Story

ವಿಧಿಯಾಟ

ವಿದ್ವಾನ್ ಮಂಜುನಾಥ್ ಎನ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಮಂಜುನಾಥ್ ಅವರು ಸಾಹಿತ್ಯದ ಜೊತೆಗೆ ಭರತನಾಟ್ಯ, ಸುಗಮ ಸಂಗೀತ, ಯಕ್ಷಗಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ‘ವಿಧಿಯಾಟ’ ಕತೆ ನಿಮ್ಮ ಓದಿಗಾಗಿ
"ನಾನಿನ್ನು ಎಷ್ಟು ಸಮಯ ಬದುಕಬಹುದು? ಹೆಚ್ಚೆಂದರೆ ಮೂರು - ನಾಲ್ಕು ತಿಂಗಳು ಅಂದಿರುವರು ಡಾಕ್ಟರ್. ಈ ಪ್ರಪಂಚವನ್ನು ಬಿಟ್ಟು ಹೋಗಲೇಬೇಕು ಎಂಬುದನ್ನು ನನ್ನಿಂದ ಒಪ್ಪಿಕೊಳ್ಳಲಾಗುತ್ತಿಲ್ಲ" ಎನ್ನುತ್ತಾ ಮನಸ್ಸಿನಲ್ಲೇ ತನ್ನ ಕೊರಗನ್ನು ಯಾರಿಗೂ ಹೇಳಿಕೊಳ್ಳಲಾಗದೇ ದಿನ ಕಳೆಯುತ್ತಿದ್ದ ಮದನ್.

ಮದನ್ ಹೆಸರಿಗೆ ತಕ್ಕಂತೆ ಮನ್ಮಥ ರೂಪ, ದುಂಡು ಮುಖ, ಬೆಕ್ಕಿನ ಕಣ್ಣುಗಳು, ಆಕರ್ಷಕ ಮೈಕಟ್ಟು, ಜೊತೆಗೆ ವ್ಯಾಯಾಮದ ಮೊರೆ ಹೋಗಿ ಕಟ್ಟುಮಸ್ತಾದ ಶರೀರವನ್ನು ಹೊಂದಿದ್ದ. ಇಂತಹ ಸದೃಢ ಶರೀರದ ಚೆಲುವನಿಗೆ ಕಾಲೇಜಿನ ದಿನಗಳಲ್ಲಿ ಅದೆಷ್ಟೋ ಪ್ರೇಮ ಪತ್ರಗಳು, ಪ್ರೇಮ ನಿವೇದನೆಗಳು. ಕಾಲೇಜಿನಲ್ಲಿ ಹಲವು ಹುಡುಗಿಯರು ಆತನ ಆಕರ್ಷಣೀಯ ವ್ಯಕ್ತಿತ್ವಕ್ಕೆ ಮರುಳಾಗಿದ್ದರು.

ಆದರೆ ಮದನ್ ತನ್ನ ಪ್ರೇಮದಿಂಗಿತವನ್ನು ವ್ಯಕ್ತಪಡಿಸಿದ್ದು ಮಾತ್ರ ರಿಷಿಕಾಳಿಗೆ. ರಿಷಿಕಾಳ ಪ್ರೇಮಪಾಶಕ್ಕೆ ಒಳಗಾದ ಮದನ್ ಆಕೆಯೊಂದಿಗೆ ಎಲ್ಲವನ್ನೂ ಹಂಚಿಕೊಂಡಿದ್ದ, ಆದರೆ ಅದನ್ನೊಂದು ಬಿಟ್ಟು. ಪ್ರೀತಿ ಎಂದಾದ ಮೇಲೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕಬೇಕಾದದ್ದು ಅನಿವಾರ್ಯ. ಮಾನಸಿಕವಾಗಿ ಒಂದಾಗಿದ್ದ ಮದನ್ ರಿಷಿಕಾ ದೈಹಿಕ ಪ್ರೇಮವನ್ನು ಬಯಸಿ ಒಂದು ಹೆಜ್ಜೆ ಮುಂದಿಟ್ಟಿದ್ದರು.

