Article

ಅತ್ಯದ್ಭುತ ಪಾತ್ರಗಳುಳ್ಳ ‘ವಂಶವೃಕ್ಷ’

ಇತ್ತೀಚೆಗೆ‌ ತಬ್ಬಲಿ ಮತ್ತು ಆವರಣ ಓದಿ ಅದರ ವಿಮರ್ಶೆಯನ್ನ ಹಂಚಿಕೊಂಡಿದ್ದೆ. ವಂಶವೃಕ್ಷ ಮುಗಿಸಿದ ಮೇಲೆ‌ ಆ ಪಾತ್ರಗಳು ನನ್ನ ಮನಸ್ಸಿನಲ್ಲಿ ಉಳಿದುಹೋದವು ಮುಖ್ಯವಾಗಿ ಶ್ರೀನಿವಾಸ ಶ್ರೋತ್ರಿಯರು. ಅವರ ಪಾತ್ರದ ಬಗ್ಗೆ‌ ಓದುವಾಗಲೆಲ್ಲಾ ನನ್ನ ಮನಸ್ಸಿಗೆ‌ ಏನೋ ಒಂದುತರಹದ ಖುಷಿ. ಅವರ ಪಾತ್ರ ನನಗಂತೂ ಆದರ್ಶವೆ. ಈ ಕಾದಂಬರಿಯಲ್ಲಿ ಬರುವ ಪ್ರತಿಯೊಬ್ಬರೂ ಒಳ್ಳೆಯವೆರೆ, ಎಲ್ಲರೂ ಒಳ್ಳೆಯವರಾಗಿ ಎಲ್ಲರೂ ನೊಂದುತ್ತಾರೆ. ಶ್ರೀನಿವಾಸ ಶ್ರೋತ್ರಿಯರ ಮನೆಯಲ್ಲಿ ಕೆಲಸ ಮಾಡುವ ಲಕ್ಷ್ಮಿಯ ಪಾತ್ರಕ್ಕೂ ಸಹ ಎಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆಂದರೆ ಅದು ಅದ್ಭುತ. ಎಲ್ಲಾ ಪಾತ್ರಗಳನ್ನೂ ‌ಇಲ್ಲಿ ವಿಸ್ತಾರವಾಗಿ ವರ್ಣಿಸಬಹುದು. ಆದರೆ ಶ್ರೀನಿವಾಸ ಶ್ರೋತ್ರಿಯರನ್ನ ಆಧಾರವಿಟ್ಟುಕೊಂಡು ನನ್ನ ವಿಮರ್ಶೆಯನ್ನು, ಅಥವಾ ಇದನ್ನು ಸಾರಾಂಶವೂ ಎಂದು ತಿಳಿಯಬಹುದೆಂದು ನಾನು ಮುಂದುವರೆಸುತ್ತೇನೆ. 

ಕಪಿಲೆಯ ಪ್ರವಾಹಕ್ಕೆ ನಂಜುಂಡ ಶ್ರೋತ್ರಿಯನು ಬಲಿಯಾಗುತ್ತಾನೆ. ನಂಜುಂಡನನ್ನು ಕಳೆದುಕೊಂಡು ಶ್ರೋತ್ರೀಯರ ದುಃಖ ಹೆಚ್ಚೋ, ಮದುವೆಯ ಹೊಸತರಲ್ಲಿ ಇಪ್ಪತ್ತನೇ ವಯಸ್ಸಿಗೆ ವಿಧವೆಯಾದ ಕಾತ್ಯಾಯಿನಿಯ ದುಃಖ ಹೆಚ್ಚೋ. ಇಲ್ಲಿ ಒಬ್ಬರ ದುಃಖವನ್ನು ಮತ್ತೂಬ್ಬರ ದೃಷ್ಟಿಯಿಂದ ತೂಗಿನೋಡುವುದು ಸಾಧ್ಯವಾಗದ ಮಾತು. ನಂಜುಂಡಿಗೆ ಮದುವೆಯಾದ ನಂತರ ತನ್ನ ಸಂಸಾರ ಭಾರವನ್ನೆಲ್ಲಾ ಅವನಮೇಲೆ ಹೊರಸಿ ತಾವು ವೇದ ಪುರಾಣಗಳನ್ನು ಓದುವುದರಲ್ಲಿ ಕಾಲಕಳೆಯೋಣವೆಂದರೆ ಅವನ ಸಾವಿನಿಂದ ಮತ್ತೆ ಸಂಸಾರ ಭಾರ ಅವರಿಗೆ
 ಅಂಟಿಕೊಂಡಿತು. ಅತ್ತ ತನ್ನ ಹೆಂಡತಿ ಭಾಗೀರತಿಗೆ ಸಮಾಧಾನ ಹೇಳುವುದೋ, ಯೌವನದಲ್ಲೇ ವಿಧವೆಯಾದ ಕಾತ್ಯಾಯಿನಿಗೆ ಸಮಾಧಾನ ಹೇಳುವುದೋ ಅವರ ಸಂಕಟ ಹೇಳತೀರದು. ಒಂದು ವರ್ಷದ ಮಗುವನ್ನು ಕಂಡು ಮಗನ ನೆನಪಿನಲ್ಲಿ ಅದೆಷ್ಟೋ ಸಲ ಮೊಮ್ಮಗನನ್ನು ಎತ್ತಿಕೊಳ್ಳುವರು. ಅವರಿಗೆ ತಮ್ಮ ವಂಶವೆಂದರೆ ಅದೆಷ್ಟೋ ಅಭಿಮಾನ ಆದರೂ ನಂಜುಂಡನ ಸಾವು ಅವರ ವಂಶವೃಕ್ಷಕ್ಕೆ  ಪೆಟ್ಟಾಯಿತಲ್ಲಾ ಎಂದು ದುಃಖ ಪಡುತ್ತಾರೆ. ತನ್ನ ಮಗನ ಸಾವಿನ ಸಂಗತಿಯನ್ನು ಮರೆಯಲು ಅವರು ಪ್ರತಿನಿತ್ಯವೂ ಸಂಧ್ಯಾವಂದನೆ ದೇವಾತಾರ್ಚನೆಗಳನ್ನು ಮಾಡಿ ತಮ್ಮ ಕೋಣೆಯಲ್ಲಿ ಅಥವಾ ದಿವಾನಖಾನೆಯಲ್ಲಿ ಏನಾದರೂ ಓದುತ್ತಾ ಕಾಲ ಕಳೆಯಲು ಪ್ರಾರಂಭಿಸುತ್ತಾರೆ. ತಂದೆ ತಾಯಿಯರ ಶ್ರಾದ್ಧ ಹಾಗು ಮಗನ ಶ್ರಾದ್ಧವನ್ನು ಶ್ರದ್ಧಾಭಕ್ತಿಯಿಂದ ಮಾಡುತ್ತಿದ್ದರು.

