Poem

ಯಾವ ಕುತೂಹಲವೂ ಇಲ್ಲ

ದಾರಿ ತುದಿಯ ತಿರುವಿನಲ್ಲಿ
ಅರೆ ಕ್ಷಣದಲ್ಲಿ ಮರೆಯಾದ
ಯಾವುದೋ ನೆರಳು

ಈಗಷ್ಟೆ ಎಚ್ಚರಗೊಂಡು
ಬಾಗಿಲು ತೆರೆದ ನನಗೆ,
ಯಾರಿರಬಹುದೆನ್ನುವುದು ಪ್ರಶ್ನೆಯಷ್ಟೆ!
ಯಾವ ಕುತೂಹಲವೂ ಇಲ್ಲ

ನಿನ್ನೆಯಿಡೀ ಕಾದು ನಿರಾಸೆಗೊಂಡ
ನನ್ನ ಕಣ್ಣು ತಪ್ಪಿಸಿದ ಹೂವು,
ಯಾವಾಗ ಅರಳಿತೆನ್ನುವುದು ಪ್ರಶ್ನೆಯಷ್ಟೆ!
ಯಾವ ಕುತೂಹಲವೂ ಇಲ್ಲ 

ಗಮನವಿಟ್ಟು ಬಿಡಿಸಿದ
ರಂಗೋಲಿಯಾದರೂ
ಅಷ್ಟು ಸಮಾಧಾನವಿರಲಿಲ್ಲ
ಇಂದೇಕೋ‌ ಒಂದೊಂದು
ಎಳೆಯಲ್ಲು ಮಂದಹಾಸ,
ಏಕಿರಬಹುದೆನ್ನುವುದು ಪ್ರಶ್ನೆಯಷ್ಟೆ!
ಯಾವ ಕುತೂಹಲವೂ ಇಲ್ಲ

ಜೀವಕಳೆದ ಮರದಂತಿದ್ದ
ಬಾಗಿಲಿನ ಹೊಸ್ತಿಲು
ಜೀವಕಳೆ ತುಂಬಿಕೊಂಡು
ಸಣ್ಣಗೆ ಏನನ್ನೋ ಗುನುಗುತ್ತಿದೆ,
ಏನಿರಬಹುದೆನ್ನುವುದು ಪ್ರಶ್ನೆಯಷ್ಟೆ!
ಯಾವ ಕುತೂಹಲವೂ ಇಲ್ಲ

ದೂರದಿಂದ ಹಾದು ಬಂದ
ತಂಗಾಳಿಯನು ಮಾತನಾಡಿಸಿ
ತಿರುವಿ‌ನ ನೆರಳ ದಾರಿ ಹುಡುಕುವುದು
ಕಷ್ಟದ ಕೆಲಸವೇನಲ್ಲ

ಬೇಕೆಂದೇ ಉಳಿಸಿಕೊಂಡ
ಕುತೂಹಲ-ಪ್ರಶ್ನೆಗಳಿಗೆ
ಆಯಸ್ಸೆಂಬುದಿಲ್ಲವಂತೆ,
ವಯಸ್ಸಾಗುವುದಿಲ್ಲವೆಂಬ
ಕಾರಣವಿರಬಹುದು

ಬಾಗಿಲಿನೊಳಗೆ
ನಾನಿರುವೆನೋ? ಇಲ್ಲವೊ?
ಎಂಬ ಕುತೂಹಲ
ನೆರಳಿನದು,
ಕತ್ತಲು-ಬೆಳಕಿನಲೂ
ನೆರಳಿನೊಳಗೆ
ನಾ ಕರಗಿರುವೆನೆಂಬ
ನಂಬಿಕೆ,ನನ್ನದು

ಆಡಿಯೋ
ವಿಡಿಯೋ

ಭವ್ಯ ಕಬ್ಬಳಿ

ಭವ್ಯ ಕಬ್ಬಳಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದವರು. ಎಂಜಿನಿಯರಿಂಗ್ ಪದವೀಧರರಾದ ಅವರು ಜನರಲ್ ಎಲೆಕ್ಟ್ರಿಕ್ ಕಂಪೆನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆಗಳ ಬರಹ ಮತ್ತು ಓದು ಅವರ ಇಷ್ಟದ ಹವ್ಯಾಸ.

More About Author