Poem

ಯಾಶಿ 

ಯಾಶಿ ಎನ್ನ ಮನದನ್ನೆ
ನನ್ನ ಕವಿತೆಗಳ ರಾಯಭಾರಿ
ಇಂಥದ್ದೇ ಕನಸು ಬೀಳಬೇಕೆಂದು ನಿರ್ಧರಿಸುವ
ಪ್ರೀತಿ ಪಂಚಾಯ್ತಿಯ ಅಧ್ಯಕ್ಷೆ

ತಾಜ್ ಮಹಲ್ ಕಟ್ಟೆಂದು ಕೇಳುವುದಿಲ್ಲ
ಫಿಲ್ಮ್, ಪಾರ್ಕ್, ಶಾಪಿಂಗ್ ಇಷ್ಟಪಡುವುದಿಲ್ಲ
ಹೊಂಗೆಮರದ ತಂಪಿನ ಕೆಳಗೆ
ನಾಲ್ಕಾಣಿ ಪೆಪ್ಪರಮೆಂಟು ಚೀಪುತ್ತಾ..
ಬಾಹು ಬಂಧಿಸಿ ತಬ್ಬಿ ಮುದ್ದಾಡುತ್ತಾ..
ಎಲ್ಲ ಕಷ್ಟಗಳ, ತುಮುಲಗಳ ಹೇಳುವಾಸೆ ಅವಳಿಗೆ

ಕಾಲ್ಗೆಜ್ಜೆ ಸದ್ಧು
ಮೂಗುತಿಯ ಆಕಾರ
ಹಣೆಯ ಸಿಂಧೂರದ ಬಣ್ಣ
ಇಳ್ಕಲ್ ಸೀರೆಯ ವಿನ್ಯಾಸ ಆರಿಸಲು
ಎಲ್ಲಿಲ್ಲದ ಕಾತುರ ಅವಳಿಗೆ

ತಂದೆ ತಾಯಿ ಬಂಧು ಬಳಗ
ಆ ಬಡವೆಗೆ ಒಡವೆ
ಎಲ್ಲವೂ ಕವಿತೆ ಬರೆಯುವ ನಾನೇ..
ಆಗಾಗ ಅಳುತ್ತಾಳೆ
ನೋವಿಗೆ ಮರುಗುತ್ತಾಳೆ
ನಾನಿನಲ್ಲದ ಸಂಕಟವನ್ನು
ಬೇಸರದಲ್ಲಿ ವ್ಯಕ್ತಪಡಿಸುತ್ತಾಳೆ

ಯಾಶಿ ಸುಲಭಕ್ಕೆ ಸಿಗುವವಳಲ್ಲ
ಎಲ್ಲೋ ಹುಟ್ಟಿ ಎಲ್ಲೋ ಹರಿವ
ನದಿಯ ನೀರಂಗೆ
ಸ್ವಚ್ಚ ಮನದಿ ಹಚ್ಚ ಹಸಿರಿನ
ಭಾವ ಬೆಳೆದಂಗೆ
ಮೌನ ಮುರಿದು ಮಾತಾಗುವ ಮುತ್ತಂಗೆ
ನಗುತ್ತಾಳೆ ನೋವಿನಲ್ಲೂ
ಎಲ್ಲ ಮರೆತ ಬುದ್ಧನಂಗೆ

ಕವಿತೆ, ಸಂಗೀತ, ಪುಸ್ತಕವೆಂದರೆ
ನನಗಿಂತಲೂ ಹೆಚ್ಚು
ನನ್ನ ಸನಿಹ, ನನ್ನುಸಿರಿನ ಸ್ಪರ್ಶವೆಂದರೆ
ಎಲ್ಲಿಲ್ಲದ ಹುಚ್ಚು
ನನ್ನ ಏಕಾಂತವನ್ನು ಸಹಿಸದ
ನನ್ನ ತುಂಟಾಟಗಳನ್ನು ತುಂಡರಿಸುವ
ಬಲು ಚತುರೆ ಯಾಶಿ!

ಒಟ್ಟಿನಲ್ಲಿ
ಪ್ರೇಮದ ಇನ್ನೊಂದು ರೂಪ ಯಾಶಿ!

-ಅನಂತ ಕುಣಿಗಲ್

ಅನಂತ ಕುಣಿಗಲ್

ಅನಂತ (20-ಡಿಸೆಂಬರ್-1997) ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಕೆಂಚನಹಳ್ಳಿ ಗ್ರಾಮದವರು. ತಾಯಿ ಗೌರಮ್ಮ ಮತ್ತು ತಂದೆ ಶ್ರೀಮಾನ್ ಲೇ. ನರಸಯ್ಯ. ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ಪಡೆದ ನಂತರ ಚಿತ್ರದುರ್ಗ ಜಿಲ್ಲೆಯ ಸಾಣೆಹಳ್ಳಿಯಲ್ಲಿ ಥಿಯೇಟರ್ ಡಿಪ್ಲೊಮಾ ತರಬೇತಿ ಮುಗಿಸಿ, ಶಿವಸಂಚಾರ ರೆಪರೇಟರಿಯಲ್ಲಿ ನಟ ಹಾಗೂ ತಂತ್ರಜ್ಞನಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಕನ್ನಡ ಕಿರುಚಿತ್ರಗಳನ್ನು ನಿರ್ಮಿಸಿ, ಶಾಲಾ ಕಾಲೇಜು ಮಕ್ಕಳಿಗೆ ಕಿರು ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಅವ್ವ ಪುಸ್ತಕಾಲಯ ಎಂಬ ಸಾಹಿತ್ಯ ಬಳಗವನ್ನು ಕಟ್ಟಿಕೊಂಡು ಸಾಹಿತ್ಯ ಸೇವೆಯಲ್ಲಿ ನಿರಂತರಾಗಿರುವ ಇವರು ಸದ್ಯ ಬೆಂಗಳೂರಿನಲ್ಲಿದ್ದುಕೊಂಡು ಕನ್ನಡ ಚಲನಚಿತ್ರಗಳಲ್ಲಿ ಬರಹಗಾರ ಹಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರರ ಚೊಚ್ಚಲ ಕೃತಿ ಬಹುಮಾನ, ಶ್ರೀ ಹೆಬ್ಬಗೋಡಿ ಗೋಪಾಲ್ ದತ್ತಿ ಪುರಸ್ಕಾರ, ಗುರುಕುಲ ಸಾಹಿತ್ಯ ಸೌರಭ ಪ್ರಶಸ್ತಿ, ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ವತಿಯಿಂದ ನೀಡುವ ರಾಜ್ಯ ಯುವ ರತ್ನ ಪ್ರಶಸ್ತಿ ಸೇರಿದಂತೆ ಬುಕ್ ಬ್ರಹ್ಮ ಕಥಾ ಹಾಗೂ ಕವನ ಬಹುಮಾನಗಳೂ ಸಂದಿವೆ. 

ಪ್ರಕಟಿತ ಕೃತಿಗಳು : ಋಣಭಾರ (ಕಥಾಸಂಕಲನ), ಮೂರನೆಯವಳು (ಕವನಸಂಕಲನ), ರೌದ್ರಾವರಣಂ (ಕಾದಂಬರಿ). 
 

More About Author