ಕಾತ್ಯಾಯಿನಿಯು ಹಿತ್ತಲಿಗೆ ಹೋದಾಗಲೆಲ್ಲಾ ಮಲ್ಲಿಗೆ ಹೂವನ್ನು ಕಂಡಾಗ ತನ್ನ ವೈಧವ್ಯದ ಅರಿವಾಗಿ ಕಣ್ಣೀರಿಟ್ಟಾಗ ಶ್ರೋತ್ರಿಯರು ಅದೆಷ್ಟೋ ಬಾರಿ ಸಮಾಧಾನ ಮಾಡಿದ್ದಾರೆ. ಭಗವದ್ಗೀತೆಯನ್ನು ಒದು ಮನಸ್ಸು ನೆಮ್ಮದಿಯಾಗುತ್ತದೆಂದು ಅದೆಷ್ಟೋ ಸಲ ಹೇಳಿದ್ದುಂಟು.  ಶ್ರೋತ್ರಿಯರ ಪ್ರಕಾರ, ಮದುವೆಯಾಗುವುದು ಗೃಹಸ್ಥ ಧರ್ಮಕ್ಕಾಗಿ, ಗೃಹಸ್ಥನಾಗುವುದು  ಈ ಲೋಕದಲ್ಲಿರುವ ತನ್ನ ಕರ್ತವ್ಯಗಳನ್ನು ಪೂರೈಸುವುದಕ್ಕಾಗಿ, ನಂತರ ಮಕ್ಕಳಾಗುವುದು ವಂಶವೃಕ್ಷದ ಕೊನೆ ಮುಂದುವರೆಯುವುದಕ್ಕಾಗಿ, ಅವರ ವಂಶದ ಬಗ್ಗೆ ಅಪಾರ ಅಭಿಮಾನ, ಶ್ರೋತ್ರಿಯರ ವಂಶವೆಂಬುದು ಶ್ರೋತ್ರಿಗಳಷ್ಟೇ ಪುರಾತನವೆನ್ನುವುದು ಅವರ ನಂಬಿಕೆ. ಒಮ್ಮೆ ಚೀನೀಗೆ ಜ್ವರ ಬಂದು ಎಷ್ಟೋ ದಿನ ಕಡಿಮೆಯಾಗದಿದ್ದಾಗ, ಶ್ರೋತ್ರಿಯರು ಅದೆಷ್ಟು ಆತಂಕ ಪಟ್ಟುಕೊಂಡರು, ವೈದ್ಯರ ಸಲಹೆಯಂತೆ ಮದ್ದನ್ನು ಹಾಕುತ್ತಿದ್ದರು. ಚೀನಿಯನ್ನು ತಮ್ಮ‌ ತೊಡೆಯ ಮೇಲಿಟ್ಟುಕೊಂಡು ಕಪಿಲಾ ನದಿಯ ಜಲದಿಂದ ಪ್ರೋಕ್ಷಣೆ ಮಾಡಿ ಗಾಯಿತ್ರಿಯನ್ನು ಪಠಿಸಿದರು. ಕಪಿಲಾ ನದಿಯ ಜಲವನ್ನು ಗಾಯಿತ್ರೀಮಂತ್ರದಿಂದ ಜಪಿಸಿ ಪ್ರೋಕ್ಷಣೆ ಮಾಡಿದ ಪರಿಣಾಮ ಚೀನಿ ಚೇತರಿಸಿಕೊಳ್ಳುತ್ತಾನೆ. ಗಾಯಿತ್ರಿ ಮಂತ್ರಕ್ಕೆ ಅಷ್ಟು ಶಕ್ತಿಯಿದೆಯಂಬುದು ಅವರ ನಂಬಿಕೆ.


ಶ್ರೋತ್ರಿಯರ ತಾಯಿ ತೀರಿಹೋದಾಗ ಅವರ ವಯಸ್ಸು ಹದಿನೈದು. ಹೆಂಡತಿ‌ ಸತ್ತಮೇಲೆ‌ ತನ್ನ ತಂದೆಯೇ ಅನ್ನ ಬೇಯಿಸಿ ಹಾಕುತ್ತಿದ್ದರು. ಭಾಗೀರತಮ್ಮನನ್ನು ಮದುವೆಯಾಗಿ ಕೆಲವು ದಿನಗಳಲ್ಲೇ ಅವರ ತಂದೆ ತೀರಿಹೋದರು. ಮನೆಯಾಳು ಮಾಚ ಹಾಗು ಅವನ ಮಗಳು ಲಕ್ಷ್ಮಿ ಅವರ ಮನೆಯಲ್ಲೇ ಬೆಳೆದರು. 
