Article

“ಹಿಜಾಬ್” ಕಾದಂಬರಿ ಎರಡು ಮಾತುಗಳು

ಡಾ. ಗುರುಪ್ರಸಾದ್ ಕಾಗಿನೆಲೆಯವರ ಹಿಜಾಬ್ ಕನ್ನಡದ ಕ್ಲಾಸಿಕ್ ಕಾದಂಬರಿಗಳ ಲೋಕಕ್ಕೆ ಸೇರುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಎಂದು ಖಂಡಿತವಾಗಿ ಹೇಳಬಹುದು. ಅದಕ್ಕೆ ಮುಖ್ಯ ಕಾರಣ ಕಾದಂಬರಿಯ ವಸ್ತುವಿನ ಆಯ್ಕೆ. ಅಲ್ಲಿಯೇ ಕಾದಂಬರಿಕಾರರ ಯಶಸ್ಸು ಕೂಡ ನಿಂತಿರುವುದು.ಶ್ರೀಕೃಷ್ಣ ಆಲನಹಳ್ಳಿಯವರು ಒಮ್ಮೆ ಕನ್ನಡದ ಲೇಖಕಿಯರ ಸಾಹಿತ್ಯವನ್ನೆಲ್ಲಾ “ಅಡುಗೆ ಮನೆ ಸಾಹಿತ್ಯ” ಎಂದು ಕಟುವಾಗಿ ವಿಮರ್ಶಿಸಿದ್ದರು. ಅದು ಅವತ್ತಿನ ಕಾಲಕ್ಕೆ ಅರ್ಧ ಸತ್ಯವಾಗಿತ್ತು. ಅದನ್ನು ಅನುಪಮ ನಿರಂಜನರವರು ತೀವ್ರವಾಗಿ ವಿರೋಧಿಸಿದ್ದರು. ಕೊಡಗಿನ ಗೌರಮ್ಮ, ತ್ರಿವೇಣಿ, ಎಂ.ಕೆ ಇಂದಿರಾ, ವೀಣಾ ಶಾಂತೇಶ್ವರ, ವೈದೇಹಿ ಅಪಾರ ಹೆಸರು ಪಡೆದರೂ ಕೂಡ ಅವರ ಸಾಹಿತ್ಯವೆಲ್ಲಾ ಹೆಣ್ಣು ಮಕ್ಕಳ ಸಮಸ್ಯೆಯನ್ನೇ ಹೊಂದಿರುವುದು ಅಷ್ಟೇ ಸತ್ಯ. ಆದರೆ ಅನುಪಮ ನಿರಂಜನ ಅವರು ಸಾಹಿತ್ಯ, ಮಕ್ಕಳ ಸಾಹಿತ್ಯ, ಪ್ರವಾಸ, ಆರೋಗ್ಯ ಎಲ್ಲದರ ಬಗ್ಗೆಯೂ ಬರೆದವರು ಸಹಜವಾಗಿಯೇ ಕೃಷ್ಣರ ಮಾತಿಗೆ ಕೋಪಗೊಳ್ಳುವುದರಲ್ಲಿ ಅರ್ಥವೂ ಇತ್ತು. ಇಂದಿಗೂ ಉಮಾ ರಾವ್, ಪ್ರತಿಭಾ ನಂದಕುಮಾರ್, ಜಯಶ್ರೀ ಕಾಸರವಳ್ಳಿ, ನೇಮಿ ಚಂದ್ರ, ಅನುಪಮ ಪ್ರಸಾದ್ ರವರಂತಹ ಕೆಲವರನ್ನು ಬಿಟ್ಟರೆ ಇನ್ನು ಬಹಳಷ್ಟು ಲೇಖಕಿಯರಿಗೆ ಅಡುಗೆ ಮನೆಯಿಂದ ಮುಕ್ತಿಯೇ ಸಿಕ್ಕಿಲ್ಲ ಅನ್ನುವಷ್ಟರ ಮಟ್ಟಿಗೆ ಸ್ತ್ರೀ ಸಮಸ್ಯೆಯ ಬಗ್ಗೆಯೇ ಬರೆಯುತ್ತಿದ್ದಾರೆ. ಹಾಗಂತಹ ಲೇಖಕಿಯರು ಸ್ತ್ರೀ ಸಮಸ್ಯೆಯ ಬಗ್ಗೆ ಬರೆದದ್ದೆಲ್ಲಾ ಕಳಪೆಯಂತಲ್ಲ. ಆದರೆ, ಕಾದಂಬರಿಯ ವಸ್ತುವಿನ ಆಯ್ಕೆ ಸಾಮಾನ್ಯವಾಗಿ ಪುನರಾವರ್ತಿತವಾಗುವುದರಿಂದ ಅದು ಸರಿಯಿಲ್ಲವೇನೋ ಎಂದು ಅನಿಸುತ್ತದೆ.

