Article

ಭಾವಾಂದೋಲನದ ಪ್ರತೀಕವೇ 'ತಪ್ತ'

ಕನ್ನಡ ಸಾಹಿತ್ಯ ವಲಯದಲ್ಲಿ ಬಹಳಷ್ಟು ಕೃತಿಗಳು ಓದುಗರ ಗಮನಕ್ಕೆ ಬರದೇ ಮೂಲೆಗುಂಪಾಗಿ ಬಿಡುವ ಸಂಭವವೇ ಹೆಚ್ಚು. ಅಂಥದರಲ್ಲಿ ಎಂ. ವ್ಯಾಸರು ಜೀವಂತವಿರುವವರೆಗೆ ಪ್ರಾರಂಭದ ಒಂದೆರಡು ಮತ್ತು 'ಕೃತ' ಕಥಾಸಂಕಲನ ಬಿಟ್ಟರೆ ಅವರ ಇನ್ನುಳಿದ ಕತೆಗಳು ಸಂಗ್ರಹ ರೂಪ ಪಡೆಯಲೇ ಇಲ್ಲ. ಅವರ ಮರಣಾನಂತರದಲ್ಲಿ ಹೊರ ಬಂದ ಕಥಾಸಂಕಲನಗಳ ಲ್ಲಿ ಪುತ್ತೂರು ಕರ್ನಾಟಕ ಸಂಘವು ಪ್ರಕಾಶ ಪಡಿಸಿದ 'ತಪ್ತ' ಕಥಾಸಂಕಲನವು ಒಂದಾಗಿದೆ. ಅವರ ಸ್ಮರಣಾರ್ಥ ಇತ್ತೀಚೆಗೆ ಮರು ಓದುವಂತಾಯಿತು.

1978 ರಿಂದ 2008 ರೊಳಗಿನ 12 ಕತೆಗಳಿವೆ. ವರ್ಷವಾರು ಕ್ರಮಾಂಕದಲ್ಲಿ ಜೋಡಿಸಿರುವುದಿಲ್ಲ. ವ್ಯಾಸರ ಯೌವನದ ಪ್ರಾರಂಭಿಕ ರಚನೆಗಳಾಗಿರುವುದರಿಂದ ಕಾಮತೃಷೆ ಕಥಾ ವಸ್ತುವಾಗಿರುವುದು ಸಹಜವಾಗಿದೆ. ವರ್ಷವಾರು ಕ್ರಮಾಂಕದಲ್ಲಿ ಕತೆಗಳನ್ನು ಅವಲೋಕಿಸುವುದಾದರೆ 1978 ರಲ್ಲಿ ಬರೆದ 'ಪಾಪಿ' ಕತೆಯಲ್ಲಿ ಪಾಪ ಪ್ರಜ್ಞೆಯಿಲ್ಲದೆ ತನ್ನ ಸ್ನೇಹಿತನಿಗೆ ಮಗುವಿಗಾಗಿ ಮಡದಿಯನ್ನು ಅವಳ ಸಮ್ಮತಿಯನ್ವಯ ಒಪ್ಪಿಸಿ, ನಪುಂಸಕತೆ ಮರೆಮಾಡುವ ಕೋರಿಕೆಯು ಸೃಷ್ಟಿ ದಾಹ ರಕ್ತ ದಾಹದಷ್ಟೇ ಪಾಪ ಪ್ರಚೋದನೆಗೆ  ನೀಡುವ ಅಂಶವನ್ನು ಬಯಲಿಗೆಳೆಯುತ್ತಾರೆ. ಶವದ ಸ್ಥಿತಿಗತಿಯನ್ನು ಹೃದಯಂಗಮವಾಗಿ ಚಿತ್ರಿಸುತ್ತಾ ಕೆಲ ನಿಗೂಢ ಸಂಗತಿಯ ಕಲ್ಪನೆಗೆ ಅವಕಾಶ ಮಾಡಿಕೊಡುತ್ತಾರೆ. ಮುಚ್ಚಿಟ್ಟ ಮೂರು