ. ಅವನ ಮಾತುಗಳಿಗೆ ಸಹಮತಿ ಎಂಬಂತೆ ಅಳಿಲೊಂದು ತಂಗಡೆ ಗಿಡವೊಂದನ್ನು ಹತ್ತುವ ಇಳಿಯುವ ಆಟದಲ್ಲಿ ಚಿಟುಗುಟ್ಟುತ್ತಿತ್ತು. ಹೆಂಗೋಳಿಗಳೆರಡು ಪುಟಾಣಿ ಮರಿಗಳೊಂದಿಗೆ ಪೊದೆಯೊಂದರ ಮರೆಯಿಂದ ಕಾಣಿಸಿಕೊಂಡು ಆ ಗಿಡದಡಿಯ ನೆಲವನ್ನು ಕೆದಕುತ್ತಲೇ ಮರಿಗಳತ್ತ ಕಣ್ಣಿಟ್ಟಿದ್ದವು. 

ರಾಮಾಂಜಿ ಹೆತ್ತವ್ವನನ್ನು ನೋಡಿ ಎಂಟು ವರ್ಷದ ಮೇಲಾಗಿತ್ತು. ಮೊರಾರ್ಜಿ ಸ್ಕೂಲಿಗೆ ಸೇರಿಸಿದ ಹೊಸತರಲ್ಲಿ ಒಂದೆರಡು ದಪ ಬಂದ್ದು ಹೋಗಿದ್ದು ಬಿಟ್ಟರೆ ಮತ್ತೆ ಅತ್ತ ಮುಖ ಹಾಕಿರಲಿಲ್ಲ. ಅವಳಿಗಾಗಿ ರಾಮಾಂಜಿ ಕಾದೇ ಕಾದಿದ್ದ. ಹುಡುಕೇ ಹುಡುಕಿದ್ದ. ನಾನು ನೋಡಿದೆ ಅಂತ ಹೇಳುವ ಧಾತನೇ ಸಿಕ್ಕಿರಲಿಲ್ಲ. ನಂತರದ ದಿನಗಳಲ್ಲಿ ಅಲ್ಲಿನ ಜವಾನ ವೆಂಕಟಗಿರಿಯೇ ಸಕಲವೂ ಆಗಿದ್ದ. ಯಾವಾಗ ರಾಮಾಂಜಿಯ ಅವ್ವ ಅವನನ್ನು ನೋಡಲೂ ಬಾರದೇ ಒಂದು ಫೋನೂ ಮಾಡದೇ ಸುತ್ರಾಂ ಕೈ ಬಿಟ್ಟಿಳೋ ಅಂದಿನಿಂದ ವೆಂಕಟಗಿರಿ ಮತ್ತವನ ಹೆಂಡತಿ ಸಿದ್ದಮ್ಮ ಮಕ್ಕಳಿಲ್ಲದ ತಮ್ಮ ದುಃಖವನ್ನು ರಾಮಾಂಜಿನ ಮುಖೇನ ನೀಗಿಸಿಕೊಂಡಿದ್ದರು. ಅಲ್ಲೂ ಅವನ ನಸೀಬು ಕೈಕೊಟ್ಟಿತ್ತು. ಅವತ್ತೊಂದು ದಿನ ನೆಂಟರ ಮನೆಗೆಂದು ಹೋದ ಅವರಿಬ್ಬರೂ ಅಪಘಾತದಲ್ಲಿ ಅಸುನೀಗಿದ್ದರು. ಆ ಚಣ ರಾಮಾಂಜಿಗೆ ದಿಕ್ಕು ದೆಸೆ ಒಂದೂ ತೋರದೆ ಸ್ಕೂಲಿನಿಂದ ಹೇಳದೇ ಕೇಳದೆ ಕಾಲ್ಕಿತ್ತಿದ್ದ.  

ಅಲೆದೂ ಅಲೆದು ದಣಿದು ರಾಮಾಂಜಿ ಅದೊಂದು ದಿನ ಹಳ್ಳಿಯೊಂದರ ಕಟ್ಟೆಯಲ್ಲಿ   ಕೂತಿದ್ದಾಗ ಆ ಹಳ್ಳಿಗೆ ಜಾವ ಕಟ್ಟಲೆಂದು ಹೋಗಿದ್ದ ಬುಡುಬುಡುಕೆ ಸಿದ್ಧಪ್ಪನ ಕಣ್ಣಿಗೆ ಬಿದ್ದು ತನ್ನೊಂದಿಗೆ ಕರೆದೊಯ್ದಿದ್ದ. ಹೇಳಿಕೇಳಿ ಅಕ್ಷರಗಳ ಗಂಧ ಗಾಳಿಯೂ ಇರದಿದ್ದ ಅಲೆಮಾರಿ ಕುಲದಾಗೆ ಹುಟ್ಟಿದ್ದರೂ ರಾಮಾಂಜಿಯ ಕಲಿಯುವಾಸೆಗೆ ಸೋಜಿಗಗೊಂಡಿದ್ದ ಸಿದ್ದಪ್ಪ ಮೊರಾರ್ಜಿ ಸ್ಕೂಲಿಂದ ತಮ್ಮ ಗುಡಾರಗಳಿಗೆ ಹತ್ತಿರವಿದ್ದ ಸ್ಕೂಲೊಂದಕ್ಕೆ ಹಾಕಿದ್ದ. ಹಂಗಾಗಿ ಅಲ್ಲಿಗೇ ಕಲಾಸಾಗಿ ಬಿಡಬೇಕಾಗಿದ್ದ ರಾಮಾಂಜಿಯ ಓದು ಒಂದು ವರ್ಷದ ನಂತರ ಮತ್ತೆ ಜೀವ ಪಡಕಂಡಿತ್ತು. ಆವಾಗಿಂದ ದೊಂಬಿದಾಸರ ರಾಮಾಂಜಿ ಬುಡುಬುಡುಕೆ ಸಿದ್ದಪ್ಪ ಹಾಗೂ ಅವನ ಹೆಂಡತಿ ಜೂಗವ್ವನ ಕೂಸಾಗಿದ್ದ.  

ಹಂಗೆ ನೋಡಿದರೆ ರಾಮಾಂಜಿಗೆ ಹೆತ್ತಪ್ಪನ ಮುಖವೇ ಮರೆತೋಗಿತ್ತು. ಒಂದು ದಿನ ಅವನಿನ್ನೂ ಚಿಕ್ಕ ಹುಡುಗನಾಗಿದ್ದಾಗ ಕುಡಿದು ಬಂದು ಅವ್ವನನ್ನು ಬಾಯಿಗೆ ಬಂದಂತೆ ಬಯ್ಯುತ್ತಾ ಸಿಕ್ಕ ಸಿಕ್ಕದ್ದರಲ್ಲಿ ಹೊಡೆಯುತ್ತಿದ್ದ ಒಂದು ಘಟನೆ ಮಾತ್ರ ಮಬ್ಬಾಗಿ ಅವನೊಳಗೆ ಕೂತಿತ್ತು. ಅವನನ್ನು ಯಾರೋ ಕಲ್ಲೆತ್ತಾಕಿ ಕೊಂದರು ಅಂತ ಅವರಿವರ ಬಾಯಲ್ಲಿ ಕೇಳಿದ್ದು ಬಿಟ್ಟರೆ ಅವ್ವ ಆ ಬಗ್ಗೆ ಎಂದೂ ಒಂದು ಮಾತಾಡಿರಲಿಲ್ಲ. ಅಪ್ಪಟ ಅಲೆಮಾರಿ ಬದುಕಿನÀ ಅವ್ವ ಎಂದಾದರೊಂದು ಅಲೆಯುತ್ತಾ ಎರೆನೆತ್ತಿಯ ಕಡೆಗೂ ಬಂದುಬಿಡಬಹುದು ಅನ್ನುವುದು ರಾಮಾಂಜಿಯ ಓದಿನ ಜೊತೆಗಿದ್ದ ಮತ್ತೊಂದು ಕಲಾಸಾಗದ ಕನಸಾಗಿತ್ತು. ಎರೆನೆತ್ತಿಯಿಂದ ದಿನವೂ ಸ್ಕೂಲಿಗಾಗಿ ಮೂರು ಮೈಲಿ ನಡೆಯುತ್ತಿದ್ದ ರಾಮಾಂಜಿಯನ್ನು ಕಂಡು `ಈ ಪಾಪಿ ಪರ್ದೇಸಿ ಅಲೆ ಮಾರ್ಗುಳ ಹಣೇಲಿ ಓದು ಅನ್ನೋದಾಗ್ಲಿ ನಮ್ದು ಅಂತ ಅಂಗೈಯಗ್ಲ ನೆಲವಾಗ್ಲಿ ಬದ್ಕಾಕೆ ಒಂದು ಸೂರೂ ಅಂತಾಗ್ಲಿ ಬರ್ದಿಲ್ಲ. ಅಂತಾದ್ರಾಗೆ ನಿನ್ನೆದೆಯೊಳ್ಗೆ ನಾಕಕ್ಷರ ಕುಂತ್ರೆ ಅದ್ಕಿಂತ ಇನ್ನೇನು ಬೇಕು ಮಗಾ’ಅಂತ ಸಿದ್ದಪ್ಪ ಆಗಾಗ ಆಡುತ್ತಿದ್ದ ಮಾತುಗಳು ರಾಮಾಂಜಿಯೊಳಗೆ ಓದುವ ಹುಮ್ಮಸ್ಸನ್ನು ಇಮ್ಮಡಿಸುತ್ತಿದ್ದವು. ಜೊತೆಗದು ಅಲ್ಲಿಂದ ಸಿದ್ಧಪ್ಪ ಎತ್ತಲೂ ಹೋಗದಂತೆ ಅಲ್ಲಿಯೇ ಕಟ್ಟಾಕಿತ್ತು.  

