Article

ಆಡು ಕಾಯೋ ಹುಡುಗನ ದಿನಚರಿ

ಗ್ರಾಮೀಣ ಬದುಕು ಬವಣೆಗಳನ್ನು ತಮ್ಮ ಸಹಜ ಸರಳ ಭಾಷೆಯಲ್ಲಿ ಸೆರೆಹಿಡಿಯುವಲ್ಲಿ ಟಿ.ಎಸ್. ಗೊರವರ ನಿಸ್ಸೀಮರು. ಹಳ್ಳಿಗಾಡಿನ ಬಾಲ್ಯದ ಜೀವನವನ್ನು ಜೇನು ಬಿಡಿಸಿ ಉಣಬಡಿಸುವ ಜೇನುಕುರುಬನ ಕೆಲಸವನ್ನು ಗೊರವರ ಅವರು ತಮ್ಮ'ಆಡು ಕಾಯೋ ಹುಡುಗನ..' ಮೂಲಕ ಮಾಡಿದ್ದಾರೆ. ಇದು ಕೇವಲ ಗೊರವರ ಅವರ ಕಥೆಯಾಗದೇ, ಹಳ್ಳಿ ಹಳ್ಳಿಯಲ್ಲೂ ಹುಟ್ಟಿ ಬೆಳೆದ ’ಹಳ್ಳಿ ಹೈದರ್"ಗಳ ಐತಿಹಾಸಿಕ ಚರಿತ್ರೆಯೇ ಎನ್ನಬಹುದು. ಕತ್ತಲ ಬದುಕು ಸಾಗಿಸುವ ಹೆತ್ತವರು, ಜ್ಞಾನ ದೀವಿಗೆಯ ತೋರುವ 'ಹಳ್ಳಿ-ಮೇಷ್ಟ್ರ'ಗಳು ಈ ಗ್ರಾಮೀಣ ಜೀವನದ ಅವಿಭಾಜ್ಯ ಅಂಗಗಳು.

ಬಾಲ್ಯದ ಲೀಲೆಗಳನ್ನು ಗೊರವರ ಅವರ ಪದಗಳಲ್ಲಿ ಹೇಳುವುದಾದರೆ.... " ನಾನು ಕ್ಲಾಸು ತಪ್ಪಿಸುತ್ತಿರುವುದನ್ನು ನಿಮ್ಮಪ್ಪನಿಗೆ ಹೇಳುತ್ತೇನೆಂದು ಪಕ್ಕದ ಮನೆಯ 'ಹಡುಗ' ಗೆಳೆಯ ಧಮ್ಕಿ ಹಾಕ್ತಿದ್ದ. ಚೊಣ್ಣದ ಜೇಬಿನ ತುಂಬಾ ತುಂಬಿಕೊಂಡು ಬಂದಿರುತ್ತಿದ್ದ ಬಾರಿಹಣ್ಣನ್ನು ಅವನಿಗೆ ಕೊಟ್ಟು ಅವನ ಪ್ರಾಮಾಣಿಕತೆಯನ್ನು ಕೊಂಡುಕೊಳ್ಳುತ್ತಿದ್ದೆ..."

ಜಾನಪದವನ್ನು ಮೀರಿದ ಸರಳಾತೀಸರಳವಾದ ಭಾಷೆಯಲ್ಲಿ ಗೊರವರ ಅವರು ಗ್ರಾಮ್ಯದ ಅನುಭಾವವನ್ನು ತೆರದಿಡುವುದು ಈ ಪರಿ...

"... ಆವತ್ತಿನಿಂದ ನಾನು ಪುಟ್ಟಿ ಎತ್ತಿ ಬಿಟ್ಟ ಕೋಳಿ ಮರಿಗಳಂತಾದೆ...."

ಒಟ್ಟಿನಲ್ಲಿ ಹೇಳುವುದಾದರೆ ಇದು ಪ್ರತಿಯೊಬ್ಬ ಪಶುಪಾಲಕನ "ಡೈರಿ ಆಫ್ ಎ ಡೇರಿ ಬಾಯ್" ( Diary of a Dairy Boy ) ಎನ್ನುವಷ್ಟು ಮುಗ್ಧ ಬದುಕಿನ ಚಿತ್ರಣವಾಗಿದೆ. ಅದರಲ್ಲೂ ಸರಳ ರೇಖೆಯಷ್ಟೇ ಸರಳವಾದ ರೇಖಾಚಿತ್ರಗಳನ್ನು ಮೂಡಿಸಿರುವ ಸೃಜನ್ ಅವರ ಸೃಜನಶೀಲತೆ ಪ್ರಶಂಸನೀಯ. ಇಂತಹ ಅಪರೂಪದ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಗಳು.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಾಗರಾಜ ಷಣ್ಮುಖಪ್ಪ ರಂಗನ್ನವರ