Article

’ಕಾಯಕಾವ್ಯ’ದ ವಿಶಿಷ್ಟ ಧ್ವನಿ

“ಪಟ್ಟಪಾಡೆಲ್ಲವೂ ಹುಟ್ಟು ಹಾಡಾಗುತ” ಅಂತ ಕವಿ ಬೇಂದ್ರೆಯವರು ಹೇಳಿರುವ ಮಾದರಿಯ ಕವಿತೆಗಳನ್ನು 'ಕಾಯಕಾವ್ಯ'ಸಂಕಲನದಲ್ಲಿ ತುಂಬಿಕೊಟ್ಟಿರುವ ಕಾವ್ಯಾಯಿನಿ ಕುಂಜಿಬೆಟ್ಟು ಅವರ ಕಾವ್ಯಸೃಷ್ಟಿಯ ಬಗೆಗೆ ಬೆರಗುಗೊಂಡು ಮುಂದಿನ ಮಾತುಗಳನ್ನು ಬರೆಯುತ್ತಿದ್ದೇನೆ. ಕೆಲವು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿಗಳಿಗೆ ಸ್ವೀಕೃತವಾಗಿದ್ದ ವಿವಿಧ ಸಾಹಿತ್ಯ ಪ್ರಕಾರಗಳ ಕೃತಿಗಳನ್ನು ಉಳಿದ ಸದಸ್ಯರೊಂದಿಗೆ ಪರಿಶೀಲಿಸುತ್ತಿದ್ದಾಗ ಕಾದಂಬರಿ ವಿಭಾಗದಲ್ಲಿ ಒಳ್ಳೆಯ ಕೃತಿಗಳು ಎನ್ನಬಹುದಾಗಿದ್ದ ನಾಲ್ಕು ಅಂತಿಮ ಹಂತಕ್ಕೆ ಬಂದಿದ್ದವು. ಒಂದು ಕಾದಂಬರಿಗೆ ಮಾತ್ರ ಪ್ರಶಸ್ತಿ ಕೊಡಬೇಕಾಗಿದ್ದುದರಿಂದ ಪರಿಶೀಲಕರು ವಿವಿಧ ನೆಲೆಗಳಿಂದ ಮೌಲ್ಯಮಾಪನ ಮಾಡಿ ಪ್ರಶಸ್ತಿಗೆ ಪರಿಗಣಿಸಿದ್ದು 'ತೊಗಲು ಗೊಂಬೆ' ಎನ್ನುವ ಕಾದಂಬರಿಯನ್ನು. ಅದರ ಕರ್ತೃ ಕಾತ್ಯಾಯಿನಿ ಕುಂಜಿಬೆಟ್ಟು. ಅಲ್ಲಿ ಮೊದಲ ಬಾರಿಗೆ ನನ್ನ ಗಮನಕ್ಕೆ ಬಂದ ಈ ಹೆಸರು ನಂತರದಲ್ಲಿ ಮತ್ತೆಮತ್ತೆ ಸಾಹಿತ್ಯ ಲೋಕದಲ್ಲಿ ಕಾಣಿಸಿಕೊಳ್ಳತೊಡಗಿತು. ಮುಂದೆ ಕಾತ್ಯಾಯಿನಿ ಸಾಹಿತ್ಯದ ಇನ್ನಿತರ ಪ್ರಕಾರಗಳತ್ತ ಹೊರಳಿದರು. ವಿಮರ್ಶೆ, ನಾಟಕ, ಕವಿತೆಗಳನ್ನು ಬರೆದರು. ಇಲ್ಲಿಯವರೆಗೆ ಅವರು ಪ್ರಕಟಿಸಿರುವ 20 ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಸಂಘ ಸಂಸ್ಥೆ ಪ್ರತಿಷ್ಠಾನಗಳ ಪ್ರತಿಷ್ಠಿತ ಎನ್ನಬಹುದಾದ ಪ್ರಶಸ್ತಿ- ಬಹುಮಾನಗಳು ಬಂದಿವೆ. ಕಾತ್ಯಾಯಿನಿ ಬಾಲ್ಯದಲ್ಲೇ ಸಾಹಿತ್ಯ ಮತ್ತು ಸಂಗೀತ ಎರಡರತ್ತಲೂ ಒಲವು ಮೂಡಿಸಿಕೊಂಡು ಎಂಥ ಸಂದರ್ಭ ಬಂದಾಗಲೂ ಆಸಕ್ತಿ ಕಳೆದುಕೊಳ್ಳದೆ, ಅವುಗಳಲ್ಲೇ ಏನಾದರೂ ಮಾಡಬೇಕು ಎನ್ನುವ ಗಟ್ಟಿಯಾದ ಹಂಬಲವಿರಿಸಿಕೊಂಡ ಪರಿಣಾಮವಾಗಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ, ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದಲ್ಲಿ `ವಿಶಾರದ' ಪದವಿಯನ್ನೂ ಪಡೆದುಕೊಳ್ಳಲು ಸಾಧ್ಯವಾಯಿತು. ಸಾಹಿತ್ಯದ ಒಡನಾಟದಿಂದ ಸಂಗೀತವೂ, ಸಂಗೀತದ ಸಹವಾಸದಿಂದ ಸಾಹಿತ್ಯವೂ ರಸಾತ್ಮಕವಾಗುತ್ತದೆ, ಆಸ್ವಾದನೀಯವಾಗುತ್ತದೆ ಮಾತ್ರವಲ್ಲ, ಪ್ರಬುದ್ಧವೂ ಆಗುತ್ತದೆ ಎನ್ನುವುದನ್ನು ಸಾಬೀತುಪಡಿಸಿರುವ ಕೆಲವಾದರೂ ಉದಾಹರಣೆಗಳು ಕನ್ನಡದಲ್ಲಿವೆ. ಆ ಸಾಲಿನಲ್ಲಿ ದಾಖಲಾಗುವ ಎಲ್ಲ ಅರ್ಹತೆಗಳಿರುವ ಕೃತಿ `ಕಾಯಕಾವ್ಯ’ ಎನ್ನುವುದು ನನ್ನ ಖಚಿತ ಅಭಿಪ್ರಾಯ.
ನೂರೊಂದು ಕವಿತೆಗಳನ್ನು ಒಡಲಲ್ಲಿ ತುಂಬಿಕೊಂಡಿರುವ `ಕಾಯಕಾವ್ಯ’ದ ಆರಂಭದಲ್ಲಿ 10 ಪುಟಗಳಷ್ಟು ದೀರ್ಘವಾದ ಅರಿಕೆಯಲ್ಲಿ ಗಮನಿಸಲೇಬೇಕಾದ ಕೆಲವು ಮುಖ್ಯ ಸಂಗತಿಗಳನ್ನು ಕಾತ್ಯಾಯಿನಿ ಪ್ರಸ್ತಾಪಿಸಿದ್ದಾರೆ. ಕಾವ್ಯವೆಂದರೆ ಅವರ ದೃಷ್ಟಿಯಲ್ಲಿ ಏನು? ಜಾಗತಿಕ ಕಾವ್ಯದ ಹಿನ್ನೆಲೆಯಲ್ಲಿ ಕನ್ನಡ ಕಾವ್ಯದ ಸ್ವರೂಪ, ವೈಶಿಷ್ಟ್ಯ, ಮಹತ್ವವೇನು? ಬಹುಕಾಲ ಏಕತಾನತೆಯಲ್ಲಿದ್ದ ಕಾವ್ಯ ಆಧುನಿಕ ಸಂದರ್ಭದಲ್ಲಿ ನವೋದಯದಿಂದ ಬಂಡಾಯದವರೆಗೆ ಕ್ಷಿಪ್ರ ಗತಿಯಲ್ಲಿ ಹೇಗೆ ರೂಪಧಾರಣೆ ಮಾಡುತ್ತ ಹೋಯಿತು? - ಇವುಗಳಿಗೆ ವಿಸ್ತಾರವಾದ ವಿವರಣೆ ಕೊಟ್ಟಿರುವುದಲ್ಲದೆ, ಬಳ್ಳಿಯೊಡಲ ಕುಸುಮವಾಗಿ ಅವರಲ್ಲಿ ಕಾವ್ಯ ಅರಳಿದ ಬಗೆಯನ್ನೂ ಹೇಳಿಕೊಂಡಿದ್ದಾರೆ. ಅರಿಕೆಯಲ್ಲಿರುವ ಮಾತುಗಳನ್ನು ಸಾಹಿತ್ಯ ಕೃಷಿಯ ಜೊತೆಗಿರಿಸಿ ನೋಡಿದಾಗ ಕಾತ್ಯಾಯಿನಿ ಬದುಕಿನ ಅತ್ಯಂತ ಸಂಕೀರ್ಣ ಅನುಭವಗಳನ್ನೂ ಅದರಿಂದ ಹೊಮ್ಮಿದ ಭಾವತರಂಗಗಳನ್ನೂ ಇದು ನಿಜವಾದ ಕವಿತೆಯೇ ಅನ್ನಿಸುವಷ್ಟು ಸೊಗಸಾಗಿ, ಸಮರ್ಪಕವಾಗಿ ಅಭಿವ್ಯಕ್ತಿಸಬಲ್ಲರೆಂಬುದು ಖಾತ್ರಿಯಾಗುತ್ತದೆ. ಸಂಕಲನಕ್ಕೆ ಮುನ್ನುಡಿಯ ಕನ್ನಡಿಯನ್ನು ಹಿಡಿದಿರುವ ಎಸ್.ಆರ್. ವಿಜಯಶಂಕರ ಕೂಡ, `ಅಕ್ಕ ಕೇಳವ್ವ’ ಅಂಕಣದಿಂದ ಪರೋಕ್ಷವಾಗಿ ಪರಿಚಿತರಿದ್ದ ಕಾತ್ಯಾಯಿನಿ, ವೃತ್ತಿಯಿಂದ ಕನ್ನಡ ಅಧ್ಯಾಪಕಿಯಾಗಿದ್ದರೂ ಸಭೆಗಳಲ್ಲಿ ಚೆನ್ನಾಗಿ ಹಾಡುತ್ತಿದ್ದ ಬಹುಮುಖ ಪ್ರತಿಭಾವಂತೆ ಎಂದು ಗುರುತಿಸಿದ್ದಾರೆ. ಯಾರಾದರೂ ಕಾವ್ಯದ ಕಡೆಗೆ ಯಾಕೆ ಆಕರ್ಷಿತರಾಗುತ್ತಾರೆ ಎನ್ನುವುದಕ್ಕೆ ಒಬ್ಬೊಬ್ಬರ ದೃಷ್ಟಿಯಲ್ಲೂ ಭಿನ್ನವಾದ ಉತ್ತರಗಳಿರುವುದು ಸಾಧ್ಯ. ಕವಿಗಳು, ಕಾವ್ಯಾಸಕ್ತರು, ಕಾವ್ಯದ ಪ್ರೀತಿಯ ಓದುಗರು ತಮ್ಮೊಳಗನ್ನು ಬಗೆದುಕೊಂಡು ಅನಿಸಿಕೆಗಳನ್ನು ದಾಖಲಿಸಲು ಸಾಧ್ಯವಾದರೆ ಕಾವ್ಯದ ನಿಗೂಢತೆಯನ್ನು ಒಡೆದು ಒಂದು ಒಟ್ಟಾರೆಯಾದ ಗ್ರಹಿಕೆಯನ್ನು ಮಂಡಿಸಲು ಸಾಧ್ಯವಾಗಬಹುದೇನೋ? ಕನ್ನಡದ ಪ್ರಮುಖ ಕವಿಗಳು ಕಾವ್ಯ ಸೃಷ್ಟಿಯ ಬೆರಗನ್ನು ಕವಿತೆಯ ರೂಪದಲ್ಲೋ, ಗದ್ಯದಲ್ಲೋ, ಮಾತಿನಲ್ಲೋ ಹೊರಹಾಕುತ್ತ ಬಂದಿದ್ದರೂ ಅದು ಒಂದನ್ನು ಮತ್ತೊಂದು ಹೋಲದಂಥ ಕೌತುಕವೇ ಆಗಿ ಈವರೆಗೂ ಉಳಿದುಕೊಂಡು ಬಂದಿದೆ. ಕಾತ್ಯಾಯಿನಿಯವರ ಕವಿತೆಗಳ ಚರ್ಚೆಗೆ ಹೋಗುವ ಮುನ್ನ ಕಾವ್ಯದತ್ತ ಅವರ ಒಲವು ಮೂಡಿದ ಬಗೆ, ತಮ್ಮ ಕಾವ್ಯಸೃಷ್ಟಿ ಕುರಿತಂತೆ ತಮಗೇ ಅನಿಸಿದ್ದು, ಕಾವ್ಯಸೃಷ್ಟಿಯ ಬಗೆಗಿನ ಅಭಿಪ್ರಾಯ ಇತ್ಯಾದಿಗಳನ್ನು ಗಮನಿಸುವುದು ಸೂಕ್ತ. ಇದರ ಜೊತೆಗೆ ಕಾತ್ಯಾಯಿನಿ ಸಂಗೀತವನ್ನು ಹೆಚ್ಚಿನ ಮಟ್ಟದಲ್ಲೇ ಕಲಿತವರಾದ್ದರಿಂದ ಸಾಹಿತ್ಯ, ಸಂಗೀತಗಳಿಗಿರುವ ಬಾಂಧವ್ಯ ಕುರಿತಂತೆ ಅವರು ಪಡಿಮಿಡಿದ ನುಡಿಗಳನ್ನು ಗಮನಿಸಬಹುದು. ಹಾಕಿದ ಪಾತ್ರೆಯ ಬಣ್ಣ ಮತ್ತು ರೂಪಗಳನ್ನು ಪಡೆದುಕೊಳ್ಳುವ ನೀರಿನಂತೆ ವಸ್ತು, ಭಾಷೆ, ರೂಪ, ರಚನೆಯ ದೃಷ್ಟಿಯಿಂದ ಶಿಲ್ಪವನ್ನು ಬದಲಾಯಿಸಿಕೊಳ್ಳುತ್ತಲೇ ಬಂದಿರುವ, ಹೊಸ ಹೊಸ ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತಲೇ ಬಂದಿರುವ ಕಾವ್ಯ 6ನೇ ಶತಮಾನದಿಂದ ಇಂದಿನವರೆಗೆ ಬೇರೆ ಬೇರೆ ಅವತಾರಗಳನ್ನು ಎತ್ತುತ್ತಲೇ ಬಂದಿರುವುದನ್ನು ಕಾತ್ಯಾಯಿನಿ ಗುರುತಿಸಿದ್ದಾರೆ. ಅವರು ಹೇಳಿರುವಂತೆ “ಕಾವ್ಯವೆಂದರೆ ಪದಗಳೊಂದಿಗಿನ ಆಟ, ಬೌದ್ಧಿಕ ರಂಜನೆ. ಕವಿಯ ಆ ಕ್ಷಣದ ಅಂತಃಸ್ಫೂರ್ತಿಯಿಂದ ಕಾವ್ಯ ಹುಟ್ಟುತ್ತದೆ. ಕೆಲವೊಮ್ಮೆ ಬರೆಯುವ ಮುನ್ನ ಬಯಸಿದ್ದ ಆಕೃತಿಗಿಂತ ಭಿನ್ನ, ಸಂಕೀರ್ಣ, ಅಮೂರ್ತ ಹಾಗೂ ದಿವ್ಯವಾದ ಬೇರೊಂದು ಆಕೃತಿಯಾಗಿ ದಿಗ್ಭ್ರಮೆಗೊಳಿಸುವ ಎತ್ತರಕ್ಕೇರುವುದೂ ಉಂಟು, ಕವಿಯ ಕಲ್ಪನೆಯನ್ನೇ ಮೀರಿ ಬೆಳೆಯುವ ಸಾಧ್ಯತೆಯೂ ಉಂಟು. ಅಮೂರ್ತ ಬಯಸುವ ಭಾವುಕ ಮನಸ್ಸಿಗೆ ಕಾವ್ಯ ಬಹಳ ದೊಡ್ಡ ಮಾಧ್ಯಮ. ಬದುಕಿನ ಅವ್ಯಕ್ತತೆಯ ಕುರಿತು, ಅಧ್ಯಾತ್ಮದ ತಾತ್ವಿಕ ಅಮೂರ್ತತೆಯ ಕುರಿತು ಚಿಂತನೆ ನಡೆಸುವ ಅಂತರ್ಮುಖಿ ಮನಸ್ಸಿಗೆ ಕಾವ್ಯ ಆಪ್ತವಾಗುತ್ತದೆ.”
