Article

ಈಚನೂರು ಇಸ್ಮಾಯಿಲರ ‘ಕಳೆದುಹೋದ ಜೀವ’ದ ಭಾವ ಹುಡುಕುತ್ತಾ...

ಈಗಾಗಲೇ ಮೂವತ್ತೈದಕ್ಕೂ ಹೆಚ್ಚಿನ ಕೃತಿಗಳನ್ನು ಹೊರತಂದಿರುವ ತುಮಕೂರು ಜಿಲ್ಲೆಯ ಈಚನೂರು ಇಸ್ಮಾಯಿಲ್ ಕನ್ನಡ ಸಾಹಿತ್ಯವನ್ನು ಗಂಭೀರವಾಗಿ ಓದಿಕೊಂಡವರು. ತಮ್ಮದೂ ಕೊಡುಗೆ ಇರಲಿ ಎಂದು ಕನ್ನಡ ಸಾಹಿತ್ಯದ ಸಮುದ್ರದೊಂದಿಗೆ ನೆಂಟಸ್ತನ ಬೆಳೆಸಿಕೊಂಡವರು. ಕವನ, ಖಂಡಕಾವ್ಯ, ಹನಿಗವನ, ಸಣ್ಣಕಥೆ, ಗದ್ಯ, ನಾಟಕಗಳು ಕೂಡ ಇವರ ಲೇಖನಿಯಿಂದ ಹೊರಬಂದಿವೆ. ಕೈ ಆಡಿಸದ ಬರವಣ ಗೆ ಇಲ್ಲ- ಮಾಡದ ಕೆಲಸಗಳಿಲ್ಲ ಎಂಬಂತೆ ಬದುಕು ಸಾಗಿಸುತ್ತಿರುವ ಈಚನೂರು ಇಸ್ಮಾಯಿಲ್ ಟೆಲಿಚಿತ್ರ, ಸಾಕ್ಷ್ಯಚಿತ್ರಗಳಲ್ಲೂ ತಮ್ಮ ಅಸ್ತಿತ್ವ ರೂಪಿಸಲು ಹೊರಟವರು. ಇವರ ಇತ್ತೀಚಿನ ಸಂಕಲನದ ಬಗ್ಗೆ ಇಲ್ಲಿ ಚರ್ಚಿಸೋಣ; ‘ಕಳೆದು ಹೋದ ಜೀವ’ ಎಂಬ ಖಂಡಕಾವ್ಯದ ಕುರಿತ ಟಿಪ್ಪಣ  ಇಲ್ಲಿದೆ. 

ಕಳೆದು ಹೋದ ಜೀವ; ಈಚನೂರು ಇಸ್ಮಾಯಿಲ್‍ರವರ ಖಂಡಕಾವ್ಯವಿದು. ಮನುಷ್ಯ ಮನುಷ್ಯ ಕಿತ್ತಾಡಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಧರ್ಮಗಳ ಹೆಸರಿನಲ್ಲಿ ಆಗುತ್ತಿರುವ ಕೊಲೆಗಳ ಬಗ್ಗೆ ಮರುಗಿ ಅವರು ಕಾವ್ಯ ರಚಿಸುತ್ತಾ ಹೋಗುತ್ತಾರೆ. ದೇವರನ್ನು ಪ್ರಶ್ನಿಸುತ್ತಲೇ, ಮನುಷ್ಯತ್ವ ಎಂಬುದು ಎಲ್ಲಿ ಮಾಯವಾಯಿತೋ ಎಂದು ಹುಡುಕುತ್ತಲೇ ಈ ಖಂಡಕಾವ್ಯದಲ್ಲಿ ಹೆಜ್ಜೆ ಮೂಡಿಸುತ್ತಾ ಸಾಗುವ ಕವಿ ಅಪಾರವಾದುದನ್ನು ಹೇಳುವ ಪ್ರಯತ್ನ ಮಾಡುತ್ತಾನೆ. ಕವಿ ಎಂಬಾತ ಸುಮ್ಮನೆ ಕಲ್ಪಿಸಿಕೊಂಡು ಕಾವ್ಯ ಬರೆದರೆ ಅದೇನು ಚಂದ? ತನ್ನ ಸುತ್ತಲಿನ ಬದುಕನ್ನು ನೋಡುತ್ತಾ, ಅಲ್ಲಿನ ಘಟನೆಗಳನ್ನು ಅನುಭವಿಸುತ್ತಾ, ಅಲ್ಲಿನ ದುರಂತಗಳನ್ನು ತನ್ನದೇ ದುರಂತಗಳೆಂಬಂತೆ ಕಣ ್ಣೀರು ಹಾಕುತ್ತಾ ಬರೆಯುವ ಕಾವ್ಯ ಸದಾ ಕಾಲ ಉಳಿಯಬಲ್ಲದು. ಮತ್ತೆ ಮತ್ತೆ ಓದಿಸಿಕೊಳ್ಳಬಲ್ಲದು. ಮತ್ತೆ ಮತ್ತೆ ಓದಿಸಿಕೊಂಡ ನಂತರ ಹೊಸ ಹೊಸ ತಾತ್ಪರ್ಯಗಳನ್ನು ಸುಗಂಧದಂತೆ ಹರಡಬಲ್ಲದು. ಆ ಸೂಕ್ಷ್ಮಗಳನ್ನು ತಿಳಿದಿರುವ ಈ ಖಂಡಕಾವ್ಯದ ಕವಿಗೆ ವಸ್ತುವಾಗಿದ್ದು ಗುಜರಾತಿನಲ್ಲಿ ನಡೆದ ಹತ್ಯಾಕಾಂಡ. 
ಆಕೆಯ ಹೆಸರು ಕೌಸರ್ ಬಾನು. ಗಂಡ ಫಿರೋಝ್. ಇಬ್ಬರು ಗುಲ್ಬರ್ಗದಿಂದ ಹೊಟ್ಟೆಯ ಪಾಡಿಗಾಗಿ ಗುಜರಾತಿಗೆ ಹೋಗಿರುತ್ತಾರೆ. ಅಲ್ಲಿ ದುಡಿದು ಬದುಕುತ್ತಿರುತ್ತಾರೆ. ಕಷ್ಟವೋ ಸುಖವೋ ಅಂತೂ ಈ ದಂಪತಿಗಳು ಭವಿಷ್ಯದ ಕನಸು ಅದೇನು ಕಂಡಿದ್ದರೋ? ಆದರೆ, 2002ರ ಗುಜರಾತ್ ಗಲಭೆಯ ನಂತರ ಕೋಮು ದ್ವೇಷ ಮುಗಿಲುಮುಟ್ಟುತ್ತದೆ. ಗೋದ್ರಾದ ರೈಲ್ವೆ ನಿಲ್ದಾಣದಲ್ಲಿ ಸಬರಮತಿ ರೈಲಿಗೆ ಬೆಂಕಿ ಬಿದ್ದ ನಂತರ ಇಡೀ ಗುಜರಾತ್ ಹಬೆಯಾಡುತ್ತದೆ. ಈ ರೈಲಿಗೆ ಬೆಂಕಿ ಹಚ್ಚಿದ್ದು ಮತ್ತೊಂದು ಕೋಮಿನವರು ಎಂದು ತಿಳಿದ ಕೆಲವರು ಹಸಿರು ಬಾವುಟಗಳ ಬೆನ್ನುಹತ್ತಿ ಆಕ್ರಮಣ ಮಾಡುತ್ತಾರೆ. ಅಲ್ಲಿ ಕಷ್ಟದ ಬದುಕು ಸಾಗಿಸುತ್ತಿದ್ದ ಕೌಸರ್‍ಬಾನು ಕೋಮು ಗಲಭೆಗೆ ಭೀಕರವಾಗಿ ಬಲಿಯಾಗಿ ಹೋಗುತ್ತಾಳೆ. ಆಕೆ ಕೊಲೆಗೈಯ್ಯಲ್ಪಟ್ಟಾಗ ಗರ್ಭಿಣ . ಇದನ್ನೆಲ್ಲ ಕಣ್ಣಾರೆ ಕಂಡ ಆಕೆಯ ಗಂಡ ಫಿರೋಝ್ ಮಾತು ಕಳೆದುಕೊಳ್ಳುತ್ತಾನೆ. ಇಲ್ಲಿ ಒಂದು ಕೊಲೆ ನಡೆದು ಮೂರು ಜೀವಗಳು ನಶ್ವರಗೊಳ್ಳುತ್ತವೆ. ತನ್ನ ಮಗುವಿನ ಬಗ್ಗೆ ಅದೇನು ಕನಸು ಕಂಡಿದ್ದಳೋ ಅವಳು? ಅಂತಹ ಧರ್ಮ ಧರ್ಮಗಳ ನಡುವಿನ ಜಗಳಗಳಲ್ಲಿ ಮಾನವ ಧರ್ಮವನ್ನು ಪ್ರೀತಿಸುವ ಜೀವಗಳು ಬಲಿಯಾಗಿ ಹೋಗುತ್ತವೆ. ಅಂತಹ ಕಾಳಜಿಯನ್ನು ತನ್ನ ಕಾವ್ಯದ ವಸ್ತುವಾಗಿಸಿಕೊಂಡ ಈಚನೂರು ಇಸ್ಮಾಯಿಲ್ ಕಳೆದು ಹೋದ ಜೀವವನ್ನು ಮತ್ತೆ ಕೆತ್ತಿಕೊಡುವ ಪ್ರಯತ್ನ ಮಾಡಿದ್ದಾರೆ. 

`ಬಿಸಿಲು ಸೀಮೆಯ ನೆಲದಲ್ಲಿ ಸೂರ್ಯನ ಬೆಂಕಿ ಸುಡುತ್ತಿದೆ’ ಎಂದು ಆರಂಭವಾಗುವ ಈ ಖಂಡಕಾವ್ಯದಲ್ಲಿ ಅಲ್ಲಲ್ಲಿ ಉತ್ತಮ ಹೊಳಹುಗಳು ಕಾಣುತ್ತವೆ. ಹಸಿದ ಹೊಟ್ಟೆಗೆ ಅನ್ನ ಬೀಳುತ್ತಿಲ್ಲ ಎಂಬ ಕಣ ್ಣೀರಿನೊಂದಿಗೆ ಸ್ವಾತಂತ್ರ್ಯದ ದಿನದಿಂದ ಹೆಜ್ಜೆ ಇಡುತ್ತಾ ಸಾಗುವ ಕವಿ ನಂತರ ನೇರವಾಗಿ ಗುಳೆಯ ವಿಚಾರಕ್ಕೆ ಬಂದು ತಲುಪುತ್ತಾರೆ. ಇಲ್ಲಿಂದ ಆರಂಭವಾಗುತ್ತದೆ ಕೌಸರ್‍ಬಾನುವಿನ ಕಹಾನಿ. `ಹಸಿವಿನ ಹೊಟ್ಟೆಯಲ್ಲಿ ಆತಂಕ ದುಗುಡದ ಕರುಳು’ ಎಂದು ಅಲ್ಲಲ್ಲಿ ಮರುಗುತ್ತಾ ಸಾಗುವ ಕವಿ ಕೌಸರ್‍ಬಾನುವನ್ನು ವಿಶೇಷವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಆಕೆಯ ಬದುಕನ್ನು ಬಡತನ ಹಿಂಡಿಹಿಪ್ಪೆ ಮಾಡಿದೆ. ಆ ಬಡತನವನ್ನು