ದಿನದ ಶವದೊಂದಿಗೆ ನಡೆದ ವಿದ್ಯಮಾನ ಅಂದಾಜಿಸಬಹುದಾಗಿದೆ. ಮನುಷ್ಯನ ಕ್ರಿಯೆಯೊಂದಿಗೆ ಪ್ರಕೃತಿಯ ಚಲನೆಯನ್ನು ಏಕಕಾಲಕ್ಕೆ ಸೆರೆ ಹಿಡಿಯುವ ಕಥಾ ಕುಸುರಿ ಗಮನಾರ್ಹ. 1981 ರ 'ನೆರೆ' ಸಮ್ಮೋಹಿನಿ ವಿದ್ಯೆಯಲ್ಲಿ ಮಗನ ಮನಸ್ಸಿನಿಂದ ಕತೆ ಹೇಳಿಸುವ ತಂತ್ರ ಜಾಳು ಎನಿಸಿದರೂ ಉಕ್ಕಿ ಹರಿಯುವ ಭಾವನೆರೆಯ ವೈಖರಿಯನ್ನು ಗುರುತಿಸಬಹುದಾಗಿದೆ.ಅಪ್ಪನಿಗೆ ಒದೆಯುವ ಮಗನ ದ್ವೇಷ...! ಅಪ್ಪ ಮಗ ಇಬ್ಬರು ಸಾಹಿತಿಯಾಗಿ ಸ್ಪರ್ಧೆಯಲ್ಲಿ ದ್ವೇಷ ಬಿತ್ತುವ ಕ್ಷಣಿಕ ನಿಲುವು ತಾಣವು ಸಮ್ಮೋಹಿನಿಯಲ್ಲಿ ತೆರೆದುಕೊಳ್ಳುವ ದೇಹದ ಅರಿವು ಎರಡು ಮುಖಗಳ ಪರಿಚಯವಾಗುತ್ತದೆ. ಇದೇ ಸಾಲಿನಲ್ಲಿ ಬರೆದ ಇನ್ನೊಂದು ಕತೆ 'ತೃಷೆ' ಯಲ್ಲಿ ಅಪ್ಪನ ಸ್ನೇಹಿತೆ ಟೀಚರ್ ಬಾಲಕನೊಂದಿಗೆ ತಾಯಿತನ ತೋರಿದರೂ ಯವ್ವನಕ್ಕೆ ಬಂದಾಗ ಅಡಗಿದ ಕಾಮತೃಷೆ ತೀರಿಸಿಕೊಳ್ಳುವ ಪರಿ ಅಸಂಗತ ಎನಿಸಿದರೂ ಕತೆಯ ಸ್ವರೂಪದಲ್ಲಿಯ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 1983ರ 'ಆಟ' ಕತೆಯಲ್ಲಿ ನಾಯಕನಿಗೆ ಮನೆ ತುಂಬಾ ಮಕ್ಕಳು, ಮಡದಿ ಇದ್ದರೂ ಆಳುಮಗನ ಹೆಂಡತಿಯಲ್ಲಿ ಲೈಂಗಿಕ ಬಯಕೆ ತೋರಿ ತಬ್ಬಿಕೊಳ್ಳುವ ಹುಚ್ಚುತನ ಕಾಮಶಕ್ತಿಯ ಭೀಕರತೆಯನ್ನು ಸಾಬೀತು ಪಡಿಸುತ್ತದೆ. 1986 ರ 'ಗರ'ದಲ್ಲಿ ಕತೆ, ಕವನ, ವಿಮರ್ಶೆ, ಕಿರುಕಾದಂಬರಿ, ಪ್ರಬಂಧ ಎನ್ನುವ ತುಂಡು ಅಧ್ಯಾಯಗಳಿಂದ ನಿರೂಪಿಸಿದ ಭಿನ್ನ ತಂತ್ರದ ಕತೆ.