ಬಾಲ್ಯದಲ್ಲಿ ಅಜ್ಜಿ ಮತ್ತು ಅಮ್ಮ ಮುಂಜಾನೆ ಮೊಸರು ಕಡೆಯುತ್ತ ಹಾಡುತ್ತಿದ್ದ ಉದಯರಾಗ, ದಾಸರ ಕೀರ್ತನೆಗಳು, ಅವರೊಡನೆ ನೋಡುತ್ತಿದ್ದ ಯಕ್ಷಗಾನ ಬಯಲಾಟ, ತಾಳಮದ್ದಲೆ, ಹರಿಕಥೆ, ನೃತ್ಯ, ನಾಟಕ, ಸಿನೆಮಾಗಳು, ಕೇಳುತ್ತಿದ್ದ ರೇಡಿಯೋ ಸಂಗೀತ, ಓದುತ್ತಿದ್ದ ಕಥೆ ಕಾವ್ಯ ಕಾದಂಬರಿಗಳು, ಪಡೆದ ಲೋಕಾನುಭವಗಳು, ವಿಕ್ಷಿಪ್ತ ಮನದ ಅಪ್ಪ ಮನೆಯಲ್ಲಿ ಏರುದನಿಯಲ್ಲಿ ಹಾಡುತ್ತಿದ್ದ ತೊರವೆ ರಾಮಾಯಣ, ಜೈಮಿನಿ ಭಾರತ, ಗದುಗಿನ ಭಾರತ, ಗೀತ ಗೋವಿಂದದ ಭಾಗಗಳು, ಕವಿಗೆ ಬೇಕಾದ ವ್ಯಕ್ತಿತ್ವ ಒಳನೋಟ ದೃಷ್ಟಿಕೋನಗಳನ್ನು ನೀಡಿದ ಗುರುಪರಂಪರೆಯಿಂದ ಪ್ರಾಪ್ತವಾದ ಅಂತಃಶಕ್ತಿಯಿಂದ ಉದ್ದೀಪನೆಗೊಂಡ ಭಾವಗಳು ಅಕ್ಷರಗಳಾಗಿವೆ. ಬಾಲ್ಯದ ಕಡುಬಡತನ, ಅಶಾಂತಿ, ಅಭದ್ರತೆ, ಅತಂತ್ರ ಸ್ಥಿತಿ, ಅತೃಪ್ತ ಮನಸ್ಸು ನಿಗಿನಿಗಿ ಕೆಂಡವಾಗಿ ಉರಿಯುತ್ತ ಬದುಕಿನ ನಶ್ವರತೆ, ಅನಾಥ ಪ್ರಜ್ಞೆಗಳು ಭೀಕರವಾಗಿ ಕಾಡಿ ಸಾವಿನ ಭಯದಿಂದ ತಲ್ಲಣಗೊಳಿಸಿ ಅಧ್ಯಾತ್ಮದತ್ತ, ಅತೀತದತ್ತ, ವೈರಾಗ್ಯದತ್ತ ಕೈಚಾಚುವಂತೆ ಮಾಡಿದ್ದು- ಇಂಥ ಸಂದರ್ಭಗಳಲ್ಲೆಲ್ಲ ಕವನ ಕೈಹಿಡಿದು ಬೆಂಕಿಯಿಂದ ಬೆಳಕಿನತ್ತ ಒಯ್ದಿದೆ. ಲೌಕಿಕದಿಂದ ಬಿಡುಗಡೆ ಬಯಸುವ ಮನಸ್ಸಿಗೆ ಆಪ್ತ ಹೊರದಾರಿಯಾಗಿ ಕಾಣಿಸಿಕೊಂಡಿದೆ. ಕವಿಯ ಅನುಭವಗಳಲ್ಲಿ ಬೆರೆತುಹೋಗಿದೆ. ಜೀವ ಮಿಡಿಯುತ್ತಿರುವ ಕಾಯದ ಅನುಭವಗಳಿಗೆ ಯಾವಾಗಲೂ ಒಂದು ಮಿತಿ ಇದ್ದೇ ಇರುತ್ತದೆ. ಆದರೆ ಕಾತ್ಯಾಯಿನಿ ಕಾಯದ ಅನುಭವಗಳ ಮಿತಿಯನ್ನು ದಾಟಲೆಳಸುವ ಆತ್ಮದ ಅನುಭೂತಿಯನ್ನು, ಅನುಭಾವವನ್ನು ಹಿಡಿಯಲು ಕೈ ಚಾಚಿರುವುದರಿಂದ ಕಾಯಕಾವ್ಯದೊಂದಿಗೆ ಆತ್ಮಕಾವ್ಯವೂ ಸಮರಸತೆಯಲ್ಲಿ ಸಾಗಿರುವುದು ಸಹೃದಯರನ್ನು ತೀವ್ರವಾಗಿ ತಟ್ಟುತ್ತದೆ.
ಇಷ್ಟೇ ಮುಖ್ಯವಾದ ಮತ್ತೊಂದು ಸಂಗತಿ-ಕಾತ್ಯಾಯಿನಿಯ ಅಣ್ಣ, ಸಂಗೀತ ಕಲಿಸಿದ ಗುರು, ಕತೆ ಕಾದಂಬರಿ ಕಾವ್ಯದ ಪುಸ್ತಕಗಳನ್ನು ಗ್ರಂಥಾಲಯದಿಂದ ತಂದು ಓದುತ್ತಾ ತನ್ನ ಹಾದಿ ಹಿಡಿಯುವಂತೆ ಪ್ರೇರೇಪಿಸಿದ ಉತ್ತರಾದಿ ಸಂಗೀತ ಗಾಯಕ ಪಂ. ರವಿಕಿರಣ ಮಣಿಪಾಲ ಕಾಯಕಾವ್ಯಕ್ಕೆ ಕೈಗನ್ನಡಿಯಾಗಿ ಬರೆದಿರುವ ವಿವರಣೆ, ವಿಮರ್ಶೆ, ವಿಶ್ಲೇಷಣೆ ಎಲ್ಲವೂ ಸೇರಿದಂತಿರುವ ಮಾತುಗಳು ಒಂದು ರೀತಿಯಲ್ಲಿ ಕೃತಿಯನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಕೀಲಿಕೈ ಆಗಿರುವುದು. ಹೆಣ್ಣಿನ ದಾಸ್ಯ ಮತ್ತು ಹೆಣ್ಣಿನ ಮೇಲಿನ ಕ್ರೌರ್ಯದ ನಾನಾ ಮುಖಗಳನ್ನು ಕಾತ್ಯಾಯಿನಿ ಬಾಲ್ಯದಲ್ಲೇ ನೋಡಿದ್ದಲ್ಲದೆ ಸ್ವತಃ ಅನುಭವಿಸಿದ್ದರಿಂದ, ಕುಟುಂಬದ ವಲಯದಲ್ಲೇ ಅಮ್ಮ ಚಿಕ್ಕಮ್ಮ ಅಜ್ಜಿ ಎಲ್ಲರೂ ಗಂಡಂದಿರ ಕ್ರೌರ್ಯಕ್ಕೆ ಸಮಾಜದ ತಿರಸ್ಕಾರಕ್ಕೆ ತುತ್ತಾಗಿ ನರಳಿದ್ದನ್ನು ಕಾತ್ಯಾಯಿನಿ ನೋಡುತ್ತಲೇ ಬೆಳೆದವರಾದ್ದರಿಂದಲೇ ಅಂಥ ವಿವರಗಳು ತನ್ನದೇ ಅನುಭವದ ಅನುರಣನವೇನೋ ಎಂಬಷ್ಟರ ಮಟ್ಟಿಗೆ ಸಹಜವಾಗಿ ಬಂದಿವೆ. ಸ್ತ್ರೀ ಸಂವೇದನೆ ಕಾತ್ಯಾಯಿನಿ ಅವರ ಕವಿತೆಗಳಲ್ಲಿ ವಿಶಿಷ್ಟ ಧ್ವನಿ ಪಡೆದು ಹೊರಹೊಮ್ಮಿರುವುದಕ್ಕೆ ಕಾರಣವಾದ ಹಿನ್ನೆಲೆ ಇದು.
