Article

ಬರ ಅಂದ್ರೆ ಎಲ್ಲರಿಗೂ ಇಷ್ಟ: ಇದು ಭಾರತದ ಕಥನ

ಭಾರತದ ಕಡು ಬಡ ಜಿಲ್ಲೆಗಳ ಕಥನವನ್ನು ಕಟ್ಟುಕೊಟ್ಟಿರುವ ಬರ ಅಂದ್ರೆ ಎಲ್ಲರಿಗೂ ಇಷ್ಟ ಪುಸ್ತಕ ‌ಓದಿ ಮುಗಿಸುವ ಹೊತ್ತಿಗೆ ಕಣ್ಣುಗಳು ತೇವಗೊಂಡವು, ಮನಸ್ಸು ಭಾರವಾಯಿತು. ನಾನು ಕೂಡ ಭಾರತದ ಏಳು ರಾಜ್ಯಗಳ ಹಲವು ಜಿಲ್ಲೆಗಳ ನೋವನ್ನು ನೋಡಿದ ಅನುಭವವಾಯಿತು. ಓದುತ್ತಾ ಓದುತ್ತಾ ಆ ಜಿಲ್ಲೆಗಳನ್ನು ಮತ್ತಷ್ಟು ಕಣ್ಮುಂದೆ ತಂದುಕೊಳ್ಳುವುದಕ್ಕೋಸ್ಕರ ಗೂಗಲ್ ಮ್ಯಾಪ್‍ನಲ್ಲಿ ಹುಡುಕಾಡಿದೆ. ಭಾರತದ ಬಡತನವನ್ನು ಕೇವಲ ಪ್ರಕರಣಗಳಾಗಿ ನೋಡದೆ ಪ್ರಕ್ರಿಯೆಯಾಗಿ ನೋಡಿದಾಗ ಎದೆ ನಡುಗಲಿಕ್ಕೆ ಶುರುವಾಯಿತು.

ಇದು ತಮ್ಮ ಗ್ರಾಮೀಣ ಭಾರತದ ಕಡುಕಷ್ಟಗಳ ಕುರಿತು ಸುತ್ತಾಡಿ ಪಿ.ಸಾಯಿನಾಥ್‍ರವರು ಬರೆದ ವರದಿಗಳ ‘ಎವರಿಬಡಿ ಲವ್ಸ್ ಎ ಗುಡ್ ಡ್ರಾಟ್‍ನ’ ಕನ್ನಡ ಅನುವಾದ “ಬರ ಅಂದ್ರೆ ಎಲ್ಲರಿಗೂ ಇಷ್ಟ” ಪುಸ್ತಕದ ಕುರಿತು ಮಾತನಾಡುತ್ತಿದ್ದೇನೆ. ಹೆಸರಾಂತ ಪತ್ರಕರ್ತರಾದ ಜಿ.ಎನ್ ಮೋಹನ್‍ರವರು ಈ ಪುಸ್ತಕವನ್ನು ಬಹಳ ಜತನದಿಂದ ಕನ್ನಡಕ್ಕೆ ತಂದಿದ್ದಾರೆ. ಈ ಪುಸ್ತಕದ ಕುರಿತು ಈಗಾಗಲೇ ನೂರಾರು ಅನಿಸಿಕೆಗಳು ಬಂದುಹೋಗಿದ್ದರೂ ಕೂಡ ಓದುಗನಾಗಿ ನನ್ನ ಅಭಿಪ್ರಾಯವನ್ನು ದಾಖಲಿಸಲೇಬೇಕೆಂಬ ತುಡಿತವಿದೆ. ಇಲ್ಲಿರುವ ವರದಿಗಳು 1993-1995ರ ನಡುವಿನ ಮಧ್ಯಪ್ರದೇಶ, ಬಿಹಾರ, ಓರಿಸ್ಸಾ, ತಮಿಳುನಾಡು ರಾಜ್ಯಗಳ ಹಲವು ಜಿಲ್ಲೆಗಳ ಕುರಿತಾಗಿಯೇ ಇದ್ದರೂ ಕೂಡ ಅವು ನಮ್ಮ ಮನಕಲಕುತ್ತವೆ ಮತ್ತು ನಮ್ಮ ಸುತ್ತಮುತ್ತಲು ನಡೆಯುವ ಇದೇ ವಾಸ್ತವಗಳ ನೆನಪಾಗುತ್ತವೆ. ಮತ್ತು ಈ ವ್ಯವಸ್ಥೆಯ ವಿರುದ್ಧ ಏನಾದರೂ ಮಾಡಬೇಕೆಂದು ಪ್ರಚೋದಿಸುತ್ತವೆ. ಭಾರತದ ಬರ, ಬಡತನ, ಶಿಕ್ಷಣ, ಆರೋಗ್ಯ, ಆಡಳಿತ ಮತ್ತು ಅಭಿವೃದ್ದಿಯ ಕಲ್ಪನೆಗಳ ಕುರಿತಾಗಿ ನಮ್ಮ ನಡುವಿನ ವಾಸ್ತವಾಂಶಗಳನ್ನು ಬಿಚ್ಚಿಡುವ ಈ ಪ್ರಯತ್ನ ನಮ್ಮನ್ನು ತೀವ್ರ ಚಿಂತೆಗೀಡುಮಾಡುತ್ತದೆ.
ಸಂಪದ್ಭರಿತವಾದ ನಮ್ಮ ಭಾರತದಲ್ಲಿ ಸಂಪನ್ಮೂಲಗಳನ್ನು ಹೇಗೆ ಕೆಲವೇ ಜನರು ನುಂಗಿ ಹಾಕುತ್ತಾರೆ ಮತ್ತು ಅದರಿಂದ ಬಹುಸಂಖ್ಯಾತ ಜನತೆ ಅನುಭವಿಸುವ ಬಡತನ, ಬರ, ಹಸಿವು, ಅವಮಾನ, ಆಕ್ರಂದನಗಳನ್ನು ಕಣ್ಣಾರೆ ಕಂಡು ಘಟನೆಗಳ ಮೂಲಕವೇ ಸಾಯಿನಾಥ್‍ರವರು ದಾಖಲು ಮಾಡಿದ್ದಾರೆ. ಓದಿದ ಯಾರಿಗಾದರೂ ಇದು ನಿಜವೆ ಅನ್ನಿಸಬಹುದು. ಆದರೆ ಇದನ್ನು ನೋಡಲು ಸಾಯಿನಾಥ್‍ರವರ ರೀತಿ ಒಳಗಣ್ಣು ಬೇಕಾಗುತ್ತದೆ. ಈ ಪುಸ್ತಕದ ಮತ್ತೊಂದು ಸಾರ್ಥಕ್ಯವೆನೆಂದರೆ ತಾವು ಭೇಟಿ ಕೊಟ್ಟ ಜನರ ಸ್ಥಿತಿಯನ್ನು ವರದಿಯಾಗಿ ಬರೆದ ಸಾಯಿನಾಥ್‍ರವರು ಅಲ್ಲಿಗೆ ನಿಲ್ಲುವುದಿಲ್ಲ. ವರದಿಯ ನಂತರ ಆದ ಬೆಳವಣ ಗೆಗಳನ್ನು ಉಲ್ಲೇಖಿಸುವುದು ಅಷ್ಟೇ ಅಲ್ಲದೇ ಅದೇ ಸ್ಥಳಗಳಿಗೆ ಎರಡು ವರ್ಷದ ನಂತರ ಮತ್ತೆ ಭೇಟಿ ನೀಡಿ ಫಾಲೋಅಪ್ ಸ್ಟೋರಿ ಕೂಡ ಮಾಡಿದ್ದು ವಿಸ್ಮಯ ಎನಿಸಿದೆ. ಇದು ನೋವನ್ನು ಕಂಡು ಬರೆಯುವ ಪತ್ರಕರ್ತನಿಗೂ ಮತ್ತು ಆ ನೋವನ್ನು ತನ್ನದಾಗಿಸಿಕೊಂಡು ಬರೆಯುವ ಪತ್ರಕರ್ತನಿಗೂ ಇರುವ ವ್ಯತ್ಯಾಸವನ್ನು ತೋರಿಸುತ್ತದೆ.