ಇಡೀ ಗುಡಾರಗಳಲ್ಲಿ ಸ್ಕೂಲಿಗೆ ಹೋಗುತ್ತಿದ್ದವನು ರಾಮಾಂಜಿಯೊಬ್ಬನೇ. ಅವ್ವಂದಿರುಗಳ ಸೆರಗಿಡಿದು ಅಡ್ಡಾಡುತ್ತಿದ್ದ ಮಕ್ಕಳುಗಳಿರಲಿ ರಾಮಾಂಜಿಯ ವಾರಿಗೆಯವರೂ ಕೂಡಾ ತಂತಮ್ಮ ಅಪ್ಪಂದಿರ ಕುಲ ಕಸುಬಿಗೆ ಕಚ್ಚಿಕೊಳ್ಳುತ್ತಿದ್ದರು. ಹೆತ್ತವರಿಗೂ ಅತ್ತ ನಿಗಾ ಇರಲಿಲ್ಲ. `ಅಯ್ಯೋ ಇದ್ರೆ ಈವೂರು ಎದ್ರೆ ಯಾವೂರೋ ಅಂತಾದ್ರಾಗೆ ಇಸ್ಕೂಲ್ಗೆ ಬ್ಯಾರೆಯ’ಅನ್ನೋದು ಅವರುಗಳ ಸಾರ್ವಕಾಲಿಕ ಅಂಬೋಣವಾಗಿತ್ತು. ಇನ್ನೂ ಹತ್ತಿರದ ಮಾತೇನು ಅಂದರೆ ಆ ಇಡೀ ಗುಡಾರಗಳಲ್ಲಿ ರಾಮಾಂಜಿಯೊಬ್ಬನ್ನು ಬಿಟ್ಟರೆ ಮತ್ಯಾರೂ ಸರ್ಕಾರಿ ಲೆಕ್ಕದಲ್ಲಿ ಬದುಕಿರಲೇ ಇಲ್ಲ! ಆ ಕಾರಣಕ್ಕೆ ರಾಮಾಂಜಿಗೆ ಅವ್ವನ ಬಗ್ಗೆ ಅಭಿಮಾನ ಉಕ್ಕುತ್ತಿತ್ತು.  

ಅವ್ವನ ಪಟದೊಂದಿಗೆ ರಾಮಾಂಜಿ ಸುಮಾರು ಹೊತ್ತು ಮಾತಾಡಿಯೇ ಆಡಿದ. ಗುಸುಗಾಡಿಯೇ ಆಡಿದ. ನೋಡ ನೋಡುತ್ತಾ ಮಾತಾಡುತ್ತಾ ಆಡುತ್ತಾ ರಾಮಾಂಜಿ ಮತ್ಮತ್ತೆ ಸಂಕಟಕ್ಕೊಳಗಾದ. ಅವ್ವನದ್ದು ಇದ್ದದ್ದು ಅದೊಂದೇ ಪಟ. ಅದೂ ತನ್ನನ್ನು ಸ್ಕೂಲಿಗೆ ಸೇರಿಸುವಾಗ ತೆಗಿಸಲೇ ಬೇಕಾಗಿ ತೆಗಿಸಿದ್ದು. ರಾಮಾಂಜಿಗೆ ಅದನ್ನೊಮ್ಮೆ ಮುಟ್ಟಬೇಕೆನಿಸಿ ಕೈ ಮುಂಚಾಚಿದ. ಮುಟ್ಟಿದರೆ ಬೂದಿಯಾಗಿ ಹೋಗಿ ಮತ್ತಿನ್ನೆಂದೂ ಅವ್ವನನ್ನು ಕಾಣದಂತಾಗಿ ಬಿಟ್ಟರೆ ಅನ್ನುವ ಆತಂಕದಿಂದಾಗಿ ಹಿಂದಕ್ಕೆಳೆದುಕೊಂಡ. ಹಂಗನಿಸಿದ್ದೇ ಕಂಗಳು ತುಟುಕಾಡತೊಡಗಿ ಮಂಜು ಮಂಜಾದವು. ಅಲ್ಲಿಂದ ಟ್ರಂಕಿನ ಮತ್ತೊಂದು ಮೂಲೆಯನ್ನು ದಿಟ್ಟಿಸತೊಡಗಿದ. ಅಲ್ಲೂ ಬೂದಿಯಾಗಿ ಬಿದ್ದಿದ್ದ ಕಾಗದದ ಚೂರುಗಳ ಮೇಲೆ ಬೀಳತೊಡಗಿದ ಕಣ್ಣೀರು ಅಲ್ಲೇ ಇಂಗುತ್ತಾ ಉಂಡುಗಟ್ಟಿಕೊಳ್ಳತೊಡಗಿತು. ಹತ್ತಿರದಲ್ಲೆಲ್ಲೋ ಕಾಡಂದಿಗಳು ಗೂಟಾಡುತ್ತಾ ಗುಟುರಾಕುತ್ತಿದ್ದವು. ಜಾಲಿ ಮರವೊಂದರಲ್ಲಿ ಕಟ್ಟಿಕೊಂಡಿದ್ದ ಗೂಡಿನಲ್ಲಿ ಗುಚಕ್ಕಿಯೊಂದು ಹಸುಗೂಸಿಗೆ ಗುಕ್ಕಿಕ್ಕುತ್ತಿತ್ತು.  

ಯಾಕೋ ಏನೋ ರಾಮಾಂಜಿಯ ಅವ್ವನಿಗೆ ಮಗನನ್ನು ಓದಿಸುವ ಅಪಾರ ಆಸೆಯಿತ್ತು. ಅದು ಇತರೆ ಅಲೆಮಾರಿಗಳಿಗೆ ತಮಾಷೆಯಂತೆ ಕಂಡಿತ್ತು. `ತಗಳಪ್ಪ ಉಂಬಾಕೆ ಕೂಳು ನೋಡ್ಕಣಾದ ಬಿಟ್ಟು ಈ ಸೋಕಿಗೆ ಬ್ಯಾರೆ ಬಿದ್ದವ್ಳೆ`ಅಂತ ನಗಾಡಿದ್ದರು. ಅದಾವುದನ್ನೂ ಕಿವಿಗಾಕಿಕೊಳ್ಳದೆ ಸ್ಕೂಲಿಗೆ ಸೇರಿಸಲು ಇನ್ನಿಲ್ಲದ ಪಡಿಪಾಟಲು ಪಟ್ಟಿದ್ದಳು. `ನಿನ್ನ ಮನೆಯ ಅಡ್ರೆಸ್ ಪ್ರೂಫ್ ತಗಂಡು ಬಾ ಇಲ್ಲಾಂದ್ರೆ ಆಗಲ್ಲ’ ಅಂದುಬಿಟ್ಟಿದ್ದ ಹೆಡ್ಮಾಸ್ಟರ್. ಹಂಗಂದರೇನೂ ಅಂತಾನೇ ಗೊತ್ತಿರದಿದ್ದ ರಾಮಾಂಜಿಯ ಅವ್ವ ಭೂಮಿಗಿಳಿದು ಹೋಗಿದ್ದಳು. `ಅದೆಲ್ಲ ನಂಗೆ ಗೊತ್ತಾಗಕಿಲ್ಲ ಸ್ವಾಮಿ ಅಲ್ಲಿ ಇಲ್ಲಿ ಬೇಲಿ ಸಾಲ್ನಾಗೋ ಮರದ ನೆರಳ್ನಾಗೋ ಯಾಚ್ಕ ಹಾಕ್ಕೊಂಡು ಬದ್ಕೋರು’ ಅಂತ ಅಂಗಲಾಚಿದ್ದಳು. ಆಗೋದೇ ಇಲ್ಲಾ ಅಂತ ಗೊತ್ತಾದಾಗ ಸಂಬಂಧಿಸಿದ ಅಧಿಕಾರಿಗಳನ್ನು ಎಡತಾಕಿದ್ದಳು. ಅವಳ ಛಲವನ್ನರಿತ ಅಧಿಕಾರಿಯೊಬ್ಬ ಅವಳಿದ್ದ ಗುಡಾರದ ವಿಳಾಸವನ್ನೇ ಗುರುತಿನ ಚೀಟಿಗೆ ಸೇರಿಸಿ ಅವಳ ಹೆಸರನ್ನು ವೋಟರ್ ಲಿಸ್ಟಿಗೆ ಸೇರಿಸಿದ್ದ.  ಹಂಗಾಗಿ ರೇಷನ್ ಕಾರ್ಡುದಾರಳಾಗಿದ್ದಳು. ನಂತರ ಆಧಾರ್ ಕಾರ್ಡೂ ಸಿಕ್ಕಿತ್ತು. ಸ್ಕೂಲಿಗೆ ಸೇರಿಸಿದ್ದ ದಿನವೇ `ಇವು ನಿಂತಾವೇ ಇರ್ಲಿ ’ಅನ್ನುತ್ತಾ ಅವನ್ನೆಲ್ಲಾ ರಾಮಾಂಜಿಯ ಸುಪರ್ಧಿಗೊಪ್ಪಿಸಿ ಜೊತೆಗೆ `ಬೆಳ್ಕು ಹೋದಾಗ ಬೇಕಾಗುತ್ತೆ’ ಅಂತ ಹಳೆಯದೊಂದು ಲಾಟೀನನ್ನೂ ಕೊಟ್ಟು ಹೋಗಿದ್ದಳು. ರಾಮಾಂಜಿ ಅವುಗಳನ್ನೆಲ್ಲಾ ಜೋಪಾನಮಾಡಿಕೊಂಡಿದ್ದ.  

