Article

ಅಧ್ಯಯನದ ಕ್ಯಾನ್ವಾಸಿನಲ್ಲಿ ‘ತೇಜೋ ತುಂಗಭದ್ರಾ’

ಲಿಸ್ಬನ್ ನಗರದ ತೇಜೋ ನದಿಯಿಂದ ಆರಂಭವಾಗಿ ವಿಜಯನಗರದ ತುಂಗಭದ್ರಾ ನದಿಯ ಜುಳುಜುಳು ನಾದದ ಏರಿಳಿತದ ಅಲೆಗಳ, ಆ ನದಿಪಾತ್ರದ ಮನುಷ್ಯನೆದೆಯಾಳದ ಸಂಕಟಗಳ, ಸಂತೋಷಗಳ, ನೋವುನಲಿವುಗಳ, ಅಲ್ಲಿಯ ಧರ್ಮ ಅಧರ್ಮದ ಸೂಕ್ಷ್ಮ ಅಂಶಗಳ, ನಿಷ್ಕಲ್ಮಷ ಪ್ರೇಮದ, ವ್ಯಾಪಾರ, ಅಂಧ ರಾಜಕೀಯತೆಯ, ಮತಾಂತರ ಹೀಗೆ ಎಣಿಕೆಗೆ ಸಿಗದಷ್ಟು ವಿಷಯಗಳನ್ನು ತನ್ನ ಮಡಿಲಿನಲ್ಲಿ ಹಾಕಿಕೊಂಡು, ನೆಮ್ಮದಿಯಾಗಿ ಹರಿಯುವ ತೇಜೋ -ತುಂಗಭದ್ರಾನದಿಗಳು ಜೀವಂತಿಕೆಯ ಪಾತ್ರಗಳಾಗಿ ಗೋಚರಿಸುತ್ತವೆ ಕಾದಂಬರಿಯಲ್ಲಿ.

ಕಾದಂಬರಿಯ ಕ್ಯಾನ್ವಾಸ್ ಬಹುದೊಡ್ಡದು. ಅದರಂತೆ ಆ ಬೃಹತ್ ಕ್ಯಾನ್ವಾಸ್ ಗೆ ತಕ್ಕಷ್ಟೇ ಅಧ್ಯಯನವೂ ಇದೆ. ಕರಾರುವಕ್ಕಾದ ಇತಿಹಾಸದ ವಿಷಯಗಳನ್ನು ಕಾದಂಬರಿಗಳಲ್ಲಿ ಸೂಕ್ಚ್ಮವಾಗಿ ಅವಲೋಕಿಸಬಹುದು. ಕಾದಂಬರಿಯ ರಚನಾ ವಿಧಾನ ವಿಭಿನ್ನವಾಗಿದೆ. ಪ್ರತ್ಯೇಕವಾಗಿಯೇ ಎರಡು ದೇಶಗಳ, ಎರಡು ಸಂಪ್ರದಾಯಗಳ, ಎರಡು ಕಾಲಘಟ್ಟದ ಜನಜೀವನದ ಕುರಿತು, ಆಯಾ ಕಾಲಘಟ್ಟದಲ್ಲಿಯ ರಾಜಕೀಯ, ವ್ಯಾಪಾರ ಹಾಗೂ ಮತಾಂತರದ ಚಿತ್ರಣವನ್ನು ಸಚಿತ್ರವಾಗಿ ಕಾದಂಬರಿಯಲ್ಲಿ ಕಾಣಬಹುದು.

ತೇಜೋ ತುಂಗಭದ್ರಾ ಎರಡೂ ನದಿಗಳೇ ಅಧ್ಯಾಯಗಳಾಗಿ ಓದುಗರನ್ನು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ತೇಜೋ ತುಂಗಭದ್ರಾ ಒಂದಕ್ಕೊಂದು ಹೆಣೆದುಕೊಂಡ ಅಧ್ಯಾಯಗಳು ಎಂದು ಗೊತ್ತಾಗುವುದೇ ಕೊನೆಯ ತೇಜೋ ಎಂಬ ಅಧ್ಯಾಯದ ಕೊನೆಯ ಪುಟಗಳಲ್ಲಿ. ಆ ಕ್ಷಣ ಓದುಗನಿಗೆ ಬೆರಗು! ಅಬ್ಬಾ! ಅಧ್ಯಾಯವಾರು ಬೇರೆ ಬೇರೆ ಎಂದು ಓದಿಕೊಂಡು ಬಂದ ಕಥನಗಳು ಒಂದಕ್ಕೊಂದು ಹೆಣೆದುಕೊಂಡಿವೆ ಎಂಬುದು ತಿಳಿಯುತ್ತದೆ.

