ಆಡು ಕಾಯೋ ಹುಡುಗನ ದಿನಚರಿ

Author : ಟಿ.ಎಸ್‌. ಗೊರವರ

Pages 92

₹ 80.00




Year of Publication: 2011
Published by: ಪಲ್ಲವ ಪ್ರಕಾಶನ
Address: ಪಲ್ಲವ ಪ್ರಕಾಶನ ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113
Phone: 08394-228567 /9480728393

Synopsys

ಬಾಲ್ಯ ಎಂಬುದು ಎಲ್ಲ ಲೇಖಕರ ಅಮೂಲ್ಯ ಅಕ್ಷರದ ಗಣಿ. ಅಲ್ಲಿನ ನೆನಪುಗಳಿಂದ ಹರಳುಗಟ್ಟಿದ್ದೇ ಬಹುತೇಕ ಕವಿಗಳ ಲೇಖಕರ ಬರವಣಿಗೆಯ ಸರಕಾಗುತ್ತದೆ ಕೂಡ. ಹಾಗೆ ಬಾಲ್ಯದ ಹಗೇವಿನಿಂದ ಯುವ ಬರಹಗಾರ ಟಿ.ಎಸ್. ಗೊರವರ ಕೂಡ ಅನುಭವದ ಧಾನ್ಯವನ್ನು ಹೊರಗೆಳೆದಿದ್ದಾರೆ. 

ಅನುಭವ ಕಥನ ಎಂದು ಲೇಖಕ ಹೇಳಿಕೊಂಡರೂ ಹಳ್ಳಿಯೊಂದರ ಜೀವನ ಚರಿತ್ರೆಯಂತೆಯೂ, ಸಾಮಾನ್ಯ ಹುಡುಗನ ಅಸಾಮಾನ್ಯ ಆತ್ಮಕತೆಯಂತೆಯೂ ಕೃತಿ ತೋರುತ್ತದೆ. ಉತ್ತರ ಕರ್ನಾಟಕದ ಗ್ರಾಮೀಣ ಬದುಕು ಇಲ್ಲಿ ಹುರಿಗೊಂಡಿದೆ. ನೂರು ಪುಟದ ಪುಸ್ತಕದಲ್ಲಿ ಹದಿನಾರು ಕಂತುಗಳ ಲೇಖನಗಳಿವೆ. 

ಬರಹಗಾರ ಅರುಣ್‌ ಜೋಳದಕೂಡ್ಲಿಗಿ ’ಜನಧ್ವನಿ’ ಜಾಲತಾಣದಲ್ಲಿ ಕೃತಿಯ ಕುರಿತು ಬರೆಯುತ್ತಾ, ’ಇಲ್ಲಿನ ಅನುಭವಲೋಕ ಸ್ವಾಭಿಮಾನಕ್ಕಾಗಿ ಜಿಗುಟುತನದ ಬದುಕನ್ನು ಕಟ್ಟಿಕೊಂಡ, ಕಟ್ಟಿಕೊಳ್ಳುವ ಜೀವಗಳದ್ದು. ಈ ಬಗೆಯ ಅನುಭವ ಲೋಕ ಆಯಾ ಭಾಗದ ಅಭಿವೃದ್ಧಿಯ ಬೊಗಳೆ ಬಿಡುವ ರಾಜಕಾರಣಿಗಳ ಮಾತುಗಳನ್ನು, ಸರಕಾರಿ ಲೆಕ್ಕಬುಕ್ಕದಲ್ಲಿ ಅಭಿವೃದ್ಧಿಗಾಗಿ ಖರ್ಚು ಮಾಡಿದ ಲೆಕ್ಕಪತ್ರಗಳ ಹುಸಿತನವನ್ನು ಬಯಲು ಮಾಡುತ್ತದೆ. ಸುದ್ದಿಮಾದ್ಯಮಗಳು ಬಿತ್ತರಿಸುವ ಉತ್ತರಕರ್ನಾಟಕದ ಚಿತ್ರಕ್ಕಿಂತ , ಬೇರೆಯದೇ ಆದ ಮಾನವೀಯ ಅಂತಃಕರಣದ ಚಿತ್ರವನ್ನು ಈ ಕೃತಿ ಕಟ್ಟಿಕೊಡುತ್ತದೆ. ಗೊರವರ ವೃತ್ತಿಯಲ್ಲಿ ಪತ್ರಕರ್ತನಾದರೂ, ವೃತ್ತಿ ಸಹಜ ವರದಿಗಾರಿಕೆಯ ಗುಣ ಈ ಬರಹಕ್ಕೆ ನುಗ್ಗಿಲ್ಲ, ಬದಲಾಗಿ ಕಥೆಗಾರನ ಕಥನಗಾರಿಕೆ ಇಲ್ಲಿ ಮೈದಾಳಿದೆ. ಈ ವಿವರಗಳು ಲೇಖಕನೊಳಗೆ ಇನ್ನಷ್ಟು ಶೋಧಕ್ಕೆ ಕಾರಣವಾದರೆ ಗೊರವರ ಕಾದಂಬರಿ ಬರೆಯಬಲ್ಲಷ್ಟು ಅನುಭವ ದಟ್ಟವಾಗಿದೆ’ ಎಂದಿದ್ದಾರೆ. 