ಸರ್ಕಾರಿ ರೇಷನ್ನು ಅಂತ ಸಿಕ್ಕುತ್ತಿದ್ದದ್ದು ರಾಮಾಂಜಿಯ ಗುಡಾರಕ್ಕೆ ಮಾತ್ರ. `ಹೆಂಗೂ ಈಗ ನಮ್ದೂ ಅಂತ ಒಂದು ಜಾಗ ಐತೆ ಹಂಗಾಗಿ ಎಲ್ರಿಗೂ ರೇಷನ್ ಕಾರ್ಡು ಸಿಕ್ತಾವೆ ಅರ್ಜಿ ಹಾಕ್ಕಳಿ’ಅಂತ ರಾಮಾಂಜಿ ಒತ್ತಾಯಕ್ಕೆ  ಗುಡಾರದವರು ಅರ್ಜಿಗಳನ್ನು ಹಾಕಿದ್ದರು. `ಫಸ್ಟು ನಿಮ್ಮ ಅಡ್ರೆಸ್ ಪ್ರೂಫ್ ತಕ್ಕಂಡು ಬನ್ನಿ’ಅಂತ ರಾಮಾಂಜಿಯ ಅವ್ವನಿಗೆ ಸಿಕ್ಕಿದ್ದ ಉತ್ತರವೇ ಅವರಿಗೂ ಸಿಕ್ಕಿತ್ತು. `ಸ್ವಾಮಿ ನಾವು ಆರೇಳು ವರ್ಷಗಳ ಲಾಗಾಯ್ತು ಆ ಎರೇ ನೆತ್ತೀಲೇ ಬದುಕ್ತಿದೀವಿ’ಅಂದಿದ್ದರು. `ನಿಮ್ಗೆ ಎಲ್ಬೇಕೋ ಅಲ್ಲಿ ಗುಡಾರ ಹಾಕ್ಕೆಂಡು ಬಿಟ್ರೆ ಅದು ನಿಮ್ದಾಗಿ ಬಿಡುತ್ತಾ ಸರ್ಕಾರಿ ಜಮೀನು ನಿಮ್ದಾಗಬೇಕೂಂದ್ರೆ ಎಮ್ಮೆಲ್ಲೆಗಳ್ನ ಹಿಡ್ದು ನಮ್ಗೂ ಗ್ರ್ಯಾಂಟಿನ ಮನೆಗಳನ್ನ ಕೊಡ್ಸಿ ಅಂತ ಕೇಳ್ಕಳಿ’ಅಂತ ಅಂದಿದ್ದರು. ಅದರಂತೆ ಅಲ್ಲಿನ ಶಾಸಕರನ್ನು ಕಂಡು ನಾವು ಇಂಥವರು ಹಿಂಗಿಂಗೆ ಅಂತ ಹೇಳ್ಕಂಡು`ನಮ್ಗೂ ಒಂದು ಗೂಡು ಸಿಕ್ಕೊಂಗೆ ಮಾಡಿ ಪುಣ್ಯ ಕಟ್ಕಳಿ’ಅಂತ ಕೇಳಿಕೊಂಡಿದ್ದರು. ಅದಾಗಿ ಮೂರು ವರ್ಷಗಳು ಕಳೆದಿದ್ದರೂ ಅವು ಒಂಚೂರೂ ಮಿಸುಕಾಡಿರಲಿಲ್ಲ. ಅಲ್ಲದೆ ಅವು ಯಾವತ್ತೂ ಮಿಸುಕಾಡುವಂತೆಯೂ ಇರಲಿಲ್ಲ. ಯಾಕೆಂದರೆ ಕಳೆದ ತಿಂಗಳು ಎರನೆತ್ತಿಗೋಗಿ ಗಲಾಟೆ ಮಾಡಿದ್ದ ಗುಂಪು ಕೆಲ ದಿನಗಳ ಹಿಂದೆ ಶಾಸಕರನ್ನು ಕಂಡು ಅವರನ್ನ ಅಲ್ಲಿರಾಕೆ ಬಿಟ್ರೆ ಊರುಗಳಲ್ಲಿ ಕಳ್ಳತನಗಳು ಹೆಚ್ಚುತ್ತವೆಂದೂ ಆ ದಿಕ್ಕಿನಲ್ಲಿ ಹೆಂಗಸರು ಮಕ್ಕಳು ಓಡಾಡುವುದೇ ಕಷ್ಟವಾಗುತ್ತದೆಂದೂ ಅದೆಲ್ಲಕ್ಕಿಂತ ಹೆಚ್ಚಾಗಿ ಅವರು ಮಾಟ ಮಂತ್ರ ವಶೀಕರಣ ವಿದ್ಯೆಗಳಲ್ಲಿ ನಿಸ್ಸೀಮರಾಗಿರೋದರಿಂದ ಯಾವಾಗ ಏನು ಮಾಡೋಕೂ ಹೇಸಲ್ಲ. ಹಂಗಾಗಿ ಅವರನ್ನಲ್ಲಿಂದ ಖಾಲಿ ಮಾಡಿಸಬೇಕೆಂದು ದೂರಿತ್ತಿದ್ದರು. ಓಟುಗಳೇ ಇಲ್ಲದ ಗುಡಾರದವರ ಮೇಲೆ ಮಮಕಾರ ಹುಟ್ಟಲು ಶಾಸಕರಿಗೆ ಮತ್ಯಾವ ಕಾರಣವೂ ಇಲ್ಲದ್ದರಿಂದ`ಆತು ನಡೀರೋ’ಅಂದಿದ್ದರು. 

ಬಿರುಗೊಳ್ಳತ್ತಿದ್ದ ಬಿಸಿಲು ಹಾಗೂ ತಲೆಯ ಮೇಗಳ ಚೀಲದ ಭಾರದಿಂದಾಗಿ ರಾಮಾಂಜಿಗೆ ಚಣ ಹೊತ್ತು ಕೂರಬೇಕೆನಿಸಿತ್ತು. ಆಗವನಿಗೆ ನಿನ್ನೆ ಬೆಳಗ್ಗೆಯ ಕಾರು ಮತ್ತೆ ನೆನಪಾಗಿ ಮತ್ತದೇ ಸೋಜಿಗಕ್ಕೆ ಕೆಡವಿತ್ತು. ಅಕಸ್ಮಾತ್ ಅವರೇನಾದರೂ ಗುಡಾರದವರ ಅರ್ಜಿಗಳ ಬಗ್ಗೆ ಮುಗುಮ್ಮಾಗಿ ಸ್ಥಳ ಪರೀಕ್ಷೆಗೆ ಬಂದಿದ್ದರೆ ಅನ್ನುವ ಅನುಮಾನ ಹುಟ್ಟಿ ಯೋಚಿಸಿದಂತೆಲ್ಲಾ  ಅದು ಗೊಂದಲಕ್ಕೆ ತಿರುಗಿತ್ತು. ಮಳೆ ಬಿದ್ದ ನೆಲದ ಘಮಲು ಮೂಗಿಗಡರುತ್ತಿತ್ತು. ಹಕ್ಕಿಗಳು ಹೆಚ್ಚು ಜೀವ ಬಂದಂತೆ ಹಾರಾಡುತ್ತಿದ್ದವು. ಒಂದಷ್ಟೊತ್ತು ಹಂಗೇ ಕೂತಿದ್ದ ರಾಮಾಂಜಿಗೆ ಹಾದಿಯ ಅತ್ತಲ ಬದಿಯಲ್ಲಿದ್ದ ಎರದೆ ಮರವೊಂದು ಕಣ್ಣಿಗೆ ಬಿದ್ದು ಎದ್ದವನೇ ಅತ್ತ ಧಾವಿಸಿದ್ದ. ಮಳೆ ಗಾಳಿಗೆ ಬಿದ್ದು ತ್ಯಾವದಲ್ಲಿ ಹೂತೋಗಿದ್ದ ಹಣ್ಣುಗಳನ್ನು ಆಯ್ದು ಅವುಗಳಿಗಂಟಿದ್ದ ಕೆಸರನ್ನು ವರೆಸಿಕೊಂಡು ಒಂದು ಜೇಬು ತುಂಬಿಸಿಕೊಂಡಿದ್ದ. ಕಲ್ಲೊಡೆದು ಕೆಡವಿಕೊಂಡು ಮತ್ತೊಂದು ಜೇಬನ್ನೂ ಭರ್ತಿ ಮಾಡಿಕೊಂಡು ಹೊರಟಿದ್ದ. ಬಟ್ಟೆಗಳು ಅರೆಬರೆ ಆರಿಕೊಂಡಿದ್ದವು. ಬಿಸಿಲು ಬಲಿಯುತ್ತಿದ್ದುದರಿಂದ ಸ್ಕೂಲಿಗೆ ಹೋಗುವ ಹೊತ್ತಿಗೆ ಒಣಗಿಯೇ ಒಣಗುತ್ತವೆ ಅಂದುಕೊಂಡು ಜೇಬಿನಿಂದ ಒಂದೊಂದೇ ಎರದೆ ಹಣ್ಣನ್ನೆತ್ತಿಕೊಂಡು ತಿನ್ನುತ್ತಾ ಅವುಗಳ ಹುಳಿಗೆ ಮುಖವನ್ನು ಹುಳ್ಳಗೆ ಮಾಡಿಕೊಂಡು ಸಾಗುವಾಗ ಆರೂಡಿದ್ದವರು ಎತ್ತುಗಳನ್ನು ಗದರಿಸಿಕೊಂಡು ದಡಿ ದನಿಯಲ್ಲಿ ಹಾಡಿಕೊಳ್ಳುತ್ತಿದ್ದ ಹಾಡುಗಳೊಂದಿಗೆ ಹಕ್ಕಿಗಳ ಕೂಗು ಪ್ರತಿ ಕೂಗುಗಳೂ ಬೆಸಕಂಡಿದ್ದವು. 

