Article

ಜೀವಂತಿಕೆಯ ಜಗತ್ತು

ನನ್ನ ತಾಯಿಯ ತಂದೆ ಅಂದರೆ ಅಜ್ಜ ಒಬ್ಬ ಅದ್ಭುತ ವಿದೂಷಕ. ಏನೇ ಕಂಡರೂ ಮಾತಿನ ಚಟಾಕಿ ಹಾರಿಸಿ ನಗಿಸುವ ಬ್ಯಾರಿ ಉಪಮೆಗಳಿಂದ ಹೆಸರಾದವರು. ಧುತ್ತೆಂದು ಅವರ ನಾಲಗೆ ತುದಿಯಲ್ಲಿ ತಯ್ಯಾರಾಗಿರುತ್ತಿದ್ದ ಉಪಮೆಗಳಿಗೆ, ಅಡ್ಡ‌ ಮಾತುಗಳಿಗೆ ಜನ ಮನಸೋತಿದ್ದರು. ನಗಲಿಕ್ಕಾಗಿಯೇ, ಅವರ ಮಾತನ್ನು ಕಾಯುತ್ತಿದ್ದ ಅವರೋರಗೆಯ ಸುಮಾರು ಗೆಳೆಯರದ್ದರಂತೆ. ಉದಾಹರಣೆಗೆ ಹೇಳಬೇಕೆಂದರೆ ಒಮ್ಮೆ ಅವರು ರಸ್ತೆಯಲ್ಲಿ ನಡೆದು ಬರುತ್ತಿರಬೇಕಾದರೆ ಮನೆಯೊಂದರ ಕಾಂಪೌಂಡ್ ದಾಟಿ ಬಾಳೆ ಗೊನೆಯೆಂದು ಹೊರಗೆ ಇಣುಕುತ್ತಿತ್ತು. ಕಂಡ ತಕ್ಷಣವೇ ಒಂದು ನಿಮಿಷವೂ ಯೋಚಿಸದೆ "ಇದ್ಯಾರೊಬ್ಬ ಹೊಸಬ ಬಸ್ಸಿಗೆ ಕೈ ತೋರಿಸುತ್ತಿರುವುದು" ಅಂದರಂತೆ. ಅಷ್ಟೊತ್ತಿಗೆ ಗುಂಪಿನಲ್ಲಿ ಜೋರು ನಗು. ತನ್ನ ಜೀವಿತ ಕಾಲವಧಿಯಲ್ಲಿ ಮಾತಿನಿಂದಲೇ ರಮಿಸುತ್ತಿದ್ದ ಆ ಆಲದಮರವು ಸುಮಾರು ಐದು ವರ್ಷಗಳ ಹಿಂದೆ ಉರುಳಿತು. ಅವರು ಹೊರಟರೂ ಅವರ ನೆನಪು, ಹಾಸ್ಯ ಪ್ರಜ್ಞೆ ಇಂದಿಗೂ ಜೀವಂತ. ಇಷ್ಟುದ್ದದ ಅವರ ನೆನಪು ಇಲ್ಲಿ ಹೇಳಿದ್ದೇನೆಂದರೆ ಈ ಪುಸ್ತಕ "ಹಿತ್ತಲ ಜಗತ್ತು" ನನಗೆ ನನ್ನ ಅಜ್ಜನನ್ನು ನೆನಪಿಗೆ ಹಚ್ಚಿದ್ದಕ್ಕೆ. ಮಾತುಮಾತಿಗೆ ಕಂಕುಳಕ್ಕೆ ಕೈ ಹಾಕಿ ಕಚಗುಳಿಡುವ ಪ್ರೊ. ರಹಮತ್ ತರೀಕೆರೆಯವರು ಇವರಿಂದ ಭಿನ್ನರಲ್ಲ. ಥೇಟ್ ನನ್ನಜ್ಜನಂತೆಯೇ ಬರೆಹದಲ್ಲಿ ನಗಿಸಿ ಬಿಡುವ ಕಲಾವಿದ. ಓದುತ್ತಾ ಹೋದಂತೆ ನಾನು ಅನಿಸಿಕೊಂಡಿದ್ದಿದೆ, ಬಹುಶಃ ಇವರು ಯುನಿವರ್ಸಿಟಿಯಲ್ಲಿ ಪ್ರೊಫೆಸ್ಸರ್ ಆಗಿರುವುದು ಹಾಸ್ಯ ಪಾಠ ಮಾಡಲಿಕ್ಕಿರಬಹುದೇ ಎಂದು. ಅಂಥವರ ಶಿಷ್ಯತ್ವ ಪಡೆಯುವುದಕ್ಕೂ ಭಾಗ್ಯಬೇಕಲ್ಲವೇ. ಅಂತೂ ಯಾವ ಗಂಭೀರವದನ ಶಿಷ್ಯನೂ ಇವರ ತರಗತಿಯಲ್ಲಿ ನಗದಿರನು ಎಂದುಕೊಳ್ಳುತ್ತೇನೆ.  ಇಲ್ಲಿರುವ ಎಲ್ಲಾ ಪ್ರಬಂಧಗಳು ಜ್ಞಾನ ಬಂಡಾರ. ಎಲ್ಲೂ ಮಾಹಿತಿಗಳ ಹೇರಿಕೆಯಿಲ್ಲ, ಟೊಳ್ಳಾಗಿ ವಿಷಯ ವಿಹೀನವಾಗಿ ಸೊರಗುವುದೂ ಇಲ್ಲ. ಎಲ್ಲವನ್ನು ಸಾರವಾಗಿ ತುಂಬುವ ಅದ್ಭುತ ಸಿದ್ಧಿ ಲೇಖಕರದ್ದು.

