Poem

ಉಪ್ಪಿಟ್ಟು

ಬಹುಶಃ ನಿನಗೆ ತಿಳಿದಿರಲಿಕ್ಕಿಲ್ಲ ಕಂದ;
ಅದು ಬಿಡುಗಾಸೂ ಇಲ್ಲದ ಹೊತ್ತು
ಸುಡುವ ಡಾಂಬರು ರಸ್ತೆಯ ಮೇಲೆ
ಮೂರು ಮೈಲಿ ಬರಿಗಾಲಲ್ಲಿ ನಡೆದಿದ್ದೆ
ಎಲ್ಲಿಗೆ ? ಶಾಲೆಗೆ

ಓದಲಿಕ್ಕೆಂದು ಕೊಂಡೆಯಾ ?
ಇಲ್ಲ ಕಂದ,
ಮಧ್ಯಾಹ್ನದ ಉಪ್ಪಿಟ್ಟಿಗೆ !

ಮನೆಯಲ್ಲಿ ನಾವು ಮೂರು
ಮಂದಿ ಮಕ್ಕಳು..
ಅಣ್ಣ ಎಮ್ಮೆ ಎಳೆದೊಯ್ಯುತ್ತಿದ್ದ
ಅಕ್ಕ ಪಾತ್ರೆ ತಿಕ್ಕುತ್ತಿದ್ದಳು
ನಾನೊಬ್ಬ ಶಾಲೆಗೆ ಅಲೆಯುತ್ತಿದ್ದೆ !

ಮಧ್ಯಾಹ್ನದ ಉಪ್ಪಿಟ್ಟು
ಘಮಲೇರುವವರೆಗೂ
ಹೊಟ್ಟೆ ಲಬಗುಡುತ್ತಿತ್ತು !
ಕೈ ಸೇರಿದರೆ ಸಾಕು;
ಕಾಲು ಅಲ್ಲಿಂದ ಪಾದವೇಳುತ್ತಿತ್ತು.

ಆಮೇಲಿನ ಪ್ರಶ್ನೆ
ನಿನ್ನ ಶಾಲೆ ಯಾರಿಗೆ ಬೇಕು ?
ಪಾಠ ಯಾರಿಗೆ ಬೇಕು ?
ಸದ್ಯಕ್ಕೀಗ ಹಸಿದವರ
ಹೊಟ್ಟೆ ತುಂಬಿಸಬೇಕು !

ಅದೊಂದೇ ಬಾಕ್ಸಿನ ಉಪ್ಪಿಟ್ಟು
ಮೂವರೂ ಒಗ್ಗೂಡುವವರೆಗೂ
ಕಾದಿರುತ್ತಿತ್ತು; ಕೂಡಿದೊಡನೆಯೇ
ನಿನ್ನಜ್ಜಿ ಕೈತುತ್ತು ನೀಡುತ್ತಿತ್ತು !

ಹಂಚಿ ಸವಿದು, ನೀರು ಕುಡಿದರೆ
ಮತ್ತೆ ಬೆಳಗಾದರೆ, ಅದೇ ಕಾಯಕ;
ಉಪ್ಪಿಟ್ಟಿಗಾಗಿ ಕಾಯುತ್ತಿದ್ದೆ
ಕಾದು ತರುತ್ತಿದ್ದೆ !

ಆದಾಗ್ಯೂ ನನ್ನೊಳಗೆ
ಪಂಪ ಪದವಾಡುತ್ತಿದ್ದ
ರನ್ನ ಗಧೆ ಬೀಸಿ ನಿಂತಿದ್ದ
ಕುಮಾರವ್ಯಾಸ ಕುಣಿದಾಡುತ್ತಿದ್ದ !

ಅಪ್ಪ ಕರೆದ ಹಾಲಿಗೆ
ತಿಂಗಳಿಗೆ ಒಂದೇ ರೂಪಾಯಿ !
ಅಪರೂಪಕ್ಕೆ ಬಟ್ಟೆ, ಬರೆ, ಉಡುಗೊರೆ !
ಗೋಟಿ, ಮಿಠಾಯಿ ಹೆಚ್ಚೆಂದರೆ.

ಕಷ್ಟದ ದಿನಗಳಿದ್ದವು ಕಂದ
ಕಟ್ಟಿಗೆಯ ಸೌದೆಯ ಜೊತೆ
ಹೊಗೆ ಕಾರಿ ನಿನ್ನಜ್ಜಿ ಸತ್ತಿದ್ದಳು;
ನನ್ನಪ್ಪ ಎದೆಯೊಡೆದು ಅತ್ತಿದ್ದ !

ಇಂದು ನಿನ್ನ ಪಾಲಿಗಿನ್ನೂ
ನಾವು ಬದುಕಿದ್ದೇವೆ;
ಹೀಗಾಗಿ ಉಪ್ಪಿಟ್ಟಿನ ಬೆಲೆ
ತಿಳಿದಿಲ್ಲ ಕಂದ ನಿನಗೆ !
ಈಗ ನಾವೂ...
ತಿಳಿಸಿ ಹೇಳಬೇಕಿದೆಯಷ್ಟೇ.

✍️ ಮನು ಗುರುಸ್ವಾಮಿ

 

 ಮನು ಗುರುಸ್ವಾಮಿ 

ಮನು ಗುರುಸ್ವಾಮಿ ಮೂಲತಃ ಮೈಸೂರು ಜಿಲ್ಲೆಯ ತಲಕಾಡಿನವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅವರು ಬೆಂಗಳೂರಿನ ಕೆ ಎಲ್ ಇ -ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ಆರಂಭಿಸಿದ ಇವರು ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ವಿದ್ಯಾವನ ಪಿಯು ಮತ್ತು ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ಅವಳೂ ಕತೆಯಾದಳು, ವ್ಯಭಿಚಾರಿ ಹೂವು, ಕಲ್ಲು ದೇವರು ದೇವರಲ್ಲ, ಗಾಂಧಿ ನೀ ನನ್ನ ಕೊಂದೆ  ಕೃತಿಗಳು ಪ್ರಕಟಣಾ ಹಂತದಲ್ಲಿವೆ. 

ಕೃತಿಗಳು : ನಿಬ್ಬೆರಗು

 

 

 

More About Author