ಬಲು ಹೊತ್ತು ಅವ್ವನ ಪಟದೊಂದಿಗೆ ಮಾತಿಗಿಳಿದಿದ್ದ ರಾಮಾಂಜಿಗೆ ಬಾಯಾರಿಕೆಗೋ ಹಸಿವಿಗೋ ದಿಂಡುರುಳು ಉರುಳುತ್ತಿದ್ದ ಸಂಕಟಕ್ಕೋ ಮತ್ತೆ ಕಳ್ಳತ್ತಿದಂತಾಯ್ತು. ಆದರೂ ಮಗ್ಗುಲಾಗಿದ್ದವನು ಸಾವರಿಸಿಕೊಂಡು ಎದ್ದು ಕುಳಿತ. ಹತ್ತಿರದಲ್ಲಿದ್ದ ಬೇಟೆ ಗಿಡಕ್ಕೆ ಬೆಂಕಿ ರಾಚಿದ್ದರಿಂದ ಅದರ ಕಾವಿಗೆ ಒಂದಷ್ಟು ಎಲೆಗಳು ಮುರುಟಿಕೊಂಡಿದ್ದರೂ ಅದಕ್ಕೆ ನೇತಾಕಿದ್ದ ಮೀನಿನ ಗಾಳ ನೇತಾಕಿದಂಗೇ ಇತ್ತು. ಅದರ ವಾರಾಸಿಗಿದ್ದ ಬಚ್ಚಲಿನ ತಡಿಕೆಗಳನ್ನೆಲ್ಲಾ ತುಳಿದಾಕಲಾಗಿತ್ತು. ಅದಕ್ಕೆ ಆತುಕೊಂಡಂತಿದ್ದ ಕೋಳಿ ಗೂಡಿನ ಬಾಗಿಲು ಅಪ್ಪಚ್ಚಿಯಾಗಿತ್ತು. ಜೂಗವ್ವ ನಿಗಾ ಮಾಡಿದ್ದ ಕೈಗೊಪ್ಪಲು ನೆಲ ಕಚ್ಚಿತ್ತು. ಪರಂಗಿ ಗಿಡವನ್ನು ಬುಡ ಸಮೇತ ಉರುಳಿಸಿದ್ದರಿಂದ ಅದರ ಕಾಯಿಗಳು ಅಷ್ಟಗಲಕ್ಕೂ ಚೆಲ್ಲಾಡಿದ್ದವು. ಅದರಾಚೆಗೆ ಬಂಡೆಯೊಂದರ ಬದಿಗಿದ್ದ ಜಾಲಗಿರಿ ಗಿಡ ಎಲೆಗಳೇ ಕಾಣದಂತೆ ಹೂ ಹೊತ್ತು ನಿಂತಿತ್ತು. ಇಷ್ಟೂ ವರ್ಷ ಜೀವವಾಗಿದ್ದ ಎರೆನೆತ್ತಿಯನ್ನು ರಾಮಾಂಜಿ ಇದೇ ಕೊನೆಯ ಸಾರ್ತಿ ಎಂಬಂತೆ ಕಣ್ತುಂಬಿಕೊಳ್ಳತೊಡಗಿದ. ರಾಮಾಂಜಿಗೆ ಬಾಳಾಟವೇ ಕಮರಿದಂತಾಗಿ ಸಿದ್ದಪ್ಪ ಜೂಗವ್ವರನ್ನ ನೆನೆದು`ನೀವೂ ನನ್ನ ಬಿಟ್ಟು ಹೋಗ್ಬಿಟ್ರಾ’ ಅಂತ ಕೂಗಲೆತ್ನಿಸಿದವನ ದನಿ ಹೊರಬರದೆ ಗಂಟಲೊಳಗೇ ಸಿಕ್ಕಿಕೊಂಡಿತು. ಒಂದಷ್ಟು ದೂರದಲ್ಲಿ ಪ್ಶೆರಿಗೆ ಬಂದಿದ್ದ ಬಗರ್‍ಹುಕುಂ ಜಮೀನಿನಲ್ಲಿ ಕಟ್ಟಿದ್ದ ತೆಂಗಿನ ತೋಟದೊಳಗಿಂದ ಗಿಳಿವಿಂಡೊಂದು ಹಾರುತ್ತಾ ಬಂದು ಕೊರಕಲಲ್ಲಿದ್ದ ಈಚಲು ಹಣ್ಣಿನ ಗೊನೆಗೆ ಅಮರಿಕೊಂಡಿತು. ಹಗಲಿಡೀ ಗಿಜಿಗುಡತ್ತಿದ್ದ ಜಾಗ ಬಿಕೋ ಅನ್ನುತ್ತಿತ್ತು. ಇದನ್ನೆಲ್ಲಾ ಯಾರು ಮಾಡಿದ್ದು ಗುಡಾರದವರಿಗೆಲ್ಲಾ ಏನಾಯಿತು ಎತ್ತ ಹೋದರು ಮುಂತಾದ ಪ್ರಶ್ನೆಗಳು ರಾಮಾಂಜಿಯ ಮನದೊಳಗೆ ಒಮ್ಮೆಗೇ ಸರುಕಾಡಿದರೂ ಯಾವೊಂದಕ್ಕೂ ಏನೊಂದೂ ಹೊಳೆಯದೇ ಹೋಗಿ ಬದಲಿಗೆ ಸ್ಕೂಲಿನ ಚಿತ್ರ ಕಣ್ಮುಂದೆ ಬಂದದ್ದೇ ದಿಕ್ಕೆಟ್ಟವನಂತೆ ಕೂತಲ್ಲೇ ಬಿದ್ದು ಒದ್ದಾಡಹತ್ತಿದ. ಹೊತ್ತು ವಾಲುತ್ತಿತ್ತು. ಕತ್ತೆಗಳ ಜೂಗರಿಕೆ ಮುಂದುವರೆದಿತ್ತು. ಜಾಲಗಿರಿ ಹೂಗಳ ಘಮಲು ಇಡುಕಿರಿಯುತ್ತಿತ್ತು. 

