Article

ಗೋವಿನೊಂದಿಗಿನ ಮಾನವ ಸಂಬಂಧದ ಅನಾವರಣ ‘ತಬ್ಬಲಿಯು ನೀನಾದೆ ಮಗನೆ’

ಕಾದಂಬರಿ ಶುರುವಾಗುವುದೇ ಪುಣ್ಯಕೋಟಿಯ ಗೋವಿನ ಹಾಡಿನಿಂದ, ಕಾಳೇನಹಳ್ಳಿಯ ಕಾಳಿಂಗ ಗೌಡಜ್ಜನ ಮನೆಯ ಕಥೆಯೂ ಸಹ. ಕಾಳಿಂಗೇ ಗೌಡನ ತಲೆಮಾರಿನಕ್ಕೂ ತನ್ನ ಮೊಮ್ಮಗನ ಕಾಳಿಂಗನ ತಲೆಮಾರಿನಕ್ಕೂ ಎಷ್ಟೊಂದು ವ್ಯತ್ಯಾಸವನ್ನು ಕಾಣಬಹುದು. ಗೌಡಜ್ಜನು ಹಸುಗಳನ್ನು ಎಷ್ಟು ಪ್ರೀತಿಸುತ್ತಿದ್ದನೆಂದರೆ ಹಸುಗಳನ್ನು ‌ತನ್ನ ಸ್ವಂತ‌ ಮಕ್ಕಳೆಂದೇ ಭಾವಿಸುತ್ತಿದ್ದನು, ಕರು ಹಾಲು ಕುಡಿದ ನಂತರವೇ ಉಳಿದ ಹಾಲನ್ನು ಕರೆದು ಸೇವಿಸಬೇಕೆಂಬುದು ಗೌಡಜ್ಜನ ಸಿದ್ಧಾಂತ. ಆತನಿಗಿದ್ದ ಗೋಮಾಳದಲ್ಲಿ ತನ್ನ ಹಸುಗಳಲ್ಲದೆ ಇತರೆ ಹಸುಗಳು ಮೈಯ್ಯಲು ಬಂದರೂ ಅಡ್ಡಿ ಮಾಡುತ್ತಿರಲಿಲ್ಲ ಏಕೆಂದರೆ ಹಸು ದೇವರಿಗೆ ಸಮಾನವೆಂದು, ಅವಕ್ಕೆ ಮಾತು ಬರದಿದ್ದರೂ ಮನುಷ್ಯರಿಗಿರುವಷ್ಟೆ ಬುದ್ದಿಯಿದೆ ಎಂಬುದು ಅವನ ನಂಬಿಕೆ. ಯಾವ ಹಸುವಿಗೆ ಕಾಯಿಲೆಯಾದರೂ ಆತನೇ ಮದ್ದು ಹಚ್ಚಿ ಅದರ ಸೇವೆ ಮಾಡುತ್ತಿದ್ದನು. ತನ್ನ ದೊಡ್ಡಿಯಲ್ಲಿದ್ದ ಹಸುಗಳಿಗೆ ಗಂಗೆ, ಗೌರಿ,ಕಾವೇರಿ ಇನ್ನೂ ಹಲವಾರು ಹೆಸರಿಟ್ಟಿದ್ದನು, ಆತನು ಹೆಸರಿಟ್ಟು ಕರೆದಾಗ ಗೋವಿಗೂ ಸಹ ಅರ್ಥವಾಗುತ್ತಿತ್ತು ತನ್ನನ್ನೇ ಕೂಗುತ್ತಿರುವನೆಂದು ಅಷ್ಟೊಂದು ಅನ್ಯೋನ್ಯತೆ. ದುರದೃಷ್ಟವಶಾತ್ ತನ್ನ ಮಗನು ಪುಣ್ಯಕೋಟಿಯನ್ನು ಕಾಪಾಡಲು ಹೋಗಿ ಕಿರುಬನಿಗೆ ಬಲಿಯಾಗಿ ಗೌಡಜ್ಜನು ತಬ್ಬಲಿಯಾಗುತ್ತಾನೆ. ತನ್ನ ಮಗ ಕೃಷ್ಣ ಶ್ರೀಕೃಷ್ಣನೆ ಏಕೆಂದರೆ ಕಾಳೇನಹಳ್ಳಿಯಲ್ಲಿ ಅವನು ಕೊಳಲು ನುಡಿಸುವ ಹಾಗೆ‌ ಯಾರೂ ನುಡಿಸುತ್ತಿರಲಿಲ್ಲ, ಅವನು ತೀರಿಹೋದಾಗ ತನ್ನ ಮೊಮ್ಮಗನಿಗೆ ಇನ್ನೂ ಒಂದೋ ಎರಡೋ ವರ್ಷ. ತನ್ನ ಸೊಸೆ ತಾಯವ್ವನಿಗೆ ಮಾತು ಬರದು ಹುಟ್ಟು ಮೂಗಿ. ತನಗೆ ಹಾಲು ಬತ್ತಿ ಹೋದಾಗ ಕಾಳಿಂಗನೊಮ್ಮೆ ಸದಾ ಅಳುತ್ತಿರುತ್ತಾನೆ ಎಷ್ಟು ಸಮಾಧಾನ ಮಾಡಿದರೂ ತನ್ನ ಹಠ ನಿಲ್ಲಿಸದಿದ್ದ ಸಮಯದಲ್ಲಿ  ಗೌಡಜ್ಜನು ಪುಣ್ಯಕೋಟಿಯ ಕೆಚ್ಚಲಿಗೆ ತನ್ನ ಮೊಮ್ಮಗನ ಬಾಯನ್ನಿಟ್ಟಾಗ ಮಗು ಗುದ್ದಿ ಗುದ್ದಿ ಹಾಲನ್ನು ಹೀರಿ ಸೇವಿಸುತ್ತದೆ, ಪುಣ್ಯಕೋಟಿ ಹಸುವೂ ಸಹ ತನ್ನ ಕರು ಎಂದೇ ಭಾವಿಸಿ ಹಾಲು ಕೊಡುತ್ತದೆ, ಇದನ್ನು ಕಂಡ ಇತರರಿಗೆ ಆಶ್ಚರ್ಯವಾಗುತ್ತದೆ. ಗೌಡಜ್ಜ ಹೇಳುತ್ತಾನೆ ಮನುಷ್ಯರಿಗೂ ಹಸುವಿಗೂ ಏನೂ ವ್ಯತ್ಯಾಸವಿಲ್ಲವೆಂದು. ನಮಗೂ ಅರ್ಥವಾಗುತ್ತದೆ ಅವಕ್ಕೂ ಅರ್ಥವಾಗುತ್ತದೆ ಆದರೆ‌ ಅವಕ್ಕೆ ಮಾತು ಬರದು ಆದರೆ ಭಾವನೆಗಳು ಒಂದೆ.

