Poem

ಯಶೋಧರೆಗೆ

ಹಡೆದ ನೋವಿಗೆ ನರಳಿ ನಿದ್ದೆಹೋಗಿದ್ದ ನಿನ್ನ ದಿವ್ಯಕತ್ತಲಿಗೇನು ಗೊತ್ತಿತ್ತು
ನಿನ್ನೊಳಗಿದ್ದ ನವಜೀವಕ್ಕೆ ಕಾರಣನಾಗಿ ಅದೇ ಕತ್ತಲಲ್ಲಿ
ನಿನಗೆ ಹೇಳದೆಯೂ ಹೊರಟುಬಿಟ್ಟ ಅವನ ಅಜಾತ, ಅಮರ್ತ್ಯ, ಅನಂತ ಬೆಳಕಿನ ಹುಡುಕಾಟ?
ಪರಿತ್ಯಜಿಸಿದವನ ಪ್ರಜ್ಞಾಶೂನ್ಯಳಾಗಿ ಶಪಿಸಲಿಲ್ಲ
ಬೆಳೆವ ಕಂದನ ಹಾಲುಮನಸಿಗೆ ಹಗೆಯ ಹುಳಿ ಹಿಂಡಲಿಲ್ಲ
ಮತ್ತ್ಯಾವುದೋ ಹೊಸ ಬಾಳ್ವೆಯ ಭಾಷೆಕೊಡಲು ಬಂದವರ ನಿಂದಿಸಲಿಲ್ಲ, ಆದರಿಸಲೂ ಇಲ್ಲ
ಆ ರಾತ್ರಿಯ ನೀರವ ನಿನ್ನ ಸ್ಥಿರಸಂಗಾತಿಯಾಗಿಬಿಟ್ಟಿತ್ತಾ?
ಇಡೀ ಜಗತ್ತಿನಲ್ಲೇ ಅವನ ಶಾಂತಿಸಂದೇಶದ ಅಬ್ಬರ ಹಬ್ಬುವಾಗ ನಿನ್ನ ಮೌನ ಯಾರಿಗೆ ಬೇಕಿತ್ತೇ?
ನಿನ್ನ ಕಂದ ಅದೆಷ್ಟು ಸಲ ಅವನ ಹಂಬಲಿಸಿ ಅಕ್ಕರೆಗೆ ಹಾತೊರೆದು ಕಣ್ಣೀರಿಟ್ಟನೋ ಯಾರು ಬಲ್ಲರು?
ಕಡೆಗೆ ಅವನೆಂದೋ ಮರಳಿದಾಗ ಅವನ ಹಿಂದೆ ನಡೆದು ನೀನೂ ಬೈರಾಗಿಯಾಗಿಬಿಟ್ಟೆಯಂತೆ
ನಿನ್ನ ಸ್ವಾಮಿನಿಷ್ಠೆಯನ್ನೇನೋ ಕೊಂಡಾಡುವವರು ಹಲವರಿದ್ದಾರೆ
ಜಗತ್ತಿಗೆ ಸರಾಗ ಸತ್ಯ ಬೇಕು
ನಂಬಿಕೆ ನೇತುಹಾಕಿ ನಿರಾಳವಾಗಲು ಪುರಾಣ ಬೇಕು, ತೇಜೋವದನರಾದ ಪುರಾಣಪುರುಷರು ಬೇಕು
ಜ್ಞಾನೋದಯ ಬೇಕು
ಬುದ್ಧ ಬೇಕು
ನನಗೇಕೋ ಹೊರಳಿ ನೋಡದೇ ನಡೆದುಹೋದ ಸಿದ್ಧಾರ್ಥನ ಹೆಜ್ಜೆಗುರುತಿನ ಮೇಲೆ ಬಿದ್ದ ನಿನ್ನ ಕಣ್ಣೀರಿನ ಮೌನದಲ್ಲೇ ಕಥೆ ಮುಗ್ಗರಿಸುತ್ತದೆ
ಅವನಿಗೇನೋ ಪರಿನಿರ್ವಾಣದ ಸ್ಪಷ್ಟಾಂತ್ಯ
ನಿನ್ನ ಕಥೆಗೆ ಕಿವಿಯಾಗುತ್ತೇನೆಂದರೂ ನಿಖರನಿಲುವಿನ ಕೆಚ್ಚಿನಿಂದ ಹೇಳುವವರಾರಿದ್ದಾರೆ?

- ಸೌರಭ ರಾವ್

ವಿಡಿಯೋ
ವಿಡಿಯೋ

ಸೌರಭ ರಾವ್

ಸೌರಭ ರಾವ್ ಅವರು ಬೆಂಗಳೂರಿನಲ್ಲಿ ವಾಸ್ತವ್ಯವಿದ್ದಾರೆ. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದ್ದು, ಕವನ, ಕಲೆ ಹಾಗೂ ವನ್ಯಜೀವಿ ಕುರಿತ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಸಂವಹನ ವ್ಯವಸ್ಥಾಪಕಿಯಾಗಿದ್ದಾರೆ. 

More About Author