ಬಹಳ ಬೇಸರದಿಂದಿದ್ದರೆ ನಾನು ಕಾಮಿಡಿ ವಿಡಿಯೋಗಳನ್ನು ನೋಡುವುದಿದೆ, ಬಹುಶಃ ಅಂಥಹ ಸಂಧರ್ಭಗಳಲ್ಲಿ ಹಾಸ್ಯ ನೋಡುತ್ತಾ ನಕ್ಕು ನೋವುಗಳನ್ನು ಮರೆಯುವುದನ್ನು ಕಲಿತಿದ್ದೇನೆ. ಇಲ್ಲಿ ಭಿನ್ನ ಅನುಭವ,ಅದರ ಸಾಹಿತ್ಯಿಕ ರೂಪಾಂತರ. ಇಲ್ಲಿ ಓದುತ್ತಾ ಹೋದರೆ ಅಕ್ಷರಗಳು ನೋವು ಹೀರಬಲ್ಲದು, ಸಾಹಿತ್ಯವೂ ಲಲಿತವಾಗಬಹುದು. ಒಂದಷ್ಟು ನುಡಿಗಟ್ಟುಗಳು, ವಿವರಣಾತ್ಮಕ ಮತ್ತು ಅಧ್ಯಯನಾತ್ಮಕ ಮಾಹಿತಿಗಳು, ಹೊಸಪದಗಳು, ವಾಕ್ಯವೈವಿಧ್ಯ ಪ್ರಯೋಗಗಳಿಂದ ಹಾಸು ಹೊಕ್ಕಾಗಿದೆ. ಹಿತ್ತಲ ಜಗತ್ತು ಪ್ರಬಂಧದಲ್ಲಿ ಲೇಖಕರ ವರಸೆ ಪ್ರಕೃತಿಯ ಕಡೆಗೆ ಹೊರಳುತ್ತದೆ‌. ಒಂದೊಮ್ಮೆ ಪರಿಸರಪ್ರೇಮಿ ತೇಜಸ್ವಿಯಂತೆ ಸೋಗು ಹಾಕುತ್ತಾರೆ. ಅದೆಷ್ಟು ಪಕ್ಷಿಗಳ ಬದುಕನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಬರೆಯುತ್ತಾರೆ. ತಮಗೂ ಪ್ರಾಣಿ ಪ್ರಪಂಚದ ಬಗ್ಗೆ ವಿಪರೀತ ಕುತೂಹಲವಿದೆಯೆನ್ನುವಷ್ಟು ಬೆರಗು ಹುಟ್ಟಿಸುತ್ತಾರೆ. ನಡುನಡುವೆ ಮಡದಿಗೆ ಪ್ರೀತಿಯಿಂದ ಹೆದರುತ್ತಾರೆನಿಸುತ್ತದೆ. ಈ ಜಗಳಗಳು ಅವರ Humor sense ಗೆ ಇನ್ನಷ್ಟು ಇಂಬು ಕೊಡುತ್ತದೆ. ಬಹುಶಃ ಹೆಂಡತಿಯಿಂದ ಬೈಸಿಕೊಳ್ಳುವುದರಿಂದ ರೋಸಿ ಹೋಗದೆ ಅಸ್ವಾದಿಸಿ ಬದುಕುವ ಅಪರೂಪದ ಮನುಷ್ಯರಾಗಿ ಕಾಣುತ್ತಾರೆ. ಇದೇ ಥರದ್ದೇ ಬರಹ, ಎಂ.ಆರ್ ಕಮಲರವರ 'ಕಾಳನಾಮ ಚರಿತೆ'ಯಲ್ಲಿ ಮನೆಯವರಿಂದ ಸಣ್ಣ ಜಗಳಗಳ ಪ್ರಸ್ತಾಪವೂ ಕಂಡಿದ್ದಿದೆ.