ಸಂಕಲನದ ಹೆಸರೂ ಆಗಿರುವ `ಕಾಯಕಾವ್ಯ’ ಇಲ್ಲಿನ ಮೊದಲ ಕವಿತೆ ಮತ್ತು ಪ್ರಾತಿನಿಧಿಕ ಕವಿತೆ. `ಅಕ್ಕ ಕೇಳವ್ವ’ ಹೆಸರಿನಲ್ಲಿ ಪತ್ರಿಕೆಯೊಂದಕ್ಕೆ ಅಂಕಣ ಬರೆಯುತ್ತಿದ್ದ ಕಾತ್ಯಾಯಿನಿಗೆ 12ನೇ ಶತಮಾನದ ಅಕ್ಕನ ವ್ಯಕ್ತಿತ್ವ. ಆತ್ಮಾಭಿಮಾನ, ಪುರುಷ ಪೀಡೆಗಳನ್ನು ಎದುರಿಸಿದ ಮತ್ತು ಪುರುಷ ಪ್ರಧಾನ ಸಮಾಜಕ್ಕೆ ಸೆಡ್ಡು ಹೊಡೆದು ನಡೆದ ರೀತಿ ಮೆಚ್ಚುಗೆಗಷ್ಟೇ ಪಾತ್ರವಲ್ಲ, ಆದರ್ಶದ ಬೆಳಕೂ ಹೌದು. ಗಂಡ ಮತ್ತು ಪುರುಷ ಕೇಂದ್ರಿತ ಸಂಸಾರವನ್ನು ಧಿಕ್ಕರಿಸಿ ಅಕ್ಕ ಬಯಲಿಗೆ ಬಂದಾಗ ಸುಂದರಿಯೂ ತರುಣಿಯೂ ಒಬ್ಬಂಟಿಯೂ ಆಗಿದ್ದ ಅವಳನ್ನು ಕಾಮನೆಯ ಕಣ್ಣುಗಳಿಂದ ನೋಡುತ್ತ ಜೊಲ್ಲು ಸುರಿಸುತ್ತಾ ಹಿಂಬಾಲಿಸಿಕೊಂಡು ಬಂದ ಪುರುಷಮೃಗಗಳಿಗೆ ಹೇಳಿದ ಬುದ್ಧಿವಾದ, ಮಾಡಿಕೊಂಡ ಮನವಿ ವ್ಯರ್ಥವಾದಾಗ ಉಟ್ಟ ಬಟ್ಟೆಯನ್ನೇ ಕಿತ್ತೆಸೆದು ಬಟಾಬಯಲಿನಲ್ಲಿ ತಾನೂ ಬಯಲಾಗಿ ಇಟ್ಟುಕೊಂಡ ಗುರಿಯತ್ತ ದಿಟ್ಟಳಾಗಿ ನಡೆದಳು. ದಾರಿಯುದ್ದಕ್ಕೂ ಅವಳು ಎದುರಿಸಬೇಕಾಗಿ ಬಂದ ಅಗ್ನಿಪರೀಕ್ಷೆ, ಕಳೆದ ಆತಂಕದ ಕ್ಷಣಗಳು, ಮನದೊಳಗೆ ತುಂಬಿಕೊಂಡ ತಲ್ಲಣಗಳಿಂದಾಗಿ ಅವಳೆಂಥ ಭಾವೋದ್ವೇಗಕ್ಕೆ ಭಾವೋತ್ಕರ್ಷಕ್ಕೆ ಭಾವತೀವ್ರತೆಗೆ ಒಳಗಾದಳೆಂದರೆ ಆ ಎಲ್ಲವುಗಳಿಂದ ಬಿಡುಗಡೆ ಪಡೆದುಕೊಂಡು ನಿರಾಳವಾಗಲು, ತನ್ನ ಒಳಗನ್ನು ಹೊರಹಾಕುವ ಮಾರ್ಗವಾಗಿ ಕಾವ್ಯಾಭಿವ್ಯಕ್ತಿಯತ್ತ ಹೊರಳಬೇಕಾಯಿತು. ಹೆಣ್ಣು ಎಂದರೆ ಕೇವಲ ದೇಹವಲ್ಲ ಆತ್ಮ ಎಂಬುದನ್ನು 12ನೇ ಶತಮಾನದಷ್ಟು ಹಿಂದೆಯೇ ತೋರಿಸಿಕೊಟ್ಟ ಮೊದಲ ಸ್ತ್ರೀವಾದಿ ಅಕ್ಕಮಹಾದೇವಿ. ಅದಾಗಿ 900 ವರ್ಷಗಳು ಕಳೆದ ಮೇಲೆ ಅಕ್ಕ ಆಡಿದಂತೆ ನಡೆದ ಅಥವಾ ನಡೆದಂತೆ ಆಡಿದ ಆದರ್ಶವನ್ನು ಆಧುನಿಕ ಸಂದರ್ಭದ ಮಹಿಳಾ ಸಾಹಿತಿಗಳು ಸ್ವಾತಂತ್ರ್ಯ ಸಮಾನತೆಯ ಹೋರಾಟದ ಮುಂಚೂಣಿಗೆ ತರುತ್ತಿರುವುದನ್ನು, ಅಕ್ಕನ ತೀವ್ರತರವಾದ ಅನುಭವವೇ ಏನನ್ನು ಮಾತಿನಲ್ಲಿ ಹೊರಹಾಕಿತೋ ಅದನ್ನೇ ತಮ್ಮ ಹಕ್ಕೊತ್ತಾಯದ ಗಟ್ಟಿ ಧ್ವನಿಯಾಗಿಸಿಕೊಂಡಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಹಾಗೆಯೇ ಗಂಡ ಎನ್ನುವವನು ಕಾಮಕೂಟದ ಜೊತೆಗಾರ ಮಾತ್ರ ಅಲ್ಲ, ದಾಂಪತ್ಯಕ್ಕೆ ಸಾರ್ಥಕತೆ ಪ್ರಾಪ್ತವಾಗುವುದು ಅವನು ಆತ್ಮಸಂಗಾತಿಯೂ ಆದಾಗ ಮಾತ್ರ ಎನ್ನುವ ಅಕ್ಕನ ನಿಲುವಿಗೆ ಅಂದಿನ ಸಮಾಜ ಎಷ್ಟೊಂದು ಕೆರಳಿತು ಅಥವಾ ತಲ್ಲಣಿಸಿತು ಗೊತ್ತಿಲ್ಲ. ಇವತ್ತಿಗೂ ಕುಟುಂಬದ ಒಳಗಿನ ಮತ್ತು ಹೊರಗಿನ ಗಂಡಸರಿಂದ ನಿತ್ಯವೂ ಸಂಕಟ ಸಮಸ್ಯೆಗಳನ್ನು ಎದುರಿಸುತ್ತಲೇ ಇರುವ, ಯಾವ ದಿಕ್ಕಿನಿಂದ ಯಾವ ಕ್ಷಣದಲ್ಲಿ ಎಂಥ ಆಪತ್ತು ಎರಗುತ್ತದೋ ಎಂದು ಭೀತಿ ಆತಂಕಗಳಲ್ಲೇ ಕಾಲ ದೂಡಬೇಕಾದ ಇವತ್ತಿನ ಮಹಿಳೆ ತನ್ನನ್ನು ಗಟ್ಟಿಗೊಳಿಸಿಕೊಳ್ಳಲು, ಅನ್ಯಾಯ ಶೋಷಣೆಗಳ ವಿರುದ್ಧ ಧ್ವನಿ ಎತ್ತಿ ಪ್ರತಿಭಟಿಸಲು, ಹೋರಾಟಕ್ಕೆ ಅಗತ್ಯವಾದ ಶಕ್ತಿಯನ್ನು ತುಂಬಿಕೊಳ್ಳಲು ಅಕ್ಕನ ಚೈತನ್ಯವನ್ನೇ ಆವಾಹನೆ ಮಾಡಿಕೊಳ್ಳಬೇಕಾಗಿದೆ; ಈಗಲೂ ಮಹಿಳಾ ಧ್ವನಿಯನ್ನು ಅಡಗಿಸಲು ನಡೆಯುತ್ತಲೇ ಇರುವ ನಾನಾ ಬಗೆಯ ಪಿತೂರಿಗಳ ವಿರುದ್ಧ ಸೆಡ್ಡು ಹೊಡೆದು ಬೆಳೆಯುತ್ತಲೇ ಗುರಿಯತ್ತ ಸಾಗಬೇಕಾಗಿದೆ. ಕಾತ್ಯಾಯಿನಿಯವರ `ಕಾಯಕಾವ್ಯ’ವನ್ನು ಒಟ್ಟಾರೆಯಾಗಿ ಗ್ರಹಿಸಿದಾಗ ನಾನು ಎಟುಕಿಸಿಕೊಂಡ ವಿಚಾರಗಳಿವು.


ಅಕ್ಕನಿಂದಲೇ ಸ್ಫೂರ್ತಿ ಪಡೆದ ಸ್ತ್ರೀ ಸಂವೇದನೆಯ ವಿಶಿಷ್ಟ ಧ್ವನಿ `ಕಾಯಕಾವ್ಯ’ದ ಹಲವು ಕವಿತೆಗಳಲ್ಲಿ ಗಟ್ಟಿಯಾಗಿ, ಸ್ಪಷ್ಟವಾಗಿ, ದಿಟ್ಟವಾಗಿ ಕೇಳಿಸುತ್ತದೆ. ಸಂಕಲನದ ಎಲ್ಲ ಕವಿತೆಗಳಿಗೆ ಸೂತ್ರಪ್ರಾಯ ಎನಿಸುವಂತಿರುವ ಕೆಲವು ಕವಿತೆಗಳ ಕೆಲವು ಸಾಲುಗಳನ್ನು ಇಲ್ಲಿ ಚರ್ಚೆಗೆತ್ತಿಕೊಳ್ಳಬಹುದು. ಸಂಕಲನದ ಹೆಸರೂ ಆಗಿರುವ `ಕಾಯಕಾವ್ಯ’ ಕವಿತೆ ನೇರವಾಗಿ ಅಕ್ಕನಿಗೇ ಸಂಬಂಧಿಸಿದ್ದು. ಅಕ್ಕನ ದಿಟ್ಟತನವನ್ನು ಮೆಚ್ಚಿಕೊಳ್ಳುತ್ತಲೇ ಅಕ್ಕನಂತಾಗಲು ಬಿಡದ ದಿಗ್ಬಂಧನಗಳಲ್ಲಿ ಸಿಲುಕಿಕೊಂಡು ನರಳುವ ಹೆಣ್ಣಿನ ಅಸಹಾಯಕತೆಯನ್ನು ಸೂಚ್ಯವಾಗಿ ಮಿಡಿಯುವಂಥದ್ದು. “ಅಕ್ಕ ಕಳಚಿಕೊಂಡದ್ದು, ಇಹದ ಅರಿವನು ತಂಗೀ, ಅರಿವು ಕಳಕೊಂಡು ಮೈಮರೆತದ್ದಕ್ಕೇ ಬತ್ತಲಾದಳು, ಬೆಂಕಿಯಾಗದ ಬೆಳಕ ಒಡಲನು ಹೊತ್ತ ಮಿಂಚುಹುಳದಂತೆ ಕತ್ತಲ ಮೈಯಲಿ ಆತ್ಮದೀಪವನು ಹೊತ್ತು" ಎನ್ನುವುದು ಅಕ್ಕನ ಉಜ್ವಲ ವ್ಯಕ್ತಿತ್ವಕ್ಕೆ ಒಡ್ಡಿದ ಪ್ರತಿಮೆಯಾದರೆ, ಅಕ್ಕನ ಮಾದರಿಯನ್ನು ಅನುಸರಿಸಬೇಕೆನ್ನುವ ಹಂಬಲದ ಇವತ್ತಿನ ಹೆಣ್ಣಿಗೆ ಎದುರಾಗುವ ಸಂದಿಗ್ಧತೆಯನ್ನು ಮುಂದಿನ ಸಾಲುಗಳು ಹೇಳುತ್ತವೆ: “ವೇಷ ಕಳಚಿ ಬಣ್ಣ ಒರಸಿ ನಾ ಹೊರಟಾಗೆಲ್ಲ ಇವ ಬೆಂಬಿಡದ ಬೇತಾಳನಂತೆ ಕೊನೆಯಿರದ ದುರ್ಗಮ ಬಟ್ಟೆಯಲೇ ಹಿಂಬಾಲಿಸುತ ಹೆಗಲೇರೆ ಮಹತೋಭಾರ, ಮುಗಿಲತ್ತ ನೋಡದೆಯೆ ನೆಲವನೇ ಮೂಸುತ ಹಿಂದಿರುಗುವೆ, ಮಾದೇವಿಯಾಗದ ಖೇದದಲಿ ಮೂದೇವಿಯಾಗಿ".
ಭಾರತೀಯ ಸಂಸ್ಕೃತಿ ಎನ್ನುವ ಅಮೂರ್ತ ಮತ್ತು ಅನರ್ಥಕಾರಿ ಸನಾತನ ಸಂಪ್ರದಾಯಗಳ ಶನಿ ಹಿಡಿತದ ಕ್ರೂರ ಇಕ್ಕುಳಗಳಲ್ಲಿ ಹೆಣ್ಣನ್ನು ಸಿಕ್ಕಿಸುವ ದುಷ್ಟ ಪ್ರಯತ್ನಗಳನ್ನು ಪುರುಷ ಪ್ರಧಾನ ಸಮಾಜ ಎಂದೆಂದಿನಿಂದಲೂ ಜಾರಿಯಲ್ಲಿಟ್ಟಿದೆ ಮತ್ತು ಅದು ಎಲ್ಲಿಯೂ ತಪ್ಪಿಹೋಗದಂತೆ ಎಚ್ಚರ ವಹಿಸುತ್ತಲೇ ಬಂದಿದೆ. ಹೆಣ್ಣಿನ ದೇಹ ಮತ್ತು ಮನಸ್ಸಿಗೆ ಒಗ್ಗದ ಇಂಥ 'ಸಂಹಿತೆ' ಹೆಸರಿನ ಕಿರಿಕಿರಿ, ಕಿರುಕುಳಗಳನ್ನು ಸಹಿಸಿಕೊಳ್ಳುತ್ತಲೇ ಬಂದಿರುವ ಮಹಿಳೆ ಇತ್ತೀಚಿನ ದಿನಗಳಲ್ಲಿ ಅಂಥವುಗಳ ವಿರುದ್ಧ ನಡೆಸಿದ ಪ್ರತಿಭಟನೆ ಮಾಧ್ಯಮಗಳಲ್ಲಿ ಬಿಸಿಬಿಸಿ ಸುದ್ದಿಯಾಗಿ, ವಿಧಾನಸಭೆಯ ಕಲಾಪಗಳಲ್ಲೂ ಚರ್ಚೆಯಾಗಿ, ನ್ಯಾಯಾಲಯದ ಕಟಕಟೆಯನ್ನೂ ಏರಿ ಸಾಮಾಜಿಕ ಸಂಚಲನವನ್ನುಂಟುಮಾಡಿದ್ದೂ ನಿಜ. ಇಂಥವುಗಳಲ್ಲಿ ಉಡುವ- ತೊಡುವ ಹೆಣ್ಣಿನ ಇಷ್ಟಾನಿಷ್ಟಗಳನ್ನು ಲೆಕ್ಕಿಸದೆ ಜಾರಿಯಲ್ಲಿರಲೇಬೇಕೆಂದು ಹವಣಿಸಿದ ವಸ್ತ್ರಸಂಹಿತೆಯೂ ಒಂದು. ಎಂಥ ಬಟ್ಟೆಬರೆಯನ್ನಾದರೂ ತೊಟ್ಟು ಮೆರೆಯಲು ಸರ್ವಸ್ವತಂತ್ರನಾಗಿರುವ ಗಂಡಸು, ಹೆಣ್ಣು ತೊಡುವ ಬಟ್ಟೆಗಳ ವಿಚಾರದಲ್ಲಿ ಮೂಗು ತೂರಿಸುವುದು, ಅದನ್ನು ಮಾನ ಮಾರ್ಯದೆಯ ಸಂಗತಿಯಾಗಿಸುವುದು ಪ್ರಶ್ನಾರ್ಹವಲ್ಲವೇ? ತನ್ನ ಮೈಗೆ ಒಪ್ಪುವ, ಮನಸ್ಸಿಗೆ ಇಷ್ಟವಾಗುವ ಬಟ್ಟೆ ತೊಡಲು ಗಂಡಸೆಂಬ ದೊಣ್ಣೆನಾಯಕನ ಅಪ್ಪಣೆ ಯಾಕೆ ಬೇಕು, ಇಲ್ಲೂ ಕೂಡ ನಮ್ಮ ಸ್ವಾತಂತ್ರ್ಯ ಸಮಾನತೆಗಳನ್ನು ಕಿತ್ತುಕೊಳ್ಳುವ ಹುನ್ನಾರವಿಲ್ಲವೆ ಎನ್ನುವ ಬಗ್ಗೆ ಸಂವೇದನಾಶೀಲ ಹೆಣ್ಣು ಮನಸ್ಸೊಂದರ ಪ್ರತಿಕ್ರಿಯೆ `ಬಿಡುಗಡೆ' ಯಲ್ಲಿ ವ್ಯಕ್ತವಾಗಿದೆ: “ನಮ್ಮ ತೊಡೆಯಿಂದ ಕತ್ತಿನವರೆಗೂ ದೇಹವು ಮುದುಡಿ ಮುದ್ದೆಯಾಗುವಂತೆ, ಬಿಗಿದು ಎಳೆಯುವ ಸೆರಗು ಅರಮನೆಯಲ್ಲ ಉಸಿರುಗಟ್ಟಿಸುವ ಸೆರೆಮನೆ, ಎದೆಗೂಡ ಒಳಗಿನ ಹೃದಯವು ನಿಮ್ಮ ಜೀತದಾಳಲ್ಲ, ಅದರ ವಿಲಿವಿಲಿ ಒದ್ದಾಟ, ಕ್ಷೀಣ ಚೀರಾಟ ಮಾರ್ದನಿಸುವುದ ಕೇಳಿರಿ ನಿಮ್ಮೆದೆಯ ಕಿವಿಗಳಲ್ಲಿ, ಹೆಣ್ಣನ್ನು ಹೆಣದಂತೆ ನೋಡಬೇಡಿ, ಕಿತ್ತೆಸೆದು ಮಾದಕ ಕನ್ನಡಕವನ್ನು ನೋಡಿರಿ ಹೆಣ್ಣಿನ ಮನದ ಮೈಯ ನಿಮ್ಮದೇ ಒಳಗಣ್ಣಿನಲ್ಲಿ, ಹೆಣ್ಣುಮಕ್ಕಳು ಧರಿಸಲು ಬಿಡಿ ನಿಮ್ಮಂತೆ ಟೀ ಶರ್ಟು ಜೀನ್ಸು, ನಮ್ಮ ಬಟ್ಟೆಯಲಿ ನಾವೇ ನಡೆಯುವೆವು, ನಮ್ಮ ಆತ್ಮವನ್ನು ಸುತ್ತಲಾರವು ನಿಮ್ಮ ಸೀರೆಗಳು” ಇಲ್ಲಿ ವಸ್ತ್ರಸಂಹಿತೆಯ ರಾಜಕಾರಣದಿಂದ ಬಿಡುಗಡೆ ಪಡೆಯಲು ಬಯಸುವ ಮನಸ್ಸಿನಲ್ಲಿ ವಿನಂತಿಯೂ ಇದೆ, ಆಕ್ರೋಶವೂ ಇದೆ, ಆಗ್ರಹವೂ ಇದೆ.

