Article

ಬೆಟ್ಟ ಮಹಮ್ಮದನ ಬಳಿ ಬಾರದಿದ್ದರೆ

'ಛೇ...ಕೊನೆಯ ಆ ಸಾಲಿನಲ್ಲಿ ಆ ಶೀರ್ಷಿಕೆ ಅವರಿಗಿಬ್ಬರಿಗೆ ಮಾತ್ರ ಮೀಸಲಿರಿಸದಿದ್ದರೆ ಅದು ಲೇಖಕರಿಗೂ ಅನ್ವಯವಾಗುತ್ತಿರುತ್ತಿತ್ತಲ್ವಾ' ಹೀಗೊಂದು ಯೋಚನೆ‌ ಓದಿ ಮುಗಿಸುತ್ತಿರುವಂತೆ ತೇಲಿ ಬಂತು. ಹಿರಾ ಗುಹೆಗೆ ಹೊರಟ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿಸಲ್ಲಮರ ಬಗ್ಗೆ ಈ ಉಕ್ತಿಯೊಂದು ಉದಯಿಸಿತೆಂಬುವುದು ನನ್ನ ಅಂಬೋಣ. ಪೈಗಂಬರರಿಗೆ ಪ್ರವಾದಿತ್ವ ಲಭಿಸುವಾಗ ಬೆಟ್ಟವೊಂದರಲ್ಲಿದ್ದ ಹಿರಾ ಎಂಬ ಗುಹೆಯಲ್ಲಿ ತಂಗಿದ್ದರು. ಇದೇ ಮುಂದೆ ಈ ಉಕ್ತಿಗೂ, ಈ ಕೃತಿಯ ಹೆಸರಿಗೂ ನಾಂದಿಯಾಯಿತೆಂದು ನಂಬೋಣ.ಇದೊಂದು ಸಂಕೀರ್ಣ ಕೃತಿ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಲಾಗದಷ್ಟು ಫಿಲಾಸಫಿಕಲ್ ಶೈಲಿ. ನಿಖರವಾಗಿ ಹೇಳಿದರೆ ಕನ್ನಡ ಸಾಹಿತ್ಯದಲ್ಲಿ‌ ಕಂಡ ಸೋಪಜ್ಞತೆ. ನೆಟ್ಟಾರು ರಾಮ ಚಂದ್ರ ಭಟ್ಟರು ತಾತ್ವಿಕ ತಾರೆಯಾಗುವ ಈ ಕಥನ, ಸಂಕೀರ್ಣ ಅನುಭಾವಗಳ ಮಂಥನ. 'ಒಬ್ಬ ಪುತ್ತೂರಿನ ಸಮಾನ್ಯ ಹುಚ್ಚನೆಂದು ಜನರು ಆಡಿಕೊಳ್ಳುವಾಗ ಲೇಖಕರು ಬೆನ್ನು ಬಿದ್ದು ಜಗತ್ತಿನ ಜಂಜಡಗಳ ಬಗ್ಗೇಕೆ ಪ್ರಶ್ನಿಸಬೇಕಿತ್ತು? ಅದನ್ನೇ ದಾಖಲಿಸುವ ದರ್ದು ಏನಿತ್ತು. ನೆಟ್ಟಾರು ಭಟ್ಟರ ಜೊತೆಗೂಡಿದ ನೆರಳು‌ ಇಸ್ಮಾಯಿಲ್ ಕುಂಞಪ್ಪರದೆಂಥಹ ಋಣ?". ಓದಿದಂತೆ ಮುಸುಕಾಗುವ, ಮತ್ತೆ ದೇದ್ಯೀಪಮಾನದಂತೆ ಹೊಳೆಯುವ ಅತ್ಯಂತ ಸುಲಭದಲ್ಲಿ ಆವರಿಸದ ಅನುಭವ ತಿಜೋರಿ. ಅಲ್ಲ, ಇದೇ ಶೈಲಿ ಇನ್ನೊಬ್ಬರಿಗೆ ಹೊಳೆಯುವುದು ಕೂಡಾ ಕಷ್ಟದ ಮಾತು. ಅನ್ಯರಿಗೆ ಕಂಡಿದ್ದರೆ ಈ ಕಥೆಯೂ ಸಾಮಾನ್ಯ ಕಥೆಯಾಗಿ ನೆನೆಗುದಿಗೆ ಬೀಳುತ್ತಿತ್ತೋ?. 

