Article

ಕಾವ್ಯಕೃಷಿ ಆರಂಭಿಸಿ ಭರವಸೆಯ ಕವಿತೆಗಳ ಜಮಾ ಮಾಡಿದ ಶ್ರುತಿ

ಶೀರ್ಷಿಕೆಯಿಂದಲೇ ಗಮನ ಸೆಳೆದ ಶ್ರುತಿ ಅವರ ಮೊದಲ ಕವನ ಸಂಕಲನ ನನ್ನನ್ನು ತಲುಪಿದ ಮೊದಲನೇ ದಿನವೇ ಓದಿಸಿಕೊಂಡಿತ್ತು. ನನ್ನ ಸಮಕಾಲೀನರ ಪುಸ್ತಕಗಳನ್ನು ತುಂಬಾ ಆಸಕ್ತಿಯಿಂದಲೇ ಓದುವುದು  ಮತ್ತು ಪರಿಚಯಿಸುವುದು ನನ್ನ ಅಭ್ಯಾಸ. ಹೊಸ ಬರಹಗಾರರ ಮೇಲಿರುವ ಕುತೂಹಲ ಹಾಗೂ ಒಂದಿಷ್ಟು ಪ್ರೋತ್ಸಾಹಿಸಬೇಕೆನ್ನುವುದು ಮುಖ್ಯ ಕಾರಣ.

ಓದಿನ ಆರಂಭದಲ್ಲಿಯೇ  ಕೊನೆ ಪುಟಕ್ಕೆ ಕೈಹಾಕಿದೆ. ಯಾವ ಕವನ ಸಂಕಲನದಲ್ಲಿಯೂ ಓದಿರದ ಬಗೆಯ "ಋತು ಸಂಕಟ " ಕವಿತೆ ಬಯಾಲಜಿಯ ಜ್ಞಾನವನ್ನೋ, ತಮ್ಮದೇ ತಳಮಳ ಪ್ರಶ್ನೆಯನ್ನೋ  ಕಾವ್ಯಾತ್ಮಕ ಗೊಳಿಸಲು ಯತ್ನಿಸಿದಂತೆ ಕಂಡಿತು.

ಅವರು 'ಕದನ ವಿರಾಮವಿಲ್ಲದ ಅಂತರ್ಯುದ್ಧ' ಎನ್ನುತ್ತಾ ಋತು ಸಂಕಟ ಕವಿತೆಯನ್ನು ಕೊನೆಗೊಳಿಸಿದ್ದು, ಕೊನೆಯಿಲ್ಲದ ಸ್ತ್ರೀ ಸಂಕಟಗಳನ್ನು ಶಕ್ತ ಪ್ರತಿಮೆಗಳಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಈ ಕೃತಿಯ ಹಲವು ಕವನಗಳಲ್ಲಿ ಇದು ಗೋಚರವಾಗುತ್ತದೆ. ಅಕ್ಕನ ಮಹೆಂಜೋದಾರೋ, ಭೇಟಿಯಾಗಿದ್ದರು ಆ ಹುಡುಗಿಯರು, ಜನ ಮಾತನಾಡಲಿಲ್ಲ, ಅವಳು, ಕ್ಷಮಿಸಿ ನಾನು ಅಂಥವಳಲ್ಲ.... ಇನ್ನು ಹಲವು ಕವಿತೆಗಳಲ್ಲಿ ಅವರ ಸ್ತ್ರೀ ದನಿ ಸಹಜವಾಗಿ ಕವಿತೆಯಾಗಿದೆ.

ಬಹುತೇಕ ಕವಿ, ಕವಯತ್ರಿಯರ ಆರಂಭದ ಕವನ ಸಂಕಲನಗಳಲ್ಲಿ ಅವನು ಅಥವಾ ಅವಳ ಕುರಿತು ಕವಿತೆಗಳು ಪ್ರಕೃತಿ ಸಹಜ ಎಂಬಂತೆ ದುತ್ತನೆ ಹುಟ್ಟುತ್ತವೆ . ಶ್ರುತಿ ಅವರ ಕವನ ಸಂಕಲನದಲ್ಲಿ ಅದು ನಿಜವಾಗಿದೆ. 'ಕಡಲ ಹುಡುಗನಿಗೊಂದು ಸುನಿತಾ' ಬರದೇಬಿಟ್ಟಿದ್ದಾರೆ. 'ಒಂಟಿಹಕ್ಕಿ ಹಾಡು' ಹಾಡಿದ್ದಾರೆ. 'ಹೀಗೊಂದು ಪ್ರೇಮ ಕವನ' ನೇಯ್ದಿದ್ದಾರೆ.

