Poem

ಏನೆಂದು ಹೇಳಲಿ

ನಮ್ಮಾತ್ಮಸಾಕ್ಷಿಗಳಲಿ ಲೀನವಾಗಿಹ ಅವಳ ಮೊರೆಯನು.
ಏನೆಂದು ಹೇಳಲಿ ನಾ?
ನಿರಂತರವಾಗಿ ಹರಿವ ಕಾಲದ ನದಿಯಲಿ,
ಕೈಗೂಡಿದ ಕರ್ಮಗಳ ಸಾಲಿನಲಿ,
ಜನಿಪ ವಿಸ್ಮಯವಿದೆಂದು ಪರಿಚಯಿಸಲೇ?

ಸನ್ನಿವೇಶಗಳ ಸಂಧಿಯಲಿ ಸಿಲುಕಿ,
ಅಪರಿಮಿತ ಭಾವ ಸಮ್ಮಿಳನದಲಿ ನಿಲುಕಿ,
ನೂರು ವೇಷಗಳಾದರೂ ಮೊಗವೊಂದೇ,
ಪರಿಚಿತನಾಗಿಯೂ ಅಪರಿಚಿತನೆಂದೆನಲೇ?

ಕಾವ್ಯ ಕಮ್ಮಟಗಳಲಿ ಸಾಗಿ,
ಹೊತ್ತಿಗೆಯ ಅಕ್ಷರಗಳಲಿ ತಿರುಗಿ,
ಓದುಗನೆದೆಯಲಿ ಬೆಚ್ಚನೆ ಅವಿತು ಕೂತ,
ಉದಯೋನ್ಮುಖ ಕವಿ ನಾನೆನ್ನಲೇ?

ಸಂದಭೋ೯ಚಿತವಾದ ಕಥಾಹಂದರಗಳನು,
ತಿಳಿಯಾದ ತಳಿರಿನಲಿ ಹೆಣೆದು,
ಲೇಖಕನೋನ್ಮಾದಕೆ ಮಣಿದು,
ದೃಶ್ಯಗಳಲಿ ಸಂಕಲಿಸುವ ನಿರ್ದೇಶಕ ನಾನೆನಲೇ?

ಸ್ಥಾವರ ಗುಡಿಯಲಿ,
ಚಿರಜಂಗಮ ಚೇತನವರಸಿ,
ಪ್ರತಿ ಸಂಜೆಯೂ ಲೇಖನ ತೀಡಿದ,
ಅಲೆಮಾರಿಯನ್ವೇಷಕ ನಾನೆನಲೇ?

ನಿನ್ನೆಗಳ ನೆನಪಲಿ, ನಾಳೆಗಳ ಕನಸಲಿ,
ನಿತ್ಯವೂ ನೂತನವಾಗಿಹ ಬಾಳ ತೂಗುಯ್ಯಾಲೆಯಲಿ,
ಸಮ್ಮಿಳಿತ ಬಾಂಧವ್ಯಗಳಲಿ,
ನಿಮ್ಮೆಲ್ಲರ ಸಹಪಾಠಿ ನಾನೆನಲೇ?

ಗುರಿಮುಟ್ಟುವವರೆಗೂ ನಿಲ್ಲದೇ ಓಡುತ,
ನಾನು ನೀನೆನ್ನದೆ, ಅವರು ಇವರೆನ್ನದೆ,
ಅಂತರಂಗದ ಜ್ಞಾನದಾಹಕೆ,
ಮನದ ಕಿಟಕಿಗಳನೆಲ್ಲ ತೆರೆಯುತ,

ನನ್ನೊಳು ನಾನಾಗಿ,
ಹಳೆ ಬೇರುಗಳ ಮಧ್ಯೆ ನವಚಿಗುರಿನಂತೆ ಬಾಗಿ,
ದೇಶಕಾಲಾತೀತಳಾದ ಭಾರತಿಯ ಮಡಿಲಲಿ,
ಅನನ್ಯ ಹಣತೆಯಾಗಿ ಅನುಗಾಲವೂ ಬೆಳಗುವಾಸೆ.

ಬನ್ನಿರೆಲ್ಲ! ಕಟ್ಟುವನೀ ನಾಡನು,
ಆಲಿಸಿಯನೂಹ್ಯದನಿಯ ಜಾಡನು,
ಜಗದುತ್ತುಂಗಕೆನ್ನೆಂದು ಕರೆದೊಯ್ಯುವಿರೆನ್ನುತ,
ನಮ್ಮಾತ್ಮಸಾಕ್ಷಿಗಳಲಿ ಲೀನವಾಗಿಹ ಅವಳ ಮೊರೆಯನು.

- ಸೋಮೇಶ್ವರ ಗುರುಮಠ

ಸೋಮೇಶ್ವರ ಗುರುಮಠ

ಸೋಮೇಶ್ವರ ಗುರುಮಠ ಅವರು ಲೇಖಕ, ಕಿರುಚಿತ್ರ ನಿರ್ದೇಶಕ, ಹಾಡುಗಾರ, ಕವಿ, ನಿರೂಪಕ, ಅಂಕಣಗಾರ ಹಾಗೂ ನಟನಾಗಿ ಗುರುತಿಸಿಕೊಂಡವರು. ಈಗಾಗಲೇ 'ನಾನು ನನ್ನ ಜಗತ್ತು', 'ಪಯಣಿಗನ ಕಾವ್ಯಗಳು' ಮತ್ತು 'ಅನನ್ಯ ನಮನಗಳು' ಎಂಬ ಮೂರು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ತಮ್ಮ ಬರವಣಿಗೆಯ ಮೂಲಕ ವಿಭಿನ್ನ ಛಾಪನ್ನು ಸಾಹಿತ್ಯ ಲೋಕದಲ್ಲಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ.

More About Author