ಗಂಡು ಎಲ್ಲ ಕಳೆದುಕೊಂಡಿದ್ದರೂ ಏನೂ ನಡೆದಿಲ್ಲ ಎಂಬಂತೆ ಬದುಕಬಹುದು. ಆದರೆ ಹೆಣ್ಣಿಗೆ ಅದು ಸಾದ್ಯವಿಲ್ಲ, ಕೆಲವೊಂದು ಬಾಧಕಗಳಿರುತ್ತವೆ ಎಂಬುದು ರಿಷಿಕಾಳಿಗೆ ಅರ್ಥವೇ ಆದಂತಿರಲಿಲ್ಲ. ಹದಿಹರೆಯದಲ್ಲಿ ಅದು ಅರ್ಥ ಆಗುವುದಕ್ಕೂ ಸಾಧ್ಯವಿಲ್ಲ ತಾನೇ?! ಜೀವನದ ಹಂತವನ್ನು ತಾವೇ ಕ್ರಮಿಸಿ ಜೇನು- ದುಂಬಿಯಂತೆ ಆಗಿ ಹೋಗಿದ್ದರು ರಿಷಿಕಾ - ಮದನ್. ಪ್ರೇಮವನ್ನು ಎಷ್ಟು ಬೇಕೆಂದರೂ ನೀಡುವ ರಿಷಿಕಾ ಜೊತೆಗಿದ್ದರೂ ಮದನ್ ' ಆ' ನಿರ್ಧಾರವನ್ನು ಮಾಡಿಕೊಂಡು ಕೈ ಸುಟ್ಟುಕೊಂಡದ್ದು ಯಾಕೆಂದು ತಿಳಿಯದು.

ಆ ದಿನ ಮದನ್ ತನ್ನ ಮಿತ್ರನೊಬ್ಬನ ಸಂಬಂಧಿಕರ ಮದುವೆಗೆಂದು ಮುಂಬೈಗೆ ತೆರಳಿದ್ದ. ಸದಾ ಆತನೊಂದಿಗೆ ಇರುತ್ತಿದ್ದ ರಿಷಿಕಾ ಆತನನ್ನು ಕಳುಹಿಸಿಕೊಡಲು ಹೆಣಗಾಡುತ್ತಿದ್ದಳು. ಹೇಗೋ ಆಕೆಯನ್ನು ಒಪ್ಪಿಸಿ, ಮುಂಬೈಗೆ ತನ್ನ ಪ್ರಾಣ ಸ್ನೇಹಿತನೊಂದಿಗೆ ತೆರಳಿದ ಮದನ್. ಪ್ರಾಣ ಸ್ನೇಹಿತನೊಂದಿಗೆ ನಾವು ಎಲ್ಲವನ್ನೂ ಹಂಚಿಕೊಳ್ಳುತ್ತೇವೆ. ಮದನ್ ತನ್ನ ಜೀವದ ಗೆಳೆಯ ವಿಶ್ವಾಸನೊಂದಿಗೆ ಎಲ್ಲಾ ವಿಷಯವನ್ನು ಹಂಚಿಕೊಳ್ಳುತ್ತಿದ್ದ, ಆತನ ಮತ್ತು ರಿಷಿಕಾಳ ನಡುವಿನ ದೈಹಿಕ ಪ್ರೇಮವನ್ನೂ ಸಹ. ಅಷ್ಟರಮಟ್ಟಿಗೆ ಮದನ್ ಹಾಗೂ ವಿಶ್ವಾಸ್ ಒಬ್ಬರನ್ನೊಬ್ಬರು ಅರಿತುಕೊಂಡಿದ್ದರು. ಆದರೆ ಪ್ರಾಣ ಸ್ನೇಹಿತನ ಪ್ರಾಣಕ್ಕೆ ತನ್ನ ಒಂದು ತಪ್ಪು ನಿರ್ಧಾರದಿಂದ ಸಂಚಕಾರ ಬರಬಲ್ಲದು ಎಂಬ ಸಣ್ಣ ಸುಳಿವು ಇರಲಿಲ್ಲ ವಿಶ್ವಾಸನಿಗೆ.