ರಾಮಾಂಜಿ ಎರೆನೆತ್ತಿಗೆ ಇನ್ನಿಲ್ಲದಂತೆ ಒಗ್ಗಿಹೋಗಿದ್ದ. ಸುತ್ತಲೂ ಮೂರ್ನಾಲ್ಕು ಮೈಲಿ ಪಾಸಲೆಯಲ್ಲಿ ಯಾವೊಂದು ಹಳ್ಳಿಯೂ ಇರದಿದ್ದ ದ್ಯಾವದಾರೆ ತರಾದ ಬಂದರೆ ತಂಗಡೆ ಬೇಟೆ ಜಾಲಿ ಮುಂತಾದ ಕಾಡು ಗಿಡಗಳಿಂದ ಕೂಡಿದ್ದ ಅದು ಅಪ್ಪಟ ಬಯಲು ಸೀಮೆಯ ಕುರುಚಲು ಕಾಡಾಗಿತ್ತು. ತನ್ನ ಅಲೆದಾಟದ ಬದುಕಿನಾಗೆ ಎಂಥದೋ ಸೆಳೆತಕ್ಕೊಳಗಾದವನಂತೆ ಓನಂ ಪ್ರಥಮಕ್ಕೆ ಸಿದ್ದಪ್ಪ ಅಲ್ಲಿ ಗುಡಾರ ಹಾಕಿಕೊಂಡಿದ್ದ. ಆ ಹೊತ್ತಿಗಾಗಲೇ ಕೈಗೆ ಬಂದಿದ್ದ ಇದ್ದೊಬ್ಬ ಮಗ ಹಾವಾಡಿಗನಾಗುವ ಮೋಹಕ್ಕೆ ಬಿದ್ದು ಹಾವೊಂದನ್ನು ಹಿಡಿಯುವಾಗ ಅದರಿಂದ ಕಚ್ಚಿಸಿಕೊಂಡು ಅಸುನೀಗಿದ್ದ. ಜಾವ ಕಟ್ಟುವುದರೊಂದಿಗೆ ಜೀನು ಬಿಚ್ಚೋದರಲ್ಲಿ ನಿಸ್ಸೀಮನಾಗಿದ್ದ ಸಿದ್ದಪ್ಪ ಬೆಲಿಬಂಕ ಕಾಡಮೇಡು ಎಲ್ಲಿ ಜೀನು ಕಟ್ಟಿದ್ದರೂ ಅದನ್ನು ಪತ್ತೆ ಹಚ್ಚಿಬಿಡುತ್ತಿದ್ದ. ಜೇನು ತುಪ್ಪವನ್ನು ಸೀಸೆಗಳಿಗೆ ತುಂಬಿ ಅಂಗಡಿಗಳಿಗೆ ಊರೂರುಗಳಿಗೆ ಹೊತ್ತೊಯ್ದು ಮಾರುತ್ತಿದ್ದ. ಜೂಗವ್ವ ಸುತ್ತಲ ಹಳ್ಳಿಗಳಿಗೆ ವತಾರೆಗೇ ಸೂಜಿ ಪಿನ್ನ ಬಾಚಣಿಗೆ ಸೀರಣಿಗೆ ಮುಂತಾದವುಗಳನ್ನು ಮಾರಲು ಹೋಗುತ್ತಿದ್ದಳು. ವರ್ಷಗಟ್ಟಲೆ ಕಾಡಿನ ಕೂಸಿನಂತೆ ಒಂಟಿಯಾಗಿದ್ದ ಗುಡಾರದತ್ತ ದಿನ ಕಳೆದಂತೆ ಒಂದೊಂದೇ ಬಂದು ಕೂಡಿಕೊಂಡು ಮುವ್ವತ್ತು ಗುಡಾರಗಳಾಗಿದ್ದವು. ಅವುಗಳೊಳಗೆ ಸುಡುಗಾಡು ಸಿದ್ಧರು ದೊಂಬಿ ದಾಸರು ಸಿಳ್ಳೆ ಕ್ಯಾತರು ಹಕ್ಕಿಪಿಕ್ಕರು ಹಾವಾಡಿಗರು ಬುಡುಬುಡಿಕೆಯವರು ಹಿಂಗೆ ಕುಲೆಂಟು ಕಸುಬಿನವರು ಕೂಡಿಕೊಂಡಿದ್ದರು. ಅವರೆಲ್ಲಾ ಒಂದು ಕಡೆ ನಿಲ್ಲದವರಾಗಿದ್ದರೂ ಅಲ್ಲಿನ್ನೂ ತಳವೂರಲು ಕಾರಣವಾಗಿದ್ದು ತಾವು ಗ್ರ್ಯಾಂಟಿನ ಮನೆಗಳಿಗೆ ಹಾಕಿರುವ ಅರ್ಜಿ ಊರ್ಜಿತವಾದರೆ ತಮಗೂ ರೇಷನ್ ಕಾರ್ಡುಗಳು ಸಿಕ್ಕುತ್ತವೆ ಅನ್ನುವ ಅವರ ಜಾಯಮಾನಕ್ಕೇ ಒಗ್ಗದ ಸಣ್ಣದೊಂದು ಸೆಳೆತ. 

ಒಂದಷ್ಟು ದಿನ ನಿಸೂರಾಗಿದ್ದ ಗುಡಾರದವರಿಗೆ ದಿನಕಳೆದಂತೆ ತೊಡಕುಗಳು ತಗಲಾಕಿಕೊಳ್ಳತೊಡಗಿದ್ದವು. ಎಲ್ಲಿ ಯಾವುದೇ ಕಳ್ಳತನವಾದರೂ ಅದಕ್ಕೆ ಅಲೆಮಾರಿಗಳೇ ಕಾರಣವಾಗುತ್ತಿದ್ದರು. ಮಾಡದ ತಪ್ಪಿಗೆ ಪೊಲೀಸರ ಕಾಟ ಖಾಯಮ್ಮಾಗಿತ್ತು. ಇದು ರಾಮಾಂಜಿಗೆ ರೇಜಿಗೆಯ ಸಂಗತಿಯಾಗಿತ್ತು. ಕೆಲವೊಮ್ಮೆ ಸ್ಕೂಲಿನಲ್ಲಿ ಕೆಲವರು ತನ್ನನ್ನು ಕಳ್ಳನಂತೆ ಕಾಣುತ್ತಿದ್ದುದು ಅವಮಾನ ಅನಿಸುತ್ತಿತ್ತು. ಅದನ್ನ ಅಪ್ಪ ಅಮ್ಮನಿಗೆ ಹೇಳಿದರೆ `ನಮ್ಮ ಹಣೆಬರಾನೇ ಅಷ್ಟು ಮಗ ಯಾರಿಗೆ ಹೇಳಿಕೊಳ್ಲಿ ನಮ್ಮ ಗೋಳ್ನಾ ನಿನ್ನ ಓದಿನ ಗ್ಯಾನ ನಿಂಗಿರಲಪ್ಪ’ಅಂತ ಕಣ್ಣಿರಾಗಿಬಿಡುತ್ತಿದ್ದರು.  

ಈ ನಡುವೆ ಹಿಂಗೆ ಬಂದು ಹಂಗೆ ಹೋಗುತ್ತಿದ್ದ ಗೋಳುಗಳ ನಡುವೆ ತಿಂಗಳ ಹಿಂದೆ ಬೆದರಿಸಿದ್ದ ಗುಂಪಿನ ಕಾಟ ಬಿಟ್ಟೂಬಿಡದಂತಾಗಿತ್ತು. ಬದುಕಿನುದ್ದಕ್ಕೂ ಇಂಥದ್ದನ್ನು ಅನುಭವಿಸಿಕೊಂಡೇ ಬಂದಿದ್ದರಿಂದ ಒಂದಷ್ಟು ದಿನ ಹಂಗಾಡಿ ಸುಮ್ಮನಾಗುತ್ತಾರೆ ಅನ್ನುವುದು ಗುಡಾರದವರ ಅನಿಸಿಕೆಯಾಗಿತ್ತು. ಸಾಲದ್ದಕ್ಕೆ ಎಲ್ಲಿಗೋದರೂ ಈ ಗೋಳು ತಪ್ಪಿದ್ದಲ್ಲ ಹಂಗಾಗಿ ಅದನ್ನಿಲ್ಲೇ ಕಂಡುಂಡು ಬಿಡೋಣ ಅಂತಾನೂ ತೀರ್ಮಾನಿಸಿಕೊಂಡಿದ್ದರು. ಆದರದು ರಾಮಾಂಜಿಯನ್ನು ಆತಂಕದಲ್ಲಿಟ್ಟಿತ್ತು. ಒಂದು ಪಕ್ಷ ದಬಾದುಬಿಯಲ್ಲಿ ತಮ್ಮನ್ನು ಅಲ್ಲಿಂದ ಓಡಿಸಿದರೆ ತನ್ನ ಓದಿಗೆಲ್ಲಿ ಸಂಚಕಾರ ಬಂದುಬಿಡುತ್ತೋ ಅನ್ನುವ ಚಿಂತೆಗಟ್ಟಿತ್ತು. ಹಾಗಾಗದಿರಲಪ್ಪ ದೇವರೇ ಅಂತ ದಿನವೂ ಸಿದ್ದಪ್ಪನ ಗುಡಿಗೆ ಹೋಗಿ ಬೇಡಿಕೊಳ್ಳುತ್ತಿದ್ದ.  