About the Author

ಟಿ.ಎಸ್‌. ಗೊರವರ
(10 June 1984)

ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದ ಟಿ.ಎಸ್. ಗೊರವರ, 1984 ಜೂನ್ 10 ರಂದು ಜನಿಸಿದರು.  ರಾಜೂರು, ಗಜೇಂದ್ರಗಡದಲ್ಲಿ ವಿದ್ಯಾಭ್ಯಾಸ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಪ್ರಕಟಿತ ಕೃತಿಗಳು. ತನ್ನ ಎದೆಯ ಮೆದುವನ್ನೇ ನಾದಿ ನಾದಿ ಮಿದ್ದು ಒಂದು ಹದದಲ್ಲಿ ಕೆತ್ತಿದಂತಿರುವ ಇವರ ...

READ MORE

Conversation

Excerpt / E-Books

ಹನುಮಂತ ದೇವರಗುಡಿಯ ಮೈಕು ‘ಎದ್ದೇಳು ಮಂಜುನಾಥ ಬೆಳಗಾಯಿತು...’ ಎಂದು ಊರಿನ ಕಿವಿ ಗುಂಯ್‌ಗುಡುವಂತೆ ಹಾಡತೊಡಗುವ ಹೊತ್ತಿಗೆ ನನ್ನ ದಿನಚರಿ ಶುರುಗೊಳ್ಳುತ್ತಿತ್ತು. ಕಣ್ಣೊಳಗೆ ನಿದ್ದೆ ಇನ್ನೂ ಮುಳುಗು ಹಾಕತೊಡಗಿದ್ದರೂ ಅದನ್ನು ಲೆಕ್ಕಿಸದೆ ಹೊದ್ದುಕೊಂಡಿರುವ ಕೌದಿ ಕೊಡವಿಕೊಂಡು ಒಲ್ಲದ ಮನಸ್ಸಿಂದ ಏಳುತ್ತಿದ್ದೆ. ಅಪ್ಪನ ಹೊಡೆತ ನೆಪ್ಪಿಸಿಕೊಂಡರೆ ಸಾಕು. ನಿದ್ದೆ ಮಾರು ದೂರ ಓಟ ಕೀಳುತ್ತಿತ್ತು. ಕಣ್ಣ ಪಿಚ್ಚು ಉಜ್ಜಿಕೊಂಡು ನಮ್ಮ ಸರಕಾರಿ ಹೆಂಚಿನ ಮನೆಗೆ ಹೊಂದಿಕೊಂಡಿರುವ ಎತ್ತು ಕಟ್ಟುವ ದಂದಾಕಿಗೆ ಬಂದರೆ ಅಲ್ಲಿ ಕತ್ತಲು ಆಲಸಿಯಾಗಿ ಇನ್ನೂ ಆಕಳಿಸುತ್ತ ಬಿದ್ದಿರುತ್ತಿತ್ತು. ದಂದಾಕಿಯ ತಡಿಕೆಯಿಂದ ಇಷ್ಟಿಷ್ಟೇ ತೂರಿಬರುತ್ತಿದ್ದ ಬೆಳಕಿನಲ್ಲೇ ಸೆಗಣಿ ಬಳೆಯಲು ಅಣಿಗೊಳ್ಳುತ್ತಿದ್ದೆ.

