Article

ಇದು ಹಿಂದೂ ಪುರಾಣದ ’ಭಾರತ ಒಂದು ಮರು ಶೋಧನೆ...’

ರವಿ ಹಂಜ್ ಅವರ ಇತ್ತೀಚಿನ ಕೃತಿ ‘ಭಾರತ ಒಂದು ಮರು ಶೋಧನೆ' ಕೃತಿಯನ್ನು ಇದೀಗ ತಾನೆ ಓದಿ ಮುಗಿಸಿದೆ. ಇಡೀ ಕೃತಿಯಲ್ಲಿ ಆರಂಭದ ಐದು ಪರ್ವಗಳು ಹೆಚ್ಚು ಮಾಹಿತಿಯನ್ನು ಓದುಗನಿಗೆ ನೀಡುವಲ್ಲಿ ಉಪಯುಕ್ತವಾಗಿವೆ. ಆ ಮಟ್ಟಿಗೆ ಅವರ ಬರವಣಿಗೆಯ ಯಶಸ್ಸಿದೆ ಎಂಬುದನ್ನು ಬಿಟ್ಟರೆ ಉಳಿದ ಐದು ಪರ್ವಗಳಂತೂ ಒನ್ ಸೈಡೆಡ್ ಆದ, ಅದೂ ಇವತ್ತಿನ ಬಲಪಂಥೀಯ ಅಲ್ಲ, ಕ್ರಿ.ಪೂ. ಐದು, ಆರನೇ ಶತಮಾನದ ಬಲಪಂಥೀಯ ವೈದಿಕ ತಾತ್ವಿಕರ ವಾದಿಗಳ ತರ್ಕ ಬದ್ಧವಾದದಂತೆ ರವಿ ಹಂಜ್ ಅವರ ಐದೂ ಪರ್ವಗಳಿವೆ.

ಭಾರತ ಎಂಬ ಹಿಂದೂ ಸಮಾಜದ ದೇಶದಲ್ಲಿ ಹತ್ತನೇ ಶತಮಾನದವರೆಗೂ ಹುಟ್ಟಿನಿಂದ ಬಂದ ಜಾತೀಯತೆಯಾಗಲಿ, ಸಾಮಾಜಿಕ ಅಸಮಾನತೆಯಾಗಲಿ ಇರಲೇ ಇಲ್ಲ. ಹತ್ತನೇ ಶತಮಾನದಲ್ಲಿ ಹೊರಗಿನಿಂದ ಬಂದ ಸಾಬರಿಂದಾಗಿ ಇವೆಲ್ಲ ಹಿಂದೂ ಸಮಾಜಕ್ಕೆ ಶಾಪವಾಗಿ, ರೋಗವಾಗಿ ಬಂದವು. ಇನ್ನು ಹಿಂದೂ ಸಮಾಜದಲ್ಲಿ 'ಅಸ್ಪೃಶ್ಯತೆ' ಎಂಬ ಅಸಹ್ಯ ಹುಟ್ಟಿಕೊಂಡದ್ದೆ 'ಬ್ರಿಟಿಷರಿಂದ' ಹಾಗಾಗಿ ಇಂಥ ಅನಿಷ್ಟಗಳಿಗೆ ಕಾರಣರಾದ ಸಾಬರು ಮತ್ತು ಬಿಳಿಯರ ವಿರುದ್ಧ ನಾವುಗಳು ಹೋರಾಡಬೇಕೇ ಹೊರತು ನಮ್ಮ ಅಣ್ತಮ್ಮಗಳಾದ ಬ್ರಾಹ್ಮಣರು, ಮೊದಲಾದ ಮೇಲ್ಜಾತಿಗಳ ವಿರುದ್ಧವಲ್ಲ.( ಇದಿಷ್ಟೂ 'ಭಾರತ ಒಂದು ಮರುಶೋಧನೆ' ಕೃತಿಯ ಹೊಟ್ಟು)

ಸಂಶೋಧನೆ ಎಂದರೆ ಇಂಟರ್ ನೆಟ್ ನಲ್ಲಿ ಒಂದು ನೂರೆಂಬತ್ತು ಪುಟಗಳಷ್ಟು ಮಾಹಿತಿಯನ್ನು ಗುಡ್ಡೆ ಹಾಕಿ, ಅದಕ್ಕೆ ಇಪ್ಪತ್ತ ನಾಲ್ಕು ಪುಟಗಳಷ್ಟು ಅಲ್ಲಿ, ಇಲ್ಲಿ ಕೇಳಿದ, ಓದಿದ, ಯಾರೋ ಹೇಳಿದ 'ಸತ್ಯ' ದ ಮುಖವಾಡ ಧರಿಸಿದ( ಪ್ರಚ್ಛನ್ನ ಬುದ್ಧ) ಈ ನೆಲಕ್ಕೆ ಒಪ್ಪಿತವಲ್ಲದ 'ಅಸತ್ಯ'ದ ಅಭಿಪ್ರಾಯಗಳನ್ನು ಜೋಡಿಸಿ, ಪುಸ್ತಕರೂಪದಲ್ಲಿ ಬರುವುದಲ್ಲ. ಏಕೆಂದರೆ, ರವಿ ಹಂಜ್ ಅವರ ಕೃತಿ ಇದೆಯಲ್ಲ ಅದು ಕನ್ನಡ ಸಂಶೋಧನಾ ಪರಂಪರೆಯ ಸ್ವರ್ಶವಿಲ್ಲದ, ಅದರಿಂದ 'ಹೊರತಾದ್ದು' ಎಂದು ಮೊದಲ ಓದಿಗೆ ಅನ್ನಿಸಿದೆ.

ಭಾರತ ಒಂದು ಮರು ಶೋಧನೆ' ಕೃತಿ ಕನ್ನಡ ಸಂಶೋಧನಾ ಪರಂಪರೆಗೆ ಒಳಪಡುವ ಕೃತಿಯಲ್ಲ ಎಂಬ ಅಂಶ ಮೇಲ್ನೋಟಕ್ಕೆ ಅನ್ನಿಸಲು ಕಾರಣ. ಕೃತಿಯ ಉದ್ದಕ್ಕೂ ಲೇಖಕರು ಎಲ್ಲೂ ತಾವು ಮಂಡಿಸುತ್ತಿರುವ ವಿಷಯಕ್ಕೆ ಸಮರ್ಥನೆಯಾಗಿ ಯಾವುದೇ ಗ್ರಂಥದ ಸಾಲುಗಳನ್ನು ಉದ್ಧರಿಸುವುದಿಲ್ಲ, ಅಷ್ಟೇ ಅಲ್ಲದೆ, ಆ ವಿಷಯದಲ್ಲೆ ತಾವು ಹೇಳುತ್ತಿರುವುದಷ್ಟೇ ಸತ್ಯ, ಅದರ ಹೊರತಾದ 'ಸತ್ಯಗಳು' ಇಲ್ಲ ಎಂಬಂಥ ದಾಟಿ ಕೃತಿಯುದ್ದಕ್ಕೂ ಇದೆ.

ಒಂದು ಸಂಶೋಧನ ಕೃತಿಯು ಓದುಗನಿಗೆ ಲೇಖಕನ 'ಸತ್ಯ' ವನ್ನು ದಾಟಿಸುವ ಕೆಲಸ ಮಾಡದೆ 'ಸತ್ಯಗಳನ್ನು' ಕಾಣಿಸುವಂತಿರಬೇಕು. ಮತ್ತು ತಾನು ತನ್ನ ಸಂಶೋಧನೆಗೆ ಆಕರವಾಗಿ ಬಳಸಿಕೊಂಡಿರುವ ಕೃತಿಗಳಲ್ಲಿ, ಈ ವಿಚಾರಕ್ಕೆ ಸಂಬಂಧಿಸಿದಂತೆ, ಇಂಥ ಪುಟ ಸಂಖ್ಯೆಯಲ್ಲಿ ಈ ವಿಷಯ ಮಂಡನೆಯ ಪರವಾಗಿ, ಇಲ್ಲವೆ ವಿರೋಧವಾಗಿ ವಿವರಗಳಿವೆ ಎಂಬುದನ್ನು ಲೇಖಕನಾದವನು ಉದ್ಧರಿಸಬೇಕು. ಇದು ಸಂಶೋಧನೆಯಲ್ಲಿ ಬೇಸಿಕ್ ಆದದ್ದು. ಆದರೆ ರವಿ ಹಂಜ್ ಅವರು ಕೃತಿಯ ಕೊನೆಯಲ್ಲಿ ಸುಮಾರು  43 ಕೃತಿಗಳ ಪಟ್ಟಿ ನೀಡಿದ್ದಾರೆ. ಆ ಕೃತಿಗಳಿಗೂ, ಲೇಖಕರ ಕೃತಿಗೂ ವಿಷಯದಲ್ಲಿ ಸಂಬಂಧವಿದೆ. ಆದರೆ ಲೇಖಕರು ಎಲ್ಲಾ ಕೃತಿಗಳನ್ನು ಆಮೂಲಾಗ್ರವಾಗಿ ಓದಿ, ಅಲ್ಲಿನ ವಿಷಯ ಸಾಮಾಗ್ರಿಗಳು ಸಂಶೋಧಕನೊಬ್ಬನೊಳಗೆ ಮಥಿಸಿ, ರೂಪುಗೊಂಡ ಸೃಜನಶೀಲ ಸಂಶೋಧನಾ ಕೃತಿಯಾಗಿ 'ಭಾರತ ಒಂದು ಮರು ಶೋಧನೆ' ಕಾಣುತ್ತಿಲ್ಲ.

