Article

ಸಿನಿಮಾ ವಿಸ್ತೃತರೂಪವಾಗಿ ’ಅಶ್ವತ್ಥಾಮನ್’

ಜೋಗಿಯವರಿಗೆ ಸಿನಿಮಾ ಜಗತ್ತು ಚಿರಪರಿಚಿತ. ಅಲ್ಲಿಯ ಸಂಕೀರ್ಣತೆಯನ್ನೂ, ಸೂಕ್ಷ್ಮತೆಯನ್ನೂ, ಕ್ರೌರ್ಯವನ್ನೂ ಅವರು ಬಲ್ಲರು. ಅವರಂತೆ ಸಿನಿಮಾ ಜಗತ್ತನ್ನು ಕುರಿತು ಲೇಖನಗಳನ್ನು ಬರೆಯುವವರು ವಿರಳ. ಅದರ ವಿಸ್ತೃತರೂಪವಾಗಿ ’ಅಶ್ವತ್ಥಾಮನ್’ ಮೂಡಿ ಬಂದಿದೆ.

ಯಾವತ್ತೂ ಮನಸ್ಸಿಗೆ ನೆಮ್ಮದಿಯಿಲ್ಲದೆ ಜಗತ್ತನ್ನು ಅಂಡಲೆಯುವ ಶಾಪವನ್ನು ಹೊತ್ತವನು ಅಶ್ವತ್ಥಾಮ. ದುಷ್ಟಚತುಷ್ಟಯರೊಡನೆ ಸೇರಿದ್ದರೂ ಅಶ್ವತ್ಥಾಮ ವಿಪರೀತ ಕೆಟ್ಟವನಲ್ಲ. ದ್ರೌಪದಿಯ ವಸ್ತ್ರಾಪಹರಣದ ಹೊತ್ತಿನಲ್ಲಿ ಗೆಳೆಯರ ದೌರ್ಜನ್ಯ ಕಂಡು ಬಿಸಿಯುಸಿರು ಬಿಟ್ಟು ಸಿಟ್ಟು ಮಾಡಿಕೊಂಡವನು. ಹಾಗಂತ ವಿಪರೀತ ಒಳ್ಳೆಯವನೂ ಅಲ್ಲ. ದ್ರೌಪದಿಯ ಎಳೆಯ ಮಕ್ಕಳನ್ನು ಕತ್ತಲಿನಲ್ಲಿ ಕೊಂದವನು. ಹೀಗೆ ಕಪ್ಪು-ಬಿಳುಪಾಗಿ ವರ್ಗೀಕರಿಸಲಾಗದ ವ್ಯಕ್ತಿತ್ವದ ನಾಯಕ ನಟನೊಬ್ಬ ನಮಗೆ ಈ ಕಾದಂಬರಿಯಲ್ಲಿ ಸಿಗುತ್ತಾನೆ. ಇಡೀ ಕಥನವು ಅವನ ಸುತ್ತಲೇ ಪರಿಭ್ರಮಣಗೊಳ್ಳುತ್ತದೆ. ಮಹಾಭಾರತದ ಅಶ್ವತ್ಥಾಮನಿಗೆ ಇಲ್ಲದ ಹೆಣ್ಣಿನ ಬಯಕೆ, ಈ ಕಾದಂಬರಿಯ ನಾಯಕನಿಗಿದೆ.

ಈ ನಾಯಕನು ಒಂದು ರೀತಿಯಲ್ಲಿ ಅವರದೇ ಹಿಂದಿನ ಕಾದಂಬರಿ ’ಎಲ್’ನ ಲಕ್ಷ್ಮಣ ನೀಲಂಗಿಯ ಮತ್ತೊಂದು ರೂಪವಾಗಿಯೂ ನಾವು ನೋಡಬಹುದು. ಸಮಾಜದ ಮೇಲೆ ವಿಪರೀತ ಸಿಟ್ಟು, ಒಳಗೊಳಗೆ ಕುದಿಯುವ ತಲ್ಲಣ, ಎಲ್ಲ ರೂಢಿಗತ ಸಂಗತಿಗಳನ್ನು ಮುರಿದು ಹಾಕುವ ಮೂರ್ತಿ ಭಂಜಕ ಗುಣ, ಅಪ್ಪನನ್ನು ಕಡುವಾಗಿ ವಿರೋಧಿಸುವ ಸ್ವಭಾವ - ಆತ ಕವಿ, ಈತ ಕಲಾವಿದ. ಒಂದೇ ನಾಣ್ಯದ ಎರಡು ಮುಖಗಳಾದರೂ ಇಬ್ಬರ ಕತೆಗಳು ವಿಭಿನ್ನ ಮತ್ತು ವಿಶೇಷವಾಗಿವೆ.