ಇತ್ತ ತನ್ನ ಮೊಮ್ಮಗ ಕಾಳಿಂಗ ಬೆಳೆಯುತ್ತಾ ಹೋಗುತ್ತಾನೆ. ಅಗ್ರಹಾರದ ಜೋಯಿಸರ ಮಗ ವೆಂಕಟರಮಣ ಸ್ನೇಹವಾಗಿ ಅವನ ಜೊತೆಯಲ್ಲಿ ಓದುತ್ತಾ ಬೆಳೆಯುತ್ತಾನೆ. ಹೀಗೆ ದಿನಾ ಕಳೆಯುತ್ತಿದ್ದಂತೆ ಮನುಷ್ಯರಿಗೆ ದಿನಸಿ ಧಾನ್ಯ ಒದಗಿಸಲು ಗೋಮಾಳಗಳನ್ನು ಹೊಲಗಳಾಗಿ ಪರಿವರ್ತನೆ ಮಾಡಿ ಅಲ್ಲಿ ವ್ಯವಸಾಯ ಮಾಡಿ ಅಲ್ಲಿ ಬೆಳೆಯುವ ಪದಾರ್ಥಗಳನ್ನು ಮಾರಿ ತೆರಿಗೆ ಕಟ್ಟಬೇಕೆಂದು ಸರ್ಕಾರದಿಂದ ಆದೇಶ ಜಾರಿಯಾಗುತ್ತದೆ. ಇದರಿಂದ ಇತರೆ ಹಳ್ಳಿಯ ಜನಗಳು ತಮ್ಮ ಹಸುಗಳನ್ನು ಗೌಡಜ್ಜನ ಗೋಮಾಳಕ್ಕೆ‌ ಮೇಯಲು ಬಿಡುತ್ತಾರೆ. ಇದನ್ನು ತಿಳಿದ ಗೌಡಜ್ಜ ಸುಮ್ಮನಿರುತ್ತಾನೆ ಯಾರ ಹಸು ಆದರೇನು ಎಲ್ಲವೂ ಒಂದೇ ಎಂದು ಆದರೆ ತನ್ನ ಹಸುಗಳಿಗೆ ತಿನ್ನಲು ಹುಲ್ಲು ಸಿಕ್ಕದಿದ್ದಾಗ ಇತರರಿಗೆ ತಮ್ಮ ತಮ್ಮ ಹಸುಗಳನ್ನು ಸಾಕಲು ಯೋಗ್ಯತೆ‌ ಇಲ್ಲವೆಂದು ಜನರನ್ನು ಬೈಯ್ಯುತ್ತಾನೆ, ಅದು ಹದ್ದು ಮೀರಿದಾಗ ಕಳ್ಳ ಸೂಳೇಮಕ್ಳು ದುಡ್ಡಿನ ಆಸೆಗಾಗಿ ಏನೆಲ್ಲಾ ಮಾಡುತ್ತಾರೆಂದು ಸರ್ಕಾರವನ್ನೇ ಬೈಯ್ಯುತ್ತಾನೆ. ವಿಧಿ ಇಲ್ಲದೆ ತನ್ನ ಗೋಮಾಳವನ್ನು ಹೊಲಕ್ಕೆ ಪರಿವರ್ತಿಸಿ ಬೇಲಿ ಹಾಕುತ್ತಾನೆ. 

ತನ್ನ ಮಗನನ್ನು ಕಳೆದುಕೊಂಡ ಜಾಗದಲ್ಲಿ ದೇವಸ್ಥಾನವನ್ನು ತನ್ನ ಸ್ವಂತ ದುಡ್ಡಿನಲ್ಲಿ ಕಟ್ಟಿಸಿ ಪೊಜೆ ಮಾಡುವ ಜವಾಬ್ದಾರಿಯನ್ನು ವೆಂಕಟರಮಣನಿಗೆ ಒಪ್ಪಿಸುತ್ತಾನೆ. ಇದೇ ಸಮಯದಲ್ಲಿ ಸರ್ಕಾರವು ಟಾರ್ ರಸ್ತೆ ಹಾಕಲು ಜಾರಿಮಾಡುತ್ತದೆ. ಆ ರಸ್ತೆ ತನ್ನ ಹೊಲದ ಮೂಲಕ ಹಾದು ಹೋಗುವುದನ್ನು ನೆನೆದಾಗ ದುಃಖ ಪಡುತ್ತಾನೆ. ತಾನು ಅದನ್ನು ತಡೆಯಲು ಎಷ್ಟೇ ಪ್ರಯತ್ನ ಪಟ್ಟರೂ ಅದು ವ್ಯರ್ಥವಾಗುತ್ತದೆ. ಹೊಲದಲ್ಲಿ ತನ್ನ ಮಗನನ್ನು ಹೂತಿರುವ ಸ್ಥಳವೆನ್ನೆಲ್ಲಾ ನಾಶಮಾಡಿ ರಸ್ತೆ ಹಾಕುತ್ತಾರೆ. ಕೊನೆಯ ಕಾಲದಲ್ಲಿ ಮಗನ ಕೊರಗಿನಲ್ಲೇ ತನ್ನ ಕೊನೆಯುಸಿರೆಳೆಯುತ್ತಾನೆ.