ಪಿ. ಸಾಯಿನಾಥ್ ಯಾವ ಊರಿಗೆ ಹೋದರೂ ಇಂತಹದೇ ಹೃದಯ ವಿದ್ರಾವಕ ಘಟನೆಗಳು ಕಾಣುತ್ತವೆಯೇ ಎಂದು ಯೋಚಿಸಬಹುದು. ಆದರೆ ಅವರು ಹೋಗಲು ಸಾಧ್ಯವಾಗದಿರುವ ಲಕ್ಷಾಂತರ ಗ್ರಾಮಗಳಲ್ಲಿ ಪರಿಸ್ಥಿತಿ ಇನ್ನೆಷ್ಟು ಹದಗೆಟ್ಟಿರಬಹುದು ಎಂಬುದನ್ನು ನಾವು ಊಹಿಸಬಹುದು. ಇಂತಹ ಪರಿಸ್ಥಿತಿಯನ್ನು ಕೇವಲ ಬಡತನ ಅಥವಾ ಬರದ ಪ್ರಕರಣಗಳಾಗಿ ಮಾತ್ರ ಉಳಿದ ಪತ್ರಕರ್ತರು ಮತ್ತು ಆಡಳಿತ ವ್ಯವಸ್ಥೆ ಕಾಣುತ್ತಿದೆ. ಇದೊಂದು ಪ್ರಕ್ರಿಯೆ ಎಂದು ನೋಡುತ್ತಿಲ್ಲ ಇದೇ ಸಮಸ್ಯೆಯ ಮೂಲ ಎಂದು ಸಾಯಿನಾಥ್ ಗುರುತಿಸುತ್ತಾರೆ. ಕೆಲವು ಘಟನೆಗಳು ಪ್ರಕರಣಗಳಾಗಿ ಗಮನ ಸೆಳೆಯುತ್ತವೆ ಆದರೆ ಸಮಸ್ಯೆ ಮಾತ್ರ ಬಗೆಹರಿಯುವುದಿಲ್ಲ ಎಂದು ದೂರುತ್ತಾರೆ. ಹಾಗಾಗಿಯೇ ಭಿನ್ನ ಮಾದರಿಯಲ್ಲಿ ಭಾರತವನ್ನು ತೋರಿಸುವ ಪ್ರಯತ್ನವನ್ನು ಮಾಡುತ್ತಾರೆ. ಇವರ ವರದಿಗಳ ಮಹತ್ವವನ್ನರಿತು ಬಹಳಷ್ಟು ಕೆಲಸಗಳು ಆ ಪ್ರದೇಶಗಳಲ್ಲಿ ಆಗಿವೆ. ಮೇಲ್ಮೆಯಲ್ಲಷ್ಟೆ ಬಡತನದ ಬಗ್ಗೆ ತಿಳಿದ ನಮಗೆ ಅದರ ಆಳ ಅಗಲ ಅರ್ಥಮಾಡಿಕೊಳ್ಳಲು ಈ ಪುಸ್ತಕ ಸಹಕರಿಸುತ್ತದೆ.

