Article

ಅಮ್ಮ ಬರೆದ ಎರಡು ಪತ್ರಗಳು

ಓದದೇ ಉಳಿದ ಹಲವು ಪುಸ್ತಕಗಳಲ್ಲಿ ಈ ಪುಸ್ತಕವನ್ನು ಸ್ವಲ್ಪ ತಡವಾಗಿಯೇ ಎತ್ತಿಕೊಂಡಿದ್ದೆ. ಓದುತ್ತಾ ಹೋದಂತೆ ಒಂದದ್ಭುತ ಪ್ರಪಂಚಕ್ಕೆ ಕರೆದೊಯ್ದ ಈ ಪುಸ್ತಕ ಪ್ರಖರವಾಗಿ ನನ್ನೊಳಗಿಳಿದು ಬಿಟ್ಟಿತು. ಓದಿ ಮುಗಿಸಿದಂತೆ "ಒಂದು  ಅತ್ಯುತ್ತಮ ಪುಸ್ತಕ ನೂರು ಒಳ್ಳೆಯ ಗೆಳೆಯರಿಗೆ ಸಮವಾದರೆ ಒಬ್ಬ ಒಳ್ಳೆಯ ಸ್ನೇಹಿತ‌ ಒಂದು ಗ್ರಂಥಾಲಯಲಕ್ಕೆ ಸಮ" ಎಂಬ ಅಬ್ದುಲ್ ಕಲಾಂ ರ ಮಾತುಗಳು ಸ್ವಚಿತ್ತಾಗಿ ನೆನಪಿಗೆ ಬಂತು. ಪುಸ್ತಕ ಬೇರೆ ಯಾವುದೂ ಅಲ್ಲ; ಲೇಖಕ-ಸ್ವಾಲಿಹ್ ತೋಡಾರ್ ಅವರ 'ಅಮ್ಮ ಬರೆದ ಎರಡು ಪತ್ರಗಳು'. ಈ ಪುಸ್ತಕ ಓದಿ ನನಗೆ ದಕ್ಕಿದ್ದು 'ನೂರು ಗೆಳೆಯರು ಮತ್ತು ಒಂದು ಗ್ರಂಥಾಲಯ'!

ಈ ಪುಸ್ತಕದಲ್ಲಿರುವ ಲೇಖನಗಳೆಲ್ಲವೂ ಒಬ್ಬ ಪ್ರಬುದ್ಧ ಚಿಂತಕನಿಗೋ, ತತ್ವಜ್ಞಾನಿಗೋ , ಮನಶ್ಶಾಸ್ತ್ರಜ್ಞನಿಗೋ ಹೊಳೆಯಬೇಕಾದಂಥವುಗಳು. ಇದು ನಿಮಗೆ ಅರ್ಥವಾಗಬೇಕಾದರೆ, 'ಗಂಡಸರು ಯಾಕೆ ಅಳಬಾರದು' ಎನ್ನುವ ಲೇಖನ ನೀವು ಓದಬೇಕು. ವಿಷಾದದೊಳಗೆ ಜೀವನದ ಸವಿ ಹುಡುಕುವುದು ಈ ಲೇಖನದ ಹೂರಣ. ಇಲ್ಲಿನ ಮಾತುಗಳೆಲ್ಲವೂ ಸಾವಿರ ಬಾರಿ ಚಿಂತನೆಗೆ ಹಚ್ಚಿ ಬರೆದಂಥವುಗಳು. ಒಮ್ಮೆ ಈ ಪುಸ್ತಕದ ಲೇಖಕ ಸಿಕ್ಕಾಗ ಸುಮ್ಮನೆ ಹೀಗೆ ಕೇಳಿದ್ದೆ, "ನೀನು ಬರೆದ ಇವೆಲ್ಲಾ ಸ್ಪೂರ್ತಿ ದಾಯಕ ಬರಹಗಳಿಗೆ ಎ.ಆರ್ ಮಣಿಕಾಂತ್ ರ ಬರಹದ ಚಹರೆ ಇದೆಯಲ್ವಾ? ಅವರ ಬರಹಗಳಿಂದ ಪ್ರೇರಿತವೇ? " ಎಂದು. " ಇಲ್ಲ ನಾನವರ ಪುಸ್ತಕವನ್ನು ಓದಿಲ್ಲ, ನನ್ನ ಅನುಭವಗಳನ್ನು ನಾನು ಹೀಗೆ ಬರೆದಿದ್ದೇನೆ" ಎಂದು ಹುಬ್ಬೇರಿಸುವಂತಹ ಉತ್ತರ ಕೊಟ್ಟಿದ್ದ.

