Article

ಕಾರಂತಜ್ಜನ ನೆನಪಿಗೆ 'ಯಕ್ಷಗಾನ ಬಯಲಾಟದ ಸುತ್ತಮುತ್ತ'

ಸುದೀರ್ಘವಾದ ಉಲ್ಲೇಖದೊಂದಿಗೆ ಕಾರಂತರ ಪುಸ್ತಕಾವಲೋಕನಕ್ಕೆ ತೊಡಗೋಣ. ‘ಲಕ್ಷಣ ಶಾಸ್ತ್ರಗಳಿಗಿಂತ ಮುಂಚೆ ಕಲಾಸೃಷ್ಠಿಯಾಗುತ್ತದೆ. ಭಾಷೆಯ ಹುಟ್ಟು ಮೊದಲು, ವ್ಯಾಕರಣದ ಹುಟ್ಟು ಆ ಬಳಿಕ. ಪ್ರತಿಮೆ ಕುಣಿತ ಚಿತ್ರ ಹಾಡು ಇವೆಲ್ಲಾ ಮೊದಲು ಹುಟ್ಟಿಕೊಳ್ಳಬೇಕು. ಅಂಥಂತ ವಿಷಯಗಳಿಗೆ ಸಂಬಂಧಿಸಿದ ಶಾಸ್ತ್ರಗಳು ಹುಟ್ಟಿಕೊಳ್ಳುವುದಕ್ಕೆ ಹಲವೊಮ್ಮೆ ಶಾಸ್ತ್ರವೆಂಬುದು ಹುಟ್ಟಿಕೊಳ್ಳದೆಯೂ ರೂಢಿಯಿಂದಲೇ ಸಾಗಿ ಬಂದಿರುವ ಕಲಾ ಸಂಪ್ರದಾಯಗಳೂ ಜಗತ್ತಿನಲ್ಲಿವೆ. ಕಲಾವಿದನು ಮೊದಲು ಸೃಷ್ಠಿ ಮಾಡುತ್ತಾನೆ. ಅವನ ಸ್ಫೂರ್ತಿ ಪ್ರತಿಭೆಗಳ ಒತ್ತಡದಿಂದಾಗಿ ಕಲಾಸೃಷ್ಠಿಯಾಗುತ್ತೆ. ಜನರು ಅದನ್ನು ಕಂಡು ಮೆಚ್ಚಿ ಸಂತೋಷಗೊಂಡುದಾದರೆ ಅವಕ್ಕೆ ಮನ್ನಣೆ ಬಂದೇ ಬರುತ್ತದೆ. ಆಗ ಇತರರು ಆ ಬಗೆಯ ಸೃಷ್ಠಿಗಳನ್ನು ಅನುಕರಣೆ ಮಾಡುತ್ತಾರೆ. ಈ ಅನುಕರಣೆಯಿಂದ ಸಂಪ್ರದಾಯವೆಂಬುದು ಹುಟ್ಟಿಕೊಳ್ಳುತ್ತದೆ. ಸಂಪ್ರದಾಯದ ಸರ್ವಸಾಮಾನ್ಯ ನಿಯಮಗಳನ್ನು ಬರೆದಿಟ್ಟರೆ ಅದು ಶಾಸ್ತ್ರವಾಗುತ್ತದೆ. ಶಾಸ್ತ್ರಾನುಕರಣೆಯೆಂಬುದು ಸಂಪ್ರದಾಯವನ್ನು ಕಾಯುವುದಕ್ಕೆ ಸಹಾಯ ಮಾಡುತ್ತದೆ. ಅದು ಹುಟ್ಟಿದ ಆವರಣದಲ್ಲಿ ಅದೇ ಪದ್ಧತಿಯನ್ನು ಅನುಸರಿಸುವ ಕಲಾಕೃತಿಗಳನ್ನು ಜನರು ತಿಳಿಯುವ ಕೆಲಸ ಅದರಿಂದಾಗಿ ಸುಲಭವಾಗುತ್ತದೆ’. ಇದು ಕಾರಂತರ ಯಕ್ಷಗಾನ ಬಯಲಾಟದ ತಾತ್ವಿಕತೆಯೂ ಹೌದು. ಮಾನವಶಾಸ್ತ್ರೀಯ ನೆಲೆಯಲ್ಲಿ ಕಲಾಪ್ರಕಾರವೊಂದನ್ನು ಜೀವವಿಕಾಸದ ಹಂತಗಳ ಮೂಲಕ ಅರ್ಥೈಸಿಕೊಳ್ಳಬಹುದಾದ ಮಾರ್ಗವೂ ಹೌದು.

ಯಕ್ಷಗಾನವನ್ನಾಗಲಿ ಬಯಲಾಟವನ್ನಾಗಲಿ ಕುರಿತು ಸಂಶೋಧನೆ, ಅಧ್ಯಯನಕ್ಕೆ ತೊಡಗುವವರು ಗಮನಿಸುವ ಮತ್ತು ಗಮನಿಸಬೇಕಾದ ಕೃತಿ ಡಾ. ಶಿವರಾಮ ಕಾರಂತರ ‘ಯಕ್ಷಗಾನ ಬಯಲಾಟ’. ವಿಷಯ, ಪಾಂಡಿತ್ಯ ಘನತೆಯನ್ನು ಗಮನಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿದೆ. ವಿಚಿತ್ರ ಮತ್ತು ಸಂಕ್ರಮಣ ಸಂದಿಗ್ಧ ಕಾಲದಲ್ಲಿ ಅವರ ಅಧ್ಯಯನ ಪ್ರಾರಂಭವಾಯಿತೆಂದು ಕಾರಂತರು ಹೇಳಿಕೊಂಡಿದ್ದಾರೆ. ಯಕ್ಷಗಾನ ಬಯಲಾಟದ ಕುರಿತ ಅವರ ಆಸಕ್ತಿ ಮತ್ತು ಬೆರಗುಗಳು ಕೃತಿಯ ಪ್ರತೀಪುಟದಲ್ಲೂ ಕಾಣತೊಡಗುತ್ತವೆ. ಬಯಲಾಟ ಪರಂಪರೆಯು ಈ ನಾಡಿನ ಸಾಂಸ್ಕøತಿಕ ಸುಭಗತೆಯ ಸುಂದರವಾದ ಅಂಗವಾಗಿರುವುದನ್ನು ಕಾರಂತರು ವಿವರಿಸುತ್ತಾ ಬಂದಿದ್ದಾರೆ. ಇದ್ದಕ್ಕಿದ್ದಂತೆ ಪ್ರಾದೇಶಿಕ ಅಂತರವನ್ನು ಗುರುತಿಸಿ ಬಯಲಾಟದಿಂದ ಯಕ್ಷಗಾನವನ್ನು ಪ್ರತ್ಯೇಕಿಸುವ ಕಾರಂತರು ‘ಮಲೆನಾಡಿನ ನಿವಾಸಿಗಳ ಭಾವ ಜೀವನವು ವಿಶೇಷವಾಗಿ ಪರಿಣಾಮಕಾರಿಯಗಿ ಪ್ರಕಟವಾದೊಂದು ಸಾಧನವಿರುವುದಾದರೆ ಅದು ನಮ್ಮ ಯಕ್ಷಗಾನ ಕಲೆಯಲ್ಲಿ’ ಎಂದು ಪ್ರಾದೇಶಿಕ ಭಾವನಾತ್ಮಕತೆಗೆ ಒತ್ತು ಕೊಡುತ್ತಾರೆ. ಬಯಲಾಟದ ನೆಲೆಯ ಕಾರಂತರ ಅರಿವು ಕ್ಷೀಣವಾಗೋದು ಇಲ್ಲಿಂದ.

ಆರಂಭಿಕ ಹಂತದಲ್ಲಿ ಜಾನಪದೀಯ ಅಧ್ಯಯನಗಳು ಆತಂಕವಾದಿ ಮತ್ತು ರಸನಿಷ್ಠನೆಲೆಯಲ್ಲಿ ನಡೆದಿರುವಂತೆಯೇ ಮೌಖಿಕ ಪರಂಪರೆಯ ಬಯಲಾಟದ ಅಧ್ಯಯನಗಳೂ ಅದೇ ನೆಲೆಯಲ್ಲಿ ನಡೆದಿರುವುದು ಕಂಡುಬರುತ್ತದೆ. ‘ನಮ್ಮಿ ಕಲಾ ಸಂಪತ್ತನ್ನು ಉಳಿಸಿ ಬೆಳೆಸಿ ಕಾಪಾಡಿಕೊಳ್ಳದಿದ್ದರೆ ಇನ್ಯಾರು ಆ ಕೆಲಸ ಮಾಡಬೇಕೆಂಬ’ ಮನೋಭಾವ ಕಾರಂತರ ಅಧ್ಯಯನದ ಆಶಯವಾಗಿದೆ. ಶಿಷ್ಟಸಾಹಿತ್ಯಕ ಮೀಮಾಂಸೆಯ ದೃಷ್ಠಿಕೋನದಲ್ಲಿ ಬಯಲಾಟವನ್ನು ಶಾಸ್ತ್ರೀಯ ಅಧ್ಯಯನದ ಮಿತಿಗೆ ಒಳಪಡಿಸುತ್ತಾರೆ. ಕಾರಂತರು ಶಿಷ್ಟ ಮತ್ತು ದಾಖಲು ಆಧಾರಗಳನ್ನು ಗಮನದಲ್ಲಿಟ್ಟುಕೊಂಡು ಬಯಲಾಟದ ಪ್ರಾಚೀನತೆಯನ್ನು ಗ್ರಹಿಸಲು, ಸೌಂದರ್ಯಶಾಸ್ತ್ರದ ಮೂಲಕ ಯಕ್ಷಗಾನವನ್ನು ಅಧ್ಯಯನ ಮಾಡಲು ತೊಡಗುತ್ತಾರೆ. ‘ಈ ದೃಷ್ಠಿಯಿಂದ ಮುಖ್ಯತಃ ಸೌಂದರ್ಯಶಾಸ್ತ್ರದ ದೃಷ್ಠಿಯಿಂದ ಯಕ್ಷಗಾನ ಬಯಲಾಟದ ಅಭ್ಯಾಸಕ್ಕೆ ಹೊರಟವನು ನಾನು’ ಎಂದು ಹೇಳಿಕೊಂಡಿದ್ದಾರೆ. ಮುಂದುವರಿದಂತೆ ‘ಸಂಸ್ಕøತ ನಾಟಕ ಪದ್ಧತಿಯನ್ನು ನೋಡಿಯೇ ಇದು ಬೆಳೆದುದಿರಬೇಕು ಸಭಾಲಕ್ಷಣದಂತ ಶಾಸ್ತ್ರಕಾವ್ಯದಲ್ಲಿ ಭರತನ ನಾಟ್ಯಶಾಸ್ತ್ರದ ಛಾಯೆ ಚೆನ್ನಾಗಿ ಕಾಣಿಸುತ್ತದೆ’ ಎನ್ನುತ್ತಾರೆ.

