Article

ಭಾವುಕನ ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ 

ಬಯಲು ಸೀಮೆಯ ಭಾವುಕನ ಒಳತೋಟಿಯ ಆಳಶೋಧದ ಫಲ ಈ ಚೊಚ್ಚಲ ಕವಿತಾ ಸಂಕಲನ. ಕವಿತೆ ಎಂದರೆ ಥಟ್ ಅಂತ ಬರೆದುಕೊಡುವ ರಶೀದಿಯಲ್ಲ ಎಂಬುದು ಕವಿಯ ’ಇದಮಿತ್ಥಂ’ ಎನ್ನುವ ಪಥ.

ಇಲ್ಲಿನ ಬಹುಪಾಲು ಪದ್ಯಗಳು ಆರ್ದ್ರ ಹೃದಯದ ಆಪ್ತಸಂವಾದಗಳು. ಪ್ರೇಮದ ಮಧುರಭಾವ ಬಂಧವನು ಸುಮಧುರ ಪದಗಳಲಿ ಸೆರೆಹಿಡಿದ ಪರಿಯನ್ನು ’ಆತ್ಮಸಖ’ ದಲ್ಲಿ ಕಾಣಬಹುದು. ’ಲೋಕಾಂತ ಮೀರಿದ ನೋವು’ ಕಾವ್ಯದ ಮಾಧುರ್ಯ ಭಾವ ಭಜಿಸಿಯೂ, ಲೋಕದ ಹಂಗು ತೊರೆದೂ, ಲೋಕಾಂತ ಮೀರದ ಸಖಿಯ ಭಾವವನ್ನು ಬಿಂಬಿಸಿದ್ದಾರೆ. ಪ್ರೀತಿ ಮತ್ತು ವಾಸ್ತವತೆಗಳ ಸಹಸಂಬಂಧದ ಪರಿಚಯ ಇಲ್ಲಿ ಚೆನ್ನಾಗಿ ಮೂಡಿಬಂದಿದೆ. "ಅಳಲು ಅನುಮತಿ ಕೊಡಿ" ಎಂಬಲ್ಲಿ ಸಹಜತೆಗೂ ಇಲ್ಲಿ ಬಂಧನಗಳಿವೆ ಎಂಬುದನು ಕವಿ ಧ್ವನಿಸಿದ್ದಾರೆ. 

’ಐಗೋಳ್ ಹುಸೇನ್’ ಎಂಬ ವಿಶಿಷ್ಟ ಮಾದರಿ ಕವನದಲಿ ವೈಯುಕ್ತಿಕ ಮತ್ತು ಸಾಮಾಜಿಕ ಮೌಲ್ಯಗಳು ಅಧಃಪತನ ವಾಗುತ್ತಿರುವುದಕ್ಕೆ ದುಃಖವನ್ನು ವ್ಯಕ್ತಪಡಿಸುತ್ತ, ಅದನ್ನು ಪ್ರಶ್ನಿಸುತ್ತ, ಆತ್ಮದಹಾದಿ ಹಾಗೂ ಲೋಕದಹಾದಿಗಳನು ಹಸನಾಗಿಟ್ಟುಕೊಳ್ಳುವ ಬಗೆ ಹೇಗೆ ಎನ್ನುವ ಕುರಿತು ಆತ್ಮವಿಮರ್ಶೆ ಮಾಡಲಾಗಿದೆ. ’ಲೋ ಬ್ಯಾಟರೀ ಅಪೀಲ್’ ಕವಿತೆ ಮಾಯದ ಮರವೇರಿ ಕುಳಿತ ಜಗದ ದ್ವಂದ್ವತೆಗಳನ್ನು ಬಗೆ ಬಗೆಯಾಗಿ ಕವಿ ಬಿಚ್ಚಿಟ್ಟಿದ್ದಾರೆ.