ಕಾಳಿಂಗ ಬರುವಷ್ಟರಲ್ಲಿ ಗೌಡಜ್ಜನ ಅಂತ್ಯ ಕ್ರಿಯೆಗಳನ್ನೆಲ್ಲಾ ಮುಗಿಸಿರುತ್ತಾರೆ, ಆದರೂ ಕೆಲವು ಕರ್ಮಗಳನ್ನು ಮಾಡಬೇಕಾದ ಸಮಯದಲ್ಲಿ ತನ್ನ ತಲೆಯನ್ನು ಬೋಳಿಸಬೇಕೆಂದು ವೆಂಕಟರಮಣ ಕೇಳಿದಾಗ ಕಾಳಿಂಗ ಒಪ್ಪುವುದಿಲ್ಲ, ಅವನಿಗೆ ಕಾಳಿಂಗನ ವರ್ತನೆಯ ಬಗ್ಗೆ ಸಿಟ್ಟು ಬರುತ್ತದೆ. ಆದರೆ ಗೌಡಜ್ಜನು ಸಾಕಿರುವ ವೆಂಕಟ ತಾನು ತಲೆ ಬೋಳಿಸಿಕೊಳ್ಳಲು ಸಿದ್ಧನಾಗುತ್ತಾನೆ ಇದರಿಂದ ಕಾಳಿಂಗನಿಗೆ ಅವಮಾನವಾಗುತ್ತದೆ. ಅದೇ ಸಮಯದಲ್ಲಿ ವೆಂಕಟರಮಣ ಪಂಚಗವ್ಯವನ್ನು ಕೊಟ್ಟಾಗ ಸ್ವೀಕರಿಸದೆ ಅಸಹ್ಯ ಪಟ್ಟುಕೊಳ್ಳುತ್ತಾನೆ. ಕಾಳಿಂಗ ಓದುವ ಸಮಯದಲ್ಲಿ ಒಮ್ಮೆ ತನ್ನ ಅರಿವಿಲ್ಲದೇ ಗೋಮಾಂಸವನ್ನು ತಿಂದಿರುತ್ತಾನೆ, ವೆಂಕಟರಮಣನು ಅವನಿಗೆ ಪ್ರಾಯಶ್ಚಿತ ಮಾಡಿಸಿ ಪಂಚಗವ್ಯವನ್ನು ಕೊಟ್ಟಾಗ ಸ್ವೀಕರಿಸಿದ ಅವನು ಈಗ ಅಸಹ್ಯ ಪಡುತ್ತಿದ್ಧಾನೆಂದು ವೆಂಕಟರಮಣನಿಗೆ‌ ಇವನ ವರ್ತನೆಯೇ ವಿಚಿತ್ರವೆನಿಸುತ್ತದೆ. ಆದರೆ ಗೌಡಜ್ಜನು ಆತನ ದೊಡ್ಡಿಯಲ್ಲಿ ಪ್ರತಿನಿತ್ಯ ಹಸುವಿನ ಗಂಜಲ ಸೇವಿಸುತ್ತಿದ್ದನು, ಸೇವಿಸಿದರೆ ಆರೋಗ್ಯವೆಂದು ಹಾಗು ಪುಣ್ಯವೆಂದು ಆತನ ನಂಬಿಕೆ. ಊರಿನವರೆಲ್ಲರೂ ಸೇರಿ ಗೌಡಜ್ದನ ತಿಥಿಯನ್ನು ವಿಜೃಂಭಣೆಯಿಂದ ನಡೆಸುತ್ತಾರೆ ಕಾರಣ ಆತನ ಮೇಲಿರುವ ಗೌರವ. ಕೆಲವು ದಿನಗಳ ನಂತರ ತಾಯವ್ವನನ್ನು ಬಿಟ್ಟು ಕಾಳಿಂಗ ತನಗೊಂದು ಕೆಲಸವಿದೆ ಎಂದು ಹೇಳಿ ಮುಂಬಯಿಗೆ ಹೊರಟುಹೋಗುತ್ತಾನೆ. ಅದಾದ ಕೆಲವು ತಿಂಗಳ ನಂತರ ತನ್ನ ಪತ್ನಿ ಹಿಲ್ಡಾ ಜೊತೆ ಕಾಳೇನ ಹಳ್ಳಿಗೆ‌ ಬಂದಾಗ ತಾಯವ್ವನಿಗೆ ಎಲ್ಲಿಲ್ಲದ ದುಃಖವಾಗುತ್ತದೆ. ತನಗೊಂದು ಮಾತು ಹೇಳದೆ ಇವನು ಹೀಗೆ‌ ಮಾಡಿದನಲ್ಲ ಎಂದು. 

ಹಿಲ್ಡಾ ಕಾಳಿಂಗ ಅನಿಮಲ್ ಹಸ್ಬೆಂಡರಿ ಓದುವಾಗ ಅವರಿಗೆ ಪರಿಚಯವಾಗಿ ನಂತರ ಮದುವೆಯಾಗುತ್ತಾರೆ. ಇಬ್ಬರ ಗುರಿ ಒಂದೆ, ಒಳ್ಳೆ ಜಾಗ ಖರೀದಿಸಿ ವ್ಯವಸಾಯ ಮಾಡುವುದು, ಹಸು ಕುರಿ ಇನ್ನಿತರೇ ಪ್ರಾಣಿಗಳನ್ನು ಸಾಕುವುದು, ಅವರು ಸಾಕುವುದು ಅವರ ಅನುಕೂಲಕ್ಕಾಗಿ, ಸಾಕಿದರೆ ಅವರಿಗೆ ಹಸುವಿನ ಹಾಲು ಮಾರುವ ವ್ಯಾಪಾರ ದೊರೆಯುತ್ತದೆಂಬುದು ಅವರ ಗುರಿ. ಆತನು ತನ್ನದೇ ಆದ ಮನೆ ಮಾಡಿ ಹಿಲ್ಡಾ ಜೊತೆ ವಾಸಮಾಡುತ್ತಾನೆ. ತಾಯವ್ವ ಒಂದು ಕಡೆ ಇವರಿಬ್ಬರು ಮತ್ತೊಂದು ಕಡೆ. ಬಂದಾದ ಕೆಲವು ದಿನಗಳ‌ ನಂತರ ಪುಣ್ಯಕೋಟಿಯ ದೇವಸ್ಥಾನಕ್ಕೆ ಹೋದಾಗ ವೆಂಕಟರಮಣನ ಪರಿಚಯವಾಗುತ್ತದೆ. ತೀರ್ಥ ಕೊಟ್ಟಾಗ ಆಕೆಯು ವಿಗ್ರಹ ತೊಳೆದ ನೀರನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿಕರವೆಂದು ಅದನ್ನು ಚೆಲ್ಲುತ್ತಾಳೆ. ಕಾಳಿಂಗ ಅದಕ್ಕೆ ಏನು ಹೇಳುವುದಿಲ್ಲ, ವೆಂಕಟರಮಣನು ಇವರಿಗೆ ಪ್ರಸಾದ ಕೊಡದೆ ಅವರಿಗೆ ಇದು ಯೋಗ್ಯವಿಲ್ಲವೆಂದು ಹೊರಟು ಹೋಗುತ್ತಾನೆ. ಅಂದಿನಿಂದ ಹಿಲ್ಡಾ ವೆಂಕಟರಮಣ ಭೇಟಿಯಾದಾಗ ಅವರ ಮಾತು ಯಾವುದೋ ಒಂದು ಸಂಶಯದಿಂದ ಶುರುವಾಗಿ ತಮ್ಮಿಬ್ಬರ ನಡುವೆ ಗಲಾಟೆ ಯಾಗುವಷ್ಟು ತನಕ ಹೋಗುತ್ತದೆ.

ಗೌಡಜ್ಜನು ಮಾಡಿಟ್ಟಿರುವ ಜಾಗದಲ್ಲಿ ತರಕಾರಿ ಬೆಳೆಯಲು ಶುರು ಮಾಡುತ್ತಾರೆ, ಹಸುಗಳಿಗೆ ೧,೨ ತರ ಅಂಕದಿಂದ ಎಣಿಸಿಟ್ಟಿರುತ್ತಾರೆ, ಆದರೆ ಗೌಡಜ್ಜ ಹಸುಗಳಿಗೆ ಗಂಗೆ, ಗೌರಿ,ಕಾವೇರಿ ಇನ್ನೂ ಹಲವಾರು ಹೆಸರಿಟ್ಟಿದ್ದನು, ಹಸುವಿನ ಹಾಲನ್ನು ಕರೆಯುವಾಗ ತನ್ನ ಕರುವಿಗೆ ಕುಡಿಯಲು ಬಿಡದೆ ಯಂತ್ರಗಳನ್ನು ಉಪಯೋಗಿಸಿ ಹಾಲನ್ನು ಕರೆಯುತ್ತಾರೆ ಇದರಿಂದ ಹೆಚ್ಚು ಹಾಲೂ ಸಿಗುತ್ತದೆಂದು, ಹಾಲು ಶುಚಿಯಿರುತ್ತದೆಂದು, ವ್ಯಾಪಾರವೂ ಆಗುತ್ತದೆಂದು ಅವಳ ಸಿದ್ಧಾಂತ,ಆದರೆ ಗೌಡಜ್ಜನ ವರ್ತನೆ ಹೇಗೆಂದರೆ ಕರುವು ಹೊಟ್ಟೆ ತುಂಬಾ ಕುಡಿದು ಉಳಿದದ್ದನ್ನು ತಾನು ಹಾಗು ಮತ್ತಿತರರು ಸೇವಿಸುತ್ತಿದ್ದರು ಎಷ್ಟು ವ್ಯತ್ಯಾಸ ಇವರಿಬ್ಬರ ನಡುವೆ. ಇದು ಮಾಡುವುದು ತಪ್ಪೆಂದು ವೆಂಕಟರಮಣ ಹೇಳಿದರೂ ಹಿಲ್ಡಾ ಕೇಳುವುದಿಲ್ಲ ಈ ಭಾರತೀಯರ ಜನಗಳೇ ಹೀಗೆ ಹುಚ್ಚು ಹುಚ್ಚು ಅಪ ನಂಬಿಕೆಯಂದು ಬೈದುಕೊಳ್ಳುತ್ತಾಳೆ, ಆಕೆಗೆ‌ ವೆಂಕಟರಮಣನು ಒಳ್ಳೆಯ ಸ್ನೇಹಿತನಾಗುವನೆಂದು ಭಾವಿಸಿದ್ದಳು ಆದರೆ ಅವರಿಬ್ಬರ ಸಂಭಾಷಣೆಯಲ್ಲಿ ಜಗಳವೇ‌ ಇರುತಿತ್ತು. ಕಾಳಿಂಗ ಹಿಲ್ಡಾರವರ ವರ್ತನೆಯನ್ನು ಕಂಡು ಊರಿನ ಜನರೆಲ್ಲಾ ಇವರಿಗೆ ವಿರೋಧವೆ. ಊರಿನಲ್ಲಿ ಕಾಳಿಂಗ ಹಿಲ್ಡಾ ರನ್ನು ಕೇಳುತ್ತಲೇ ಇರಲಿಲ್ಲ ಇದರಿಂದ ದಿನೇ‌ ದಿನೇ‌ ಇವರಿಬ್ಬರು ಒಬ್ಬಂಟಿಗರಾಗುತ್ತಾರೆ.

ಒಮ್ಮೆ ಕಾಳಿಂಗನು ವ್ಯಾಪಾರಕ್ಕಾಗಿ ಪೇಟೆಗೆ ಹೋದಾಗ ಹಿಲ್ಡಾಳಿಗೆ ಎಲ್ಲಿಲ್ಲದ ಬೇಸರ ಅದೇ ಸಮಯದಲ್ಲಿ ದೇವಸ್ಥಾನದ ಘಂಟೆ ಶಬ್ದ ಕೇಳಿ ವೆಂಕಟರಮಣನು ಪೂಜೆಗೆ ಬಂದಿರುವನೆಂದು ತಿಳಿದು ದೇವಸ್ಥಾನಕ್ಕೆ ಹೋಗುತ್ತಾಳೆ. ಆತನಿಗೆ ಬೇಸರ ಮಾಡಬಾರದೆಂದು ತೀರ್ಥ ಪ್ರಸಾದ ಸ್ವೀಕರಿಸಿ ಮಾತಿನಲ್ಲಿ ನಿರತರಾಗುತ್ತಾರೆ. ಹಸುಗಳನ್ನು ಏಕಿಷ್ಟು ಪೂಜಿಸುತ್ತೀರಿ ಎಂದು ಕೇಳಿದಾಗ ಅವನು ಹೀಗೆ ವರ್ಣಿಸುತ್ತಾನೆ, ಗೋಮತೆಯಂದರೆ ದೇವರಿಗೆ ಸಮಾನ, ಗೋಮಾತೆಯಲ್ಲಿ ಕೋಟಿ ಕೋಟಿ ದೇವರಗಳಿವೆ, ಒಂದು ಗೋವನ್ನು ಪೂಜಿಸಿದರೆ ಕೋಟಿ ದೇವತೆಗಳನ್ನು ಪೂಜಿಸುವ ಸಮಾನವಿರುತ್ತದೆ. ಗೋದಾನ ಮಾಡಿದರಂತು ಎಲ್ಲಿಲ್ಲದ ಪುಣ್ಯ ಎಂದು, ಆದರೆ ಅವರಿಬ್ಬರ ಮಾತು ಎಲ್ಲೆಲ್ಲಿಗೋ ಹೋಗಿ ಕಡೆಗೆ ಅವನಿಗೆ ಇವಳ ವರ್ತನೆಯನ್ನು ಕಂಡು ತಾನು ಎಷ್ಟು ಹೇಳಿದರೂ ಇವೆಲ್ಲಾ ನಿಮಗೆಲ್ಲಿ ಅರ್ಥವಾಗುತ್ತದೆ ಅನಾಗರೀಕ ಬಿಳಿ ಜನರಿಗೆ ಎಂದು ಅಲ್ಲಿಂದ ಹೊರಟು ಹೋಗುತ್ತಾನೆ.