ಶಿವರಾಮ ಕಾರಂತರ ಪುಸ್ತಕದ ದೃಷ್ಟಿಕೋನವನ್ನು ವಿದ್ವಾಂಸರು ಇಮ್ಮುಖವಾಗಿ ಗಮನಿಸಿದ್ದಾರೆ. ನಿರೀಕ್ಷೆಗೂ ಮೀರಿ ಜನಪ್ರಿಯವಾದರೂ ಅದರಲ್ಲಿನ ಮಿತಿಗಳನ್ನು ಕಡೆಗಣಿಸದ ಅನೇಕರು  ಈ ಕೃತಿಯ ವಸ್ತುನಿಷ್ಟತೆಯನ್ನು ಪ್ರಶ್ನಿಸಿದ್ದಾರೆ. ಪ್ರಾದೇಶಿಕ ಮತ್ತು ಮೈತ್ರಿಯ ಪೂರ್ವಾಗ್ರಹದ ಛಾಯೆ ಕೃತಿಯಲ್ಲಿ ಢಾಳಾಗಿ ಕಂಡು ಬರುವುದನ್ನು ಯಾರೂ ಕಡೆಗಣಿಸಲಾರರು. ಶುದ್ದಕಲೆಯ ಮೂಲಮಾಪನದ, ರಸನಿಷ್ಟತೆಯ ದೃಷಿಕೋನದಲ್ಲಿರುವ ಮಿತಿಗಳು ಕೃತಿಯಲ್ಲಿವೆ. ‘ಜನಪದ ರಂಗಭೂಮಿಗೆ ಸಂಬಂಧಿಸಿದಂತೆ  ‘ಯಕ್ಷಗಾನ ಬಯಲಾಟ’ ಎಂಬ ಹೆಸರಿನಲ್ಲಿ ಸಾಕಷ್ಟು ಗಾತ್ರದಲ್ಲಿ ಹೊರಬಿದ್ದ ಡಾ. ಶಿವರಾಮ ಕಾರಂತರ ಕೃತಿ ಪಡುವಲಪಾಯ ಯಕ್ಷಗಾನಕ್ಕೆ ಸೇರಿದ್ದಾದರೂ ಅದರಲ್ಲಿಯೂ ಬಡಗುತಿಟ್ಟನ್ನು ಮಾತ್ರ ಒಳಗೊಂಡದ್ದು  ಎಂಬುದು ಗಮನಾರ್ಹ. ತೆಂಕುತಿಟ್ಟು ಹೆಸರಿಗಷ್ಟೇ ಇರುವಂತಹದು ಎಂದು ಹೇಳುವ ಅವರು ಮೂಡಲಪಾಯ ಯಕ್ಷಗಾನದ ಪ್ರಸ್ತಾಪವನ್ನೇ ಎತ್ತದಿರುವುದು ಆಶ್ಚರ್ಯ’. ‘ಡಾ. ಕೆ. ಶಿವರಾಮ ಕಾರಂತರು ಬಯಲಾಟದ ಆಂಗೋಪಾಯಗಳಲ್ಲಿ ದೇಶೀಯ ಮೂಲವನ್ನು ಗುರುತಿಸುತ್ತಾರಾದರೂ ಅದರ ಒಟ್ಟುರೂಪಕ್ಕೆ ಸಂಬಂಧಿಸಿದಂತೆ ನಿರ್ಣಯಿಸುವಾಗ ಬೇರೆ ನಿಲುವನ್ನು ತಾಳುತ್ತಾರೆ.’ ಇವೆರಡು ಆರೋಪಗಳನ್ನು ಮೀರಿಯೂ ಕಾರಂತರ ಕೃತಿಯನ್ನು ತರಾಟೆಗೆ ತೆಗೆದುಕೊಂಡವರ ಪಟ್ಟಿ ದೊಡ್ಡದಿದೆ. 

