Article

ಕೌತುಕಗಳೊಂದಿಗೆ ಎದುರುಗೊಳ್ಳುವ ವಿಸ್ಮಯ ವಿಶ್ವ

ಪುಸ್ತಕದ ಬಳಿಕ  ಮುಂದುವರಿದ ಭಾಗವೇ ಈ ಪುಸ್ತಕ. ಇಂಗ್ಲೆಂಡಿನ ಗದ್ದೆಗಳಲ್ಲಿ ಆಗೀಗ ಮೂಡುತ್ತಿದ್ದ ಅಜ್ಞಾತ ವೃತ್ತಗಳ ಕೌತುಕವನ್ನು ವಿವರಿಸುತ್ತಾ ಇದು ಸಾಗುತ್ತದೆ‌. ಹಲವು ಊಹೆಗಳ ತರುವಾಯ, ಅಗಮ್ಯ ರಹಸ್ಯ ಕೊಟ್ಟ ಕೊನೆಗೆ ಹಲವಾರು ಓದುಗರಲ್ಲಿ ಸಂಶಯಗಳನ್ನಿರಿಸಿ ಕೊನೆಯಾಗುತ್ತದೆ. ಅನ್ಯಗ್ರಹ ಜೀವಿಗಳ ಹಾರುವತಟ್ಟೆಗಳ ಇಳಿದಾಣಗಳೆಂಬ ಊಹೆ ಇಲ್ಲಿ ಹೆಚ್ಚು ಇಂಬು ನೀಡುವಂತದ್ದು!.

ನೈಲ್ ನದಿಯ ವರವಾದ ಈಜಿಪ್ಟ್ ಎದುರಿಸಿದ ಅತೀ ಕಠೋರ ಕ್ಷಾಮಗಳು ಚರಿತ್ರೆ ಹಿನ್ನೋಟಗಳಿಂದ ಹೆಕ್ಕಿ ಚಿತ್ರಿಸಲಾಗಿದೆ. ಕುರ್ ಆನ್ ಎತ್ತಿ ನುಡಿದ ಯೂಸುಫ್ ಅಧ್ಯಾಯದಲ್ಲಿ ಯೂಸುಫ್ ನೆಬಿ ಅ.ಸ ಚರಿತ್ರೆಗಳು ಕ್ವಚಿತ್ತಾಗಿ ನೆನಪಿಗೆ ಬರುತ್ತದೆ. ಅಝೀಝ್ ಚಕ್ರವರ್ತಿಗೆ ಕನಸನ್ನು ವ್ಯಾಖ್ಯಾನಿಸಿದ " ಏಳು ವಸಂತ ಕಾಲಗಳು ಮತ್ತು ಏಳು ಕ್ಷಾಮ ವರ್ಷಗಳು" ಚರಿತ್ರೆಗಳಿಗೆ ಹೆಚ್ಚಿ‌ನ ಹೋಲಿಕೆಯಾಗುತ್ತದೆ. ನೀರಿನ ಮಟ್ಟದಲ್ಲಾಗುವ ಏರು ಪೇರುಗಳನ್ನು ಗಮನಿಸಿ ಕೊನೆಗೂ ಶಾಶ್ವತ ಪರಿಹಾರಕ್ಕಾಗಿ ಅಣೆಕಟ್ಟುಗಳನ್ನು ನಿರ್ಮಿಸಲು ಯಶಸ್ವಿಯಾದ ಈಜಿಪ್ಟ್ ಚಕ್ರವರ್ತಿಯ ಸಾಧನೆ ಹಾಸುಹೊಕ್ಕಾಗಿದೆ. 