ಇನ್ನೂ ಲೇಖಕರ ವಿಷಯಕ್ಕೆ ಬಂದಾಗಲೂ ಕೂಡ ಗೊತ್ತಿರುವ ಹಳ್ಳಿಯ ಸಮಸ್ಯೆಯೋ, ಬಡತನ, ಜಾತಿ, ಮೇಲು ಕೀಳು ಸ್ಥಿತ್ಯಂತರದಿಂದಾಗುತ್ತಿರುವ ಅನಾಹುತಗಳೋ ಅಥವಾ ಹೆಣ್ಣು ಗಂಡಿನ ಸಂಬಂಧವೋ ಕಾದಂಬರಿ ವಿಷಯಗಳಾಗುತ್ತಿದ್ದವು. ಇಲ್ಲವಾದರೆ ಪುರಾಣದ ಅಥವಾ ಐತಿಹಾಸಿಕ ರಾಜನೋ ರಾಣಿಯೋ ಅಥವಾ ಇತಿಹಾಸದ ವಿಷಯವೋ ಕಾದಂಬರಿಯ ವಸ್ತುವಾಗುತಿತ್ತು.

ಆದರೆ, ಕನ್ನಡದ ಕ್ಲಾಸಿಕ್ ಸಾಲಿನಲ್ಲಿರಿವ ಇಂದಿರಾಬಾಯಿ, ಮಾಡಿದ್ದುಣ್ಣೋ ಮಹಾರಾಯ, ಚೆನ್ನಬಸವನಾಯಕ, ಚಿಕ್ಕವೀರರಾಜೇಂದ್ರ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಕ್ರಾಂತಿ ಕಲ್ಯಾಣ, ಮರಳಿ ಮಣ್ಣಿಗೆ, ಚೋಮನ ದುಡಿ, ಬೆಟ್ಟದ ಜೀವ, ಗ್ರಾಮಾಯಣ, ವಂಶವೃಕ್ಷ, ಗೃಹಭಂಗ, ಚಿರಸ್ಮರಣೆ, ಸಂಧ್ಯಾರಾಗ, ಹಂಸಗೀತೆ, ವೈಶಾಖ, ಅವಧೇಶ್ವರಿ, ಸಂಸ್ಕಾರ, ಶಿಕಾರಿ, ಬಂಡಾಯ, ಕರ್ವಾಲೋ, ಕಾಡು, ಪರಸಂಗದ ಗೆಂಡೆತಿಮ್ಮ, ಕುಸುಮಬಾಲೆ, ಭುಜಂಗಯ್ಯನ ದಶಾವತಾರಗಳು, ತೇರು, ಹಳ್ಳಬಂತು ಹಳ್ಳ, ಅರಮನೆ, ಹವನ, ಘಾಚರ್ ಘೋಚರ್, ಅಜ್ಞಾತನೊಬ್ಬನ ಆತ್ಮಚರಿತ್ರೆ, ಸ್ವಪ್ನ ಸಾರಸ್ವತ, ಕರ್ಮ, ನನ್ನಿ, ಸಾವಿನ ದಶಾವತಾರ, ಶೋಧ, ನ್ಯಾಸ ಕಾದಂಬರಿಗಳು ವೈವಿಧ್ಯಮಯ ವಿಷಯಗಳಿಂದ ಕೂಡಿವೆ.