ಕೊನೆಯ ಅಧ್ಯಾಯ ಬಹಳಷ್ಟು ನೆನಪುಳಿಯುವ ಹಾಗೂ ಕಾಡುವ ಪ್ರಸಂಗಗಳ ಚಿತ್ರಣ. ಓದುಗರನ್ನು ಬಹುಕಾಲದ ವರಗೆ ಕಾಡುವ ಕಾದಂಬರಿ ಇದಾಗಿದೆ.  ಐತಿಹಾಸಿಕ ಕಾದಂಬರಿಯಾದರೂ ಇಲ್ಲಿ ರಾಜರುಗಳ ವೈಭೋಗದ ಕಥನ ಇಲ್ಲ. ರಾಜನ ಆಡಳಿತ ದುರವಸ್ಥೆಯ, ಅಲ್ಲಿಯ ಅಂದಿನ ಕಾಲದ ಕೆಲವು ನಿಕೃಷ್ಟ ಪದ್ದತಿಗಳಾದ ಲೆಂಕನಾಗುವುದು, ಸತಿಯಾಗುವುದರ ಕುರಿತಾದ ಚಿತ್ರಣವನ್ನು ಜನಸಾಮಾನ್ಯರ ಮೂಲಕ ಹೇಳುವಲ್ಲಿ ಕಾದಂಬರಿ ಗೆದ್ದಿದೆ.

ಸಹಜವಾಗಿ ಕಾದಂಬರಿಗಳು ಓದು ಮುಗಿದಾಗ ಪಾತ್ರಗಳು ಓದುಗರನ್ನು ಆವರಿಸಿಕೊಂಡಿರುತ್ತವೆ. ಆದರೆ ತೇಜೋ ತುಂಗಭದ್ರಾ ಕಾದಂಬರಿಯಲ್ಲಿ ಪಾತ್ರಗಳಲ್ಲದೆಯೂ ಅಂದಿನ ಕಾಲಘಟ್ಟದ ಚಿತ್ರಣಗಳು ಅಂದರೆ, ಲಿಸ್ವನ್ ನಲ್ಲಿ ಯಹೂದಿಯರನ್ನು ಮತಾಂತರಗೊಳಿಸುವ ಕ್ರೂರ ಚಿತ್ರಣಗಳು, ಗೋವಾದಲ್ಲಿ ಅಲ್ಬುಕರ್ಕ ಮತಾಂತರಗೊಳಿಸುವ ಕ್ರೂರ ಚಿತ್ರಣ, ವಿಜಯನಗರದಲ್ಲಿ ಲೆಂಕನಾಗುವುದು, ಸತಿಯಾಗುವುದು ಇಂತಹ ಚಿತ್ರಣಗಳು ಓದುಗರನ್ನು ಬಹುಕಾಲದವರೆಗೆ ಕಾಡುತ್ತವೆ.

