Article

ಚೀನಾವನ್ನು ಸುತ್ತಾಡಿಸುವ ‘ಲೂಷನ್ ಅವರ ಆಯ್ದ 10 ಚೀನಿ ಕಥೆಗಳು’

ಚೀನಾದ ಲೂಷನ್ 1881-1936 ರ ಮದ್ಯೆ ಬದುಕಿದ್ದ. ಬದುಕಿನ ಜೊತೆಗೆ ಕ್ರಾಂತಿ, ಕವಿತೆ, ಕತೆಗಳು, ಸಂಸ್ಕೃತಿ ಎಲ್ಲವೂ ಅವನನ್ನ ಹಿಂಬಾಲಿಸಿದ್ದವು. ಲೂಷನ್ ಕತೆಗಳು ಬಹಳ ವಿಶಿಷ್ಟತೆಯಿಂದ ಕೂಡಿವೆ. ನಿರೂಪಣೆ ಶೈಲಿಯ ಸರಳತೆ, ಚೀನಾದ ಗ್ರಾಮೀಣ ಸಂಸ್ಕೃತಿಯ ನೈಜತೆ, ಚೀನಾದ ಸಂಕಟಗಳು, ಅಲ್ಲಿಯ ಬದುಕಿನ ವ್ಯಂಗ್ಯವನ್ನು ಬಹಳ ಅಚ್ಚುಕಟ್ಟಾಗಿ ಹಿಡಿದಿದ್ದಾನೆ. ಹಲವರ ಹಳಹಳಿಕೆಯಂತೆ "ಚಳುವಳಿಯಲ್ಲಿದ್ದು ಬರೆಯುವವರಿಗೆ, ಯಾವುದೇ ಚಳುವಳಿಯಿಲ್ಲದೇ ಬರೆಯುವವರಿಗೆ ಬಹಳ ವ್ಯತ್ಯಾಸವಿರುತ್ತದೆ" ಎಂಬುದು ಲೂಷನ್ ನ ಬರವಣಿಗೆಯಿಂದ ತಿಳಿಯುತ್ತದೆ. ಲೂಷನ್ ಹಳ್ಳಿ ಬದುಕಿನ ಸೂಕ್ಷ್ಮ ಸಂಗತಿಗಳನ್ನ ತನ್ನದೇ ಕಲಾತ್ಮಕತೆಯಿಂದ ಚಿತ್ರಿಸಿದ್ದಾನೆ. ಚಕ್ರವರ್ತಿಗಳ ದೌರ್ಜನ್ಯ, ಅಲ್ಲಿಯ ರಾಜತ್ವದ ಹಿಂಸೆ, ಕೆಳವರ್ಗದ ಜನರ ಅನಿವಾರ್ಯ ಬದುಕು, ಅಮಾನವೀಯತೆಯ ಕೊನೆಯ ಅಧ್ಯಾಯ, ಎಲ್ಲವೂ ಲೂಷನ್ ಕತೆಗಳಲ್ಲಿ ನೋಡಬಹುದು.