ಮತ್ತೊಂದು ಆರೋಪವನ್ನು ಗಮನಿಸುವುದಾದರೆ ‘ಡಾ. ಶಿವರಾಮಕಾರಂತರು ಯಕ್ಷಗಾನದಲ್ಲಿ ಇತ್ತೀಚೆಗೆ ಹೊಸ ಹೊಸ ವಾದ್ಯವಿಶೇಷಗಳನ್ನು ಜಾರಿಗೆ ತರುತ್ತಿರುವುದು ಯಾವ ದೃಷ್ಟಿಯಿಂದ ಕ್ಷೇಮವೊ ಯೋಚಿಸಬೇಕಾಗಿದೆ. ತೀರಾ ಅತ್ಯಾಧುನಿಕವಾದ ವಾದ್ಯಗಳನ್ನು ಅದರಲ್ಲಿ ಲೀನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಯಕ್ಷಗಾನ ಕಲೆಯಲ್ಲಿ ನಾವೀನ್ಯತೆಯನ್ನು ಸಾಧಿಸಿದಂತಾಗುತ್ತದೆಯೇ ಹೊರತು ಮೂಲಸ್ವರೂಪವನ್ನು ಉಳಿಸಿಕೊಡಂತೆ ಆಗುವುದಿಲ್ಲ. ಪಡುವಲಪಾಯದ ಯಕ್ಷಗಾನ ಬಯಲಾಟ ಸಾಕಷ್ಟು ಹೆಸರುಗಳಿಸಿ ಕೀರ್ತಿಪತಾಕೆಯನ್ನು ಎತ್ತಿ ಹಿಡಿದಿದೆಯಾದರೂ, ಅದು ಹಣದ ದೃಷ್ಟಿಯಿಂದ ಪೈಪೋಟಿಗೆ ನಿಂತ ಮೇಲೆ ಸಾಕಷ್ಟು ಪರಿಷ್ಕಾರಕ್ಕೆ ಒಳಗಾಗಿದೆ ಎಂಬುದೂ ಅಷ್ಟೇ ಸತ್ಯ’. ‘ಯಕ್ಷಗಾನ’ ಎಂಬ ಕೃತಿಯಲ್ಲಿ ಕುಬಣೂರು ಬಾಲಕೃಷ್ಣರಾವ್‍ರವರು ಕಾರಂತರ ಯಕ್ಷಗಾನ ಬಯಲಾಟ ಕೃತಿಯನ್ನು ಕುರಿತಾಗಿ ಅನೇಕ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದಾರೆ. ಯಕ್ಷಗಾನ ಬಯಲಾಟವನ್ನು ಕುರಿತು ಕಾರಂತರಲ್ಲಿ ಎಷ್ಟು ದ್ವಂಧ್ವಗಳಿದ್ದವೋ ಬಾಲಕೃಷ್ಣರಾವರಲ್ಲಿಯೂ ಅಷ್ಟೇ ದ್ವಂದ್ವಗಳಿವೆ. ಇಬ್ಬರಲ್ಲೂ ಕಂಡು ಬರುವ ಖಚಿತ ನಿಲುವಿನ ಕೊರತೆ ಇದಕ್ಕೆ ಕಾರಣವಿರಬೇಕು. ಕುಬಣೂರು ಬಾಲಕೃಷ್ಣರಾವ್‍ರವರು ಆರಂಭದಲ್ಲಿಯೇ ವಿಷಯವನ್ನು ಬಿಟ್ಟು ಧರ್ಮಭೋದೆ ಮಾಡುತ್ತಾ ಕೂತಿದ್ದಾರೆ. ಕಾರಂತರು ಅದ್ರಾವಿಡ ಆಲೋಚನೆಯ ಮೂಲಕವೇ ಯಕ್ಷಗಾನವನ್ನು ವಿವರಿಸುತ್ತಾರೆ ಎಂಬುದನ್ನು ಮಾತ್ರ ಲೇಖಕರು ಎಲ್ಲಿಯೂ ಪ್ರಸ್ಥಾಪಿಸುವುದಿಲ್ಲ. 