’ಪಂಚಿಂಗ್ ಡೈಲಾಗ್’ ಎಂದು ನಾವು ಸಿನಿಮಾಗಳಲ್ಲಿ ಹೇಳುತ್ತೀವಲ್ಲ, ಅಂತಹದೇ ಒಂದು ವಿಶೇಷ ಗುಣವನ್ನು ಜೋಗಿಯವರ ಬರವಣಿಗೆಯಲ್ಲೂ ಗುರುತಿಸಬಹುದು. ಇಲ್ಲಿ ಬರುವ ಬಹುತೇಕ ಮಾತುಗಳು ಮತ್ತೆ ಮತ್ತೆ ಮೆಲುಕು ಹಾಕುವ ಗುಣವನ್ನು ಹೊಂದಿವೆ. "ಎಲ್ಲಿಂದ ಶುರುಮಾಡಲಿ ಅನ್ನುವ ಪ್ರಶ್ನೆಯೇ ಅಸಂಬದ್ಧ. ನಾನು ಎಲ್ಲಿಂದ ಆರಂಭಿಸಿದರೂ ಈ ಕ್ಷಣದಿಂದಲೇ ಶುರುಮಾಡಿದ ಹಾಗಿರುತ್ತದೆ. ಈ ಕ್ಷಣದಿಂದ ಶುರು ಮಾಡಿದರೆ ಭೂತಕಾಲದ ಯಾವುದೋ ಬಿಂದುವಿನಿಂದ ಆರಂಭಿಸಿದ ಹಾಗಿರುತ್ತದೆ" ಎನ್ನುವಂತಹ ವಾಕ್ಯಗಳು ಗೋಡಂಬಿಯಷ್ಟು ರುಚಿಕಟ್ಟಾಗಿ ಬಾಯಿಗೆ ಸಿಗುತ್ತವೆ. ನೀವು ಗೋಡಂಬಿ ಪ್ರಿಯರಾದರೆ ಈ ಕಾದಂಬರಿ ನಿಮಗೆ ಗೋಡಂಬಿಯ ಕೋಸಂಬರಿಯಂತೆ ಭಾಸವಾಗುತ್ತದೆ.

ಹಲವಾರು ಹೆಣ್ಣುಗಳ ಒಡನಾಟವಿರುವ ಅಶ್ವತ್ಥಾಮನ್‌ ಎನ್ನುವ ವ್ಯಕ್ತಿ ಈ ಕೃತಿಯ ಮುಖ್ಯ ಪಾತ್ರವಾದರೂ, ಎಲ್ಲಿಯೂ ಜೋಗಿ ಅಶ್ಲೀಲತೆಯ ಮೈಲಿಗೆಯನ್ನು ತಮ್ಮ ಭಾಷೆಗೆ ಸೋಕಿಸುವುದಿಲ್ಲ ಎನ್ನುವುದು ಅವರ ಪ್ರಬುದ್ಧತೆಯನ್ನು ತೋರಿಸುತ್ತದೆ. ಹೇಳಿಯೂ ಹೇಳದಂತಹ ಶೃಂಗಾರದ ಸನ್ನಿವೇಶಗಳು ಇದರಲ್ಲಿ ಹಲವಿವೆ.