ಮುಂಬೈ ಎಂದರೆ ಕೇಳಬೇಕೇ!ಮಹಾನಗರಿ. ಆಧುನಿಕತೆಯ ತುತ್ತ ತುದಿಯಲ್ಲಿ ಸಾಗುತ್ತಿರುವ ನಗರಿಯಲ್ಲಿ ಬೇಕಾದ ಎಲ್ಲವನ್ನೂ ಪಡೆದುಕೊಳ್ಳಬಹುದು, ನಮ್ಮ ಬಯಕೆಗಳನ್ನು ಯಾರ ಹಂಗಿಲ್ಲದಂತೆ ಈಡೇರಿಸಿಕೊಳ್ಳಬಹುದು. ದುಡ್ಡಿದ್ದರೆ ತಾಯಿಯನ್ನು ಬಿಟ್ಟು ಮತ್ತೆಲ್ಲವನ್ನೂ ಕೊಂಡುಕೊಳ್ಳಬಹುದು. ಮಹಾನಗರಿಗೆ ಮದುವೆಯ ಎರಡು ದಿನ ಮುಂಚಿತವಾಗಿಯೇ ಬಂದಿಳಿದಿದ್ದ ಮದನ್ ಹಾಗೂ ವಿಶ್ವಾಸ್ ಊರು ಸುತ್ತುವ ಆಸೆಯಲ್ಲಿದ್ದರು. ಮುಂಬೈಯ ಎಲ್ಲಾ ಪ್ರವಾಸಿ ತಾಣಗಳು, ಬೀಚ್ ಮತ್ತು ಕ್ಲಬ್ ಗಳನ್ನು ಸುತ್ತಿದ ಇವರು ಇಷ್ಟರಲ್ಲೇ ಮುಗಿಸುತ್ತಿದ್ದರೆ ಏನೂ ತೊಂದರೆ ಇರುತ್ತಿರಲಿಲ್ಲ. ಆದರೆ ವಿಶ್ವಾಸ್ ಮಾತಿನ ಮೇರೆಗೆ, ಮದನ್ ತೆಗೆದುಕೊಂಡ ಆ ಒಂದು ತಪ್ಪು ನಿರ್ಧಾರವೇ ಅವನ ಬದುಕನ್ನು ನರಕದತ್ತ ಕೊಂಡೊಯ್ಯಿತು.

"ಜೀವನ ಅಂದ ಮೇಲೆ ಎಂಜಾಯ್ ಮಾಡಬೇಕು ಕಣೋ. ನಾವು ಇಲ್ಲಿ ಏನು ಮಾಡುತ್ತಿದ್ದೇವೆ ಎಂದು ಊರಲ್ಲಿ ಯಾರಿಗಾದರೂ ತಿಳಿಯುತ್ತಾ?! ಇಲ್ಲ ತಾನೇ. ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳಬೇಕು. ಇವತ್ತಿಗೆ ಬದುಕುವುದೇ ಜೀವನ" ಎಂದು ಬದುಕಿನ ಪಾಠವನ್ನು ತಪ್ಪಾಗಿ ಹೇಳುತ್ತಿದ್ದ ವಿಶ್ವಾಸ್. ಅಷ್ಟಕ್ಕೂ 'ಎಂಜಾಯ್' ಎಂಬುದಕ್ಕೆ ಇವರು ಆರಿಸಿಕೊಂಡಿದ್ದು ಹೆಣ್ಣನ್ನು ಅನುಭವಿಸುವ ವಿಚಾರ. ಪ್ರಾರಂಭದಲ್ಲಿ ವಿಶ್ವಾಸ್ ಹೇಳಿದ್ದಕ್ಕೆ ಒಪ್ಪಿಕೊಳ್ಳದ ಮದನ್ ತನ್ನ ಪ್ರೇಯಸಿ ರಿಷಿಕಾಳ ಬಗ್ಗೆ ಯೋಚನೆ ಮಾಡಿದ್ದ. ಆದರೆ ನಂತರದಲ್ಲಿ ವಿಶ್ವಾಸ್ ಹೇಳಿದ್ದ ಮಾತುಗಳು ಆತನಿಗೆ ಪ್ರಿಯವೆನಿಸತೊಡಗಿದ್ದವು. 'ಕಾಮಾತುರಾಣಂ ನಾ ಭಯಂ, ನಾ ಲಜ್ಜಾ" ಎಂಬಂತೆ ಅಪ್ರಿಯವಾದ ವಿಚಾರಗಳೇ ಪ್ರಿಯವೆನಿಸಿ ಅದು ಬೇಕೆಂದು ಒಪ್ಪಿಕೊಳ್ಳುವುದು ಉಂಟು. ಮದನ್ ಹಾಗೂ ವಿಶ್ವಾಸ್ ಆ ಎಂಜಾಯ್ ಮಾಡೋಣವೆಂದು ಒಂದು ಹೆಜ್ಜೆ ಮುಂದೆ ಇರಿಸಿದರು. ಅವರನ್ನು ತಡೆಯುವವರು ಯಾರೂ ಇರಲಿಲ್ಲ.