ಡಾ. ಶಿವರಾಮ ಕಾರಂತರು ಯಕ್ಷಗಾನದ ಅರ್ಥ ಹುಡುಕುವಾಗ ಪ್ರಾಚೀನತೆಯ ಮುಖದೆಡೆಗೆ ಕಾಲು ಚಾಚುತ್ತಾರೆ. ಯಕ್ಷ ಪದೋತ್ಪತ್ತಿಯ ಜಾಡು ಹಿಡಿದು ಯಕ್ಷಿಣಿಯೇ ಕನ್ನಡದ ಜಕ್ಕಣಿ. ಹೆಂಗಸರಿಗೆ ಬರುವ ಜಗ್ಗಣಿ ಎನ್ನುವವನೋ ವಿಕಾರವೇ? ಜಕ್ಕಣಿಯನ್ನು ದೆವ್ವವೆಂದು ನಂಬಿ ಪೂಜಿಸುವ ಸಂಪ್ರದಾಯದ ಪೂಜಾಪದ್ಧತಿಯಿಂದ ಯಕ್ಷಗಾನ ಹುಟ್ಟಿಕೊಂಡಿತೇ? ಎಂದು ಅನುಮಾನಿಸುತ್ತಾರೆ. ಯಕ್ಷರು ಎಂದರೆ ಕಾಮರೂಪಿಗಳು ಎಂಬುದನ್ನು ಕಾರಂತರು ಅರ್ಥ ಮಾಡಿಕೊಂಡಿದ್ದರೆ ಯಕ್ಷಗಾನದ ಅವರ ದೃಷ್ಠಿಕೋನಗಳೇ ಬೇರೆಯಾಗಿರುತ್ತಿದ್ದವು. 

ಯಕ್ಷಗಾನದ ವಿಷಯದಲ್ಲಿ ಕಾರಂತರು ಶಿವನ ಡಮರುಗದ ಸಂಕೇತವನ್ನು ನೀಡಿದ್ದು ಬಹುಸೂಕ್ತವಾಗಿದೆ. ಢಮರುಗವು ಪುರುಷ ಮತ್ತು ಸ್ತ್ರೀಯ ಸಂಯೋಗಕ್ರಿಯೆಯನ್ನು ಸಾರುವ ಪ್ರಾದಿಮ ವಾಧ್ಯವಾಗಿದೆ. ಡಮರುಗದ ನಡುವಿನ ಕೇಂದ್ರಸ್ಥಾನವು ಪರಸ್ಪರ ಮುಖಾಮುಖಿತ್ವದ ಸಮನ್ವಯತೆಯನ್ನು ಸಂಯೋಗದ ಸೇರುವಿಕೆಯನ್ನು ಕಾಣಿಸುತ್ತದೆ. ಶಿವನಮೂರ್ತಿಯನ್ನು ಅರ್ಧನಾರೀಶ್ವರನ ಕಲ್ಪನೆಯಲ್ಲಿ ಗ್ರಹಿಸಿದಾಗ್ಯೂ ಆತನ ವಾಧ್ಯವೂ ಎರಡು ಭಿನ್ನ ಲಿಂಗಗಳನ್ನು ಹೊತ್ತ ಏಕರೂಪಿಯಾಗಿದೆ. ಎರಡು ಬದಿಗಳ ತಳಭಾಗವು ಕೇಂದ್ರದಲ್ಲಿ ಸಂದಿಸುತ್ತದೆಯಲ್ಲದೆ ಹೊರಡುವ ಓಂಕಾರ ನಾದವು ಸೃಷ್ಟಿಯ ಮೂಲನಾದವೆಂದು ಗುರುತಿಸಬೇಕಾಗಿದೆ. ನಾದ ಹೊರಡಿಸುವ ಎರಡು ದಾರಗಳು ಪ್ರತಿಮುಖ ದಾರಿಯಲ್ಲಿ ಮೈಯನ್ನು ಘರ್ಷಿಸುತ್ತವೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕಾಗಿದೆ. ಮಾಂತ್ರಿಕ ಆಚರಣೆಗಳ ಮೂಲದಲ್ಲಿ ಆದಿಕ್ರಮದಲ್ಲಿ ಸ್ತ್ರೀ ಇದ್ದರೂ ನಂತರದ ದಿನಮಾನಗಳಲ್ಲಿ ಸ್ತ್ರೀ ಮತ್ತು ಪುರುಷ ಸಂಯೋಗದ ಸಮನ್ವಯದ ಶಿವಲಿಂಗಪೂಜೆಯನ್ನು ಈ ನೆಲೆಯಲ್ಲಿ ಸಮೀಕರಿಸಲಾಗಿದೆ. ಲಕ್ಷ್ಮಿಪತಿ ಕೋಲಾರ ಅವರು ಈ ವಿಷಯದ ಮೇಲೆ ಒಳನೋಟಗಳುಳ್ಳ ಸಂಶೋಧನೆ ಮಾಡಿದ್ದಾರೆ. 

