Article

ಬಿಳಿಮಲೆಯವರ ಬದುಕು ಹೊಳೆಹೊಳೆವ ಸ್ಫೂರ್ತಿಗಾಥೆ

ಓದುಗರ ಕೈ ಸೇರುವ ಮೊದಲೇ ಕಾಗೆ ಮುಟ್ಟಿದ ನೀರು ಕೃತಯನ್ನು ಓದಿ ಪ್ರತಿಕ್ರಿಯೆ ನೀಡುವ ಅವಕಾಶ ನನಗೆ ಒದಗಿತ್ತು....ಪೂರ್ಣ ಅನಿಸಿಕೆ ಇಲ್ಲಿದೆ...

ಈ ದೇಶದ ಮಣ್ಣಿನ ಮೂಲದ ಸುಡು ಸುಡು ಅನಿಷ್ಟಗಳಾದ ಅಸಮಾನತೆ, ಅವಹೇಳನ, ಹಸಿವುಗಳ ಅನಾವರಣ ಇಲ್ಲಿರದಿದ್ದರೂ, ಪುಟ ಪುಟಗಳಲ್ಲಿ ಸೂಸುವ ಅಪ್ಪಟ ಮಾನವೀಯತೆ ಆವರಿಸಿ ಆಲಿಂಗಿಸಿ ಮನಸ ತೋಯಿಸಿಬಿಡುತ್ತದೆ. ಅಭಿವ್ಯಕ್ತಗೊಳ್ಳುವ ಆತ್ಮೀಯತೆ, ಅಮಾಯಕತೆ, ಪುಟಿದೇಳುವ ಜೀವನೋತ್ಸಾಹ, ಆತ್ಮೋನ್ನತಿಯ ತುಡಿತ, ವ್ಯಥೆ, ವಿಷಾದ, ಹರ್ಷ, ಉಲ್ಲಾಸ ಭಾವಗಳು ಓದುಗನ ಭಾವಗಳೂ ಆಗಿಸುವಲ್ಲಿ ಈ ಬರೆಹದ ಸಾರ್ಥಕತೆಯಿದೆ. ಬಂಟಮಲೆಯ ಬುಡದ ಬಿಳಿಮಲೆಯ ಕಗ್ಗಾಡಿನ ಹೈದನೊಬ್ಬ ಆತ್ಮವಿಶ್ವಾಸದ ಬಲದಿಂದ ಆಗಸಕ್ಕೆ ನಿಚ್ಚಣಿಕೆಯನಿರಿಸಿ ಏರುವ ಪರಿ ಬೆರಗು ಹುಟ್ಟಿಸುತ್ತದೆ. ಈಗಲೂ ಹಳ್ಳಿಗಾಡಿನಲ್ಲಿ ಅರಳಿ ದಿಕ್ಕುಗಾಣದೆ ತೊಳಲುವ ಕಾಡ ಕುಸುಮಗಳ ಪಾಲಿಗೆ ಬಿಳಿಮಲೆಯವರ ಬದುಕು ಹೊಳೆಹೊಳೆವ ಸ್ಫೂರ್ತಿಗಾಥೆ. ದೆಹಲಿಯಲ್ಲಿ ಇಪ್ಪತ್ತೈದು ವರ್ಷಗಳಿಂದ ನಾನು ಕಂಡ ಅವರ ಕ್ರಿಯಾಶೀಲತೆ ದಂಗುಬಡಿಸಿದೆ. ಮಧುಮೇಹವೆಂಬ ರೋಗವಲ್ಲದ ರೋಗ ಅವರನ್ನು ಕಾಡಿ ಕೆಡವಿದರೂ ಪುಟಿದೆದ್ದು ಅದನ್ನು ಚಿತ್ತು ಮಾಡಿದವರು ಬಿಳಿಮಲೆ. ಪಾದರಸದಂತೆ ಬದುಕಿನಲ್ಲಿ ಬರೆಹದಲ್ಲಿ ಸಂಸ್ಥೆಗಳನ್ನು ಕಟ್ಟುವಲ್ಲಿ ಅವರಷ್ಟು ಕ್ರಿಯಾಶೀಲರಾಗಿ ತೊಡಗಿ ಹಿಡಿದ ಕೆಲಸ ಸಾಧಿಸಿದ ಮತ್ತೊಬ್ಬರನ್ನು ನನ್ನ ಸಮೀಪದ ಸುತ್ತಮುತ್ತಲಿನಲ್ಲಿ ನಾನಂತೂ ಕಂಡಿಲ್ಲ. ಜೆ.ಎನ್.ಯು. ಕನ್ನಡಪೀಠ ಮತ್ತು ದೆಹಲಿ ಕರ್ನಾಟಕ ಸಂಘದ ಕಟ್ಟಡ ಈ ಮಾತಿಗೆ ಎದೆಯುಬ್ಬಿಸಿ ಸಾಕ್ಷಿ ನುಡಿವ ಉದಾಹರಣೆಗಳು. ಸಾಹಿತ್ಯ- ಸಂಶೋಧನೆಯ ಜೊತೆಗೆ ಸಾಮಾಜಿಕ ಎಚ್ಚರ ಕಾಯ್ದಿಡಲು ಅವರು ನೀಡಿರುವ- ನೀಡುತ್ತಿರುವ ಕೊಡುಗೆಯನ್ನು ಇತಿಹಾಸ ತಪ್ಪದೆ ಗುರುತಿಸಲಿದೆ. "ಕಾಗೆ ಮುಟ್ಟಿದ ನೀರು" ಆತ್ಮಕತೆಯ ತುಣುಕುಗಳಲ್ಲಿ ಅನಾವರಣವಾಗಿರುವ ಬಿಳಿಮಲೆಯವರಿಗಿಂತಲೂ ಅಧಿಕ ಉತ್ತಮ ಉದಾತ್ತ ಸ್ವಸ್ಥ ಹಾಗೂ ದಿಟ್ಟ ಮನಸಿನ ಬಿಳಿಮಲೆಯವರನ್ನು ನಾನು ವ್ಯಕ್ತಿಗತವಾಗಿ ನೋಡಿ ಒಡನಾಡಿ ಬಲ್ಲೆ. ಕಾಗೆ ಮುಟ್ಟಿದ ನೀರನ್ನು ಓದುವುದು ಒಂದು ವಿರಳ ಅನುಭೂತಿ.

ಡಿ. ಉಮಾಪತಿ