ಶ್ರೋತ್ರಿಯರದು ತುಂಬ ಔದಾರ್ಯದ ಗುಣ, ಅದನ್ನು ಅರಿತ ಲಕ್ಷ್ಮಿ ಅವರನ್ನು ಕಂಡರೆ ಎಲ್ಲಿಲ್ಲದ ಭಕ್ತಿ. ಭಾಗೀರತಮ್ಮ ಗರ್ಭಿಣಿಯಾದಾಗ, ಕೊನೆಯ ಸಮಯದಲ್ಲಿ ಆಪರೇಶನ್ ಮಾಡಿ ಮಗುವನ್ನು ಉಳಿಸುತ್ತಾರೆ. ಕಾಮವು ಉದ್ರೇಕವಾದಾಗ ಡಾಕ್ಟರ್ ಸಲಹೆ ನೆನಪಾಗುತ್ತದೆ. ದೈಹಿಕವಾಗಿ ಇದು ಅಸಮ ದಾಂಪತ್ಯ. ಈ ಸಲ ಆಪರೇಶನ್ ನಿಂದ ಅವರು ಉಳಿದರು, ಪುನಃ ಗರ್ಭಿಣಿಯಾದರೆ ಸಾವು ಖಂಡಿತವೆಂಬುದು. ಆದರೆ ಶ್ರೋತ್ರಿಯರಿಗೆ ಇನ್ನೂ ಚಿಕ್ಕ ಪ್ರಾಯ ದಿನೇ ದಿನೇ ಅವರ ಸಂಕಟವನ್ನು ಕಂಡಾಗ ಅದನ್ನು ತೋರ್ಪಡಿಸದೇ ಇದ್ದರೂ ಅದು ಆಕೆಗೆ ಅರ್ಥವಾಗುತ್ತಿತ್ತು. ಭಾಗೀರತಮ್ಮ ಲಕ್ಷ್ಮಿಯನ್ನು ತನ್ನ ಗಂಡನ ಕಾಮಭಾದೆಯನ್ನು ತೀರಿಸುವುದಾಗಿ ಕೇಳಿಕೊಂಡಳು, ಮೊದಲಿಗೆ ಅವಳು ಒಪ್ಪಲಿಲ್ಲ ದಿನೇ ದಿನೇ ಬಲವಂತ ಮಾಡಿದಮೇಲೆ ಶೀನಪ್ಪ ಒಪ್ಪಿದರೆ ಆಗಲೀ ಎಂದಳು, ಇದೇ ಮಾತನ್ನು ಶ್ರೋತ್ರಿಯರಿಗೆ ಹೇಳಿದಾಗ ಶ್ರೋತ್ರಿಯರು ಮಾತನಾಡಲಿಲ್ಲ, ಯಾವ ಹೆಂಡತಿ ತಾನೆ ಈ ತ್ಯಾಗ ಮಾಡುತ್ತಾಳೆಂದು ಮನಸ್ಸಿನಲ್ಲೇ ಭಾಗೀರತಮ್ಮನ ಗುಣವನ್ನು ‌ ಮೆಚ್ಚಿದರು. ಲಕ್ಷ್ಮಿ ಒಪ್ಪಿದರೂ, ತಮಗೆ ಎಷ್ಟೇ ಕಾಮ ಬಾಧೆ ಇದ್ದರೂ ಲಕ್ಷ್ಮಿ ಯನ್ನು ಆ ದೃಷ್ಟಿಯಿಂದ ನೋಡುಲಿಲ್ಲ ಆಕೆಯನ್ನು ಮುಟ್ಟುಲೂ ಇಲ್ಲ. ಇವರ ಈ ಗುಣವನ್ನು ನೆನದು ಲಕ್ಷ್ಮಿ ಭಾಗೀರಥಮ್ಮರಿಗೆ ಇವರ ಮೇಲೆ ಇನ್ನೂ ಅಭಿಮಾನ ಹೆಚ್ಚಾಗುತ್ತದೆ.