'ಹುಚ್ಚನ ದಿನಚರಿ' ಎಂಬ ಕತೆ ಮನುಷ್ಯರ ಮಾಂಸವನ್ನು ಮನುಷ್ಯರೇ ತಿನ್ನುವ ಕತೆ. ಅವನ ದಿನಚರಿಯಲ್ಲಿ "ಕುಟುಂಬದವರು ಮಾಂಸದ ಆಸೆಗಾಗಿ ನಾನು ಸಾಯುವುದನ್ನೇ ಕಾಯುತ್ತಾರೆ ಎಂದು ಹಲುಬುತ್ತಾನೆ, ತಂಗಿ ಸತ್ತಾಗ ಆಕೆಯ ಮಾಂಸವನ್ನು ತಿಂದವರು, ನನ್ನನ್ನು ಬಿಡುವುದಿಲ್ಲ ಎಂಬ ಭಯ ಹುಚ್ಚನಿಗೆ". ಒಂದೊತ್ತಿನ ಊಟಕ್ಕಾಗಿ ಸಾವನ್ನು ಕಾಯುವಾಗ ಮನುಷತ್ವ ಇಲ್ಲಿ ಶಿಕ್ಷೆಗೊಳಗಾಗುತ್ತದೆ. ಮನುಷ್ಯ ಸಂಬಂಧಗಳು ಗೌಣ. ಹುಚ್ಚು ಯಾರಿಗೆ ಹಿಡಿದಿದೆ ಅನ್ನೋದೆ ಗೊತ್ತಾಗುವುದಿಲ್ಲ. ಕತೆಯಲ್ಲಿ ಬರುವವನು ಹುಚ್ಚನಲ್ಲ, ಆದರೆ ಲೂಷನ್ ಇನ್ನುಳಿದ ಹುಚ್ಚರನ್ನ ತೋರಿಸಲು, ಜಾಣಹುಚ್ಚನ ದಿನಚರಿಯನ್ನ ಬಳಸಿಕೊಂಡಿದ್ದಾನೆ ಎನ್ನಿಸಿತು.

'ಚಹದ ಬಟ್ಟಲಲ್ಲಿ ಬಿರುಗಾಳಿ' ಎಂಬ ಕತೆಯಲ್ಲಿ ಬರುವ ಮೇಣದ ಮರದ ಎಲೆಗಳು, ಪಟ್ಟೆ ನೊಣಗಳು, ಹೊಗೆ ಚಿಮ್ನಿಗಳು, ದೋಣಿ ವಿಹಾರ, ಹರಿದ ಬಾಳೆ ಎಲೆಗಳು, ಓದುಗನಲ್ಲಿ ತಾಜಾತನ, ಖುಷಿ ಏಕಕಾಲಕ್ಕೆ ನೀಡುವುದರ ಮೂಲಕ ಬೇಸತ್ತ ಬದುಕನ್ನ ಚಿತ್ರಿಸುತ್ತವೆ. ಇಲ್ಲಿಯ ಬಡತನ, ಅನಕ್ಷರತೆ, ಅಸಹಾಯಕತೆಗಳು ವಿಶೇಷ ಕತೆಯಾಗಿ ಹೊರಹೊಮ್ಮಲು ಬಳಕೆಯಾಗಿವೆ. ವ್ಯಕ್ತಿಯ ಹೆಸರುಗಳು ಇಲ್ಲಿ ತೂಕದ ಕಲ್ಲುಗಳು. ಮಕ್ಕಳು ಹುಟ್ಟಿದ ತಕ್ಷಣ ಹೆಸರಿನೊಂದಿಗೆ ಹುಟ್ಟಿದಾಗಿನ ತೂಕವನ್ನು ಸೇರಿಸುತ್ತಾರೆ. ಹಾಗಾಗಿ ಇಲ್ಲಿ ಬರುವ ಪಾತ್ರಗಳು ಸಿಕ್ಸ್ ಪೌಂಡರ್, ಸೆವೆನ್ ಪೌಂಡರ್, ನೈನ್ ಪೌಂಡರ್. 'ಚಕ್ರವರ್ತಿ ಸಿಂಹಾಸನಕ್ಕೇರಿದ್ದಾನೆ' ಎಂದರೆ ಹಳ್ಳಿಗರೆಲ್ಲರೂ ತಮ್ಮ ಇಳಿಬಿಟ್ಟ ಕೂದಲಗಳನ್ನು ಕತ್ತರಿಸಬೇಕು. ಇಲ್ಲವಾದಲ್ಲಿ ಅವನ ದಬ್ಬಾಳಿಕೆಯನ್ನು ಹಂಗಿಸಿದಂತಾಗುತ್ತದೆ. ಮೂರ್ಖ ಶಾಸನವೇ ಹೇಳುತ್ತದೆ 'ಕೂದಲುಳಿಸಿಕೊಂಡು ತಲೆ ಕಳೆದುಕೊಳ್ಳುವದು, ತಲೆ ಉಳಿಸಿಕೊಂಡು ಕೂದಲು ಕಳೆದುಕೊಳ್ಳುವುದು'. 'ಚಕ್ರವರ್ತಿ ಸಿಂಹಾಸನಕ್ಕೇರಿದ್ದಾನೆ' ಎಂದರೆ ಹಳ್ಳಿಗರೆಲ್ಲರಲ್ಲಿ ಆತಂಕವೇಳುತ್ತದೆ. ಚಹದ ಬಟ್ಟಲಲ್ಲಿ ಬಿರುಗಾಳಿ ಎಂಬ ಕತೆ ಸಂಕಟ, ನಿರುತ್ಸಾಹ, ಜಿಗುಪ್ಸೆಯನ್ನ ಹುಟ್ಟಿಸಿ ಹಳ್ಳಿ ಬದುಕಗಳನ್ನ ನಗೇಪಾಟಲಿಗೀಡು ಮಾಡುತ್ತದೆ.