ಮೊನ್ನೆ ಲಕ್ಷ್ಮೀಶ ತೋಳ್ಪಾಡಿಯವರ ಮನೆಗೆ ಭೇಟಿ ಕೊಟ್ಟದ್ದು ಒಳ್ಳೆಯದೇ ಆಯಿತು. ಈ ಕಥೆಯ ಸಾರವನ್ನೊಮ್ಮೆ ತೆಳ್ಳಗೆ ಹಚ್ಚಿ ಬಿಟ್ಟಿದ್ದರು. ನಮ್ಮೂರಲ್ಲೊಂದು ಗಾದೆ ಇದೆ‌. " ನಾಯಿಯ ನಾಲಗಗೆ ಆಡಿನ ರಕ್ತದ ರುಚಿ ಮೆತ್ತಿದಂತೆ". ಅವರು ಅಲ್ಪ ಸ್ವಲ್ಪ ಪುಸ್ತಕದ ಎರಡು ಮಹಾ ಪಾತ್ರಗಳ ಕುರಿತು ಪ್ರಸ್ತಾಪಿಸಿದರು. ಪುಸ್ತಕ ಓದಿದವರಿಗೆ ಲೇಖಕರನ್ನೂ ಸೇರಿಸಿ ಮೂರು ಮಹಾ ಪಾತ್ರಗಳು. ಬಹುಶಃ ಆ ಭೇಟಿ ನಾನು ತಪ್ಪಿಸಿಕೊಂಡಿದ್ದರೆ ನನಗೆ ಈ ಪುಸ್ತಕದ ಮೇಲೆ ಏನೇನೋ ಪೂರ್ವಾಗ್ರಹ ಬರುತ್ತಿತ್ತೋ. ಒಂದೊಮ್ಮೆ ಪ್ರಶಸ್ತಿಗಾಗಿ ಮಾತ್ರ ಬರೆದ ಪುಸ್ತಕವೆಂದೋ, ತಾನು ಸಾಹಿತಿಯೆಂದು ತೋರಿಸಿಕೊಳ್ಳ ಬೇಕಿರುವ ಲೇಖಕರ ಹಪಾಹಪಿಯೆಂದೋ.ಸದ್ಯ ಈ ಅನುಭವ ಕೃತಿಯಾದದ್ದೇ ಕನ್ನಡಿಗರ ಪುಣ್ಯ!.

ಒಟ್ಟಿನಲ್ಲಿ ಈ ಪುಸ್ತಕಕ್ಕಿರುವುದು ರಾಮ ಚಂದ್ರ ಭಟ್ಟರ ಪರಿವರ್ತನೆ, ಕುಂಞಪ್ಪರ ಒಡನಾಟ ಮಾತ್ರ. ನಡುವೆ ಬದಲಾದ ರಾಮಚಂದ್ರ ಭಟ್ಟರ ಹೊಸ ಸೈದ್ಧಾಂತಿಕತೆ, ಪ್ರಬುದ್ಧ ಮಾತುಗಳೇ ಕೃತಿಯ ಬಗ್ಗೆ ಅಷ್ಟೂ ಚಿತ್ರಿತವಾಗಿರುವಂಥದ್ದು. ಆತ್ಮಗಳು ಬದಲಾಗುವಾಗ ಪವಿತ್ರಾತ್ಮವೊಂದು ತಾತ್ವಿಕವಾಗಿ ಸೇರಿ ಬಿಟ್ಟಿತೋ ಎಂದು ಸಂಶಯ ಪಡುವ ಶ್ರೀ ಲಕ್ಮೀಶ ತೋಳ್ಪಾಡಿಯರು, ತಮ್ಮ ಸಂಶಯಗಳನ್ನು ಅದೆಷ್ಟು ಕರಾರುವಕ್ಕಾಗಿ ಸಮರ್ಥಿಸುತ್ತಾರೆ .ಅರೆ ಹುಚ್ಚ, ಪೂರ್ತಿ ಹುಚ್ಚ ಎಂದೆಲ್ಲಾ ಕರೆಯುವಂತಹ ನಮ್ಮೊಳಗಿನ ಜನಗಳ ಮಧ್ಯೆ ಇಂಥಹ ಬದಲಾವಣೆ ಯಾಕಿರಬಾರದು. ನಾವು ಕೂಲಂಕುಶವಾಗಿ ಪರೀಕ್ಷಿಸದೆ ಹುಚ್ಚ ಎಂಬ ಬಿರುದು ಕೊಟ್ಟಿದ್ದೇವೆಯೇ ಎಂಬ ಅಪರಾಧಿ ಪ್ರಜ್ಞೆ ತೀವ್ರವಾಗಿ ಕಾಡುತ್ತದೆ.