ನಾಗಮಂಡಲ ಫಲವಂತಿಕೆಯ ವಿಧಿಯಾಚರಣೆಯ ಪುನರಭಿನಯವೆಂಬುದು ಅದರ ಸಂವಿಧಾನದಲ್ಲಿ ಸಷ್ಟವಾಗುತ್ತದೆ. ಬಯಲಾಟದ ತಳಹದಿಯಾದ ನಾಗಮಂಡಲ ವರ್ತಮಾನದಲ್ಲೂ ಬಯಲಾಟದೊಂದಿಗೆ ಐಡೆಂಟಿಟಿಯನ್ನು ಉಳಿಸಿಕೊಂಡಿದೆ. ಕಾರಂತರು ಸಹ, ನಾಗಮಂಡಲವು ಇತರ ಜಾನಪದ ಕುಣಿತಗಳಂತೆ ಇದು ಕೇವಲ ಹಿಗ್ಗು, ಉತ್ಸಾಹ, ವೀರಾವೇಶ ಮೊದಲಾದುವನ್ನು ಪ್ರಕಟಿಸುವ ಬದಲು ಭಾವರಸಗಳ ಪ್ರೇರಣೆಯ ಕಾರಣವನ್ನೂ ಸೂಕ್ಷ್ಮ ವಿಸ್ತಾರಗಳನ್ನೂ ಹೇಳಲು ಪ್ರಯತ್ನಿಸಿತು. ಹಾಡುಗಳ ಮೂಲಕ ಪ್ರಕೃತಿ ಪುರುಷರ ಕಲಹಾಂತರಿಕ ಸ್ನೇಹಾಂತರಿಕ ಭಾವಗಳನ್ನು ಪ್ರಕಟಿಸುವ ಕುಣಿತವೆಂದು ಒಪ್ಪುತ್ತಾರೆ. ‘ಸಭಾಲಕ್ಷಣದಲ್ಲಿ ಈ ಆರಾಧನಾ ನೃತ್ಯಕ್ಕೇನೆ ಅದರ ಕರ್ತೃ ವಂದನೆಯನ್ನು ಆರಂಭದಲ್ಲಿ ಸಲ್ಲಿಸಿದ್ದಾನೆ. ಗಣಪತಿಯ ಸ್ತುತಿಯಾದ ನಂತರ ಆಟ ಮಂಡಲ ನಾಯಕನಾದ ಸೂರ್ಯರಾಯನಿಗೆ ಪೂಜೆ ಸಲ್ಲಿಸುವುದು ಕಾಣುತ್ತದೆ’. ಆಟದ ಮಂಡಲದ ನಾಯಕ ಸೂರ್ಯನೆಂದು ಕಾರಂತರು ಭಾವಿಸುತ್ತಾರೆ. ಆದರೆ ಮಂಡಲದ ನಾಯಕ ಸಸ್ಯದೇವತೆ ಹಾಗೂ ಫಲವಂತಿಕೆಯ ದೈವವಾದ ಚಂದ್ರನಾಗಿದ್ದಾನೆ. ರಾತ್ರಿಯಲ್ಲಿ ಬಯಲಾಟವಾಡುವ ಜನ ಸೂರ್ಯನಿಗೆ ನಮನ ಸಲ್ಲಿಸುತ್ತಾರೆಂಬುದು ಅಸಂಭವವಾಗುತ್ತದೆ. ಸೂರ್ಯನ ಕಿರಣವನ್ನೂ ಬೀಳಿಸಿಕೊಳ್ಳದ ಬಯಲಾಟದ ಜನ ಸೂರ್ಯನಿಗೆ ವಿರುಧ್ಧವಾದ ಆಚರಣೆಯಲ್ಲಿ ಸಾಂಸ್ಕøತಿಕ ಅನನ್ಯತೆಯನ್ನು ಸಾಧಿಸುತ್ತಾರೆ. ಇಂಥ ಕಡೆಯಲ್ಲೆಲ್ಲಾ ಕಾರಂತರ ವೈದಿಕಮನಸ್ಸು ಕಾರ್ಯ ನಿರ್ವಹಿಸುತ್ತದೆ. 