'ಇನ್ನು ಹುಟ್ಟದೆಯಿರಲಿ' ಕವನದ ಶೀರ್ಷಿಕೆಯೇ ಕುಮಾರವ್ಯಾಸ ದ್ರೌಪದಿಯ ಬಾಯಿಂದ ಆಡಿಸಿದ ಮಾತನ್ನು ನೆನಪಿಗೆ ತರುತ್ತದೆ. ಹಿರಿಯರೂ ಅತಿರಥ ಮಹಾರಥರೂ ಇರುವ ತುಂಬು ಸಭೆಯಲ್ಲಿ ಹೆಣ್ಣೊಬ್ಬಳ ಮಾನಭಂಗವಾಗುತ್ತಿದ್ದರೂ ರಕ್ಷಿಸದೆ, ಸಹಾಯಕ್ಕೆ ಬರದೆ ಮಿಳಮಿಳನೆ ನೋಡುತ್ತಲೋ ತಲೆತಗ್ಗಿಸಿಯೋ ಕುಳಿತವರನ್ನು ತರಾಟೆಗೆ ತೆಗೆದುಕೊಂಡು ಹೆಣ್ಣಾಗಿ ಹುಟ್ಟಿದ ಕಾರಣದಿಂದಾಗಿಯೇ ತಾನು ಅನುಭವಿಸಬೇಕಾಗಿ ಬಂದ ಕಷ್ಟ ಕ್ಲೇಶ ಅವಮಾನಗಳನ್ನು ಅಲ್ಲಿ ದ್ರೌಪದಿ ಅಸಹಾಯಕತೆಯಲ್ಲಿ ಹೊರಹಾಕುತ್ತಾಳೆ. ವಿದ್ಯಾವಂತರ, ವಿಚಾರವಂತರ ಸಂಖ್ಯೆ ಹೆಚ್ಚಾಗಿರುವ ಈ ದಿನಗಳಲ್ಲಾದರೂ ಹೆಣ್ಣಿನ ಮೇಲಾಗುತ್ತಿರುವ ಅನ್ಯಾಯ ದುರಾಕ್ರಮಣಗಳು ತಪ್ಪಿವೆಯೇ? ಸ್ವಾತಂತ್ರ್ಯ ಸಮಾನತೆಯಲ್ಲಿ ಅವಳು ಉಸಿರಾಡಲು ಸಾಧ್ಯವಾಗಿದೆಯೇ? ಎಂದರೆ, ಇಲ್ಲ, ಹೆಣ್ಣಾದ ಕಾರಣಕ್ಕೆ ಅವಳು ಅನುಭವಿಸಬೇಕಾದ ನರಕಯಾತನೆ ಮತ್ತಷ್ಟು ವಿಸ್ತಾರವನ್ನೂ ವೈವಿಧ್ಯವನ್ನೂ ಪಡೆದುಕೊಂಡಿದೆ ಎನ್ನುವುದೇ ಉತ್ತರ. ಅದನ್ನು ಕಾತ್ಯಾಯಿನಿ ಚಿತ್ರಿಸಿರುವುದು ಹೀಗೆ: “ಕೃತ ತ್ರೇತಾ ದ್ವಾಪರ ಕಲಿ, ಯಾವ ಯುಗವಾದರೇನಂತೆ, ಹೆಣ್ಣು ಹೆಣ್ಣೇ, ಅದೇ ಕೀಚಕ ಅದೇ ಸೈಂಧವ ಅದೇ ರಾವಣ ಅದೇ ದೇವೇಂದ್ರ ನರಕಾಸುರರು ಮತ್ತೆಮತ್ತೆ ಪುಲ್ಲಿಂಗ ಹೊತ್ತು ಹುಟ್ಟುತ್ತಾರೆ, ಹೆಣ್ಣಿನ ಕನಸು ಸುಡಲು ಹೆಣ್ಣ ಬಸಿರಲೇ”. ಪತ್ರಿಕೆ, ಟಿವಿಗಳಲ್ಲಿ ನಿತ್ಯಸುದ್ದಿಯಾಗಿರುವ ಹೆಣ್ಣಿನ ಮೇಲಿನ ದೌರ್ಜನ್ಯದ ಹಲವು ಉದಾಹರಣೆಗಳು ಇಲ್ಲಿ ಹರಡಿಕೊಂಡಿದ್ದು ಆ ಒಂದೊಂದು ಪ್ರಸಂಗಗಳೂ ಮತ್ತೆ ಕಣ್ಮುಂದೆ ಕಟ್ಟಿ ಮನವನ್ನು ಕಲಮಲಗೊಳಿಸುತ್ತವೆ. ಹದಿಹರೆಯದ ಹೈಸ್ಕೂಲು ಹುಡುಗಿ ಹಣ್ಣಾಗುವ ಮುನ್ನವೇ ಬಲಾತ್ಕಾರದಲ್ಲಿ ನಲುಗಿ ಮಣ್ಣಾದದ್ದು, ವಿದೇಶಿ ಸುಗಂಧಕ್ಕೆ ಮಾರಿಕೊಂಡವಳು, ಹೊಗಳಿಸಿಕೊಂಡು ಹೊನ್ನಶೂಲಕ್ಕೇರಿದವಳು, ಕೈ ಹಿಡಿದವನನ್ನು ನಂಬಿ ಓಡಿ ಬಂದು ಅಪಹರಣಕ್ಕೊಳಗಾದವಳು, ಕೆಂಪು ದೀಪದ ಬೆಳಕಲ್ಲಿ ಕ್ಷಣಕ್ಕೊಮ್ಮೆ ಸುಲಿಸಿಕೊಂಡು ಸಾವಿನ ಕಟ್ಟೆಯಲ್ಲಿ ಚೀರಾಡುವವರು, ಬಗೆಬಗೆಯ ಮುಖವಾಡ ತೊಟ್ಟು ಬಂದವರಿಗೆ ಬಲಿಯಾದವರು- ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಯಾರು ಯಾರಿಗೇ ಬೈದರೂ ಜಗತ್ತಿನ ಭಾಷೆಯೇ ಪುಲ್ಲಿಂಗ ಬೇರೆ! ಮನೆಯ ಒಳಗೂ ಮನೆಯ ಹೊರಗೂ ಬೆಚ್ಚಿಸುವಂತೆ ನಡೆಯುತ್ತಲೇ ಇರುವ ಅತ್ಯಾಚಾರ ಮತ್ತು ದೌರ್ಜನ್ಯಗಳು ಸಂಭವಿಸುವುದು ಸಾಮಾನ್ಯವೆನಿಸುವಂತೆ ಆಗಿಬಿಟ್ಟಿರುವುದರಿಂದ ಕವಿ ಅಂತಿಮವಾಗಿ ಕೊಡುತ್ತಿರುವ ಕರೆ “ನಂಬಬೇಡಿ ಮುದ್ದುಮರಿಗಳೇ, ನಂಬಲೇಬೇಡಿ ಗಿಡುಗ ರಣಹದ್ದುಗಳನ್ನು” ಎನ್ನುವುದೂ ಕೂಡ ಅಸಹಾಯಕತೆಯ ಮೊರೆತವೇ ಆಗಿಬಿಡುತ್ತದೇನೋ ಅನ್ನಿಸುತ್ತದೆ.
ಎಲ್ಲ ಇದ್ದೂ ಏನೂ ಇಲ್ಲದಂತಾಗಿ ಮನಸ್ಸೆಲ್ಲಾ ಖಾಲಿ ಖಾಲಿ ಅನ್ನಿಸಿ, ಆತ್ಮೀಯ ಅಂದುಕೊಂಡಿದ್ದ ಸಂಬಂಧಗಳಲ್ಲಿ ಸ್ವಾರ್ಥವೇ ಚಿಗುರಿದಂತಾಗಿ, ಮತ್ತೇನೋ ಬೇಕು ಆದರೆ ಅದೇನೆಂದು ಗೊತ್ತಾಗದಂತಾಗಿ, ವೈರಾಗ್ಯ ಭಾವ ಅಣು ಅಣುವನ್ನೂ ಆವರಿಸಿಕೊಂಡು ಹಿಂಸಿಸುವ ಅನುಭವ ತಟ್ಟತೊಡಗಿದಂತೆ ಯಾವುದೋ ಮೋಹನ ಮುರಳಿಯ ಕರೆ ಸೆಳೆಯತೊಡಗಿ ಅಕ್ಕನಂತೆ ಹಿಂದು ಮುಂದುಗಳನ್ನು ಆಲೋಚಿಸದೆ ಎಲ್ಲವನ್ನೂ ಕಿತ್ತೆಸೆದು ಬಟಾಬಯಲಿಗೆ ಬಂದುಬಿಡಬೇಕು ಅಂತಲೋ ಸ್ವತಃ ಜೋಗಿಯಾಗಿಯೋ ಅಥವಾ ಜೋಗಿ ಜಂಗಮರ ಹಿಂದೆಯೋ ಹೊರಟುಬಿಡಬೇಕು ಅನ್ನುವ ಉತ್ಕಟತೆಗೆ ಒಳಗಾಗಿಬಿಡುವ ಮಾಯೆಯನ್ನು `ತೇರು’ ತೆರೆದಿಡುವುದು ಹೀಗೆ: “ಒಳಒಳಗೆ ತೆರೆದುಕೊಳ್ಳುವ ತುದಿಯಿರದ ಹಾದಿಯಲಿ ನಾನು ಒಂಟಿ, ನಡೆಯಲಾಗದೆ ಕಾಯುವೆ ನಡೆವ ಜಂಗಮನ ಹಿಂದೆಯೇ, ತೇರು ಮುಗಿದ ಮೇಲೆ ಮತ್ತೆ ಒಂಟಿ, ತೆರೆದಿದೆ ಬಯಲು, ಈ ಖಾಲಿಪಾತ್ರೆಯ ತುಂಬ ಜೀವರಸ ತುಂಬಲು ಜಂಗಮನೇ ನಿನ್ನೊಡನೆ ಬರಲಿ ತೇರು".