ಈ ದೇಶದ ಕಟ್ಟಕಡೆಯ ವ್ಯಕ್ತಿಗಳೆನ್ನಬಹುದಾದ, ಆದರೆ ಅವರ ದುಡಿಮೆಯಿಂದ ಅಪಾರ ಸಂಪತ್ತು ಸೃಷ್ಟಿಯಾಗುತ್ತಿರುವ ಆದಿವಾಸಿಗಳು, ದಲಿತರು, ಮಹಿಳೆಯರು, ರೈತರು ಮತ್ತು ವಲಸೆ ಕಾರ್ಮಿಕರ ಕುರಿತಾಗಿ ಸಾಯಿನಾಥ್ ಬರೆಯುತ್ತಾ ಅವರೊಡನೆ ಬೆರೆಯುತ್ತಾರೆ. ಈ ವ್ಯಕ್ತಿಗಳು ತಮ್ಮದಲ್ಲದ ತಪ್ಪಿಗೆ ಅಭಿವೃದ್ದಿ ಹೆಸರಿನಲ್ಲಿ ಎತ್ತಂಗಡಿಯಾಗುವ, ಬೀದಿಗೆ ಬೀಳುವ, ಗುಳೆ ಹೋಗುವ ಪರಿಸ್ಥಿತಿಗಳನ್ನು ಚಿತ್ರಿಸಿದ್ದಾರೆ. ಆದರೆ ಇದರಿಂದ ಅಭಿವೃದ್ಧಿ ಎಳ್ಳಷ್ಟು ಆಗುವುದಿಲ್ಲ. ಮೊದಲಿಗೆ ಈ ಅಭಿವೃದ್ದಿ ಎಂಬ ಪರಿಕಲ್ಪನೆಯೇ ಮಿಥ್ಯೆ. ಬದಲಿಗೆ ಉಳ್ಳವರು, ಗುತ್ತಿಗೆದಾರರು, ಲೇವಾದೇವಿಗಾರರು, ಭೂಮಾಲೀಕರು, ರಾಜಕಾರಣ ಗಳು, ಅಧಿಕಾರಸ್ಥರು ಹೇಗೆ ಇಂತಹ ಪರಿಸ್ಥಿತಿಗಳ ಲಾಭ ಪಡೆದು ದೋಚುತ್ತಾರೆ ಎಂಬುದು ಕಣ್ಣಿಗೆ ರಾಚುತ್ತದೆ. ಅದಕ್ಕಾಗಿಯೇ ಬರ ಅಂದ್ರೆ ಎಲ್ಲರಿಗೂ ಇಷ್ಟ ಎಂಬುವ ಶೀರ್ಷಿಕೆಯನ್ನು ಪುಸ್ತಕಕ್ಕೆ ಇಟ್ಟಿದ್ದಾರೆ. 

ಬರದಿಂದ ತತ್ತರಿಸಿದವರಿಗೆ ಬಿತ್ತನೆಗಾಗಿ ಕಡಲೇಕಾಯಿ ಬೀಜ ವಿತರಿಸಿದರೆ ಅವರು ಬಿತ್ತುವ ಬದಲು ತಿಂದು ಬಿಡುತ್ತಾರೆ. ತಮಿಳುನಾಡಿನ ದಲಿತನೊಬ್ಬ ಕೇವಲ 5ರಿಂದ 8 ರೂಗಳಿಗಾಗಿ ದಿನಕ್ಕೆ 16 ಗಂಟೆಗಳ ಕಾಲ 150 ಈಚಲ ಮರಗಳನ್ನು ಹತ್ತಿ ಇಳಿಯುವ ಅತೀ ಕಠಿಣ ದುಡಿಮೆ ಮಾಡುತ್ತಾನೆ. ಬಿಹಾರದಲ್ಲಿ 250 ಕೆಜಿ ತೂಕದ ಇದ್ದಿಲನ್ನು 40ರಿಂದ 50 ಕಿ.ಮಿ ದೂರ ಸೈಕಲ್‍ನಲ್ಲಿ ತುಂಬಿ ತಳ್ಳಿಕೊಂಡು ಹೋದರೆ ಅವರಿಗೆ ಸಿಗುವುದು ಕೇವಲ 10 ರೂಗಳು ಮಾತ್ರ. ಓರಿಸ್ಸಾದ ಇಟ್ಟಿಗೆ ಭಟ್ಟಿಗಳಲ್ಲಿ ಸಾಯುವವರೆಗೂ ಜೀತ ದುಡಿದರೂ ತೀರದ ಸಾಲ. ಹಾಗೆಯೇ ಸ್ವಾಭಿಮಾನದಿಂದ ಸಾಲ ಮಾಡಿ ಈರುಳ್ಳಿ ಬೆಳೆದ ರೈತ ವ್ಯಾಪರಸ್ಥರ ಹಿಡಿತದಿಂದ ಮಾರಲಾಗದೇ ರಸ್ತೆಯಲ್ಲಿ ಚೆಲ್ಲುವ ದೃಶ್ಯ. ಹುಟ್ಟುತ್ತಲೇ ಕ್ರಿಮಿನಲ್‍ಗಳೆಂಬ ಹಣೆಪಟ್ಟೆ ಹೊತ್ತ ಬುಡಕಟ್ಟು ಜನರು, ಒಬ್ಬರಿಗೆ ದಿನಕ್ಕೆ ಕೇವಲ 6 ಲೀಟರ್ ಸಿಗುವ ನೀರಿಗಾಗಿ ಹತ್ತಾರು ಐದಾರು ಕಿ.