ಇತ್ತೀಚಿನ ವಸುಧೇಂದ್ರರ ತೇಜೋ ತುಂಗಭದ್ರಾವನ್ನು ಮೇಲೆ ಸೇರಿಸಬಹುದು. ಹಿಜಾಬ್ ಕಾದಂಬರಿಯಲ್ಲಿ ಧರ್ಮ, ಮೌಢ್ಯ, ವಲಸೆ, ಭಾಷೆ, ಆರ್ಥಿಕತೆ ಎಲ್ಲವನ್ನೂ ಒಳಗೊಳ್ಳುತ್ತದೆ. ಕಾದಂಬರಿ ಸಾಗುವುದು ಅಮೆರಿಕಾದ ಮಿನೊಸೊಟಾದಲ್ಲಿ. ಅಮೆರಿಕಾದ ಬಗ್ಗೆ ಬರೆದಿರುವ ಗೋರೂರುರರು, ಮೂರ್ತಿರಾಯರು, ಪ್ರಭು ಶಂಕರರು, ಬಿ.ಜಿ.ಎಲ್. ಸ್ವಾಮಿ, ಚಂದ್ರಶೇಖರ ಆಲೂರರು ಎಲ್ಲರೂ ಅಮೆರಿಕವನ್ನು ಪ್ರವಾಸಿಯ ಕಣ್ಣಲ್ಲಿ ಕಂಡು ಬರೆದಿದ್ದಾರೆ. ಆದರೆ, ಅಲ್ಲಿನ ಧರ್ಮ, ಭಾಷೆ, ದೇಶ, ವರ್ಣಗಳ ಸಂಘರ್ಷಗಳ ಬಗ್ಗೆ ಈ ಪ್ರವಾಸಿ ಲೇಖಕರ ಪುಸ್ತಕಗಳು ತಿಳಿಸುವುದಿಲ್ಲ. ಈ ಸಮಸ್ಯೆ ಇಂದು ಯೂರೋಪ್ ಮತ್ತು ಆಸ್ಟ್ರೇಲಿಯ ಖಂಡದಲ್ಲೂ ಕಾಣಬಹುದು.

ಆಫ್ರಿಕಾ ದೇಶಗಳಾದ ಸೊಮಾಲಿಯ, ಇಥಿಯೋಪೀಯ, ಎರಿಟ್ರಿಯಾ, ಕೀನ್ಯಾ, ಘಾನ, ನೈಜೀರಿಯಾಗಳಲ್ಲದೇ ಮಧ್ಯ ಪ್ರಾಚ್ಯ ರಾಷ್ಟ್ರಗಳ ವಲಸಿಗ ಸ್ತ್ರೀಯರ ಸಮಸ್ಯೆಗಳು ಕೂಡ ಕಾದಂಬರಿಯಲ್ಲಿ ಬರುವ ವಸ್ತುವೇ ಆಗಿರುತ್ತದೆ. ಆ ಕಾರಣದಿಂದ ಕಾದಂಬರಿಯ ಲೇಖಕರು ವಿಶ್ವವ್ಯಾಪಕವಾಗಿರುವ ಸಮಸ್ಯೆಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ.ಇಲ್ಲಿನ ಕಥಾವಸ್ತು ಭಾರತೀಯ ಭಾಷೆಗಳನ್ನೂ ಒಳಗೊಂಡು ಜಗತ್ತಿನ ಯಾವ ಭಾಷೆಯಲ್ಲೂ ಮೂಡಿ ಬಂದಿಲ್ಲ ಎಂದು ಅನಿಸುತ್ತದೆ. ಅಮೆರಿಕಾದಲ್ಲಿ ಭಾರತೀಯ ಮೂಲದ ವೈದ್ಯರುಗಳು ತುಂಬಾ ಜನ ಇದ್ದಾರೆ. ಪ್ರಖ್ಯಾತ ಲೇಖಕ ಸಿದ್ದಾರ್ಥ ಮುಖರ್ಜಿಯವರನ್ನೂ ಒಳಗೊಂಡು ಯಾರೂ ಇಂತಹ ವಸ್ತುವನ್ನು ಆಯ್ಕೆ ಮಾಡಿಕೊಂಡು ಕಾದಂಬರಿ ಬರೆದಿಲ್ಲ.

ಕಾದಂಬರಿಯ ವಸ್ತು ಮಾತ್ರವಲ್ಲ ಅದನ್ನು ನಿರೂಪಿಸುವುದರಲ್ಲಿಯೂ ಲೇಖಕರು ಗೆದ್ದಿದ್ದಾರೆ. ಮಿನೊಸೊಟ ಅಮೆರಿಕಾದ ದೇಶದ ಉತ್ತರ ಭಾಗಕ್ಕೆ ಬರುವ ಸಾವಿರ ಸರೋವರಗಳ ನಾಡು ಎಂದು ಕರೆಯಲ್ಪಡುವ ರಾಜ್ಯ. ಅಲ್ಲಿನ ಒಂದು ಅಮೋಕ ಎಂಬ ಚಿಕ್ಕ ಪಟ್ಟಣದಲ್ಲಿನ ಆಸ್ಪತ್ರೆಯಲ್ಲಿ ಸಂಭವಿಸುವ ಬೇರೆ ಬೇರೆ ಘಟನೆಗಳನ್ನು ಸೇರಿಸಿ ಆಧುನಿಕ ಜಗತ್ತಿನ ಬಹು ದೊಡ್ಡ ಸಮಸ್ಯೆಯನ್ನು ಕಾದಂಬರಿಯಾಗಿ ಅದ್ಭುತವಾಗಿ ಚಿತ್ರಿಸುವಲ್ಲಿ ಕೂಡ ಲೇಖಕರು ಯಶಸ್ವಿಯಾಗಿದ್ದಾರೆ.

