Article

`ಅಶ್ವತ್ಥಾಮನ್' ಎಂಬ ನಮ್ಮೊಳಗಿನ ನಟ

'ನಟನಾಗುವುದು ಸುಲಭವಲ್ಲ.ಮೊದಲು ನಾನು ನಾನಾಗಬೇಕು. ನಂತರ ನಾನು ನಟಿಸುವ ಪಾತ್ರವಾಗಬೇಕು.ಆಮೇಲೆ ರಂಗಮಂದಿರದಲ್ಲಿ ಕೊನೆಯ ಕುರ್ಚಿಯಲ್ಲಿ ಕುಳಿತು ನಾಟಕ ನೋಡುವ ಪ್ರೇಕ್ಷಕನೂ ಆಗಬೇಕು. ನಾನು ಪ್ರೇಕ್ಷಕನಾಗದೇ ನಟನಾಗಲಾರೆ, ನಟನಾಗದೇ ನಾನು ನಾನಾಗಲಾರೆ.'

ಜೋಗಿಯವರ ' ಅಶ್ವತ್ಥಾಮನ್' ಎಂಬ ಹೊಸ ಕಾದಂಬರಿಯಲ್ಲಿ ಅಶ್ವತ್ಥಾಮ ಎಂಬ ಖ್ಯಾತ ಪೋಷಕ ನಟನೊಬ್ಬನ ಮಾತುಗಳು. ಬದುಕು ಎಂಬ ನಾಟಕರಂಗದಲ್ಲಿ ಇವು ನಮ್ಮ ಮಾತುಗಳು ಕೂಡ ಆಗಬಹುದು.

ಈ ಕಾದಂಬರಿ ಆರಂಭದಲ್ಲಿ ಜೋಗಿಯವರು, ನಿರೂಪಕನಾಗಿ ಪಾತ್ರ ಪ್ರವೇಶ ಮಾಡುತ್ತಾರೆ. ಖ್ಯಾತ ಬಹುಭಾಷಾ ಪೋಷಕ ನಟನಾದ ಅಶ್ವತ್ಥಾಮನ್ ತನ್ನ ಆತ್ಮಕಥನ ಬರೆಸಲು ನಿರೂಪಕನನ್ನು ಕರೆಸಿಕೊಳ್ಳುತ್ತಾನೆ. ಜನಪ್ರಿಯತೆ ಎಂಬ ಹುಲಿ ಸವಾರಿಯಲ್ಲಿರುವ ಆತ ಆಕಸ್ಮಿಕವಾಗಿ ಅನಾರೋಗ್ಯಪೀಡಿತನಾಗುತ್ತಾನೆ. ಖಾಲಿ ಕುಳಿತಾಗ ಆತ್ಮಕತೆಯ ಪ್ರಕರಣ ಶುರುವಾಗುತ್ತದೆ. ಇದಕ್ಕೆ ಅವನ ಮೂರನೇ ಹೆಂಡತಿ ಸಂಯುಕ್ತಾಳ ಚಿತಾವಣೆ ಸಹ ಇರಬಹುದು ಎಂಬ ಅನುಮಾನ ನಿರೂಪಕನದು.

ಅಶ್ವತ್ಥಾಮ ಒಬ್ಬ ಸಕಲ ಕಲಾವಲ್ಲಭ. ಆತನಿಗೆ ಅಮುದನ್ ಮಸಾಜ್ ಮಾಡುವಾಗ, ಹದಿಹರೆಯದಲ್ಲಿ ದೀಪಾವಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿದ ಸುಲೋಚನಾ ಕಾಡುತ್ತಾಳೆ. ಮಸಾಜ್ ಆದಮೇಲೆ ಒಂದು ದುರ್ಘಟನೆ ಸಂಭವಿಸಿತ್ತದೆ.