 ಈ ಪುಸ್ತಕದ ಲೇಖಕ ಸ್ವಾಲಿಹ್ ತೋಡಾರ್ ನನಗೆ ವರ್ಷಗಳಿಂದೀಚೆಗಿನ ಪರಿಚಯ. ಯಾವುದೋ ಕಾರ್ಯಕ್ರಮದಲ್ಲಿ ಮಣ ಭಾರದಷ್ಟು ಪುಸ್ತಕ ಖರೀದಿಸುತ್ತಿದ್ದವನನ್ನು ಮೊದಲ ಬಾರಿ ಪರಿಚಯ ಮಾಡಿಕೊಂಡಿದ್ದೆ.ಇಂಗ್ಲೀಷ್, ಮಲಯಾಳಂ ನಿಂದ ಕನ್ನಡಕ್ಕೆ ಭಾಷಾಂತರಿಸುವಲ್ಲಿ ಇವನದ್ದು ಎತ್ತಿದ ಕೈ. ಸದಾ ಸೌಮ್ಯವಾಗಿರುವ ಇವನೊಳಗೆ ಇಷ್ಟು ಆಗಾಧ ಪ್ರತಿಭೆಯಿರುವುದು ತಿಳಿಯಬೇಕಾದರೆ ಇವನ ಬರಹಗಳನ್ನೇ ಓದಬೇಕು. ಇವನಿಗೆ ಮಾತು ಕಡಿಮೆ, ಹೆಚ್ಚು ಕೇಳಿಸಿಕೊಳ್ಳುತ್ತಾನೆ. ಬರಹಗಳಲ್ಲಿ ಆತನ ನಿರ್ಣಯಗಳು, ಕಥಾ ನೀತಿಗಳು ಬದುಕು ಅಭ್ಯಸಿಸಿದ ಒಬ್ಬ ವಯೋವೃದ್ಧನಷ್ಟು ಪ್ರಬುದ್ಧ ಮತ್ತು ಸ್ಪಷ್ಟ. ತನ್ನೊಂದು ಲೇಖನದಲ್ಲಿ ಚಾರ್ಲಿ ಚಾಪ್ಲಿನ್ ನ ಕಥೆ ಅದೆಷ್ಟು ಮನೋಹರವಾಗಿ ಪೋಣಿಸಿದ್ದಾನೆಂದರೆ ಒಂದು ಅನುಭವ ಜಗತ್ತಿಗೆ ಸಂವಾದಿಯಾಗಿ ತನ್ನನ್ನೇ ಪಾತ್ರವಾಗಿಸಿಕೊಳ್ಳುವಷ್ಟು. ಯಾರೊಂದಿಗೂ ಅಷ್ಟು ಸುಲಭವಾಗಿ ಬೆರೆಯದ ಇವನಲ್ಲಿ ಅಷ್ಟೊಂದು ಅನುಭವ ಸಾಧ್ಯಾನಾ? ಎಂಬ‌ ಪ್ರಶ್ನೆಯನ್ನು ನನ್ನೊಳಗೆಸೆದು ಬಿಡುತ್ತಾನೆ.

 ಪುಸ್ತಕವನ್ನು ಯಾವ ರೀತಿ ಓದಬೇಕೆಂದು ಹೇಳಿಕೊಡುವ ಅಧ್ಯಾಪಕರ  ಕಥೆಯೊಂದು ಪ್ರಬುದ್ಧವಾಗಿದೆ. ಕಥೆಯ ಸುತ್ತ ಬದುಕಿನ ಗ್ರಹಿಕೆ ಮತ್ತು ಏಕಾಗ್ರತೆಯ ಸಾರವನ್ನು ಹಚ್ಚುತ್ತಾನೆ. ಚೋಪಿಯಾರ್ ಎಂಬ ಮರಳ ಬೆಂಗಾಡಿನ ಸಂತನ ಕಥೆಗಳಲ್ಲಿ ಅಪ್ಪಟ ಪರಿಸರವಾದಿಯಾಗಿ ಸೋಗು ಹಾಕುತ್ತಾನೆ. ಎಳೆಯ ಮನಸುಗಳನ್ನು ಬೆಳೆಸುವುದರ ಬಗ್ಗೆ ಸೂಕ್ಷ್ಮವಾಗಿಯೇ ಚಿಂತೆಗೆ ಹಚ್ಚುತ್ತಾನೆ. ಪ್ರಿಂಟಿಂಗ್ ದೋಷಗಳು ಈ ಅತ್ಯುತ್ತಮ ಪುಸ್ತಕದ ಓದಿಗೆ ಸಣ್ಣ ತಡೆಯಷ್ಟೇ. ಎರಡೆರಡು ಬಾರಿ ಎಚ್ಚರ ತಪ್ಪಿದಂತೆ ಒಂದೇ ಪ್ಯಾರಗಳು ಪ್ರಿಂಟಾಗಿದೆ. ಬರಹದ ಫಾಂಟುಗಳು ಬೋಲ್ಡಾಗಿರುವುದರಿಂದ  ಬರಹಗಳು ಓದದ ಹೊರತು ಆಕರ್ಷಕವೆನಿಸುವುದಿಲ್ಲ. ಕೆಲವೊಂದು ಕಡೆ ಮಾತುಕತೆಗಳು ಅಷ್ಟು ಪರಿಣಾಮಕಾರಿಯಾಗಿಲ್ಲ. ಇವೆಲ್ಲವುಗಳನ್ನೂ ಮೀರಿ ಸೋತವನನ್ನು ಕೈಹಿಡಿದು ಎತ್ತಬಲ್ಲ, ನೋವುಗಳನ್ನು ಮೀರಿ ಬದುಕ ಬಲ್ಲ ಮನೋಸ್ಥೈರ್ಯವನ್ನು ನೀಡ ಬಲ್ಲದು ಈ ಪುಸ್ತಕ. 