ಮಾರೀಕಮ್ಮನ ಜಾತ್ರೆ ನಡೆಯುವಾಗ ಕಾಳಿಂಗ ಹಿಲ್ಡಾ ಹೋಗಿರುತ್ತಾರೆ. ಜಾತ್ರೆಯಲ್ಲಿ ಅಮ್ಮನಿಗೆ ಕೋಣಗಳನ್ನು ಬಲಿ ಕೊಡುವ ಪ್ರಸಂಗವನ್ನು ಕಾಣುತ್ತಾಳೆ. ಸರ್ಕಾರದಿಂದ ಇನ್ನು ಮೇಲೆ ಬಲಿ ಕೊಡ ಬಾರದೆಂದು ಆದೇಶ ಜಾರಿಯಾಗಿರುತ್ತದೆ. ಅದು ಕೊನೆಯ ಜಾತ್ರೆಯ ಕಾರಣ ಎಷ್ಟೋ ಜನರು ಹಳ್ಳಿ ಹಳ್ಳಿಗಳಿಂದ ವೀಕ್ಷಿಸಲು ಬಂದಿರುತ್ತಾರೆ. ದೈತ್ಯಾಕಾರದ ಒಬ್ಬ ಒಂದೇ ಏಟಿಗೆ ಕೋಣಗಳ ಕತ್ತನ್ನು ಕತ್ತರಿಸುವ ಪ್ರಸಂಗವನ್ನು , ನಂತರ ಆ ಶವಗಳನ್ನು ಸಾಗಿಸುವ ಪ್ರಸಂಗವನ್ನು ಕಂಡು ಭಯ ಭೀತಳಾಗುತ್ತಾಳೆ. ನಂತರ ಕೆಂಡ ತುಳಿಯುವುದನ್ನು ಕಾಣುತ್ತಾಳೆ, ಈ ಪ್ರಸಂಗವೆಲ್ಲವನ್ನು ನೋಡಿ ಏನೀ ಹುಚ್ಚು ಪದ್ದತಿ ಎಂದು ತನ್ನ ಮನಸ್ಸಿನಲ್ಲೇ ಯೋಚನೆ‌ ಮಾಡುತ್ತಿರುವಾಗ, ವೆಂಕಟರಮಣನು ಪುಣ್ಯಾಹ ಮಾಡಿ ಶುಚಿ ಮಾಡುತ್ತಿರುವುದನ್ನೂ ಕಾಣುತ್ತಾಳೆ. ಈತ ಹಸುಗಳ ಬಗ್ಗೆ ಅಷ್ಟೆಲ್ಲಾ ವಾದಮಾಡಿ ಇಲ್ಲಿ ನೋಡಿದರೆ ಈ ಜಾತ್ರೆಯಲ್ಲಿ ಕೋಣಗಳ ಬಲಿಗಳನ್ನು, ಕೆಂಡ ತುಳಿಯುವ ಅಪನಂಬಿಕೆಗಳನ್ನು  ಹೇಗೆ ಅಂಗೀಕರಿಸಿದ್ದಾನೆಂದು ಆಶ್ಚರ್ಯವಾಗುತ್ತದೆ. ಆತನು ಸಿಕ್ಕಾಗ ಈ ವಿಷಯದ ಬಗ್ಗೆ ಚರ್ಚಿಸಬೇಕೆಂದು ಗಟ್ಟಿ ನಿರ್ಧಾರ ಮಾಡುತ್ತಾಳೆ.

ಒಮ್ಮೆ ದೇವಸ್ಥಾನದಲ್ಲಿ ಭೇಟಿಯಾದಾಗ ಇದೇ ವಿಷಯ ಪ್ರಸ್ತಾಪ ಮಾಡಿದಾಗ ಆತನೂ ನಿರುತ್ತರನಾಗುತ್ತಾನೆ. ಆದರೂ ಸರ್ಕಾರವೇ ಆದೇಶ ಜಾರಿಮಾಡಿದಿಯಲ್ಲಾ ನಿಲ್ಲಿಸುವುದಕ್ಕೆ‌ ಎಂದು ಪ್ರತ್ಯುತ್ತರ ಕೊಟ್ಟಾಗ ಇಬ್ಬರಿಗೂ ಗೊತ್ತು ಅವನು ಕೊಟ್ಟ ಉತ್ತರ ಸರಿಯಿಲ್ಲವೆಂದು. ಆದರೂ ವೆಂಕಟರಮಣನು ಹೇಳಿದ ಮಾತನ್ನು ಮರೆಯಲು ಎಷ್ಟು ಪ್ರಯತ್ನಿಸಿದರೂ ಆಗುವುದಿಲ್ಲ. ನಿಮಗೆಲ್ಲಿ ಅರ್ಥವಾಗುತ್ತದೆ ಅನಾಗರೀಕ ಬಿಳಿ ಜನರಿಗೆ ಎಂದು. ಆ ಸಿಟ್ಟಿಗೆ ಮನೆಯ ಕೆಲಸದವನಾದ ಜಮಾಲನಿಗೆ‌ ಒಳ್ಳೆಯ ಹಸು ಅದರಲ್ಲೂ ಪುಣ್ಯಕೋಟಿಯ ಹಸುವನ್ನು  ದೊಡ್ಡಿಯಿಂದ ತರಲು ಹೇಳುತ್ತಾಳೆ. ಜಮಾಲನಿಗೆ ಅಮ್ಮಾವ್ರು ಬಸರಿ ಬಯಕೆ ಆಗೈತೆ ಎಂದು ಒಂದು ಪುಣ್ಯಕೋಟಿಯನ್ನು ಮನೆಯ ಮುಂದೆ ನಿಲ್ಲಿಸಿದಾಗ ಹಿಲ್ಡಾ ಹಸುವಿನ ಅಂಗಗಳನ್ನು ಕ್ರೂರವಾಗಿ ಕೊಯ್ದು ವೆಂಕಟರಮಣ ಹೇಳಿದ ಮಾತನ್ನು ನೆನೆದು ಗೊಡ್ಡು ಆಚಾರದ ಜನಗಳು ಎಲ್ಲಾ ಅಂಗಗಳಲ್ಲಿ ದೇವರಿದೆಯಂತೆ ಎಲ್ಲಾ ಮೂಢ ನಂಬಿಕೆ. ತನ್ನ ಕೋಪವೆಲ್ಲಾ ಹಸುವಿನ ಮೇಲೆ ತೀರಿಸುತ್ತಾಳೆ. ಜಮಾಲನು ಮಾಡಿದ ಗೋಮಾಂಸವನ್ನು ‌ತಿಂದು ಕಾಳಿಂಗನೂ ಸೇವಿಸಿದಾಗ ಅವನಿಗೆ ಕಸಿವಿಸಿಯಾಗುತ್ತದೆ. ತಾವು ಗೋಮಾಂಸವನ್ನು ಸೇವಿಸಿರುವುದು ಊರಿನವರಿಗೆ ತಿಳಿದರೆ ತಮ್ಮನ್ನು ಬದುಕಿಸುವಿದಿಲ್ಲಾ ಎಂದು ಎಚ್ಚರ ನೀಡುತ್ತಾನೆ.

