Article

ಗ್ರಾಮೀಣ ಸಾಮಾಜಿಕ ಜನಜೀವನದಲ್ಲಿ 'ಓಡಿಹೋದ ಹುಡುಗ'

ಗಜ್ಯಾ ಎಂಬ ಗ್ರಾಮೀಣ ಭಾಗದ ಹುಡುಗನ ಸುತ್ತಲೂ ತೆರೆದುಕೊಳ್ಳುವ ಮಕ್ಕಳ ಹಾಗೂ ಸಾಮಾಜಿಕ ಜನಜೀವನದ ಕಥಾಹಂದರವೇ 'ಓಡಿಹೋದ ಹುಡುಗ' ಕಾದಂಬರಿಯ ಜೀವಾಳವಾಗಿದೆ. ಗಜ್ಯಾನೇ ಕಾದಂಬರಿಯ ಕೇಂದ್ರ ಪಾತ್ರವಾದರೂ ಗಜ್ಯಾನ ಸುತ್ತಲೂ ಒಂದು ಗ್ರಾಮೀಣ ಜನಜೀವನದ ಬದುಕೇ ತೆರೆದುಕೊಳ್ಳುತ್ತದೆ ಅದೂ ಕೂಡ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಅಲ್ಲಿಯ ಜನರ ಬದುಕಿನ ವಿವಿಧ ಮಜಲುಗಳು, ಗ್ರಾಮೀಣ ಜೀವನದ ಬದುಕು ಅನಾವರಣಗೊಳ್ಳುತ್ತದೆ. ಗ್ರಾಮೀಣ ಭಾಷೆಯ ಸೊಗಡು ಕಾದಂಬರಿಯುದ್ದಕ್ಕೂ ಉಲ್ಲಾಸ ಊದುಬತ್ತಿಯ ಸುವಾಸನೆಯಂತೆ ಓದುಗರನ್ನು ತನ್ಮಯಗೊಳಿಸುತ್ತದೆ.

ಮಲ್ಲೂರಿನಲ್ಲಿ ಬೆಳಕಾಗುವುದೇ ಗಜ್ಯಾನ ಸೈಕಲ್ ರಿಂಗಣದಿಂದಲೇ ಬೆಳಗಿನ ಜಾವ ಆತ ಸೈಕಲ್ ಹೊಡೆಯುತ್ತ ತನ್ನ ಸಹಪಾಟಿಗಳು ಹೊದ್ದ ಹಾಸಿಗೆಯನ್ನು ಎಳೆಯುತ್ತ ಅವರನ್ನು ಕಿಚಾಯಿಸುತ್ತ ಟ್ರಿಂಗ್…. ಟ್ರಿಂಗ್… ಎಂದು ಸೈಕಲ್ ಗಂಟೆ ಬಾರಿಸುತ್ತ ಊರಲ್ಲಿ ಸುತ್ತುವುದು ಊರಲ್ಲಿಯ ಹಾಲನ್ನು ಡೈರಿಗೆ ಒಯ್ಯುವುದು ಗಜ್ಯಾನ ದಿನನಿತ್ಯದ ಕಾರ್ಯವಾಗಿತ್ತು. ಗಜ್ಯಾನ ಸೈಕಲ್ ಗಂಟೆನಾದವೇ ಊರಿಗೆ ಶುಭೋದಯದ ಮಂಗಳಗಾನ. ಊರಲ್ಲಿ ಗಜ್ಯಾನನ್ನೇ ಉದಾಹರಣೆಗೆ ಇಟ್ಟುಕೊಂಡು ತಮ್ಮ ಮಕ್ಕಳಿಗೆ ಬೈಯ್ಯುವ ತಂದೆತಾಯಂದಿರೇ ಹೆಚ್ಚಾಗಿದ್ದರು. 'ಗಜ್ಯಾ ಬೆಳ್ಳಂಬೆಳಿಗ್ಗೆ ಎದ್ದು ತಂದೆತಾಯಂದಿರಿಗೆ ಹೇಗೆಲ್ಲ ಆಸ್ರ ಆಗ್ಯಾನ ನೋಡ್ರಿ, ನೀವು ಅದಿರಿ ಸೂರ್ಯಾ ಮಾರಿಮ್ಯಾಗ ಬಂದ್ರೂ ಇನ್ನೂ ಬಿದ್ದಿರಿ ಎದ್ದೆಳ್ರಿ' ಎನ್ನುತ್ತ ಮಕ್ಕಳನ್ನು ಬೈಯ್ಯುವುದು ಎಲ್ಲರ ಮನೆಗಳಲ್ಲಿ ಸಹಜವೆಂಬಂತಾಗಿತ್ತು. ಹೀಗಾಗಿಯೇ ಮಕ್ಕಳಿಗೆ ಗಜ್ಯಾನ ಮೇಲೆ ಎಲ್ಲಿಲ್ಲದ ಕೋಪ.