ಕಿತ್ತೊಗೆಯುವ ಧರ್ಮ ಇಲ್ಲದಿರುವ ಚಿಂತೆ ಇಲ್ಲಿನ ಕವಿಯದ್ದು. ಆದರೆ, ಬದುಕನ್ನು ಕಾಪಾಡಲಾರದ, ಬಡತನವನ್ನು ಹೋಗಲಾಡಿಸದ ದೇವರ ಬಗ್ಗೆ ಆಕೆಗೂ ಪ್ರೀತಿ. ಆದರೆ, ಅದೇ ಧರ್ಮ ಅವಳ ಬದುಕನ್ನು ಕಸಿದುಕೊಳ್ಳುತ್ತದೆ ಎಂಬ ಕಲ್ಪನೆಯೂ ಅವಳಿಗೆ ಇರಲಿಲ್ಲ. ಆದರೆ, ಹಕೀಕತ್ತಿನಲ್ಲಿ ಕೌಸರ್ ಕೋಮು ಗಲಭೆಗೆ ಬಲಿಯಾಗಿರುವ ಸತ್ಯ ಕವಿಗಂತು ಗೊತ್ತಿದೆ. ಅದನ್ನೇ ಆತ ಅಕ್ಕಡಿ ಸಾಲುಗಳಲ್ಲಿ ಕಳೆದು ಹೋಗುವ ಆ ಜೀವದ ಬಗ್ಗೆ ಅಥವಾ ಆ ಜೀವದ ಜೊತೆಗೆ ಸಂವಾದ ಮಾಡುತ್ತಾ ಹೋಗುತ್ತಾನೆ ಇಲ್ಲಿಯ ಕವಿ. 

ಎಲ್ಲ ಹಸಿವುಗಳನ್ನು ಗೆಲ್ಲಲೆಂದೇ ಗುಳೆ ಹೊರಡುವ ದಂಪತಿ ಪ್ರೀತಿಯಲ್ಲಿ ಮಗ್ನರಾಗಿ ಜೀವನ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಾಗುತ್ತಾರೆ. ಗಂಡನ ಜೊತೆ ಜೊತೆಗೇ ಕಾಲಯಾನ ನಡಿಗೆ ಆರಂಭಿಸುವ ಕೌಸರ್‍ಬಾನುಳ ಧ್ಯಾನಸ್ಥ ಸ್ಥಿತಿಯ ನಡಿಗೆಯನ್ನು ಚಂದವಾಗಿಯೇ ಇಲ್ಲಿ ವಿವರಿಸಲಾಗಿದೆ. ಗುಜರಾತ್ ಇವರು ಹೋದ ಕ್ಷಣದಿಂದಲೇ ಅನ್ನ ನೀಡುವ ನೆಲವಾಗಿ ಪರಿವರ್ತನೆಯಾಗುತ್ತದೆ. ಆದರೆ, ಆ ಅನ್ನಕ್ಕೆ ಎರಡು ಜೀವ ತೆತ್ತುವ ಘಳಿಗೆ ಬರುತ್ತದೆ ಎಂಬುದು ಮಾತ್ರ ಇಲ್ಲಿನ ದುರಂತ. ಆ ದುರಂತವನ್ನೇ ತಮ್ಮ ಕಾವ್ಯದ ಸಾಲುಗಳಲ್ಲಿ ಹೇಳುತ್ತಾನೆ ಕವಿ. ಅನುಭವ, ಅನುಭಾವ, ಧರ್ಮ, ಧರ್ಮಾತೀತ ಎಂದೆಲ್ಲ ವಿವರಣೆಗಳನ್ನು ನೀಡುತ್ತಾ, ಕೌಸರ್‍ಬಾನುಳನ್ನು ತನ್ನ ಖಂಡಕಾವ್ಯದ ಅಖಂಡ ಮೂರ್ತಿಯನ್ನಾಗಿ ರೂಪಿಸುತ್ತಾ ಇಸ್ಮಾಯಿಲ್ ಇಲ್ಲಿ ಕಾಣಸಿಗುತ್ತಾರೆ. ಇಲ್ಲಿ ಬೀದರ್ ಸೀಮೆಯ ಹನುಮಕ್ಕ ಕೂಡ ಕಣ ್ಣಗೆ ಕಾಣುತ್ತಾಳೆ. ಹುಣಸೆಕಾಯಿ ತಿನ್ನುವ ಆಸೆಯಲ್ಲಿ ಕೌಸರ್ ಮತ್ತೊಂದು ಜೀವದ ಬರುವಿಕೆಗೆ ಟಿಪ್ಪಣ  ಬರೆಯುತ್ತಿರುತ್ತಾಳೆ. ಇಲ್ಲಿ ಕಾಲಯನದ ಪಾಠ ಕಲಿತವರಾರು? ಕಾಲ ಎಲ್ಲದನ್ನೂ ಇತಿಹಾಸವಾಗಿಸಿಬಿಡುತ್ತದೆ. ಬೆಂಕಿ ಮತ್ತು ನೀರು ಎರಡೂ ಮುಖಾಮುಖಿ ಆದಾಗಲೂ ಬೆಂಕಿಯೇ ಗೆಲ್ಲುತ್ತದೆಂದರೆ ಕೌಸರ್ ದೇಹದೊಳಗಿದ್ದ ಭ್ರೂಣ ಏನು ತಾನೇ ನಿರ್ಧರಿಸಬಲ್ಲದು; ಇಲ್ಲಿ ಆ ಗರ್ಭದ ಮಗು ಕೂಡ ಮಾತಾಡುತ್ತಾ ಹೋಗುತ್ತದೆ. ಬೆರಗಿನಿಂದ ಕೂಸು ಹೇಳುವ-ಕೇಳುವ ಕವಿಯ ಕಲ್ಪನೆ ಇಲ್ಲಿ ಇಷ್ಟವಾಗುತ್ತದೆ. 

ಆದರೆ, ಅಂದುಕೊಂಡಂತೆ ಎಲ್ಲದೂ ಇರಬೇಕಲ್ಲ; ಗುಜರಾತಿನ ತುಂಬಾ ಗುಡುಗಿನ ಸದ್ದು. ಧರ್ಮ ಧರ್ಮಗಳ ಸದ್ದು. ಯಾರು ಯಾರನ್ನು ಕೊಲ್ಲುತ್ತಿದ್ದಾರೆ? ಯಾಕೆ ಕೊಲ್ಲುತ್ತಿದ್ದಾರೆ? ಯಾರಿಗಾಗಿ ಕೊಲ್ಲುತ್ತಿದ್ದಾರೆ? ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರಗಳಿಲ್ಲ. ನಾನು ಜೋಪಾನವಾಗಿ, ಜತನವಾಗಿ ನಿನ್ನನ್ನು ಕಾಯುವೆ ಎಂದು ತನ್ನ ಮಗುವಿಗೆ ಭರವಸೆ ನೀಡಿದ್ದ ತಾಯಿಯೇ ಇಲ್ಲಿ ಕೊಲೆಯಾಗಿ ಹೋಗಿದ್ದಾಳೆ. ಹೊಡಿದವರು, ಬಡಿದವರು, ಕಡಿದವರು ಕಾರುಬಾರು ಮಾಡುವಾಗ ಯಾವುದು ತಾನೆ ಇಲ್ಲಿ ಉಳಿಯಲು ಸಾಧ್ಯ? ಕೌಸರ್ ಕೂಡ ಕೋಮು ಗಲಭೆಗೆ ತನ್ನ ಮೈ ರಕ್ತ ಚೆಲ್ಲುತ್ತಾಳೆ. ರಕ್ತ ಚೆಲ್ಲಿಕೊಂಡ ತನ್ನ ತಾಯಿಯ ಹೊಕ್ಕುಳಿಂದ ಉಸಿರಾಟದ ತೊಂದರೆಗೆ ಒಳಗಾಗುವ ಕೂಸು ಕೂಡ ಪ್ರಾಣ ಬಿಡುತ್ತದೆ. ಎಲ್ಲದು ಮುಗಿಲು ಮುಟ್ಟುವ ಹೊತ್ತು. ಎಲ್ಲರೂ ಜೀವಕ್ಕಾಗಿ ಬೇಡುವ ಹೊತ್ತು. ಒಂದು ಕಡೆ ತಾಯ್ತನ ಮರೀಚಿಕೆ. ಇನ್ನೊಂದು ಕಡೆ ಕಂದನ ಆಸೆಯ ಮರೀಚಿಕೆ. ಈ ಎರಡೂ ಕನಸುಗಳನ್ನು ಕಂಡ ಅಪ್ಪ ಕೂಡ ಈಗ ಅದೇ ಮರೀಚಿಕೆಯ ಮಡಿಲ ಮೇಲೆ ಕುಳಿತ್ತಿದ್ದಾನೆ. 

ಹೀಗೆ, ಅಂತಿಮವಾಗಿ ವಿಷಾದದ ಛಾಯೆಯನ್ನೇ ಮೂಡಿಸುವ ಈ ಖಂಡಕಾವ್ಯ ಕಾವ್ಯವಾಗುವ ದಿಕ್ಕಿನಲ್ಲಿಯೂ ಅಲ್ಲಲ್ಲಿ ಎಡವುತ್ತದೆ. ಖಂಡಕವ್ಯಕ್ಕೆ ಸಿಕ್ಕ ವಸ್ತು ಅಖಂಡವಗಿದ್ದರೂ ಆ ವಸ್ತುವಿನೊಳಗಿನ ಹೃದಯತನ ‘ಮಾತಿಗಷ್ಟೇ’ ಸೀಮಿತವಾದಂತೆಯೂ ಇಲ್ಲಿ ಕಾಣುತ್ತದೆ. ಕವಿ, ಇಲ್ಲಿ ಕೂತು ಧ್ಯಾನ ಮಾಡಿ ಹೃದ್ಯಮಾತುಗಳ ಮೂಲಕ ಇಡೀ ಖಂಡಕಾವ್ಯವನ್ನು ಕೆತ್ತಿದ್ದರೆ ಆ ಖುಷಿಯೇ ಬೇರೆ ಇರುತ್ತಿತ್ತು. ಕೆಲವೊಂದು ಕಡೆಗಳಲ್ಲಿ ಕವಿ ಅವಸರಕ್ಕೆ ಬಿದ್ದು ಗದ್ಯಕ್ಕೆ ಶರಣಾಗಿದ್ದಾನೆ. ಕವಿತೆ ಯಾವತ್ತೂ ಕೇಳುವುದು ತಾಳ್ಮೆಯನ್ನು! ಆ ತಾಳ್ಮೆಯನ್ನು ದಕ್ಕಿಸಿಕೊಂಡರೆ ಕಾವ್ಯ ಗದ್ಯದ ಗುಣಬಿಟ್ಟು ಪದ್ಯದ ಆತ್ಮಗಿಟ್ಟಿಸಿಕೊಳ್ಳುತ್ತೆ. ಈಚನೂರು ಇಸ್ಮಾಯಿಲ್ ಅಂತಹ ತಾಳ್ಮೆಗೆ ಒಗ್ಗಿಕೊಂಡರೆ ಅವರ ಕಾವ್ಯ ಕಟ್ಟುವಿಕೆಯ ಶಕ್ತಿ ಹೆಚ್ಚಿಗೇನೇ ಇಷ್ಟವಾಗಬಹುದು.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿ.ಜು ಪಾಶ