ಸಾರು ಸಹಸ್ರಾರು ಎಂಬ ಪ್ರಬಂಧ ನನ್ನ ಪಾಲಿಗೆ ಆಲ್ ಟೈಂ ಫೇವರಿಟ್. ಇದಕ್ಕಾಗಿ ಇಲ್ಲಿ ನನ್ನ ಅಜ್ಜನ ನೆನಪಾದದ್ದು. ಒಮ್ಮೆ ಅಜ್ಜ ಸಣ್ಣದಿರುವಾಗ ಯಾರೋ ಸಂಬಂಧಿಕರ ಮನೆಗೆ ಹೋದರಂತೆ‌. ಅಜ್ಜನಿಗೆ ಏಳು ಜನ ಸಹೋದರ ಸಹೋದರಿಯರು. ಸಂಬಂಧಿಕರ ಮನೆಯಲ್ಲಿ ಊಟಕ್ಕೆ ಕುಳಿತಾಗ ಮೀನಿನ ಗಸಿಯನ್ನು ಬಡಿಸಿದ್ದರಂತೆ. ಅದು ಎಷ್ಟು ಖಾರವೆಂದರೆ ಬಾಯಿಗಿಟ್ಟ ಮರುಕ್ಷಣ ಕಣ್ಣಲ್ಲಿ ನೀರು ಬುಳು ಬುಳು ಹರಿಯಲು ಶುರುವಾಯಿತಂತೆ .ಮಾತಿನ ಮಧ್ಯೆ ಕ್ವಚಿತ್ತಾಗಿ ಆ ಮನೆಯೊಡತಿ "ನೀವೆಷ್ಟು ಮಕ್ಕಳು" ಅಂಥ ಕೇಳಿದ್ದೇ ತಡ. ತಟ್ಟನೆ ಹತ್ತೇ ವರ್ಷವಿದ್ದ ನನ್ನಜ್ಜ "ಇದು ತಿಂದು ಮುಗಿಯುವರೆಗೂ ಜೀವಂತವಿದ್ದರೆ ಏಳು ಇಲ್ಲದಿದ್ದರೆ ಆರೇ" ಎಂದು ಗಸಿಯ ಖಾರದ ಪರಮಾವಧಿಯನ್ನು ತಿಳಿಸಿದರಂತೆ. ಇದನ್ನು ಕೇಳಿದ ಮನೆಯೊಡತಿ ಬಿದ್ದು ಬಿದ್ದು ನಕ್ಕರಂತೆ. ಲೇಖಕರೂ ಹಾಗೆಯೇ ಹಾಸ್ಯವನ್ನು ಉಣಬಡಿಸುತ್ತಾ, ಸಾರುಗಳ ಬಗ್ಗೆ ಡಾಕ್ಟರೇಟ್ ಪಡೆದವರಂತೆ ರುಚಿ, ಹೆಸರುಗಳನ್ನು ಬಸ್ ಕಂಡೆಕ್ಟರ್ ಊರಿನ ಹೆಸರು ಉರು ಹೊಡೆಯುವಂತೆ ಹೇಳುವುದು ಓದಿದರೆ ಬೆರಗು ಹುಟ್ಟಿಸದಿರದು. ಬಹುಶಃ ಮಡದಿಯ ಶೋಷಣೆಯಿಂದಲೇ ಅವರು ಅಡುಗೆಯನ್ನೂ ಕಲಿತುಬಿಟ್ಟರೋ, ಏನೋ.