ಊರ ಆಲದಮರದ ಕೆಳಗಿರುವ ಹಿರಿಯಜ್ಜನೆಂದರೆ ಮಕ್ಕಳಿಗೆಲ್ಲ ಅಚ್ಚುಮೆಚ್ಚು. ಅಜ್ಜನಿಂದ ಕುತೂಹಲವೆನಿಸುವ ಕಥೆಗಳನ್ನು ಕೇಳುವುದು ಮಕ್ಕಳಿಗೆ ಸಂತಸದ ವಿಷಯವಾಗಿತ್ತು. ಅಜ್ಜನು ಹೇಳುವ ಭೂಮಿ ಆಗಸಕ್ಕೆ ಸಂಬಂಧಪಟ್ಟ ಕುತೂಹಲದ ಕಥೆಗಳು ಮಕ್ಕಳನ್ನು ಬೆರಗುಗೊಳಿಸುತ್ತಿದ್ದವು. ನಮ್ಮ ಮಕ್ಕಳನ್ನು ಹಾಳು ಮಾಡುತ್ತಿದ್ದಾನೆ ಎಂದ ಊರ ಮಕ್ಕಳ ಪಾಲಕರು ಬೈಯುವ ಬೈಗುಳನ್ನು ಅಜ್ಜ ಸಮಾಧಾನದಿಂದಲೇ ಸ್ವೀಕರಿಸುತ್ತಿದ್ದ. ಊರಲ್ಲಿ ನಡೆದ ಪವಾಡಗಳಲ್ಲಿ ಅಜ್ಜನ ಬಾಯ್ಮಾತಿನಲ್ಲಿ‌ ಹೊರಬಿದ್ದ ಮಕ್ಕಳೆಲ್ಲ ಫೇಲಾಗುತ್ತಾರೆ ಎನ್ನುವ ಮಾತು ಕೊನೆಗೂ ಹಾಗೇ ಆಗಿ ಊರಲ್ಲಿ ಎಲ್ಲರಿಗೂ ದಿಗಿಲುಮೂಡುವಂತೆ ಮಾಡಿತ್ತು. ಅಜ್ಜನ ಮೇಲೆ ಕೆಲವರಿಗೆ ಅನುಮಾನವೂ ಮೂಡಿತ್ತು. ಅಜ್ಜನಿಗೂ ಮಕ್ಕಳೆಂದರೆ ಇಷ್ಟ, ಮಕ್ಕಳಿಗೂ ಅಜ್ಜನೆಂದರೆ ಇಷ್ಟ‌. ಆದರೆ ಮಕ್ಕಳ ಪಾಲಕರಿಗೆ ಅಜ್ಜನೆಂದರೆ ಒಂದು ರೀತಿಯ ತಾತ್ಸಾರ ಮನೋಭಾವ. ಮಕ್ಕಳೊಡನಾಟದ ಅಜ್ಜನ ಮನದಾಳದ ಮಾತುಗಳನ್ನು ಮುಗ್ದತೆಯ ರೂಪದಲ್ಲಿ ಲೇಖಕರು ಬಿಚ್ಚಿಟ್ಟಿದ್ದಾರೆ.