ಜಗತ್ತು ಕಂಡ ಅತೀ ದೊಡ್ಡ ಜಲದುರಂತಗಳಲ್ಲೊಂದಾದ ಟೈಟಾನಿಕ್ ಅಂತ್ಯ ಕಣ್ಣಿಗೆ ಕಟ್ಟಿದಂತೆ ಸವಿವರವಾಗಿದೆ. ಬಂದರು ಬಿಡುವ ಮೊದಲೇ ಗತ್ತು ಗೈರತ್ತುಗಳಿಂದ 'ಮುಳುಗಲು ಸಾಧ್ಯವಿಲ್ಲದ ಪಟ್ಟಣವೆಂದು' ಬೀಗಿದ ಅಹಂಕಾರದ ನುಡಿಗಳ್ಯಾವುವೂ ಪ್ರಕೃತಿ ವಿಕೋಪಕದ ಮುಂದೆ ಹೇಳ ಹೆಸರಿಲ್ಲದೆ ಸಮಾಧಿಯಾಗುವುದ ಭೀಭತ್ಸ ಚಿತ್ರಣ. ನುರಿತ ಕ್ಯಾಪ್ಟನ್ಗಳು ಭೀಮಕಾರದ ಮಂಜು ಗಡ್ಡೆಗಳ ಎದುರು ಕಿಂಕರ್ತವ್ಯಮೂಢರಾಗುವುದನ್ನು ಲೇಖಕರು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಸಿಡುಬು ಎಂಬ ಮನುಷ್ಯ ನಾಗರಿಕತೆ ಯ ಅತೀದೊಡ್ಡ ಮಾರಣಾಂತಿಕ ರೋಗವನ್ನು ಹೋಗಲಾಡಿಸಲು ಯಶಸ್ವಿಯಾದ ವಿಶ್ವ ಆರೋಗ್ಯ ಸಂಸ್ಥೆಯ ಪ್ರಯತ್ನ ಶ್ಲಾಘನೀಯ. ಅಧಿಕಾರ ವಿಸ್ತರಣೆಗಾಗಿ ರೋಗಗಳನ್ನು ಛೂ ಬಿಡುವ ಆಧುನಿಕ ರಾಷ್ಟ್ರಗಳ ವೈರಸ್ ದಾಳಿಗಳು ರೇಜಿಗೆ ಹುಟ್ಟಿಸುತ್ತದೆ. ಸಿಡುಬು ರೋಗವನ್ನು ನಾಗರಿಕತೆಯನ್ನು ನಾಶ ಮಾಡಲು ಆಯುಧದಂತೆ ಬಳಸಿ ಸರ್ವ ನಾಶ ಗೈಯ್ದ ಭೀಕರ ಚರಿತ್ರೆ ಕರುಳಲ್ಲಿ ಚಳಿಹಿಡಿಸುತ್ತದೆ. ಚರ್ಚಿನ ಲಾಕರ್ನಲ್ಲಿ ಬಂಧಿಯಾದ ಮಗುವನ್ನು ರಕ್ಷಿಸುವ ಕಥೆ ರೋಮಾಂಚಕವಾಗಿದೆ. ಕೊಳವೆ ಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸು ವಷ್ಟೇ ಕುತೂಹಲಕರವಾದ ಈ ಸತ್ಯ ಘಟನೆಗಳು ಓದುಗರ ರೋಮಗಳನ್ನು ಸೆಟೆದು ನಿಲ್ಲುವಂತೆ ಮಾಡುತ್ತದೆ. ಕರ್ವಾಲೋ ಕಾದಂಬರಿಯಲ್ಲಿ ತೇಜಸ್ವಿ ತಿಳಿಸಿದ ಮೌಮೌಬಿಗಳು ಇಲ್ಲಿ ಮತ್ತೊಮ್ಮೆ ಮಾತಾಗುತ್ತದೆ. ತಥಾಕಥಿತ ಜೇನುನೊಣಗಳು ತ್ರಾಸದಾಯಕ ಜವಬ್ಧಾರಿಯನ್ನು ನಿರ್ವಹಿಸುವುದರಿಂದ ಮನುಷ್ಯ ಮತ್ತು ಇತರ ಜೀವಿಗಳ ಹಸ್ತಕ್ಷೇಪವನ್ನು ಕಿಂಚಿತ್ತೂ ಕ್ಷಮಿಸದು!.