'ಸುಖೀ ಸಂಸಾರ' ಎಂಬ ಕತೆಯಲ್ಲಿನ ಕತೆಗಾರ ಪತ್ರಿಕೆಗಾಗಿ ಮೇಲಿನ ಶೀರ್ಷಿಕೆ ಕೊಟ್ಟು ಕತೆಯನ್ನು ಬರೆಯಲು ಪ್ರಾರಂಭಿಸುತ್ತಾನೆ. ನಿರೂಪಕ ಕತೆಗಾರನಿಂದ ಸುಖೀ ಸಂಸಾರ ಕತೆ ಬರೆಸಲು ಹೋಗಿ, ಕತೆಗಾರನ ಅಸುಖಿ ಸಂಸಾರ ಕಾಣುವಂತೆ ಮಾಡುತ್ತಾನೆ. ಕತೆಗಾರನ ಹೆಂಡತಿಯಿಂದ ಮಗಳು ಹಿಂಸೆಗೊಳಗಾಗಿ ಬಿಕ್ಕುತ್ತಿರುವ ವೈರುಧ್ಯ ಸನ್ನಿವೇಶ ಜರುಗುವದು. ಕತೆಗಾರನದು ಅಸುಖಿ ಸಂಸಾರ, ಬರೆಯುವದು ಸುಖಿ ಸಂಸಾರ ಇಲ್ಲಿ ವಿಪರ್ಯಾಸವೆನಿಸುತ್ತದೆ.

ಎಲ್ಲರಿಗೂ ಹಳೆ ಮನೆಗಳೆಂದರೆ, ಆ ಮನೆಯ ನೋವು-ನಲಿವಿನ, ಎಲ್ಲ ಪ್ರಸಂಗಗಳು ನಮ್ಮನ್ನು ಕೆಣುಕುತ್ತವೆ. ಸಾಮಾನ್ಯವಾಗಿ ಹಳೆ ಮನೆ, ಹಾಳಾದ ಊರು ನೋಡಿದ ತಕ್ಷಣ ನೆನಪಿನ ಕೊಡೆ ಸಡಿಲವಾಗಿಬಿಡುತ್ತದೆ. ಲೂಷನ್ ನ 'ನನ್ನ ಹಳೆಮನೆ' ಕತೆ ಹಳೆಯ ಗೆಳೆಯನಾದ ಯೂನ್-ತು ನೊಂದಿಗೆ ಮುಕ್ತಾಯವಾಗುತ್ತದೆ. ಯೂನ್-ತು ಕಲ್ಲಂಗಡಿ ರೈತ ತೆರಿಗೆಯಿಂದ, ನಷ್ಟದಿಂದ ಹತಾಶೆಗೊಂಡಿದ್ದ ಯೂನ್-ತು ಕೆಟ್ಟ ಪರಿಸ್ಥಿತಿಯಲ್ಲಿರುವವ. ಆದರೆ ಹಳೆಮನೆಯ ಸಾಮಾನುಗಳನ್ನ ಹರಾಜಿಗಿಟ್ಟಾಗ ಅವನು ಧೂಪದ ಪಾತ್ರೆ, ಮೊಂಬತ್ತಿ ಕಂಬಗಳನ್ನು ಕೇಳಿದ್ದು, ಎಲ್ಲವೂ ಕೊಚ್ಚಿಹೋಗುತ್ತಿರುವಾಗ ದೇವರ ಮೇಲಿನ ಅವನ ಪ್ರೀತಿ ಗೆಳೆಯನಿಗೆ ನಗು ತರಿಸುತ್ತದೆ.