ಕಾತ್ಯಾಯಿನಿಗೆ ತನ್ನ ಗಂಡ ಓದುತ್ತಿದ್ದುದನ್ನು ತಾನಾದರೂ ಮುಂದುವರೆಸಿದರೆ ಅವಳಿಗೂ ಮನಸ್ಸು ಸಮಾಧಾನವಾಗುತ್ತದೆಂದು ನಿರ್ಧರಿಸಿ ಮಾವನ ಮುಂದೆ ಆ ನಿರ್ಣಯವನ್ನಿಟ್ಟಾಗ ಶ್ರೋತ್ರಿಯರು ಒಪ್ಪಿದರೂ ಭಾಗೀರತಮ್ಮ ಒಪ್ಪುವುದಿಲ್ಲ. ಶ್ರೋತ್ರಿಯರು ಭಾಗೀರತಮ್ಮನನ್ನು ಒಪ್ಪಿಸಿ ಕಾತ್ಯಾಯಿನಿ ನಿರ್ಧಾರಕ್ಕೆ ಒಪ್ಪಿಗೆ ನೀಡುತ್ತಾರೆ. ಇದರಿಂದ ಅವಳೂ ಕಾಲೇಜಿಗೆ ಹೋಗಲು ಶುರುಮಾಡಿದಳು, ಇತ್ತ ಅವರಿಗೆ ಚೀನಿಯ ಜವಾಬ್ದಾರಿ ಇನ್ನೂ ಹೆಚ್ಚಾಯಿತು. ಚೀನಿಗೆ ವೇದಾಧ್ಯಯನವನ್ನೂ ಶುರುಮಾಡಿದರು. ಒಂದು ದಿನ ಕಾತ್ಯಾಯಿನಿಯನ್ನು ಕೂರಿಸಿಕೊಂಡು ತಮ್ಮ ಆಸ್ತಿಯ ವಿವರಗಳೆನ್ನೆಲ್ಲಾ ತಿಳಿಸಿ, ಮಗು ಮುಂದಕ್ಕೆ ಇದರ ಜವಾಬ್ದಾರಿ ನಿನ್ನದೇ ಹೊಣೆಯೆಂದು ಹೇಳಿಯೂ ಇದ್ದರು. ಆಕೆಯ ಓದು ಕ್ರಮವಾಗಿ ಸಾಗುತ್ತಲೇ ಇದ್ದಿತು. ಅವಳು ಓದುತ್ತಿರುವ ಕಾಲೇಜಿನಲ್ಲಿ ತನ್ನ ಪ್ರೊಫೆಸರ್ ರಾಜರಾಯರನ್ನು ಪ್ರೀತಿಸಿರುತ್ತಾಳೆ. ಇಬ್ಬರೂ ಮದುವೆಯಾಗಲು ನಿರ್ಧಾರಮಾಡಿರುತ್ತಾರೆ. ಒಂದು ದಿನ ಕಾಲೇಜಿಗೆ ಹೋಗುವಾಗ ಶ್ರೋತ್ರಿಯರಿಗೊಂದು ಪತ್ರಕೊಟ್ಟು ಹೋಗುತ್ತಾಳೆ, ಆ ಪತ್ರದಲ್ಲಿ ಆಕೆಯ ನಿರ್ಧಾರವನ್ನು ಬರೆದಿರುತ್ತಾಳೆ, ಅವಳು ಹಿಂದಿರಿಗಿದ ಮೇಲೆ ದಿವಾನಖಾನೆಯಲ್ಲಿ ಕೂರಿಸಿಕೊಂಡು ಮಗು ಇದು ನಿನ್ನ ಭವಿಷ್ಯ ನಿರ್ಧಾರ ನಿನ್ನದೇ, ನಿನಗೆ ಹೋಗಬೇಕೆಂದರೆ ಹೋಗಬಹುದೆಂದು ಅಪ್ಪಣೆ ನೀಡುತ್ತಾರೆ. ಆದರೆ ಕೆಲವೇ ದಿನಗಳಾದ ಮೇಲೆ ಆಕೆಯ ನಿರ್ಧಾರ ತಪ್ಪೆಂದು ತಾನು ಮನೆಯಲ್ಲೇ ಅತ್ತೆ ಮಾವಂದಿರ ಸೇವೆ ಮಾಡಿಕೊಂಡು, ಬಿಡುವಿನ ಸಮಯದಲ್ಲಿ ಭಗವದ್ಗೀತೆಯನ್ನು ಓದಿ ತನ್ನ ಮನಸ್ಸನ್ನು ಶಾಂತವಾಗಿಟ್ಟು ಕೊಂಡಿರುತ್ತೇನೆಂದು ಮಾತು ಕೊಟ್ಟಿರುತ್ತಾಳೆ. 

ಒಂದು ದಿನ ಕಾಲೇಜಿಗೆ ಹೋದ ಕಾತ್ಯಾಯಿನಿ ಬಾರದೆ ಇರುವುದನ್ನು ಕಂಡು ತಮಗೆ ಅನುಮಾನ ಬರುತ್ತದೆ, ಮಾರನೆಯ ದಿನ ಒಂದು ಪತ್ರ ಬಂದಿರುತ್ತದೆ, ತಾನು ರಾಜಾರಾಯರು ಮದುವೆಯಾಗಿರುವರೆಂದು ತಮ್ಮನ್ನು ಆಶೀರ್ವದಿಸಬೇಕೆಂದು ಮತ್ತೊಂದು ದಿನ ಚೀನಿಯನ್ನು ಕರೆದುಕೊಂಡು ಹೋಗುತ್ತೇನೆಂದು ತಿಳಿಸಿರುತ್ತಾರೆ. ಭಾಗೀರತಮ್ಮನಿಗೆ ವಿಷಯ ತಿಳಿದಾಗ ಕಾತ್ಯಾಯನಿಯನ್ನು ಹಾಗು ಶ್ರೋತ್ರಿಯರನ್ನು ನಾನಾ ರೀತಿಯಾಗಿ ಬೈಯ್ಯೂತ್ತಾಳೆ. ಇದಾದ ಕೆಲವು ತಿಂಗಳು ಕಳೆದಮೇಲೆ ಚೀನಿಯನ್ನು ಕರೆದುಕೊಂಡು ಹೋಗುತ್ತೇನೆಂದು ಪತ್ರ ಕಳಿಸಿರುತ್ತಾರೆ.