ಮಕ್ಕಳ ತುಂಟತನದ ಚಿತ್ರಣಗಳೂ ಸೊಗಸಾಗಿ ಚಿತ್ರಿತಗೊಂಡಿವೆ. ಊರ ಮುಂದಿನ ಹೊಲಗಳಲ್ಲಿ ಶೇಂಗಾ ಕದ್ದು ತಿನ್ನುತ್ತಾ ಒಂದು ರಾತ್ರಿ ಸಿಕ್ಕಿಬಿದ್ದಾಗ ಅಜ್ಜನ ಉಪದೇಶದಂತೆ ಎಲ್ಲರೂ ಶಾಂತರಾಗಿ ಮನೆಕಡೆಗೆ ನಡೆದರು. ಗಜ್ಯಾನ ಸ್ನೇಹವಲಯದವರ ಚಿತ್ರಣ ಹಾಗೂ ಅವರು ಗಜ್ಯಾನ ಮೇಲೆ ಹೊಂದಿರುವ ದ್ವೇಷಭಾವದ ಕಿತಾಪತಿಗಳು ಬಹಳ ಸೊಗಸಾಗಿ ಮೂಡಿಬಂದಿವೆ. ಮಕ್ಕಳ ಮನಸ್ಸನ್ನು ಸೂಕ್ಷ್ಮವಾಗಿ ಅವಲೋಕಿಸಿ ಯಥಾವತ್ತಾಗಿ ಬಿತ್ತರಗೊಂಡಿದೆ.

ಗಜ್ಯಾನ ತಂದೆ ಆಸ್ಪತ್ರೆಯಲ್ಲಿರುವಾಗಲೇ ಗಜ್ಯಾ ಪರೀಕ್ಷೆ ಬರೆಯದೇ ಶಾಲೆಯಿಂದ ಹೊರಗುಳಿಯುವುದು, ಪರೀಕ್ಷೆಯಲ್ಲಿ ಮುಕುಂದ ಮೊದಲನೇ ಸ್ಥಾನದಲ್ಲಿ ಉತ್ತೀರ್ಣನಾಗೋದು, ಅಲ್ಲಿ ಗಜ್ಯಾನ ತಾಯಿಯಾಡಿದ ಮಾತುಗಳು ಮಗಾ ನೀನು ಪರೀಕ್ಷೆಯಲ್ಲಿ ನಪಾಸಾಗಿರಬಹುದು ನಮ್ಮ ಜೀವನವೆಂಬ ಪರೀಕ್ಷೆಯಲ್ಲಿ ಗೆದ್ದಿದಿಯಾ ಎಂದು ಹನಿಗಣ್ಣಾಗುವುದು ಓದುಗರನ್ನು ಭಾವಲೋಕಕ್ಕೆ ಕೊಂಡ್ಯೊಯ್ಯುತ್ತದೆ.