ಶೇಂಗಾ ಹೊಟ್ಟು, ಜೋಳದ ದಂಟು, ಹಸಿರ ಹುಲ್ಲು, ನುಚ್ಚು ಹೀಗೆ ತರಹೇವಾರಿ ದಿನಿಸು ಮೇಯುವ ಎರಡೇ ಎರಡು ಎತ್ತು, ಹತ್ತು ಎತ್ತುಗಳಷ್ಟು ಸೆಗಣಿ ಹಾಕಿರುತ್ತಿದ್ದವು. ದಂದಾಕಿ ಕಾಲಿಡಲೂ ಜಾಗವಿಲ್ಲದಂತೆ ಸೆಗಣಿ, ಉಚ್ಚೆ, ಗ್ವಾದಲಿಯಿಂದ ಚೆಲ್ಲಿದ ದಂಟು, ಹೊಟ್ಟಿನಿಂದ ತುಂಬಿ ಒಂದು ನಮೂನೆ ಘಾಟು ವಾಸನೆ ಹೊಡೆಯುತ್ತಿತ್ತು. ದಿನಂಪ್ರತಿ ಸೆಗಣಿ ಬಳೆದೂ ಬಳೆದು ಆ ವಾಸನೆ ಒಂದು ರೀತಿಯಲ್ಲಿ ಸಹ್ಯವಾಗಿತ್ತು. ಸೋಜಿಗವೆಂದರೆ ಸುವಾಸನೆ ಅಂತ ಪರಿಮಳಯುಕ್ತ ವಾಸನೆ ಇರುತ್ತದೆ ಎಂಬುದೂ ಗೊತ್ತಿರಲಿಲ್ಲ. ವಾಸನೆ ಗೀಸನೆ ಲೆಕ್ಕಕ್ಕಿಡಿಯದೆ ಬೆಳಗ್ಗೆದ್ದು ಸೆಗಣಿ ಬಳಿಯುವೊಂದೇ ಸೊನ್ನಿ.

ಮೊದಲು ಸೆಗಣಿಯ ಹೊತ್ತಲಿಗಳನ್ನು ಒಂದೊಂದಾಗಿ ಪುಟ್ಟಿಯಲ್ಲಿ ತುಂಬುತ್ತಿದ್ದೆ. ತದನಂತರ ಕೈಯಿಂದ ಉಚ್ಚಿ ಬಾಚಿ, ಈಚಲು ಗರಿಗಳ ಪೊರಕೆಯಿಂದ ದಂದಾಕಿಯ ಕಸಗೂಡಿಸಿ ಎಲ್ಲವನ್ನೂ ಪುಟ್ಟಿಯಲ್ಲಿ ತುಂಬುತ್ತಿದ್ದೆ. ಇನ್ನೇನು ತಿಪ್ಪೆಯಲ್ಲಿ ಚೆಲ್ಲಿಬರಬೇಕೆಂದು ಪುಟ್ಟಿಯನ್ನು ತಲೆ ಮ್ಯಾಲೆ ಹೊತ್ತುಕೊಳ್ಳಲು ಹೋದರೆ ಯಮಭಾರದ ಪುಟ್ಟಿ ಜಪ್ಪಯ್ಯ ಎನ್ನುತ್ತಿರಲಿಲ್ಲ. ಬ್ಯಾರೆ ಕೆಲಸದಲ್ಲಿ ನಿರತರಾಗಿರುತ್ತಿದ್ದ ಅಪ್ಪನನ್ನೋ ಅವ್ವನನ್ನೋ ಪುಟ್ಟಿ ಎತ್ತಲು ಕರೆಯುತ್ತಿದ್ದೆ. ಆ ಪುಟ್ಟಿ ಹೊತ್ತುಕೊಂಡು ಮಸಾರಿ ಹೊಲದ ದಾರಿಯಲ್ಲಿರುವ ತಿಪ್ಪಿಗೆ ಚೆಲ್ಲಲು ಹೋಗುವಾಗ ದೊಡ್ಡದೊಂದು ಗುಡ್ಡದ ಕಲ್ಲು ಹೊತ್ತಂತೆ ಭಾಸವಾಗುತ್ತಿತ್ತು.