ಆ ದಿನ ನಂಜುಂಡನ ಶ್ರಾದ್ಧ ನಡೆಯುತ್ತಿರುತ್ತದೆ, ಆ ಸಮಯದಲ್ಲಿ ಅಕಸ್ಮಾತ್ ಆಗಿ ಬರುತ್ತಾಳೆ ಅಂದು ತನ್ನ ಮೊದಲನೆಯ ಗಂಡನ ಶ್ರಾದ್ಧವೆಂಬುದು ಅರಿವೇ ಇರುವುದಿಲ್ಲ, ಬಂದಾಗ ಚೀನಿಯೂ ಅಷ್ಟು ಮಾತನಾಡಿಸಲು ಹೋಗುವುದಿಲ್ಲ, ಅವನ ತಿರಸ್ಕಾರರಿಂದ ಅವಳಿಗೆ ಚೂರಿ ಇರಿದಂತಾಗುತ್ತದೆ. ಊಟವಾದ ಮೇಲೆ ಶ್ರೋತ್ರಿಯರು ಕಾತ್ಯಾಯಿನಿ ದಿವಾನಖಾನೆಯಲ್ಲಿ ಕೂತು ಚೀನಿಯ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ. ಶ್ರೋತ್ರಿಯರು ಹೇಳುತ್ತಾರೆ ಮಗು, ಒಂದು ವಂಶದ ಬೀಜವು ಮುಂದುವರೆಯುವುದಕ್ಕಾಗಿಯೇ ಒಂದು ಕ್ಷೇತ್ರವನ್ನು ಬೇರೊಂದು ವಂಶದವರು ದಾನಮಾಡುತ್ತಾರೆ. ಒಮ್ಮೆ ತಾಯಿಯಾದವಳು ಎಂದೆಂದಿಗೂ ತಾಯಿಯೇ, ಪುನಃ ಕನ್ಯೆಯಂತೆ  ಹೊಸ ಪತ್ನಿತ್ವವನ್ನು ಪ್ರಾರಂಭಿಸುವುದು ಹೇಗೆ? ಈ ಮಾತನ್ನು ಕೇಳಿದಾಗ ಆಕೆಗೆ ದುಃಖವಾಗುತ್ತದೆ. ಮಗೂನ ಬಿಟ್ಟು ಹೋಗು ಅಂತ ನಾನು ನನಗಾಗಲಿ ಒಳಗೆ ಅಳುತ್ತ ಕುಳಿತಿರುವ ಮುದುಕಿಯ ಪರವಾಗಲಿ ಭಿಕ್ಷೆ ಬೇಡೋದಿಲ್ಲ. ಮುಪ್ಪಿನ ವಯಸ್ಸಿನಲ್ಲಿ ಅದು ನಮ್ಮನ್ನು ಒಪ್ಪುಮಾಡಲಿ ಅನ್ನೋ ಪ್ರಲೋಭ ನನಗೆ ಎಳ್ಳಷ್ಟೂ ಇಲ್ಲ. ಮಗೂನ ಕರಕೊಂಡೇ ಹೋಗಬೇಕೆಂದು ನಿನ್ನ ಆತ್ಮ ಹೇಳಿದರೆ ಎತ್ತಿಕೊಂಡು ಹೊರಟುಹೋಗು  ಎಂದು ಹೇಳಿದಾಗ ಆಕೆ ಬಿಕ್ಕಿ ಬಿಕ್ಕಿ ಅಳುತ್ತಾ ಚೀನಿಯನ್ನು ಬಿಟ್ಟು ಹೊರಟುಹೋಗುತ್ತಾಳೆ. 

ಕಾತ್ಯಾಯಿನಿ ಮನೆ ಬಿಟ್ಟು ಹೋಗಿ ಒಂದು ವರ್ಷದೊಳಗೇ ಚೀನಿಯ ಚೌಲವನ್ನು ಮುಗಿಸಿದರು. ಚೀನಿಯನ್ನು ಪ್ರಾಥಮಿಕ ಶಾಲೆಗೂ ಸೇರಿಸಿದರು. ೮ ವರ್ಷಗಳ ನಂತರ ಉಪನಯನ ಮಾಡಿ ತಮ್ಮ ತೊಡೆಯ ಮೇಲೆ ಕೂರಿಸಿ ಗಾಯತ್ರಿ ಉಪದೇಶವೂ ಸಹ ಮಾಡಿದರು. ಚೀನಿಯೂ ಪ್ರತಿನಿತ್ಯ ಸಂಧ್ಯಾವಂದನೆ ಅಗ್ನಿಕಾರ್ಯ ಹಾಗು ವೇದಾಧ್ಯಯನ ಚಾಚೂ ತಪ್ಪದೆ ಮಾಡುತ್ತಿದ್ದ. ಚೀನಿ ಈಗ ಅವರಿಗೆ ಭಾಗೀರಥಮ್ಮನಿಗೆ ಹಾಗು