’ನಾನೂ ಒಬ್ಬ ಮನುಷ್ಯ, ಮನುಷ್ಯ ಕುಲವನು ಬಾಧಿಸುವ ಎಲ್ಲವೂ ನನ್ನನು ಬಾಧಿಸುತ್ತವೆ’ ಎನ್ನುವ ರೋಮನ್ ನಾಟಕಕಾರನ ಮಾತಿನಂತೆ ಇಲ್ಲಿಯ ಕವನಗಳಲ್ಲಿ ಏಕಾಂತದ ಹಾಗೂ ಲೋಕಾಂತದ ನೋವುಗಳು ಅಭಿವ್ಯಕ್ತಿಯನ್ನು ಪಡೆದಿವೆ. 'ಪಾರಿವಾಳಗಳ ಸಂತತಿ ರಕ್ಷಣೆಗೆ ಶಾಸನ ಹೊರಡಿಸಬೇಕೆನು?' ಎಂದು ಕವಿ ಪ್ರಶ್ನಿಸುವ ಪರಿ ಪ್ರಾಮಾಣಿಕವಾದುದು ಎಂದೆನಿಸುತ್ತದೆ. ಧೂಮಪಾನದ ಘಾಟಿನಲ್ಲೂ ಮಲ್ಲಿಗೆಯನ್ನು ಅರಳಿಸಿ, ಕವಿತೆಯನ್ನು ಓದೋಣ ಬಾ ಎಂದು ಹೂವನ್ನು ಕರೆಯುವ ಬಗೆಯು ಖುಷಿ ಹಾಗೂ ಆಶ್ಚರ್ಯಗಳನ್ನು ಹುಟ್ಟುಹಾಕುತ್ತದೆ.

ಶೀರ್ಷಿಕೆಯ ಕವನದಲ್ಲಿ ಮೂಲವಿಗ್ರಹಕ್ಕಿಂತ ಉತ್ಸವಮೂರ್ತಿಗೆ ಹೆಚ್ಚಿನ ಬೆಲೆ ಕೊಡುತ್ತಿರುವ ಈ ಹೊತ್ತಿನ ಲೋಕದ ವಿಪರ್ಯಾಸಗಳನ್ನು ವಿಡಂಬನಾತ್ಮಕವಾಗಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಪ್ರೇಮದಲ್ಲಿ ಒಂದಾಗಿಬಿಡುವ ಮತ್ತು ನಾಮಾತೀತವಾಗಿಬಿಡುವ ಭಾವ ಪ್ರಕ್ರಿಯೆಯನು ’ಬೆತ್ತಲೆ ರಸ್ತೆಗೆ ಹಬ್ಬಿದ ಇಬ್ಬನಿಯ ಸ್ಪರ್ಶ’ ಕವನದಲ್ಲಿ ಕಾಣಬಹುದಾಗಿದೆ. ಸತ್ತವರಿಗೆ ಮಾತ್ರ ಬದುಕುವ ಅರ್ಹತೆ ಇಲ್ಲಿ... ಎಂಬ ಸಾಲುಗಳು ತುಂಬ ಪ್ರಭಾವಶಾಲಿಯಾಗಿವೆ. ಪ್ರೀತಿ ಎಂದರೆ ಬೀಳುತ್ತಲೇ ಕರಗುವ ಆಲಿಕಲ್ಲುಗಳಂತೆ ಎಂದು ಪ್ರೀತಿಯ ಭಾವವನು ನವಿರಾಗಿ ಚಿತ್ರಿಸಿದ್ದಾರೆ. 

ಹೀಗೆ ಇಲ್ಲಿನ ಕವನಗಳು ಆಶಯದ ದೃಷ್ಟಿಯಿಂದ ವೈವಿಧ್ಯತೆಯಿಂದ ಕೂಡಿವೆ. ಅಷ್ಟೇ ಅಲ್ಲದೆ ಕವಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಕವನಗಳನ್ನು ರಚಿಸಿದ್ದಾರೆ. ’ಥಟ್ ಅಂತ ಬರೆದುಕೊಡುವ ರಶೀದಿಯಲ್ಲ ಕವಿತೆ’ ಕವನ ಸಂಕಲನ ಸಮಕಾಲೀನ ತುಮುಲ ತಲ್ಲಣಗಳನ್ನು ಹಿಡಿದಿಡುವುದರಲ್ಲಿ ಯಶಸ್ವಿಯಾಗಿದೆ. ಸುಮಿತ್ ಮೇತ್ರಿಯವರು ಮೊದಲ ಪ್ರಯತ್ನದಲ್ಲಿಯೇ ತಮ್ಮ ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಈಗ ಏನಿದ್ದರೂ ಸಹೃದಯರು ಓದಿ ಆಸ್ವಾದಿಸುವ ಸಮಯ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ವಾಸುದೇವ್ ಸ್ವಾಮಿ