ಅಲ್ಲಲ್ಲಿ ಬರುವ ಬದುಕಿನ ಜಂಜಾಟಗಳಲ್ಲಿ ಬಾಳಿನ ತೇರನ್ನು ಎಳೆಯುವ ಅಮ್ಮನೆಂಬ ಹೆಣ್ಣು ಪಾತ್ರದಾರಿಯನ್ನು,ಅವಳ ನೋವನ್ನೂ  ಸುಂದರವಾಗಿ ಹೆಣೆಯಲಾಗಿದೆ. ಹೆಣ್ಣು ಮನೆಯನ್ನು, ಕುಟುಂಬವನ್ನು ಸಂಬಾಳಿಸಲು ಪಡುವ ಪಾಡನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಅವರಿಗಾಗಿ ಮರುಗುವ ಲೇಖಕನ 'ಹೆಂಗರುಳು' ಆಪ್ತವಾಗಿದೆ.

"ಕೋಣೆ ಇಲ್ಲದವರ ಲೋಕದಲ್ಲಿ"  ಎಂಬ ಬರಹ ನನ್ನ ಪಾಲಿಗೆ ಕ್ಲಾಸ್!. ಕೆಲಸ ಸಿಕ್ಕಿಯೂ ಕಂಫರ್ಟ್ ಝೋನೊಂದು ಸಿಗದೆ ಹೆಣಗಾಡುವವರ ಜೀವನ ಸಂಗ್ರಾಮದ ಬಗ್ಗೆ ಅಭಿವ್ಯಕ್ತಿಸುವಂಥದ್ದು. ಮಾನಸಿಕ ನೆಮ್ಮದಿಗೆ ತಮ್ಮದೇ ಅನ್ನುವಂಥ ಪರಿಸರಗಳು ಬೇಕೆಂದು ಹೇಳುವಂಥದ್ದು.

ಸರಳ ಮದುವೆಯ ಹಿಂದಿನ ಪೋಷಾಕುಗಳು, ಬೇಸಗೆ ರಜೆಯಲ್ಲಿ ಮಕ್ಕಳ ಸ್ವಾತಂತ್ರ್ಯ ಹತ್ತಿಕ್ಕುವ ಶಿಬಿರಗಳು, ಕಲಿಸುವ ಶಿಕ್ಷಕರೇ ವಿದ್ಯಾರ್ಥಿಗಳಿಂದ ಕಲಿಯಬೇಕಿರುವ ಪಾಠಗಳು ಹೀಗೆ ಸಮಾಜದ ಎಲ್ಲ ಸಂಕೀರ್ಣ ಮಜಲುಗಳನ್ನು ಹೊಕ್ಕು ಈ ಪುಸ್ತಕ ಮಾತನಾಡುತ್ತದೆ. ಕಾವ್ಯಾತ್ಮಕವಾಗಿ ಪ್ರಕೃತಿಯನ್ನು ಪರಿಚಯಿಸುವ ಶೈಲಿ ಲೇಖಕನೊಳಗಿನ ಕವಿತ್ವದ ಪ್ರತಿಫಲನವೆಂಬಂತೆ ದೃಗ್ಗೊಚರವಾಗುತ್ತದೆ. ಪ್ರತಿಯೊಂದು ಬರಹದಲ್ಲೂ ಸ್ವತಃ ಓದುಗನನ್ನು ಚಿಂತೆಗೆ ಹಚ್ಚುವ ಅನನ್ಯ ಸಾಮರ್ಥ್ಯ ಈ ಬರಹಗಳಿಗಿವೆ. ಒಬ್ಬನನ್ನು ಪರಿಪೂರ್ಣ ಮನುಷ್ಯನಾಗಿಸುವ ಪಾಠಗಳಿವೆ.