ಕೃತಿ ಧರ್ಮಗಳ ಕಟ್ಟಳೆ ಮೀರಿ ಗುರುಗಳ ಜೀವನ ಶೈಲಿಯೊಮ್ಮೆ ( ರಾಮಚಂದ್ರ ಭಟ್ಟರ)ಸೂಫಿ ಪಂಥಕ್ಕೆ ತಿರುಗಿದಂತೆ ಭಾಸವಾಗುತ್ತದೆ.ಶರಣರ ಬದುಕನ್ನೊಮ್ಮೆ  ಪ್ರತಿಫಲಿಸುತ್ತದೆ. ದಾಸರಂತೆ ಸೋಗು ಹಾಕುತ್ತದೆ. ಬುದ್ಧ, ಬಸವ, ಗಾಂಧೀ ಎಲ್ಲಾ ತತ್ವಗಳಿಗೂ ಒಡ್ಡಿಕೊಳ್ಳುತ್ತದೆ. ಹೀಗೆಲ್ಲಾ ಉದಾಹರಿಸುತ್ತಾ ಸಾಗುವಾಗ, ನಿಮಗೊಮ್ಮೆ ಲೇಖಕರ ಜ್ಞಾನದ ಬಗ್ಗೆ ಬೆರಗು ಮೂಡಬಹುದು.‌ಗುರುಗಳ ಒಂದೊಂದು ಮಾತನ್ನೂ ಅವರು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ಸಮರ್ಥಿಸುತ್ತಾರೆ. ಎಷ್ಟೆಷ್ಟೋ ತತ್ವ ಚಿಂತಕರ ಮಟ್ಟಕ್ಕೆ ಮಾತುಗಳನ್ನು ಸರಿದೂಗಿಸುತ್ತಾರೆ. ಶ್ರೀ ಲಕ್ಷ್ಮೀಶರು ಸ್ವತಃ ಗಾಂಧೀಯೇ ಜನ್ಮವೆತ್ತಿ ಬಂದರೆಂದು ಹೇಳ ಹೊರಟಿದ್ದನ್ನು ಓದುಗ ಮನಸ್ಸೊಂದು ಪರೋಕ್ಷವಾಗಿ ಆಪಾದಿಸುತ್ತದೆ‌‌. ಅಷ್ಟಕ್ಕೂ ಸರಿಯಾಗಿ ಅವರೇ ಅಂದಿದ್ದರೆ ಕುತೂಹಲ ಉಳಿಯುವುದಿಲ್ಲ. " ನನ್ನ ಸತ್ಯಾನ್ವೇಷಣೆ" ಎಂಬ ಪುಸ್ತಕ ಬರೆದ ಗಾಂಧೀಜಿ ಧರ್ಮ, ಕರ್ಮಗಳಲೆಲ್ಲವನ್ನೂ ಸತ್ಯವೆಂಬ ಬೆಳಕಿನಲ್ಲಿ ಕಂಡಿದ್ದವರು. ಅವರ ಕೊನೆಯುಸಿರೂ ಸತ್ಯವೆಂಬ ದೀಪವರಸುತ್ತಲೇ ಸಾಗಿತು. ಇಲ್ಲಿಯೂ ಆಗಾಗ ಸತ್ಯದ ಬಗ್ಗೆ ಚರ್ಚಿಸುತ್ತಿರುವ ಗುರುಗಳ ಪ್ರಸ್ತಾಪವೂ ಇನ್ನಷ್ಟು ಗಾಂಧೀ ಚಹರೆಯನ್ನು ಅವರಿಗೆ ಸಲ್ಲಿಸುತ್ತದೆ. ಈ ಎಲ್ಲಾ ತತ್ವ, ಆದರ್ಶ, ಸತ್ಯಗಳನ್ನು ಮೀರಿದರೆ ಇದೊಂದು ಜಾತ್ಯತೀತ ಪುಸ್ತಕ. ಧರ್ಮಗಳೆರಡನ್ನೂ ಬೆಸೆಯಬಲ್ಲ ಕರಾವಳಿಯ ವಿವಿಧತೆಯಲ್ಲಿ ಏಕತೆಗಿಟ್ಟ ಕೈ ಗನ್ನಡಿ. ಗುರುಗಳು ಇಸ್ಮಾಯಿಲ್ ಕುಂಞಪ್ಪರೆಂಬ ರೂಮಿಗೆ, ಶಂಶಿಯಂತಾಗುತ್ತಾರೋ?, ವಿವೇಕನಾಂದರಿಗೆ ಪರಮಹಂಸರಾಗುತ್ತಾರೋ?. ಎರಡೂ ಮಹಾ ಪಾತ್ರಗಳು ಉತ್ಕೃಷ್ಟಾತ್ಮಗಳೆಂದು ಲೇಖಕರು ಭಾವಿಸುತ್ತಾರೆ‌. ಪುಸ್ತಕವೊಂದು ಮುಗಿಯುವಾಗ ಅದರದೇ ಇನ್ನೊಂದು ಕೊಂಡಿಯಂತೆ ಶ್ರೀ ತೋಳ್ಪಾಡಿಯವರೂ ನಗು ಚೆಲ್ಲಿ ಜ್ವಾಜಲ್ಯಮಾನ ನಕ್ಷತ್ರದಂತೆ ಭಾಸವಾಗುತ್ತಾರೆ.