ಮದುವೆ ಮುಗಿಸಿಕೊಂಡು ಊರಿಗೆ ಬಂದಿದ್ದ ಮದನನಿಗೆ ಒಂದು ತಿಂಗಳ ನಂತರ ತೀವ್ರ ಜ್ವರ, ಸುಸ್ತು, ವಾಂತಿ - ಭೇದಿ ಕಾಣಿಸಿಕೊಂಡಿತು. ಸದೃಢ ಶರೀರದ, ಕಟ್ಟು ಮಸ್ತಾದ ಯುವಕ ಹೀಗಾಗಿದ್ದು ಇದೇ ಮೊದಲು. ಮದ್ದಿನಿಂದಲೂ ಚೇತರಿಸಿಕೊಳ್ಳದ ಮಗನ ಅನಾರೋಗ್ಯ ಪೋಷಕರಲ್ಲಿ ದಿಗ್ಭ್ರಮೆ ಮೂಡಿಸಿತು. ತಕ್ಷಣ ಆಸ್ಪತ್ರೆಗೆ ತೆರಳಿ ಡಾಕ್ಟರರ ಸಲಹೆ ಮೇರೆಗೆ ಎಲ್ಲಾ ರೀತಿಯ ರಕ್ತ ಪರೀಕ್ಷೆ ಮಾಡಿಸಿದರು.

ಆ ದಿನವನ್ನು ಮದನ್ ಮರೆಯಲು ಸಾಧ್ಯವೇ ಇಲ್ಲ. ತನ್ನ ಜೀವನದ ದುರಂತ ಕ್ಷಣಗಳವು. ಕಹಿ ಸತ್ಯದಂತಿದ್ದವು ಡಾಕ್ಟರರ ಮಾತುಗಳು. ಪುಣ್ಯಕ್ಕೆ ಮದನ್ ತಂದೆ - ತಾಯಿ, ರಿಷಿಕಾ ಅಲ್ಲಿರಲಿಲ್ಲ. ಇದ್ದಿದ್ದು ಪ್ರಾಣ ಸ್ನೇಹಿತ ವಿಶ್ವಾಸ್. ವಿಶ್ವಾಸನಲ್ಲಿ ಡಾಕ್ಟರರು ವಿಚಾರವನ್ನು ತಿಳಿಸಿದರು. ವಿಶ್ವಾಸ್ ಒಪ್ಪಿಗೆ ಮೇರೆಗೆ ಮದನನನ್ನು ಕುಳ್ಳಿರಿಸಿಕೊಂಡು ಸಾಂತ್ವನದ ಮಾತುಗಳನ್ನು ಹೇಳುತ್ತಿದ್ದರು ಡಾಕ್ಟರರು. ಇವರೇಕೆ ನನಗೆ ಇಂತಹ ಮಾತುಗಳನ್ನು ಹೇಳುತ್ತಿದ್ದಾರೆ? ಸಾಮಾನ್ಯ ಜ್ವರ, ಸುಸ್ತಿಗೆ ಇಷ್ಟೊಂದು ಕಾಳಜಿಯೇ? ಎಂದೆನಿಸಿತು ಮದನನಿಗೆ. ಸಾಂತ್ವನದ ಮಾತುಗಳನ್ನು ಹೇಳುತ್ತಲೇ ಕೊನೆಯಲ್ಲಿ ಡಾಕ್ಟರರು ಹೇಳಿದ ಆ ಮಾತುಗಳು ಮದನನನ್ನು ಪಾತಾಳಕ್ಕೆ ತಳ್ಳಿತು- " ಮದನ್, ಭಯ ಪಡಬೇಡಿ. ನಿಮ್ಮ ಬ್ಲಡ್ ರಿಪೋರ್ಟ್ ಹೆಚ್ಐವಿ ಪಾಸಿಟಿವ್ ಎಂದು ಬಂದಿದೆ. ಇಂದು ಹಲವಾರು ಜನರು ಅದರೊಂದಿಗೆ ಬದುಕುತ್ತಿದ್ದಾರೆ. ನಿಮ್ಮ ಜೊತೆಗೆ ನಾವಿದ್ದೇವೆ" ಈಗ ಆತ ಕುಳಿತಲ್ಲೇ ಸ್ತಬ್ಧನಾಗಿದ್ದ. ಒಂದು ಕ್ಷಣ ಕೇಳಿಸಿಕೊಂಡ ಮಾತುಗಳೇ ಪ್ರತಿನಿಧಿಸಿದವು. ಹೆಚ್ಐವಿ ಪಾಸಿಟಿವ್ ಎಂದಾಕ್ಷಣ ಆತನ ಮನಸ್ಸಿಗೆ ಬಂದಿದ್ದು ತಂದೆ - ತಾಯಿ ಮತ್ತು ಪ್ರಿಯತಮೆ ರಿಷಿಕಾ. ಏನು ಹೇಳಲಿ? ಹೇಗೆ ಹೇಳಲಿ? ಎಂದೇ ಅರ್ಥವಾಗಲಿಲ್ಲ. ಇತ್ತ ವಿಶ್ವಾಸ್ ರಿಪೋರ್ಟ್ ನೆಗಟಿವ್ ಎಂದು ಬಂದಿತ್ತು.