ಆದರೆ ಊರಿನಲ್ಲಿ ಸುದ್ದಿ ಹರಡಿದಾಗ ಊರಿನ ಜನರೆಲ್ಲಾ ಆವನ ಮೇಲೆ ಕೋಪದಿಂದ ಬರುತ್ತಾರೆ. ಅದರಲ್ಲಿ ವೆಂಕಟರಮಣ ಹಾಗು ತಾಯವ್ವ ಇರುತ್ತಾರೆ. ತಾಯಿ ತಾಯವ್ವ ಅವರ ಕಡೆ ಇರುವುದನ್ನು ಕಂಡು ತನಗೆ ದುಃಖ್ಖವಾಗುತ್ತದೆ. ಕಾಳಿಂಗ ಊರಿನ ಜನರೆಲ್ಲಾ ಹೇಳಿದ ಷರತ್ತುಗಳನ್ನು ಒಪ್ಪಿಕೊಳ್ಳುತ್ತಾನೆ. ತಾನು ಪಂಚಗವ್ಯ ಸೇವಿಸಬೇಕೆಂದು, ಒಂದು ಸಾವಿರ ದುಡ್ಡು ಕೊಡಬೇಕೆಂದು ಇನ್ನೂ ಹಲವಾರು ಷರತ್ತುಗಳಿಗೆ ಇವನು ಒಪ್ಪುತ್ತಾನೆ. ಇವರಿಗೆಲ್ಲಾ ಏಕೆ ಹೆದರಬೇಕೆಂದು ಹಿಲ್ಡಾ ಹೇಳಿದರೂ ಊರಿನಲ್ಲಿ ಬದುಕಬೇಕೆಂದರೆ ತಾವು ಸ್ವಲ್ಲ ತಗ್ಗಲೇಬೇಕು ಇಲ್ಲಾ ಇಲ್ಲಿ ಒಂಟಿತನವೇ ಉಳಿಯುತ್ತದೆಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಅವಳಿಗೆ ತನ್ನ ದೇಶದಲ್ಲಿ ಇದ್ದಾಗ ಎಷ್ಟು ಸುಖದಿಂದ ಇದ್ದೆ, ಪ್ರೀತಿ‌ ಎನ್ನುವುದು ಕುರುಡುತನ ಹೌದು ಕಾಳಿಂಗನನ್ನು ಮದುವೆಯಾಗಿ ಈ ದೇಶಕ್ಕೆ ಬಂದು ಇಲ್ಲಿರುವ ಸಂಪ್ರದಾಯಗಳಿಗೆ ಹೊಂದಿಕೊಳ್ಳಲಾಗದೆ ತಾನು ನಿಜವಾಗಿ ತಬ್ಬಲಿಯಾಗುತ್ತಿದ್ದೇನೆಂದು ಒಂಟಿಯಾಗಿ ಕೊರಗುತ್ತಾಳೆ.

ತಾಯವ್ವನಿಗೆ ಆರೋಗ್ಯ ಕೆಟ್ಟು ಸಾಯುವ ಸ್ಥಿತಿ ಬಂದಾಗ ವೆಂಕಟರಮಣನನ್ನು ಕರೆದು ಗೋದಾನ ಮಾಡುತ್ತಾಳೆ. ಆ ಗೋದಾನ ಮಾಡುವ ಪ್ರಸಂಗ ಅತ್ಯದ್ಭುತವಾಗಿದೆ, ತಾಯಿಗೆ ಆರೋಗ್ಯ ಸರಿಯಿಲ್ಲವೆಂದು ತಿಳಿದು ಕಾಳಿಂಗನು ಗೋದಾನ ನಡೆಯುವ ಸಮಮದಲ್ಲಿ ತಾಯಿಯನ್ನು ನೋಡಲು ಬಂದಾಗ ಯಾರೂ ಅವನನ್ನು ಮಾತಾನಾಡಿಸುವುದಿಲ್ಲ ತನ್ನ ಹೆತ್ತ ತಾಯವ್ವನೂ ಸಹ, ಆ ಅವಮಾನದಿಂದ ಅವನು ಹೊರಟು ಹೋಗುತ್ತಾನೆ. ಇದಾದ ಮರುದಿನ ದೇವಸ್ಥಾನದಲ್ಲಿ ಜನರು ಸೇರಿರುವುದನ್ನು ಕಂಡು ತನ್ನ ತಾಯಿ ತಾಯವ್ವ ತೀರಿಹೋದ ಸಂಗತಿ ತಿಳಿಯುತ್ತದೆ. ಊರಿನವರೆಲ್ಲಾ ಸೇರಿ ಅಂತ್ಯಕ್ರಿಯೆಗಳನ್ನು ಮುಗಿಸುತ್ತಾರೆ. ಕಾಳಿಂಗನಿಗೆ ಯಾರೂ ಈ ಸುದ್ದಿಯನ್ನು ತಿಳಿಸುವುದಿಲ್ಲ. ಹೆತ್ತ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ, ಸಾಯುವ ಸಮಯದಲ್ಲೂ ಆಕೆಯ ಹತ್ತಿರವಿರಲಿಲ್ಲ , ಆಕೆಗೆ ತನ್ನಿಂದ ನೆಮ್ಮದಿ ಇಲ್ಲದೇ ಹೋಯಿತೆಂದು ಬಹಳ ದುಃಖ ಪಡುತ್ತಾನೆ. ತಾಯಿಯನ್ನು ಕಳೆದುಕೊಂಡು ಕಾಳಿಂಗ ತಾಯಿಯ ಬೆಲೆ ಅರಿತು, ತಾನು ತಬ್ಬಲಿಯಾಗುತ್ತಾನೆ.