ಬೆಲ್ಲಾ ಹಾಗೂ ಗೆಬ್ರಿಯಲ್ ಅವರ ನಿಷ್ಕಲ್ಮಷ ಪ್ರೇಮ ಲಿಸ್ಬನ್ ನಲ್ಲಿ ಹುಟ್ಟಿದರೂ , ತೇಜೋ ನದಿಯ ಸಿಹಿನಿರಿನಲ್ಲಿ ಜನಿಸಿದರೂ ,ಖಂಡಗಳನ್ನು ದಾಟಿಕೊಂಡು ತುಂಗಭದ್ರಾ ನದಿಗಳ ದಡದವರೆಗೂ ನೆನಪುಗಳನ್ನು ಹೊತ್ತು ತರುತ್ತವೆ. ಗೋವಾದಲ್ಲಿ ಅವರ ಪ್ರೇಮ ಅಂತ್ಯವಾದಂತೆ ಗೋಚರಿಸುತ್ತದೆ. ಆದರೆ, ನಿಜವಾದ ಪ್ರೇಮ ಗೇಬ್ರಿಯಲ್ ನ ನೆನಪುಗಳಲ್ಲಿ ಸದಾ ಹಸಿರಾಗಿರುತ್ತದೆ. ಒಂದು ಕಾಲಕ್ಕೆ ಭಾರತವನ್ನು ದ್ವೇಷಿಸಿದ ಬೆಲ್ಲಾ,  ಕೊನೆಗೆ ಅದೇ ಭಾರತವನ್ನರಿಸಿ ಬಂದಿದ್ದಳು. ಗೇಬ್ರಿಯಲ್ ಬೆಲ್ಲಾಳಿಗಾಗಿ ಬದುಕಿಡೀ ಕಾಯ್ದ ಆದರೆ, ಬೆಲ್ಲಾ…..? ತೆಂಬಕಪುರದ ತೆಂಬಕಸ್ವಾಮಿಯ ಸುತ್ತಲೂ ಬಿತ್ತರಗೊಳ್ಳುವ ತೆಂಬಕ್ಕ, ಮಾಪಳ, ಕೇಶವ, ಹಂಪಮ್ಮಳ ಬದುಕಿನ ಕಥನಗಳು ಅಂದಿನ‌ ಕಾಲದ ಜನಸಾಮಾನ್ಯರ ಬದುಕಿನ ಕಥನವೇ ಆಗಿದೆ. ಅಡವಿಸ್ವಾಮಿ ಅಂಣಂಭಟ್ಟರ ಸಂಭಾಷಣೆ, ಗುಣಸುಂದರಿ ಹಾಗೂ ಕೃಷ್ಣದೇವರಾಯರ ಸಂಭಾಷಣೆಯ ವಿಚಾರಧಾರೆಗಳು ಸರ್ವಕಾಲಕ್ಕೂ ಒಪ್ಪುವಂತಹುಗಳು.

ಮಾಪಳನ ಮಗಳು ಈಶ್ವರಿಯ ಮನದಾಳದ ದ್ವೇಷದ ಹೊಗೆಯು ತನ್ನ ತಂದೆಯನ್ನು ಕೊಂದವನನ್ನು ನಾನೂ ಜಟ್ಟಿಯಾಗಿ ಕೊಲ್ಲುವೆ ಎನ್ನುವ ಹಸುಳೆಯ ಮಾತುಗಳು ದ್ವೇಷ ಎನ್ನುವುದು ಹೇಗೆಲ್ಲ ಮಕ್ಕಳಲ್ಲಿ ಪ್ರಭಾವ ಹಾಗೂ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾಣಬಹುದು. ಅದಲ್ಲದೇ, ಹಂಪಮ್ಮ ಈಶ್ವರಿ ಯನ್ನು ಹೆತ್ತ ತಾಯಿಯಂತೆ ಎಷ್ಟೆಲ್ಲ ನೋಡಿಕೊಂಡರೂ ಕೆಲವೊಮ್ಮೆ ವಿಫಲಳಾಗುತ್ತಿದ್ದಳು. ಈಶ್ವರಿಗೆ ಒಮ್ಮೆ ಕೊಬ‌ರಿಗಿಟುಗ ಮೋರಿಯಲ್ಲಿ ಕೆಡವಿದಾಗ ಹಂಪಮ್ಮ ಇರಲಿ‌ಬಿಡು ಇನ್ನೊಂದು ಕೊಡ್ತಿನಿ ಎಂದು ಸಮಾಧಾನಪಡಿಸಲು ಪ್ರಯತ್ನಿಸಿದಳು. ಆದರೆ, ಈಶ್ವರಿಯ ಅಳು ತಾರಕಕ್ಕೆರುತ್ತಲೇ ಇತ್ತು. ರಾತ್ರಿ ಮಲಗುವಾಗ ಹಂಪಮ್ಮ, ಈಶ್ವರಿಯನ್ನು ಯಾಕಮ್ಮ ಅತ್ತೆ ಎಂದು ಹಠಹಿಡಿದು ಕೇಳಿದಾಗ.”ನನ್ನಮ್ಮ ನಾನು ಹಾಗೆ ಏನಾದರೂ ಕೆಡಿಸಿದರೆ ಹೊಡೆಯುತ್ತಿದ್ದಳು ನೀನು ಹೊಡೆಯಲಿಲ್ಲವಲ್ಲ ಅದಕ್ಕೆ ಅವ್ವ ನೆನಪಾದ್ಳು’ ಎಂದು ಹೇಳುವ ಈಶ್ವರಿಯ ಮಾತುಗಳಿಂದ ಹಂಪಮ್ಮಗೆ ಹೀಗೂ ಮಕ್ಕಳ ಮನಸ್ಸು ಇರುತ್ತದೆನಾ ಎಂದು ಯೋಚಿಸಿದಳು. ಮನದೊಳಗೆ ನಾನು ಇವಳಿಗೆ ಎಷ್ಟೇ ಪ್ರೀತಿ ತೋರಿಸಿದರೂ ತಾಯಿ ಆಗಲಾರೆನೆನೋ ಎಂಬ ಅಳುಕು ಉಳಿಯಿತು. ಕಾದಂಬರಿಯಲ್ಲಿ ಕಾಡಿದ ಬಹಳಷ್ಟು ಸನ್ನಿವೇಶಗಳಲ್ಲಿ ಇದೂ ಒಂದು.