ಅದರ ಬದಲು ಆ ಎಲ್ಲಾ ಕೃತಿಗಳ ಮೇಲೆ ಓದಿನ ತರ್ಕ ಮತ್ತು ಅಂತರ ಓದಿನ ಮಾಹಿತಿಯ ಒಟ್ಟು ಮೊತ್ತವನ್ನು ಕೂಡಿಸಿ ಕೊಟ್ಟ ಗಣಿತದ ಲೆಕ್ಕದಂತಿದೆ.

ಅತೀ ಸಂಕೀರ್ಣವಾದ ಭಾರತೀಯ ಸಮಾಜವನ್ನು, ಸಂಸ್ಕೃತಿಯನ್ನು, ಇಲ್ಲಿಂದ ಹೊರಹೋಗಿ, ಅನಿವಾಸಿಯಾಗಿ, ಶಿಕಾಗೋದ ಕೂಲಿಂಗ್ ಗ್ಲಾಸ್ ಹಾಕಿಕೊಂಡು ನೋಡಿದರೆ ಕಾಣೋದು ಹೀಗೆಯೇ. ಇಲ್ಲಿನ ಜಾತೀಯತೆಗೆ, ಇಲ್ಲಿನ ಅಸ್ಪೃಶ್ಯತೆಗೆ,ಇಲ್ಲಿನ ಸಾಮಾಜಿಕ ಅಸಮಾನತೆಗೆ ' ಮುಸ್ಲಿಮರು ಮತ್ತು ಬಿಳಿಯರೆ ಕಾರಣರಾಗಿ ಕಾಣುತ್ತಾರೆಯೇ ಹೊರತು. ಈ ಮಣ್ಣಿನ ವೈದಿಕ ಸಮಾಜ( ಹಿಂದೂ ಸಮಾಜ) ಕಾರಣರೇ ಅಲ್ಲ. ಇದೆಲ್ಲ ಇಲ್ಲಿನ ಅರಿವುಗೇಡಿ ಸಂಶೋಧಕರ ಅರಚಾಟ. ಅಲ್ಲವೆ ರವಿಯವರೆ?

*ನಿಮಗೆ ಗಾಂಧಿ, ಅಂಬೇಡ್ಕರ್ ಸರಿಯಾಗಿ ಅರ್ಥವಾಗದ ಹೊರತು ಭಾರತೀಯ ಸಮಾಜ ಎಂದೂ ಅರ್ಥವಾಗಲ್ಲ.

* ಇವತ್ತು ಭಾರತಿಯ ಸಮಾಜ ಹೊತ್ತಿ ಉರಿಯುತ್ತಿದೆ. ಧರ್ಮ, ಜಾತಿ, ಅಸಮಾನತೆಗಳ ಬೆಂಕಿ ಇಡೀ ಸಮಾಜದ ಬುಡವನ್ನು ಸುಡುತ್ತಿದೆ. ಇಂಥ ಹೊತ್ತಲ್ಲಿ ಸಂಶೋಧನಾ ಕೃತಿಗಳು ಬೆಂದ ಬುಡಕ್ಕೆ ನೀರಾಕುವ ಕೆಲಸ ಮಾಡಬೇಕೆ ಹೊರತು, ಬೆಂಕಿಹಚ್ಚುವ ಕೆಲಸವನ್ನಲ್ಲ‌.

ಭಾರತೀಯ ಸಂಸ್ಕೃತಿ ಆರಂಭದಿಂದಲೂ ಸಂಕರಗೊಂಡಿದೆ. ಆ ಕಾರಣದಿಂದಲೇ ಈ ಸಮಾಜದ ಸಾಮಾನ್ಯರಲ್ಲಿ ಇತರ ಜಾತಿ, ಧರ್ಮದ , ಬದುಕಿನ ಬಗೆಗೆ ಪ್ರೀತಿ, ಸಹಿಷ್ಣುತೆ ಇದೆ. ಅದನ್ನು ಅರ್ಥಮಾಡಿಕೊಂಡು, ಆ ಸಹಿಷ್ಣುತೆಯನ್ನು ಮರುಜೀವ ನೀಡುವ ಕೆಲಸವನ್ನು ಬರಹಗಾರ, ಸಂಶೋಧಕ ಮಾಡಬೇಕಿದೆ.

ಪುಸ್ತಕದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ಎಚ್.ಎಸ್. ರೇಣುಕಾರಾಧ್ಯ