ಸೈಕಲ್ ಪ್ರಬಂಧ ತುಂಬಾ ಬಾಲ್ಯದ ಅನುಭವಗಳನ್ನು ನೆನಪಿಸುತ್ತದೆ. ನಾನೊಮ್ಮೆ ಸೈಕಲ್ ಕೊಂಡು ಹೋಗಿ ರಸ್ತೆಯ ಬದಿಯ ಗುಳಿಗೆ ಬಿದ್ದಿದ್ದೆ. ಮರುಕ್ಷಣ ರಸ್ತೆಯಲ್ಲಿ ಊರ ಬಸ್ಸು ಬಂದ ಕಾರಣ, ಬಿದ್ದಲ್ಲಿಂದೇಳದೆ ಅದೇ ಕಸದ ರಾಶಿಯಲ್ಲೇ ಬಸ್ಸು ಹೋಗುವವರೆಗೂ ಅಂಗಾತ ಮಲಗಿ ಕಾದು ಎದ್ದು ಹೊರಟು ಬಂದಿದ್ದೆ. 

ಲೇಖಕರು ಪ್ರಬಂಧದುದ್ದಕ್ಕೂ ಹಳ್ಳಿಸೊಗಡು, ಬಡವರ ಶ್ರೀಮಂತಿಕ, ಹಳೆಯ ಕಾಲದ ಚಿತ್ರಣಗಳು ಕಣ್ಣಿಗೆ ಕಟ್ಟುತ್ತಾ ಹೋಗುತ್ತಾರೆ.  ಸೈಕಲ್ ಹಿಂಬದಿ ನಮ್ಮನ್ನು ಕುಳ್ಳಿರಿಸಿ ಇಡೀ ಹಂಪಿ ಊರೆಲ್ಲಾ ತೋರಿಸುತ್ತಾರೆ. ಬಾಷಣ ವ್ಯಸನವೆಂಬ ಪ್ರಬಂಧ ಓದಿದವನು ಸ್ವತಃ  ಬಾಷಣಗಾರನಾಗಿದ್ದರೆ ಉತ್ತಮ. ಆ  ಕಹಿಸಿಹಿ ಅನುಭವಗಳು ಕಟ್ಟಿಕೊಡುವಾಗ, ಓದುಗರಿಗೆ ನಗು ತಡೆಯಲಾಗದು. ಒಮ್ಮೆ ಏನಾಯಿತೆಂದರೆ, ನಮ್ಮ ಕಾಲೇಜಿನ ಅತಿ ವಾಚಾಳಿ ಪ್ರಾಂಶುಪಾಲರು ವಾರ್ಷಿಕೋತ್ಸವ ದಿನ ಬಾಷಣಕ್ಕೆ ನಿಂತರು. ಅರ್ಧ ಗಂಟೆಯಷ್ಟು ಕಿವಿ ಕೊರೆದರು. ಮಕ್ಕಳ ಪಿತ್ತ ನೆತ್ತಿಗೇರಿ "ಒಮ್ಮೆ ನಿಲ್ಲಿಸಪ್ಪಾ" ಎಂದು  ಜೋರಾಗಿ ಗಲಾಟೆಯೆಬ್ಬಿಸತೊಡಗಿದರು. ಅದಕ್ಕೂ ಸೊಪ್ಪು ಹಾಕದೆ ಅವರ ಬಾಷಣ ಮುಂದುವರಿದಾಗ, ತುಳುವಿನಲ್ಲಿ "ಆವಾವಾವು( ಆಗಲಾಗಲಿ)" ಎಂದು ಜೋರಾಗಿ ಕೂಗಿಕೊಳ್ಳತೊಡಗಿದರು. ಕೋಪಗೊಂಡ ಪ್ರಾಂಶುಪಾಲರು ಪೀಠ ಬಿಟ್ಟು ಕೊಡದೆ ಭಾಷಣ ಮುಂದುವರಿಸಿದರು‌‌. ಚಿತ್ರಹಿಂಸೆ ಸಹಿಸದ ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿಗಳ ಗಂಟಲೂ ಬತ್ತಿತ್ತು. ಇನ್ನು ಕೆಲವರು ನಿದ್ದೆಗೆ ಶರಣಾದರು. ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭಗೊಳ್ಳಲು ತಡವಾಗಿದ್ದು ಅವರು ನಿಲ್ಲಿಸದೆ ಭಾಷಣ ಮಧ್ಯೆಯೇ ವಿದ್ಯಾರ್ಥಿಗಳಿಗೆ ಗದರಿದ್ದು ನೆನೆದುಕೊಂಡರೆ ಹೊಟ್ಟೆ ಹುಣ್ಣು. ಅಬ್ಬಾ! ಅಂದೇ ಪ್ರತಿಜ್ಞೆ ಸ್ವೀಕರಿಸಿದೆ "ಇನ್ನೂ ಎಷ್ಟೇ ಕಷ್ಟವಾದರೂ ಸರಿ ಈ ಅಧ್ಯಾಪಕನಾಗಿ ಹುಟ್ಟದ್ದು ಪುಣ್ಯವೆಂದು ಆ ದಿನವೇ ಈ ಕೆಲಸವೇ ಬೇಡವೆಂದು" ಮನದಲ್ಲೇ ಶರಾ ಬರೆದೆ. 