"ಹದಿನೇಳರ ಹರೆಯದಲ್ಲಿ
ನಾನು ಬರೆದಿದ್ದೆ ಸೊಗಸಾಗಿ
ಪ್ರೀತಿಯ ಕುರಿತಾಗಿ 
ಪ್ರೇಮಕವನ ಗೀಚಿ ಗೀಚಿ
ಒಳಗೊಳಗೆ ನಸುನಾಚಿ
ಪುಳಕಗೊಂಡಿದ್ದೆ"
ಎಂದೇ ಈ ಕವಿತೆಯಲ್ಲಿ ಅವರೇ ಬರೆದಿದ್ದಾರೆ. ಮೇಲೆ ನಾನು ಹೇಳಿದ ಮಾತುಗಳಿಗೆ ಸಾಕ್ಷಿ ಇಷ್ಟು ಸಾಕಲ್ಲ. ಯುವ ಮನಸ್ಸುಗಳ ತಳಮಳ, ತುಮುಲ ತಾಕಲಾಟಗಳ ಬಗ್ಗೆ ಹಲವು ಕವನಗಳಿವೆ.ಅವರು" ಆಶಾವಾದಿ ಗೆಳೆಯನಿಗೆ " ಕವಿತೆ ಬರೆಯುತ್ತ

ಒಡಲ ಬೆಂಕಿ ಒಳಗೊಳಗೆ ಉರಿದು
ಸುಡದಿರಲಿ ನಿನ್ನ ನಾಳೆಗಳ ಸುಖ ಸ್ವಪ್ನಗಳ,

ಗೆಳೆಯ... ಎಂದು ಬರೆಯುತ್ತಲೇ... ದುಶ್ಯಾಸನ ಮನಸ್ಥಿತಿಯ ಯುವಕರ ಬಗ್ಗೆ ಎಚ್ಚರಿಕೆಯನ್ನು  "ಭೇಟಿಯಾಗಿದ್ದರು ಆ ಹುಡುಗಿಯರು..."ಎನ್ನುವ ಆರಂಭದ ಕವಿತೆಯಲ್ಲಿಯೇ ರೆಬೆಲ್  ಕವಯಿತ್ರಿಯಾಗಿ ಇಂದಿನ ಶಿಕ್ಷಿತ , ಆಧುನಿಕ ಸಮಾಜದ ನಾಗರಿಕ ಸ್ತ್ರೀ ಈ ಸಂಕಟ, ತಲ್ಲಣಗಳ ಬಗ್ಗೆ ತಮ್ಮ ದನಿಯನ್ನು ಕಾವ್ಯಾತ್ಮಕವಾಗಿ ಅಡಗಿಸಿಡದೆ ನೇರವಾಗಿ  ಕಾವ್ಯದ ಪರಿದಿಯಾಚೆ  ವಾಚ್ಯವಾಗಿಯೇ ದನಿ ಎತ್ತಿದ್ದಾರೆ.

ಮೈತುಂಬ ಸೆರಗೊದ್ದಿದ್ದರೂ
ಮೆಸೇಜುಗಳಲ್ಲೇ
ಮೈಸವರಿ ಆನ್ಲೈನಿನಲ್ಲೇ 
ಸ್ಖಲಿಸಿ ಸುಖಿಸುವ
ಇಂದ್ರ ಕಂಡ ಅಸಹ್ಯದಿಂದ 
ಮತ್ತೆ ಕಲ್ಲಾಗಬೇಕಂತೆ ಅಹಲ್ಲೇ..!

ಎಂದು ಅದೇ ಕವಿತೆಯಲ್ಲಿ ನೇರವಾಗಿ ಕಾವ್ಯದ ಈಟಿಯಲ್ಲಿ ದುಶ್ಯಾಸನ ಕುಲದವರನ್ನು ಇರಿದಿದ್ದಾರೆ. ಡಿಜಿಟಲ್ ಯುಗದಲ್ಲಿ ಹೊಸ ರೂಪತಳೆದ ಸ್ತ್ರೀಶೋಷಣೆಯ  ವಿವಿಧ ಮುಖಗಳನ್ನು ಮುಖವಾಡಗಳನ್ನು ಕಳಚಿದ್ದಾರೆ.

ಕೊಳ್ಳುಬಾಕತನ, ವ್ಯಕ್ತಿಗಳಿಗಿಂತ ವಸ್ತುಗಳನ್ನೇ ಹಚ್ಚಿಕೊಳ್ಳುವ ಸಿನಿಕತನದ ವ್ಯಕ್ತಿತ್ವ, ಪಾಶ್ಚಾತ್ಯೀಕರಣದ ಗೀಳು, ಹತ್ತಿರವಿದ್ದರು ದೂರ ನಿಲ್ಲುವ ಸಂಬಂಧಗಳು , ಒಲವೇ ಜೀವನ ಲೆಕ್ಕಾಚಾರ ಎನ್ನುತ್ತಲೇ ಹಣವೇ ಜೀವನ ಲೆಕ್ಕಾಚಾರವಾಗುತ್ತಿರುವ  ಅನಿವಾರ್ಯ ಅರ್ಥ ಜಗತ್ತಿನಲ್ಲಿ ಬದುಕಲೇಬೇಕಾದ ಬದುಕಿನ ನಾನಾ ವೈರುಧ್ಯಗಳನ್ನು "ಜೀರೋ ಬ್ಯಾಲೆನ್ಸ್ "ಕವಿತೆಯಲ್ಲಿ 
ಕಟ್ಟಿಕೊಟ್ಟಿದ್ದಾರೆ.