ಹಿಲ್ಡಾ ಕಾಳಿಂಗನರಿಗೆ ಹೆಣ್ಣು ಮಗು ಹುಟ್ಟುತ್ತದೆ, ಅವಳು  ತಾಯವ್ವನನ್ನೇ ಹೋಲುತ್ತಿರುತ್ತಾಳೆ. ಹಿಲ್ಡಾ ಗೆ ತನ್ನ ಮಗುವಿನ ಬಣ್ಣ ನೋಡಿದಾಗಲೆಲ್ಲೂ ಈ ಮಗುವೇಕೆ ಈ ಬಣ್ಣದಿಂದ ಹುಟ್ಟಿದೆ ಒಂದೊಂದು ಸಲ ಅದನ್ನು ಕಂಡಾಗ ಸಿಟ್ಟು ಬರುತ್ತದೆ ಆದರೂ ಒಂದೊಂದು ಸಲ ತಾಯತ್ವವು ಅರಿವಾಗಿ ತನ್ನ ಮಗುವನ್ನು ಮುದ್ದಿಸುತ್ತಾಳೆ. ಆ ಮಗುವು ಮೊಲೆ ಹಾಲು ಬಿಟ್ಟು ಬೇರೆ ಕುಡಿಯುತ್ತಲೇ ಇರಲಿಲ್ಲ ಇದರಿಂದ ಹಿಲ್ಡಾ ಇದೇನಿದು ವಿಚಿತ್ರ ಈ ಮಗುವಿಗೆಲ್ಲಾ ಈ ದೇಶದ ಲಕ್ಷಣಗಳೇ ಬಂದಿವೆ ತನ್ನದೇ ಯಾದ ಯಾವ ಹೋಲಿಕೆಯೂ ಇಲ್ಲವೆಂದು ಸಂಕಟಪಡುತ್ತಾಳೆ. ಆದರೂ ಇಲ್ಲಿ ಒಂಟಿತನವು ಸದಾ ಕಾಡುತ್ತಿರುತ್ತದೆ. ತಮಗೆ ಯಾರು ಇಲ್ಲದೆ ಒಂಟಿಜೀವನವನ್ನು ನಡೆಸುವ ಬದಲು ತನ್ನ ದೇಶಕ್ಕೆ ಹಿಂದಿರುಗಿ ಹೋಗೋಣವೆಂದು ಹಿಲ್ಡಾ ಸೂಚಿಸಿದಾಗ ಕಾಳಿಂಗ ಒಪ್ಪುತ್ತಾನೆ. ಊರು ಬಿಡುವ ಮುಂಚೆ ಕಾಳಿಂಗನು ತನ್ನ ದೊಡ್ಡಿಯಲ್ಲಿರುವ ಹಸುಗಳನ್ನು ಮಾರಿಬಿಡುತ್ತಾನೆ. ಆ ಹಸುಗಳೆಲ್ಲವನ್ನು ಮುಂಬಯಿಯಲ್ಲಿ ಚಪ್ಪಲಿ ತಯಾರಿಸುವ ಕಾರ್ಖಾನೆಗೆ ಮಾರಿಬಿಡುತ್ತಾರೆಂದು ತಿಳಿಯುತ್ತಾನೆ, ಎಲ್ಲೋ ಒಂದು ಕಡೆ ಬೇಸರ ಆದರೂ ತಾನು ನಿಸ್ಸಹಾಯಕ. 

ಅದೇ ಸಮಯದಲ್ಲಿ ಹಿಲ್ಡಾ ಮಗುವು ಮೊಲೆ ಹಾಲನ್ನು ಕುಡಿಯದೆ ಸದಾ ಅಳುತ್ತಿರುತ್ತಾಳೆ. ಎಷ್ಟೇ ಸಮಾಧಾನ ಮಾಡಿದರೂ ಅಳು ನಿಲ್ಲಿಸುವುದಿಲ್ಲ, ಮೊಲೆ ಹಾಲು ಕುಡುಯುವುದಿಲ್ಲ. ಈ ವಿಚಿತ್ರ ವರ್ತೆನೆಯನ್ನು ಕಂಡು ತಮಗೆ ಏನು ಮಾಡಬೇಕೆಂದು ತೋರುವುದಿಲ್ಲ. ಅದೇ ಸಮಯದಲ್ಲಿ ಕಾಳಿಂಗನಿಗೆ ಗೌಡಜ್ಜನು ಮಾಡಿದ ಒಂದು ಪ್ರಸಂಗ ನೆನಪಾಗುತ್ತದೆ. ತಾನು ಸಣ್ಣ ಮಗುವಿದ್ದಾಗ ತಾಯವ್ವನಿಗೆ ಹಾಲು ಬತ್ತಿ ಹೋದಾಗ ಗೌಡಜ್ಜನು ಪುಣ್ಯಕೋಟಿಯ ಕೆಚ್ಚಲಿಗೆ ತನ್ನ ಬಾಯನ್ನಿಟ್ಟಾಗ ತಾನು ಹಾಲನ್ನು ಕುಡಿದ ಪ್ರಸಂಗವನ್ನು ಹಿಲ್ಡಾಗೆ ತಿಳಿಸಿದಾಗ ಆಕೆ ನಂಬುವುದಿಲ್ಲ. ಆದರೂ ಪುಣ್ಯಕೋಟಿ ಹಸು ಸಾಕಿರುವ ಮನೆಯನ್ನು ಹುಡುಕಲು ಶುರುಮಾಡುತ್ತಾನೆ. ತನ್ನ ಹತ್ತಿರ ಇರುವು ಹಸುಗಳನ್ನು ಮಾರಿಯಾಯಿತು, ಸೇಡು ತೀರಿಸಿಕೊಳ್ಳಲು ಹಿಲ್ಡಾ ಕೊಂದದ್ದು ಆಯಿತು, ತಾನು ಇಷ್ಟು ಓದಿ ಇತರರಿಗೆ ಹೊಂದಿಕೊಳ್ಳದೇ ಒಂಟಿಜೀವನವನ್ನು ನಡೆಸುತ್ತಾ ಸಾಧಿಸಿದ್ದೇನೆಂದು, ಈಗ ತನ್ನ ತಾಯಿಯಿದ್ದರೆ ತನ್ನನ್ನು ಅವಳು ಮಾತ್ರವೇ ಸಮಾಧಾನ ಮಾಡ ಬಹುದಾದ ವ್ಯಕ್ತಿಯಂದು ಅಂದು ತಾನು ನಿಜವಾಗಿ ತಬ್ಬಲಿಯಾಗುತ್ತಾನೆ.