ಎಲ್ಲಾ ಅನುಭವಗಳು, ಓದು ಒಂದು ಅದ್ಭುತ ಕೃತಿಯಾದುದರಲ್ಲಿ ಅತೀವ ಆನಂದವಿದೆ. ಕೊನೆಗೆ ನನ್ನೊಳಗಿದ್ದ 'ಗೆಳೆಯನ ಪುಸ್ತಕವಲ್ವಾ, ಬರೆದರೆ ಎಷ್ಟು ಬರೆದಿರಬಹುದು. ಇನ್ನೊಮ್ಮೆ ಯಾವಾಗಲಾದರೂ ಓದಬಹುದು" ಎಂಬ ದುರಾಲೋಚನೆಯನ್ನು ಹೋಗಲಾಡಿಸಿದೆ. ಬದುಕಲ್ಲಿ ದಿನವೂ ಸೋಲುವವರಿದ್ದರೆ, ಬಯಸಿದ ಕಾರ್ಯಗಳು ಸಫಲಗೊಳ್ಳದವರಿದ್ದರೆ ನಿರಾಶರಾಗಬೇಡಿ,  ಈ ಪುಸ್ತಕವನ್ನೊಮ್ಮೆ ಓದಿ. ಬದುಕೇ ಬೇಡವೆಂದು ಸಾವು ನಿರೀಕ್ಷಿಸುವವರನ್ನು ಖಂಡಿತಾ ಇವು ಬದುಕಿಸಿಯೇ ತೀರುತ್ತದೆ. ಸಾಧ್ಯವಾಗುವುದಾದರೆ ಪುಸ್ತಕ ಕೊಂಡು ಓದಿ ಬಳಿಕ ಜನ ನಿಬಿಡ ಸ್ಥಳದಲ್ಲಿ ಯಾ ವಿದ್ಯಾರ್ಥಿಗಳು ಬರುವ ಪಾರ್ಕುಗಳಲ್ಲೋ ಬಿಟ್ಟು ಬನ್ನಿ. ಎತ್ತಿಕೊಂಡು ಓದಿದ ಪ್ರತಿಯೊಬ್ಬರ ಬದುಕೇ ಬದಲಾಗಲಿದೆ. ಆ ಸದಾವಕಾಶವೂ ನಿಮ್ಮದಾಗಲಿ. ಉಡುಗೊರೆಯಾಗಿಯೋ, ಪ್ರೀತಿಯ ಕಾಣಿಕೆಯಾಗಿಯೋ ಕೊಡುವಂಥಿದ್ದರೆ ಇದೇ ಕೃತಿ ಕೊಟ್ಟು ಬಿಡಿ. ಓದಿದವನು ನಿಮ್ಮನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳದಿರಲಾರ.

ವಿಶಿಷ್ಟ ಸಂಧರ್ಭಗಳಲ್ಲಿ ಬರೆದ ವಿವಿಧ ಅದ್ಭುತ ಲೇಖನಗಳ ಸಂಗ್ರಹವೊಂದನ್ನು ಪುಸ್ತಕ ರೂಪದಲ್ಲಿ ಪ್ರಕಟ ಮಾಡಿರುವ " ರೀಡ್ ಪ್ಲಸ್" ಪ್ರಕಾಶಕರಿಗೆ ಚಿರ ಋಣಿ. ಇನ್ನು ಅಮೃತ ಹನಿಗಳಷ್ಟು ಅಮೂಲ್ಯ ಪುಸ್ತಕ ಬರೆದ ಲೇಖಕ ಸ್ವಾಲಿಹ್ ತೋಡಾರ್ ಗೆ ಎಲ್ಲಾ ರೀತಿಯ ಕೃತಜ್ಞತೆಗಳನ್ನು ಅರ್ಪಿಸಿ ಈ ಪುಸ್ತಕವನ್ನು ಮತ್ತೆ ಓದಲಾರಂಭಿಸುತ್ತಿದ್ದೇನೆ.

ಮುನವ್ವರ್ ಜೋಗಿಬೆಟ್ಟು