'"ದಾನಿಯಾಗಲು ಮನಸಾರೆ ಹೊರಡುತ್ತೇನೆ
ಖಾಲಿ ಪರ್ಸು ಅಣಕಿಸಿದಂತಾಗುತ್ತದೆ
ಧೈರ್ಯಗೆಡಬಾರದು ಎಂದುಕೊಳ್ಳುತ್ತಿರುವಾಗಲೇ ತಿಂಗಳ ಕಡೆಯ ಖರ್ಚುಗಳು ಹೆದರಿಸುತ್ತವೆ"
ಎಂದು ಬರೆಯುತ್ತಾ
ಕೆಳ ಮಧ್ಯಮ ವರ್ಗಗಳ ಕೊಡುಗೈ ಮನಸ್ಸಿನ ತಾಕಲಾಟವನ್ನು  ಚಿತ್ರಸಿದ್ದಾರೆ. 

ಸದ್ಯಕ್ಕೆ ಉತ್ತಮ ಉದ್ಯೋಗದಲ್ಲಿರುವ ಅವರಿಗೆ ಆರ್ಥಿಕ ಸ್ವಾತಂತ್ರ್ಯ ಇರುವುದರಿಂದ ಸಾಧ್ಯವಾದಷ್ಟು ದಾನಿಯಾಗಬಲ್ಲ ಮನಸ್ಸಿರುವುದು , ಸಾಮಾಜಿಕ ಕಳಕಳಿ ಇರುವುದು ಈ ಕವಿತೆಯಲ್ಲಿ ಪ್ರತಿಧ್ವನಿಸುತ್ತದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಅವರಾಗಿ ಶ್ರುತಿ ಅವರು ಪರಿಸರದ ಕುರಿತಾದ ಕಾವ್ಯವಸ್ತು ಕಾಣದಿರುವುದು ಗಮನಕ್ಕೆ ಬಂತು. ತನ್ನದೇ ಬದುಕಿನಲ್ಲಿ ಕಂಡುಂಡ ಹಲವು ಸಂಗತಿಗಳ ಬಗೆಗಿನ ಪ್ರತಿಕ್ರಿಯೆ, ಹುಡುಕಾಟ, ವರ್ತಮಾನ ಮತ್ತು ಭವಿಷ್ಯದ  ಸಂಗತಿಗಳಿಗೆ ತನ್ನೊಳಗಿನ ಒಳನೋಟಗಳನ್ನು   ಕಾವ್ಯವಾಗಿಸಲು ಪ್ರಯತ್ನಿಸಿ ಝೀರೋ ಬ್ಯಾಲೆನ್ಸ್ ನಿಂದ ಸಾಗಿ 53 ವೈವಿಧ್ಯಮಯ  ಕವಿತೆಗಳನ್ನು ತಮ್ಮ ಅಕೌಂಟಿಗೆ ಜಮಾ ಮಾಡಿಕೊಂಡಿದ್ದಾರೆ.  ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಯನ್ನು ಮಾಡಿರುವ ಇವರು ಅರ್ಥಶಾಸ್ತ್ರದ ಪರಿಭಾಷೆಯಲ್ಲಿಯೇ  ಕೃತಿಯನ್ನು ಹೊರತಂದಿರುವುದು ಗಮನಾರ್ಹ. ಸಾಹಿತ್ಯ ಕೃಷಿಯಲ್ಲಿ ಮತ್ತಷ್ಟು  ಜಮಾ ದಾಖಲಿಸಿಕೊಳ್ಳುವ ಭರವಸೆ ತಮ್ಮ ಕಾವ್ಯಗಳಲ್ಲಿ ಮೂಡಿಸಿದ್ದಾರೆ.

ಡಾ. ಹೆಚ್ ಎಲ್ ಪುಷ್ಪ ಅವರು ಬೆನ್ನುಡಿಯನ್ನು ಬರೆದು ಹರಸಿದ್ದಾರೆ. ಡಾ ಎಂ ಎಸ್ ಆಶಾದೇವಿ ಅವರು ಮೌಲಿಕವಾದ ಮುನ್ನುಡಿ ಬರೆದಿದ್ದಾರೆ.

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಝೀ಼ರೋ ಬ್ಯಾಲೆನ್ಸ್‌

ರವಿರಾಜ್‌ ಸಾಗರ್‌