ಯಾರಿಗೂ ಈ ಪುಸ್ತಕ ಓದಿಯೆಂದು ಒತ್ತಾಯಿಸುವುದಿಲ್ಲ. ಅವರ ಮನೆಗೊಮ್ಮೆ ಭೇಟಿ ಕೊಟ್ಟವನಿಗೆ ಖಂಡಿತಾ ಶ್ರೀ ಲಕ್ಮೀಶರವರು ಇದೇ ಕಥೆಯನ್ನು ಕಟ್ಟಿ ಕೊಡುತ್ತಾರೆ. ಅವರದೇ ತದ್ವತ್ತುಗಳಂತೆ ಅವರ ಮನೆಯವರೂ ನಿಮ್ಮನ್ನೂ ಆವಾಹಿಸುತ್ತಾರೆ. ಎಲ್ಲವೂ ಮುಗಿದು " ಬೆಟ್ಟ ಮಹಮ್ಮದನ ಬಳಿ ಬಾರದಿದ್ದರೆ" ಪ್ರತಿ ಇದ್ದರೆ ಕೊಡುತ್ತಾರೆ‌. ಮತ್ತೆ ಓದಲು ಕುಳಿತರೆ ಆ ಓದಿಗೆ ತಂತಾನೇ ಪರವಶರಾಗಿ ಬಿಡುತ್ತೀರಿ. ಅವರೇ ಕುಳ್ಳಿರಿಸಿ, ಮೂಗಿನ ನೇರಕ್ಕೆ ಕನ್ನಡಿಯಿಟ್ಟು ಮಾತನಾಡಿಸುವಂತೆಯೇ ಓದು ಸಾಗುತ್ತಲೇ ಹೋಗುತ್ತದೆ. ಕೊನೆಗೆ ನೀವರಿವಿಲ್ಲದೆ  " ಬೆಟ್ಟ ಮಹಮ್ಮದನ ಬಳಿ ಬಾರದಿದ್ದರೆ" ಎಂಬ ಉದ್ಘಾರ ಪುಸ್ತಕದ ಬಗ್ಗೆಯಾದರೂ, ಶ್ರೀ ಲಕ್ಷ್ಮೀಶರ ಬಗ್ಗೆಯಾದರೂ ಬಾರದಿದ್ದರೆ ಮತ್ತೆ ಹೇಳಿ.

ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ https://www.bookbrahma.com/book/betta-mahamadana-balige-baaradiddare 

ಮುನವ್ವರ್ ಜೋಗಿಬೆಟ್ಟು