ಕನ್ನಡಕ್ಕೆ ಹೊಸದು...! ವಿಮರ್ಶಕರ ಚರ್ಚೆಗೆ ಗ್ರಾಸವಾಗುವ ಕಥಾ ಸಂವಿಧಾನ. ಅಂತ್ಯಕ್ಕೆ 'ಮುನ್ನುಡಿ' ಎಂಬ ಅಧ್ಯಾಯ ಸೇರ್ಪಡೆಯಾಗಿದೆ. ವ್ಯಕ್ತಿಯೊಬ್ಬನ ಸಂಕೀರ್ಣತೆಯನ್ನು ಚೌಕಟ್ಟಿನ ಹೊರಗೂ ವಿಸ್ತರಿಸುವುದನ್ನು ಕತೆಯ ಮೂಲಕ ಹೇಳಬಹುದಾದ ಸಾಧ್ಯತೆಗೆ ಕನ್ನಡಿ ಹಿಡಿಯುತ್ತದೆ. 1988ರ 'ಖೆಡ್ಡ' ಕತೆ ಸಂಕಲನದ ಕೊನೆಯ ಸೇರಿಸಲಾಗಿದೆ. ಅಪೇಕ್ಷಿತ ಗಂಡು ಮಗು ಆಗದಿದ್ದಾಗ ಗಂಡಸುತನಕ್ಕೆ ಸವಾಲಾಗಿ ಕ್ರೂರಿಯಾಗುವ ಸನ್ನಿವೇಶ. ಕೊಲೆಯಾಗುವ ಹಂತವು ಹಲವರ ದೃಷ್ಟಿಯಲ್ಲಿ ಕಾಣುವ ಭಿನ್ನ ವ್ಯಕ್ತಿತ್ವದ ಅನಾವರಣ. ಶಬ್ದ ಭಾವದಾಚೆಯೂ ವ್ಯಕ್ತಿ ಅರ್ಥವಾಗದೆ ಉಳಿದುಬಿಡುವುದನ್ನು ಕತೆಯಲ್ಲಿ ಗ್ರಹಿಸಬಹುದಾಗಿದೆ. ಇದೇ ಸಾಲಿನ 'ಪ್ರೇತ' ಕತೆಯಲ್ಲಿ ಮೃತ್ಯುವಿಗೂ ಸೆಕ್ಸ್ಗೂ ಒಂದು ವಿಚಿತ್ರ ಸಂಬಂಧವಿದೆ ಎಂಬ ತತ್ವ ಪ್ರತಿಪಾದನೆಯಷ್ಟೇ ಇಲ್ಲಿ ಮುಖ್ಯವಾಗಿದೆ. 1999ರ 'ಮುಖ' ಕತೆ ಸಂಕಲನದಲ್ಲಿ ಮೊದಲ ಕತೆಯಾಗಿ ಪ್ರಕಟಿಸಲಾಗಿದೆ. ರಕ್ತೇಶ್ವರಿ ಕನಸಿನಲ್ಲಿ ಸ್ಥಳ ತೋರಿಸಿದಳೆಂದು ನಂಬಿಸಬಹುದು. ನಂಬಿಕೆಗಳನ್ನು ಮಾರಬಹುದು ಎನ್ನುವ ಸ್ನೇಹಿತ. ಮನಸ್ಸೇ ಮನುಷ್ಯ ಎಂಬ ಆಲೋಚನಾ ಕ್ರಮ, ನಾಸ್ತಿಕ  ಆಸ್ತಿಕ ಮುಖಗಳ ಪರಿಚಯವಾಗುತ್ತದೆ. 20002ರ ' ಮೇಳ ' ಕತೆಯಲ್ಲಿ ಜಾನಪದ ಕಲೆ ಬಗ್ಗೆ ತಿಳಿಯಲು ಇಬ್ಬರು ಸಾಹಿತಿಗಳು ಸಂದರ್ಶನಗೈಯಲು ಬಂದವರಿಗೆ ಇಡೀ ಕಲೆ ಅವರ ಬದುಕಿನಲ್ಲಿಯೇ ತೆರೆದುಕೊಳ್ಳುವ ಮತ್ತು ದ್ವೇಷವೇ ಪ್ರಗತಿಯ ಗುರುತಾಗಿ ಗುಲ್ಲು ಮಾಡುವ ಮೇಳ ಘೋರ ಬದುಕಿನ ದರ್ಶನ ಮಾಡಿಸುತ್ತದೆ. 2003ರ 'ಬಿಂಬ' ಕತೆಯಲ್ಲಿ ಭೌತಿಕ ಮಾನಸಿಕ ಲೋಕಗಳ ಸಮಾನ ಅಂತರ ಬಯಲು.