ಎಷ್ಟು ಹುಡುಕಿದರೂ ಯಾರ ಮನೆಯಲ್ಲೂ ಪುಣ್ಯಕೋಟಿ ಇರುವುದಿಲ್ಲ, ಇರುವದು ಒಂದೇ ತಾಯವ್ವ ದಾನಮಾಡಿದ ಹಸು ವೆಂಕಟರಮಣನ ಹತ್ತಿರ ಆದರೂ ಅವನನ್ನು ಕೇಳುವುದು ಹೇಗೆ, ಕೇಳಿದರೆ ಅವನು ಒಪ್ಪುವುದಿಲ್ಲಾ, ಆದರೂ ಧೈರ್ಯ ಮಾಡಿ ಕೇಳಿದಾಗ ಹಸು ಬೆಲೆ ಗೊತ್ತಿಲ್ಲದೆ ಅದನ್ನು ಕ್ರೂರವಾಗಿ ಕೊಂದು ಮಾಂಸವನ್ನು ತಿನ್ನುವ ಜನರು ನೀವು ನಿಮಗೀಗ ಅದರ ಬೆಲೆ ಗೊತ್ತಾಗುತ್ತಿದೆ ಕಾಲವೆಂದರೆ ಹೀಗೆ ನಾನು ಹೇಳುವುದನ್ನು ನೀವು ಹಾಸ್ಯ ಮಾಡಿದಿರಿ ಈಗ ಅದರ ಬೆಲೆ ಕಂಡು ಹುಡುಕಿಕೊಂಡು ಬಂದಿರಿ, ಆದರೂ ಗೌಡಜ್ಜನು ತನಗೆ ಮಾಡಿದ ಸಹಾಯವನ್ನು ಎಂದಿಗೂ ಮರೆಯಲು ಅಸಾಧ್ಯ, ಗೌಡಜ್ಜನ ಮೊಮ್ಮಗ ಬಂದು ಕೇಳಿದಾಗ‌ ಇಲ್ಲ ಎನ್ನುವುದಿಲ್ಲಾ ಎಂದು ಹೇಳಿ, ಪುಣ್ಯಕೋಟಿಯ ಕೆಚ್ಚಲಿಗೆ ಬಾಯಿಟ್ಟಾಗ ಅದು ಗುದ್ದಿ ಗುದ್ದಿ ಹಾಲನ್ನು ಹೀರಿ ಹೀರಿ ಕುಡಿಯುತ್ತದೆ ಇದನ್ನು ಕಂಡು ಹಿಲ್ಡಾ ಕಾಳಿಂಗರಿಗೆ ಇಬ್ಬರಿಗೂ ಆಶ್ಚರ್ಯವಾಗುತ್ತದೆ. ಅಂದು ವೆಂಕಟರಮಣನು ಮಾಡಿದ ಸಹಾಯ ಅವರಲ್ಲಿ ಅವನ ಮೇಲೆ ಎಲ್ಲಿಲ್ಲದ ಗೌರವ ಹುಟ್ಟಿಸುತ್ತದೆ.

ಈ ಘಟನೆ ನಡೆದ ನಂತರವೇ ತಾನು ಮಾರಿದ ಹಸುಗಳನ್ನು ಪುನಃ ಕರೆತರಲು ಹೊರಡುತ್ತಾನೆ ಅವುಗಳನ್ನು ಆವಾಗಲೇ ಬಾಂಬೆಗೆ ತಲುಪಿಸಿರುತ್ತಾರೆ ಅದನ್ನು ತಿಳಿದು ಹುಡುಕಲು ಹೋದಾಗ ಅಲ್ಲಿ ಸಾವಿರಾರು ಹಸುಗಳನ್ನು ಕಾಣುತ್ತಾನೆ. ಅಲ್ಲಿರುವ ವ್ಯಕ್ತಿ ತನ್ನ ಹಸುಗಳನ್ನು ತಾನೇ ಹುಡಿಕಿಕೋ ಬೇಕೆಂದು ಹೇಳಿದಾಗ ಅವನು ಸಾಕಿರುವ ಹಸುಗಳನ್ನು ಏನಂತ ಕೂಗುವುದು?ತಾನು ಹೆಸರಿಟ್ಟಿದ್ದರೆ ತಾನೆ, ಅವನ್ನು ಪ್ರೀತಿಸಿದ್ದರೇ ತಾನೆ. ಮನುಷ್ಯರನ್ನು ಪ್ರೀತಿಸಲಿಲ್ಲ, ಹೆತ್ತ ತಾಯಿಯನ್ನು ಸರಿ ನೋಡಿಕೊಳ್ಳಲಿಲ್ಲ, ಗೌಡಜ್ಜನ, ತಾಯವ್ವನ, ವೆಂಕಟರಮಣನ, ಇನ್ನಿತರ ವ್ಯಕ್ತಿಗಳ ಬೆಲೆ ಅರಿವಾಗುತ್ತದೆ. ಆದರೂ ಗಂಗೇ,‌ಗೌರಿ,ಕಾವೇರಿ ಎಂದು ಹೆಸರಿಟ್ಟು ಕೂಗಿದರೂ ಯಾವ ಹಸುವೂ ಇವನ ಕೂಗಿಗೆ ಪ್ರತಿಕ್ರಿಯಸುವುದಿಲ್ಲ. ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ಕಾಳಿಂಗ, ಹಸುಗಳನ್ನು ಕಳೆದುಕೊಂಡು ತಬ್ಬಲಿಯಾಗುತ್ತಾನೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ತಿಕೇಯ ಭಟ್‌