ಲಿಸ್ಬನ್ ನಿಂದ ಭಾರತಕ್ಕೆ ಬರುವಾಗ ಹಡಗಿನಲ್ಲಿ ಅನುಭವಿಸಿದ ಸಂಕಟಗಳ‌ ಚಿತ್ರಣ ಈಗಲೂ ಕಣ್ಣ ಮುಂದೇ ಇದೆ. ಗೋವಾದಲ್ಲಿ ಹಸಿವಿನಿಂದ ನರಳಿದ್ದು, ಹಂಪಮ್ಮ ಸತಿಯಾಗುವಾಗ ಉದರದೊಳಗಿನ ಮಗು ನೆನಪಾಗಿ ಓಡಿಬಂದದ್ದು ಹೀಗೆ ಸಾಲು ಸಾಲು ಘಟನೆಗಳು ಕಾದಂಬರಿಯಲ್ಲಿ ಕಾಣಬಹುದು; ಓದುಗರನ್ನು ಬಹುಕಾಲದವರೆಗೆ ಕಾಡುವ ಚಿತ್ರಗಳು ಅವುಗಳಾಗಿವೆ. ಲೇಖಕರು ಗತಕಾಲದ ಇತಿಹಾಸದ ಚಿತ್ರಣವನ್ನು ಇಷ್ಟು ಸೊಗಸಾಗಿ ಕಾದಂಬರಿಯನ್ನಾಗಿ ರೂಪಿಸಿದ್ದಾರೆ. ಕಾದಂಬರಿ ರೂಪುಗೊಳ್ಳಲು ಲೇಖಕರ ಅಧ್ಯಯನದ ಆಳ ಎಷ್ಟು ವಿಸ್ತಾರವೆಂಬುದನ್ನು ಕಾದಂಬರಿ ಓದುಗರಿಗೆ ಗೊತ್ತಾಗುತ್ತದೆ.

ತೇಜೋ ತುಂಗಭದ್ರಾ ಎರಡು ನದಿಗಳ ಹೆಸರಾದರೂ ನದಿಯ ಜೀವಂತಿಕೆಗೆ ಸಾಕ್ಷಿಯಾದ ಸಮಾಜದ ಸಚಿತ್ರಣವನ್ನು ಓದುಗರಿಗೆ ಉಣಬಡಿಸುತ್ತದೆ. ವರುಷಕ್ಕೊಂದು ಇಂತಹ ಕಾದಂಬರಿಗಳನ್ನು ಓದುಗರಿಗೆ ತಪ್ಪದೇ ನೀಡಿ ಎಂಬುದು ಲೇಖಕರಿಗೆ ನನ್ನ ಪ್ರೀತಿಯ ಹಕ್ಕೊತ್ತಾಯ. ಓದು ಮುಗಿದರೂ ಇಡೀ ಕಾದಂಬರಿಯ ಚಿತ್ರಣಗಳು, ಲಿಸ್ಬನ್, ತೆಂಬಕಪುರ, ಗೋವಾ, ತೇಜೋ, ತುಂಗಭದ್ರಾ, ಗೆಬ್ರಿಯಲ್, ಹಂಪಮ್ಮ, ಇವರೆಲ್ಲರ ಗುಂಗಿನಿಂದ ಹೊರಬರಲಾಗುತ್ತಿಲ್ಲ. ಕಾದಂಬರಿಯ ಕೊನೆಯ ಅಧ್ಯಾಯ ಓದುಗರನ್ನು ತುಂಬಾ ಭಾವನಾತ್ಮಕವಾಗಿ ಕಾಡುತ್ತದೆ. ಪ್ರತಿಯೊಬ್ಬರೂ ಓದಲೇಬೇಕಾದ ಕಾದಂಬರಿ. ನೀವು ಓದಿ ಆನಂದಿಸಿ. ಇತರರನ್ನು ಓದಿಸಿ, ಆನಂದಪಡಿಸಿ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