ಈ ನಟ ಬಾಲಿವುಡ್‌ನವನೆಂದು ಲೇಖಕರು ಪರಿಚಯಿಸಿದರೂ ನಮಗಂತೂ ಇವನು ಪಕ್ಕಾ ಕನ್ನಡ ಕಮರ್ಶಿಯಲ್ ಸಿನಿಮಾಗಳ ಮಾಸ್‌ ಹೀರೋನಂತೆಯೇ ಕಾಣುತ್ತಾನೆ. ಇದು ನಮ್ಮ ಅನುಭವ ಲೋಕದ ಕೊರತೆಯೋ ಅಥವಾ ಜೋಗಿಯವರದೋ ತಿಳಿಯುವುದಿಲ್ಲ. ಎರಡೂ ಆಗಿರುವ ಸಾಧ್ಯತೆ ಇದೆ.

ಒಂದಂತೂ ಸತ್ಯ. ಅವರ ಬರವಣಿಗೆಗೆ ಮಾಂತ್ರಿಕ ಶಕ್ತಿಯಿದೆ. ನಿರಂತರವಾಗಿ ಬೇಸರವಿಲ್ಲದೆ ಅವರ ಅಕ್ಷರ ಜಾತ್ರೆಯಲ್ಲಿ ಅಡ್ಡಾಡಬಹುದು. ಜಾತ್ರೆಗೆ ಹೋದ ಪ್ರತಿಯೊಬ್ಬರಿಗೂ ಅವರ ರುಚಿಗೆ ಇಷ್ಟವಾಗುವ ಒಂದೆರಡು ಸಂಗತಿಗಳು ಇದ್ದೇ ಇರುತ್ತವೆ. ಉಸಿರು ಪಡೆದು ಉಬ್ಬಿದ ಒಂದು ಬಲೂನು, ಕಣ್ಮನ ಸೆಳೆವ ಬಣ್ಣದ ಬಳೆಗಳು, ಬಾಯಲ್ಲಿ ನೀರೂರಿಸುವ ಬೆಂಡು-ಬತ್ತಾಸು, ವಾಲುತ್ತಾ ಸಮತೋಲನ ಸಾಧಿಸುವ ದೇವರ ತೇರು - ಯಾವುದೋ ಒಂದು ಮನಸ್ಸಿಗೆ ಸಿಕ್ಕರೂ ಆ ಜಾತ್ರೆ ಯಶಸ್ವಿಯೇ ಅಲ್ಲವೆ?

ಅಂದ ಹಾಗೆ ಈ ಪುಸ್ತಕವನ್ನು ನಾನು ಇ-ಬುಕ್ ರೂಪದಲ್ಲಿ ಓದಿದೆ. ಅಪ್ಪಟ ಕನ್ನಡದ ಈ ಆಪ್ ಅನ್ನು MyLang Books Digital ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ನವರು ತಯಾರಿಸಿದ್ದಾರೆ. ಸದ್ಯಕ್ಕೆ ಸಾಕಷ್ಟು ದೋಷಗಳು (ಬಗ್ಸ್‌) ಇದರಲ್ಲಿ ಇದ್ದರೂ, ಓದುವುದಕ್ಕೆ ದೊಡ್ಡ ತೊಂದರೆಯೇನೂ ಇಲ್ಲ. ಕನ್ನಡದ್ದೇ ಒಂದು ಸ್ವತಂತ್ರ ಆಪ್ ಇರುವುದು ಒಳ್ಳೆಯದು. ಆ ನಿಟ್ಟಿನಿಂದ ಈ ಓದುತಂತ್ರಾಂಶದ ಮಾಲೀಕರಾದ ಪವಮಾನ ಮತ್ತು ವಸಂತ ಶೆಟ್ಟಿಯವರನ್ನು ಅಭಿನಂದಿಸೋಣ.

ವಿ.ಎಂ. ಮಂಜುನಾಥ್ ಅವರ ಮುಖಪುಟ ಮತ್ತು ಒಳಚಿತ್ರಗಳು ಕಣ್ಮನ ತುಂಬುತ್ತವೆ. ನಿಸ್ಸಂಶಯವಾಗಿ ವಿಎಂ ನಮ್ಮ ನೆಲದ ಅಪರೂಪದ ಕಲಾವಿದ.

ವಸುಧೇಂದ್ರ