ಸುವಾಸನೆಯೂ ಇರುತ್ತದೆ ಎಂದು ಗೊತ್ತಿರಲಿಲ್ಲ ಭಾರದ ಮಾತು ಅತ್ತಾಗಿರಲಿ. ಹ್ಯಾಗಾದರೂ ಮಾಡಿ ಹೊತ್ತರಾಯಿತು. ಆದರೆ, ಈಚಲು ಪುಟ್ಟಿಯಲ್ಲಿನ ಉಚ್ಚಿ ಜೊತೆ ಬೆರೆತ ಸೆಗಣಿ ತೂತು ಬಿದ್ದ ಕೊಡದಂತೆ ಆಗೊಮ್ಮೆ ಈಗೊಮ್ಮೆ ತಟತಟ ಮೈಮ್ಯಾಲೆ ಸೋರಿ ರೇಜಿಗೆ ಹುಟ್ಟಿಸಿ ತಿಪ್ಪಿ ಅದ್ಯಾವಾಗ ಬಂದಿತೋ ಎಂದು ನಿಡುಸುಯ್ಯುವಂತೆ ಮಾಡುತ್ತಿತ್ತು.

ದಂದಾಕಿಯನ್ನು ಅಷ್ಟೊಂದು ನೀಟಾಗಿ ಗೂಡಿಸಿ ಒಂದಿಷ್ಟೂ ಹೊಲಸು ಕಾಣದಂತೆ ಥಳಥಳ ಮಾಡಿದ್ದರೂ ತಾಸು ತಡೆದು ನೋಡಿದರೆ ಮುಂಜಾನೆ ಸೆಗಣಿ ಬಳೆದಿರಲಿಕ್ಕಲ್ಲವೇನೋ ಎನ್ನುವಂತೆ ಮತ್ತೆ ಯಥಾಸ್ಥಿತಿ. ಆ ಎತ್ತುಗಳು ನನ್ನನ್ನು ಬಯ್ಯಿಸುವ ಸಲುವಾಗಿಯೇ ಮತ್ತೆಮತ್ತೆ ಸೆಗಣಿ ಹಾಕುತ್ತಿದ್ದವೋ ಏನೋ. ದಂದಾಕಿಯ ಹೊಲಸು ನೋಡಿ ಅವ್ವ ‘ನಿಂಗ ತಿನ್ನೋದಷ್ಟೇ ಗೊತ್ತು. ಸ್ವಚ್ಛಾಗಿ ಸೆಗಣಿ ಬಳಿ ಅಂದ್ರ ಮಕ್ಷ್ಯಾರಗಟಕೊಂಡು ಅಳತಾನ...’ ಅಂತ ನಿತ್ಯ ಮಂಗಳಾರತಿ ಮಾಡುತ್ತಿದ್ದಳು.

Related Books