ತಲಾಟಿಯ ಮಗ ಹಾಗೂ ಮೇಷ್ಟ್ರು ಮಕ್ಕಳ ಒಡನಾಟದಲ್ಲಿ ಬೆಳೆಯುವ ಗಜ್ಯಾ ಹಾಗೂ ಅವನ ಸಂಗಡಿಗರ ಬದುಕು ಮತ್ತೊಂದು ರೀತಿಯ ಕುತೂಹಲದ ಹಾಗೂ ಹೊಸತನದ ಬದಲಾವಣೆಗೆ ಅಣಿಯಾಗುತ್ತದೆ. ತಲಾಠಿ ಸಾಹೇಬರ ಮನೆಯಲ್ಲಿ ನಡೆಯುವ, ರೈತರು ತಲಾಠಿ ಸಾಹೇಬನನ್ನು ನೋಡಿಕೊಳ್ಳುವ ಪರಿಕಂಡು ಬೆಕ್ಕಸಬೆರಗಾಗಿ ನೋಡುತ್ತಲೇ ಮನದಲ್ಲೇ ಚಿಂತಿಸುತ್ತಾರೆ. ತಲಾಠಿ ಸಾಹೇಬರನ್ನು ಊರವರು ಇಷ್ಟು ಆದರದಿಂದ ಕಾಣಲು ಕಾರಣವೇನು ಎಂಬ ಯಕ್ಷಪ್ರಶ್ನೆ ಹಾಕಿಕೊಂಡೇ ತಲಾಠಿ ಮಗ ಮುಕುಂದ ಉರ್ಪ್ ಮುಕ್ಯಾನ ಜೊತೆಗೆ ಒಡನಾಟ ಬೆಳೆಸುತ್ತಾರೆ. ಮಕ್ಕಳ ಮನಸ್ಸಿ‌ನ ಕುತೂಹಲದ ಸಣ್ಣ ಸಣ್ಣ ಪ್ರಶ್ನೆಗಳು ಅದೆಂತಹ ಆಳದ ಉತ್ತರವನ್ನು ಹೊತ್ತಿರುತ್ತವೆ ಎಂಬುದನ್ನು ತಲಾಠಿ ಹಾಗೂ ಊರ ರೈತರ ನೆಉವಿನ ಬಾಂಧವ್ಯದ ಹಿನ್ನಲೆಯಲ್ಲಿ ಆಲೋಚಿಸಿದಾಗ ನಿಜಕ್ಕೂ ಅಂದಿನ ಜನರು ಹಾಗೂ ಅಧಿಕಾರಿಗಳ ನಡುವಿನ ಅಂತರದ ಏರುಪೇರನ್ನು ಸೂಚಿಸುತ್ತದೆ. ತಲಾಠಿ ಸಾಹೇಬರು ಪ್ರಮೋಶನ್ ಆದಾಗ ಅವರ ಮಡದಿ ಊರವರಿಗೆ ಸೀರೆಕೊಟ್ಟು ಹೊರಡುವಾಗ ತನ್ನ ಕಡ್ಡಿಯಂತ ಮಗನನ್ನ ದುಂಡುಗೊಳಿಸಿದಿರಿ, ನೀರು ಕೇಳಿದರೆ ಎಳೆನೀರೇ ಕೊಟ್ಟಿದಿರಿ, ನಮ್ಮನ್ನು ನೀವು ಪ್ರೀತಿ ಆದರದಿಂದ ಕಂಡದ್ದಿರಿ ಈ ಜನ್ಮದಲ್ಲಿ ನಿಮ್ಮನ್ನು ಮರೆಯಲ್ಲ ಎಂದು ಕಣ್ಣೀರಾಕಿದ ಘಟನೆಯೂ ಹಳ್ಳಿಯ ಮನಸ್ಸುಗಳ ದೊಡ್ಡತನವನ್ನು ಎತ್ತಿತೋರಿಸುತ್ತದೆ.

ತಂದೆತಾಯಿಗೆ ಒಳ್ಳೆಯ ಮಗನೆಂಬ ಹೆಸರುಪಡೆದು ಊರಿಗೆ ಒಳ್ಳೆಯ ಹುಡುಗನೆಂಬ ಖ್ಯಾತಿಹೊಂದಿ, ತಂದೆಯ ಹೊಟೇಲ್ ಕೆಲಸಕ್ಕೆ ತಾನು ಡೈರಿಗೆ ಹಾಲುಹಾಕಿ ಸಂಪಾದಿಸುವ ಹಣವನ್ನು ನೀಡಿ, ತನ್ನೆಲ್ಲ ಗೆಳೆಯರಲ್ಲಿ ಕೆಲವರಿಗೆ ಬೇಕಾಗಿ ಬಹಳ ಜನಕ್ಕೆ ಬೇಡವಾಗಿ ಸಾಗುತ್ತಿದ್ದ ಗಜ್ಯಾ ಒಮ್ಮೆ ಊರಲ್ಲಿ ತನ್ನ ಸೈಕಲ್ ರಿಂಗಣವನ್ನೇ ನಿಲ್ಲಿಸಿಬಿಡುತ್ತಾನೆ. ಅಂದರೆ ಊರಿನಿಂದಲೇ ನಾಪತ್ತೆಯಾಗುತ್ತಾನೆ. ಇಡೀ ಊರಿಗೆ ಊರೇ ಗಜ್ಯಾನ ಹುಡುಕಾಟದಲ್ಲಿ ತೊಡಗುತ್ತದೆ.