ಲಕ್ಷ್ಮಿ ಗೆ ಹೊಂದುಕೊಂಡು ಬಿಟ್ಟಿದ್ದ ತಾಯಿಯ ನೆನಪೇ ಇರಲಿಲ್ಲ. ಆದರೇ ಅದೇ ಸಮಯದಲ್ಲಿ ಭಾಗೀರತಮ್ಮ ಕಾಯಿಲೆಯಾಗಿ ತೀರೀಹೋದರು. ಆ ದುಃಖ ಮನೆಯಲ್ಲಿರುವ ಯಾರಿಗೂ ಸಹಿಸಿಕೊಳ್ಳಲಾಗಲಿಲ್ಲ. ಲಕ್ಷ್ಮಿಯೇ ಚೀನಿಯನ್ನು ಜವಾಬ್ದಾರಿಯನ್ನು ವಹಿಸಿಕೊಂಡಳು. ಈ ಅವಧಿಯಲ್ಲಿ ತಮ್ಮ ಸೊಸೆಯ ಬಗ್ಗೆ ಮಾತನಾಡಬಾರದೆಂದು ನಿರ್ಧರಿಸಿದ್ದರು. ಚೀನಿಗೆ ೧೪ ನಡೀತಿತ್ತು, ಇನ್ನು ನಾಲ್ಕು ವರ್ಷದೊಳಗೆ ಮೊಮ್ಮಗಳನ್ನು ತಂದುಬಿಡಾಣ ಎಂದು ಲಕ್ಷ್ಮಿ ಹೇಳಿದಾಗ ಅವಳ‌ ಸಲಹೆ ಶ್ರೋತ್ರಿಯರಿಗೂ ಒಪ್ಪುತ್ತದೆ. ಅದೇ ಸಮಯದಲ್ಲಿ ಸದಾಶಿವರಾಯರ ನಾಲ್ಕನೆ ಗ್ರಂಥವನ್ನು ಶ್ರೋತ್ರಿಯರಿಗೆ ಅರ್ಪಿಸಿದ ಸಂಗತಿಯೂ ಅವರಿಂದ ತಿಳಿದುಬರುತ್ತದೆ. ಒಂದು ದಿನಾ ಸದಾಶಿವರಾಯರು ತಮ್ಮ ಎರಡನೆ ಹೆಂಡತಿ ಮನೆಗೆ ಬಂದಾಗ ಇವರೇ ಅನ್ನ ಬೇಯಿಸಿ ಹಾಕುತ್ತಾರೆ. ಇರುವಷ್ಟು ದಿನ ರಾಯರ ೫ನೇ ಸಂಪುಟದ ಬರೆಯುವುದಕ್ಕೂ ಮುನ್ನ ಧರ್ಮಕ್ಕೆ ಪಟ್ಪ ಕೆಲವು ಪ್ರಶ್ನೆಗಳಿಗೆಲ್ಲಾ ಶ್ರೋತ್ರಿಯರಿಂದ ಪರಿಹಾರ ದೊರಕಿಸಿಕೊಳ್ಳುತ್ತಾರೆ.ಶ್ರೋತ್ರಿಯರ ಪ್ರಕಾರ ಶತಮಾನಂ ಭವತಿ ಎನ್ನುವುದು ಬರೀ ಮಂತ್ರದಲ್ಲಿ ಉಳಿದಿದೆ ಎಂದು ಕೆಲವು ಸಲ ನಕ್ಕಿದ್ದು ಉಂಟು.

ಶ್ರೋತ್ರಿಯರ ತಂದೆ ನಂಜುಂಡ ಶ್ರೋತ್ರಿಯರ ಶ್ರಾದ್ಧದ ಹಿಂದಿನ ದಿವಸ ಯಾವುದೋ ಪುಸ್ತಕ ಹುಡುಕುವ ಸಮಯದಲ್ಲಿ ಅವರಿಗೆ ಎಷ್ಟೋ ವರ್ಷಗಳ ಹಿಂದಿನ ಒಂದು ಪತ್ರ ಕಾಣುತ್ತದೆ. ಅದರಲ್ಲಿ ಕಿಟ್ಟಪ್ಪ ಶ್ರೋತ್ರಿಯರು(ಶ್ರೀನಿವಾಸ ಶ್ರೋತ್ರಿಯರ ಚಿಕ್ಕಪ್ಪ) ತನ್ನ ತಂದೆಯಾದ ನಂಜುಂಡನಿಗೆ ಪತ್ರ ಬರೆದಿರುತ್ತಾರೆ. ತಮ್ಮನಿಗೇ ಮೋಸಮಾಡಿದಷ ನೀಚ ನೀನು, ಎಷ್ಟೋ ಜನರಿಗೆ ಮೋಸಮಾಡಿದೀಯಾ, ಆದರೇ ಆಸ್ತಿ ಕಬಳಿಸುವುದಕ್ಕೆ ಇಂತಹ ನೀಚ ಕೆಲಸ ಮಾಡಬಾರದಿತ್ತೆಂದು. ಹರಿಕಥೆ ಶ್ಯಾಮದಾಸನ ಕಥೆ ನಮ್ಮೆಲ್ಲರಿಗೂ ತಿಳಿಯಿತು, ನಿನ್ನ ಆಸ್ತಿಯನ್ನು ನಾಯಿ ನರಿ ತಿಂದುಹೋಗಿದ್ದರೂ ನಾನು ಆಶೆಪಡುತ್ತಿರಲಿಲ್ಲ,ನಿಮ್ಮ ಪಾಪ ಪುಣ್ಯಗಳನ್ನು  ದೇವರು ನೋಡಿಕೊಳ್ಳುತ್ತಾನೆ. ಶ್ರೋತ್ರಿಯರಿಗೆ ಯಾರೀ ಶ್ಯಾಮದಾಸ, ತನ್ನ ಚಿಕ್ಕಪ್ಪನಿಗೂ ಅಪ್ಪನಿಗೂ ದ್ವೇಷವಿತ್ತೆ ಇದನ್ನ ಯಾರಿಂದ ತಿಳಿಯಬಹುದೆಂದು ಆಲೋಚಿಸಿದಾಗ ಲಕ್ಷ್ಮಿಯನ್ನು ಕೇಳುತ್ತಾರೆ. ತನ್ನ ತಂದೆ ಮಾಚ ಯಾರಿಗೋ ಹೇಳುತ್ತಿರುವಾಗ ಕೇಳಿಸಿಕೊಂಡಿರುತ್ತಾಳೆ. ಶ್ರೋತ್ರಿಯರು ತಮ್ಮ ಮೇಲೆ ಪ್ರಮಾಣ ಮಾಡಿದಾಗ ಅವಳು ನಡೆದ ವಿಷಯವನ್ನು ಹೇಳುತ್ತಾಳೆ. ಶ್ರೋತ್ರಿಯರ ತಂದೆ ನಂಜುಂಡನದು ದುರಾಶ ಸ್ವಭಾವ, ಕಿಟ್ಟಪ್ಪನದು ಬಹಳ ಧಾರಾಳ. ಇವರಿಬ್ಬರಿಗೂ ಎಲ್ಲಾ ವಿಷಯದಲ್ಲೂ ಜಗಳವೆ. ಕಿಟ್ಟಪ್ಪನಿಗೆ ಇಬ್ಬರು ಮಕ್ಕಳಿರುತ್ತಾರೆ, ನಂಜುಂಡನಿಗೆ ಮಕ್ಕಳೇ ಇರುವುದಿಲ್ಲ. ಯಾವುದೋ ಒಂದು ಸಮಾರಂಭದಲ್ಲಿ ಇವರಿಬ್ಬರ ಜಗಳ ಯಾವ ಮಟ್ಟಕ್ಕೆ ಏರಿತಂದರೆ ಕಿಟ್ಟಪ್ಪ ಮನೆ ಬಿಟ್ಟು ಹೊರಟೇ ಹೋಗುತ್ತಾನೆ. ಇದಾದ ಕೆಲವು ದಿನಗಳ ನಂತರ ಕಿಟ್ಟಪ್ಪ ಪತ್ರ ಬರೆದಿರುತ್ತಾನೆ. ನಿನಗೆ ಮಕ್ಕಳಿಲ್ಲ, ಆಸ್ತಿಯೆಲ್ಲಾ ಮುಂದಿನ ತಲೆಮಾರಿಗೆ ಸೇರಬೇಕೆಂದರೆ ಅದು ತನ್ನ ಇಬ್ಬರ ಮಕ್ಕಳಿಗೇನೆ ಎಂದು ವಿವರಿಸಿರುತ್ತಾನೆ. ಇದನ್ನರಿತ ನಂಜುಂಡ ಹೇಗಾದರೂ ಮಾಡಿ ಆಸ್ತಿ ಉಳಿಸಿಕೊಳ್ಳಲು ಊರಿಗೆ ಹರಿಕಥೆ ಹೇಳುಲು ಬರುವ ಶ್ಯಾಮದಾಸರನ್ನು ಮನೆಗೆ ಕರೆಯಿಸಿ ಆಥಿತ್ಯ ಮಾಡಿ ಅಚ್ಚಮನಿಗೆ ಬಲವಂತ ಮಾಡಿ ಇವರಿಬ್ಬರನ್ನು ಒಂದು ಗೂಡಿಸುತ್ತಾನೆ. ಅದಾದ ಕೆಲವು ತಿಂಗಳಿಗೆ ಅಚ್ಚಮ್ಮ ಗರ್ಭಿಣಿಯಾಗುತ್ತಾಳೆ. ಅವರಿಬ್ಬರ ಮಗನೆ ಶ್ರೀನಿವಾಸ ಶ್ರೋತ್ರಿಯರು. ಇದನ್ನು ತಿಳಿದ ಶ್ರೋತ್ರಿಯರು ಮೂಕರಾದರೂ. ಈ ಪ್ರಸಂಗದಿಂದ ಅವರು ತುಂಬ ನೊಂದುಬಿಡುತ್ತಾರೆ.

ಮರುದಿನ ತನ್ನ ತಂದೆ ನಂಜುಂಡ ಶ್ರೋತ್ರಿಯರ ಶ್ರಾದ್ಧ ಮಾಡುವುದಕ್ಕೆ ಮನಸ್ಸೊಪ್ಪದು. ತಾನು ಅವರಿಗೆ ಹುಟ್ಟಲೇ ಇಲ್ಲವೆಂದು ಅವರು ಶ್ರೋತ್ರಿಯ ವಂಶಕ್ಕೆ ಸೇರಲಿಲ್ಲವೆಂದು ತುಂಬ ದುಃಖಪಡುತ್ತಾರೆ. ಬ್ರಾಹ್ಮಣರ ಭೋಜನ ನಂತರ ಪಿಂಡಗಳನ್ನಿಡುವ ಸಮಯದಲ್ಲಿ ತಮ್ಮ ಮನಸ್ಸಿನಲ್ಲಾಗುತ್ತಿದ್ದ ದುಃಖದ ಪರಿಣಾಮವಾಗಿ ಉರುಳಿ ಬಿಡುತ್ತಾರೆ. ಉರುಳಿದಾಗ ಪಿಂಡವೂ ಜಾರಿ ಒಡೆದುಹೋಗುತ್ತದೆ. ಇದಾದ ಕೆಲವು ಸಮಯದ ನಂತರ ಎಚ್ಚೆತ್ತು ಚೀನಿಯನ್ನು ಕರೆದು ತನ್ನ ಹುಟ್ಟಿನ ಬಗ್ಗೆ ತಿಳಿಸಿ ಇನ್ನು ತಾವು ಸನ್ಯಾಸತ್ವವನ್ನು