Article

ಲಕ್ಷ್ಮಣ್ ಕೌಂಟೆ ಅವರ ’ಮಹಾಯಾಣ’

ಕಲ್ಯಾಣದಲ್ಲಿ ಅಂತರ್ಜಾತಿ ಮದುವೆ ಆದಮೇಲೆ ಏನೆಲ್ಲ ಘಟನೆಗಳು ಸಂಭವಿಸಿದವು ಮತ್ತು ಕಲ್ಯಾಣದಿಂದ ಹೊರಟ ಶರಣರು ಉಳಿವೆಯನ್ನು ತಲುಪುವ ಮಾರ್ಗ ಮಧ್ಯದಲ್ಲಿ ಅನುಭವಿಸಿದ ಸಾವು ನೋವುಗಳು, ಮಾರ್ಗ ಮಧ್ಯದಲ್ಲಿ ಶರಣ ಸಂಸ್ಕೃತಿ ಹಬ್ಬಿಕೊಂಡಿದ್ದ ಬಗೆ ಎಲ್ಲವನ್ನೂ ಕಾದಂಬರಿಕಾರ ಲಕ್ಷ್ಮಣ್ ಕೌಂಟೆ ಸವಿಸ್ತಾರವಾಗಿ ಬರೆದಿದ್ದಾರೆ. ಕಾದಂಬರಿ ನನಗೆ ಒಂದು ರೀತಿಯ ಡಾಕ್ಯೂಮೆಂಟರಿ ತಂತ್ರವನ್ನು ಅನುಸರಿಸಿದಂತೆ ಅನ್ನಿಸಿತು. 360 ಪುಟಗಳಿಗೂ ಕಮ್ಮಿ ಪುಟದಲ್ಲಿ ಮಹಾಯಾಣದ ಚರಿತ್ರೆಯನ್ನು ಹೇಳಿದ್ದರೆ ಓದುಗರು ಇನ್ನು ಸರಾಗವಾಗಿ ಓದಲು ಅನುಕೂಲವಾಗುತ್ತಿತ್ತು. 

ಕಾದಂಬರಿಯಲ್ಲಿ ವೀರಶೈವ ಮಠಗಳಿಗೂ ಲಿಂಗಾಯುತ ಧರ್ಮಕ್ಕೂ ಯಾವ ರೀತಿಯ ಕೊಡುಕೊಳ್ಳುವಿಕೆ ಇತ್ತು ಅಅನ್ನುವುದನ್ನು ರುದ್ರಮುನಿ ಶಿವಾಚಾರ್ಯರ ಪ್ರಸಂಗದಲ್ಲಿ ಇನ್ನು ವಿವರವಾಗಿ ವಿಸ್ತರಿಸಿದ್ದರೆ ಓದುಗರಿಗೆ ಇವತ್ತು ನಾವು ಕಾಣುತ್ತಿರುವ ವೀರಶೈವ ಲಿಂಗಾಯುತ ಮಠಗಳ ವ್ಯತ್ಯಾಸ ಇನ್ನು ಸ್ಪಷ್ಟವಾಗಿ ಅರ್ಥವಾಗುತ್ತಿತ್ತು. 

ಬಸವಣ್ಣನವರ ಸಾವಿನಿಂದ ಶುರುವಾಗಿ ಉಳಿವೆಯಲ್ಲಿ ಚೆನ್ನಬಸವಣ್ಣನ ಕೊಲೆಯೊಂದಿಗೆ ಕಾದಂಬರಿ ಅಂತ್ಯವಾಗುತ್ತದೆ. ಕಾದಂಬರಿಕಾರರು ಪುರಾಣದ ಪ್ರಭಾವಕ್ಕೆ ಒಳಗಾಗದೇ ಇತಿಹಾಸಕ್ಕೆ ನಿಷ್ಠರಾಗಿ ಕಾದಂಬರಿ ರಚಿಸಿರುವುದು ಮತ್ತು ಬಸವಣ್ಣ, ಚನ್ನಬಸವಣ್ಣ ಮತ್ತು ಇತರೆ ಶರಣರನ್ನು ಯಾವುದೇ ಕಾರಣಕ್ಕೂ ದೇವರನ್ನಾಗಿ ಮಾಡಿ ದೇವಸ್ಥಾನ ಕಟ್ಟಿಸಬಾರದು ಎಂದು ಚೆನ್ನಬಸವಣ್ಣನ ಬಾಯಿಯಲ್ಲಿ ಹೇಳಿಸಿದ್ದು ನೋಡಿದರೆ ಕಾದಂಬರಿಕಾರರು ಎಷ್ಟು ಮುಕ್ತ ಮನಸ್ಸಿನಿಂದ ಕಾದಂಬರಿ ಬರೆದಿದ್ದಾರೆ ಅನ್ನುವುದು ಅರ್ಥವಾಗುತ್ತದೆ. 

ನಮ್ಮದೇ ಕನ್ನಡ ನಾಡಿನಲ್ಲಿ ಘಟಿಸಿದ ಒಂದು ಕ್ರಾಂತಿಯ ಕಥೆಯನ್ನು ತಿಳಿಯಬಯಸುವವರು ಓದಲೇಬೇಕಾದ ಕಾದಂಬರಿ ಇದು ಅನ್ನುವುದು ನನ್ನ ಅಭಿಪ್ರಾಯ. 

ನಾಗೇಗೌಡ ಕೀಲಾರ ಶಿವಲಿಂಗಯ್ಯ