ದೇವರು ಇದ್ದಾನೆಯೋ ಇಲ್ಲವೋ? ಇರುವುದಾದರೆ ಎಲ್ಲಿದ್ದಾನೆ? ಎನ್ನುವಂಥ ಮೂರ್ಖ ಪ್ರಶ್ನೆಗಳು ಕೇಳತೊಡಗಿ ಸಾವಿರಾರು ವರ್ಷಗಳೇ ಕಳೆದುಹೋಗಿವೆ. ಕಿರು ತೆರೆಗಳಲ್ಲಿ ಆ ಸಂಬಂಧವಾದ ತಲೆಹರಟೆಯ ಭರಾಟೆ ಜನರಿಗೆ ದೈವಭಕ್ತಿಯ ಅಮಲೇರಿಸಿ ಅವರನ್ನು ಅರೆಮರುಳರನ್ನಾಗಿ ಮಾಡತೊಡಗಿದೆ. ಎಲ್ಲ ಪ್ರಜ್ಞಾವಂತರು, ವಿಚಾರವಂತರು ದೇವರಿಗಾಗಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸದೆ, ಅದೊಂದು ಚರ್ಚೆಯ ವಿಚಾರವೇ ಅಲ್ಲವೆಂಬಂತೆ ಲೌಕಿಕದ ಉಳಿದ ಕೆಲಸಗಳತ್ತ ಗಮನ ಕೊಟ್ಟಿದ್ದಾರೆ. ಬೇಡ ಬೇಡ ಅಂದರೂ ದೇವರ ವಿಷಯ ಬಿಡದ ಮಾಯೆಯಂತೆ ಎಲ್ಲೋ ಎಂತೋ ಧುತ್ತನೆ ಎದುರು ನಿಲ್ಲುತ್ತದೆ. ಎಲ್ಲರೂ ಈ ಗೊಂದಲ ಪುರಾಣವನ್ನು ಹಾದುಕೊಂಡೇ ಹೋಗಬೇಕಾಗಿರುವುದರಿಂದ ಕಾತ್ಯಾಯಿನಿ ಒಂದು ಕುತೂಹಲಕಾರಿ ಪ್ರಶ್ನೆಯನ್ನು ಹಾಕಿಕೊಂಡು ಅದಕ್ಕೆ ಸ್ವಾರಸ್ಯಕರವಾದ ಕಲ್ಪನೆಯ ಉತ್ತರವನ್ನು ಹೀಗೆ ಕೊಟ್ಟಿದ್ದಾರೆ: “ಗರ್ಭಗುಡಿಯಲ್ಲೊಬ್ಬ ರಾಮ ಬಾಣವನ್ನು ಬಿಲ್ಲಿನ ಹೆದೆಗೇರಿಸಿಕೊಂಡು ನಗುತ್ತ ನಿಂತು ಬಿಟ್ಟ... ದೇವರ ಹೆಸರಿನಲ್ಲಿ ಜನ ನಾಯಿಗಳಂತೆ ಕಚ್ಚಾಡತೊಡಗಿದರು....... ದೇವರುಗಳು ಸಮಯ ನೋಡಿ ತಮ್ಮ ತಮ್ಮ ಮಂದಿರಗಳೊಳಗಿನಿಂದ ಹೊರ ಬಂದರು, ಬಾರನ್ನು ಹೊಕ್ಕು, ಸಿಗರೇಟು ಸೇದಿ ಹೊಗೆ ಬಿಡುತ್ತ ಕೋಮುವಾದ ಕುರಿತು ಚರ್ಚಿಸತೊಡಗಿದರು. ಬಲಪಂಥೀಯರು ಶುದ್ಧಿಯಲ್ಲಿ ತೊಡಗಿದರೆ, ಎಡಪಂಥೀಯರ ಪುಸ್ತಕಗಳು ಚರ್ಚಿಸತೊಡಗಿದವು”. ಅಂದರೆ ಗುಡಿ ಚರ್ಚು ಮಸೀದಿಗಳಲ್ಲಿರುವವರಿಗೂ ದೇವರು ಬೇಕಾಗಿಲ್ಲ. ತಮ್ಮ ಚರ್ಚೆಯನ್ನು ಜೀವಂತ ಇಡುವುದಕ್ಕಾಗಿ ದೇವರು ಎನ್ನುವ ಬೆದರುಗೊಂಬೆ ಬೇಕು ಅಷ್ಟೇ! ಹಾಗಾಗಿ `ದೇವರು ಎಲ್ಲಿದ್ದಾನೆ?’ ಎಂದು ಕವಿತೆ ಎತ್ತುವ ಪ್ರಶ್ನೆಗೆ ಕಾತ್ಯಾಯಿನಿ ನಿದರ್ಶನಗಳಲ್ಲಿ ಕೊಡುವ ಉತ್ತರ- ಭಕ್ತರ ಸ್ವಾರ್ಥಗಳಲ್ಲಿ, ಹುಚ್ಚುಗಳಲ್ಲಿ, ಮೌಢ್ಯಗಳಲ್ಲಿ ಎಂದು ಸ್ಪಷ್ಟವಾಗುತ್ತದೆ.
ಸಾವು ಅನಿವಾರ್ಯವೆಂದು ಗೊತ್ತಿದ್ದರೂ ಸಾಯುವುದು ಯಾರಿಗೂ ಇಷ್ಟವಿಲ್ಲ, ಸಾಯುವ ಸಂದರ್ಭ ಬಂದೇ ಬಿಟ್ಟಿತು ಎಂದು ಸುಳಿವು ಸಿಕ್ಕಾಗಲೂ ಇನ್ನಷ್ಟು ಕಾಲ ಬದುಕಬೇಕು ಎನ್ನುವ ಆಸೆ ಮೊಳಕೆಯೊಡೆಯುತ್ತದೆ. ಆದರೆ ಬದುಕಿನ ಅನಂತ ಸಂಕಟ ಸಮಸ್ಯೆಗಳಿಗೆ ಸಾವಿನಲ್ಲಿ ಪರಿಹಾರ ಕಂಡುಕೊಂಡ ಹೆಣ್ಣುಮಗಳಿಗೆ ಕ್ಷಣಕಾಲ ಮತ್ತೆ ಜೀವಕೊಟ್ಟು “ಇನ್ನಷ್ಟು ಕಾಲ ಬದುಕುವ ಅವಕಾಶ ಕಲ್ಪಿಸುತ್ತೇನೆ” ಎಂದರೆ ಆಕೆ ಕೊಡುವ ಉತ್ತರ ಎಷ್ಟೊಂದು ಮಾರ್ಮಿಕವಾಗಿರಬಹುದೆಂದು `ನಾನಿಂದು ಸತ್ತಿರುವೆ’ ಕವಿತೆಯ ಆರಂಭದ ಸಾಲುಗಳು ಸೂಚಿಸುತ್ತವೆ: “ನಾನಿಂದು ಸತ್ತಿರುವೆ, ಅತ್ತು ಅತ್ತು ಮತ್ತೆ ಎಬ್ಬಿಸಬೇಡ, ಮತ್ತೆ ಮತ್ತೆ ಸಾಯುವ ಗೊಡವೆ ನನಗೆ ಬೇಡ, ಮತ್ತೆ ಮತ್ತೆ ಏಳುವ ಏಳು ಲೋಕವೂ ಬೇಡವೇ ಬೇಡ".