ಗಜ್ಯಾ ಇಲ್ಲದಾಗ ದಿಪ್ಯಾ ಎಂದು ಕರೆಯಲ್ಪಡುವ ಜೂಲು ನಾಯಿಯ ಚಿತ್ರಣ ಸೊಗಸಾಗಿ ಚಿತ್ರಣಗೊಂಡಿದೆ. ಗಜ್ಯಾ ಇಲ್ಲದಾಗ ನಾಯಿಯೂ ಸಪ್ಪೆಮೋರೆ ಹಾಕಿ ಸುತ್ತುವುದು ಪ್ರಾಣಿಗಳೂ ಮನುಷ್ಯನನ್ನು ಎಷ್ಟರಮಟ್ಟಿಗೆ ಹಚ್ಚಿಕೊಂಡಿರುತ್ತವೆ ಎಂಬಂಶವನ್ನು ಇಲ್ಲಿ ಕಾಣಬಹುದು.

ಅಂತೂ ಗಜ್ಯಾ ಮರಳಿ ಊರಿಗೆ ಬಂದಾಗ ಎಲ್ಲರೂ ನಿರಾಳರಾಗುತ್ತಾರೆ‌. ಅಜ್ಜ ಹಾಗೂ ಗಜ್ಯಾ ಸಿನಿಮಾ ರೀತಿಯಲ್ಲಿ ತಮಗಾದ ಅನುಭವಗಳನ್ನು ಊರವರಿಗೆ ಸಿನಿಮಾ ರೀತಿಯಲ್ಲಿ ಚಿತ್ರಿಸಿ ಹೇಳುತ್ತಾ, ನಾಳೆ ನಮ್ಮೂರಿಗೆ ಶೂಟಿಂಗ್ ಗೆ ಬರುತ್ತಿದ್ದಾರೆ ನನ್ನೆಲ್ಲ ಗೆಳೆಯರು ಸೈಕಲ್ ತಯಾರು ಮಾಡಿ ಎಂದಾಗ ಎಲ್ಲರೂ ಕೇ...ಕ..ಕೋ ಎಂದು ಶಿಳ್ಳೆ ಹಾಕುತ್ತಲೇ ಕಾದಂಬರಿ ಮುಕ್ತಾಯವಾಗುತ್ತದೆ.

ಗಜ್ಯಾನ ಸುತ್ತಲೂ ಒಂದು ಹಳ್ಳಿ ಬದುಕಿನ ಕಥನವನ್ನು, ಮಕ್ಕಳ ಮನಸ್ಸಿನ ಸುತ್ತಲೂ ಇರುವ ಬಗೆಬಗೆಯ ಕೋಪತಾಪದ, ಸಣ್ಣಪುಟ್ಟಜಗಳಗಳು ಸಚಿತ್ರವಾಗಿ ಮಕ್ಕಳ ಮನೋಭಾವದ ಸುಂದರ ಲೋಕವನ್ನೇ ಇಲ್ಲಿ ಕಾಣಬಹುದು. ಮಕ್ಕಳೆಂದರೇ ಹಾಗಲ್ಲವೇ, ಅವರ ಜಗಳಗಳು ಕೋಳಿಜಗಳಗಳಂತೆ ಎಂದರೆ ಅವುಗಳು ಕ್ಷಣಾರ್ಧದಲ್ಲೇ ಮೊಟಕಾಗಿ ಮತ್ತೆ ಹೆಗಲ ಮೇಲೆ‌ ಕೈ ಹಾಕಿ ನಗುತ್ತ ಸಾಗುವ ಗೆಳೆಯರ ಚಿತ್ರಣ, ಹಳ್ಳಿಯ ಬದುಕಿನ ಜನಜೀವನ, ಅಜ್ಜನ ಆಲದ ಮರ, ತಲಾಠಿ ಸಾಹೇಬರ ಕಾರ್ಯವೈಖರಿ, ಗಜ್ಯಾನ ಮನಸ್ಥಿತಿ ಎಲ್ಲವೂ ನಮ್ಮನ್ನು ಮರಳಿ ಬಾಲ್ಯಕ್ಕೆ ಕರೆದೊಯ್ದು ಬಂದಂತಾಯ್ತು.

