Poem

ಯಾರು ದೇವರು

ಛಿದ್ರರಾದರು ಜೇರುಸಲೇಂನ ಬಾಂಬ್ ದಾಳಿಗೆ,
ಹತರಾದರು ಮೆಕ್ಕಾದ ಕಾಲ್ತುಳಿತಕ್ಕೆ;
ಬಲಿಯಾದರು ಅಮರನಾಥದ ಹಿಮ ಮಳೆಗೆ.
ನಶಿಸಿದರು ; ಕಾಣದ ದೇವರುಗಳ ಆಶಿಸಿ ಬಯಸಿ ಹೋದವರು.
ಕೇಳದೇ ಎಲ್ಲಾ ಕೊಡುವ ಪಕೃತಿ ; ನನ್ನ ದೇವರು...

ನಾನೊಂದು ಗಿಡ ನೆಟ್ಟೆ,
ಅದು ನನ್ನ ದೇವರು!
ಅದಕ್ಕೊಂದು ಮುಳ್ಳಿನ ಗೂಡು ಕಟ್ಟಿದೆ ;
ಅದು ನನ್ನ ಇಗರ್ಜಿ, ಮಸೀದಿ, ಮಂದಿರ
ನಾನದಕ್ಕೆ ನೀರಾಕಿದೆ ಅದು ಅಭಿಷೇಕ,
ಗೊಬ್ಬರವಾಕಿದೆ ಅದು ನೈವೇದ್ಯ,
ಮಾತಾನಾಡಿದೆ ಅದು ನಮಾಜ್,
ಧ್ಯಾನಸ್ಥನಾಗಿ ಕುಳಿತೆ ಅದು ಭಾನುವಾರದ ಪ್ರಾರ್ಥನೆ...

ತಲುಪಿರಬೇಕು ಅದಕ್ಕೆ ನನ್ನ ಪ್ರಾರ್ಥನೆ, ನನ್ನ ನಮಾಜ್ , ನನ್ನ ಪೂಜೆ..
ಬೆಳೆಯುತ್ತಿದೆ ನನ್ನ ದೇವರು . ಬೆಳೆದು ದೊಡ್ಡದಾಗುತ್ತಿದೆ.
ನನ್ನ ಭಕ್ತಿಗೆ ಮೆಚ್ಚಿದ ನನ್ನ ದೇವರು
ಈಗ ಪ್ರತಿದಿನ ಪ್ರತಿಫಲ ಕೊಡುತ್ತಿದ್ದಾನೆ.
ತಿನ್ನಲು ಹಣ್ಣು ,ಕಾಯಿ ಕೊಟ್ಟು ಹೊಟ್ಟೆ ತುಂಬಿಸಿದ್ದಾನೆ..
ಶುದ್ಧ ಗಾಳಿ ಕೊಟ್ಟಿದ್ದಾನೆ,, ನೆರಳು ನೀಡಿದ್ದಾನೆ,,
ಮಳೆ ತರುತ್ತಿದ್ದಾನೆ...

ಯೋಚಿಸಿ ನೋಡಿ
ಜಗದ ಅಂಗಡಿಗಳೆಲ್ಲಾ ನಿಂತು ಹೋಗಿ
ದಿನಸಿ, ತರಕಾರಿ ,ಹಣ್ಣು ಸಿಗದಾಗಿ;
ತಿನ್ನಲು ಎಲ್ಲೂ ಏನೂ ದೊರೆಯದಾಗಿ ಹೋದರೆ !?
ನಿಮ್ಮ ಇಗರ್ಜಿ ,ಮಸೀದಿ, ಮಂದಿರಗಳು ಬಾಗಿಲು ಹಾಕಿದರೆ,,?
ಬನ್ನಿ ನನ್ನ ದೇವರಿದ್ದಾನೆ ;ಹಣ್ಣು ಕೊಡುತ್ತಾನೆ ಹಂಚಿ ತಿನ್ನೋಣ...

ನನ್ನ ಜಮೀನು ನನಗೆ ಜೇರುಸಲೆಂ,
ನನ್ನ ಮನೆ ನನಗೆ ಮೆಕ್ಕಾ,
ನನ್ನ ತೋಟ ನನಗೆ ತಿರುಪತಿ..
ತೋಟದ ತಿರಗಾಟವೇ ತೀರ್ಥಯಾತ್ರೆ,
ಗಿಡ, ಮರ ,ಬಳ್ಳಿ, ಸೂರ್ಯ , ಚಂದ್ರ, ಮಳೆ , ನನ್ನ ದೇವರುಗಳು...
ನಾನು ಆ ಪ್ರಕೃತಿಯ ಶಿಶು...

- ಯಗಟಿ ಸತೀಶ್

ವಿಡಿಯೋ
ವಿಡಿಯೋ

ಯಗಟಿ ಸತೀಶ್

ಯಗಟಿ ಸತೀಶ್‌ ರವರು  ಕರ್ನಾಟಕದ ಯಗಟ್ಟಿಯವರು. ಶರಣ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿಕೊಂಡವರು. ವೃತ್ತಿಯಲ್ಲಿ ಶಿಕ್ಷಕರಾಗಿ, ಸಾಹಿತ್ಯ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿದ್ದಲ್ಲದೇ ಶರಣ ಸಾಹಿತ್ಯ ಪರಿಷತ್ತಿನ ಸಂಘಟನೆ ಮತ್ತು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗೂ ವಚನಗಳ ರಚನೆಯನ್ನು  ಮಾಡಿದ್ದಾರೆ. 

More About Author