ತಮ್ಮ ಗದರಿಕೆ ಬೆದರಿಕೆಗಳಿಗೆ ಗುಡಾರದವರು ಜಪ್ಪಯ್ಯ ಅನ್ನದೇ ಹೋಗಲು ಜಬರದಸ್ತಿಗಿಳಿದಿದ್ದ  ಮಂದಿಯ ಪಿತ್ಥ ನೆತ್ತಿಗೇರಿತ್ತು. ಇವರು ಹಿಂಗೆಲ್ಲಾ ಹೇಳಿದರೆ ಕೇಳಲ್ಲ ಅನ್ನೋದು ಅವರಿಗೆ ಮನದಟ್ಟಾಗಿಹೋಗಿತ್ತು. ಇದು ಕಾಡು ಇಲ್ಲಿ ನಾವಿರೋದರಿಂದ ಇವರಿಗೇನು ಕಷ್ಟ ಅಂತ ಆಗಾಗ ರಾಮಾಂಜಿಗೆ ಅನಿಸಿ ಅದನ್ನು ಗುಡಾರದವರಿಗೂ ರವಾನಿಸುತ್ತಿದ್ದ. ಆಗವರ ಮೌನ ಹಾಗೂ ಕಂಗಳೊಳಗಿನ ಅಸಹಾಯಕ ಭಾವಗಳು ಇಲ್ಲಿನ ಬದುಕು ತುಂಬಾ ದಿನ ತಡತ ಬರುವಂಥಾದ್ದಲ್ಲ ಅಂತ ರಾಮಾಂಜಿಗೆ ನಿಕ್ಕಿಯಾಗತೊಡಗಿತ್ತು. 

ಎರೆನೆತ್ತಿಯಲ್ಲಿ ಹತ್ತಾರು ವರ್ಷಗಳಿಂದಲೂ ಸುತ್ತಮುತ್ತಲ ಹಳ್ಳಿಗರಷ್ಟೇ ಅಲ್ಲದೆ ದೂರದ ಊರಿನವರೂ ತಮಗಿಷ್ಟ ಬಂದೆಡೆ ಸಾಗುವಳಿ ಮಾಡಿಕೊಂಡು ರಾಗಿ ಜೋಳ ಹಾರಕ ನವಣೆ ಅವರೆ ಬರಬತ್ತ ಮುಂತಾದ ಹೊಲದ ಬೆಳೆಗಳನ್ನಿಡುತ್ತಿದ್ದರು. ಒಂದಿಬ್ಬರು ತೆಂಗಿನ ಸಸಿಗಳನ್ನು ಏಳಿಸಿದ್ದರು. ಅವಾಗಲೇ ಪೈರಿಗೂ ಬಂದಿದ್ದವು. ಇವರೊಳಗೆ ಅಂಗೈಯಗಲ ನೆಲವಿಲ್ಲದವರೂ ಹತ್ತಾರು ಎಕರೆಗಳಿದ್ದವರೂ ಇದ್ದರು. ಸಾಗುವಳಿ ಮಾಡಿದ ಲಾಗಾಯ್ತಿನಿಂದ ತಂತಮ್ಮ ಹೆಸರಿಗೆ ಮಾಡಿಕೊಡುವಂತೆ ಸರ್ಕಾರಕ್ಕೆ ಒತ್ತಡ ಹಾಕುತ್ತಲೇ ಇದ್ದರು. ಆದರೂ ಸಾಗುವಳಿ ಚೀಟಿಗಳು ಸಿಕ್ಕಿರಲಿಲ್ಲ. ಇದನ್ನು ಕಂಡು ಅಲ್ಲಿ ಜಾಗ ಹಿಡಿಯದಿದ್ದವರು`ಈ ಜನ್ಮದಲಿ ಅದು ಅವ್ರಂತೇ ಆಗ್ಬುಟ್ರೆ ಥೂ ಕುರೋ ಅಂತ ಕರೀರಿ’ಅಂತ ಗೇಲಿ ಮಾಡುತ್ತಿದ್ದರು. ಯಾವಾಗ ಸರ್ಕಾರ ಅಕ್ರಮಗಳನ್ನು ಸಕ್ರಮ ಮಾಡುವ ಮಾತಾಡತೊಡಗಿತೋ ಅವರುಗಳ ಜೀವ ಒಮ್ಮೆಗೇ ಮಿಳ್ಳೆಂದಿತ್ತು. ತಾವೂ ಸುಮಾರು ವರ್ಷಗಳಿಂದ ಅನುಭವದಲ್ಲಿದ್ದೇವೆಂದೂ ತಮ್ಮದನ್ನೂ ಸಕ್ರಮ ಮಾಡಿಕೊಡಿ ಅಂತ ಅವರಂತೆಯೇ ಈ ಹಿಂದೆಯೇ ಅರ್ಜಿಗಳನ್ನು ಹಾಕಿದಂತೆ ಮಾಡಿಸಿ ಜಾಗದ ಹುಡುಕಾಟದಲ್ಲಿದ್ದರು. ಆಗವರ ಕಣ್ಣುಗಳನ್ನು ಕುಕ್ಕಿದ್ದೇ ಗುಡಾರಗಳಿದ್ದ ಜಾಗ. ಅವುಗಳಿದ್ದ ಒಂದಷ್ಟಾರದ ಗಿಡ ಗೆಂಟೆಗಳನ್ನು ಕಿತ್ತು ಒಪ್ಪ ಮಾಡಿಕೊಂಡದ್ದು ಬಿಟ್ಟರೆ ಮಿಕ್ಕಂತೆ ಕಾಡಾಗಿದ್ದರೂ ಹೆಚ್ಚು ತಗ್ಗು ದಿಣ್ಣೆಗಳಿರಲಿಲ್ಲ. ಗಿಡಗಳನ್ನು ಕಿತ್ತು ಒಂದೆರಡು ಸಾಲು ಉಕ್ಕೆ ಹೊಡೆದರೆ ಸಾಕೆಂಬುದು ಅವರ ಅಂದಾಜಾಗಿತ್ತು. 

ಅವರುಗಳ ಹುಡುಕಾಟದ ವಾಸನೆ ಸಿಕ್ಕುತ್ತಲೇ ಮುಂಚಿನ ಸಾಗುವಳಿದಾರರು `ನಾವಿದೀವಿ ಹೆದ್ರುಬ್ಯಾಡಿ. ಆ ಗೂಶ್ಲು ನನ್ಮಕ್ಳು ಏನೂ ಕಿತ್ಕಣಾಕಾಗಲ್ಲ. ಇದು ಯಾರಪ್ಪನ ಚಪ್ಪೋಡೂ ಅಲ್ಲ’ ಅಂತ ಗುಡಾರದವರಿಗೆ ಹಚ್ಚಿಕೊಡಲು ನೋಡಿದ್ದರು. ಆದರವರು`ಅಯ್ಯೋ ಚಾಮಿ ನಮ್ಗಿದೆಲ್ಲ ತಿಳೀವಲ್ದು’ ಅಂತ ಕಣ್ಣಿ ಎಸೆದಿದ್ದರು. ಹಂಗಾಗಿ ಗುಡಾರಗಳಿದ್ದ ಜಾಗ ಪೂರಾ ಗೋಮಾಳವಾಗಿದ್ದು ಸುತ್ತಲ ಹಳ್ಳಿಗಳ ಸಾವಿರಾರು ಜಾನುವಾರುಗಳಿಗೆ ಮೇವಿನ ತಾಣವಾಗಿದ್ದು ಅದನ್ನು ಯಾವುದೇ ಕಾರಣಕ್ಕೂ ಯಾರಿಗೂ ಪರಭಾರೆ ಮಾಡಕೂಡದೆಂದೂ ಒಂದೊಮ್ಮೆ ಮಾಡಿಕೊಟ್ಟಿದ್ದೇ ಆದಲ್ಲಿ ದನಕರು ಕುರಿ ಮೇಕೆಗಳ ಸಮೇತ ಬಂದು ಉಪವಾಸ ಕೂರುತ್ತೇವೆಂದೂ ಮೂಗರ್ಜಿಗಳ ಮೇಲೆ ಮೂಗರ್ಜಿಗಳನ್ನು ಬರೆಸಿದ್ದರು. ಈ ವಿಚಾರ ಹೊಸ ಸಾಗುವಳಿದಾರರ ಕಿವಿಗೆ ಮುಟ್ಟಿ ಇದು ಕುರ್ತೇಟು ಗುಡಾರದವರ ಒಳೇಟು ಇದಕ್ಕೆ ಎದುರಾಳಿಗಳ ಕುಮ್ಮಕ್ಕಿದೆ ಅನ್ನೋ ಅನುಮಾನವಾಡಿ ರೊಚ್ಚಿಗೆದ್ದು `ಅವ್ರುಗುಳ ಮಾತ್ಕಟ್ಕೆಂಡು ನಮ್ಗೇ ಆಟ ಹಾಕ್ತೀರೇನೋ ಸುವ್ವರ್ಗಳ ಅದೆಂಗೆ ಉಳ್ಕಂತೀರ ಇಲ್ಲಿ ನಾವೂ ಕಂಡ್ಮುಗಿತೀವಿ’ಅನ್ನುವ ಹಠಕ್ಕೆ ಬಿದ್ದಿದ್ದರು. ಆದರೂ ಪುಸುಕ್ಕನೆ ಗುಡಾರದವರ ತಂಟೆಗೆ ಹೋಗದೆ ಒಂದಷ್ಟು ದಿನ ಗಪ್ಪಾಗಿದ್ದರು. ಹೀಗೆ ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯುತ್ತಿರುವಂಥಾ ಹೊತ್ತಲ್ಲಿ ಇವರೀರ್ವರಿಗೂ ಗೂಟ್ನಾಮ ಬೀಳುವಂಥಾ ಸಂಗತಿಯೊಂದು ನಡೆದಿತ್ತು. ಅದೆಂದರೆ ಎರೆನೆತ್ತಿಯನ್ನು ಚೆಂಡು ಹೂವಿನ ಫ್ಯಾಕ್ಟರಿಯವರಿಗೆ ಇಪ್ಪತ್ತು ವರ್ಷಗಳ ಮಟ್ಟಿಗೆ ಸರ್ಕಾರ ಲೀಸ್ ಕೊಟ್ಟುಬಿಟ್ಟಿತ್ತು. ಈ ಹಿನ್ನೆಲೆಯಲ್ಲಿಯೇ ಹಿಂದಿನ ದಿನ ಎರೆನೆತ್ತಿಗೆ ಕಾರೊಂದು ಬಂದು ಹೋಗಿತ್ತು. ಆದರೆ ಈ ಗುದ್ದು ಒಳಗುದ್ದುಗಳ ಅರಿವಿಲ್ಲದಿದ್ದ ಗುಡಾರದವರು ಸಿದ್ದಪ್ಪ ದೇವರಿಗೆ` ಸಿದ್ದಪ್ಪ ನೀನೇ ಕಾಪಾಡಬೇಕಪ್ಪ’ಅಂತ ಕೈ ಮುಕ್ಕಂಡಿದ್ದರು.  