ಸ್ವೀಕರಿಸುವುದಾಗಿ ಹೇಳಿದಾಗ ಚೀನಿ ಅತ್ತೇ ಬಿಡುತ್ತಾನೆ. ಅದಕ್ಕೂ ಮುಂಚೆ ತಮ್ಮದಲ್ಲದೇ ಆದ ಆಸ್ತಿಯನ್ನು ಅರ್ಧ ಕಿಟ್ಟಪ್ಪ ಪೀಳಿಗೆಯವರಿಗೆ ಸೇರಬೇಕೆಂದು ಅದಕ್ಕೆ ಕಾಗದ ಪತ್ರಕ್ಕೆ ಸಹಿಹಾಬೇಕೆಂದು ಕೇಳಿದಾಗ ಚೀನೀ ಏನೂ ಯೋಚನೆಮಾಡದೆ ತಾತನ ಮಾತಿಗೆ ಬೆಲೆ ಕೊಟ್ಟು ಒಪ್ಪುತ್ತಾನೆ. ಇದರಿಂದ ಶ್ರೋತ್ರರಿಗೆ ಸಂತೋಷವಾಯಿತು ಅಂದಿನಿಂದ ಅವರು ಕಿಟ್ಟಪ್ಪ ಮಕ್ಕಳನ್ನು ಹುಡುಕಲು ಶುರುಮಾಡುತ್ತಾರೆ. ಎಷ್ಟು ಹುಡುಕಿದರೂ ಸಿಗುವುದಿಲ್ಲ ಕಡೆಗೆ ಆಸ್ತಿಯನ್ನು ಸತ್ಪಾತ್ರರಿಗೆ ದಾನಮಾಡಿ ಚೀನಿಗೆ ಸ್ವಲ್ಲ ಹಣ ಉಳಿಸಿ ಸನ್ಯಾಸತ್ವವನ್ನು ಸ್ವೀಕರಿಸಲು ಹೊರಡುತ್ತಾರೆ. ಹೊರಡುವ ಮುಂಚೆ ಕಾತ್ಯಾಯಿನಿಯನ್ನು ನೋಡಲು ಹೋದಾಗ ಅವಳು ಸಾವಿನ ಸ್ಥಿತಿಯಲ್ಲಿರುತ್ತಾಳೆ. ಅವಳಿಗೆ ಚೀನಿಯಿಂದ ಗಂಗಾಜಲ ಕುಡಿಸಿದಾಗ ಆ ಕ್ಷಣದಲ್ಲೇ ಅವಳು ಸಾವನ್ನಪ್ಪುತ್ತಾಳೆ. ಹೊರಡವ ಮುನ್ನ ರಾಜರಾಯರಿಗೆ ತಮ್ಮ ಊರು ಬೆಳ್ಳೂರಂದಾಗ ತಮಗೆ ಕಿಟ್ಟಪ್ಪ ಶ್ರೋತ್ರಿಯರ ಬಗ್ಗೆ ತಿಳಿದಿದೆಯೆ ಎಂದು ಪ್ರಶ್ನೆ ಹಾಕಿದಾಗ ಅವರಿಗೆ ಗೊತ್ತಾಗುತ್ತದೆ, ಸದಾಶಿವರಾಯರಿಗೆ ಹಾಗು ರಾಜಾರಾಯರಿಗೆ ಕಿಟ್ಟಪ್ಪನವರು ಹತ್ತಿರ ಸಂಬಂಧವೆಂಬುದು. ಇದನ್ನು ತಿಳಿದ ಶ್ರೋತ್ರಿಯರು ತಮಗೇ ತಿಳಿಯದಂತೆ ಅವರ ಬಾಯಿಂದ ದುಡುಕಿ ಬಿಟ್ಟೆ ಎಂದು ಮಾತು ಹೊರಡುತ್ತದೆ.

ಶ್ರೋತ್ರಿಯರ ಪಾತ್ರ ಅತ್ಯದ್ಭುತ, ಅವರ ಗುಣ, ಅವರ ಆಚಾರ ವಿಚಾರಗಳು, ನಮ್ಮ ಮನಸ್ಸನ್ನು ಸೆಳೆದುಬಿಡುತ್ತದೆ. ತಮ್ಮ ಹುಟ್ಟಿನ ನಿಜ ಸಂಗತಿಯನ್ನು ತಿಳಿದಾಗ ಮಾತ್ರ ಅವರು ದುಃಖ ಪಡುತ್ತಾರೆ. ಹೀಗೆ ಒಂದೊಂದು ಪಾತ್ರವನ್ನು ಇಟ್ಟುಕೊಂಡು ಒಂದೊಂದು ವಿಮರ್ಶೆಯನ್ನು ಬರೆಯಬಹುದು. ಮೊದಲೇ ಹೇಳಿದಂತೆ ಈ ಕಾದಂಬರಿಯಲ್ಲಿ ಬರುವ ಪ್ರತಿಯೊಬ್ಬರೂ ಒಳ್ಳೆಯವೆರೆ, ಎಲ್ಲರೂ ಒಳ್ಳೆಯವರಾಗಿ ಎಲ್ಲರೂ ನೊಂದುತ್ತಾರೆ. ಶ್ರೀನಿವಾಸ ಶ್ರೋತ್ರಿಯರ ಮನೆಯಲ್ಲಿ ಕೆಲಸ ಮಾಡುವ ಲಕ್ಷ್ಮಿಯ ಪಾತ್ರಕ್ಕೂ ಸಹ ಎಷ್ಟು ಪ್ರಾಮುಖ್ಯತೆ ಕೊಟ್ಟಿದ್ದಾರೆಂದರೆ ಅದು ಅದ್ಭುತ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕೇಯ ಭಟ್‌