Article

ಅನ್ನಂ ನನಿಂದ್ಯಾತ್ ಎಂಬಂತೆ ಅನ್ನದ ಮಹತ್ವ ಸಾರುವ `ಜಲಪಾತ’

ನೋವನ್ನು ಸಹಿಸಿಕೊಳ್ಳುವ ಶಕ್ತಿ ಗಂಡಸಿಗಿಂತ ಹೆಚ್ಚು ಹೆಣ್ಣಿಗೆ ಇರುತ್ತದೆಂಬುದು, ಹೆಣ್ಣು ಜನ್ಮ ನೀಡುವ ಸಮಯದಲ್ಲಿ ಪಡುವ ನೋವನ್ನು ,ಹೆಣ್ಣಿನ ತಾಯ್ತನವನ್ನು ವಸುಂಧರೆಯ ಪಾತ್ರದ ಮೂಲಕ ಹೇಳಿದ್ದಾರೆ. ಒಂದೊಂದು ಋತುವಿನಲ್ಲೂ ಲೋಣಾವಾಳ, ಖಂಡಾಲದಲ್ಲಾಗುವ ಪರಿಸರದ ಬದಲಾವಣೆಗಳನ್ನು ಪ್ರತಿಯೊಂದು ಮಾಸದಲ್ಲಿ ವಸುಂಧರೆಯ ಗರ್ಭದಲ್ಲಾಗುವ ಬದಲಾವಣೆಗಳ ಮೂಲಕ ವಿವರಿಸಿದ್ದಾರೆ. ವಸು ಜನ್ಮ ನೀಡುವಾಗ ತಾನು ಈ  ನೋವನ್ನು ಅನುಭವಿಸುವ ಬದಲು ಸಾಯುವುದೇ ಲೇಸೆಂದು ಭಾವಿಸುತ್ತಾಳೆ, ಆದರೆ ತಾನು ಈ ನೋವನ್ನು ಅನುಭವಿಸಿದರೇ ತಾನೆ ತನ್ನಲ್ಲಿರುವ ಜೀವಕ್ಕೆ ಉಸಿರು ತುಂಬುವುದೆಂದು ನೆನೆದು ನೋವನ್ನು ಅನುಭವಿಸುತ್ತಾಳೆ. ತಾಯಿಯು ಎಷ್ಟು ನೋವು ಅನುಭವಿಸಿರುತ್ತಾಳೆಯೋ ಅಷ್ಟೇ ಪ್ರೀತಿ‌ ತನ್ನ ಮಕ್ಕಳ ಮೇಲೆ. ಶತಾವಧಾನಿ ಗಣೇಶ್ ರವರು ಹೇಳಿದಂತೆ ಇದೊಂದು ಅಮೋಘ ಕಾದಂಬರಿಯೇ, ಪ್ರತಿಯೊಂದು ಪದವೂ ಅರ್ಥಪೂರ್ಣವಾಗಿದೆ. 

ಶ್ರೀಪತಿ ವಸುಂಧರೆಯನ್ನು ಮದುವೆಯಾಗಿ ಮುಂಬಯಿಯಲ್ಲಿ ಒಂದು ಜಾಹಿರಾತು ಕಂಪನಿಯಲ್ಲಿ ಕೆಲಸಮಾಡತ್ತಿರುತ್ತಾನೆ, ಅಲ್ಲಿ ತನ್ನ ಸಹಪಾಠಿ ರೆಬೆಲೋ ಸಹ ಕೆಲಸಮಾಡುತ್ತಿರುತ್ತಾಳೆ. ಶ್ರೀಪತಿಯ ಮನೆ ಹತ್ತಿರ ಇರುವ ಸಮುದ್ರಕ್ಕೂ ರೆಬೆಲೋ ಮನೆ ಹತ್ತಿರ ಇರುವ ಸಮುದ್ರಕ್ಕೂ ವ್ಯತ್ಯಾಸವನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ರೆಬೆಲೋ ಮನಸ್ಸಿನಂತೆ ಅವಳ ಸಮುದ್ರವು ಸಹ. ಸದಾ ಲಾಂಜು, ಸ್ಟೀಮರ್ಗಳು ಇರಲೇಬೇಕು ಖಾಲಿ ಇದ್ದರೆ ಅವಳ ಮನಸ್ಸು ಒಪ್ಪುವುದಿಲ್ಲ ಹಾಗೆಯೇ ಅವಳಿಗೆ ಬೇಕಾದವರು ಸದಾ ಅವಳ ಮನೆಗೆ ಬಂದುಹೋಗಬೇಕೆಂಬ ಬಯಕೆ. ಆದರೆ ಶ್ರೀಪತಿಯ ಸಮುದ್ರ ಅತ್ಯಂತ ನಿರ್ಮಲವಾದದ್ದು ಅವನಮನಸ್ಸಿನಂತೆ ಅವನ ಸಮುದ್ರವು, ಎಷ್ಟು ಅರ್ಥಪೂರ್ಣ.

ಗೋವನ್ನು ನಾವು ದೇವರೆಂದೇ ಭಾವಿಸುತ್ತೇವೆ, ಆ ಗೋವಿನ ಮಹತ್ವವನ್ನು ಹಾಗೂ ಮನುಷ್ಯನು ತನ್ನ ನೀಚ ಕಾರ್ಯಗಳಿಗೆ ಗೋವನ್ನು ಹೇಗೆ ಉಪಯೋಗಿಸಿಕೊಳ್ಳುತ್ತಾನೆಂಬುದು ಇಲ್ಲಿ ಕಾಣಬಹುದು, ಇದನ್ನು ಓದುವಾಗ ನೆನಪಾಗಿದ್ದೇ ಭೈರಪ್ಪನವರ ತಬ್ಬಲಿ ನೀನಾದೆ ಮಗನೆ ಕಾದಂಬರಿ. ಮುಂಬಯಿಯಲ್ಲಿ ಸಂಸಾರ ಸಾಗಿಸುವುದು ಕಷ್ಟವೆಂದು ಶ್ರೀಪತಿ ಮತ್ತು ವಸು ತಮ್ಮ ಹುಟ್ಟೂರಿಗೆ ಹೋಗಿ ಅಲ್ಲಿ ತಿನ್ನಕ್ಕೂ ಗತಿಯಿಲ್ಲದೇ ಕಷ್ಟಪಡುವ ಜೀವನವನ್ನು , ನಗರಕ್ಕೂ ಹಳ್ಳಿಯ ಜೀವನಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಿದ್ದಾರೆ. ಎಷ್ಟೋ ಒಂಟಿ ಹೆಣ್ಣುಮಕ್ಕಳಿಗೆ ಅಣ್ಣನೋ ತಮ್ಮನೋ ಇದ್ದಿದ್ದರೆ ತನ್ನಲ್ಲಿರುವುದನ್ನೆಲ್ಲ ತೋಡಿಕೊಳ್ಳಬೇಕೆಂಬ ಬಯಕೆ, ಆದರೆ ಕೆಲವರಲ್ಲಿ ಇರುವ ಸ್ವಂತ ಅಣ್ಣ ತಮ್ಮಂದಿರು ತನ್ನ ಅಕ್ಕ ತಂಗಿಯರನ್ನು ನೋಡಿಕೊಳ್ಳುವುದನ್ನು ನೆನದರೆ ದುಃಖವಾಗುತ್ತದೆ. ಇಲ್ಲಿ ಬರುವ ವಸುವಿನ ಅಣ್ಣ ಸುಬ್ಬುವಿನ ಪಾತ್ರವೂ ಹಾಗೆಯೇ ಎಷ್ಟು ಬೇಕೋ ಅಷ್ಟು. ಇಲ್ಲಿ ಬರುವ ನಾಡಗೌಡರ ಪಾತ್ರ ಒಳ್ಳೆಯದು ಆದರೆ ಆತನ ವೈಜ್ಞಾನಿಕ ಪ್ರಯೋಗಗಳಿಗೆ ಬಲಿಪಶುವಾಗುವುದು ಆಕೆಯ ಪತ್ನಿ ಸುಬ್ಬುಲಕ್ಷ್ಮಿ. ಆ ದಂಪತಿಗಳಿಗೆ ಸಂತಾನವಿರುವುದಿಲ್ಲ ನಾಡಗೌಡರ ಪ್ರಕಾರ ಸಂತಾನವೆಂದರೆ ಆತನದೆ ವೈಜ್ಞಾನಿಕ ಮನೋಭಾವನೆಗಳಿರುತ್ತವೆ, ಸುಬ್ಬುಲಕ್ಷ್ಮಿಯ ಪಾತ್ರವು ಹೆಣ್ಣಿಗೆ ಸಂತಾನವೆಂಬುದು ಎಷ್ಟು ಮುಖ್ಯವೆಂದು ತೋರುತ್ತದೆ.

ಒಟ್ಟಾಗಿ ಈ ಹಿಂದೇ ಹೇಳಿದಂತೆ ಲೋಣಾವಾಳ, ಖಂಡಾಲದಲ್ಲಾಗುವ ಪರಿಸರದ ಬದಲಾವಣೆಗಳನ್ನು, ತಾಯ್ತನವನ್ನು, ತಾಯಿಯ ಗರ್ಭದಲ್ಲಿ 9 ಮಾಸದಲ್ಲಾಗುವ ಬದಲಾವಣೆಗಳನ್ನು, ಗೋವಿನ ಮಹತ್ವವನ್ನು, ನಗರಕ್ಕೂ ಹಳ್ಳಿಯ ಜೀವನಕ್ಕೂ ಇರುವ ವ್ಯತ್ಯಾಸವನ್ನು, ರೆಬೆಲೋ ಹಾಗು ಶ್ರೀಪತಿಯರ ಮನಸ್ಸಿನ್ನು ಸಮುದ್ರಕ್ಕೆ ಹೋಲಿಸಿ ಹೇಳಿರುವುದನ್ನು, ಕೆಲವು ಕಡೆ ಸಂಗೀತದ ಬಗ್ಗೆಯೂ, ಉಪನಿಷತ್ತಿನಲ್ಲಿ ಹೇಳಿದಂತೆ ಅನ್ನಂ ನನಿಂದ್ಯಾತ್ ಅನ್ನದ ಮಹತ್ವವನ್ನು ಇನ್ನು ಎಷ್ಟೋ ವಿಷಯಗಳ ಬಗ್ಗೆ‌ ಈ ಪುಟ್ಟ ಕಾದಂಬರಿಯಲ್ಲೇ ವಿವರಣೆ ನೀಡಿದ್ದಾರೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕೇಯ ಭಟ್‌