*  

ನಿನ್ನೆ ರಾತ್ರಿ ಅಲ್ಲಿ ಆನಾಡಿ ಸುರಿದಿದ್ದ ಮಳೆ ಎರೆನೆತ್ತಿಯ ಕಡೆ ಒಂದನಿಯೂ ಹನಿತಿರಲಿಲ್ಲ. ಎಲಾ ಮಾಯ್ಕಾರ ಮಳೆಯೇ ಅಂದುಕೊಂಡು ನಡೆಯುತ್ತಿದ್ದ ರಾಮಾಂಜಿ ತಿಟ್ಟೊಂದನ್ನು ಹತ್ತಿದರೆ ಗುಡಾರಗಳು ಸಿಗುತ್ತವೆ ಅನ್ನುವಾಗ ಎರೆನೆತ್ತಿ ಕಡೆಯಿಂದ ಪೊಲೀಸು ಜೀಪುಗಳೆರಡು ವಾಪಸ್ಸಾಗುತ್ತಿದ್ದದ್ದು ಕಂಡು ಭಯಗೊಂಡಿದ್ದ. ಇಷ್ಟೊತ್ತಿಗಾಗಲೇ ಮಗ್ಗಲು ಸಪ್ಪಿಗೆಂದೋ ಸೌದೆಗೆಂದೋ ಇಲ್ಲಾ ಗುಡಿಗೆಂದೋ ಜನರಿರಬೇಕಿತ್ತು. ಎತ್ತ ನೋಡಿದರೂ ಒಬ್ಬರೂ ಕಾಣದ್ದರಿಂದ ರಾಮಾಂಜಿಗೆ ಅನುಮಾನ ಮೂಡಿದರೂ ಅದರ ಬಗ್ಗೆ ಅಷ್ಟು ಯೋಚಿಸದೆ ಸ್ಕೂಲಿಗೆ ತಡವಾಗುತ್ತಿದ್ದುದರಿಂದ ಕಾಲಾದಿಯನ್ನೂ ಬಿಟ್ಟು ಅಕ್ರಮವಾಗಿ ಸಾಗು ಮಾಡಿದ್ದ ಹೊಲಗಳ ನಡುವೆ ಅಡ್ಡ ದಾರಿ ಹಿಡಿದಿದ್ದ. ಅವನನ್ನು ಕಾಣುತ್ತಲೇ ಎಲ್ಲಿದ್ದವೋ ಮೊಲಗಳು ಪಣ್ಣನೆ ಪೇರಿ ಕಿತ್ತಿದ್ದವು. ಅಡ್ಡಾಡುತ್ತಿದ್ದ ಜಿಂಕೆಗಳ ಹಿಂಡೊಂದು ಜಿಗಿದು ಕಣ್ಮಿಂಚಾಗಿತ್ತು. ಬಿಡುಬೀಸಾಗಿ ನೆಲದಲ್ಲಿ ಕೆದಕುವಾಟ ಆಡುತ್ತಿದ್ದ ಬೆಳವ ಗೊರವಂಕ ಪುಡ್ರಕ್ಕಿ ಗುಚನಚ್ಚಿ ಕಾಗೆಶಿಳ್ಳ ಮುಂತಾದ ಹಕ್ಕಿಗಳು ಪುರ್ರನೆ ಹಾರಿದ್ದವು. ಅವೆಲ್ಲಾ ರಾಮಾಂಜಿಯ ಮನವನ್ನು ಕೊಂಚ ಪುಳಕಗೊಳಿಸಿದ್ದವು. ಆದರೆ ಅದೇ ಹೊತ್ತಿಗೆ ಗಿಡುಗವೊಂದು ರಾಮಾಂಜಿಯ ಇರುವು ಲೆಕ್ಕಕ್ಕಿಲ್ಲ ಎಂಬಂತೆ ಅವನೆದುರಿಗೆ ಮತ್ಮತ್ತೆ ಸುತ್ತಾಕತೊಡಗಿದ್ದು ಯಾಕೋ ಪಿಚ್ಚೆನಿಸಿತ್ತು. ಅದನ್ನೂ ಅವನೊತ್ತಿದ್ದ ಭಾರವನ್ನೂ ಎರೆನೆತ್ತಿಯ ಕಡೆಯಿಂದ ತೀಡುತ್ತಿದ್ದ ತಂಗಾಳಿ ತಳ್ಳಾಕುತ್ತಿತ್ತು.    

ಇನ್ನೊಂದು ಹತ್ತೆಜ್ಜೆ ಹಾಕಿದರೆ ಗುಡಾರಗಳು ಕಾಣಿಸಿಬಿಡುತ್ತವೆ ಅನ್ನುವಾಗಲೂ ಅತ್ತಲಿಂದ ಯಾವೊಂದು ಸದ್ದೂ ಕೇಳದ್ದರಿಂದ ದಿಗಿಲುಗೊಂಡ ರಾಮಾಂಜಿ ಒಂದೇ ಉಸುರಿಗೆ ಓಡಿ ಎರೆನೆತ್ತಿಯಲ್ಲಿ ನಿಂತು ಅತ್ತ ನೋಡಿದ್ದ. ಅಲ್ಲಿ ಗುಡಾರಗಳೇ ಇರಲಿಲ್ಲ. ರಾಮಾಂಜಿಯ ಎದೆ ಧಸಕ್ಕೆಂದಿತ್ತು. ತಾನೇನಾದರೂ ಹಾದಿ ತಪ್ಪಿದೆನಾ ಅಂತ ಸುತ್ತಲೂ ಕಣ್ಣಾಡಿಸಿದ್ದ. ಇಳುಕಲಿನಲ್ಲಿದ್ದ ಮೇಕೆಯವರೆಲ್ಲಾ ಸೊಪ್ಪು ಸೆಣೆದು ಬರಡಾಗಿ ನಿಂತಿರುವ ಅದೇ ಮಾವಿನ ಮರ ಎದುರಿಗೆ ಕಾಣುವ ಅದೇ ಸಿದ್ದಪ್ಪನ ಗುಡಿ ಪೈರಿಗೆ ಬಂದಿದ್ದ ಅದೇ ತೋಟ ಎದುರಿಗಿದ್ದ ಅದೇ ದುಮ್ಕನ ಗುಂಡಿ...ಎಲ್ಲದೂ ಅದದೇ! ತಲೆಯ ಮೇಗಳ ಚೀಲವನ್ನಲ್ಲೇ ಬಿಸುಟು ರಾಮಾಂಜಿ ಒಂದೇ ಉಸುರಿಗೆ ಗುಡಾರಗಳಿದ್ದತ್ತ ಓಡಿದ್ದ.  