ಈ ಪುಸ್ತಕದ  ಹದಿನಾಲ್ಕು ಪ್ರಬಂಧಗಳೂ ಒಂದಕ್ಕೊಂದು ಮಿಗಿಲು. ಬೀದಿ ಹಕ್ಕಿಗಳ ಕಥೆ, ಹಂಪಿಯ ಹಾದಿ ಮತ್ತು ಜನರ ಅನಾಗರಿಕಥೆ, ಪಾನ ಪ್ರಸಂಗ ಎಲ್ಲವೂ ಕಾಡುವಂಥದ್ದು.

ಪುಸ್ತಕದ ತುಂಬೆಲ್ಲಾ ಒಂದಿಷ್ಟು ಹಾಸ್ಯ, ಒಕ್ಕಣೆಗಳು, ಗಾದೆ, ನುಡಿಗಟ್ಟುಗಳು ಕನ್ನಡ ಸಾಹಿತ್ಯದ ಐಶ್ವರ್ಯ ತುಂಬಿ ತುಳುಕುತ್ತದೆ. ಬರೆದರೆ ಹೀಗೆಯೇ ಬರೆಯಬೇಕೆಂದೂ, ಇದೇ ಶೈಲಿಯನ್ನು ಸ್ವೀಕರಿಸಬೇಕೆನಿಸುವ ನಕಲೊಂದು ಮೆದುಳಲ್ಲಿ ನಮಗರಿವಿಲ್ಲದೆ ಅಚ್ಚಾಗುತ್ತದೆ. ಒಂದು ಅಪೂರ್ವ ಪುಸ್ತಕವೊಂದು ಕೊಡ ಮಾಡಿದ್ದಕ್ಕೆ ಲೇಖಕರಿಗೂ, ಪ್ರಕಾಶಕರಿಗೂ ಋಣಿ. ಈ ಪ್ರತಿಯನ್ನು ಯಾರಿಗೂ ಕೊಡದೆ, ಕಳೆದುಕೊಳ್ಳಲೂ ಇಷ್ಟಪಡದೆ ಜೋಪಾನವಾಗಿಟ್ಟುಕೊಳ್ಳಲಿದ್ದೇನೆ. ಒಂದೊಮ್ಮೆ ಏನೂ ಹೊಳೆಯದೆ ಖಾಲಿ ಕುಳಿತಾಗಲೆಲ್ಲಾ ಕೈ ಹಿಡಿದು ಬರೆಸಲು ಪ್ರಚೋದಿಸುವ ಬ್ರಹ್ಮಾಸ್ತ್ರವಾಗಿ ನನ್ನ ಬತ್ತಳಿಕೆಯಲ್ಲೇ ಇದು ಭಧ್ರವಾಗಿರುತ್ತದೆಂದು ನಂಬುತ್ತೇನೆ. ಓದಿ ಮುಗಿಸಿದ ಕೂಡಲೇ ಲೇಖಕರ ಇನ್ನೆರಡು ಕೃತಿಗಳಿಗೆ ಬುಲಾವ್ ಕೊಟ್ಟಿದ್ದೇನೆ.

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ- https://www.bookbrahma.com/book/hittala-jagattu

ಮುನವ್ವರ್ ಜೋಗಿಬೆಟ್ಟು