ರಿಷಿಕಾಳಿಗೆ ತನ್ನ ಈ ವಿಚಾರವನ್ನು ಹೇಳುವ ಪ್ರತೀ ಪ್ರಯತ್ನದಲ್ಲೂ ವಿಫಲನಾದ ಮದನ್, ಆಕೆಯ ಮೇಲೆ ಉತ್ಕಟ ಪ್ರೇಮವಿದ್ದರೂ ಆಕೆಯನ್ನು ದೂರಮಾಡುತ್ತಾ ಬಂದ. ರಿಷಿಕಾಳ ತಂದೆಯ ಒತ್ತಾಯದ ಮೇರೆಗೆ ಆಕೆ ಬೇರೆ ಹುಡುಗನನ್ನು ಮದುವೆಯಾದಳು. ತಡೆಯುವ ಮನಸ್ಸಿದ್ದರೂ ಮದನ್ ಹೇಗೆ ತಡೆಯುತ್ತಾನೆ?!

ತಾನು ಮಾಡಿದ ಆ ಒಂದು ತಪ್ಪಿನಿಂದ ಪ್ರಾಣಕ್ಕೆ ಪ್ರಾಣವಾಗಿದ್ದ ರಿಷಿಕಾ ಯಾರದೋ ಪಾಲಾಗಿ ಹೋದಳು. ಇತ್ತ ಮದನ್ ಒಬ್ಬಂಟಿಯಾಗಿ ತಂದೆ - ತಾಯಿಗೂ ವಿಷಯವನ್ನು ತಿಳಿಸಲಾಗದೆ, ಸ್ನೇಹಿತ ವಿಶ್ವಾಸ್ ನೊಂದಿಗೆ ಮನದ ನೋವನ್ನು ಹಂಚಿಕೊಳ್ಳುತ್ತಾ, "ನಾನಿನ್ನೂ ಬದುಕಬೇಕು ಕಣೋ. ಏನಾದರೂ ಮಾಡೋ. ನನ್ನ ತಂದೆ - ತಾಯಿಯನ್ನು ನನ್ನ ನಂತರ ಯಾರೋ ನೋಡಿಕೊಳ್ಳುತ್ತಾರೆ. ಏನು ಮಾಡಲಿ?" ಎಂದು ಖಿನ್ನತೆಗೆ ವಾಲಿದ್ದ. ಇತ್ತ ವಿಶ್ವಾಸ್ ಪ್ರಾಣ ಸ್ನೇಹಿತನ ಮಾತನ್ನು ಕೇಳಿ, ತನ್ನ ಕೈಯಲ್ಲಿ ಏನೂ ಮಾಡಲಾಗುತ್ತಿಲ್ಲ, ನನ್ನಿಂದ ಇವನ ಜೀವನವೇ ಮಣ್ಣು ಪಾಲಾಯಿತು ಎಂದು ಮರುಗುತ್ತಿದ್ದರೆ, ಅತ್ತ ಮದನನ ತಂದೆ - ತಾಯಿ ಮದನನ ಒಂಟಿತನಕ್ಕೆ ಪೂರ್ಣ ವಿರಾಮವನ್ನಿಡಲು, ಹುಡುಕಿ ಮನೆಗೆ ಸೊಸೆಯನ್ನು ಬರಮಾಡಿಕೊಳ್ಳುವ ಸಿದ್ಧತೆಯಲ್ಲಿದ್ದರು.

ವಿದ್ವಾನ್ ಮಂಜುನಾಥ್ ಎನ್

ವಿದ್ವಾನ್ ಮಂಜುನಾಥ್ ಎನ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಮಂಜುನಾಥ್ ಅವರು ಸಾಹಿತ್ಯದ ಜೊತೆಗೆ ಭರತನಾಟ್ಯ, ಸುಗಮ ಸಂಗೀತ, ಯಕ್ಷಗಾನ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ವೃತ್ತಿಪರ ಭರತನಾಟ್ಯ ಕಲಾವಿದರಾಗಿ ಕಲ್ಬುರ್ಗಿಯಲ್ಲಿ ನೆಲೆಸಿದ್ದಾರೆ.

More About Author