ತಂತ್ರಶೈಲಿಯ ಶಬ್ದ ಶಕ್ತಿಯು ಸ್ಫೋಟಿಸುವ ವಿಚಿತ್ರ ಮನಸ್ಸಿನ ಹೂರಣ ಪ್ರಯೋಗ...! ಇದೇ ಸಾಲಿನಲ್ಲಿ ಬರೆದ 'ಯತಿ' ಕತೆಯು ತಮ್ಮದೇ ಸಂದರ್ಶನ ಎನ್ನುವಂತೆ ವರ್ತಮಾನಕ್ಕೆ ತೆರೆದುಕೊಳ್ಳುತ್ತದೆ .ಅತಿಥಿಯ ಉಪಸ್ಥಿತಿಯಲ್ಲಿಯೂ ಹಲ್ಲಿ, ಜೇಡ, ದೂರದ ಎಲೆ, ಪರಿಸರ ಸಂವೇದನೆ, ಅಲ್ಲಿಯ ಸದ್ದು ಗ್ರಹಿಸುವ ಸೂಕ್ಷ್ಮಗ್ರಾಹಿ ಪ್ರಜ್ಞೆಯು ಗಮನಾರ್ಹವಾಗಿದೆ. ತಮ್ಮ ವ್ಯಕ್ತಿತ್ವವನ್ನು ತುಂಡು ತುಂಡಾಗಿ ಪಾತ್ರಗಳಿಗೆ ಹಂಚಿಕೆ ಮಾಡಿದಂತೆ ಭಾಸವಾಗುತ್ತದೆ. 2005ರ 'ತಪ್ತ' ಕತೆಯಲ್ಲಿ ಅಪ್ಪನ ಸಾವಿನ ನಂತರ ಅಮ್ಮನಿಗೆ ನೌಕರಿ ಸಿಕ್ಕಿ, ಅವಳ ತದ್ರೂಪ ಮಡದಿಯ ಅನೈತಿಕ ಸಂಬಂಧವು ಸಂದಿಗ್ಧಕ್ಕೀಡು ಮಾಡುವಂಥದ್ದು. ಭಾವಾಂದೋಲನದ ಪ್ರತೀಕವೇ 'ತಪ್ತ'ವಾಗಿದೆ.

ವ್ಯಾಸರ ಕತೆಗಳಲ್ಲಿ ಬರುವ ಸಾವುಗಳು ಹಲವಾರು ಅರ್ಥದಲ್ಲಿ ಬದುಕುವ ಛಲವನ್ನು ಪ್ರತಿನಿಧಿಸುತ್ತವೆ. ಯಾರನ್ನೂ ಬಿಡದ, ಸದಾ ಕಾಡುವ ವಿಷಾದದಿಂದ ಪಾರಾಗುವ ತಂತ್ರವನ್ನು ವಿಷಾದದಿಂದಲೇ ಬಗೆದು ತೋರಲು ವ್ಯಾಸರು ಸದಾ ತಮ್ಮ ಕಥಾ ಕೃಷಿಯಲ್ಲಿ ತಪೋನಿರತರಾಗಿರುತ್ತಾರೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಬಿ. ಪುರಂದರ ಭಟ್ ಪ್ರಕಾಶಿಸುವ ನಿಮಿತ್ತ ಋಣಿಯಾಗಿದ್ದಾರೆ. ಲಕ್ಷ್ಮೀಶ ತೋಳ್ಪಾಡಿಯವರ ಕೆಲವು ಟಿಪ್ಪಣಿಗಳು ಮುನ್ನುಡಿಯಾಗಿವೆ. ಡಾ. ವರದರಾಜ ಚಂದ್ರಗಿರಿ 'ತಪ್ತ' ಸಂಕಲನದ ಬಗ್ಗೆ ಎರಡು ಮಾತು ನಿವೇದಿಸಿಕೊಂಡಿದ್ದಾರೆ.

ಸಾಹಿತ್ಯ ಲೋಕ ಎಂ. ವ್ಯಾಸರನ್ನು ಸಂಪೂರ್ಣವಾಗಿ ಮರೆತು ಬಿಟ್ಟ ಇಂಥ ಸಂದರ್ಭದಲ್ಲಿ ಅವರ ತಪ್ತ ಕಥಾಸಂಕಲನದ ಮರು ಓದು ಸ್ಮರಣೆಗೆ ಅವಕಾಶವಾದೀತು ಎಂದೆನಿಸುತ್ತದೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಕ್ಷಿತಿಜ್ ಬೀದರ್