ಹೀಗೆಯೇ “ಪುರಾಣ ಚರಿತ್ರೆ ದಂತಕಥೆಗಳ ಆದ್ಯಂತ ನೊಂದು ಬೆಂದು ಕಾಲ ಸಂದ ಹೆಣ್ಣು, ಮಡದಿ ಮಗಳು ಅಕ್ಕ ತಂಗಿ ನಾದಿನಿ ಅತ್ತೆ, ಮತ್ತೆ ಮೆರವಣಿಗೆ ಮರಳಿ ಸಂಭವಿಸಿ ಇಳೆಯಲಿ, ವರ್ತಮಾನದ ಭಾವದಾಳವಾಗಿ ಪಟ್ಟುಪಾಡು, ಕುತಂತ್ರಗಳ ಬಲಿಪೀಠ ಹತ್ತಿ ಬಲಿಪಶುವಾಗಿ ಅತ್ತು, ನಡೆಯುತ್ತಾಳೆ ವಾನಪ್ರಸ್ಥಕೆ ಹೆಣ್ಣು” ಎನ್ನುವ `ಸೋತರೂ’ ಕವಿತೆ, “ತುಂಬ ತಡವಾಗಿ ಬಿಟ್ಟಿದೆ ಈಗ, ತಂಬೂರದ ತಂತಿ ತುಂಡಾಗಿದೆ, ಅವಳ ಹೆಣ್ಣು ಭಾವಗಳು ಸತ್ತಿವೆ, ಎದೆಯಲ್ಲಿ ಹೂವು ಕಲ್ಲಾಗಿದೆ, ದೇಹವೀಗ ಒಂದು ಗೋರಿಯಾಗಿಬಿಟ್ಟಿದೆ, ಒಳಗೆ ಜೀವವು ಧ್ಯಾನ ಮಾಡುತ್ತಿದೆ. ಪ್ರಾಣಸ್ತಂಭನ ಸನ್ಯಾಸಿನಿಯಂತೆ” ಎನ್ನುವ `ಹೆಣ್ಣೆಂದರೆ’ ಕವಿತೆ, “ಮರೆತುಬಿಡು, ಲೇಖನಿಯ ಏಳು ಸಾಗರದಾಚೆಗೆಸೆದು, ನಾನು ನಾನಾಗಬೇಕಿದೆ, ರಾಗ ದ್ವೇಷಗಳ ಬಂಡೆ ಎದೆಯನ್ನೇರಿದೆ, ಬೇರೂರಿ ನೆತ್ತರು ಹೀರುತ್ತಿರುವ ಅದನ್ನು, ಕಿತ್ತೆಸೆಯಲು ಸಮಯ ಬೇಕಿದೆ, ಹೃದಯದ ನಾಲಗೆಯನ್ನು ಉಪ್ಪಿನಲ್ಲಿ ಹಾಕಿ, ಮನದ ಜಾಡಿಯನ್ನು ಅಟ್ಟದಲ್ಲಿ ಬಾಯ್ಕಟ್ಟಿ ಇಟ್ಟಿರುವೆ, ಕ್ಷಮಿಸಿಬಿಡು, ನನಗೆ ನಾಲಗೆಯಿಲ್ಲ” ಎನ್ನುವ `ನಾನು ನಾನಾಗಬೇಕಿದೆ’ ಕವಿತೆ, “ಹೆಣ್ಣಾದುದ್ದಕ್ಕೇ ಬರೆ ಎಂದೆಯಾ? ಮನದ ವಿಷವನ್ನು ಶಾಯಿಯಾಗಿಸಿ ಬರೆಯುವುದು ಅಷ್ಟು ಸುಲಭವೇನು? ಕೆಂಡದಲ್ಲಿ ಕಾದ ಸಟ್ಟುಗಗಳು ಸುತ್ತುತ್ತಿವೆ, ಅವಮಾನದ ಮೆಟ್ಟುಗಳು ಮುತ್ತುತ್ತಿವೆ, ಬರೆದಷ್ಟೂ ಸುಡುವ ಬರೆಗಳಲ್ಲಿ ನರಳಲೇನು?" ಎನ್ನುವ `ಹೆಣ್ಣಾದುದ್ದಕ್ಕೆ’ ಕವಿತೆ, `ನೆತ್ತರು ಮಾಂಸಗಳು’ ತುಂಬಿಕೊಂಡ ಅಸ್ಥಿಪಂಜರವನ್ನು, ಸುತ್ತುವ ಚರ್ಮದ ಸೀರೆ, ಫ್ರಾಕÀು ಚೂಡಿದಾರು ಜೀನ್ಸುಗಳಿಗಾಗಿ, ಹುಡುಕಿ ಅಲೆದು ದಣಿದಿದ್ದೇನೆ, ಈ ಅಂಗಿ ಮಾಸಲಾಗಿದೆ, ಆತ್ಮಕ್ಕೆ ಚಿಂತೆ ಹಿಡಿದಿದೆ, ಈ ಚರ್ಮದಂಗಿ ಕಳಚಿ ಹೊರಬಂದು, ಬಯಲಲ್ಲಿ ಬತ್ತಲಾಗಲು ಆತ್ಮವು ಹಾತೊರೆಯುತ್ತಿದೆ” ಎನ್ನುವ `ಈ ಅಂಗಿ’ ಕವಿತೆ, “ನಮ್ಮಿಬ್ಬರ ಹುಟ್ಟಿಗೇ ಅಂಟಿಕೊಂಡುಬಿಟ್ಟಿದೆ ಜಾತಿ, ಅವುಗಳನ್ನು ಕಾಪಾಡಲೆಂದೇ ಹುಟ್ಟಿದೆ ದೇವರು, ಬಯಲಿಗೆ ಬಂದು ನಿಲ್ಲುವ, ನೋಡಬೇಕು ನಾನು ನಮ್ಮಿಬ್ಬರ ದೇವರು ಹಸ್ತಲಾಘವ ಮಾಡುವುದನ್ನು, ಇಬ್ಬರೂ ಅಪ್ಪಿಕೊಂಡು ಒಂದೇ ಬೆಳಕಾಗುವುದನ್ನು” ಎನ್ನುವ `ನನ್ನ ನಿನ್ನ ದೇವರು’ ಕವಿತೆ - ಇವು ಈ ಸಂಕಲನದಲ್ಲಿರುವ ಅತ್ಯುತ್ತಮ ಕವಿತೆಗಳಲ್ಲಿ ಕೆಲವು ಮಾತ್ರ. `ಕಾಯಕಾವ್ಯ’ಕ್ಕೆ ಕೈಗನ್ನಡಿ ಹಿಡಿದಿರುವ ಕಾತ್ಯಾಯಿನಿಯ ಅಣ್ಣ ಹಿಂದುಸ್ತಾನಿ ಗಾಯಕ ಪಂ. ರವಿಕಿರಣ ಮಣಿಪಾಲ "ಬೇಂದ್ರೆ, ಕುವೆಂಪು ಅಡಿಗರ ಕವಿತೆಗಳ ಓದಿನಿಂದ ಪ್ರಭಾವಿತಳಾಗಿರುವ ಕಾತ್ಯಾಯಿನಿ ನವೋದಯದ ಪ್ರಾಸ, ಲಯ, ನಾದ, ಛಂದಸ್ಸು, ನವ್ಯದ ಮುಕ್ತತೆ ಮತ್ತು ಎಲ್ಲವನ್ನೂ ಒಡಲುಗೊಳ್ಳುವ ಗುಣಗಳನ್ನು ದುಡಿಸಿಕೊಂಡು ತನ್ನದೇ ಆದ ಕಾವ್ಯಮಾರ್ಗವನ್ನು ತೆರೆಯಲು ಪ್ರಯತ್ನಿಸಿದ್ದಾಳೆ” ಎಂದು ಉದಾಹರಣೆಗಳೊಂದಿಗೆ ಗುರುತಿಸಿರುವುದು ಸಮರ್ಪಕವಾಗಿದೆ.
ವಚನಕಾರರು ತಮ್ಮೊಳಗಿನ ಅಳಲು, ಬೇಗುದಿ, ತಹತಹ, ಕಳವಳಗಳನ್ನು ತೋಡಿಕೊಳ್ಳಲು `ಅಂಕಿತ’ಗಳನ್ನು ಸೃಷ್ಟಿಸಿಕೊಂಡಂತೆ ಕಾತ್ಯಾಯಿನಿಗೆ ಅಕ್ಕ ಇದ್ದಾಳೆ. `ಅಕ್ಕ ಕೇಳವ್ವ’ ಅಂಕಣಕಾರ್ತಿಯಾಗಿರುವ ಕಾತ್ಯಾಯಿನಿಯ ಭಾವ ಪ್ರಪಂಚ ಮತ್ತು ಅನುಸರಣೆಯ ಸಂಕಲ್ಪದಲ್ಲಿ ಅಕ್ಕನೇ ಇದ್ದಾಳೆ. ಕಾತ್ಯಾಯಿನಿ ತನ್ನೊಳಗೆ ಇಳಿದು ಸಾವಕಾಶವಾಗಿ ಜಾಲಾಡಿ ಹೆಕ್ಕುವ ಸಂಗತಿಗಳು ಹೊರಜಗತ್ತಿನ ಶಬ್ದಾರ್ಥಗಳಲ್ಲಿ ಹಿಡಿಯಲಾಗದಂಥವು. `ಅಕ್ಕನ ಹಿಂದೆ ಹೆಜ್ಜೆ ನಾನು’ ಶೀರ್ಷಿಕೆಯಲ್ಲಿರುವ 50ಕ್ಕೂ ಹೆಚ್ಚಿನ ಮುಕ್ತಕಗಳು ಅನುಭಾವದ ಕಡೆಗೇ ಮುಖ ಮಾಡಿ ನಿಂತಿರುವುದು ಈ ಕಾರಣದಿಂದಾಗಿಯೇ. ಇದು ಅಧ್ಯಾತ್ಮದತ್ತ, ನಶ್ವರವಾದದತ್ತ, ಅತೀತದತ್ತ, ವಿರಾಗದತ್ತ, ಲೌಕಿಕದಿಂದ ಬಿಡುಗಡೆ ಬಯಸುವತ್ತ ಮನ ಹೊರಳಿದಾಗಲೆಲ್ಲ ಅದಕ್ಕೆ ಆಪ್ತ ಹೊರದಾರಿಯಾಗಿ ಕಾವ್ಯ ಸೃಷ್ಟಿಯಾದ ಪರಿ. ಹಾಗಾಗಿ ಅಕ್ಕನ ರೀತಿಯಲ್ಲೇ ಲೌಕಿಕ ಅನುಭವದ ಮಿತಿ ದಾಟಿ ಅನುಭಾವದ ಅತೀತದತ್ತ ಸಾಗಲು ಯತ್ನಿಸಿದ ಕವಿತೆಗಳ ಮಾದರಿಯೊಂದು `ಕಾಯಕಾವ್ಯ’ದಲ್ಲಿರುವುದು ನಿಚ್ಚಳವಾಗಿ ಕಾಣುತ್ತದೆ.

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಬೈರಮಂಗಲ ರಾಮೇಗೌಡ