ಅಮೆರಿಕಾಗೆ ಹೋಗುವ ಪ್ರತಿಯೊಬ್ಬ ವ್ಯಕ್ತಿಯ ಗುರಿಯೂ ದುಡ್ಡು ಮಾಡಬೇಕು, ಗ್ರೀನ್ ಕಾರ್ಡ್ ಪಡೆದು ಆ ದೇಶದ ಪೌರತ್ವ ಪಡೆಯಬೇಕು ಎಂಬುದಾಗಿರುತ್ತದೆ. ಜಗತ್ತಿನ ಅತ್ಯಂತ ಬಡದೇಶಗಳು, ಅಂತರೀಕ ಯುದ್ಧದಲ್ಲಿ ನಡುಗಿರುವ ದೇಶಗಳ ಪ್ರಜೆಗಳು ಅಮೆರಿಕಾ ದೇಶದ ವೀಸಾವನ್ನು ಸುಲಭವಾಗಿ ಪಡೆಯಬಹುದು. ಅಮೆರಿಕಾ ದೇಶ ಕನಸುಗಳ ದೇಶ ಎಂದು ಒಂದು ಕಡೆ ಕರೆಸಿಕೊಂಡರೆ ಇನ್ನೊಂದು ರೀತಿಯಲ್ಲಿ ಅಲ್ಲಿನ ಮೂಲನಿವಾಸಿಗಳಾದ ರೆಡ್ ಇಂಡಿಯನ್ಸ್ ಬಿಟ್ಟರೆ ಎಲ್ಲರೂ ಕೂಡ ವಲಸಿಗರೇ ಆಗಿರುತ್ತಾರೆ. ಅಂತಹ ವಲಸಿಗರ ಸಮಸ್ಯೆ ಇಂದು ಭಾರತವನ್ನು ಒಳಗೊಂಡು ಜಗತ್ತಿನ ಅಭಿವೃದ್ಧಿ ಹೊಂದಿದ ಪ್ರತಿ ರಾಷ್ಟ್ರದ ಸಮಸ್ಯೆಯೂ ಆಗಿರುತ್ತದೆ.

ಆ ಕಾರಣದಿಂದ ಈ ಕಾದಂಬರಿ ಕನ್ನಡಕ್ಕಿಂತ ಇಂಗ್ಲೀಷ್ ಭಾಷೆಯಲ್ಲಿ ಇನ್ನು ಹೆಚ್ಚು ಯಶಸ್ವಿಯಾಗುವ ಎಲ್ಲಾ ಲಕ್ಷಣಗಳನ್ನೂ ಒಳಗೊಂಡಿದೆ ಎಂದರೆ ತಪ್ಪಾಗಲಾರದು. ನೆನ್ನೆ ಈ ಕಾದಂಬರಿಯ ಇಂಗ್ಲೀಷ್ ಅನುವಾದ ಬಿಡುಗಡೆಯಾಗಿದೆ. ಈಗಾಗಲೇ ಕಾದಂಬರಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಈ ಕಾದಂಬರಿ ವಿಶ್ವವ್ಯಾಪ್ತಿಯಾಗಿ ಎಲ್ಲರಿಗೂ ತಲುಪಿ ಇನ್ನೂ ಹೆಚ್ಚು ಜನ ಮನ್ನಣೆ ಪಡೆಯಲಿ ಎಂದು ಡಾ. ಗುರುಪ್ರಸಾದ್ ಕಾಗಿನೆಯವರಿಗೆ ಅಭಿನಂದಿಸುತ್ತ ಶುಭ ಹಾರೈಸುತ್ತೇನೆ. ಮೂರು ವರ್ಷಗಳಿಂದ ಓದಲೇ ಬೇಕು ಎಂದು ನನ್ನ ಲಿಸ್ಟ್ ನಲ್ಲಿದ್ದ ಈ ಕಾದಂಬರಿಯನ್ನು ಕೊನೆಗೂ ಓದಿ ಮುಗಿಸಿದ್ದೇನೆ ಎಂಬ ತೃಪ್ತ ಭಾವ ನನ್ನದು, ಇನ್ನು ಓದಿರದಿದ್ದರೆ ಬೇಗ ಓದಿ ಮುಗಿಸಿ ನಿಮ್ಮದೂ ಕೂಡ ಆಗಲಿ.

ಪ್ರಸನ್ನ ಸಂತೇಕಡೂರು