ಮೀ ನಡೆಯುವ ಮಹಿಳೆಯರು ಈ ರೀತಿಯ ಹಲವು ವರದಿಗಳು ನಾವು ಎಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದು ಕಂಗೆಡಿಸುತ್ತವೆ. ಆದರೆ ಇಲ್ಲಿಯೂ ಕೂಡ ಇವೆಲ್ಲ ಕೇವಲ ಪ್ರಕರಣಗಳಲ್ಲ. ನೂರಾರು ವರ್ಷಗಳ ಶೋಷಣೆ ಮತ್ತು ವಂಚನೆಯ ಪ್ರಕ್ರಿಯೆ ಎಂಬುದನ್ನು ನಾವು ಮರೆಯಬಾರದು.

ಹಾಗಾದರೆ ಈ ಪುಸ್ತಕದಲ್ಲಿ ಬರೀ ನೋವಿನ ಕಥೆಗಳಷ್ಟೆ ಇವೆ ಎಂದು ನಾವು ಭಾವಿಸಬೇಕಿಲ್ಲ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಜೀವನಪ್ರೀತಿಯುಳ್ಳ ಜನ ಹೋರಾಡಿ ಗೆದ್ದುದರ ಅಧ್ಯಾಯಗಳೂ ಇವೆ. ಇದು ಜನ ಸದಾ ಭವಿಷ್ಯದ ಬಗೆಗೆ ಇಟ್ಟಿರುವ ಭರವಸೆಯನ್ನು, ಸಾಯಿನಾಥ್‍ರವರ ಆಶಾವಾದವನ್ನು ತೋರಿಸುತ್ತದೆ. ಸಾಯಿನಾಥ್ ಪ್ರಕಾರ ಜನಗಳೆ ಹಿರೋಗಳು. ಈ ಬದಲಾವಣೆಗೆ ಸಾಕ್ಷರತಾ ಆಂದೋಲನ ಎಂತಹ ಗಾಢ ಪರಿಣಾಮ ಬೀರಿದೆ ಎಂದರೆ ಅದನ್ನು ವಿವರಿಸಲು ಸಾಧ್ಯವಿಲ್ಲ ಅನ್ನಿಸುತ್ತದೆ. ತಮಿಳುನಾಡಿನ ಪುದುಕೊಟ್ಟೈ ಕಲ್ಲುಗಣ ಗಳಲ್ಲಿ 43 ಡಿಗ್ರಿ ತಾಪಮಾನದಲ್ಲಿಯೂ ಗುತ್ತಿಗೆ ಪಡೆದು ದುಡಿದು ಸ್ವಂತ ಮನೆಗಳನ್ನು ಕಟ್ಟಿಕೊಂಡ ದಿಟ್ಟ ಮಹಿಳೆಯರಾದ ಪಳನಿಯಮ್ಮ ಮತ್ತು ವಸಂತರವರ ಕಥೆ, ಬಿಹಾರದ ಪಲಮಾವುನಲ್ಲಿ ಊರಿನ ಜನರೇ ವನಸಮಿತಿಗಳನ್ನು ರಚಿಸಿಕೊಂಡು ಲಕ್ಷಾಂತರ ಮರನೆಟ್ಟು ದಟ್ಟ ಕಾಡು ಬೆಳಿಸಿದ್ದರ ಕಥೆ, ಸಾರಾಯಿ ದಂಧೆಯ ವಿರುದ್ದ ಮಹಿಳೆಯರ ಹೋರಾಟದ ಕಥೆ ಸ್ಫೂರ್ತಿ ನೀಡುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ತಮಿಳುನಾಡಿನ ಪುದುಕೊಟ್ಟೈನಲ್ಲಿ ಸಾಮಾಜಿಕ ಚಳವಳಿಯಾಗಿ 18 ತಿಂಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮಹಿಳೆಯರು ಸೈಕಲ್ ತುಳಿದ ಪ್ರಕ್ರಿಯೆ ಬಹುದೊಡ್ಡ ಆತ್ಮವಿಶ್ವಾಸದ ಪ್ರತೀಕವಾಗಿ ಕಾಣುತ್ತದೆ.