ಕಾದಂಬರಿಯುದ್ದಕ್ಕೂ ಬಳಕೆಯಾದ ಗ್ರಾಮೀಣ ಭಾಷೆಯ ಸುಲಲಿತ ಹಾಗೂ ಗ್ರಾಮೀಣ ಸೊಗಡಿನ ಪದಗಳು ಬಹಳ ಇಷ್ಟವಾದವು. ದ್ಯಾಸ, ಮಿಕಮಿಕ, ಖರೇನ, ಗಪ್ಪಗಾರ, ಉಡಾಳ, ಒಂದಕ್ಕೆ, ಹರಗ್ಯಾಡಾಕ, ಸ್ವಾದ, ಸೊನ್ನಿ, ಗೊಜ್ಜತೇನಿ, ಲಗೂ, ರಗಳಿ, ಸೆದಕತಾನ, ಜಾಬಾದಿ, ಮೂಳಾ, ಹೀಗೆ ಇನ್ನು ಅನೇಕ ಪದಗಳು ನಮ್ಮ ಗ್ರಾಮೀಣ ಬದುಕಿನ ಸೊಗಡಿನ ಕಂಪನ್ನು ಸೂಸುತ್ತವೆ. ಗಜ್ಯಾನ ಬದುಕಿನೊಂದಿಗೆ ನಮ್ಮ ಬಾಲ್ಯದ ಕ್ಷಣಗಳು ಮಿಣುಕುದೀಪದಂತೆ ಮನದಲ್ಲಿ‌ ಮಿಂಚಲಾರಂಭಿಸಿವೆ. ಮಕ್ಕಳ ಹೆಸರುಗಳೂ ಅಷ್ಟೇ ಮಕ್ಕಳು ಬಳಸುವ ಭಾಷೆಯಂತೆಯೇ ಗಜಾನನ ಇದ್ದದ್ದು ಗಜ್ಯಾ, ಪರಶುರಾಮ ಇದ್ದದ್ದು ಪರ್ಸ್ಯಾ, ಮುಕುಂದ ಇದ್ದದ್ದು ಮುಖ್ಯಾ, ಗಂಗ್ಯಾ, ಸ್ವಾಮ್ಯಾ, ದೀಪ್ಯಾ ಹೀಗೆ ಮಕ್ಕಳ ಮನಸ್ಸನ್ನು ಇನ್ನಷ್ಟು ಪುಳಕಗೊಳ್ಳುವಂತೆ ಮಾಡುತ್ತವೆ.

ನಾನು ಓದಿದ ಮೊದಲ ಮಕ್ಕಳ ಕಾದಂಬರಿ ಇದಾಗಿದ್ದು. ನನ್ನ ಬಾಲ್ಯದ ಬಹಳಷ್ಟು ನೆನಪುಗಳನ್ನು 'ಗಜ್ಯಾ' ಎಂಬ ಒಂದು ಬಾಲಕನ ಹೆಸರು ಯಾವಕಾಲಕ್ಕೂ ನನ್ನನ್ನು ನನ್ನ ಬಾಲ್ಯಕ್ಕೆ ಕರೆದೊಯ್ಯುವಂತೆ ಮಾಡಿದೆ. ಗಜ್ಯಾ ಎಂದೊಡನೆ ತೆರೆದುಕೊಳ್ಳುವ ಸುಂದರ ಪ್ರಕೃತಿ, ಗುಡ್ಡ, ಹಳ್ಳಿಯ ಜೀವನ ಎಲ್ಲವೂ ನಮ್ಮನ್ನು ನಮ್ಮ ಬಾಲ್ಯಕ್ಕೆ ಕರೆದೊಯ್ಯುತ್ತದೆ. 

ಪುಸ್ತಕದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜು ಹಗ್ಗದ