ಹೀಗೆ ಲೂಷನ್ ಸುಖೀ ಸಂಸಾರ ಕತೆಯ ಆರಂಭದಲ್ಲಿ "ಒಬ್ಬನಿಗೆ ಹೇಗೆ ಅನ್ನಿಸುತ್ತೋ ಹಾಗೇ ಬರೀತಾನೆ. ಹೀಗೆ ಬರೆದದ್ದು ಅನಂತ ಪ್ರಕಾಶದ ಮೂಲದಿಂದ ಬಂದ ಸೂರ್ಯನ ಬೆಳಕಿನಂತೆ: ಯಾವುದೋ ಒಂದು ಕಬ್ಬಿಣದ ತುಂಡಿನ ಅಥವಾ ಕಲ್ಲಿನ ಘರ್ಷಣೆಯಿಂದ ಹೊರಟ ಕಿಡಿಯಿಂದ ಬಂದ ಬೆಳಕಿನಂತಲ್ಲ, ನಿಜವಾದ ಕಲೆಯೆಂದರೆ ಇದೇ, ಇಂತಹ ಬರಹಗಾರನೇ ನಿಜವಾದ ಕಲಾವಿದ... ಆದರೆ.. ನಾನು.. ನಾನೆಲ್ಲಿ ನಿಲ್ಲುತ್ತೇನೆ? " ಎಂದು ಬರಹ-ಬರಹಗಾರನ ಕುರಿತು ನಿರೂಪಕನ ಮೂಲಕ 'ನಾನೆಲ್ಲಿ ನಿಲ್ಲುತ್ತೇನೆ?' ಎಂದು ಪ್ರಶ್ನೆ ಹಾಕಿಕೊಂಡಿದ್ದಾನೆ. ಲೂಷನ್ ಈ ಸಂಕಲನದಲ್ಲಿ ಬರುವ ಕತೆಗಳಲ್ಲಿ ಎಲ್ಲಿ ಲೈಂಗಿಕತೆಯಾಗಲಿ ರಸನಿಮಿಷಗಳಾಗಲಿ, ಪ್ರಜ್ಞಾಪೂರ್ವಕವಾಗಿ ಯಾವುದನ್ನು ಸೇರಿಸುವ ಗೋಜಿಗೆ ಹೋಗಿಲ್ಲ. ಹಾಗಾಗಿ ಲೂಷನ್ ಕತೆಗಳು ನಮ್ಮೆಲ್ಲರ ಸರಳ ಬದುಕಿನ ಕತೆಗಳಾಗಿವೆ. ಲೂಷನ ಕತೆಗಳನ್ನು ಕನ್ನಡಕ್ಕೆ ಡಾ. ವಿಜಯಾ ಸುಬ್ಬರಾವ್ ಅವರು ಅಷ್ಟೇ ಸರಳವಾಗಿ ಅನುವಾದಿಸಿದ್ದಾರೆ.

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಬುಕ್ ಬ್ರಹ್ಮಗೆ ಭೇಟಿ ನೀಡಿ: ಲೂಷನ್ ಅವರ ಆಯ್ದ 10 ಚೀನಿ ಕಥೆಗಳು

ಅಮರೇಶ ಗಿಣಿವಾರ