ಮಧ್ಯಪ್ರದೇಶದ ಸುರ್ಗುಜದಲ್ಲಿ ಮಾಂತ್ರಿಗ ಗ್ರಾಮದ ಜುಗ್‍ಮಾರಿಯ ಮತ್ತು ಗುರುವಾರಿ ಎಂಬ ಅನಕ್ಷರಸ್ಥ ಮಹಿಳೆಯರು ಮಾರುಕಟ್ಟೆಗೆ ಹೋಗಿದ್ದಾಗ ಆ ಊರಿನ ಕೆಲವರು ಒಂದು ಅರ್ಜಿಯಲ್ಲಿ ಇವರಿಬ್ಬರ ಸಹಿ ಹಾಕಿಸಿಕೊಂಡರು. ನಂತರ ನೀವಿಬ್ಬರು ಗ್ರಾಮಪಂಚಾಯ್ತಿ ಸದಸ್ಯರಾಗಿ ಚುನಾಯಿತರಾಗಿದ್ದೀರಿ ಎಂದು ಘೋಷಿಸಿದರು. ಎರಡನೇ ಘಟನೆಯಲ್ಲಿ ಜಬುವಾ ಹಳ್ಳಿಯಲ್ಲಿ ಶೇ.65% ರಷ್ಟು ಸ್ಥಾನಗಳು ಮಹಿಳಾ ಮೀಸಲು ಸ್ಥಾನಗಳು. ಆದರೆ ಇಲ್ಲಿರುವ ಎಲ್ಲಾ ಶೇ100% ರಷ್ಟು ಪಂಚಾಯ್ತಿ ಸದಸ್ಯರು ಕೇವಲ ಮಹಿಳೆಯರೆ. “ಈ ಪಂಚಾಯತ್‍ನ ಮೂರನೇ ಒಂದು ಎರಡು ಭಾಗ ಮಹಿಳೆಯರು ಆಯ್ಕೆಯಾಗಬೇಕು ಅನ್ನುವುದಾರೆ ಪುರಷರು ಅಲ್ಪಸಂಖ್ಯಾತರಾಗಿ ಈ ಮಹಿಳೆಯರ ಎದುರು ಕೂರುವುದು ಎಂದರೆ ಏನು? ಎಂದು ಒಬ್ಬ ಪುರುಷ ಹೇಳಿದಾಗ ಏಕೆ ಕೇವಲ ಮಹಿಳೆಯರೆ ಆಯ್ಕೆಯಾಗಿದ್ದಾರೆಂದು ಅರ್ಥವಾಯಿತು. ಈ ಘಟನೆ ನಾನು ಓದಿದಾಗ ಆರಂಭದಲ್ಲಿ ನಗು ಬಂತು. ಆದರೆ ಅದು ಈ ದೇಶದ ಮಹಿಳೆಯರ ಕುರಿತ ಪುರುಷ ಪ್ರಧಾನ ಮನಸ್ಥಿತಿಯೆಂದು ತಿಳಿದುಬಂದಾಗ ಬಹಳ ನೋವಾಯಿತು.