ಶಿವರಾಮ ಕಾರಂತರು ನಾಗಾರಾಧನೆಯ ಕುರಿತು ಸುದೀರ್ಘವಾಗಿ ಬರೆದಂತೆ ಹಲವರು ಬರೆದಿದ್ದರೂ ಔಚಿತ್ಯ ಅನಿಸುವಷ್ಟು ಮಾತ್ರ ಇಲ್ಲಿ ಪ್ರಸ್ತಾಪಿಸಲಾಗುತ್ತದೆ. ಕಾರಂತರು ಬರೆಯುವಂತೆ ದ.ಕ. ಜಿಲ್ಲೆಯಲ್ಲಿ ನಡೆಯುವಂಥ ಭೂತಾರಾಧನೆಯ ಸಂಪ್ರದಾಯಗಳು ಇತರೆಡೆಗೆ ನಡೆಯುವ ಸಂಪ್ರದಾಯಗಳಿಗಿಂತ ಭಿನ್ನವಾಗಿವೆ. ತಮಿಳುನಾಡಿನ ದೆವ್ವಗಳ ಆರಾಧನೆ ಇತರ ಭಾಗಗಳಲ್ಲಿಯೂ ಆದಿಮ ಮಾತಾಚಾರಗಳನ್ನು ನಡೆಸಿಕೊಂಡು ಬಂದರೂ ನಂತರದ ದಿನಮಾನಗಳಲ್ಲಿ ಆ ಪ್ರಾಂತ್ಯಕ್ಕೆ ಬಂದಿರಬಹುದಾದ ದ್ರಾವಿಡೇತರರ ಕೈ ಸೇರಿರಬೇಕು. ಆದರೂ ನೃತ್ಯಾರಾಧನೆಯನ್ನು ದ್ರಾವಿಡವರ್ಗವೇ ಇಂದಿಗೂ ನಡೆಸಿಕೊಂಡು ಬಂದಿರುವುದು ಕಂಡುಬರುತ್ತದೆ. ಭೂತಾರಾಧನೆಯ ಸಹಜ ಸೌಂದರ್ಯವೂ ಆದಿಮ ದಿನಮಾನದ ಸಹಜತೆಯೂ ನಾಗಮಂಡಲದ ಚಾರಿತ್ರಿಕ ಕ್ರಿಯೆಗಳೂ ಅರ್ಥವಾಗಬೇಕಾದರೆ ಈ ಆರಾಧನೆಯನ್ನು ನೋಡಬೇಕೆಂದು ಕಾರಂತರು ಬರೆಯುತ್ತಾರೆ. ‘ಪರಶುರಾಮನ ಮೂಲಕ ಈ ಪ್ರದೇಶಕ್ಕೆ ಪ್ರವೇಶ ಪಡೆದ ಬ್ರಾಹ್ಮಣರು ಇಲ್ಲಿನ ಮೂಲನಿವಾಸಿಗಳ ಜೊತೆಗೆ ವ್ಯವಹರಿಸಿದ ರೀತಿ, ಆರಂಭದಲ್ಲಿ ಸಂಘರ್ಷ ಹಾಗೂ ಆನಂತರದಲ್ಲಿ ಮಾಡಿಕೊಂಡ ಒಪ್ಪಂದ ಒಂದು ಬಗೆಯ ದ್ವಂದ್ವವನ್ನು ಸೃಷ್ಟಿಸಿ, ಅದೇ ಮುಂದುವರಿಯುವಂತೆ ಮಾಡಿತು. ಈ ಸಂದರ್ಭದಲ್ಲಿಯೇ ಸ್ಥಳೀಯ ಜನರ ನಾಗಾರಾಧನೆ ಬ್ರಾಹ್ಮಣರ ಆರಾಧನೆಯೂ ಆಗಿ ಬ್ರಾಹ್ಮಣೀಕರಿಸಲ್ಪಟ್ಟಿತು. ಅಷ್ಟೇ ಅಲ್ಲದೆ ನಾಗಾರಾಧನೆ ಪ್ರಭುತ್ವದ ಅಥವಾ ಅಧಿಕಾರದ ಸ್ಥರಗಳಲ್ಲಿಯೂ ಕಾಣಿಸಿಕೊಳ್ಳಲಾರಂಭಿಸಿತು. ತುಳುನಾಡನ್ನು ದೀರ್ಘ ಅವಧಿಯವರೆಗೆ ಆಳ್ವಿಕೆ ನಡೆಸಿದ ಆಳುಪರ ರಾಜಲಾಂಛನ ಐದು ಹೆಡೆಯ ಸರ್ಪ. ಆಳುಪರ ಶಾಸನಗಳಲ್ಲಿ ನಾಗನ ಹಾಗೂ ನಂತರ ನಾಗನೊಂದಿಗೆ ಸಮೀಕರಣಗೊಂಡ ಬ್ರಹ್ಮನ ಉಲ್ಲೇಖಗಳಿವೆ’12. ನಲ್ಕೆ, ಪರವ, ಪಂಬದ, ಪಾಣ, ಡೊಂಬ, ಮನ್ಸ ಸಮುದಾಯಗಳಲ್ಲಿ ಈ ಚಹರೆಗಳು ಘನವಾಗಿವೆ. 