ಹಾಗೆ ಓಡುವಾಗ ರಾಮಾಂಜಿ ಎಡವಿ ಬಿದ್ದಿದ್ದ. ಆಗವನ ಮಂಡಿಗಳಿಗೆ  ನುಜ್ಜುಗಲ್ಲುಗಳುಜ್ಜಿ ತರಚಿಕೊಂಡು ರಕ್ತ ವಸರಿಸಿತ್ತು. ಮೇಲೇಳಲಾಗದಷ್ಟೂ ಗಾಬರಿಗೊಂಡು ಬಿದ್ದಲ್ಲಿಂದಲೇ ಗುಡಾರಗಳತ್ತ ನೋಡಿದ್ದ. ಗುಡಾರಗಳಿದ್ದೆಡೆಯಲ್ಲಿ ಬರೀ ಬೂದಿ ಗುಡ್ಡೆಗಳಿದ್ದವು. ಸೂಡಾಡುತ್ತಿದ್ದ ಸಂಕಟ ಗೋಳಾಟಕ್ಕೆ ತಿರುಗಿತ್ತು. ಹಂಗೇ ಗುಡಾರಗಳತ್ತ ತೆವಳಿದ್ದ. ಅಂಗಳದಲ್ಲಿದ್ದ ಹೊಂಗೆ ಹುಣಿಸೆ ಬೇವು ಬೇಟೆ ತರಾದ ಗಿಡಗಳು ಅರ್ಧಕ್ಕೇ ಚೆಂಡು ಮುರುಕಂಡು ಬಿದ್ದಿದ್ದವು. ಗುಡಾರಗಳನ್ನು ಆತುಕೊಂಡಿದ್ದ ಗಳಗಳು ಉರಿದು ಬೂದಿಯಾಗಿದ್ದವು. ನಜ್ಜುಗುಜ್ಜಾಗಿದ್ದ ಪಾತ್ರೆ ಪಗಡೆಗಳು ಬೆಂಕಿಯ ಹೊಡೆತಕ್ಕೆ ಕಪ್ಪಿಡಿದು ಹೋಗಿದ್ದವು. ನೀನೇ ಅನ್ನುವವರಿರಲಿಲ್ಲ.  

ಅತ್ತೂ ಅತ್ತು ಗಂಟಲು ಕಟ್ಟಿತ್ತು. ಬೀಸುತ್ತಿದ್ದ ಗಾಳಿಗೆ ಮೇಲೇಳುತ್ತಿದ್ದ ಬೂದಿ ರಾಮಾಂಜಿಯನ್ನೊಳಗೊಂಡಂತೆ ಸುತ್ತಲ ಮರಗಿಡಗಳ ಮೇಲೆ ಪವಡಿಸುತ್ತಿತ್ತು. ಏನೊಂದೂ ತೋಚದವನಾಗಿ ಅದೆಷ್ಟೋ ಹೊತ್ತು ಹಂಗೇ ಕೂತಿದ್ದ ರಾಮಾಂಜಿಗೆ ಇದ್ದಕ್ಕಿದ್ದಂತೆ ಟ್ರಂಕು ನೆನಪಾಗಿತ್ತು. ರಾಪಾಡುತ್ತಾ ತನ್ನ ಗುಡಾರವಿದ್ದ ತಾವಿಗೆ ತೆವಳಿದ ಬಿರುವಿಗೆ ರವಷ್ಟು ಗಪ್ಪಾಗಿದ್ದ ಬೂದಿ ಬಗ್ಗನೆದ್ದು ರಾಮಾಂಜಿಯನ್ನು ಪೂರಾ ಬೂದಿಮಯ ಮಾಡಿತ್ತು. ಟ್ರಂಕಿನ ಬಾಯಿ ಹಾರೊಡೆದಿತ್ತು. ಕೈಗೆಟಕುವ ದೂರದಲ್ಲಿದ್ದ ಅದನ್ನು ಕೂತಲ್ಲಿಂದಲೇ ಬಾಗಿ ಮೆಲ್ಲಗೆ ತನ್ನತ್ತ ಎಳೆದುಕೊಂಡು ಅದರೊಳಕ್ಕೆ ಕಣ್ಣಿಟ್ಟಿದ್ದ. ಅಲ್ಲಿ ಉರಿದು ಬೂದಿಯಾಗಿ ನಿಗತುಕೊಂಡಿದ್ದ ಮಾಕ್ರ್ಸ್ ಕಾರ್ಡ್ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮುಂತಾದವುಗಳನ್ನು ಕಾಣುತ್ತಲೇ ಮೈ ಪೂರಾ ಸ್ವಾಧೀನ ತಪ್ಪಿದಂತೆ ನಡುಗಲಾರಂಭಿಸಿತ್ತು. ಕೈ ಗಂಟಿದ್ದ ಬೂದಿಯೊಂದಿಗೆ ಎದೆಎದೆ ಬಡಿದುಕೊಂಡು ಹಂಗೇ ಟ್ರಂಕಿನ ಮೇಲೆ ಅನಾಮತ್ತಾಗಿ ಕುಸಿಯುತ್ತಿದ್ದವನಿಗೆ ಅಲ್ಲೇ ಹತ್ತಿರದಲ್ಲಿ ಅವ್ವ ಕೊಟ್ಟಿದ್ದ ಲಾಟೀನು ಕಣ್ಣಿಗೆ ಬಿದ್ದು ಒಡನೆ `ಅವ್ವಾ’ ಅಂತ ಕೂಗುತ್ತಾ ಎಚ್ಚರದಪ್ಪಿದ್ದ. 

ಮೊದಲೇ ಪೂರಾ ಬೂದಿಮಯವಾಗಿ ಹೋಗಿದ್ದ ರಾಮಾಂಜಿ ಯಾವಾಗ ಬಿದ್ದು ಒದ್ದಾಡ ಹತ್ತಿದನೋ ಮತ್ತೊಂದಷ್ಟು ಬೂದಿ ಮೇಲೆದ್ದು ಮತ್ತೂ ಕವುಕಂಡಿದ್ದರಿಂದ ಅವನಿಗೆ ಉಸಿರಾಡಲೂ ತ್ರಾಸವಾಗಿ ಒಂದೇ ಸಮಾ ಕೆಮ್ಮತೊಡಗಿದ. ಗಂಟಲ ಸೆರೆಗಳುಬ್ಬಿ ಅತ್ತೂ ಅತ್ತೂ ಬತ್ತಿ ಹೋಗಿದ್ದ ಕಂಗಳನ್ನು ಹೊಕ್ಕ ಬೂದಿ ಮಾಮೇರಿ ಉಲ್ಟಾಡತೊಡಗಿತು. ಕಣ್ಬಿಡಲೂ ಹೆಣಗಾಡುತ್ತಿರುವಂಥ ಘಳಿಗೇಲಿ ಎರೆನೆತ್ತಿ ಕಡೆಯಿಂದ ಸದ್ದೊಂದು ಎದ್ದು ಬುಗಿಲುಗೊಂಡು ಅತ್ತ ತಿರುಗಿ ಉಲ್ಟಾಡುತ್ತಿದ್ದ ಕಂಗಳನ್ನು ಒಂದೇ ಸಮಾ ಹೊಸಕಿಕೊಳ್ಳುತ್ತಾ ಈಟೀಟೇ ತೆರೆದು ಪುಸುಕ್ಕನೆ ಮುಚ್ಚಿಕೊಳ್ಳುತ್ತಿದ್ದ ಕಂಗಳೊಳಗೆ ಮಬ್ಬು ಮಬ್ಬಾಗಿ ಎರೆನೆತ್ತಿಯಿಂದ ಗುಡಾರಗಳ ಹಾದಿಗಿಳಿಯುತ್ತಿದ್ದ ಪೊಲೀಸ್ ಜೀಪು ಮೂಡತೊಡಗಿತು.  

ಎಸ್. ಗಂಗಾಧರಯ್ಯ

ಎಸ್. ಗಂಗಾಧರಯ್ಯ ಅವರು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಕಳ್ಳಿಯವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಮತಿಘಟ್ಟದ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅನೇಕ ಪ್ರಕಟಿತ ಕೃತಿಗಳು ಇಂದು ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಗಿವೆ.  ನವಿಲ ನೆಲ, ಒಂದು ಉದ್ದನೆಯ ನೆರಳು, ಇವರ ಕಥಾ ಸಂಕಲನಗಳು. ’ಬಯಲ ಪರಿಮಳ’ ಎಂಬ ವ್ಯಕ್ತಿಚಿತ್ರ ಸಂಪುಟವನ್ನು ರಚಿಸಿದ್ದಾರೆ. ವೈಕಂ ಅವರ ಕಥೆಗಳು, ಲೋರ್ಕಾ ನಾಟಕ,- ಎರ್‍ಮಾ, ವಿವಿಧ ಲೇಖಕರ ಕತೆಗಳು, ದಾರಿಯೋ ಫೋ ನಾಟಕ, ಚಿಂಗೀಝ್ ಐತ್ಮತೋವ್ ಕಾದಂಬರಿ ಜಮೀಲಾ, ಇವುಗಳನ್ನು ಕನ್ನಡೀಕರಿಸಿದ್ದಾರೆ. ಕುವೆಂಪು ಭಾಷಾಭಾರತಿಗಾಗಿ ’ಆಫ್ರಿಕನ್ ಸಾಹಿತ್ಯವಾಚಿಕೆ’, ಮತ್ತು ಡಾ. ರಾಮಮನೋಹರ ಲೋಹಿಯಾ ಮತ್ತು ಜಗಜೀವನರಾಂ ಸಮಗ್ರ ಕೃತಿಗಳಿಗಾಗಿ ಲೇಖನಗಳ ಅನುವಾದವನ್ನು ಮಾಡಿದ್ದಾರೆ. ಇವರ ’ವೈಕಂ ಕಥೆಗಳು’ ಕೃತಿಗೆ 1996 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಇವರಿಗೆ ಲಭಿಸಿದೆ. 

More About Author