ನಿಗ್ರೋ ಮಹಿಳೆಯರ ಭತ್ತದ ಬುಟ್ಟಿಗಳನ್ನು ಹಣೆಯುವ ಚಾಕಚಕ್ಯತೆ ಇಲ್ಲಿ ಪ್ರಕಾಶಮಾನ ಭಾಗಗಳಾಗಿವೆ. ಲೇಖಕರು ನೆನಪಿಸುವ "ಮೇದರ" ಬುಟ್ಟಿ ಸಂಸ್ಕೃತಿ ನನ್ನ ಹಿರಿಯರ ಊರ ಹೆಸರಿಗೊಮ್ಮೆ ಬೆಳಕು ಚೆಲ್ಲುತ್ತದೆ. ನಮ್ಮ ಕುಟುಂಬದವರೆನ್ನೆಲ್ಲಾ ಗುರ್ತಿಸುವಾಗ ಊರವರು " ಮೇದರ ಬೆಟ್ಟಿನವರು" ಎಂದು ಕರೆಯುವುದುಂಟು. ಸದ್ಯಕ್ಕೆ ಈ ಸ್ಥಳ ಉಪ್ಪಿನಂಗಡಿಯ ಹತ್ತಿರದ ನೆಕ್ಕಿಲಾಡಿ ಎಂಬಲ್ಲಿದೆ. ಊರಿನ ಹೆಸರಿನ ಜಾಡು ಹಿಡಿಯುವ ವಿಪರೀತ ಕುತೂಹಲ ಹೊಂದಿರುವ ನನಗೆ ಪುಸ್ತಕ ಓದುತ್ತಾ ಮೇದರ ಬೆಟ್ಟುವಿನ ಸ್ಥೂಲ ಚರಿತ್ರೆಗೆ ಮೆಲುಕು ಹಾಕ ಬೇಕಾಗಿ ಬಂತು. ಬಹುಃಶ ಈ ಸ್ಥಳದಲ್ಲೂ ಇಂತದೇ ಸಂಸ್ಕೃತಿ ಅಧಿಕವಾಗಿತ್ತೆಂಬುವುದನ್ನು ಅಲ್ಲಗೆಲೆಯಾಲಾಗದು. ಬುಟ್ಟಿ ಹಣೆಯುವ ಸಮುದಾಯ ಅಧಿಕವಿದ್ದದ್ದರಿಂದಲೋ ಅಥವಾ ಹಣೆಯಲು ಬೇಕಾದ ನಾರುಗಳು ಯಾ ಬಳ್ಳಿಗಳು ಅಧಿಕವಿದ್ದದ್ದರಿಂದಲೋ ಈ ಹೆಸರು ಈಗಲೂ ಪ್ರತೀತಿಯಲ್ಲಿದೆ.

ಸಾಗುವಾರ ಎನ್ನುವ ಬೃಹದಾಕಾರದ ಕಳ್ಳಿ ಮರಗಳು ವಿಸ್ಮಯವನ್ನು ಸಾರುತ್ತದೆ. ಜಗತ್ತಿನ ಮೂಲೆ ಮೂಲೆಗೂ ಮಿಲೇನಿಯಂ ಹೆಸರಲ್ಲಿ ಬೆಳಕು ಹರಿಸುತ್ತಾ ಸಾಗುವ ತೇಜಸ್ವಿ ಸರಣಿಗಳು ಸರ್ವರಿಗೂ ಕೌತುಕಗಳನ್ನೇ ಉಣಬಡಿಸುತ್ತದೆ. ವಿಸ್ಮಯದ ಮಡಿಲಾದ ಇಡೀ ಜಗತ್ತನ್ನು ಅಕ್ಷರಗಳಲ್ಲಿ ಹಿಡಿದಿಡುವ ಲೇಖಕರ ಪ್ರಯತ್ನ 'ಭೇಷ್' ಅನ್ನಿಸುತ್ತದೆ‌ . ಪ್ರತಿಯೊಬ್ಬರೂ ಓದಲೇ ಬೇಕಾದ ಕೌತುಕವೇ ವಿಸ್ಮಯ ವಿಶ್ವ ೨. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವ ಜನಜನಿತ ಮಾತು ಅದೆಷ್ಟು ಸತ್ಯವೆಂದು ಓದುಗರೆಲ್ಲರಿಗೂ ಅನ್ನಿಸದಿರುವುದೇ ಇಲ್ಲ‌.

ಪುಸ್ತಕದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ- https://www.bookbrahma.com/book/vismaya-vishw-2-millenium-15

ಮುನವ್ವರ್ ಜೋಗಿಬೆಟ್ಟು