ಪುಸ್ತಕದ ಕೊನೆಯಲ್ಲಿ ದೇಶದ ಬಹುಸಂಖ್ಯಾತ ಜನತೆಗೆ “ಭೂಸುಧಾರಣೆ ಮಾಡದೆ, ಶಾಲೆಗಳ ಸುಧಾರಣೆ ಮಾಡದೆ, ಮೂಲಭೂತ ಆರೋಗ್ಯವನ್ನು ಒದಗಿಸದೆ, ಉದ್ಯೋಗ ನೀಡದೆ ಪಲಾಯನ ಮಾಡುವುದನ್ನೇ ವ್ಯವಸ್ಥೆ ಅಭಿವೃದ್ದಿ ಎಂದು ಕರೆಯುತ್ತಿದೆ” ಎಂಬ ಗಂಭೀರ ಆರೋಪ ಮಾಡುವ ಸಾಯಿನಾಥ್, ಬಡತನ ಮತ್ತು ಅಭಿವೃದ್ದಿಯ ಕುರಿತು ಮಾಧ್ಯಮಗಳ ಸಂಕುಚಿತ ಧೋರಣೆಯನ್ನು ಖಂಡಿಸುತ್ತಾರೆ. ‘ಭಾರತದ ಸಮಸ್ಯೆಗಳ ಪರಿಹಾರದ ಹೊರೆಯನ್ನು ಸರ್ಕಾರಗಳು ಎನ್‍ಜಿಓಗಳ ಮೇಲೆ ಹಾಕಲು ಬಯಸುತ್ತಿವೆ. ಒಂದಿಷ್ಟು ಎನ್‍ಜಿಓಗಳು ಒಳ್ಳೆಯ ಕೆಲಸ ಮಾಡುತ್ತಿದ್ದರೂ ಸಹ ಹಲವು ಎನ್‍ಜಿಓಗಳು ತಮಗೆ ಹಣಕಾಸಿನ ಸಹಾಯ ಒದಗಿಸುವ ಕಾರ್ಪೋರೇಟ್ ಸಂಸ್ಥೆಗಳ ತಾಳಕಷ್ಟೆ ಕುಣ ಯುತ್ತಾರೆ. ಆದರೆ ಮಾಧ್ಯಮಗಳ ಮೂಲಕ ಹೀರೋಗಳಾಗಿ ಹೆಸರು ಪಡೆಯಲು ಮುಂದಾಗುತ್ತಾರೆ. ನಮ್ಮ ರಾಷ್ಟ್ರದಲ್ಲಿರುವ ಎಲ್ಲಾ ಒನ್‍ಜಿಓಗಳ ಎಲ್ಲಾ ಯೋಜನೆಗಳು ಒಟ್ಟಾಗಿ ಕೂಡಿಸಿದರೂ ಅದು ಯಾವುದೇ ಒಂದು ರಾಜ್ಯದಲ್ಲಿ ಭೂ ಸುಧಾರಣೆ ಉಂಟು ಮಾಡುವ ಪರಿಣಾಮವನ್ನು ಉಂಟು ಮಾಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಸಾಯಿನಾಥ್.

ಹೆಚ್ಚು ಕಡಿಮೆ 25 ವರ್ಷಗಳ ನಂತರ ಇಂದು ಆ ಸ್ಥಳಗಳ ಸ್ಥಿತಿಗತಿ ಕೊಂಚ ಸುಧಾರಣೆ ಕಂಡಿರಬಹುದು. ಜೊತೆಗೆ ಹಲವು ಬುಡಕಟ್ಟುಗಳು ಮತ್ತು ಆದಿವಾಸಿಗಳು ತಥಾಕತಿಥ ಅಭಿವೃದ್ದಿ ಮಾದರಿಗಾಗಿ ಇಂದು ತ್ಯಾಗಮಾಡಿ ಕಣ್ಮರೆಯಾಗಿರಬಹದು. ಆದರೆ ಇಂದೂ ಕೂಡ ಇಂತಹ ಅನ್ಯಾಯ, ಅಕ್ರಮದ ಸ್ಥಿತಿಗಳು ಇಲ್ಲವೆಂದಲ್ಲ. ಬದಲಾದ ಸ್ವರೂಪದೊಂದಿಗೆ ಇಂದಿಗೂ ಇವು ಜೀವಂತವಾಗಿ ಉಸಿರಾಡುತ್ತಿವೆ. ಲಕ್ಷಾಂತರ ರೈತರ ಆತ್ಮಹತ್ಯೆಗಳು, ಭೂ ಹೀನ ಜನರ ಗುಳೆ ಹೋಗುವಿಕೆ ಮತ್ತು ಪರದಾಟ, ಉದ್ಯೋಗಕ್ಕಾಗಿ ಕೋಟ್ಯಾಂತರ ಜನರ ಅಲೆದಾಟ ಮಾತ್ರ ನಿಂತಿಲ್ಲ. ಇಂದೂ ಕೂಡ ಅಭಿವೃದ್ದಿ ಹೆಸರಿನಲ್ಲಿ ಅರಣ್ಯ ನಾಶ ಎಗ್ಗಿಲ್ಲದೇ ನಡೆಯುತ್ತಿದೆ. ಅಂತರ್ಜಲ ಬತ್ತಿ ಹೋಗುತ್ತಿದೆ. ಇವುಗಳು ಇಂದು ಕೇಳಿ, ಕೇಳಿ ಸಾಮಾನ್ಯ ಅನ್ನಿಸಿಬಿಟ್ಟಿರಬೇಕು. ಅಥವಾ ಇವುಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ, ಏಕೆಂದರೆ ಬರ ಅಂದ್ರೆ ಎಲ್ಲರಿಗೂ ಇಷ್ಟ ತಾನೇ?

ಸಾಯಿನಾಥ್‍ರವರು ಈ ವರದಿಗಳನ್ನು ಬರೆದ ಕಾಲಘಟ್ಟದಲ್ಲಿ ಭಾರತಕ್ಕೆ ಕಾಲಿಟ್ಟ ಜಾಗತೀಕರಣ ಈ ಸಮಸ್ಯೆಗಳನ್ನು ಇಂದು ಅಮುಖ್ಯಗೊಳಿಸಿಬಿಟ್ಟಿದೆ. ಆದರೆ ಸಮಾಜದ ಒಳಿತು ಬಯಸುವವರು, ಎಲ್ಲಾ ಜನರ ಸ್ವಾಸ್ಥ್ಯ ಬಯಸುವವರು ಈ ಪುಸ್ತಕವನ್ನು ನಮ್ಮ ಬೆಳಕಿನ ದೀಪವನ್ನಾಗಿ ಮಾಡಿಕೊಳ್ಳಲೇಬೇಕಿದೆ. ಎಲ್ಲಾ ಸಮಸ್ಯೆಗಳು ಮತ್ತು ಭಾರತ ಸಮಾಜದ ಪರಿಸ್ಥಿತಿ ನಮಗೆ ಅರ್ಥವಾಗಿಬಿಟ್ಟಿದೆ ಎಂಬುದಕ್ಕಿಂತ ಇನ್ನೂ ಭಿನ್ನವಾಗಿ ನೋಡುವ ಕ್ರಮವನ್ನು ಈ ಪುಸ್ತಕ ನಮಗೆ ತೋರಿಸುತ್ತದೆ. ಓದಿದವರೂ ಮತ್ತೊಮ್ಮೆ, ಓದದವರು ತಪ್ಪದೆಯೂ ಈ ಪುಸ್ತಕವನ್ನು ಓದಲೇಬೇಕಿದೆ. ಈ ನಿಟ್ಟಿನಲ್ಲಿ ಭಿನ್ನವಾಗಿ ಆಲೋಚನೆಯನ್ನು ದಾಖಲಿಸಿದ ಪಿ. ಸಾಯಿನಾಥ್‍ರವರಿಗೂ, ಕನ್ನಡ ಓದುಗರಿಗೂ ದಕ್ಕಿಸಿಕೊಟ್ಟ ಜಿ.ಎನ್ ಮೋಹನ್‍ರವರಿಗೂ ಧನ್ಯವಾದಗಳು.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುತ್ತುರಾಜು