ಭಾರತೀಯ ಆಚರಣಾಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ ನಾಗಾರಾಧನೆಯು ಪ್ರಾಚೀನ ಕುರುಹುಗಳನ್ನು ಹೊತ್ತು ಇಂದಿಗೂ ಸಾಗುತ್ತಿರುವುದು ಸ್ಪಷ್ಟವಾಗಿದೆ. ಸುಬ್ರಮಣ್ಯನೆಂದು ನಂಬುವ ನಾಗನು ಮೂಲತಃ ದ್ರಾವಿಡರ ದೈವ. ಮಲೆನಾಡಿನ ಹಾಗೂ ಬಯಲುಸೀಮೆಯ ಎರಡು ಸಂಪ್ರದಾಯಗಳಲ್ಲಿ ನಾಗನಿಗೆ ಸಲ್ಲುವ ಪೂಜಾವಿಧಾನಗಳಲ್ಲಿ ಮಲೆನಾಡಿನ ನಾಗನು ವೈದಿಕೀಕರಣಗೊಂಡವನಾದರೆ, ಬಯಲುಸೀಮೆಯ ನಾಗನು ಮೂಲಸ್ವರೂಪದ ಕ್ರಿಯಾಚರಣೆಯನ್ನು ಉಳಿಸಿಕೊಂಡಿದ್ದಾನೆ. ಕುಣಿತದ ಮೂಲಕ ನಡೆಸಲಾಗುವ ನಾಗಮಂಡಲ ನಾಗನ ಪ್ರಸ್ತುತತೆಯನ್ನು ಸಾರುತ್ತದೆ. ಬಯಲುಸೀಮೆಯ ದ್ರಾವಿಡ ಆಚರಣೆಗಳಲ್ಲಿ ಚಾಚೂ ತಪ್ಪದೆ ನಡೆಸುವ ಮಣೇವು ಆದಿಮತ್ವವನ್ನು ಉಳಿಸಿಕೊಂಡ ಕ್ರಿಯೆಯಾಗಿದೆ. ಆದಿಮ ಜನಾಂಗದ ನೃತ್ಯವಿಧಾನವನ್ನು ಪುರಭಿನಯಿಸುವ ನಾಗನ ಆಹಾರಕ್ರಮವನ್ನು ಪುನರ್‍ಕ್ರಿಯಿಸುವ ಮಣೇವು ಬಯಲಾಟದೊಂದಿಗೆ ನೇರ ಸಂಬಂಧವನ್ನು ಹೊಂದಿದೆ. ಬಯಲಾಟದಲ್ಲಿ ಕಿರಾತ ಹಾಗೂ ರಾಕ್ಷಸಪಾತ್ರಗಳ ಕುಣಿತ ಮತ್ತು ಆರ್ಭಟ ಮಣೇವಿನ ಸ್ವರೂಪದಲ್ಲಿವೆಯೆಂಬುದು ಸ್ಪಷ್ಟ. ಬಹುಶಃ ನಾಗಾರಾಧನೆಯ ಮೂಲಸ್ವರೂಪ ಮಣೇವು ಇರಬೇಕೆನಿಸುತ್ತದೆ.

ಯಕ್ಷಗಾನದ ಬಗ್ಗೆ ಅಪಾರ ತಿಳುವಳಿಕೆಯುಳ್ಳ ಕಾರಂತರಿಗೆ ಬಯಲಾಟವು ಯಕ್ಷಗಾನಕ್ಕಿಂತ ಪ್ರತ್ಯೇಕ ಅಸ್ತಿತ್ವ ಹೊಂದಿದೆಯೆಂಬ ಸ್ಪಷ್ಟ ತಿಳುವಳಿಕೆಯಿರಲಿಲ್ಲ. ಹೀಗಾಗಿಯೇ ಕೆಲವು ಕಡೆ ಯಕ್ಷಗಾನ ಮತ್ತು ಬಯಲಾಟ ಒಂದೇ ಎಂಬಂತೆಯು ಕೆಲವೆಡೆ ಬೇರೆ ಎಂಬಂತೆಯೂ ಬರೆಯುತ್ತಾರೆ. ಯಕ್ಷಗಾನ ಮತ್ತು ಬಯಲಾಟದ ಚರಿತ್ರೆಗೂ ಶಿಷ್ಟ ಆಕರಗಳನ್ನು ನಂಬುತ್ತಾರೆ. ಡಾ. ಕೆ.ಶಿವರಾಮ ಕಾರಂತರ ಪ್ರಯೋಗಗಳು ಬಯಲಾಟದ ಮೂಲಸ್ವರೂಪದ ಲಕ್ಷಣಗಳನ್ನು ಅಭಿವ್ಯಕ್ತಿಸುತ್ತವೆಯೋ, ನೀಗಿಸಿಕೊಳ್ಳುತ್ತಿವೆಯೋ ಎಂಬುದು ಅಸ್ಪಷ್ಟವಾಗಿದೆ. ಯಕ್ಷಗಾನದ ವಿಷಯವಾಗಿ ಆಕರಗ್ರಂಥ ಬರೆದು ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ಕಾರಂತರು ಯಕ್ಷಗಾನ ಮತ್ತು ಬಯಲಾಟದ ಅರ್ಥವಂತಿಕೆ, ಸಾಮ್ಯತೆ ಮತ್ತು ಭಿನ್ನತೆಗಳನ್ನು ಸ್ಪಷ್ಟವಾಗಿ ಬಿಡಿಸಿಕೊಳ್ಳುವುದಿಲ್ಲ. 

ಇಷ್ಟಾದರೂ, ಕಾರಂತರು ಒಮ್ಮೆ ಎದ್ದುಬಂದರೆ ತಬ್ಬಿಕೊಂಡು ‘ಇನ್ನೊಂದು ನೂರುವರ್ಷ ಯಾಕೆ ಬದುಕಲಿಲ್ಲ ಅಜ್ಜಾ’ ಎನ್ನಬೇಕೆನ್ನುವಷ್ಟು ಗೌರವವನ್ನು ಉಳಿಸಿಕೊಂಡೆ ಹೋಗಿದ್ದಾರೆ. 

ಪಿ. ಆರಡಿಮಲ್ಲಯ್ಯ ಕಟ್ಟೇರ