ಕೆಟ್ಟ ಬಾಲ್ಯದ, ತಂದೆಯನ್ನು ದ್ವೇಷಿಸುವ ಅಶ್ವತ್ಥಾಮ ವಿಕ್ಷಿಪ್ತ ಮನಸ್ಸಿನವನು. ತಮಿಳು ಚಿತ್ರರಂಗದ ಮೂಲಕ ಚಿತ್ರರಂಗಕ್ಕೆ ಕಾಲಿಡುತ್ತಾನೆ. ಇದಕ್ಕೆ ಅವಕಾಶ ಮಾಡಿಕೊಡುವ ಸಹಾಯಕ ನೃತ್ಯ ನಿರ್ದೇಶಕಿ ಶರಣ್ಯಳ ಮಗಳು ಶುಭಾಂಗಿನಿಯನ್ನು ಆತ ಮದುವೆಯಾಗುತ್ತಾನೆ. ಆದರೆ ಅದು ಬಹುಕಾಲ ಬಾಳಿಕೆ ಬರುವುದಿಲ್ಲ. ನಂತರ ಸರೋಜಿನಿಯನ್ನು ಮದುವೆಯಾಗುವ ಅಶ್ವತ್ಥಾಮ ಅವಳ ಕಟ್ಟುಪಾಡುಗಳಿಗೆ ರೋಸಿಹೋಗಿ ಬೇರೆಯಾಗುತ್ತಾನೆ. ಅಧಿಕೃತವಾಗಿ ಮೂರು ಮದುವೆಯಾದರೂ ಅವನ ಬಾಳಿನಲ್ಲಿ ಹಲವು ಹೆಣ್ಣುಗಳು ಬಂದುಹೋಗುತ್ತಾರೆ.

ಅಹಂಕಾರ, ಅತಿಕಾಮ, ಭ್ರಮೆ ಇವುಗಳನ್ನೆಲ್ಲ ತನ್ನ ಶಕ್ತಿಯೆಂದೇ ಆತ ಭಾವಿಸುತ್ತಾನೆ. ಪಾತ್ರವಾಗಿ ಬದುಕುವುದು, ಬದುಕಿನುದ್ದಕ್ಕೂ ನಟಿಸುವುದು ಆತನಿಗೆ ಇಷ್ಟದ ಕಾಯಕ. ಆತ ಬಹಳ ಓದಿಕೊಂಡವನು, ವಾದಕ್ಕೆ ನಿಂತರೆ ಸೋಲಿಸುವುದು ಸಾಧ್ಯವಿಲ್ಲ! ಅದೆಷ್ಟೋ ಕೃತಿಗಳನ್ನು ರಚಿಸಿದ ನಿರೂಪಕನೂ ಅಶ್ವತ್ಥಾಮನ ಪ್ರಭಾವಕ್ಕೆ ಒಳಗಾಗುತ್ತಾನೆ.

ಇಂತಹ ವ್ಯಕ್ತಿ ಮತ್ತು ನಿರೂಪಕನ ಮಧ್ಯೆ ಕ್ಲೈಮ್ಯಾಕ್ಸ್ ಹಂತದಲ್ಲಿ ನಡೆಯುವ ಘಟನೆಯನ್ನು ಓದಿಯೇ ಅನುಭವಿಸಬೇಕು.

ಮೈಲ್ಯಾಂಗ್ ಬುಕ್ಸ್ ಹೊರತಂದಿರುವ ಈ ಕೃತಿಯನ್ನು ಒಮ್ಮೆ ಓದಲೇಬೇಕು. ಪ್ರಿಂಟ್ ಪುಸ್ತಕ, ಇ ಬುಕ್ ಮತ್ತು ಆಡಿಯೋ ಬುಕ್ ಕೂಡ ಲಭ್ಯವಿದೆ. ವಿನೂತನ ಪ್ರಯೋಗವನ್ನು ಉಪಯೋಗಿಸಿ ನೋಡಿ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಜಿತ ಹೆಗಡೆ